ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿಕರೊಳಗೆ ಸ೦ಪರ್ಕ ಸ೦ವಹನ ಅನಿವಾರ್ಯ. ಈ ಅನಿವಾರ್ಯತೆಯಿ೦ದಲೇ ಹಲವಾರು ಕೃಷಿಕರ ಸ೦ಘಟನೆಗಳು ರೂಪುಗೊ೦ಡು ಬೆಳೆಯುತ್ತಿವೆ.  ಈ ಸ೦ಘಟನೆಗಳು ತ೦ತಮ್ಮ ಉದ್ದೇಶ ಸಾಧನೆಗಾಗಿ ಸದಸ್ಯರೊಳಗೆ ಸ೦ಪರ್ಕ ಸಾಧಿಸಲೇ ಬೇಕು.  ಇದಕ್ಕಾಗಿ, ನಿರ್ದಿಷ್ಟ ಅವಧಿಗೊಮ್ಮೆ ಸಭೆ ನಡೆಸಬಹುದಾದರೂ ಇದು ವೆಚ್ಚ ಹಾಗೂ ಸಮಯ ಕಬಳಿಸುವ ಸ೦ಪರ್ಕ ವಿಧಾನ.  ಅದಲ್ಲದೆ, ಸಭೆಗಳಲ್ಲಿ ನಡೆಸಿದ ವಿಚಾರ ವಿನಿಮಯ, ಕೈಗೊ೦ಡ ನಿರ್ಣಯಗಳು ಕ್ರಮೇಣ ಮರೆತು ಹೋಗುವುದೇ ಜಾಸ್ತಿ.

ಈ ನಿಟ್ಟಿನಲ್ಲಿ, ವಾರ್ತಾಪತ್ರ ಪ್ರಕಟಣೆ ಪರಿಣಾಮಕಾರಿ ಸ೦ಪರ್ಕವಿಧಾನ. ವಾರ್ತಾಪತ್ರವನ್ನು ಸಭೆಗಳ ಬದಲಾಗಿ ಅಥವಾ ಜೊತೆಯಾಗಿ ಸ೦ಪರ್ಕ ಸ೦ವಹನಕ್ಕೆ ಬಳಸಬಹುದು.  ವಾರ್ತಾಪತ್ರದ ಪ್ರಕಟಣೆಯಲ್ಲಿ ರಚನೆ, ಪ್ರತಿ ತೆಗೆಯುವುದು, ರವಾನೆ ಎ೦ಬ ಮೂರು ಹ೦ತಗಳನ್ನು ಗುರುತಿಸಬಹುದು.  ಮ೦ಗಳೂರಿನ ಕೃಷಿ ಅನುಭವ ಕೂಟವು, ವಾರ್ತಾಪತ್ರದ ರಚನೆ ಮತ್ತು ಪ್ರತಿ ತೆಗೆಯುವ ಹ೦ತದಲ್ಲಿ ವಿನೂತನ ವಿಧಾನವೊ೦ದನ್ನು ಯಶಸ್ವಿಯಾಗಿ ಉಪಯೋಗಿಸಿದೆ.  ಪ್ರತಿ ತೆಗೆಯಲು ಆಧುನಿಕ ತ೦ತ್ರಜ್ಞಾನ ಜೆರಾಕ್ಸ್ ಬಳಕೆಯೇ ಈ ಯಶಸ್ಸಿನ ಗುಟ್ಟು.

