ಅಯ್ಯೊ ಎಂತಹ ತೋಟ ನಮ್ಮದು
ನಾಡಿಗೇ ಹೆಸರಾದುದು.

ಇದರ ಹೂವಿನ ಕಂಪು ನಡೆವರ
ಮನಕೆ ನೆಮ್ಮದಿಯಿತ್ತುದು
ಇದರ ಹಣ್ಗಳ ರಸವು ರಸಿಕರ
ರಸನೆಯಲಿ ಬೇರ್‌ಬಿಟ್ಟುದು
ಇದರ ಹಸುರಿನ ಹೆಸರು ಜೀವಕೆ
ಉಸಿರನೇ ಕೊಡುವಂಥದು.

ಆದರೇತಕೆ ಇಂದು ಈ ತೆರ
ಕಳೆಯು ಬೆಳೆದಿದೆ ಸುಮ್ಮನೆ
ಇಷ್ಟು ಬೇಗನೆ ಹಳೆಯ ಸೊಗವೂ
ಬರಿಯ ನೆನಪಾಗುಳಿದುದೆ?

ಅಂದು ಇದ್ದುವು ತೆಂಗು ಕಿತ್ತಲೆ
ಅಡಕೆ ಮಾವಿನ ಸಸಿಗಳು.
ಇಂದು ಏನಿವೆ? ಬರಿಯ ಟೊಮೆಟೋ
ನಾಲ್ಕು ಸೊಪ್ಪಿನ ಮಡಿಗಳು !
ನಾಲ್ಕು ದಿನಕೇ ಬೆಳೆದು ಉಣ್ಣುವ
ಚಪಲ ಕರ್ಮದ ಪರಿಯಿದು
ಹಿಂದಿನವರೊಲು ತಾಳ್ಮೆಯಿಂದಲಿ
ಕಾದು ಸವಿಯುವರಿಲ್ಲವು !

ಹಿಂದೆ ಹಿರಿಯರು ನಟ್ಟ ಸಸಿಗಳ
ನೆಳಲ ತಂಪೊಳು ಮಲಗುತ,
ಅದರ ಎಲೆಗಳ ಹಣ್ಣು ಹೂಗಳ
ಕುರಿತು ಕವಿತೆಯ ಹಾಡುತ

ಇಂದು ಹೊಸತೇನೊಂದು ಹಿರಿಮೆಯ
ಕೃಷಿಗೆ ಮನವನು ಮಾಡದೆ,
ಮಾರುಕಟ್ಟೆಗೆ ತಕ್ಕ ಮಾಲನು
ಮಾತ್ರ ಬೆಳೆಯುತ ಕೂತಿರೆ ?

ತೆಂಗು ಸಸಿಗಳ ನೆಡುವ ಮುದುಕನ
ದೃಷ್ಟಿ-ತಾಳ್ಮೆಯು ಬೆಳೆಯಲಿ
ನಾವು ನೆಟ್ಟುದು ನಮಗೆ ಫಲಿಸಲಿ
ಎಂಬ ದುರ್ಮತಿಯಳಿಯಲಿ
ಹಣೆಯ ಬೆವರನು ಬಸಿದು ಮಣ್ಣೊಳು
ಹೊನ್ನ ಬೆಳೆಯುವ ಕೆಚ್ಚನು
ಗಳಿಸಿಕೊಳ್ಳಿರಿ ; ಏಳಿರಣ್ಣಾ
ತುಂಬಿಕೊಳ್ಳಿರಿ ನಚ್ಚನು !