ಇದ್ದನು ಸಮಾಧಿನಿರ್ವಿಕಲ್ಪಂ ನರಮಹರ್ಷಿ:
ಅಲ್ಲಿ ಶಶಿಸೂರ್ಯರಿಗೆ ಹುಗಲಿಲ್ಲ; ತಾರಾಕೋಟಿ
ದೂರದೊಳೆ ನಿಂತಿಹವು, ಹೋಗಲಾರದೆ ದಾಟಿ,
ಕಾಲ್ಸೋತು! – ಆ ದಕ್ಷಿಣೇಶ್ವರ ಸುದೂರದರ್ಶಿ
ತಾಂ ಧ್ಯಾನಪಥದಿಂದೇರಿ, ಭವಲೋಕಮಂ ಮೀರಿ,
ಪಿಂತಿಕ್ಕಿ ಪಂಕ್ತಿಪಂಕ್ತಿಯ ಚಿನ್ಮಯ ಶರೀರರಂ
ದೇವರ್ಕಳಂ, ಬಳಿಸಾರ್ದನಾ ಮಹಾಮುನಿ ನರಂ
ಭಾವಲೋಕಾತೀತದೊಳ್ ನಿರ್ಗುಣದೊಳಾರಿ
ನಿರ್ವಿಕಲ್ಪ ಸಮಾಧಿಯೋಗದಿಂದಿರ್ದೆಡೆಗೆ!….
ಶಿಶುರೂಪಮಂ ತಾಳುತಾ ಘನೀಭೂತಜ್ಯೋತಿ
ಏರಿದುದು ಸುಮಕೋಮಲಂ ಸಿದ್ಧವಜ್ರನ ತೊಡೆಗೆ….
ಋಷಿಯ ಕೊರಳಂ ತನ್ನ ನಳಿದೋಳ್ಗಳಿಂದಪ್ಪಿ
“ಇಳಿದು ಬಾ ನನ್ನೊಡನೆ! -” ಆ ಕರೆಗುಣ್ಮಿದಾ ಪ್ರೀತಿ
ಧರೆಗವತರಿಸಿತಯ್ ಈ ನರೇಂದ್ರ ರೂಪಿಂದೊಪ್ಪಿ!

೭-೧-೧೯೬೩

 
* ಪರಮಹಂಸರು ಕಂಡಂತೆ