ತೋಟ ಮಾಡಲು ಫಲವತ್ತಾದ ಮಣ್ಣು ಬೇಕೇಬೇಕು. ಅದಿಲ್ಲವಾದರೆ? ತೇವಾಂಶ ಹಿಡಿದಿಡಲು, ಸೂಕ್ಷ್ಮಜೀವಿಗಳು ಹೆಚ್ಚಲು ಮಣ್ಣನ್ನು ಸಿದ್ಧಪಡಿಸಿಕೊಳ್ಳಬೇಕಾದ್ದು ಮುಖ್ಯವಾದ ಕೆಲಸ. ಬೆಳೆ ಯಾವುದು ಎಂಬುದನ್ನು ತಿಳಿದುಕೊಂಡು ನಿರ್ಧರಿಸಿದ ಮೇಲೆ ಅದಕ್ಕೆ ತಕ್ಕಂತೆ ಮಣ್ಣನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯ.

ದ್ರಾಕ್ಷಿಯನ್ನು ಬೆಳೆಯಲು ಮರಳುಮಿಶ್ರಿತ ಗೋಡಾದರೆ ಒಳ್ಳೆಯದು. ದೇವನಹಳ್ಳಿ ರಮೇಶ್‌ರವರು ಕತ್ತಾಳೆ, ಬೇವಿನಹಿಂಡಿ, ಹರಳುಹಿಂಡಿ ಮುಂತಾದ ಹಿಂಡಿಗಳು, ಹಸುರೆಲೆಗಳು ಹಾಗೂ ಗುಹೆಗಳಲ್ಲಿ ಬಾವಲಕ್ಕಿಯ ಹಿಕ್ಕೆಯನ್ನು ಚೀಲ ತುಂಬಿಸಿ ತಂದು ನೆಲ ಸಿದ್ಧಪಡಿಸಿದ್ದಾರೆ. ಇಡೀ ಜಮೀನಿಗೆ ಇವನ್ನೆಲ್ಲಾ ಸೂಕ್ತಪ್ರಮಾಣದಲ್ಲಿ ಸೇರಿಸಿ ಉಳುಮೆ ಮಾಡಿದ್ದಾರೆ. ಸ್ವಲ್ಪದಿನ ಬಿಟ್ಟು ಮತ್ತೆ ಉಳುಮೆಮಾಡಿ ದ್ರಾಕ್ಷಿ ಬೆಳೆಯುತ್ತಿದ್ದಾರೆ.

ಗದಗದಲ್ಲಿ ದ್ರಾಕ್ಷಿ ಬೆಳೆಯಲು ಅಯ್ಯಪ್ಪ ಮಸಗಿಯವರು ತೇವಾಂಶಕ್ಕಾಗಿ ಗಾಡಿಗಟ್ಟಳೆ ಮರಳನ್ನು ನೆಲಕ್ಕೆ ಸೇರಿಸಿದ್ದಾರೆ.

ಮೊದಲಿಗೆ ಕೆಂಪುಮಣ್ಣಿರಲಿ, ಜೇಡಿ ಮಣ್ಣಿರಲಿ ಅದಕ್ಕೆ ಕುರಿಗೊಬ್ಬರ, ಮೂಳೆಪುಡಿ, ಮೀನುಗೊಬ್ಬರ, ಹಟ್ಟಿಗೊಬ್ಬರ ಹಾಗೂ ಹಸುರೆಲೆಗಳನ್ನು ಚೆನ್ನಾಗಿ ಬೆರೆಸಿ ಆಮೇಲೆ ಮರಳು ಹದ ಮಾಡುತ್ತಿದ್ದರು. ಮತ್ತೊಮ್ಮೆ ಅಗತೆ ಮಾಡುವಾಗ ದ್ವಿದಳ ಧಾನ್ಯಗಳ ಸೊಪ್ಪು, ಹಿಂಡಿಗಳನ್ನು ಬೆರೆಸುವ ಪದ್ಧತಿ ಇತ್ತು. ಇವು ಬೆಳೆಗೆ ಪೌಷ್ಠಿಕತೆ, ಶಕ್ತಿ ನೀಡುತ್ತಿತ್ತು.

ಒಟ್ಟಾರೆ ಮಣ್ಣನ್ನು ಬೇರೆ ಬೇರೆ ವಿಧಾನಗಳಿಂದ ಫಲವತ್ತುಗೊಳಿಸುವುದು ಮುಖ್ಯ. ಜೇಡಿಯಲ್ಲಿ ಯಾವುದೇ ಗಿಡಮರಗಳೂ ಉಸಿರುಕಟ್ಟಿ ಸಾಯುತ್ತವೆ. ಅದಕ್ಕೆ ಎಕರೆಗೆ ನೂರು ಗಾಡಿ ಮರಳು ಸೇರಿಸಿದರೆ ಸರಿಯಾಗುತ್ತದೆ. ಅದೇ ರೀತಿ ಮರಳುಮಣ್ಣಿಗೂ ಜೇಡಿ ಸೇರಿಸಬೇಕಾಗುತ್ತದೆ. ಜೊತೆಗೆ ಕಾಡಿನ ಗೋಡುಮಣ್ಣು ಸೇರಿಸುವುದು ಉತ್ತಮ. ಜೇಡಿಮಣ್ಣನ್ನು ಸುಟ್ಟು ಸುಡುಮಣ್ಣು ಮಾಡಿದರೆ ಜಿಗುಟಿನ ಅಂಶ ಕಡಿಮೆಯಾಗುತ್ತದೆ. ಇದಕ್ಕೆ ಸುಣ್ಣ ಸೇರಿಸಿ ಹಸುರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬೆರೆಸಿ ಸೂಕ್ಷ್ಮಜೀವಿಗಳು ಹೆಚ್ಚುವಂತೆ ಮಾಡಬೇಕು.

