ನಿಮಗೆ ನಾನಾವಾವ ರೀತಿಯಿಂದೆನಿತು ಋಣಿ
ಎಂದು ಕಳೆದ ಕಾಲದ ಪುಸ್ತಕದ ಪುಟಗಳನ್
ಒಂದೊಂದನೆಯೆ ಮಗುಚಿ ನೋಡಿದರೆ ಪಟಗಳನ್,
ಥಳಿಸುವುದು ವಜ್ರ ವೈಡೂರ್ಯಮಯ ನೆನಹುಗಣಿ,
ಕೃತಜ್ಞತೆಯ ಕಣ್ ಕೋರೈಸುವೋಲ್! ದೇಹಮಂ
ಕಾಣ್ಕೆಗೈದಿರಿ ದೇವ ಧನ್ವಂತರಿಯ ಗುಡಿಗೆ;
ಪ್ರಾಣಮಂ ಕೊಂಡೊಯ್ದು ಭಾಗೀರಥಿಯ ತಡಿಗೆ
ಮೀಯಿಸಿದಿರದನು ಗುರುಮಂತ್ರದಿಂ. ಸ್ನೇಹಮಂ
ಸವಿಯೊಡ್ಡಿ, ಶಿವಲಲಾಟಾಕ್ಷಿಯೊಳ್ ಅಭೀತಿಯಿಂ
ಚರಿಸುವಂತೆಸಗಿಹಿರಿ. ಸಂನ್ಯಾಸಯೋಗದಿಂ
ಧರ್ಮಗರ್ವದ ಸೋಂಕು ಸುಳಿಯದಾ ಪ್ರೀತಿಯಿಂ
ಸಾಮಾನ್ಯತೆಯನಾಂತು, ಕಲೆಗಳನುರಾಗದಿಂ
ರಸಯೋಗಿಯಾಗಿರ್ಪ ನೀಮೆ ಶಾಂತಿಯ ಭಟಂ,
ಮೇಣ್ ಆತ್ಮದಾನಂದ ಸಿದ್ಧೇಶ್ವರನೆ ದಿಟಂ!

೧೯-೫-೧೯೪೧