ಪ್ರ. .: ಜೈವಿಕ ವೈವಿಧ್ಯತೆ, ಸಾಂಪ್ರದಾಯಕ ಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ನಡುವೆ ಇರುವ ಸಂಬಂಧವೇನು?

: ಜೈವಿಕ ಸಂಪನ್ಮೂಲಗಳು ಮತ್ತು  ಸಂಬಂಧಿತ ಸಾಂಪ್ರದಾಯಕ ಜ್ಞಾನವು (Traditional Knowledge) ವಾಣಿಜ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಉದ್ಯಮ ಕಾರ್ಪೊರೇಶನ್ನುಗಳಿಗೆ ಅತ್ಯಮೂಲ್ಯವಾದುವು. ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಅಂತಹ ಕಾರ್ಪೊರೇಶನ್‌ಗಳು ಜೈವಿಕ ಸಂಪನ್ಮೂಲ ಹಾಗೂ ಸಾಂಪ್ರದಾಯಕ ಜ್ಞಾನದ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆಯಲು ಯತ್ನಿಸುತ್ತವೆ.

ಪ್ರ. .: ಸಾಂಪ್ರದಾಯಕ ಜ್ಞಾನವೆಂದರೇನು?

: ಸಾಂಪ್ರದಾಯಕ ಜ್ಞಾನವೆಂದರೆ ಸಮುದಾಯಗಳು ಮತ್ತು ಸಂಸ್ಕೃತಿಗಳು ತಲೆತಲೆಮಾರುಗಳಿಂದ ಸಂರಕ್ಷಿಸಿಕೊಂಡುಬಂದಿರುವ ಜ್ಞಾನ ಹಾಗೂ ಅದು ಗಾಡ ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಂಪ್ರದಾಯಕ ಜ್ಞಾನವು ಸಾಹಿತ್ಯ, ಕಲೆ ಮತ್ತು ವಿಜ್ಞಾನ , ವೈದ್ಯಕೀಯ ಅರಿವು, ಬೇಸಾಯದ ವಿಧಾನಗಳುಕರಕುಶಲಕಲೆ, ಹಾಡು ಮತ್ತು ನೃತ್ಯದಂತಹ ವಿಸ್ತೃತ ಜ್ಞಾನಶಾಖೆಗಳನ್ನು ಹೊಂದಿರುತ್ತದೆ. ಜೈವಿಕ ವೈವಿಧ್ಯತೆಯ ಬಗೆಗಿನ ಸಾಂಪ್ರದಾಯಕ ಜ್ಞಾನವು ಸಸ್ಯಗಳ ಮತ್ತು ಪ್ರಾಣಿಗಳ ಪವಿತ್ರ ಗುಣಲಕ್ಷಣಗಳು, ಚಿಕಿತ್ಸೆಯ ಮತ್ತು ಕೃಷಿ ವಿಧಾನಗಳನ್ನು ಹಾಗೂ ಸಂಸ್ಕರಣಾ ವಿಧಾನಗಳನ್ನು ಸಹ ಒಳಗೊಂಡಿರಬಹುದು. ಸಾಂಪ್ರದಾಯಕ ಜ್ಞಾನವು ಪ್ರಾಚೀನ ಪಠ್ಯಗಳಲ್ಲಿ, ಸಾಂಪ್ರದಾಯಕ ವಿಜ್ಞಾನಗಳಲ್ಲಿ, ಜನಪದದಲ್ಲಿ ಹಾಗೂ ಸಮುದಾಯಗಳ  ನಿರಂತರ ನಂಬಿಕೆ, ಆಚಾರ ವಿಚಾರಗಳಲ್ಲಿ ಕಂಡುಬರುತ್ತದೆ. ಬಹುಪಾಲು ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಮೌಖಿಕವಾಗಿ ಹರಿದು ಬರುತ್ತದೆ. ಸಾಂಪ್ರದಾಯಕ ಜ್ಞಾನವು ಸ್ಥಾಯಿಯಾದುದಲ್ಲ, ಅದು ಚಲನಶೀಲವಾದುದು ಹಾಗೂ ಪ್ರತಿಯೊಂದು ತಲೆಮಾರಿನ ಅನ್ವೇಷಣೆಗಳಿಂದ ಬದಲಾಗುತ್ತಾ ಮುಂದುವರಿಯುತ್ತಿರುತ್ತದೆ ಎನ್ನುವುದು ಇಲ್ಲಿ ಮುಖ್ಯವಾದುದು. ಕಲಿಯುವ, ಕಲಿತಿದ್ದನ್ನು ಹಂಚಿಕೊಳ್ಳುವ ಹಾಗೂ ತನ್ಮೂಲಕ ಜ್ಞಾನಕ್ಕೊಂದು ಸಾಕಾರರೂಪ ನೀಡುವ ಸಾಮಾಜಿಕ ಪ್ರಕ್ರಿಯೆಯೇ ಜ್ಞಾನ ಸಂಪ್ರದಾಯದ ಬಹುಮುಖ್ಯ ಅಂಶವಾಗಿದೆ. ಈ ಕೃತಿಯಲ್ಲಿ ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಸಾಂಪ್ರದಾಯಕ ಜ್ಞಾನದ ಬಗ್ಗೆ ಮಾತ್ರ ವಿವರಗಳನ್ನು ನೀಡಲಾಗಿದೆ.

ಪ್ರ. .: ಸಾಂಪ್ರದಾಯಕ ಸಮುದಾಯಗಳು ಎಂದರೆ ಯಾವುವು?

: ಹಲವಾರು ತಲೆಮಾರುಗಳ ಪೂರ್ವಿಕರಿಂದ ರೂಪುಗೊಂಡ ಬದುಕುವ ವಿಧಾನ ಹೊಂದಿರುವ ಸಮುದಾಯಗಳನ್ನು ವಿಸ್ತೃತವಾಗಿ ಸಾಂಪ್ರದಾಯಕ ಸಮುದಾಯಗಳು (Traditional Communities) ಎನ್ನುತ್ತಾರೆ. ಅವು ನಗರದ ಅಥವಾ ಕ್ಷಿಪ್ರಗತಿಯಲ್ಲಿ ಬದಲಾಗುವ ಸಮಾಜಗಳಿಂದ, ಜೀವನಶೈಲಿಗಳಿಂದ ವಿಭಿನ್ನವಾಗಿರುತ್ತವೆ ಹಾಗೂ ಅವು ಒಂದು ಪರಸ್ಪರ, ಸಮಾನ ಸಾಂಸ್ಕೃತಿಕ, ಪರಿಸರದ, ಆರ್ಥಿಕ ಮತ್ತು ಕೌಟುಂಬಿಕ ಸಂಪ್ರದಾಯಗಳು, ಅರಿವು, ಮೌಲ್ಯಗಳು ಹಾಗೂ ಸಾಮಾಜಿಕ ಶ್ರೇಣಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಸಾಂಪ್ರದಾಯಕ ಸಮುದಾಯಗಳ ಜೀವನ ಶೈಲಿ ಸಾಮಾನ್ಯವಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ಆಧರಿಸಿರುತ್ತದೆ. ಸಾಂಪ್ರದಾಯಕ ಸಮುದಾಯಗಳು ರೈತ ಅಥವಾ ಬೆಸ್ತರ ಸಮುದಾಯಗಳು, ಅರಣ್ಯದಲ್ಲಿ ವಾಸಿಸುವ ಸಮುದಾಯಗಳು, ಸ್ಥಳೀಯ ಜನರು, ಅಲೆಮಾರಿ ಸಮುದಾಯಗಳು ಮುಂತಾದವನ್ನೂ ಒಳಗೊಂಡಿರಬಹುದು.

ಈ ವಿವರಣೆಯ ಬಗ್ಗೆ ಎರಡು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಮೊದಲನೆಯದು, ಇದು ಒಂದು ವಿಸ್ತೃತ, ಸ್ಥೂಲ ವಿವರಣೆಯಷ್ಟೆ ಸಾಂಪ್ರದಾಯಕ ಸಮುದಾಯಗಳು ಎಂದಾಕ್ಷಣ ಅವು ಶತತಮಾನಗಳಿಂದ ಬದಲಾಗದ ಸಮುದಾಯಗಳು ಎಂದರ್ಥವಲ್ಲ . ಸಮುದಾಯಗಳೂ ಸಹ ತಮ್ಮ ಸುತ್ತಮುತ್ತಲ ಸಮಾಜದಿಂದ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಪ್ರಭಾವಿತವಾಗಿ ಬದಲಾಗುತ್ತಾ ಬಂದಿವೆ. ಈ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿದೆ.

