ಭಾರತೀಯ ಶಾಸನ

ಪ್ರ: ಜೈವಿಕ ವೈವಿಧ್ಯತೆ ಮತ್ತ ಸಂಬಂಧಿತ ಸಾಂಪ್ರದಾಯಕ ಜ್ಞಾನದ ಸಂರಕ್ಷಣೆಗೆ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಇರುವ ಪ್ರಮುಖ ಕಾನೂನುಗಳು ಯಾವುವು?

: ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಗಳಿಗೆ ಸಂಬಂಧಿಸಿದಂತೆ) ನಿರ್ವಹಿಸಲು ಭಾರತದಲ್ಲಿರುವ ಪ್ರಮುಖ ಕಾನೂನು/ಶಾಸನಗಳು ಈ ಮುಂದಿನಂತಿವೆ:

. ಜೈವಿಕ ವೈವಿಧ್ಯತೆ ಅಧಿನಿಯಮ, ೨೦೦೨ (The Biological Diversity Act, 2002):

ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆಯನ್ನು (CBD) ಭಾರತದಲ್ಲಿ ಜಾರಿಗೆ ತರಲು ಜೈವಿಕ ವೈವಿಧ್ಯತೆ ಅಧಿನಿಯಮವನ್ನು ರಚಿಸಲಾಯಿತು ಹಾಗಾಗಿ ಅದರ ಉದ್ದೇಶಗಳು ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆಯಂತೆಯೇ ಇವೆ: ಜೈವಿಕ ವೈವಿಧ್ಯತೆಯ ಸಂರಕ್ಷಣೆ; ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ಹಾಗೂ ಸಾಂಪ್ರದಾಯಕ ಜ್ಞಾನದ ಬಳಕೆಯಿಂದ ಲಭಿಸುವ ಲಾಭದ ಸಮಾನ ಹಂಚಿಕೆ. ಇದರಡಿ ಸ್ಥಳೀಯ ಸಮುದಾಯದ ಸದಸ್ಯರನ್ನುಳ್ಳ ಸ್ಥಳೀಯ, ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ನಿರ್ಧಾರ ಕೈಗೊಳ್ಳುವ ನಿಕಾಯಗಳನ್ನು ರಚಿಸಲಾಗುತ್ತದೆ.

. ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಅಧಿನಿಯಮ, ೨೦೦೧ (Protection of plant Varieties and Farmers’ Rights Act [PPVER], 2001):

೧೯೯೦ರ ದಶಕದಲ್ಲಿ ಆರ್ಥಿಕ ಉದಾರೀಕರಣದ ಮೊದಲು ಸಸ್ಯ ತಳಿ ಸಂವರ್ಧನೆ ಮತ್ತು ಅವುಗಳ  ಮಾರಾಟ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದಲೇ ನಡೆಯುತ್ತಿತ್ತು (ಅದರಲ್ಲೂ ಹೆಚ್ಚು ಗಮನಾರ್ಹವಾಗಿ ೧೯೭೦ರ ದಶಕದ ಹಸಿರು ಕ್ರಾಂತಿಯ ಸಮಯದಲ್ಲಿ). ಖಾಸಗಿ ಕ್ಷೇತ್ರದವರಿಗೆ ಸಸ್ಯ ತಳಿ ಸಂವರ್ಧನೆಗೆ ಯಾವುದೇ ಉತ್ತೇಜನವಿರಲಿಲ್ಲ. ಹಾಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳಾದಂತಹ ಬೀಜ ಮತ್ತು ಸಸ್ಯ ತಳಿಗಳ ಮಾರಾಟದ ನಿಯಂತ್ರಣಕ್ಕೆ ಯಾವುದೇ ಕಾಯಿದೆ ಕಾನೂನಿನ ಅವಶ್ಯಕತೆ ಇರಲಿಲ್ಲ. ಆದರೆ ಉದಾರೀಕರಣದ ನಂತರ ಬೀಜೋತ್ಪಾದನೆಯಲ್ಲಿ ದೇಶೀ ಮತ್ತು ವಿದೇಶೀ ಖಾಸಗಿ ಕ್ಷೇತ್ರದವರಿಗೆ ಉತ್ತೇಜನ ಮತ್ತು ಅವಕಾಶಗಳು ದೊರೆತಂತೆ ಕಾಯಿದೆ ಕಾನೂನಿನ ಅವಶ್ಯಕತೆಗಳು ಕಂಡುಬಂದವು.

