ಸುರುಚಿರ ಸ್ವಪ್ನಮಯ ಕಲ್ಪನಾಕಾಶದಲಿ
ಮಿಂಚಿಬಹ ಮಳೆಬಿಲ್ಲುಗಳ ಗೊಂಚಲನು ಕೊಯ್ದು
ಮಧುರ ವೈಚಿತ್ರ್ಯಮಯ ವರ್ಣಜಾಲವ ನೆಯ್ದು
ಸಗ್ಗವನೆ ಸೆರೆಗೈದು ಮರ್ತ್ಯಪ್ರದೇಶದಲಿ
ಬಂಧಿಸಿಹೆ, ಓ ವರ್ಣಶಿಲ್ಪಿ! ಬಹು ವೇಷದಲಿ
ಸುಳಿವ ನಶ್ವರದೆದೆಯ ಶಾಶ್ವತವನಾರೈದು
ಕನಸುಗಳ ಕೋದಿರುವೆ ನಿನ್ನ ಹರಣಂಬೊಯ್ದು
ಚಿರಕಲಾಲಿಂಗಿತ ತಟಿಲ್ಲತಾಪಾಶದಲಿ!
ನಿನ್ನ ಹೊಂಬಯಕೆಗಳ ಪುಣ್ಯ ರಸರಂಗದಲಿ
ಸಂಚರಿಸುತಿರೆ, ಬಕುತಿಯಿಂ ಬಗೆಗೆ ಗರಿಮೂಡಿ
ತೇಲಾಡಿದೆನು ನೀಲಗಿರಿ ತುಂಗಶೃಂಗದಲಿ.
ಪ್ರಕೃತಿ ಸೌಂದರ್ಯಪೂರದಿ ಮುಳುಗಿ ತೇಕಾಂಡಿ
ಮರುಮೆಯ್ಯ ಪಡೆದಿರುವೆನಾತ್ಮದಲಿ: ನರನಂತೆ
ಬಂದ ನಾಂ ಮರಳಿ ತೆರಳುವೆನುರಿವ ಸುರನಂತೆ!

೧೬-೮-೧೯೩೧

 
* ಶ್ರೀಮಾನ್ ಕೆ. ವೆಂಕಟಪ್ಪನವರ ಕಲಾಶಾಲೆಯಲ್ಲಿ ನೀಲಗಿರಿಯ ಚಿತ್ರಗಳನ್ನು ನೋಡಿ ಬಂದು ಬರೆದುದು.