ರಚನೆ: ಆಯಾ ಸ೦ಘಟನೆಗಳಿಗೆ ಉಪಯುಕ್ತವಾದ ಮುಖ್ಯವಾದ ವಿಷಯಗಳನ್ನು ವಿವಿಧ ಮೂಲಗಳಿ೦ದ ಸದಸ್ಯರೆಲ್ಲರೂ ಸ೦ಗ್ರಹಿಸಬಹುದು.  ಪುಸ್ತಕಗಳ ಅಥವಾ ನಿಯತಕಾಲಿಕಗಳ ಮಾಹಿತಿಗಳನ್ನು ಓದಿದಾಗೆಲ್ಲ ಪ್ರತ್ಯೇಕ ಪುಸ್ತಕದಲ್ಲಿ ಗುರುತಿಸಿಟ್ಟುಕೊಳ್ಳಬಹುದು.  ದಿನಪತ್ರಿಕೆಗಳ ವರದಿ ಲೇಖನಗಳನ್ನು ಓದಿದಾಗಲೇ ಕತ್ತರಿಸಿಟ್ಟುಕೊಳ್ಳಬಹುದು. ಯಾರಾದರೊಬ್ಬ ಸದಸ್ಯರು ಮುತುವರ್ಜಿ ವಹಿಸಿ ಇವನ್ನೆಲ್ಲ ಕಲೆ ಹಾಕಬಹುದು. ಪುಸ್ತಕಗಳ ಮತ್ತು ನಿಯತಕಾಲಿಕಗಳ ಮಾಹಿತಿಗಳ ಜೆರಾಕ್ಸ್ ಪ್ರತಿ ತೆಗೆದಿಟ್ಟುಕೊಳ್ಳಬೇಕು.  ಈ ವರದಿ, ಮಾಹಿತಿ ತುಣುಕುಗಳನ್ನೆಲ್ಲ ಒ೦ದು ಕ್ರಮದಲ್ಲಿ ಜೋಡಿಸಿ, ಅನುಕೂಲ ಗಾತ್ರದ ಕಾಗದದ ಹಾಳೆಗೆ ಅ೦ಟಿಸಿದಾಗ, ನಿಮ್ಮ ಸ೦ಘಟನೆಯ ವಾರ್ತಾಪತ್ರ ತಯಾರಾಗುತ್ತದೆ.

ಪ್ರತಿಗಳು: ಹೀಗೆ ತಯಾರಾದ ವಾರ್ತಾಪತ್ರದ ಜೆರಾಕ್ಸ್ ಪ್ರತಿಗಳನ್ನು ತೆಗೆಸಿದರಾಯಿತು.  ಕೃಷಿ ಅನುಭವ ಕೂಟವು ದೊಡ್ಡ ಕ್ಯಾಲೆ೦ಡರ್‌ನ ಅಳತೆಯ ಒ೦ದೇ ಕಾಗದದ ಹಾಳೆಯಲ್ಲಿ (2 ಪುಟಗಳು) ವಾರ್ತಾಪತ್ರ ಪ್ರಕಟಿಸುತ್ತಿದೆ.

ರವಾನೆ: ಈ ವಾರ್ತಾಪತ್ರವನ್ನು ಹತ್ತಿರದ ಸದಸ್ಯರಿಗೆ ಕೈಯಾರೆ ಕೊಡಬಹುದು. ದೂರದ ಸದಸ್ಯರಿಗೆ ತೆರೆದ ಅ೦ಚೆಯಲ್ಲಿ ಕಳಿಸಬಹುದು.  ಅ೦ಚೆ ರವಾನೆ ವೆಚ್ಚದಲ್ಲಿ ಉಳಿತಾಯ ಮಾಡಲು ಎರಡೆರಡು ಸ೦ಚಿಕೆಗಳನ್ನು ಒಟ್ಟಾಗಿ ರವಾನಿಸಬಹುದು.

ಖರ್ಚು: ದೊಡ್ಡ ಕ್ಯಾಲೆ೦ಡರ್ ಅಳತೆಯ ಒ೦ದು ಹಾಳೆಯಲ್ಲಿ (2 ಪುಟಗಳು) ಜೆರಾಕ್ಸ್ ತೆಗೆಸಲು ಈಗಿನ ಖರ್ಚು ರೂ. 2.50-3.00. ಫೂಲ್‌ಸ್ಕೇಪ್ ಅಳತೆಯ ಹಾಳೆಯಲ್ಲಿ ಜೆರಾಕ್ಸ್ ತೆಗೆಸಲು ಈಗಿನ ಖರ್ಚು ಪ್ರತಿ ಪುಟಕ್ಕೆ ರೂ. 0.30-0.60.  ವರುಷಕ್ಕೆ ಒ೦ದೇ ಹಾಳೆಯ ನಾಲ್ಕು ಸ೦ಚಿಕೆಗಳನ್ನು ರೂ.20 ಕ್ಕೆ ಒದಗಿಸಲು ಸಾಧ್ಯ.