ಚೌಳು ಮಣ್ಣಾದರೆ, ಮಣ್ಣಿನಲ್ಲಿ ಲವಣಾಂಶ ಹೆಚ್ಚಿದ್ದರೆ ಅದಕ್ಕೂ ಮರಳು ಸೇರಿಸಬೇಕು. ಆಳವಾದ ಬಸಿಗಾಲುವೆಗಳನ್ನು ತೆಗೆದು ನೀರು ಹೊರಹೋಗುವಂತೆ ಮಾಡಬೇಕು. ಎರಡು ಮೂರು ಕಡೆ ಬಾವಿಗಳನ್ನು ತೆಗೆಯಬೇಕು. ತೋಟಕ್ಕೆ ಹೊರಗಿನಿಂದ ಕೆಂಪುಮಣ್ಣು ಗೊಚ್ಚು ತಂದು ಉದಿ ಹಾಕಿಸಬೇಕು. ಆಗಾಗ ಸುಣ್ಣ ಹಾಕಬೇಕು. ರಾಗಿ, ತೆಂಗು, ಕೆಸವಿನ ಗೆಡ್ಡೆಗಳು ಮಣ್ಣಿನೊಳಗಿನ ಲವಣಾಂಶವನ್ನೆಲ್ಲಾ ಹೀರಿಕೊಳ್ಳುತ್ತವೆ. ಇವುಗಳನ್ನು ಬೆಳೆಯಬಹುದು. ಬೆಳೆದ ಸಸ್ಯಗಳಿಗೆ ಮೀನುಗೊಬ್ಬರ, ಬೇವಿನಹಿಂಡಿ ನೀಡಬೇಕು.

ಜವುಳು ನೆಲಕ್ಕೆ ದನಕರುಗಳು ನುಗ್ಗದಂತೆ ಬೇಲಿ ಕಟ್ಟಿ ಹಾಗೇ ಬಿಡಬೇಕು. ಅಲ್ಲಿ ನೂರಾರು ಜಾತಿಯ ಕಳೆಗಿಡಗಳು ಏಳುತ್ತವೆ. ಅವು ನಾಲ್ಕಾರು ವರ್ಷಗಳಲ್ಲ್ಲಿ ವಿಪರೀತ ಬೆಳೆದು ಜವುಳನ್ನೆಲ್ಲಾ ಕಡಿಮೆ ಮಾಡಿಬಿಡುತ್ತದೆ. ಇಲ್ಲೂ ಆಳದ ಬಸಿಗಾಲುವೆಗಳು, ಬಾವಿ ಏನೆಲ್ಲಾ ತೆಗೆಯಬಹುದು. ಜವುಳಿನಲ್ಲೇ ಬೆಳೆಯುವ ಭತ್ತದ ತಳಿಗಳಿವೆ. ಅದನ್ನು ಬೆಳೆದು ತೆನೆ ಮಾತ್ರ ಕತ್ತರಿಸಿಕೊಳ್ಳಬೇಕು. ಜವುಳಿನ ಕೆಸ, ಜವಳು ಸಸ್ಯಗಳನ್ನು ಬೆಳೆದು ಸರಿಪಡಿಸಬಹುದು. ಆದರೆ ಸರಿಪಡಿಸಲು ಸಾಕಷ್ಟು ವರ್ಷಗಳೇ ಬೇಕು.

ಮುರಕಲ್ಲು ಅಥವಾ ಕರಕಲು ಮಣ್ಣಿನಲ್ಲಿ ಬಾಳೆ, ಗೆಣಸು, ಸುವರ್ಣಗೆಡ್ಡೆ, ಶುಂಠಿ, ಅರಿಸಿನ ಮುಂತಾದ ಗೆಡ್ಡೆಗಳನ್ನು ಬೆಳೆಯಬಹುದು. ಆದರೆ ಅದರ ಮೇಲೆ ಅರ್ಧ ಅಡಿ ಕೆಮ್ಮಣ್ಣು ಹಾಕಿಕೊಳ್ಳಲೇಬೇಕು. ಇವು ನೆಲದಾಳದಲ್ಲಿ ಫಲ ಬಿಡುವ ಸಸ್ಯಗಳು. ಮಣ್ಣಿನೊಳಗೆ ಗೆಡ್ಡೆ ಕೂರಿಸಿ ಫಲವತ್ತು ಮಾಡಲು ಸಾಧ್ಯ.

ಹೆಬ್ರಿಯ ವಿಠ್ಠಲಶೆಟ್ಟಿಯವರು ಮುರಕಲ್ಲಿನ ಮೇಲೆ ಕೆಂಪುಮಣ್ಣು ಹಾಕಿಸಿ ಹುಲ್ಲು ಬೆಳೆದಿದ್ದಾರೆ. ಹುಲ್ಲಿನ ಬೇರುಗಳು ಮುರಕಲ್ಲಿನೊಳಗೂ ಇಳಿದು ಕಲ್ಲಿನ ಪದರವೆಲ್ಲಾ ಬಿರುಕು ಬಂದಿದೆ. ಕೆಲವೇ ವರ್ಷಗಳಲ್ಲಿ ಮುರಕಲ್ಲು ಒಡೆದೂ ಒಡೆದು ಮಣ್ಣಾಗಬಹುದು ಎನ್ನುವ ಆಶಯ ಅವರದು.