ಎರಡನೆಯದು, ಸಾಂಪ್ರದಾಯಕ ಸಂಸ್ಕೃತಿ ಮತ್ತು ಜ್ಞಾನ, ಇದು ನಗರ ಹಾಗೂ ಆಧುನಿಕ ಸಮಾಜಗಳಲ್ಲೂ ಕಂಡುಬರುತ್ತದೆ – ಗಾಯಗಳ ಚಿಕಿತ್ಸೆಗೆ ಅರಿಶಿಣದ ಬಳಕೆ ಅಥವಾ ತುಳಸಿಯ ಔಷಧೀಯ ಗುಣಗಳ ಅರಿವು ಸಂಸ್ಕೃತಿ ಮತ್ತು ಜ್ಞಾನದ ಸಾಂಪ್ರದಾಯಕ ತಳಹದಿಯಿಂದ ಮೂಡಿದೆ ಹಾಗೂ ಅದು ಸಾಂಪ್ರದಾಯಕ ಸಮುದಾಯಗಳಿಗೆ ಮಾತ್ರ ಸೀಮಿತವಾಗಿರುವುದಲ್ಲ.

ಈ ಕೃತಿಯಲ್ಲಿ ‘ಸಾಂಪ್ರದಾಯಕ ಸಮುದಾಯಗಳು’ ಮತ್ತು ‘ಸ್ಥಳೀಯ ಸಮುದಾಯಗಳು’ (Local Communities) ಎಂಬ ಎರಡೂ ಪದಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗಿದೆ.

ಪ್ರ. .: ಸಾಂಪ್ರದಾಯಕ ಜ್ಞಾನ ಏಕೆ ಮೌಲ್ಯಯುತವಾದುದು?

: ಜೈವಿಕ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಹಾಗೂ ಅದರ ಸಾಂಪ್ರದಾಯಕ ಬಳಕೆಯಲ್ಲಿ ಸಾಂಪ್ರದಾಯಕ ಜ್ಞಾನವು ಮಹತ್ತರ ಪಾತ್ರವನ್ನು ವಹಿಸುತ್ತದೆ:

  • ಆರೋಗ್ಯ ರಕ್ಷಣೆ: ಭಾರತೀಯ ವೈದ್ಯಪದ್ಧತಿಗಳು (ಆಯುರ್ವೇದ, ಸಿದ್ದ, ಯುನಾನಿ) ಭಾರತದ ಅಧಿಕೃತ ಆರೋಗ್ಯ ರಕ್ಷಣಾ ವ್ಯವಸ್ಥೆಯ ಭಾಗವಾಗಿದ್ದು , ಅವು ವಿವಿಧ ಜೈವಿಕ ಸಂಪನ್ಮೂಲಗಳ ಹಾಗೂ ಸಾಂಪ್ರದಾಯಕ ಜ್ಞಾನ ಶಾಖೆಗಳನ್ನು ಅವಲಂಬಿಸಿವೆ.

ಕೃಷಿ: ರೈತರು ಹಾಗೂ ಪಶುಸಂಗೋಪಕರು ವಿಸ್ತೃತ ವೈವಿಧ್ಯದ ಬೆಳೆ ಹಾಗೂ ಜಾನುವಾರುಗಳನ್ನು ತಲೆತಲೆಮಾರುಗಳಿಂದ ಪೋಷಿಸಿ, ಸಂರಕ್ಷಿಸಿ, ಸಂವರ್ಧಿಸಿಕೊಂಡು ಬಂದಿದ್ದಾರೆ. ಇವು ಆಹಾರ ಸುರಕ್ಷತೆ, ವಸ್ತ್ರ, ಆರೋಗ್ಯ ಮತ್ತು ತಲೆಯ ಮೇಲೊಂದು ಸೂರು ಒದಗಿಸುವಲ್ಲಿ ಅತ್ಯಮೂಲ್ಯ ಪಾತ್ರವಹಿಸಿವೆ.

  • ಜೈವಿಕ ವೈವಿಧ್ಯತೆ: ಭಾರತಾದ್ಯಂತ ಸ್ಥಳೀಯ ಸಮುದಾಯಗಳಲು ಸ್ವತಂತ್ರವಾಗಿ ಅರಣ್ಯ ಪ್ರದೇಶಗಳನ್ನು, ಪ್ರಾಕೃತಿಕ ಪರಿಸರ ವ್ಯವಸ್ಥೆಗಳನ್ನು, ‘ದೇವರ ಕಾಡು’ಗಳನ್ನು (ಸ್ಥಳೀಯ ದೇವತೆಗೆ ಮುಡಿಪಾಗಿಟ್ಟ, ಕಾಯ್ದಿಟ್ಟ ಅರಣ್ಯ ಪ್ರದೇಶ) ಸಂರಕ್ಷಿಸಿ ಪೋಷಿಸುತ್ತಾ ಜೈವಿಕ ವೈವಿಧ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಹಾಗಾಗಿ ಸಾಂಪ್ರದಾಯಕ ಜ್ಞಾನವು ಹಲವಾರು ರೀತಿಗಳಲ್ಲಿ ಅತ್ಯಮೂಲ್ಯವಾದದ್ದು. ಹಲವಾರು ಕೈಗಾರಿಕೆಗಳು ವಾಣಿಜ್ಯ ಉತ್ಪನ್ನಗಳನ್ನು ತಯಾರಿಸಲು ಸಾಂಪ್ರದಾಯಕ ಜ್ಞಾನವನ್ನು ಮುಕ್ತವಾಗಿ ಬಳಸಿಕೊಂಡಿವೆ. ಅವು ಆ ಜ್ಞಾನದ ಮೂಲ ಸಂರಕ್ಷಕರ ಅನುಮತಿ ಪಡೆಯದೆ, ಅವರಿಗೆ ಕೃತಜ್ಞತೆ ಸಲ್ಲಿಸದೆ ಅವುಗಳನ್ನು ಬಳಸಿಕೊಂಡಿವೆ. ಸಮ್ಮತಿ ಪಡೆಯದೆ ಅಂತಹ ಜ್ಞಾನವನ್ನು ವಾಣಿಜ್ಯವಾಗಿ ಬಳಕೆಮಾಡಿದಾಗ ಅಥವಾ ಅಂತಹ ಸಂಪನ್ಮೂಲ/ಜ್ಞಾನದ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಹಾಗೂ ವಿಶೇಷ ಹಕ್ಕುಗಳನ್ನು ಕೋರಿದಾಗ ಸಂಘರ್ಷ ಉಂಟಾಗುತ್ತದೆ. ಇದನ್ನು ‘ಜೈವಿಕ ಚೌರ್ಯ’ (Biopiracy) ಎನ್ನುತ್ತಾರೆ.

ಪ್ರ. .: ಜೈವಿಕ ಚೌರ್ಯ (Biopiracy) ಎಂದರೇನು?

: ಜೈವಿಕ ಚೌರ್ಯವೆಂದರೆ ಈ ಕೆಳಗಿನವುಗಳೆರಡೂ ಅಥವಾ ಅವುಗಳಲ್ಲಿ ಯಾವುದಾದರೂ ಒಂದು ಆಗಿರಬಹುದು:

() ಜೈವಿಕ ಸಂಪನ್ಮೂಲಗಳ, ಸಂಬಂಧಿಸಿದ ಸಾಂಪ್ರದಾಯಕ ಜ್ಞಾನದ ಅಥವಾ ಆ ಸಂಪನ್ಮೂಲಗಳ ಅಥವಾ ಜ್ಞಾನವನ್ನು ಆಧರಿಸಿದ ವಾಣಿಜ್ಯ ಉತ್ಪನ್ನಗಳ ಮೇಲೆ ಆ ಸಂಪನ್ಮೂಲ (ಜ್ಞಾನದ ಮೂಲ ವಾರಸುದಾರರ ಸಮ್ಮತಿ ಪಡೆಯದೆ ಅಥವಾ ಅವರಿಗೆ ಯಾವುದೇ ಲಾಭಾಂಶ ನೀಡದೆ ಅವುಗಳ ಮೇಲೆ ಏಕಸ್ವಾಮ್ಯ ನಿಯಂತ್ರಣ ಹೊಂದಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಬಹುಪಾಲು ಪೇಟೆಂಟ್‌ಅಥವಾ ಸಸ್ಯತಳಿ ಸಂವರ್ಧಕರ ಹಕ್ಕುಗಳು) ಪಡೆಯುವುದು.

() ಜೈವಿಕ ಸಂಪನ್ಮೂಲಗಳ ಅಥವಾ ಸಂಬಂಧಿಸಿದ ಸಾಂಪ್ರದಾಯಕ ಜ್ಞಾನವನ್ನು ಅವುಗಳ ಮೂಲ ವಾರಸುದಾರರ ಸಮ್ಮತಿ ಪಡೆಯದೆ ಅಥವಾ ಅವರಿಗೆ ಯಾವುದೇ ಲಾಭಾಂಶ ನೀಡದೆ ಅವುಗಳನ್ನು ವಾಣಿಜ್ಯವಾಗಿ ಬಳಸಿಕೊಳ್ಳುವುದು.