೧೯೮೯ರಲ್ಲಿ ಉದಾರೀಕರಣದ ಮೊದಲೇ ಭಾರತ ಸರ್ಕಾರವು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯನ್ನು (FAO) ಭಾರತದಲ್ಲಿ ಸಸ್ಯ ತಳಿ ಸಂವರ್ಧಕರ ಹಕ್ಕುಗಳನ್ನು ಜಾರಿಗೆ ತರುವ ಸಾಧ್ಯತೆ ಮತ್ತು ಸೂಕ್ತತೆಯ ಬಗ್ಗೆ ಕೇಳಿತ್ತು. ೧೯೯೪ರಲ್ಲಿ ಟ್ರಿಪ್ಸ್‌ನ ರಚನೆಯಿಂದ ಸಸ್ಯ ತಳಿ ಸಂವರ್ಧಕರ ಹಕ್ಕುಗಳನ್ನು ಪರಿಚಯಿಸಲು ಉತ್ತೇಜನ ಸಿಕ್ಕಂತಾಯಿತು: ಟ್ರಿಪ್ಸ್‌ನ ಅವಶ್ಯಕತೆಗಳನ್ವಯ ಸಸ್ಯ ಆನುವಂಶಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಭಾರತ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಶಾಸನವನ್ನು ಠರಾವುಗೊಳಿಸಬೇಕಾಗಿತ್ತು. ಹಾಗಾಗಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಟ್ರಿಪ್ಸ್‌ನ ಅವಶ್ಯಕತೆಗನುಗುಣವಾಗಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಅವಕಾಶ ಮಾಡಿಕೊಡುವ ಭಾರತದ ಸಸ್ಯ ತಳಿ ಸಂರಕ್ಷಣಾ ವ್ಯವಸ್ಥೆಯಾಯಿತು. ಆದರೆ ಟ್ರಿಪ್ಸ್‌ನ ಅವಶ್ಯಕತೆಯಂತೆ ಇದರಲ್ಲಿ ರೈತರ ಹಕ್ಕುಗಳನ್ನು ಸೇರಿಸುವ ಅಗತ್ಯವಿಲ್ಲದಿದ್ದರೂ ಭಾರತ ಸರ್ಕಾರ ಅದನ್ನೂ ಸೇರಿಸಿದ್ದು  ಒಂದು ಗಮನಾರ್ಹ ಅಂಶ.

ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ನಿಯಮಗಳನ್ನು ೨೦೦೩ರಲ್ಲಿ ರಚಿಸಲಾಯಿತು ಹಾಗೂ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಅಧಿನಿಯಮ ೨೦೦೫ರಲ್ಲಿ ಜಾರಿಗೆ ಬಂದಿತು.

. ಬೀಜ ವಿಧೇಯಕ, ೨೦೦೪ (The Seed Bill, 2004):

೧೯೬೬ರ ಬೀಜ ಅಧಿನಿಯಮವನ್ನು ಬದಲಿಸುವ ಉದ್ದೇಶವನ್ನು ಬೀಜ ವಿಧೇಯಕ ಹೊಂದಿದೆ. ೨೦೦೪ರಲ್ಲಿ ರಚಿತವಾದ ಇದು ಸಂಸತ್ತಿನಲ್ಲಿ ಅನುಮೋದಿತವಾದನಂತರ ಶಾಸನವಾಗುತ್ತದೆ. ಈ ವಿಧೇಯಕಕ್ಕೆ ಸಾಕಷ್ಟು ವಿರೋಧವಿದ್ದು, ವಿಶೇಷವಾಗಿ ರೈತರು ಇದನ್ನು ವಿರೋಧಿಸುತ್ತಿದ್ದಾರೆ. ಬೀಜೋದ್ಯಮದ ಆಸಕ್ತಿಗಳಿಗೆ ಇದು ಸಹಕಾರಿಯಾಗಿದೆ ರೈತರಿಗಲ್ಲ ಎಂಬುದೇ ಆ ವಿರೋಧಕ್ಕೆ ಕಾರಣ.