ದ್ವಿದಳಧಾನ್ಯಗಳು, ಎಳ್ಳು, ಜೀರಿಗೆ, ಸಾಸಿವೆ, ಕಹಿಜೀರಿಗೆ, ನೀಲಿ ಮುಂತಾದ ಕಾಳುಗಳನ್ನು ಬೆಳೆಯುವುದು, ಆಮೇಲೆ ಅವುಗಳ ಬೀಜಗಳನ್ನು ಮಾತ್ರ ಕಿತ್ತುಕೊಂಡು ಸಸ್ಯಭಾಗವನ್ನು ನೆಲಕ್ಕೆ ಸೇರಿಸಬೇಕು. ಹಿತ್ಲವರೆ ಬಳ್ಳಿಗಳು, ಕುಂಬಳ, ಸವುತೆ ಬಳ್ಳಿಗಳಲ್ಲೂ ತರಕಾರಿಯನ್ನು ಕೊಯ್ದುಕೊಂಡು ಉಳಿದಿದ್ದನ್ನು ಮಣ್ಣಿಗೇ ಸೇರಿಸಬೇಕು. ದ್ವಿದಳ ಧಾನ್ಯಗಳ ಗಿಡಗಳನ್ನು ಹೂವಾಗುವ ಹಂತದಲ್ಲೇ ಸೇರಿಸುವುದರಿಂದ ಅತಿಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು. ತೋಟ ಮಾಡುವ ಮೊದಲು ಎರಡು ಸಾರಿ ಈ ರೀತಿ ಮಾಡುವುದು ಉತ್ತಮ.

ಮಳೆಗಾಲದಲ್ಲಿ ಕೊಚ್ಚಿಕೊಂಡು ಬರುವ ಕೆಸರು ನೀರು ನಿಲ್ಲಿಸುವುದು, ಹೊಳೆ ಹಳ್ಳಗಳಿಂದ ಹರಿದುಬರುವ ನೀರು ನಿಂತು, ಮುಂದೆ ಹೋಗುವಂತೆ ಮಾಡುವುದರಿಂದಲೂ ಸವಕಳಿಯಾದ ಮೇಲ್ಮಣ್ಣು ಸಿಗುತ್ತದೆ.

ಊರಲ್ಲಿ ಸತ್ತ ನಾಯಿಗಳನ್ನು ಜಮೀನಿನಲ್ಲಿ ಹೂಳುವುದು, ಮನೆಗಳಲ್ಲಿ ಸತ್ತ ಎಮ್ಮೆ, ದನ, ಕುರಿ ಮುಂತಾದ ಜಾನುವಾರುಗಳನ್ನು ಜಮೀನಿನಲ್ಲಿ ಹೂಳುವುದರಿಂದಲೂ ನೆಲ ಫಲವತ್ತಾಗುತ್ತದೆ. ಸವಣೂರಿನ ಆರ್. ಸಿಂಧೂರರವರು ಊರಿನ ಹಂದಿಗಳನ್ನು ತಮ್ಮ ಜಮೀನಿನಲ್ಲಿ ಹೂಳಿಸುತ್ತಾರೆ.

ಆಲದ ಜಾತಿಯ ಮರಗಳಾಗುವ ಸಸ್ಯಗಳನ್ನು ಕಲ್ಲುಗೊರಚು ಪ್ರದೇಶಗಳಲ್ಲಿ ಬೆಳೆಯಬಹುದು. ಈ ಸಸ್ಯಗಳು ಎಂತಹ ಬಂಡೆಗಳಿದ್ದರೂ ಬೇರಿಳಿಸಿ ಬೆಳೆದು ಒಡೆಯುತ್ತವೆ. ವರ್ಷದೊಳಗೆ ನೂರಾರು ಗಾಡಿ ತರಗೆಲೆಗಳನ್ನು ಮಣ್ಣಿಗೆ ಸೇರಿಸುತ್ತವೆ.

ತೋಟಗಳಲ್ಲಿ ಸಿಗುವ ಸೊಪ್ಪು, ಕಸ, ಕಡ್ಡಿ, ಸೋಗೆ, ಹಾಳೆ, ಗರಿ, ಸಿಪ್ಪೆ ಹೀಗೆ ಏನೆಲ್ಲಾ ವಸ್ತುಗಳನ್ನು ಸುಡುವ ಬದಲು ಮಣ್ಣಿನ ಮೇಲೆ ಮುಚ್ಚಿಗೆಯಂತೆ ಉಪಯೋಗಿಸುವುದರಿಂದ ಮಣ್ಣು ಬಿಸಿಲಿಗೆ ಸಿಕ್ಕು ಹಾಳಾಗುವುದು ತಪ್ಪುತ್ತದೆ.

ಅತಿಯಾದ ಬಿಸಿಲು, ಅತಿಯಾದ ಮಳೆಗೆ ಮಣ್ಣು ಸಿಕ್ಕಿದರೆ ಮೇಲ್ಮಣ್ಣು ತನ್ನೆಲ್ಲಾ ಸೂಕ್ಷ್ಮಜೀವಿಗಳನ್ನು, ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಮುಚ್ಚಿಗೆ ಬೆಳೆಯನ್ನು, ಅಂತರಬೆಳೆಗಳನ್ನು ಬೆಳೆಯುತ್ತಿರಬೇಕು.

ಭೂಮಿಗೆ ಯೋಗ್ಯ ಆಕಾರ ನೀಡುವ ಕ್ರಮ

ಇಳಿಜಾರಾದ ಸಸ್ಯಗಳು, ಗಿಡಮರಗಳಿಲ್ಲದ ಭೂಮಿಯು ಯಾವಾಗಲೂ ಮಳೆ, ಗಾಳಿಗೆ, ನೀರಿನ ರಭಸದಿಂದ ಮಣ್ಣಿನ ಕೊಚ್ಚಣಿಗೆ ಕಾರಣವಾಗುತ್ತದೆ. ಇಂತಹ ಭೂಮಿಯಲ್ಲಿ ಯಾವಾಗಲೂ ಭೂಸವೆತ ಇದ್ದೇ ಇರುತ್ತದೆ.