ಸಾಂಪ್ರದಾಯಕ ಜ್ಞಾನದ ಮೂಲವನ್ನು ಕೆಲವೊಮ್ಮೆ ಯಾವುದೇ ಒಂದು ನಿರ್ದಿಷ್ಟ ಸ್ಥಳೀಯ ಸಮುದಾಯದೊಂದಿಗೆ ಗುರುತಿಸಲಾಗುವುದಿಲ್ಲ. ಅಂತಹ ಸಮಯದಲ್ಲಿ ಅಂತಹ ಜ್ಞಾನದ ‘ಮೂಲ ವಾರಸುದಾರರು’ ಆ ಜ್ಞಾನ ರೂಪುಗೊಂಡ ದೇಶವೇ ಆಗುತ್ತದೆ ಹಾಗೂ ಆ ದೇಶದ ಸರ್ಕಾರ ತನ್ನ ಜನರ ಪರವಾಗಿ ಆ ಜ್ಞಾನದ ಪ್ರತಿನಿಧಿಯಾಗುತ್ತದೆ.

ಪ್ರ. .: ಜೈವಿಕ ಚೌರ್ಯದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳೇನು?

: ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿಸಿದ ಜ್ಞಾನದ ಮೇಲಿನ ಸಾಂಪ್ರದಾಯಕ ಸಮುದಾಯಗಳ ಹಕ್ಕುಗಳ ಉಲ್ಲಂಘನೆಯೇ ಜೈವಿಕ ಚೌರ್ಯ. ಅದರಿಂದ ಆರ್ಥಿಕ ಹಾಗೂ ನೈತಿಕ ಪ್ರತಿಕೂಲ ಪರಿಣಾಮಗಳುಂಟಾಗುತ್ತವೆ.

  • ಮೊದಲಿಗೆ, ತಮ್ಮ ಸಂಪನ್ಮೂಲಗಳ/ ಜ್ಞಾನದ ಆಧಾರದ ಉತ್ಪನ್ನಗಳನ್ನು ವಾಣಿಜ್ಯೀಕರಿಸುವುದರಿಂದ ದೊರೆಯುವ ಲಾಭದಿಂದ ಆಯಾ ಜೈವಿಕ ಸಂಪನ್ಮೂಲದ ಮತ್ತು ಸಂಬಂಧಿಸಿದ ಸಾಂಪ್ರದಾಯಕ ಜ್ಞಾನದ ಮೂಲ ವಾರಸುದಾರರಿಗೆ ಯಾವುದೇ ಪಾಲು ದೊರೆಯುವುದಿಲ್ಲ. ಅಲ್ಲದೆ ಆ ಸಂಪನ್ಮೂಲ/ಜ್ಞಾನವನ್ನು ಸಂರಕ್ಷಿಸಿ, ಪೋಷಿಸಿ, ಅಭಿವೃದ್ಧಿಪಡಿಸಿಕೊಂಡು ಬಂದಿರುವ ಅವರಿಗೆ ಯಾವುದೇ ಮಾನ್ಯತೆ ಸಹ ಸಿಗುವುದಿಲ್ಲ.
  • ಎರಡನೆಯದಾಗಿ, ಜೈವಿಕ ಚೋರನೊಬ್ಬ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದುಕೊಂಡಲ್ಲಿ ಆ ಜೈವಿಕ ಸಂಪನ್ಮೂಲದ ಅಥವಾ ಸಂಬಂಧಿಸಿದ ಜ್ಞಾನದ ಮೂಲ ವಾರಸುದಾರರು ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಸಂಪನ್ಮೂಲವನ್ನು ಅಥವಾ ಜ್ಞಾನವನ್ನು ವಾಣಿಜ್ಯವಾಗಿ ಬಳಸುವುದನ್ನು ನಿರ್ಬಂಧಿಸಲಾಗುತ್ತದೆ. ಇದರಿಂದಾಗಿ ಆ ಸಮುದಾಯ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ದೇಶೀ ಉತ್ಪನ್ನವನ್ನು ಮಾರಾಟ ಮಾಡಲು ಸಹ ಅವಕಾಶವಿರುವುದಿಲ್ಲ.
  • ಮೂರನೆಯದಾಗಿ, ಬೌದ್ಧಿಕ ಆಸ್ತಿ ಹಕ್ಕುದಾರ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಸಂಪನ್ಮೂಲದ / ಜ್ಞಾನದ ಬಳಕೆಗೆ ಷರತ್ತುಗಳನ್ನು ವಿಧಿಸುತ್ತಾನೆ. ಅಂದರೆ ಮೂಲ ವಾರಸುದಾರರಾದ ಸಾಂಪ್ರದಾಯಕ ಸಮುದಾಯಗಳು ತಮ್ಮ ಸಂಪನ್ಮೂಲಗಳ / ಜ್ಞಾನದ ಮೇಲಿನ ನಿಯಂತ್ರಣ ಹಾಗೂ ಅವುಗಳ ಬಳಕೆಯ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ.

ಪ್ರ. .: ಉದ್ಯಮ ಕಾರ್ಪೊರೇಶನ್ನುಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೈವಿಕ ಸಂಪನ್ಮೂಲಗಳ ಹಾಗೂ ಸಂಬಂಧಿಸಿದ ಸಾಂಪ್ರದಾಯಕ ಜ್ಞಾನದಲ್ಲಿ ಆಸಕ್ತಿ ಹೊಂದಿರುವುದೇಕೆ?

: ಉಷ್ಣವಲಯದ ದೇಶಗಳು ಜಗತ್ತಿನಲ್ಲೇ ಅತಿ ಹೆಚ್ಚು ಜೈವಿಕ ವೈವಿಧ್ಯತೆಯ ಸಾಂದ್ರತೆಯನ್ನು ಹೊಂದಿವೆ.. ಬಹುಪಾಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಈ ವಲಯದಲ್ಲೇ ಇದ್ದು, ಅಲ್ಲಿನ ಸ್ಥಳೀಯ ಸಮುದಾಯಗಳು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಸಾಂಪ್ರದಾಯದ ಜ್ಞಾನವನ್ನು ಹೊಂದಿದ್ದು ಅದು ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಗೆ ಬಹುಮುಖ್ಯ ಸುಳುಹುಗಳನ್ನು ಕೊಡುವುದರಿಂದ ವಾಣಿಜ್ಯ ಕಾರ್ಪೊರೇಶನ್ನುಗಳು ಅವುಗಳಲ್ಲಿ ಆಸಕ್ತಿಹೊಂದಿವೆ.

ಹಲವಾರು ವಾಣಿಜ್ಯ ಕ್ಷೇತ್ರಗಳಲ್ಲಿ ಜೈವಿಕ ಸಂಪನ್ಮೂಲಗಳ ಬಳಕೆ ಬಹುಮುಖ್ಯವಾದುದು. ಉದಾಹರಣೆಗೆ, ಔಷಧ ತಯಾರಿಕಾ ಕಂಪೆನಿಗಳು ತಮ್ಮ ಶೇ.೨೫-೫೦ರಷ್ಟು ಜಾಗತಿಕ ಮಾರಾಟಕ್ಕಾಗಿ ಪ್ರಾಕೃತಿಕ ಉತ್ಪನ್ನಗಳನ್ನು ಅವಲಂಬಿಸಿವೆ. ೧೯೯೭ರ ಅಂಕಿ ಅಂಶಗಳಂತೆ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ೨೫ ಔಷಧಗಳಲ್ಲಿ ಶೇ. ೪೨ರಷ್ಟು ಮಾರಾಟದ ಔಷಧಗಳು ಪ್ರಾಕೃತಿಕ ಉತ್ಪನ್ನಗಳನ್ನು ಆಧರಿಸಿದುದಾಗಿದ್ದವು ಹಾಗೂ ಅದರ ಮೌಲ್ಯ ೧೭.೫ ಬಿಲಿಯನ್‌ಡಾಲರ್ ಗಳಷ್ಟಿತ್ತು.

