ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಧಾನಗಳು

ಪ್ರ: ಬೌದ್ಧಿಕ ಆಸ್ತಿ ಹಕ್ಕು, ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದಗಳು ಯಾವುವು? ಅವುಗಳಲ್ಲಿ ಭಾರತದ ಮೇಲೆ ಪರಿಣಾಮ ಬೀರುವಂಥವು ಯಾವುವು?

: ಭಾರತವು ಸಸ್ಯಗಳ ಹೊಸತಳಿಗಳ ಸಂರಕ್ಷಣೆಗೆ ಅಂತರರಾಷ್ಟ್ರೀಯ ಒಕ್ಕೂಟ (UPOV) ಮತ್ತು ವಿಶ್ವ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆಯ (WIPO) ಪೇಟೆಂಟ್‌ಕಾನೂನು ಒಪ್ಪಂದಗಳನ್ನು ಹೊರತುಪಡಿಸಿದಲ್ಲಿ ಈ ಕೆಳಗೆ ಪಟ್ಟಿಮಾಡಲಾಗಿರುವ ಎಲ್ಲಾ ಒಪ್ಪಂದಗಳಿಗೆ ಸದಸ್ಯ ರಾಷ್ಟ್ರವಾಗಿದೆ.

ಬೌದ್ಧಿಕ ಆಸ್ತಿ ಹಕ್ಕುಗಳು, ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದಗಳು ಈ ಮುಂದಿನಂತಿವೆ:

. ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆ, ೧೯೯೨ (Convention on Biological Diversity [CBD]):

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಭಾಗವಾಗಿರುವ ಇದು ೧೯೯೨ರಲ್ಲಿ ರಿಯೋ ಡಿ ಜನೇರೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮಾವೇಶದಲ್ಲಿ ಜಾಗತಿಕ ನಾಯಕರು ಅಳವಡಿಸಿಕೊಂಡ ಒಂದು ಪ್ರಮುಖ ಒಪ್ಪಂದವಾಗಿದೆ. ‘ಭೂ ಶೃಂಗ ಸಭೆ’ ಎಂದು ಪ್ರಖ್ಯಾತವಾಗಿರುವ ಈ ಸಮಾವೇಶದಲ್ಲಿ ಮೊಟ್ಟಮೊದಲಬಾರಿಗೆ ಪರಿಸರ ಮತ್ತು ಅಭಿವೃದ್ಧಿಯ ವಿಷಯಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ತರಲಾಯಿತು. ಈ ಒಡಂಬಡಿಕೆ ೧೯೯೩ರ ಡಿಸೆಂಬರ್ ನಲ್ಲಿ ಜಾರಿಗೆ ಬಂದಿತು ಹಾಗೂ ಇದನ್ನು ಯೂರೋಪಿಯನ್‌ಸಮುದಾಯ ಮತ್ತು ೧೭೬ ದೇಶಗಳು ಅನುಸಮರ್ಥಿಸಿವೆ.

ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆಯ ಮುಖ್ಯ ಧ್ಯೇಯೋದ್ದೇಶಗಳು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ಬಳಕೆಯಿಂದ ಸಿಗುವ ಲಾಭದ ಸಮಾನ ಹಂಚಿಕೆಯಾಗಿವೆ. ಇದು ಜೈವಿಕ ವೈವಿಧ್ಯತೆಯನ್ನು  ಸಮಗ್ರವಾಗಿ ಪರಿಗಣಿಸಿರುವ ಮೊಟ್ಟಮೊದಲ ಜಾಗತಿಕ ಒಪ್ಪಂದವಾಗಿದೆ.

. ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದದ ವ್ಯಾಪಾರ ಸಂಬಂಧಿ ವಿಷಯಗಳು (ಟ್ರಿಪ್ಸ್), ೧೯೯೪ (Trade-Related Aspects of Intellectual Property Rights Agreement, 1994 [TRIPS]):

‘ಟ್ರಿಪ್ಸ್‌’ ಒಪ್ಪಂದವು ವಿಶ್ವ ವಾಣಿಜ್ಯ ಸಂಸ್ಥೆಯ (WTO) ಭಾಗವಾಗಿದೆ.