ಇಂತಹ ಭೂಮಿಯ ಮೇಲ್ಮಣ್ಣಿನಲ್ಲಿ ಸೂಕ್ಷ್ಮಜೀವಿಗಳಿಗೆ ಜೀವಿಸಲು ಅವಕಾಶವಿರುವುದಿಲ್ಲ. ಆದುದರಿಂದ ಈ ಮಣ್ಣು ಯಾವುದೇ ರೀತಿಯ ವ್ಯವಸಾಯಕ್ಕೆ, ತೋಟಗಾರಿಕೆಗೆ ಯೋಗ್ಯವಾಗಿರುವುದಿಲ್ಲ.

ಈ ರೀತಿಯ ಭೂಮಿ ಕೊಡಗು, ದಕ್ಷಿಣಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಿನ ಸಹಿತ ಇದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಬರಡು ಪ್ರದೇಶಗಳಲ್ಲಿ ಇವೆ.

ಇಳಿಜಾರು ಪ್ರದೇಶದ ಕಾಡು ಕಡಿದು ತೋಟ ಮಾಡುವವರಾಗಲೀ, ಇಳಿಜಾರು ಬರಡು ಭೂಮಿಯಲ್ಲಿ ತೋಟ ಮಾಡುವವರಾಗಲೀ ಮೊದಲು ನೆಲವನ್ನು ಹದಮಾಡಿಕೊಳ್ಳುವುದು ಮುಖ್ಯ.

ಈ ರೀತಿಯ ಭೂಮಿಯನ್ನು ಮೇಲಿನಿಂದ ಕೆಳಕ್ಕಾಗಲಿ, ಕೆಳಗಿನಿಂದ ಮೇಲಕ್ಕಾಗಲಿ ಉಳುಮೆ ಮಾಡಬಾರದು. ಇದರಿಂದ ನೀರು ತಡೆಯುವುದಕ್ಕಿಂತ ಹರಿಯುವಿಕೆ ಹಾಗೂ ಮಣ್ಣಿನ ಕೊಚ್ಚಣಿ ಅಧಿಕವಾಗುತ್ತದೆ. ಬದಲಿಗೆ ಇಳಿಜಾರಿಗೆ ಅಡ್ಡಲಾಗಿ ಸಮರೇಖೆಯಲ್ಲಿಯೇ ಉಳುಮೆ ಮಾಡಬೇಕು ಅಥವಾ ಇಳಿಜಾರಿಗೆ ಅಡ್ಡಲಾಗಿ ಎರಡು ಅಡಿ ಆಳದ ಗುಂಡಿ ತೆಗೆಯುತ್ತಾ ಬರಬೇಕು. ಇದಕ್ಕೆ ಸಮರೇಖೆಯನ್ನು ಗುರುತು ಮಾಡಿಕೊಳ್ಳುವುದು ಮೊದಲ ಕೆಲಸ. ಇದಕ್ಕಾಗಿ ಇಂಗ್ಲೀಷ್‌ನ ದೊಡ್ಡಕ್ಷರ ಎ ಆಕಾರದ ಕಟ್ಟನ್ನು ತಯಾರಿಸಿಕೊಳ್ಳಬೇಕು. ಇದನ್ನು ಇಟ್ಟುಕೊಳ್ಳುತ್ತಾ ಕಲ್ಲುಬಂಡೆ, ಮರ, ಕುರುಚಲು ಮುಂತಾದವುಗಳನ್ನು ತಪ್ಪಿಸಿಕೊಳ್ಳುತ್ತಾ ಗುರುತು ಮಾಡಬೇಕು.

ಈ ರೀತಿಯ ಗುರುತನ್ನು ಗುಡ್ಡದ ಮೇಲ್ಭಾಗದಿಂದ ಆರಂಭಿಸಿ ಕೆಳಭಾಗಕ್ಕೆ ಸಾಗಬೇಕು. ಎ ಆಕಾರದ ಕಟ್ಟಿನ ಎತ್ತರ ತೋಟದ ಬೆಳೆಗಾದರೆ (ತೆಂಗು, ಅಡಿಕೆ, ಮಾವು) ೯ ಅಡಿಯಿಂದ ೧೪ ಅಡಿಯವರೆಗೆ ಇರಲಿ. ಈ ರೀತಿ ಗುರುತು ಮಾಡಿದ ಬಿಂದುಗಳನ್ನು ಸೇರಿಸಬೇಕು ಅಥವಾ ಅಲ್ಲಿಗೆ ಗೂಟ ಹೊಡೆದು ಹಗ್ಗ ಕಟ್ಟಿಕೊಳ್ಳಬೇಕು. ಆ ಹಗ್ಗದ ನೇರಕ್ಕೆ ಕಂದಕಗಳು, ಅಗಳ, ಗುಂಡಿಗಳನ್ನು ತೆಗೆಯಬೇಕು. ಕಲ್ಲು ಕಟ್ಟಿಸಬಹುದು. ಒಡ್ಡುಗಳನ್ನು ಹಾಕಬಹುದು. ಲಾವಂಚ, ದೂರ್ವೆಜಡ್ಡು, ನಿಂಬೆಹುಲ್ಲು ಮುಂತಾದ ಹುಲ್ಲಿನ ತಡೆಯನ್ನು ಹಾಕಿಸಬಹುದು. ಹೀಗೆ ಯಾವುದಾದರೂ ಒಂದು ಕ್ರಮದಲ್ಲಿ ತಡೆಗಳು ಇರಲಿ.

