ಭಾರತದ ರಾಷ್ಟ್ರೀಯ ರಣಹೋಮ ಕುಂಡದಲಿ
ಮತ್ತೊಂದು ಯಜ್ಞಪಶು ಬಲಿಯಾಯ್ತು! ನೋಡಲ್ಲಿ,
ದೇಶಭಕ್ತನ ದೇಹ ತನ್ನಾತ್ಮದುರಿಯಲ್ಲಿ
ಬೇಳುತಿದೆ. ಸ್ವಾತಂತ್ರ್ಯದೇವಿ ರೋದಿಪಳು, ಬಳಿ
ನಿಂತು, ಕಂಬನಿಹೊನಲ ಸೂಸಿ. – ಮುಂದೇನು ಗತಿ?
ಸಂದಿಗ್ಧ ಸಮಯದೊಳೆ ಸಮರ ರಂಗವನುಳಿಯೆ
ನೀನಿಂತು, ತಾಯ್ನಾಡಿಗೇನು ಗತಿ? ಓ ಕಲಿಯೆ,
ನಿನ್ನ ಜೀವನ ಸ್ಮೃತಿಯೆ ಇನ್ನೆಮಗೆ ದಳದ ಪತಿ!
ದೇಶದಾಶಾ ನಭವ ಮುತ್ತುತಿಹ ಕಾರ್ಮುಗಿಲು
ದೇದೀಪ್ಯಮಾನ ನಕ್ಷತ್ರಗಳನೂ ಮುಚ್ಚಿ
ಮಬ್ಬುಗೈವಂತಿಹುದು. ಜನರೆದೆಗಳಿಗೆ ದಿಗಿಲು
ಮುಟ್ಟಿದೆ. – ಮಹಾತ್ಮನನೆ ಎಲ್ಲದರೊಳೂ ನೆಚ್ಚಿ
ನಡೆಯಲಾರದೆ ಮಂದಿ ಹಿಂಜರಿಯೆ, ಏನು ಗತಿ?
ವಿಷಮ ರಂಗವನುಳಿಯುವರೆ, ವಂಗಸೈನ್ಯಪತಿ?

೨೪-೭-೧೯೩೩