ಮೇಲೆ ಬಾನುಕ್ಕುನೀಲಿಯಲಿ ತೇಲುತಿದೆ ರವಿ;
ಸುತ್ತುಂ ದಿಗಂತಲೀನಮನಂತ ವನಪಂಕ್ತಿ
ರಾಜಿಸಿದೆ, ಹೊಳೆಗೆ ಹಸುರಂಚಾಗಿ. ಸುಖ ಶಾಂತಿ
ಜೊತೆಗೂಡಿ ಪರಿವಂತೆ ಸೌಂದರ್ಯಮತ್ತ ಕವಿ.
ಹೃದಯದಲಿ, ಹಬ್ಬಿದ ಮಳಲುಹಳದಿಯನ್ನಪ್ಪಿ
ಪ್ರವಹಿಸಿದೆ ತುಂಗಾ ಸಲಿಲ ನೀಲಿಮಾಪ್ರೀತಿ
ಪ್ರೇಮ ಸಂಗೀತಮಂ ಪಾಡಿ….ಏಂ ನಿರ್ಭೀತಿ
ಮೀಂಗಳಿಗೆ!….ರಮ್ಯತೆಗೆ ತಿಲಕವಿಟ್ಟಂತೊಪ್ಪಿ
ಅದೊ ಹಾರಿ ಬರುತಲಿವೆ ನೀರ್ಕಾಗೆ ಬೆಳ್ಳಕ್ಕಿ,
ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ,
ಪ್ರಾಣವೇ ವರ್ಣಚಿತ್ರಂ ಬರೆಯುತಿರುವಂತೆ
ಪ್ರಾಣಮಯವಾಗಿ! ದರ್ಶನಕೆ ಕಬ್ಬಿಗನ ಮೈ
ಹೊಳೆಯಂತೆ, ನೀರಂತೆ, ಬಾನಂತೆ, ಬನದಂತೆ
ಪುಲಕಿತಂ, ಪರವಶಂ, ಪಸುಳೆವೋಲ್ ತಕ್ಕತೈ!

೨೯-೪-೧೯೩೬* ತೀರ್ಥಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿ ಮೇಳಿಗೆ ಎಂಬ ಹಳ್ಳಿ. ಅಲ್ಲಿಂದ ಒಂದೂವರೆ ಮೈಲಿ ಕಾಡಿನ ಕಾಲುದಾರಿಯಲ್ಲಿ ನಡೆದು ಹೋದರೆ ಸಿಬ್ಬಲುಗುಡ್ಡೆ ಸಿಕ್ಕುತ್ತದೆ. ಈ ಸ್ಥಳ ಹಳ್ಳಿಯೂ ಅಲ್ಲ, ಊರೂ ಅಲ್ಲ. ಅಲ್ಲಿ ಇರುವುದೊಂದೇ ಕಟ್ಟಡ: ಗುಡಿಸಲಿನಂತೆ ತೋರುವ ಗಣೇಶನ ಗುಡಿ. ಅಲ್ಲಿಯೆ ಗುಡಿಯ ಅರ್ಚಕ. ಬೇರೆ ಮನೆಗಳಿಲ್ಲ, ಜನವಿಲ್ಲ.

ಗುಡಿಯ ಹಿಂದೆ ನಿಬಿಡ ನಿರ್ಜನಾರಣ್ಯಗಳ ನಡುವೆ ಹರಿಯುವ ತುಂಗೆ. ಆಚೆ ದಡದಲ್ಲಿ ತುಸು ಹಳದಿ ಬಣ್ಣದ ಬಿಳಿಯ ಮಳಲ ರಾಶಿ, ಅದರಂಚಿನಲ್ಲಿ ಹಚ್ಚ ಹಸುರಿನ ವನಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭೀತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನು. ಈ ದೇವರ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಅವು ವಿಘ್ನೇಶನ ರಕ್ಷೆಯಲ್ಲಿ ಬೆಳೆದು ವಿಹರಿಸುತ್ತಿವೆ.

ಮಲೆಯ ನಡುವಣ ಹೊಳೆಯ ಸೊಬಗುದಾಣ.