ಪ್ರತಿ ತಡೆಯ ಮೇಲ್ಭಾಗದ ನೆಲವನ್ನು ಸಮತಟ್ಟು ಮಾಡಿಕೊಳಬೇಕು. ಹೀಗೆ ಸಮತಟ್ಟು ಮಾಡಿಕೊಳ್ಳಲು ಮಣ್ಣು ತೀರ ಹಗುರ ಹಗುರವಾಗಿರುವ ಪ್ರದೇಶಗಳಲ್ಲಿ ಗಟ್ಟಿಮುಟ್ಟು ಅಂದರೆ ಕೆಮ್ಮಣ್ಣು, ಕಾಗರಾಳಿ ಮಣ್ಣನ್ನು ಹಾಕಿಸುವುದು ಒಳ್ಳೆಯದು. ಮಣ್ಣು ಗಟ್ಟಿಯಿರುವ ಪ್ರದೇಶಗಳಲ್ಲಿ ಕಾಡಿನ ಗೋಡುಮಣ್ಣು, ಮರಳು ಮಿಶ್ರಿತ ಕೆಂಪುಮಣ್ಣು, ಎರೆಮಣ್ಣನ್ನು ಹಾಕಿಸಬಹುದು. ಈ ಮಣ್ಣಿನೊಂದಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ತರಗೆಲೆಗಳು, ಆಯಾ ಬೆಳೆಗಳಿಗೆ ಸೂಕ್ತವೆನಿಸಿದ ಸೊಪ್ಪನ್ನು ಬಳಸಬಹುದು. ಆಮೇಲೆ ಅಳತೆಗೆ ಅನುಗುಣವಾಗಿ ಬೆಳೆಗಳನ್ನು ಹಾಕುವುದು.

ಕಂದಕಗಳನ್ನು ತೆಗೆದ ಮಣ್ಣನ್ನು ಕಂದಕದ ಮೇಲ್ಭಾಗಕ್ಕೆ ಹಾಕಬಾರದು. ಕೆಳಭಾಗಕ್ಕೆ ಹಾಕಬೇಕು. ಹೀಗೆ ರಾಶಿ ಹಾಕಿದ ಮಣ್ಣಿನ ಮೇಲೆ ಯಾವುದಾದರೂ ಹುಲ್ಲಿನ ಬೆಳೆ, ದ್ವಿದಳ ಧಾನ್ಯದ ಬೆಳೆ ಅಥವಾ ಚೆನ್ನಾಗಿ ಬೇರು ಬಿಡುವ ಪೊದೆಗಳು, ಗಿಡಮರಗಳನ್ನು ಬೆಳೆಸಬೇಕು. ಈ ಒಡ್ಡು ಕಂದಕದಲ್ಲಿ ತುಂಬಿದ ನೀರನ್ನು ಇನ್ನಷ್ಟು ತಡೆಯುತ್ತದೆ. ಇದರ ಮೇಲಿನ ಸಸ್ಯಗಳು ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತದೆ.

ಕಡಿದಾದ ಇಳಿಜಾರು, ಅತಿಮಳೆ ಬೀಳುವ ಪ್ರದೇಶಗಳಲ್ಲಿ ಈ ರೀತಿಯ ಕಂದಕಗಳು, ಒಡ್ಡು, ತಡೆ, ಕಲ್ಲುಕಟ್ಟೆಗಳನ್ನು ತಡೆಯಿಲ್ಲದೆ ಉದ್ದಕ್ಕೆ ಮಾಡಿಸಬೇಕು. ಕಡಿಮೆ ಇಳಿಜಾರು, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ತಡೆಯಿಲ್ಲದೆ ಮಾಡಿಸುವುದಕ್ಕಿಂತ ಅಲ್ಲಲ್ಲಿ ಮಾಡಿಸುವುದು ಒಳ್ಳೆಯದು. ಇಂತಹ ಪ್ರದೇಶಗಳಲ್ಲಿ ನೇರವಾದ ಕಂದಕ, ಒಡ್ಡು, ಕಲ್ಲುಕಟ್ಟಿ ಅಥವಾ ತಡೆಗಳಿಗಿಂತಲೂ ಅರ್ಧಚಂದ್ರಾಕೃತಿಯ ತಡೆಗಳು ಹೆಚ್ಚು ಸೂಕ್ತ. ಅತಿಹೆಚ್ಚು ಇಳಿಜಾರು ಇರುವ ಗುಡ್ಡಗಳಾದರೆ ಒಡ್ಡುಗಳ ಎತ್ತರ, ಕಂದಕದ ಆಳ ಕಡಿಮೆ ಇರಬೇಕು. ಒಟ್ಟಾರೆ ಇಳಿಜಾರಿನ ಭೂಮಿಯನ್ನು ಅಂತಸ್ತಿನ ತರಹ ಮಾಡಿಕೊಳ್ಳಬೇಕು.

ಪಾಳುಭೂಮಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದರೆ ಅಂತಹ ಗುಂಡಿಗಳನ್ನು ನೀರಿಂಗಿಸಲು ಬಳಸಬಹುದು ಅಥವಾ ಅಂತಹ ಗುಂಡಿಗಳನ್ನು ಹೊರಗಿನಿಂದ ಮಣ್ಣು ತಂದು ತುಂಬಿಸಬೇಕು. ಈ ರೀತಿ ತುಂಬಿಸಿದ ಮೇಲೆ ಮೊದಲನೇ ಮಳೆಗಾಲದಲ್ಲಿ ಮಣ್ಣು ಕುಸಿಯುತ್ತದೆ. ಮತ್ತೆ ಮಣ್ಣು ತುಂಬಿ ಸಮತಟ್ಟು ಮಾಡಿದ ಮೇಲೆ ಕೃಷಿ ಮಾಡಬೇಕು.

