ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ?
ಸ್ವರ್ಗದಲಿ ಕರುಬುತಿಹನಿಂದ್ರನೆನ್ನಂ ನೋಡಿ,
ಧೇನು ಸುರತರು ಸುರಾಂಗನೆಯರಂ ರೋಡಾಡಿ!
ಈ ನಿಸರ್ಗಶ್ರೀಗೆ ಮೇಣಾವ ಸಗ್ಗಸಿರಿ
ವೆಗ್ಗಳಂ? ಪಂಕ್ತಿ ಪಂಕ್ತಿಗಳಾಗಿ ಕಣ್ದಿಟ್ಟಿ
ಸೋಲ್ವಂತೆ ಪರ್ಣಾರ್ಣವ ಮಹಾ ತರಂಗತತಿ
ಪ್ರಸರಿಸಿವೆ. ಗಿರಿಶಿವನೆದೆಯ ಮೇಲೆ ಶ್ಯಾಮಸತಿ
ಕಾನನ ಮಹಾಕಾಳಿ ತಾನಿಲ್ಲಿ ನಿತ್ಯನಟಿ!
ಸುಯ್ದಪಂ ಶಿಶಿರ ಶೀತಲ ಸುಖ ಸಮೀರಣಂ
ಮರ್ಮರ ಧ್ವನಿಗೈದು. ಸಾಂದ್ರ ಕಾಂತಾರದಲಿ
ಲಕ್ಷ ಮಧುಕರ ಪಕ್ಷಿರವದಿ ನಾದದ ಸಿಂಧು
ಮಸಗುತಿದೆ. ಸಂಜೆರವಿ, ಅದೊ, ವರುಣ ದಿಗ್ವಾರಣಂ
ತಾನೆನಲೆಸೆವ ಶೈಲ ಮಸ್ತಕ ಸುದೂರದಲಿ
ದಿಗ್ವಧೂ ಭ್ರೂಮಧ್ಯೆ. ಕಾಣ್, ರಂಗುಮಾಣಿಕ ಬಿಂದು!

೧೨-೫-೧೯೩೫

 
* ಕವಿಶೈಲದಿಂದ ಮೇಲಿರುವ ಮಲೆಯ ನೆತ್ತಿ