ಎತ್ತ ಸುತ್ತಿದರೇನು ನನ್ನ ಹೃದಯದ ಹಕ್ಕಿ
ಹಾರೋಡುತಿದೆ ನಿನ್ನೆದೆಗೆ ಮತ್ತೆ ಮೇಣ್ಮತ್ತೆ,
ಓ ನನ್ನ ಪ್ರಿಯದರ್ಶಿ! ಹಸುಳೆ ಹಸಿವೆಗೆ ಸಿಕ್ಕಿ
ತಾಯ್ಮೊಲೆಯನರಸುವಂದದಿ ನಿನ್ನನರಸುತ್ತೆ
ಕಾಲದೇಶಗಳೆಲ್ಲೆಯನು ಕೊಕ್ಕಿನಿಂ ಕುಕ್ಕಿ
ಬಿರಿದೊಡೆದು ನನ್ನಾತ್ಮವಲೆಯುತಿದೆ. ಓ ಮಿಥ್ಯೆ,
ವಿರಹ ಜಿಹ್ವೆಗೆ ಜೇನು ನೀನಲ್ತೆ? ಎದೆ ಸುಕ್ಕಿ
ಬೇಯುತಿರೆ, ಮಳೆಗರೆದು ತಂಪಿನಮೃತವನಿತ್ತೆ!
ರಮಣೀಯ ಸೀಮೆಸೇವಂತಿಗೆಯ ಹೂದೋಟ:
ರತಿಯಧರ ರುಧಿರ ಬಿಂದುವಿನಂದದಿ ಗುಲಾಬಿ!
ಎಳೆಯ ಹೊಂಬಿಸಿಲಿನಲಿ ಹಸಲೆಯಿಬ್ಬನಿ ನೋಟ:
ಆದರೇಂ? ನೀನಿಲ್ಲದೆನಗೆಲ್ಲವೂ ‘ಗೋಬಿ’!
ಹೊರಗೆ ನೋಡುವ ಇಚ್ಛೆಯಣಮಿಲ್ಲ: ಕಣ್ಮುಚ್ಚಿ
ಹಾರುತಿದೆ ನಿನ್ನೆಡೆಗೆ ಕಲ್ಪನೆ ಗರಿ ಬಿದಿರ್ಚ್ಚಿ!

೧೫-೧೦-೧೯೩೫