ಹೋಮರ್, ನಿನ್ನ ಕಲೆ ಪಿರಿದಾದೊಡಂ ನಿನ್ನ
ಕಥೆ ಪಿರಿದಲ್ತು. ಲೋಕಸುಂದರಿ ನಿನ್ನ ಹೆಲೆನ್
ಚೆಲುವೆ ದಲ್; ಮತ್ತೇನುಮಲ್ತು: ನಾಂ ಪೇಸುವೆನ್
ನಾಡು ಮನೆ ಅಣ್ಣತಮ್ಮಂದಿರಂ ಮೇಣ್ ತನ್ನ
ಪತಿಯುಮಂ ಪೆಣ್ಗೂಸುಮಂ ತ್ಯಜಿಸಿ, ತನುರುಚಿಗೆ
ಸೋತು, ಪಾಣ್ಬಂ ಬೆರಸುತೋಡಿವೋದಾ ಪೆಣ್ಗೆ!
ಈಲಿಯಡ್ಡಿನ ಮಹಾಕಲೆಯ ನೆತ್ತರ್‌ಗಣ್ಗೆ
ಬೆಲೆವೆಣ್ಣೆ ಗುರಿಯಾಯ್ತೆ? – ಕ್ಷಮಿಸು: ಸೀತೆಯ ಶುಚಿಗೆ
ರಾಮಾಯಣವನೊರೆದನಾದಿಕವಿ ವಾಲ್ಮೀಕಿ.
ಆ ಶುಚಿಯ ಗಂಗೆಯೊಳ್ ಮಿಂದೆನಗೆ ಸಹಿಸದಯ್
ಕೆಸರಿನೋಕುಳಿಯ ನಿನ್ನದ್ಭುತ ರಣಕ್ರೀಡೆ!
ದಿವ್ಯಕಲೆಗಿರವೇಳ್ಕು ಭವ್ಯವಿಷಯಂ: ಪಿನಾಕಿ
ಬಿಲ್ಲೆಳೆವನೇನಲ್ಪ ಕುರಿಗಾಗಿ? ಸಿಡಿಲೆ ಸಯ್
ಠಂಕಾರಮಾದೊಡೇಂ? ನಾಣ್ಚುವೆ, ಗುರಿಯ ನೋಡೆ!

೩೧-೩-೧೯೪೦