ಮಾರಾಟಕ್ಕಿರುವ ಬೀಜಗಳ ಗುಣಮಟ್ಟದ ನಿಯಂತ್ರಣ, ಬೀಜಗಳ ರಫ್ತು ಮತ್ತು ಆಮದು ಹಾಗೂ ಉತ್ತಮ ಗುಣಮಟ್ಟದ ಬೀಜಗಳ ಉತ್ಪಾದನೆ ಮತ್ತು ವಿತರಣೆ ಈ ಬೀಜ ವಿಧೇಯಕದ ಉದ್ದೇಶಗಳು. ಬೀಜ ವಿಧೇಯಕ ನೇರವಾಗಿ ಬೌದ್ಧಿಕ ಆಸ್ತಿ ಹಕ್ಕುಗಳೊಂದಿಗೆ ಸಂಬಂಧ ಹೊಂದಿಲ್ಲ. ಬೀಜಗಳ ಗುಣಮಟ್ಟದ ಪ್ರಮಾಣೀಕರಣ ಅದರ ಮುಖ್ಯ ಉದ್ದೇಶ. ಆದರೆ ಈ ವಿಧೇಯಕ ಸಣ್ಣ ರೈತರ ಹಾಗೂ ಅವರ ಸಾಂಪ್ರದಾಯಕ ಜ್ಞಾನ ಮತ್ತು ಕೃಷಿ ವಿಧಾನಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಬದಲಿಗೆ ರೈತರ ಸ್ಥಳೀಯ ಬೀಜ ಮಾರಾಟದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಔದ್ಯಮಿಕ ಬೀಜ ಮಾರಾಟಗಾರರಿಗೆ ಬೆಂಬಲ ನೀಡುತ್ತದೆ.

. ವಸ್ತುಗಳ ಭೌಗೋಳಿಕ ಸೂಚಕಗಳ (ನೋಂದಾವಣೆ ಮತ್ತು ಸಂರಕ್ಷಣೆ) ಅಧಿನಿಯಮ, ೧೯೯೯ (The Geographical Indications of Goods [Registration and Protection] Act, 1999):

೧೯೯೭ರಲ್ಲಿ ಅಮೆರಿಕದ ರೈಸ್‌ಟೆಕ್‌ಕಂಪೆನಿಯು ಬಾಸುಮತಿ ಅಕ್ಕಿಯ ತಳಿಗಳನ್ನು ಪೇಟೆಂಟ್‌ಮಾಡಿದ್ದೇ ಈ ಅಧಿನಿಯಮವನ್ನು ಜಾರಿಗೆ ತರಲು ಮುಖ್ಯ ಕಾರಣ (ವಿವರಗಳಿಗೆ ಪುಟ ೪೦ ನೋಡಿ). ಟ್ರಿಪ್ಸ್ನ ನಿಯಮಗಳಂತೆ ಯಾವುದಾದರೂ ಉತ್ಪನ್ನಕ್ಕೆ ಆ ಉತ್ಪನ್ನದ ಮೂಲವಾಗಿರುವ ರಾಷ್ಟ್ರದಲ್ಲೇ ಸಂರಕ್ಷಣೆ ಇಲ್ಲದಿದ್ದಲ್ಲಿ ಇತರ ರಾಷ್ಟ್ರಗಳು ಅಂತಹ ಭೌಗೋಳಿಕ ಸೂಚಕಗಳಿಗೆ ರಕ್ಷಣೆ ನೀಡಲೇಬೇಕೆಂದೇನಿಲ್ಲ. ಬಾಸುಮತಿ ಅಕ್ಕಿಗೆ ಭಾರತದಲ್ಲಿ ರಕ್ಷಣೆ ನೀಡಬಲ್ಲ ಭೌಗೋಳಿಕ ಸೂಚಕ ಶಾಸನವಿರಲಿಲ್ಲವಾದುದರಿಂದ ಅದನ್ನು ರೈಸ್‌ಟೆಕ್‌ಕಂಪೆನಿಯು ತನ್ನ ಭತ್ತದ ತಳಿಗಳನ್ನು ‘ಬಾಸುಮತಿ’ ತಳಿಗಳೆಂದು ಮಾರಾಟ ಮಾಡಲು ಸಾಧ್ಯವಾಯಿತು. ಇದರಿಂದ ಎಚ್ಚೆತ್ತ ಭಾರತ ಸರ್ಕಾರ ೧೯೯೯ರಲ್ಲಿ ಭೌಗೋಳಿಕ ಸೂಚಕಗಳ ಅಧಿನಿಯಮವನ್ನು ಜಾರಿಗೊಳಿಸಿತು . ಅದರ ನಿಯಮಗಳನ್ನು ೨೦೦೨ರಲ್ಲಿ ರಚಿಸಲಾಯಿತು.

