ಗುಡುಗುಮಿಂಚೊಳು ಮನೆಗೆ ಬಂದಿರಿ
ಹೊಸ್ತಿಲಲಿ ಹೂವಾದಿರಿ
ಮೋಡಗಳ ದಂಡೆತ್ತಿ ಬಂದರು
ಕರಗಿ ಹನಿಮುತ್ತಾದಿರಿ.

ಶ್ರಾವಣದ ಕಾರುಣ್ಯ ಧಾರೆಯ
ಸುರಿಸಿ ತಂಪನು ತಂದಿರಿ
ಗದ್ದೆ ಬಯಲಿನ ಕೆಸರಿನಲ್ಲೂ
ಹಸಿರುಗರಿ ನವಿಲಾದಿರಿ.

ಶರತ್ ಕಾಲದ ನೀಲನಭದಲಿ
ಮೇಘ ಶಿಲ್ಪಗಳಾದಿರಿ
ಇರುಳ ದಿಗ್‌ಭ್ರಮೆಗಳಲಿ ಹಣತೆಯ
ತಣ್ಣನೆಯ ಬೆಳಕಾದಿರಿ.

ಮಾಘ ಮೌನದ ಅಂತರಾಳದ
ಸುಪ್ತ ಸ್ವರಗಳ ಮಿಡಿದಿರಿ
ಚೈತ್ರ ಸುಂದರ ವೃಂದಗಾನದ
ನೂರು ವರ್ಣವ ತೆರೆದಿರಿ.