ಬಾಸುಮತಿ ಅಕ್ಕಿ ಮತ್ತು ಅಮೆರಿಕಾದ ರೈಸ್‌ಟೆಕ್‌ಕಂಪೆನಿ

೧೯೯೭ರಲ್ಲಿ ಅಮೆರಿಕಾದ ಟೆಕ್ಸಾಸ್‌ನಲ್ಲಿನ ರೈಸ್‌ಟೆಕ್‌ಕಂಪೆನಿಯ ಅರೆಗಿಡ್ಡ ಭತ್ತದ ತಳಿಗಳನ್ನು ಭಾರತ ಮತ್ತು ಪಾಕಿಸ್ತಾನದ ೨೨ ಪಾರಂಪರಿಕ ಬಾಸುಮತಿ ಭತ್ತದ ತಳಿಗಳೊಂದಿಗೆ ಸಂಕರಣ ಮಾಡಿ ಅಭಿವೃದ್ಧಿಪಡಿಸಿದ ಹೊಸ ಭತ್ತದ ತಳಿಗಳಿಗೆ ಪೇಟೆಂಟ್‌ಸಂ. ೫೬೬೩೪೮೪ ಅನ್ನು ನೀಡಲಾಯಿತು. ಭಾರತದಲ್ಲಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರವು ಪೇಟೆಂಟ್‌ಅನ್ನು ಮರುಪರಿಶೀಲಿಸಬೇಕೆಂದು ಕೋರಿದನಂತರ ಅದನ್ನು ರದ್ದುಗೊಳಿಸಲಾಯಿತು. ೨೦೦೧ರ ಹೊತ್ತಿಗೆ ರೈಸ್‌ಟೆಕ್‌ತನ್ನ ೨೦ ರಲ್ಲಿ ೧೫ ಹಕ್ಕೊತ್ತಾಯಗಳನ್ನು ಹಿಂದಕ್ಕೆ ಪಡೆಯಿತು ಹಾಗೂ ಎರಡು ಹಕ್ಕೊತ್ತಾಯಗಳಲ್ಲಿ ತಿದ್ದುಪಡಿ ಮಾಡಿತು ಅಲ್ಲದೆ ಬಾಸುಮತಿ ರೈಸ್‌ಲೈನ್ಸ್ ಅಂಡ್‌ಗ್ರೈನ್ಸ್‌ಎನ್ನುವ ಶೀರ್ಷಿಕೆಯನ್ನು ಬಲವಂತದ ಮೇರೆಗೆ ಕೈಬಿಟ್ಟಿತು. ಆದರೂ ಮೂಲ ಪೇಟೆಂಟ್‌ಹಕ್ಕೊತ್ತಾಯಗಳಲ್ಲಿ ಮೂರು ಚಾಲ್ತಿಯಲ್ಲಿವೆ. ಅಂದರೆ ಪಾರಂಪರಿಕ ಬಾಸುಮತಿ ತಳಿಗಳಿಂದ ಅಭಿವೃದ್ಧಿಪಡಿಸಿದ ಹೊಸ ಭತ್ತದ ತಳಿಗಳ ಮೇಲೆ ರೈಸ್‌ಟೆಕ್‌ಇನ್ನೂ ಏಕಸ್ವಾಮ್ಯತೆಯನ್ನು ಹೊಂದಿದೆ. 

 

ಇಲ್ಲಿರುವ ಪ್ರಶ್ನೆ, ಅಮೆರಿಕಾದಲ್ಲಿ ಸಿಂಧುವಾಗಿರುವ ಪೇಟೆಂಟ್‌ಭಾರತದಲ್ಲಿರುವವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಭಾರತ ಮತ್ತು ಪಾಕಿಸ್ತಾನದ ರೈತರು ಎಂದಿನಂತೆ ಬಾಸುಮತಿ ಬೆಳೆದು ಮಾರಾಟ ಮಾಡಲು ಯಾವುದೇ ತೊಡಕಿಲ್ಲದಿದ್ದಲ್ಲಿ ಬಾಸುಮತಿಯ ಹೊಸ ತಳಿಗಳನ್ನು ಅಮೆರಿಕಾದ ಕಂಪೆನಿಯೊಂದು ಅಭಿವೃದ್ಧಿಪಡಿಸಿ ಅವರು ಪೇಟೆಂಟ್‌ಪಡೆದಲ್ಲಿ ಇಲ್ಲಿನ ರೈತರಿಗೆ ಏನು ತೊಂದರೆಯಾಗುತ್ತದೆ? ಅಲ್ಲದೆ ಪೇಟೆಂಟ್‌ಹೊಸ ತಳಿಗಳಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ತಳಿಗಳನ್ನು ಭಾರತ ಅಥವಾ ಪಾಕಿಸ್ತಾನದಲ್ಲಿ ಬೆಳೆಯುವುದೇ ಇಲ್ಲ. ಹಾಗಿರುವಾಗ ಅಷ್ಟೊಂದು ಪ್ರತಿಭಟನೆ, ವಿರೋಧ ಏಕೆ? ಅಂತಹ ಪೇಟೆಂಟ್‌ನಿಂದ ಭಾರತ ಮತ್ತು ಪಾಕಿಸ್ತಾನದ ಮೇಲೆ ಯಾವ ಪರಿಣಾಮಗಳುಂಟಾಗುತ್ತವೆ?

ಅಂತಹ ಪೇಟೆಂಟ್‌ನಿಂದ ಉಂಟಾಗುವ ಪರಿಣಾಮಗಳು ಎರಡು ರೀತಿಯವುನೈತಿಕ ಮತ್ತು ಆರ್ಥಿಕ ಪರಿಣಾಮಗಳು. ಇಲ್ಲಿನ ನೈತಿಕ ಪ್ರಶ್ನೆಯೆಂದರೆ, ರೈಸ್‌ಟೆಕ್‌ಕಂಪೆನಿಯು ಬಾಸುಮತಿಪದವನ್ನು ತನ್ನ ಸ್ವಂತ ಉದ್ದೇಶಕ್ಕೆ ಬಳಸಿ ಕೊಂಡಿರುವುದಲ್ಲದೆ ಭಾರತ ಉಪಖಂಡದಲ್ಲಿ ಹಲವಾರು ತಲೆಮಾರುಗಳ ರೈತರು ಪಾರಂಪರಿಕವಾಗಿ ಪೋಷಿಸಿ, ಅಭಿವೃದ್ಧಿಪಡಿಸಿಕೊಂಡು ಬಂದಿದ್ದ ಸಾಂಪ್ರದಾಯಕ ಭತ್ತದ ತಳಿಗಳ ಮೇಲೆ ತನ್ನ ಯಜಮಾನ್ಯವನ್ನು ಸ್ಥಾಪಿಸಲು ಹೊರಟಿದೆ. ಅದರ ಬಾಸುಮತಿಪದದ ಬಳಕೆ ದಿಕ್ಕುತಪ್ಪಿಸುವುದಲ್ಲದೆ, ಅಮೆರಿಕಾ ಮತ್ತು ವಿಶ್ವದ ಇತರ ಭಾಗಗಳಿಗೆ ಆಗುವ ಭಾರತ ಮತ್ತು ಪಾಕಿಸ್ತಾನದ ಅಕ್ಕಿಯ ರಫ್ತಿನ ಮೇಲೆ ಆರ್ಥಿಕವಾಗಿ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿತ್ತು, ಏಕೆಂದರೆ ರೈಸ್‌ಟೆಕ್‌ನ ಉತ್ಪನ್ನ ಅಮೆರಿಕಾದಲ್ಲಿ ಮಾರಾಟವಾಗುವುದಲ್ಲದೆ, ಇತರ ದೇಶಗಳಿಗೂ ಅದು ರಫ್ತಾಗುತ್ತಿತ್ತು. ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನದ ರಫ್ತಿಗೆ ತೀವ್ರ ಹಾಗೂ ನ್ಯಾಯವಲ್ಲದ ಸ್ಪರ್ಧೆಯುಂಟು ಮಾಡುತ್ತಿತ್ತು. 


 

ಬಾಸುಮತಿಯನ್ನು ಭೌಗೋಳಿಕ ಸೂಚಕಗಳಡಿ (ನೋಡಿ ಪ್ರಶ್ನೆ .೧೫) ‘ಬಾಸುಮತಿಎಂಬ ಹೆಸರನ್ನು ಮತ್ತಾವುದೇ ಭತ್ತದ ತಳಿಗೆ ಉಪಯೋಗಿಸದಂತೆ ಸಂರಕ್ಷಿಸಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

ಕೃಷಿ ಬೀಜೋದ್ಯಮ ಮತ್ತು ಸಸ್ಯಮೂಲದ ಔಷಧ ಉದ್ಯಮವು ತಮ್ಮ ಶೇ. ೧೦೦ರಷ್ಟು ಜಾಗತಿಕ ಮಾರಾಟಕ್ಕಾಗಿ ಪ್ರಾಕೃತಿಕ ಉತ್ಪನ್ನಗಳನ್ನೇ ಅವಲಂಬಿಸಿವೆ. ೧೯೯೮ರಲ್ಲಿ ಬಿತ್ತನೆ ಬೀಜಗಳ ವಾಣಿಜ್ಯ ಮಾರಾಟದ ಮೌಲ್ಯ ೩೦ ಬಿಲಿಯನ್‌ಡಾಲರ್ ಗಳಷ್ಟಿತ್ತು ಹಾಗೂ ಅದರಲ್ಲಿ ಶೇ. ೩೧ರಷ್ಟು ಪಾಲನ್ನು ೨೩ ಅತಿ ದೊಡ್ಡ ಕಂಪೆನಿಗಳು ಹೊಂದಿದವು. ೧೯೯೮ರಲ್ಲಿ ಅತಿ ದೊಡ್ಡ ಮೂರು ಬೀಜದ ಕಂಪೆನಿಗಳು (ಪಯೊನಿರ್, ಮಾನ್ಸಾಂಟೊ ಮತ್ತು ನೋವಾರ್ಟೀಸ್‌) ಒಟ್ಟು ೩.೯ ಬಿಲಿಯನ್‌ಡಾಲರ್ ವಹಿವಾಟು ಹೊಂದಿದ್ದವು. ಕೃಷಿ ಮತ್ತು ಜೈವಿಕ ತಂತ್ರಜ್ಞಾನದ ಮಾರುಕಟ್ಟೆ ನೂರಾರು ಬಿಲಿಯನ್‌ಡಾಲರ್ ಗಳಷ್ಟಿದೆಯೆಂದು ಅಂದಾಜು ಮಾಡಲಾಗಿದೆ.

