ನಿನ್ನ ಬಾಳಿನ ಹೊಲವು ಪಾಳುಬಿದ್ದಿಹುದಲ್ಲೊ,
ಕೃಷಿಗೈಯಲೂ ಕೂಡ ತಿಳಿಯದಿರುವೆ !
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈ ಮುರಿದು ದುಡಿದಿದ್ದರೆ !

ಈಗಲಾದರು ತಾಯ ಶ್ರೀನಾಮವೆಂತೆಂಬ
ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೋ,
ಅದಕಿಂತ ಬಲವಾದ ಕಾವಲಿನ್ನಾವುದಿದೆ ?
ಮೃತ್ಯುವೂ ನಿನ್ನ ಬಳಿ ಬರಲಾರನೋ.

ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ
ಮುನ್ನವೇ ಎಚ್ಚತ್ತು ಬೆಳೆಯ ತೆಗೆಯೋ,
ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ
ಪ್ರೇಮವಾರಿಯ ಹೊಯ್ದು ಹಸನುಗಳಿಸೋ.
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು
ರಾಮಪ್ರಸಾದನಿದೊ ನೆರವಿಗಿಹನೋ.