ವಿಶ್ವ ವಾಣಿಜ್ಯ ಸಂಸ್ಥೆ: ವಿಶ್ವ ವಾಣಿಜ್ಯ ಸಂಸ್ಥೆಯನ್ನು ‘ವಿಶ್ವ ವಾಣಿಜ್ಯ ಸಂಸ್ಥೆಯ ಸ್ಥಾಪನೆಯ ಮಾರ್ರ‍ಕೇಶ್‌ಒಪ್ಪಂದ’ದ ಮೂಲಕ ೧೯೯೪ರಲ್ಲಿ ರಚಿಸಲಾಯಿತು. ವಿಶ್ವ ವಾಣಿಜ್ಯ ಸಂಸ್ಥೆಯು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳೊಂದಿಗೆ ವ್ಯವಹರಿಸುವ ಏಕೈಕ ಸಂಸ್ಥೆಯಾಗಿದೆ. ಟ್ರಿಪ್ಸ್‌ಒಳಗೊಂಡಂತೆ ಹಲವಾರು ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದಗಳಿಗೆ ಬಹುಪಾಲು ದೇಶಗಳು ಸಹಿಹಾಕಿವೆ. ಉತ್ಪಾದಕರ, ವ್ಯಾಪಾರಿಗಳ, ವಸ್ತು ಮತ್ತು ಸೇವೆಗಳ ರಫ್ತು ಹಾಗೂ ಆಮದುದಾರರಿಗೆ ಸೌಲಭ್ಯ ಸವಲತ್ತುಗಳನ್ನು ಒದಗಿಸಿಕೊಡುವುದು ವಿಶ್ವ ವಾಣಿಜ್ಯ ಸಂಸ್ಥೆಯ ಉದ್ದೇಶವಾಗಿದೆ. ವಿಶ್ವ ವಾಣಿಜ್ಯ ಸಂಸ್ಥೆ ಎರಡನೇ ವಿಶ್ವಯುದ್ಧದ ಅಂತ್ಯದಲ್ಲಿ ರಚಿತವಾದ ಗ್ಯಾಟ್‌ನ (General Agreement on Tariffs and Trade [GATT]) ಮುಂದುವರಿದ ಭಾಗವಾಗಿದೆ.

ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದದ ವ್ಯಾಪಾರ ಸಂಬಂಧಿ ವಿಷಯಗಳು (ಟ್ರಿಪ್ಸ್): ಇದು ಒಂದು ಬೌದ್ಧಿಕ ಆಸ್ತಿ ಹಕ್ಕುಗಳ ಬಗೆಗಿನ ಅಂತರರಾಷ್ಟ್ರೀಯ ನಿಯಮಗಳನ್ನು ರಚಿಸುವ ಒಪ್ಪಂದವಾಗಿದ್ದು ೧೯೯೫ರಲ್ಲಿ ಜಾರಿಗೆ ಬಂದಿತು. ಇದು ಎಲ್ಲಾ ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ಟ್ರಿಪ್ಸ್‌ನ ರಚನೆಯಿಂದ ಮೊಟ್ಟಮೊದಲಬಾರಿಗೆ ಬೌದ್ಧಿಕ ಆಸ್ತಿಹಕ್ಕುಗಳ ನಿಯಮಗಳನ್ನು ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಲ್ಲಿ ಅಳವಡಿಸಲಾಯಿತು. ಇದನ್ನು ಕೆಲವು ಸಾರಿ ವಿಶ್ವ ವಾಣಿಜ್ಯ ಸಂಸ್ಥೆಯ ಮೂರು ಆಧಾರ ಸ್ತಂಭಗಳಲ್ಲೊಂದು  ಎಂದು ಕರೆಯಲಾಗುತ್ತದೆ. ಇನ್ನೆರಡು ಆಧಾರ ಸ್ತಂಭಗಳೆಂದರೆ, ವಸ್ತುಗಳ ವ್ಯಾಪಾರ ಮತ್ತು ಸೇವೆಗಳ ವ್ಯಾಪಾರ.

ಟ್ರಿಪ್ಸ್ ಅಂತರರಾಷ್ಟ್ರೀಯವಾಗಿ ಸ್ವೀಕೃತವಾಗಿರುವ ಪೇಟೆಂಟ್‌ಗಳು, ಕಾಪಿರೈಟ್‌ಗಳು, ಟ್ರೇಡ್‌ಮಾರ್ಕ್‌‌ಗಳು, ಭೌಗೋಳಿಕ ಸೂಚಕಗಳು, ಕೈಗಾರಿಕಾ ವಿನ್ಯಾಸಗಳು ಮತ್ತು ಕೈಗಾರಿಕಾ ರಹಸ್ಯಗಳಂತಹ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಳಗೊಂಡಿದೆ ಹಾಗೂ ಅದು ಜೈವಿಕ ಸಂಪನ್ಮೂಲಗಳನ್ನೊಳಗೊಂಡಂತೆ ವ್ಯಾಪಾರ ಮತ್ತು ತಂತ್ರಜ್ಞಾನದ ಕ್ಷೇತ್ರಗಳಿಗೆ ಅನ್ವಯಿಸುತ್ತದೆ.

