ಪರಮ ಸಂಪೂರ್ಣತೆಯೆ ಕೋಮಲತೆಯೊಡಗೂಡಿ
ಸೌಂದರ್ಯರೂಪದಿಂದಿಳೆಗೆ ಬರಲದೆ ಹೆಣ್ಣು
ತಾನಾಗಿ ಮೋಹಿಸುತ್ತಿದೆ. ಕಬ್ಬಿಗನ ಕಣ್ಣು
ರೂಪಾಗ್ನಿರಾಶಿಗೆ ಪತಂಗದಂದದೊಳೋಡಿ
ಮುಗ್ಗುತಿದೆ, ಮೃತ್ಯುಮಾಧುರ್ಯಕ್ಕೆ ಮನಸೋತು:
ತುಟಿ, ಬಾಯಿ, ಕಣ್ಣು, ಮೈ, ಕೆನ್ನೆ, ಹಣೆ, ಹುಬ್ಬು, ಮುಡಿ,
ಹೆದೆಯೇರ್ದ ಬಿಲ್ಲಿನೆದೆ, ಬಳ್ಳಿನಡು, ಮುತ್ತಿನಡಿ-
ಬ್ರಹ್ಮಶಿಲ್ಪಿಯ ಕೃತಿಗೆ ಕವಿಯ ಬಿರುದಿನ ಮಾತು!
ನಿನ್ನನುಳಿದಿರೆ ತಿರೆಯ ಬದುಕು ಮರುಧರೆ, ಸೊನ್ನೆ;
ಬಾಳ್ಗಿಡಕೆ ಜೀವನಂ ಹೂ ಹಣ್ಣು ಕಂಪಿಂಪು
ನೀನಲ್ತೆ, ಓ ನನ್ನ ನೀಲಿ ಸೀರೆಯ ಕನ್ನೆ?
ಸಂಸ್ಕೃತಿಯ ರಸಿಕತೆಯ ಕಲೆಯ ಕಾವ್ಯದ ಪೆಂಪು
ನೀನಿರಲ್ಕೆಲ್ಲ ಸಾಧನೆಗೆ ನೀಂ ಫಲಂ, ಸಿದ್ಧಿ!
ನೀನಿಲ್ಲದಿಹ ತಪಕಿಹುದೆ ಶುದ್ಧಿ, ಮೇಣ್ ಬುದ್ಧಿ?

೧೧-೭-೧೯೩೬