ಪ್ರ. .: ಜೈವಿಕ ಚೌರ್ಯವನ್ನು ಹೇಗೆ ತಡೆಗಟ್ಟಬಹುದು?

: ಜೈವಿಕ ಸಂಪನ್ಮೂಲಗಳ ಹಾಗೂ ಸಂಬಂಧಿಸಿದ ಸಾಂಪ್ರದಾಯಕ ಜ್ಞಾನದ ಮೇಲೆ ಬೌದ್ಧಿಕ ಆಸ್ತಿ ಹಕ್ಕು ನೀಡುವುದನ್ನು ನಿಷೇಧಿಸುವುದರ ಮೂಲಕ ದೀರ್ಘಾವಧಿಯಲ್ಲಿ ಜೈವಿಕ ಚೌರ್ಯವನ್ನು ತಡೆಯಬಹುದು. ಎಲ್ಲೆಲ್ಲಿ ಅಂತಹ ಸಂಪನ್ಮೂಲಗಳನ್ನು ಮತ್ತು ಜ್ಞಾನವನ್ನು ವಾಣಿಜ್ಯವಾಗಿ ಬಳಸಲಾಗುತ್ತದೆಯೋ, ಅಲ್ಲೆಲ್ಲಾ ಅವುಗಳ ಮೂಲ ವಾರಸುದಾರರನ್ನು ಗುರುತಿಸಿ, ಲಾಭಾಂಶ ಹಂಚುವ ವ್ಯವಸ್ಥೆ ಇರಬೇಕು. ಇವುಗಳಿಗೆ ಒಂದು ದೀರ್ಘಾವಧಿ ವ್ಯವಸ್ಥಿತ ಬದಲಾವಣೆಯ ಅವಶ್ಯಕತೆಯಿದೆ.

ಜೈವಿಕ ವೈವಿಧ್ಯತೆ ಮತ್ತು ಸಂಬಂಧಿಸಿದ ಸಾಂಪ್ರದಾಯಕ ಜ್ಞಾನವನ್ನು ‘ಖಾಸಗಿ ಆಸ್ತಿ’ಯ ಅಥವಾ ‘ಏಕಸ್ವಾಮ್ಯದ ಹಕ್ಕು’ಗಳ ಚೌಕಟ್ಟಿನೊಳಗೆ ನೋಡದೆ ಅದನ್ನು ಇಡೀ ಮಾನವ ಸಮುದಾಯಕ್ಕೆ ಸೇರಿದ ಆಸ್ತಿಯೆಂದು ಪರಿಗಣಿಸುವ ಮನುಷ್ಯರ ಮತ್ತು ಜೈವಿಕ ವೈವಿಧ್ಯತೆಯ ನಡುವಿನ ಸಾಂಪ್ರದಾಯಕ ಸಾಂಸ್ಕೃತಿಕ ಸಂಬಂಧಗಳನ್ನು ಗುರುತಿಸಿ ಪೋಷಿಸುವ ಅವಶ್ಯಕತೆಯಿದೆ. ಜೈವಿಕ ವೈವಿಧ್ಯತೆಯೊಂದಿಗೆ ಅಂತಹ ಸಂಬಂಧಗಳು ನಾಟಿವೈದ್ಯರು, ಸಣ್ಣರೈತರು, ಸ್ಥಳೀಯ ಬುಡಕಟ್ಟುಜನರು ಮತ್ತು ಇತರ ಸ್ಥಳೀಯ ಸಮುದಾಯಗಳಾದಂತಹ ವಿಸ್ತೃತ ಸಾಂಪ್ರದಾಯಕ ಸಮುದಾಯಗಳಲ್ಲಿ ಕಂಡುಬರುತ್ತವೆ. ತಳಮಟ್ಟದಲ್ಲಿ, ತಮ್ಮ ಜೈವಿಕ ವೈವಿಧ್ಯತೆಯ ಮೇಲೆ ಸ್ಥಳೀಯ ಸಮುದಾಯದ ಹಕ್ಕುಗಳನ್ನು ಬೆಂಬಲಿಸುವ ಸಾಂಪ್ರದಾಯಕ ಆಚಾರವಿಚಾರಗಳನ್ನು ಪೋಷಿಸಬೇಕಾಗಿದೆ. ಉದಾಹರಣೆಗೆ, ಬೀಜಗಳನ್ನು ಶೇಖರಿಸಿ, ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಾಂಪ್ರದಾಯಕ ಕೃಷಿ ಪದ್ಧತಿಯು ರೈತರ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಬೀಜಗಳ ಬಳಕೆಯ ಮೇಲೆ ನಿರ್ಬಂಧ ಹೇರುವುದು ಪ್ರಸ್ತುತ ಬೌದ್ಧಿಕ ಆಸ್ತಿ ಹಕ್ಕು ಪದ್ಧತಿಯನ್ನು ಪ್ರತಿಭಟಿಸುವ ಪ್ರಬಲ ಉದಾಹರಣೆಯಾಗಿದೆ.

ಟ್ರಿಪ್ಸ್ (TRIPS) ಒಪ್ಪಂದವನ್ನು ತಿದ್ದುಪಡಿ ಮಾಡುವುದು:

ವಿಶ್ವವಾಣಿಜ್ಯ ಸಂಸ್ಥೆಯ ಟ್ರಿಪ್ಸ್‌(TRIPS=Trade-Related Aspects of Intellectual Property Rights Agreement= ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದದ ವ್ಯಾಪಾರ ಸಂಬಂಧಿ ವಿಷಯಗಳು) ಒಪ್ಪಂದದಲ್ಲಿ ಸುಧಾರಣೆ ಮಾಡುವುದರ ಮೂಲಕ ಪ್ರಸ್ತುತ ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯಲ್ಲಿನ ಪ್ರತಿಕೂಲ ಪರಿಣಾಮಗಳನ್ನು  ಕಡಿಮೆ ಮಾಡಬಹುದೆಂದು ಕೆಲದೇಶಗಳು ಕರೆ ನೀಡಿವೆ. ಪ್ರಸ್ತುತ ವ್ಯವಸ್ಥೆಯಲ್ಲಿ ಜೈವಿಕ ಚೌರ್ಯವನ್ನು ತಡೆಯುವಂತಹ ಒಂದು ಸಾರ್ವತ್ರಿಕವಾಗಿ ಸ್ವೀಕೃತವಾಗಬಲ್ಲ ಪರಿಹಾರವಿಲ್ಲ. ಆದರೆ ಟ್ರಿಪ್ಸ್‌ಒಪ್ಪಂದದಲ್ಲಿ ಈ ಕೆಳಗಿನ ಮೂರು ತತ್ವಗಳನ್ನು ಅಳವಡಿಸುವುದರಿಂದ ಜೈವಿಕ ಚೌರ್ಯವನ್ನು ತಡೆಯಬಹುದೆನ್ನುತ್ತಾರೆ. ಅನ್ವೇಷಣೆಗಳಿಗೆ ಬೌದ್ಧಿಕ ಆಸ್ತಿ ಹಕ್ಕು ಕೋರಿ ಅರ್ಜಿಸಲ್ಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಮುಂದಿನ ಮೂರು ತತ್ವಗಳನ್ನು ಅನುಸರಿಸಬೇಕು:

  • ಅನ್ವೇಷಣೆಯಲ್ಲಿ ಬಳಸಲಾಗಿರುವ ಜೈವಿಕ ಅಥವಾ ಪಾರಂಪರಿಕ ಜ್ಞಾನದ ಸಂಪನ್ಮೂಲಗಳ ಭೌಗೋಳಿಕ ಮೂಲವನ್ನು ಬಹಿರಂಗೊಳಿಸುವುದು.
  • ಸಂಪನ್ಮೂಲದ / ಪಾರಂಪರಿಕ ಜ್ಞಾನದ ಸಾಂಪ್ರದಾಯಕ ವಾರಸುದಾರರಾಗಿರುವ ಸ್ಥಳೀಯ ಸಮುದಾಯದಿಂದ ಪೂರ್ವಮಾಹಿತಿ ನೀಡಿದ ಸಮ್ಮತಿ (Prior Informed Consent) ಪಡೆಯುವುದು.
  • ಪಡೆಯಲಾಗುವ ವಾಣಿಜ್ಯ ಲಾಭಾಂಶಗಳನ್ನು ಸಂಬಂಧಿಸಿದ ಸಮುದಾಯದೊಂದಿಗೆ ಸಮವಾಗಿ ಹಂಚಿಕೊಳ್ಳುವುದು.