ಯಾವ ಕೃಷಿ ಉತ್ಪನ್ನದ, ಪ್ರಾಕೃತಿಕವಾಗಿ ಲಭಿಸುವ ಮತ್ತು ತಯಾರಿಸಲ್ಪಡುವ ವಸ್ತುವಿನ ಗುಣಮಟ್ಟ ಮತ್ತು ಖ್ಯಾತಿ ಅದರ ಮೂಲದ ಭೌಗೋಳಿಕ ಪ್ರದೇಶವನ್ನವಲಂಬಿಸಿರುತ್ತದೆಯೋ ಅಥವಾ ಅದು ಎಲ್ಲಿ ಬೆಳೆಯಲಾಗುತ್ತದೆ ಅತವಾ ತಯಾರಿಸಲ್ಪಡುತ್ತದೆಯೋ ಅಂಥವುಗಳಿಗೆಲ್ಲಾ ಈ ಅಧಿನಿಯಮ ರಕ್ಷಣೆ ನೀಡುತ್ತದೆ (ಉದಾ: ಮೈಸೂರು ರೇಷ್ಮೆ, ಬಾಸುಮತಿ ಅಕ್ಕಿ, ಡಾರ್ಜಿಲಿಂಗ್‌ಚಹಾ, ತಿರುಪತಿ ತಿಮ್ಮಪ್ಪನ ಲಾಡು). ಈ ಅಧಿನಿಯಮದ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ಉತ್ಪನ್ನವನ್ನು ಭೌಗೋಳಿಕ ಸೂಚಕಗಳ ರಿಜಿಸ್ಟ್ರಿಯಲ್ಲಿ ಭೌಗೋಳಿಕ ಸೂಚಕವಾಗಿ ನೋಂದಾಯಿಸಬಹುದು. ನೋಂದಾವಣೆಯ ನಂತರ ಇತರರು ಆ ಭೌಗೋಳಿಕ ಸೂಚಕವನ್ನು ತಮ್ಮ ಉತ್ಪನ್ನವನ್ನು ಮಾರಾಟಮಾಡಲು ಬಳಸಿಕೊಂಡಲ್ಲಿ ಅಥವಾ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಲ್ಲಿ ಅಂಥವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬಹುದು. ಭೌಗೋಳಿಕ ಸೂಚಕದ ನೋಂದಾವಣೆಯ ನಂತರ ಇತರ ವ್ಯಕ್ತಿಗಳು ಅಥವಾ ಸಂಸ್ಥೆಗಳು ಆ ಸೂಚಕದ ‘ಅಧಿಕೃತ ಬಳಕೆ’ಗೆ ಬೇಕಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯವಾಗಿ ಭೌಗೋಳಿಕ ಸೂಚಕದ ಸಂರಕ್ಷಣೆಯ ಅವಧಿ ೧೦ ವರ್ಷಗಳು ಹಾಗೂ ಅದನ್ನು ಎಷ್ಟು ಸಾರಿ ಬೇಕಾದರೂ ನವೀಕರಿಸಿಕೊಳ್ಳಬಹುದು.

.ಪೇಟೆಂಟ್‌ಗಳ ಅಧಿನಿಯಮ, ೧೯೭೦ (೧೯೯೯, ೨೦೦೨ ಮತ್ತು ೨೦೦೫ರಲ್ಲಿ ತಿದ್ದುಪಡಿಯಾದಂತೆ) (Patents Act 1970 [amended in 1999, 2002 and 2005]):

೧ನೇ ಜನವರಿ ೨೦೦೫ ರಂದು ತಿದ್ದುಪಡಿಯಾದ ಪೇಟೆಂಟ್ಸ್ ಅಧಿನಿಯಮ ಜಾರಿಗೆ ಬಂದಿತು. ಪೇಟೆಂಟ್‌ಗಳ ವಿವರಣೆಗೆ ಪುಟ ೧೦ ನೋಡಿ. ಭಾರತದಲ್ಲಿ ಪೇಟೆಂಟ್‌ಗಳನ್ನು ೧೯೭೦ರ ಪೇಟೆಂಟ್‌ಗಳ ಅಧಿನಿಯಮದಂತೆ ನೀಡಲಾಗುತ್ತದೆ ಹಾಗೂ ಪಡೆಯಲಾಗುತ್ತದೆ. ೧೯೯೪ರ ಟ್ರಿಪ್ಸ್‌ಒಪ್ಪಂದ ತನ್ನ ಸದಸ್ಯ ರಾಷ್ಟ್ರಗಳು ತಮ್ಮ ಪೇಟೆಂಟ್‌ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕೆಂದು ಬಯಸಿತು. ಅದರಂತೆ ಭಾರತ ಸರ್ಕಾರ ತನ್ನ ಪೇಟೆಂಟ್‌ಅಧಿನಿಯಮವನ್ನು ೧೯೯೯ರಿಂದ ಮೂರು ಸಾರಿ ತಿದ್ದುಪಡಿ ಮಾಡಿದ.