ಸ್ವಾರ್ಥತಾ ಸೂತ್ರಂಗಳಿಂ ನೆಯ್ಯುತಿದೆ ಸೃಷ್ಟಿ
ಪರಾರ್ಥತಾ ಶುಭ್ರದೇವಾಂಗಮಂ. ವ್ಯಕ್ತಿ
ಪಡುವ ಗೆಯ್ಮೆಗೆ ತನತೆ ಸುಖಸಾಧನಾಸಕ್ತಿ
ಗಂತವ್ಯಮಾಗಿರಲದನ್ ಬ್ರಾಹ್ಮೀ ಸಮಷ್ಟಿ
ವಿಶ್ವಪ್ರಯೋಜನಕೆ ಪಾಸು ಪೊಕ್ಕಂಗೆಯ್ದು,
ಜೀವರಿಗೆ ಸ್ವಾತಂತ್ರ್ಯ ಸಂಭ್ರಾಂತಿಯಂ ನೀಡಿ,
ತನ್ನ ಇಚ್ಛಾ ರಥಯುಗಕ್ಕವರ್ಗಳಂ ಪೂಡಿ
ರಕ್ಷಿಸುತ್ತಿದೆ ಜಗತ್ ಕಲ್ಯಾಣಮಂ ನೆಯ್ದು.
ಹೇ ವ್ಯಕ್ತಿ, ನಿನ್ನ ತ್ಯಾಗದ ತಿರುಪೆಗಾ ಶಿವಂ
ಜೋಳಿಗೆಯನಾಂತು ಬಿಕ್ಷಾಟನೆಗೆ ಹೊರಟಿಹನೆ,
ಹೇಳ್, ಸ್ವಯಂ ತ್ಯಾಗೀಶ್ವರಂ? ತನ್ನ ಸಂತಸಕೆ
ಪ್ರಾಣಿ ಪ್ರಾಣಿಯನಪ್ಪಿಕೊಳೆ ಸಂತತಿಯ ಭವಂ
ತಾನಪ್ಪುದನಿವಾರ್ಯಮುಪಫಲಂ! ಪ್ರಕೃತಿಯನೆ
ಕೃತಿಗೆಯ್ದವಗೆ ನಿನ್ನ ಕೃತಿ ಭಿಕ್ಷೆಯೇನ್ ರಸಕೆ?

೫-೧-೧೯೪೩