ಓ ಗುರುವೆ, ಕೊಲ್ಲದಿರು ಸ್ವಾತಂತ್ರ್ಯವನು ಕೊಟ್ಟು;

ಮೊದಲು ಬೇಕೆನಗದನು ಹಿಡಿದು ನಡೆಸುವ ಶಕ್ತಿ.
ಯಂತ್ರವನು ಚಾಲಿಸಲು ನನಗರಿಯದಿದೆ ಯುಕ್ತಿ;
ಮೊದಲು ಯುಕ್ತಿಯನರುಹು. ಬಲವನೆನ್ನಲಿಟ್ಟು
ಕೈಗೆ ಕೊಡು ಯಂತ್ರವನು; ಇಲ್ಲದಿರೆ ಬಗೆಗೆಟ್ಟು
ತಪ್ಪು ಬಟ್ಟೆಗೆ ಬಿದ್ದು ಮಡಿಯುವೆನು! ನಿನ್ನುಕ್ತಿ
ಬನದ ದನಿಯಾಗುವುದು; ಮೇಣು ನನಗಿಹ ಭಕ್ತಿ
ಸಂದೆಗದ ಬೆಂಕಿಗೊಳಗಾಗಿಂಗುವುದು ಸುಟ್ಟು!
ಸ್ವಾತಂತ್ರ್ಯದಪರಾಧಕಿಂತಲೂ, ಓ ದೊರೆಯೆ,
ಧರ್ಮದೀ ದಾಸ್ಯವೇ ಲೇಸೆನಗೆ ನೂರುಮಡಿ!
ಸುತ್ತಲೂ ಜ್ಯೋತಿಯಿದೆ; ಹೃದಯ ಮಂದಿರದಲ್ಲಿ
ಕತ್ತಲೆಯು ಹರಿಯದಿದೆ. ಬಿಡುಗಡೆಯ ಹಿರಿ ಹೊರೆಯೆ
ಭಾರವಾಗಿದೆ; ಬಲ್ಮೆ ನಡುಗುತಿದೆ! ನನ್ನ ಮುಡಿ
ನೆಲದ ಪುಡಿಯಲಿ ಹೊರಳದಿರಲಿ ನಿನ್ನಡಿಯಲ್ಲಿ!

೮-೩-೧೯೩೧