ಜಮೀನಿನ ತುಂಬಾ ಸಣ್ಣ ಸಣ್ಣ ಏರುಗಳಿದ್ದರೆ ಅಂತಹ ಏರುಗಳನ್ನು ಸಮತಟ್ಟು ಮಾಡಬಹುದು. ಆದರೆ ಅವುಗಳನ್ನು ಹಾಗೇ ಉಳಿಸಿಕೊಂಡು ಕೃಷಿ ಮಾಡುವುದರಿಂದ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಸಾಧ್ಯ.

ಕಂಟೂರ್ ಅಥವಾ ಸಮಪಾತಳಿ ವಿಧಾನ

ಈ ವಿಧಾನದ ಮುಖ್ಯ ಪ್ರಯೋಜನವೆಂದರೆ

  • ನೀರಿಂಗುವ ಪ್ರಮಾಣ ಹೆಚ್ಚುತ್ತದೆ.
  • ಮಣ್ಣು ಸವಕಳಿ ನಿಲ್ಲುತ್ತದೆ.
  • ಎಲ್ಲಾ ಬೆಳೆಗೂ ಏಕಪ್ರಮಾಣದ ನೀರು
  • ಏಕಪ್ರಮಾಣದ ಸೂರ್ಯಪ್ರಕಾಶ
  • ಎಂತಹ ಬರವನ್ನಾದರೂ ಎದುರಿಸುವ ಶಕ್ತಿ
  • ಎಂತಹ ಇಳೀಜಾರಿನಲ್ಲಾದರೂ ಅಳವಡಿಸಬಹುದಾದ ಮಾದರಿ

ಎರಡು ಮೀಟರ್ ಎತ್ತರದ ಎರಡು ರೀಪುಗಳಿಗೆ ಸುಮಾರು ಐದು ಅಡಿಯವರೆಗೆ ಸ್ಕೇಲ್ ಗುರುತು ಮಾಡಬೇಕು. ಎರಡೂ ರೀಪುಗಳಿಗೆ ಐದು ಮೀಟರ್ ಉದ್ದದ ನೀರಿನ ಚಿಕ್ಕಪೈಪನ್ನು ಕ್ಲಿಪ್ ಹಾಕಿ ಜೋಡಿಸಿಕೊಳ್ಳಬೇಕು. ಪೈಪಿಗೆ ನೀರು ಹಾಕಿ ಜಲಮಟ್ಟ ತಯಾರಿಸಬೇಕು. ಒಂದು ರೀಪನ್ನು ನಿಶ್ಚಿತ ಬಿಂದುವಿನಲ್ಲಿ ಇಟ್ಟು ಮತ್ತೊಂದು ರೀಪನ್ನು ಆಚೆ ಈಚೆ ಮಾಡುತ್ತಾ ಸಮಪಾತಳಿ ಬಿಂದುವನ್ನು ಹುಡುಕಬೇಕು. ನಿಶ್ಚಿತ ಬಿಂದುವಿನಲ್ಲಿರುವ ಸ್ಕೇಲಿನ ಮಟ್ಟವನ್ನೇ ಜಲಮಟ್ಟವೂ ತೋರಿಸಿ, ಇನ್ನೊಂದು ರೀಪಿನ ಸ್ಕೇಲಿಗೂ ಹೊಂದಿಕೊಂಡಾಗ ಎರಡು ಒಂದೇ ರೀತಿಯ ಸಮಪಾತಳಿ ಬಿಂದುವು ಸಿಕ್ಕಿತೆಂದು ತಿಳಿಯಬಹುದು. ಅವೆರಡೂ ಬಿಂದುಗಳಿಗೆ ಗೆರೆ ಎಳೆಯಿರಿ. ಪ್ರತಿ ೩೦ ಮಿಟರ್ ಇಳಿಜಾರಿಗೆ ಎರಡು ಸೆಂಟಿಮೀಟರ್‌ನಷ್ಟು ವ್ಯತ್ಯಾಸ ಬರಬಹುದು. ಇದೇನು ಸಮಸ್ಯೆಯಲ್ಲ.

ಒಂದೇ ರೇಖೆಯಲ್ಲಿ ಒಂದೇ ಮಟ್ಟದ ಬಿಂದುಗಳು ಸಿಗದೇ ಇರಬಹುದು. ಅದಕ್ಕಾಗಿ ಪ್ರಯತ್ನ ಪಡಬೇಕು. ಪ್ರತಿ ೧೨ ಮೀಟರ್‌ಗೆ ಒಂದು ನೀರಿನ ತಡೆ ನಿರ್ಮಿಸಿದರೆ ಎಲ್ಲಾ ಬೆಳೆಗಳಿಗೂ ನೀರು ಸಮಾನವಾಗಿ ಸಿಗುತ್ತದೆ. ಗಿಡಗಳೂ ಒಂದೇ ರೀತಿಯಲ್ಲಿ ಬೆಳೆಯುತ್ತವೆ. ತೇವಾಂಶ ಬಹಳ ಕಾಲ ಇರುತ್ತದೆ.

ಸಮಪಾತಳಿ ನೋಡದೇ ಗಿಡಗಳನ್ನು ಬೆಳೆಸುವುದರಿಂದ ನೀರಿನ ವೆಚ್ಚ, ಗೊಬ್ಬರದ ಖರ್ಚು, ಕೃಷಿ ಕೆಲಸಗಳೆಲ್ಲಾ ಏರುಪೇರಾಗುತ್ತದೆ. ಅಸಮತೋಲನತೆಯಿಂದಾಗಿ ಗಿಡಗಳ ಬೆಳವಣಿಗೆ ಹಾಳಾಗುತ್ತದೆ. ಇಳುವರಿ ಕುಸಿಯುತ್ತದೆ.