ಈ ತತ್ವಗಳನ್ನು ಜೈವಿಕ ವೈವಿಧ್ಯತೆಯ ಮೇಲಿನ ಅಂತರರಾಷ್ಟ್ರೀಯ ಒಡಂಬಡಿಕೆಯು (The International Convention on Biological Diversity) ಈಗಾಗಲೇ ಅಳವಡಿಸಿಕೊಂಡಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ಬಗೆಗೆ ‘ಟ್ರಿಪ್ಸ್‌’ ಮಾತ್ರ ಒಂದು ಜಾಗತಿಕ ಒಪ್ಪಂದ ಹೊಂದಿರುವುದರಿಂದ ಆ ತತ್ವಗಳನ್ನು ‘ಟ್ರಿಪ್ಸ್‌’ನಲ್ಲಿಯೂ ಅಳವಡಿಸುವುದು ಮುಖ್ಯವಾದುದೆಂದು ಹಲವಾರು ದೇಶಗಳು ಹಾಗೂ ಸಂಘಟನೆಯಗಳು ವಾದಿಸುತ್ತಿವೆ. ಭಾರತ ಸರ್ಕಾರ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಈ ಉಪಬಂಧಗಳನ್ನು ‘ಟ್ರಿಪ್ಸ್‌’ನಲ್ಲಿ ಸೇರಿಸಲು ಒತ್ತಾಯಿಸುತ್ತಿವೆ. ಆದರೆ ಅವು ಪೂರ್ವಮಾಹಿತಿ ನೀಡಿದ ಸಮ್ಮತಿಯನ್ನು ಸ್ಥಳೀಯ ಸಮುದಾಯಗಳಿಂದ ಪಡೆಯುವ ಬದಲು ರಾಷ್ಟ್ರೀಯ ಸರ್ಕಾರಗಳಿಂದ ಪಡೆಯಬಹುದೆಂದು ಸೂಚಿಸಿವೆ. ಈ ಪ್ರಸ್ತಾವನೆಯನ್ನು ಉತ್ತರ ಅಮೆರಿಕಾ ತೀವ್ರವಾಗಿ ವಿರೋಧಿಸುತ್ತಿದೆ. ಅಂತಹ ಉಪಬಂಧಗಳು ತೀರಾ ಹೆಚ್ಚು ಕಾನೂನಿನ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ಉಂಟು ಮಾಡುತ್ತವೆ ಎನ್ನುವುದು ಅದರ ಅಭಿಮತ.

ಪ್ರ. .: ಲಾಭಾಂಶ ಹಂಚಿಕೆ ಎಂದರೇನು?

: ಲಾಭಾಂಶ ಹಂಚಿಕೆಯನ್ನು ‘ಪ್ರವೇಶಾವಕಾಶ ಮತ್ತು ಲಾಭಾಂಶ ಹಂಚಿಕೆ’ (Access and Benefit-Sharing-ABS) ಎಂದೂ ಕರೆಯುತ್ತಾರೆ. ಅಂದರೆ ಹೊರಗಿನವರೊಬ್ಬರು ದೇಶದ/ಸಮುದಾಯದ ಜೈವಿಕ ಸಂಪನ್ಮೂಲಗಳಿಗೆ ಅಥವಾ ಸಂಬಂಧಿಸಿದ ಪಾರಂಪರಿಕ ಜ್ಞಾನಕ್ಕೆ ಪ್ರವೇಶವನ್ನು ಪಡೆದು ಅದನ್ನು ಬಳಸಿಕೊಳ್ಳುವಿಕೆ ಹಾಗೂ ತದನಂತರ ಅದರ ವಾಣಿಜ್ಯ ಬಳಕೆಯಿಂದ ಬರುವ ಲಾಭಾಂಶವನ್ನು ಸಂಬಂಧಿಸಿದ ಸಮುದಾಯದೊಂದಿಗೆ ಹಂಚಿಕೊಳ್ಳುವಿಕೆ. ಉದಾಹರಣೆಗೆ, ರಾಷ್ಟ್ರೀಯ ಸರ್ಕಾರವೊಂದು ಕಂಪೆನಿಯೊಂದಕ್ಕೆ ಕಾಡಿನಲ್ಲಿನ ಔಷಧೀಯ ಸಸ್ಯಗಳ ಮಾದರಿಗಳನ್ನು ಸಂಗ್ರಹಿಸಲು ಪ್ರವೇಶಾವಕಾಶವನ್ನು ನೀಡಬಹುದು. ಸ್ಥಳೀಯ ವನವಾಸಿಗಳು ಕಂಪೆನಿಗೆ ಔಷಧೀಯ ಸಸ್ಯಗಳನ್ನು ಗುರುತಿಸಲು ಹಾಗೂ ಅವರಿಗೆ ಅವುಗಳ ಸಾಂಪ್ರದಾಯಕ ಔಷಧೀಯ ಬಳಕೆಗಳನ್ನು ವಿವರಿಸಿ ಹೇಳುವಲ್ಲಿ ಸಹಕರಿಸಬಹುದು. ಒಂದು ವಾಣಿಜ್ಯ ಔಷಧಿಯನ್ನು ತಯಾರಿಸಲು ಕಂಪೆನಿಯು ಆ ಸಂಶೋಧನೆಯನ್ನು ಬಳಸಿಕೊಳ್ಳಬಹುದು. ಸಮಾನ ಲಾಭಾಂಶ ಹಂಚಿಕೆ ವ್ಯವಸ್ಥೆಯಲ್ಲಿ ಕಂಪೆನಿಯು ತನಗೆ ದೊರೆಯುವ ಆರ್ಥಿಕ ಲಾಭಾಂಶವನ್ನು ಇಬ್ಬರಿಗೂ ಪರಸ್ಪರ ಒಪ್ಪಿಗೆಯಾಗುವ ರೀತಿಯಲ್ಲಿ ಸ್ಥಳೀಯ ಸಮುದಾಯದೊಂದಿಗೆ ಹಂಚಿಕೊಳ್ಳುತ್ತದೆ. ಲಾಭಾಂಶವು ಆರ್ಥಿಕವಾಗಿ ಇಲ್ಲವೆ ಆರ್ಥಿಕೇತರವಾಗಿಯೋ ಇರಬಹುದು. ಉದಾಹರಣೆಗೆ ಅದು ಸ್ಥಳೀಯ ಸಮುದಾಯಕ್ಕೆ ತರಬೇತಿ ನೀಡುವುದರೊಂದಿಗೆ ಮತ್ತು ಪಾಲುದಾರಿಕೆಯೊಂದಿಗೆ ಸಂಪನ್ಮೂಲ ಇರುವ ದೇಶದಲ್ಲಿಯೇ ಔಷಧ ತಯಾರಿಸಬಹುದು ಅಥವಾ ಅತ್ಯವಶ್ಯ ಸೌಕರ್ಯಗಳ ಅಭಿವೃದ್ಧಿಗೆ ಸಹಕರಿಸಬಹುದು.

ಲಾಭಾಂಶ ಹಂಚಿಕೆ ಪರಿಕಲ್ಪನೆ ಎಂದರೆ ಸ್ಥಳೀಯ ಸಮುದಾಯಕ್ಕೆ ಒಮ್ಮೆ ‘ಹಣಕೊಟ್ಟು ಕೈತೊಳೆದುಕೊಳ್ಳುವುದು’ ಎಂದರ್ಥವಲ್ಲ ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಬದಲಿಗೆ ಅದು ತಾಂತ್ರಿಕ ಮತ್ತು ಆರ್ಥಿಕ ವರ್ಗಾವಣೆ, ಸಾಮರ್ಥ್ಯ ನಿರ್ಮಾಣ ಮತ್ತು ವೈಜ್ಞಾನಿಕ ಸಹಯೋಜನೆಯಂತಹ ಪರಸ್ಪರ ಒಪ್ಪಿಗೆಯಾಗಬಲ್ಲ ಲಾಭಾಂಶ ಹಂಚಿಕೆಯೊಂದಿಗೆ ನ್ಯಾಯ ಒದಗಿಸುವುದಾಗಿದೆ.

