ನಿನ್ನ ಕರುಣೆಯ ಕಯ್ಯೆ ನನ್ನುಸಿರನಿನ್ನೆಗಂ
ಪಿಡಿದು ನಡೆಸಿಹುದಾದೊಡಂ, ಏಕಿಂತು ಶಂಕೆ
ಅಶುಭದಾ? ಕೆರಳಿತೆನೆ ಕವಿಕಲ್ಪನೆಯ ಬೆಂಕೆ,
ಮಂಗಳದ ಮಧ್ಯೆ, ಸಾಸಿರ ಸಿರದ ಪನ್ನಗಂ
ವಕ್ರವಿಕೃತಿಯ ಬಹು ವಿಧದ ದುಃಖಫಣೆಗಳಂ
ಬೆದರಿಸುವುದೆತ್ತಿ. ಕಂಡರಿಯದಾವುದೊ ಭೀತಿ
ಬೆಬ್ಬಳಿಪುದಾತ್ಮಮಂ: ಪೂರ್ವ ಜನ್ಮಗಳೀತಿ,
ಶೋಕ ಸಂಕಟ ಮರಣ ವಿರಹಸ್ಮರಣೆಗಳಂ,
ಸುಪ್ತಸ್ಮೃತಿಯ ಹೇಳಿಗೆಯ ಬಾಗಿಲಂ ಬಿರಿದು,
ಸುರುಳಿ ಸುತ್ತಿಹ ಕುಂಡಲಿನಿಯಂ ಸುಷುಪ್ತಿಯಿಂ
ಮೆಲ್ಲನೆಳ್ಚರಿಸುವುದೊ ಕಾಣೆ! – ಬೆಂಕೆಯೊಳುರಿದು
ಬೆಂದ ನೆನಹೋ? ಬೇಟವೆಣ್ಣೊಡನೆ ತೃಪ್ತಿಯಿಂ
ಪುಲ್ಮೇಯುತಿರೆ ಮಡಿದ ಮೃಗಯಾ ಭಯಂಕೃತಿಯೊ?
ಯಾವ ಜನ್ಮದ ಯಾವ ದುರ್ಗತಿಯೊ, ದುಸ್ಮೃತಿಯೊ?

೯-೧-೧೯೪೧