ಯಾವುದೇ ತೋಟವಿರಲಿ, ಸಮಪಾತಳಿ ಮಾಡಿಯೇ ಗಿಡ ನೆಡಬೇಕಾದ್ದು ಸಂಪ್ರದಾಯವೂ ಹೌದು, ವೈಜ್ಞಾನಿಕವೂ ಹೌದು.

ಒಡ್ಡು ಕಟ್ಟಿ ಸಮತಟ್ಟು ಮಾಡುವಿಕೆ

ತೋಟ ಮಾಡುವಾಗ ಜಮೀನಿನಲ್ಲಿ ಅಲ್ಲಲ್ಲಿ ತಗ್ಗು, ಗುಂಡಿಗಳು, ಸಣ್ಣ ಸಣ್ಣ ಇಳಿಜಾರುಗಳು ಇದ್ದರೆ ಒಂದೇ ಕಡೆ ನೀರು ನಿಲ್ಲುತ್ತದೆ. ನೀರಿಲ್ಲದ ಎತ್ತರದ ನೆಲದ ಮಣ್ಣು ಸವಕಳಿಯಾಗುತ್ತದೆ. ಇದರಿಂದ ಮಣ್ಣಿನ ಫಲವತ್ತೆ ಹಾಳಾಗುತ್ತದೆ. ಇದನ್ನೆಲ್ಲಾ ಒಂದೇ ಸಮ ಇರುವಂತೆ ಮಾಡುವುದು ಮುಖ್ಯ.

ಆದರೆ ಜಮೀನಿಗೆ ಮೊದಲು ಒಡ್ಡು ಹಾಕುವುದೇ ಮುಖ್ಯ ಕೆಲಸ. ಇಳಿಜಾರು ಜಮೀನಾದರೆ ಇಳಿಜಾರಿನ ಕಡೆ ದೊಡ್ಡ ಒಡ್ಡನ್ನು, ಮೇಲ್ಭಾಗದಲ್ಲಿ ಚಿಕ್ಕ ಒಡ್ಡನ್ನು ಹಾಕಬೇಕು. ಇದಕ್ಕೆ ಮಣ್ಣನ್ನು ಹೊರಗಿನಿಂದ ತರಬೇಕು. ಹೊಲದೊಳಗೆ, ಜಮೀನಿನ ಒಳಗೆ ದೊಡ್ಡ ದೊಡ್ಡ ಕಲ್ಲುಗಳಿದ್ದರೆ ಅದೇ ಕಲ್ಲಿನಿಂದ ಒಡ್ಡು ಹಾಕುವುದು ಉತ್ತಮ. ಎಲ್ಲೆಲ್ಲಿ ಇಳಿಜಾರುಗಳಿವೆಯೋ ಅಲ್ಲೆಲ್ಲಾ ಒಡ್ಡು ಹಾಕಬೇಕು. ಇಲ್ಲದಿದ್ದರೆ ಇಳಿಜಾರಿನ ನೀರೆಲ್ಲಾ ಒಂದೇ ಕಡೆ ನುಗ್ಗಿ ಒಡ್ಡೆಲ್ಲಾ ಒಡೆದುಹೋಗಲೂ ಬಹುದು.

ಒಡ್ಡು ಒಡೆದು ಹೋಗದಂತೆ ಮಾಡುವ ಉಪಾಯವೆಂದರೆ ಹೊರಗಿನ ಮಣ್ಣಿನಿಂದ ಒಡ್ಡು ಹಾಕಿದ ಮೇಲೆ ಜಮೀನಿನ ದಿಣ್ಣೆಯ ಮಣ್ಣನ್ನು ತಂದು ಒಡ್ಡಿಗೆ ಮತ್ತೆ ಮುಚ್ಚಿಗೆ ಮಾಡಬೇಕು. ಎದೆಯೆತ್ತರ ನುಣ್ಣಗೆ ಬಳಿದ ಮಣ್ಣು ಒಡ್ಡನ್ನು ಬಿಗಿಗೊಳಿಸುತ್ತದೆ. ಎಷ್ಟೇ ನೀರು ಬಂದು ಒತ್ತಿದರೂ ಒಡೆಯದು. ಜಮೀನಿನಲ್ಲಿ ಹರಡಿಕೊಂಡು ನಿಧಾನ ಇಂಗತೊಡಗುತ್ತದೆ.

ಎರೆಮಣ್ಣಿನ ಭೂಮಿಯಾದರೆ ಗಟ್ಟಿಮಣ್ಣಿನ ಒಡ್ಡು ಹಾಕಬೇಕು. ಒಡ್ಡು ಒಡೆಯದಿರಲು ಎರೆಮಣ್ಣನ್ನೇ ಒಡ್ಡಿಗೆ ದಪ್ಪಗೆ ಮೆತ್ತಬೇಕು.

ಬಾಳೆದಿಂಡನ್ನು, ಹಗುರ ಮರಮುಟ್ಟುಗಳನ್ನು ಹಾಕಿಯೂ ಒಡ್ಡು ಕಟ್ಟಬಹುದು. ಒಡ್ಡನ್ನು ಬಲಗೊಳಿಸಲು ಆಚೆ ಈಚೆ ಕಳ್ಳಿಗಿಡಗಳನ್ನು ಹಾಕಬೇಕು. ಬರೇ ಕಲ್ಲಿನ ಒಡ್ಡಾದರೆ ಕಳ್ಳಿ ಮಾತ್ರ ಸಾಕು. ಮಣ್ಣಿನ ಒಡ್ಡಾದರೆ ಅಗಲ ಒಡ್ಡು ಮಾಡಿ ಕಳ್ಳಿಗಿಡ ಹಾಕಬೇಕು. ಅವುಗಳ ಮಧ್ಯೆ ಬೇವಿನಗಿಡ ಹಾಕಬಹುದು. ತೋಟ ಮಾಡುವುದಾದರೆ ಸಾಲುಮರಗಳನ್ನು ಹಾಕಬಹುದು. ಗಾಳಿ, ಬಿಸಿಲಿನ ರಕ್ಷಣೆ, ಮಣ್ಣು ಕೊಚ್ಚಣೆಯಾಗದಂತೆ ರಕ್ಷಣೆ ಇನ್ನೂ ಏನೆಲ್ಲಾ.