ಜೈವಿಕ ಸಂಪನ್ಮೂಲಕ್ಕೆ ಅಥವಾ ಸಂಬಂಧಿಸಿದ ಪಾರಂಪರಿಕ ಜ್ಞಾನಕ್ಕೆ ಪ್ರವೇಶಾವಕಾಶ ಪಡೆಯುವ ಅಥವಾ ಅದನ್ನು ವಾಣಿಜ್ಯವಾಗಿ ಬಳಸುವ ಮುನ್ನ ಸ್ಥಳೀಯ ಸಮುದಾಯದ ಪೂರ್ವಮಾಹಿತಿ ನೀಡಿದ ಸಮ್ಮತಿಯನ್ನು ಪಡೆಯುವುದು ಸಮಾನಾಂತರ ಪ್ರವೇಶಾವಕಾಶ ಮತ್ತು ಲಾಭಾಂಶ ಹಂಚಿಕೆ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ.

ಪ್ರ. .೧೦: ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆ ಹಾಗೂ ಭಾರತೀಯ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಒಪ್ಪಂದಗಳ ಮಹತ್ವವೇನು?

: ಜಾಗತಿಕ ಮಹತ್ವ:  ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಮಾಡಿರುವ ಹಾಗೂ ‘ಸದಸ್ಯ’ರಾಗಿರುವ ದೇಶಗಳು ಆಯಾ ಒಪ್ಪಂದಗಳಲ್ಲಿ ನಿಗದಿಪಡಿಸಲಾಗಿರುವ ನಿಯಮಗಳನ್ನು ಹಾಗೂ ಜವಾಬ್ದಾರಿಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಇರುವ ಒಂದು ಸಮಸ್ಯೆಯೆಂದರೆ, ಅವು ಕಾನೂನಿನ್ವಯ ಅನುಸರಿಸಬೇಕಾದ ಬದ್ಧತೆಯನ್ನು ಹೊಂದಿದ್ದರೂ ಅವುಗಳನ್ನು ಜಾರಿಗೊಳಿಸುವ ಸದೃಢ ವ್ಯವಸ್ಥೆಯನ್ನು ಹೊಂದಿಲ್ಲ. ಆದರೆ ‘ಟ್ರಿಪ್ಸ್‌’ ಒಪ್ಪಂದ ಇದಕ್ಕೆ ಹೊರತಾದುದು. ಬೌದ್ಧಿಕ ಆಸ್ತಿ ಹಕ್ಕು ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವವಾದ ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದ ಇದೊಂದೇ ಆಗಿದೆ. ಇನ್ನಿತರ ಒಪ್ಪಂದಗಳಲ್ಲಿ ಇತರ ಒತ್ತಡಗಳು ಅನ್ವಯಿಸಬಹುದು. ಜಾರಿಗೊಳಿಸಬೇಕಾದ ಯಾವುದೇ ಬಲವಂತದ ಸನ್ನಿವೇಶ ಇಲ್ಲದಿದ್ದರೂ ದೇಶಗಳು ವಿಶ್ವಸಮುದಾಯದ ಜವಾಬ್ದಾರಿಯುತ ಸದಸ್ಯರೆಂದು ಗುರುತಿಸಿಕೊಳ್ಳಲು ಅಂತರರಾಷ್ಟ್ರೀಯ ನಿಬಂಧನೆಗಳನ್ನು ಅನುಸರಿಸುತ್ತವೆ; ಇತರ ಪ್ರಬಲ ರಾಷ್ಟ್ರಗಳು ಅನುಸರಿಸುವಂತೆ ತಮ್ಮ ದ್ವಿಪಕ್ಷೀಯ ಒಪ್ಪಂದಗಳನ್ವಯ ಸದಸ್ಯ ರಾಷ್ಟ್ರವೊಂದರ ಮೇಲೆ ಒತ್ತಡವನ್ನು ತರಬಹುದು. ಅತಿ ಹೆಚ್ಚು ಸಂಖ್ಯೆಯ ಸದಸ್ಯ ರಾಷ್ಟ್ರಗಳನ್ನೊಳಗೊಂಡಿರುವ ಅಂತರರಾಷ್ಟ್ರೀಯ ಒಪ್ಪಂದಗಳು ಆಯಾ ವಿಷಯದಲ್ಲಿ ಒಂದು ರೀತಿಯಲ್ಲಿ ಜಾಗತಿಕ ಮಾನಕಿಗಳಾಗುತ್ತವೆ (Global Standards). ಒಂದು ಅಂತರರಾಷ್ಟ್ರೀಯ ಒಪ್ಪಂದದಲ್ಲಿನ ಅಂಶಗಳ ಬಗ್ಗೆ ವಿವಿಧ ರಾಷ್ಟ್ರಗಳು ತಮ್ಮ ದೇಶದ ಹಿತಾಸಕ್ತಿಗಳಿಗನುಗುಣವಾಗಿ ಅಂಶಗಳನ್ನು ಸೇರಿಸಲು ಸೂಕ್ತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತೀವ್ರ ಸೆಣಸಾಟ, ಪೈಪೋಟಿ ನಡೆಸುತ್ತವೆ.

ಸಾಂಸ್ಕೃತಿಕ ಸಾರ್ವಭೌಮತ್ವ ಹಾಗೂ ಜ್ಞಾನದ ವಿವರಣೆ

ಅರಿಶಿನದ ಪೇಟೆಂಟನ್ನು ಹಿಂಪಡೆಯುವಂತೆ ಮಾಡಿದ ಹೋರಾಟ ಹೇಗೆ ಉತ್ತರ ಅಮೆರಿಕಾದಲ್ಲಿ ಮೌಖಿಕ ಜ್ಞಾನ ತಲೆತಲೆಮಾರುಗಳ ಸಿದ್ಧಜ್ಞಾನದ ಸಾಕ್ಷ್ಯಾಧಾರವಾಗಲಾರದು ಎನ್ನುವ ಅನ್ಯಾಯಕ್ಕೆ ಎದ್ದು ತೋರುವ ಉದಾಹರಣೆಯಾಗಿದೆ. ಸಾಂಪ್ರದಾಯಕ ಜ್ಞಾನ ಮೌಖಿಕವಾಗಿ ತಲೆತಲೆಮಾರುಗಳಿಂದ ಹರಿದು ಬಂದಿರುವೆಡೆ ಅಥವಾ ಪ್ರಯೋಗಾಲಯಗಳಲ್ಲಿ ವೈಜ್ಞಾನಿಕವಾಗಿ ಜ್ಞಾನ ಉತ್ಪಾದಿತವಾಗಿ ದಾಖಲಾಗದಿರುವೆಡೆ ಅಥವಾ ತಾಂತ್ರಿಕನಿರ್ದಿಷ್ಟತೆಗಳನುಸಾರ ಜ್ಞಾನವನ್ನು ಲಿಖಿತ ರೂಪದಲ್ಲಿ ದಾಖಲಿಸದಿರುವಂತಹ ಸಂಸ್ಕೃತಿಗಳು ಜೈವಿಕ ಚೌರ್ಯವನ್ನು ವಿರೋಧಿಸಿ ಹೋರಾಡುವುದು ಕಷ್ಟವಾಗುತ್ತದೆ.