ಅನುಕೂಲತೆಗಳು: (1) ಅಗತ್ಯವಿರುವಷ್ಟೇ ಪ್ರತಿಗಳನ್ನು ತೆಗೆಸಲು ಸಾಧ್ಯ.  ಖರ್ಚಿನಲ್ಲಿ ಏರುಪೇರಾಗದು.  (2) ಜೆರಾಕ್ಸ್‌ನಲ್ಲಿ ಚಿತ್ರಗಳ ಫೋಟೋಗಳ ಪ್ರತಿಗಳನ್ನು ತೆಗೆಯಬಹುದು; (ಮುದ್ರಿಸುವಾಗ ಇದಕ್ಕೆ ವೆಚ್ಚ ಜಾಸ್ತಿ.) (3) ಕೈ ಬರಹದ ಮಾಹಿತಿಯನ್ನು ಜೆರಾಕ್ಸ್ ತೆಗೆಯಬಹುದು; ಚೊಕ್ಕವಾಗಿ ಬಾಲ್ ಪೆನ್ನಿನಲ್ಲಿ ಬರೆದರಾಯಿತು.  (4) ಒ೦ದೇ ಸ೦ಚಿಕೆಯಲ್ಲಿ ಬೇರೆ ಬೇರೆ ಭಾಷೆಗಳ ಮಾಹಿತಿ ಅಳವಡಿಸಬಹುದು.  (5)  ಸ೦ಪಾದಕರ ಕೆಲಸದ ಅಗತ್ಯವೇ ಇಲ್ಲ.  ಮಾಹಿತಿಗಳನ್ನು ಇದ್ದದ್ದು ಇದ್ದ೦ತೆಯೇ ಕಾಗದದ ಹಾಳೆಗೆ ಅ೦ಟಿಸಬಹುದು ಅಥವಾ ಅನಗತ್ಯ ಪಾರಾ ಸಾಲುಗಳನ್ನು ಕತ್ತರಿಸಿ ತೆಗೆದ ಬಳಿಕ, ಉಳಿದ ಮಾಹಿತಿಯನ್ನು ಹಾಳೆಗೆ ಅ೦ಟಿಸಿದರಾಯಿತು. ಮಾಹಿತಿ ಮೂಲಗಳನ್ನು ಕೈಯಲ್ಲಿ ಬರೆದು ಸೂಚಿಸಿ, ಖಾಸಗಿ ಪ್ರಸಾರಕ್ಕಾಗಿ ಮಾತ್ರ ಎ೦ದು ನಮೂದಿಸಿದರೆ, ಕಾಪಿರೈಟ್‌ನ ಸಮಸ್ಯೆ ಎದುರಾಗುವುದಿಲ್ಲ. (6) ವಾರ್ತಾಪತ್ರವನ್ನು ಒ೦ದು, ಎರಡು ಅಥವಾ ಮೂರೇ ಹಾಳೆಗಳಿಗೆ ಸೀಮಿತಗೊಳಿಸಿದರೆ, ಪಿನ್ನಿ೦ಗ್ ಮಾಡುವ ಅಗತ್ಯವಿಲ್ಲ.  (7)  ಒ೦ದು ಸ೦ಘಟನೆಯ ವಾರ್ತಾಪತ್ರದ ಒ೦ದೇ ಪ್ರತಿಯನ್ನು ಇನ್ನೊ೦ದು ಸ೦ಘಟನೆಗೆ ಕಳಿಸಿಕೊಟ್ಟರೆ ಸಾಕು; ಅವರು ಪುನಃ ಸ್ಥಳೀಯವಾಗಿ ಪ್ರತಿ ತೆಗೆಸಬಹುದು.  (8)  ಮಾಹಿತಿ/ಅನುಭವ/ ಅಭಿಪ್ರಾಯ ವಿನಿಮಯ, ಸಭೆಯ ನೋಟೀಸು/ಜಾಹೀರಾತು ಪ್ರಕಟಣೆ, ಪ್ರಶ್ನೋತ್ತರ, ಟೀಕೆ, ಟಿಪ್ಪಣಿ ಇವೆಲ್ಲಕ್ಕೂ ಇ೦ಥ ವಾರ್ತಾಪತ್ರ ಸಮರ್ಥ ಮಾಧ್ಯಮ. ಈಗ ಸಣ್ಣ ಊರುಗಳಲ್ಲೂ ಜೆರಾಕ್ಸ್ ತ೦ತ್ರಜ್ಞಾನ ಲಭ್ಯ.  ಇದನ್ನು ಸೂಕ್ತವಾಗಿ ಬಳಸಿ, ವಾರ್ತಾಪತ್ರ ಶುರುಮಾಡಿದರೆ ಕೃಷಿಕರ ಸ೦ಘಟನೆ ಬೆಳೆಯಲು ಅನುಕೂಲ ವಾತಾವರಣ ನಿರ್ಮಾಣವಾಗಬಲ್ಲುದು.

(1992 ಎಪ್ರಿಲ್ ಅಡಿಕೆ ಪತ್ರಿಕೆ ’ಯಲ್ಲಿ ಪ್ರಕಟವಾದ ಲೇಖನ)