ಜಮೀನಿನೊಳಗೆ ದೊಡ್ಡ ದೊಡ್ಡ ಹೊಂಡಗಳು, ಹಳ್ಳಗಳು ಇದ್ದರೆ ಎಷ್ಟು ಮಣ್ಣು ಸುರಿದರೂ ಮುಟ್ಟದು, ತುಂಬದು. ಹೊಲದ ಮಣ್ಣನ್ನು ತುಂಬಲೇಬಾರದು. ಕಾರಣ ಮೇಲ್ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ನಾಶವಾಗುತ್ತದೆ. ದೊಡ್ಡ ಹಳ್ಳಗಳಿಗೆ ಮೊದಲು ಕಂಬಗಳನ್ನು ನೆಟ್ಟು ಅದಕ್ಕೆ ದಬ್ಬೆ ಅಥವಾ ಕಟ್ಟಿಗೆಗಳನ್ನು ಕಟ್ಟಬೇಕು. ಅದರೊಳಗೆ ಮುಳ್ಳುಕಂಟಿಗಳು, ಬೇರುಗಳು ಹೀಗೆ ಬೇಗ ತುಂಬಿಕೊಳ್ಳುವ ಹಾಗೂ ಬೇಡದ ಸಾವಯವ ಕಸಕಡ್ಡಿಗಳಿಂದ ತುಂಬಿಸಬೇಕು. ಮೇಲಿಂದ ಮೇಲೆ ಮಣ್ಣು ಹಾಕಿಸಿ ಚೆನ್ನಾಗಿ ತುಳಿಯಬೇಕು. ಆಗ ಹೆಚ್ಚು ಮಣ್ಣೂ ಬೇಕಾಗದು.

ತೋಟಕ್ಕೆ ನೆಲ ಹದಗೊಳಿಸುವಾಗ ಯಾವುದೇ ರೀತಿಯ ಮರಗಿಡಗಳು, ಮರದ ಬೊಡ್ಡೆ, ಬೇರುಗಳೂ ಇರದಂತೆ ಕಿತ್ತೊಗೆಯಬೇಕು. ತೋಟದ ಸರಹದ್ದಿನ ಗಿಡಮರಗಳನ್ನು ಕಡಿಯಬಾರದು.

ದ್ರಾಕ್ಷಿ, ದಾಳಿಂಬೆಯಂತಹ ಬೆಳೆಗಳಿಗೆ ಸಂಪೂರ್ಣ ಬಯಲೇ ಬೇಕು. ತೋಟದ ಮಧ್ಯೆ ಕಲ್ಲುಬಂಡೆಗಳು, ಕ್ಯಾದಿಗೆ ಮಟ್ಟಿ ಏನೇ ಇದ್ದರೂ ತೆಗೆಯಬೇಕು. ಅವುಗಳಲ್ಲಿ ಹಾವುಗಳಿರಬಹುದು. ದೇವರ ಜಾಗವಿರಬಹುದು. ಏನೇ ಪ್ರತೀತಿಗಳಿರಲಿ, ಮೂಢನಂಬಿಕೆಗಳಿರಲಿ, ಅದಕ್ಕೆಲ್ಲಾ ಬೇರೆ ಜಾಗ ಮಾಡಿ ಆಮೇಲೆ ಅದನ್ನು ನಾಶ ಮಾಡಿರಿ.

ಪ್ರತಿ ಒಡ್ಡಿನ ಎರಡೂ ಅಂಚಿನಲ್ಲಿ ಕೋಡಿಗಳನ್ನು ಮಾಡಬೇಕು ಅಥವಾ ಹೆಚ್ಚಾದ ನೀರು ಹೊರಹೋಗುವ ವ್ಯವಸ್ಥೆ ಮಾಡಬೇಕು. ಹೀಗೆ ಮಾಡುವುದರಿಂದ ಒಡ್ಡು ಕೊರಕಲು ಬೀಳದ ಹಾಗೆ ನೋಡಿಕೊಳ್ಳಬಹುದು.

ಮಲೆನಾಡಿನಲ್ಲಿ ಮಣ್ಣಿನ ಒಡ್ಡು, ಜಂಬಿಟ್ಟಿಗೆ ಕಲ್ಲಿನ ಒಡ್ಡುಗಳಿವೆ. ಇದು ನೀರಿನ ನಿರ್ವಹಣೆಗೆ ಹಾಗೂ ಬೇಲಿಯಂತೆ ರಕ್ಷಣೆಗೆ. ಇಂತಹ ಒಡ್ಡಿನ ಮೇಲೆ ಲಕ್ಕಿ, ಕಳ್ಳಿಗಿಡಗಳನ್ನು ಬೆಳೆಸುತ್ತಾರೆ.

ತೋಟದಲ್ಲಿ ನೀರಿಂಗಿಸಲು, ಬೇಸಿಗೆಯಲ್ಲಿ ತೇವಾಂಶ ಉಳಿಸಿಕೊಳ್ಳಲು ಹಾಗೂ ಮಣ್ಣು ಕೊಚ್ಚಣೆಯಾಗದಂತೆ ತಡೆಯಲು ಇದು ಸಹಕಾರಿ.