ಗಿರಿಪಂಕ್ತಿ ವನರಾಜಿ ಬುವಿ ಬಾನು ಮುಗಿಲೋಳಿ
ವೈಶಾಖಪಾಡ್ಯಮಿಯ ಬೆಳ್ದಿಂಗಳನು ಹೀರಿ,
ಮಧುಮಾಸದುನ್ಮಾದ ಚಂದ್ರಿಕೆಯ ಮತ್ತೇರಿ
ಜೋಂಪಿಸಿವೆ! ಜ್ಯೋತ್ಸ್ನೆ-ಶಿವನಪ್ಪಿದ ನಿಶಾಕಾಳಿ
ಪ್ರೇಮಸುಖ ವಿಸ್ಮೃತಿಯ ರಸಗಂಗೆಯಲಿ ತೇಲಿ
ರಾಜಿಸಿರೆ ಲಜ್ಜೆಮಾಧುರ್ಯದಿಂ ಬಿಳುಪೇರಿ,
ಕಾಳಿಮವನುಳಿದು ಶ್ರೀಗೌರಿಯಂದದಿ ತೋರಿ,
ಸ್ಮಿತರುಚಿರನಾಗಿರುವನದೊ ಭುವನ ಕಾಪಾಲಿ!
ಏಂ ನಿರ್ಜನತೆ, ನೀರವತೆ, ನಿಶ್ಚಲತೆ, ಶಾಂತಿ:
ತೇಲುತಿದೆ ಜಗವೆಲ್ಲ ಚಂದ್ರಿಕಾಸ್ವಪ್ನದಲಿ,
ಮಾತೃ ಮೃದುವಕ್ಷದಲಿ ನಿದ್ರಿಪ ಶಿಶುವಿನಂತೆ!
ಪ್ರಿಯಬಂಧು, ಇದೆ ಹೊತ್ತು ಧ್ಯಾನಕ್ಕೆ; ಹೃದ್ಗ್ರಂಥಿ
ಪ್ರಲಯಕ್ಕೆ: ಏಳೈ, ಸಮಾಧಿಸ್ಥ ವಿಶ್ವದಲಿ
ತಲ್ಲೀನವಾಗುವಂ, ಛವಿ ರವಿಯೊಳಾಗುವಂತೆ!

೨-೫-೧೯೩೪

 * ಸಹ್ಯಾದ್ರಿ ಪರ್ವತಶ್ರೇಣಿಗಳಲ್ಲಿ