ಒಂದು ನಿರ್ದಿಷ್ಟ ಪಾಶ್ಚಿಮಾತ್ಯ ಪರಿಕಲ್ಪನೆಯ ಜ್ಞಾನದ ಉತ್ಪಾದನೆ ಹಾಗೂ ದಾಖಲಾತಿಯನ್ನು ಜಾಗತಿಕ, ಸಮಾನರೂಪದ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯ ಮೂಲಕ ವ್ಯವಸ್ಥಿತವಾಗಿ ಜಗತ್ತಿನಾದ್ಯಂತ ಹೇರಲಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ವಿವರಣೆಯ ಸಮಾನರೂಪದ ಹೇರಿಕೆಯ ಇತರ ಜ್ಞಾನ ಪರಂಪರೆಗಳನ್ನು ಪರಿಗಣಿಸದೆ ಅವುಗಳನ್ನು ಅಮಾನ್ಯ ಮಾಡುತ್ತವೆ. ಆಧುನಿಕ, ಔಪಚಾರಿಕ, ಪಾಶ್ಚಿಮಾತ್ಯ ಜ್ಞಾನ ಸಂಸ್ಕೃತಿ ಆಧಾರಿತ ತಂತ್ರಜ್ಞಾನವನ್ನು ವೈಜ್ಞಾನಿಕ, ನಾವೀನ್ಯತೆಯ, ಆಸ್ತಿ ರಚನೆಗೆ ಕಾರಣವಾಗುವ ಹಾಗೂ ಬೌದ್ಧಿಕ ಉತ್ತಮತೆಯ ಆಧಾರವೆಂದೂ ವಿವರಿಸಲಾಗುತ್ತಿದೆ. ಇದಕ್ಕೆ ತದ್ವಿರುದ್ದವಾಗಿ , ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿರುವ ಸಾಂಪ್ರದಾಯಕ ಸಂಸ್ಕೃತಿಗಳ ಅನೌಪಚಾರಿಕ ಅಥವಾ ಮೌಖಿಕ ಜ್ಞಾನ ಪರಂಪರೆಗಳ ಆಧಾರಿತ ಜ್ಞಾನ/ ತಂತ್ರಜ್ಞಾನವನ್ನು ಅವೈಜ್ಞಾನಿಕ, ಪ್ರಾಕೃತಿಕ ಹಾಗೂ ಅವು ಆಸ್ತಿ ರಚನೆಗೆ ಕಾರಣವಾಗದವೆಂದು ಪರಿಗಣಿಸಲಾಗುತ್ತಿದೆಯಲ್ಲದೆ ಅವುಗಳನ್ನು ವ್ಯಕ್ತಿಗಳ ಮತ್ತು ಸಮುದಾಯಗಳ ತಲೆತಲೆಮಾರುಗಳ ತಮ್ಮ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಜ್ಞಾನವನ್ನು ಅನ್ವೇಷಣೆಯೆಂದು ಪರಿಗಣಿಸುವುದಿಲ್ಲ ಹಾಗೂ ಅವುಗಳನ್ನು ಏಕಸ್ವಾಮ್ಯಕ್ಕೆ ಉಚಿತವಾಗಿವಾಗಿ ಲಭ್ಯವಿರುವವು ಎಂದು ಭಾವಿಸಿರುತ್ತವೆ.

ಹಾಗಾಗಿ, ಅಭಿವೃದ್ಧಿ ಹೊಂದಿದ ದೇಶಗಳ ವ್ಯಾಪಾರ ಹಿತಾಸಕ್ತಿ ಆಧಾರಿತ ಮತ್ತು ಏಕೈಕ ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದವಾಗಿರುವ ಅಂತರರಾಷ್ಟ್ರೀಯ ಟ್ರಿಪ್ಸ್‌ಒಪ್ಪಂದವು ಸಾಂಪ್ರದಾಯಕ ಜ್ಞಾನ ಪರಂಪರೆಗೆ ಯಾವುದೇ ರಕ್ಷಣೆ ನೀಡುವುದಿಲ್ಲ ಹಾಗೂ ಪೂರ್ವ ಮಾಹಿತಿ ಸಮ್ಮತಿ ಅಥವಾ ಬಳಸಿದ ಸಂಪನ್ಮೂಲಗಳ ಭೌಗೋಳಿಕ ಮೂಲಗಳನ್ನು ಬಹಿರಂಗಗೊಳಿಸುವಂತಹ ವಿಧಾನಗಳ ಮೂಲಕ ಜೈವಿಕ ಚೌರ್ಯವನ್ನು ತಡೆಯುವುದಕ್ಕೆ ಸಹಕಾರಿಯೂ ಆಗಿರುವುದಿಲ್ಲ. ಅಲ್ಲದೆ ಪಾರಂಪರಿಕ ಜ್ಞಾನವನ್ನು ಹೇಗೆ ಸಾಬೀತುಗೊಳಿಸುವುದು ಎನ್ನುವುದರ ಬಗ್ಗೆಯೂ ಅದು ಮೌನವಾಗಿದೆ.

ದೇಶೀ ಮಟ್ಟದಲ್ಲಿನ ಪ್ರಭಾವ: ಅಂತರರಾಷ್ಟ್ರೀಯ ಒಪ್ಪಂದಗಳು ದೇಶಗಳ ಪರಸ್ಪರ ಸಂಬಂಧಗಳ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲ, ದೇಶಗಳ ಆಂತರಿಕ ಕಾನೂನು ಕಟ್ಟಳೆಗಳ ಮೇಲೂ ಪ್ರಭಾವ ಬೀರುತ್ತವೆ. ಉದಾಹರಣೆಗೆ, ಭಾರತ ೨೦೦೧ರಲ್ಲಿ ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಅಧಿನಿಯಮವನ್ನು ಜಾರಿಗೊಳಿಸಿತು ಹಾಗೂ ಟ್ರಿಪ್ಸ್‌ನಿಬಂಧನೆಗಳಿಗೆ ಸರಿಹೊಂದುವಂತೆ ೧೯೯೦ರ ಪೇಟೆಂಟ್ಸ್‌ಅಧಿನಿಯಮವನ್ನು ೧೯೯೯, ೨೦೦೨ ಮತ್ತು ೨೦೦೫ರಲ್ಲಿ ತಿದ್ದುಪಡಿ ಮಾಡಿತು. ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ ಭಾರತದ ಬದ್ಧತೆಯನ್ನು ಪರಿಪೂರ್ಣಗೊಳಿಸಲು ಜೈವಿಕ ವೈವಿಧ್ಯತೆ ಅಧಿನಿಯಮ ೨೦೦೨ಅನ್ನು ರಚಿಸಲಾಯಿತು.

ಹಾಗಾಗಿ ಅಂತರರಾಷ್ಟ್ರೀಯ ಒಪ್ಪಂದಗಳಿಂದಾಗಿ ದೇಶದ ಆಂತರಿಕ ವ್ಯವಸ್ಥೆಯ ಮೇಲಾಗುವ ಪರಿಣಾಮ ಪ್ರಭಾವಗಳಿಂದಾಗಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ನಿಬಂಧನೆ ನಿಯಮಗಳನ್ನು ಮೀರಿ ನೋಟ ಹರಿಸಬೇಕಾಗುತ್ತದೆ ಹಾಗೂ ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯಲ್ಲಿನ ಅಭಿವೃದ್ಧಿಗಳ ಬಗ್ಗೆಯೂ ಸಹ ಅರಿವು ಹೊಂದಿರಬೇಕಾಗುತ್ತದೆ.

ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯು ಅತ್ಯಂತ ಕ್ಷಿಪ್ರಗತಿಯಲ್ಲಿ ವಿಕಸಿತವಾಗುತ್ತಿದೆ ಹಾಗೂ ವಿವಿಧ ರಾಷ್ಟ್ರಗಳ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಗಳ ನಡುವೆ ಸಾಮರಸ್ಯ ಮೂಡಿಸಲು ಯತ್ನಿಸುತ್ತಿದೆ. ಹಲವಾರು ಪ್ರಾದೇಶಿಕ ಮತ್ತು ದ್ವಿ-ಪಕ್ಷೀಯ ಬೌದ್ಧಿಕ ಆಸ್ತಿ ಹಕ್ಕು ಸಂಬಂಧಿತ ಒಪ್ಪಂದಗಳೂ ಸಹ ಏರ್ಪಡುತ್ತಿವೆ. ಬಹಳಷ್ಟು ಸಾರಿ ಇಂತಹ ವಿವಿಧ ಒಪ್ಪಂದಗಳಿಗೆ ದೇಶಗಳು ಸಂಘರ್ಷದ ವೈರುಧ್ಯಗಳನ್ನು ಹೊಂದಿರುತ್ತವೆ. ಅಭಿವೃದ್ಧಿಯ ನಾಗಲೋಟದ ಬೆನ್ನತ್ತಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಂತಹ ಸನ್ನಿವೇಶಗಳು ವಿಶೇಷವಾಗಿ ಬಲಶಾಲಿ ರಾಷ್ಟ್ರಗಳು ಬಡರಾಷ್ಟ್ರಗಳ ಮೇಲೆ ಪ್ರತಿಕೂಲಪರಿಣಾಮ ಉಂಟು ಮಾಡುವಂತಹ ಕಾರ್ಯಸೂಚಿಗಳನ್ನು ಬಲವಂತವಾಗಿ ಹೇರಲು ಯತ್ನಿಸಿದಾಗ ಆತಂಕ ತಂದೊಡ್ಡುತ್ತವೆ.

ಬೌದ್ಧಿಕ ಆಸ್ತಿ ಹಕ್ಕು, ಜೈವಿಕ ವೈವಿಧ್ಯತೆ ಹಾಗೂ ಸಾಂಪ್ರದಾಯಕ ಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದಗಳ ವಿವರಗಳಿಗೆ ಅನುಬಂಧ ೧ ನೋಡಿ. ಬೌದ್ಧಿಕ ಆಸ್ತಿ ಹಕ್ಕು ಜೈವಿಕ ವೈವಿಧ್ಯತೆಯ ಹಾಗೂ ಸಾಂಪ್ರದಾಯಕ ಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನಿನ ವಿವರಗಳಿಗೆ ಅನುಬಂಧ ೨ ನೋಡಿ.