ವಿಶ್ವದಾದ್ಯಂತವಿರುವ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಗಳನ್ನು ನಿಯಂತ್ರಿಸಿ ಸಾಮರಸ್ಯಗೊಳಿಸುವುದು ಟ್ರಿಪ್ಸ್‌ನ ಒಟ್ಟಾರೆ ಉದ್ದೇಶವಾಗಿದೆ. ವಿವಿಧ ರಾಷ್ಟ್ರಗಳ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಗಳು ಪರಸ್ಪರ ಸಂಘರ್ಷಕ್ಕಿಳಿಯದಂತೆ ಒಂದು ಪೂರ್ವ ನಿರ್ಧಾರಿತ ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಒಂದು ಕನಿಷ್ಠ ಮಾನಕದಡಿಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಅದು ಬಯಸುತ್ತದೆ. ಅದಕ್ಕಾಗಿ ಟ್ರಿಪ್ಸ್‌ಒಪ್ಪಂದವು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಹೇಗೆ ಸೂಕ್ತ ರಕ್ಷಣೆ ಒದಗಿಸಬೇಕು; ದೇಶಗಳು ಆ ಹಕ್ಕುಗಳನ್ನು ಹೇಗೆ ಜಾರಿಗೆ ತರಬೇಕು; ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳ  ನಡುವೆ ಏರ್ಪಡುವ ಬೌದ್ಧಿಕ ಆಸ್ತಿ ಹಕ್ಕು ಸಂಬಂಧಿತ ತಕರಾರುಗಳನ್ನು ಹೇಗೆ ಬಗೆಹರಿಸಬೇಕಲು. ಹಾಗೂ ಟ್ರಿಪ್ಸ್‌ನ ಅವಶ್ಯಕತೆಗಳಿಗನುಗುಣವಾಗಿ ಬೌದ್ಧಿಕ ಆಸ್ತಿ ಹಕ್ಕಿನ ವ್ಯವಸ್ಥೆಯನ್ನು ಪರಿಚಯಿಸುವ ರಾಷ್ಟ್ರಗಳಿಗೆ ಪ್ರಾರಂಭಿಕ ಸೌಲಭ್ಯ, ಬೆಂಬಲ ಒದಗಿಸುವುದು ಮುಂತಾದುವನ್ನು ತನ್ನ ವ್ಯಾಪ್ತಿಯೊಳಗೆ ಹೊಂದಿದೆ.

. ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ, ೨೦೦೧ (International Treaty on Plant Genetic Resources for Food and Agriculture, 2001 [ITPGR]):

ಈ ಒಪ್ಪಂದವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯಡಿ ಬರುತ್ತದೆ. ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ ಅಥವಾ ‘ಬೀಜ ಒಪ್ಪಂದ’ ೨೦೦೪ರಲ್ಲಿ ಜಾರಿಗೆ ಬಂದಿತು. ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಮತ್ತು ಅದರ ಬಳಕೆಯಿಂದ ಲಭಿಸುವ ಲಾಭಾಂಶಗಳ ಸಮಾನಾಂತರ ಹಂಚಿಕೆ ಈ ಒಪ್ಪಂದದ ಉದ್ದೇಶವಾದರೆ ಆಹಾರ ಸುರಕ್ಷತೆ ಮತ್ತು ಸುಸ್ಥಿರ ಕೃಷಿಯ ಸಾಧನೆ ಇದರ ಒಟ್ಟಾರೆ ಉದ್ದೇಶ.  ಇದನ್ನು ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆಯ ಉದ್ದೇಶಗಳಿಗೆ ಸರಿಸಮಾನಾಂತರವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಒಪ್ಪಂದವು ಆಹಾರ ಮತ್ತು ಕೃಷಿ ಮೌಲ್ಯವುಳ್ಳ ಸಸ್ಯ ಆನುವಂಶಿಕ ವಸ್ತುವಿನ ಬಹುಪಕ್ಷೀಯ ವಿನಿಮಯದ (ಅಂದರೆ ವಿವಿಧ ರಾಷ್ಟ್ರಗಳ ನಡುವಿನ ವಿನಿಮಯ) ಬಗ್ಗೆ ವ್ಯವಹರಿಸುತ್ತದೆ.

. ಪೇಟೆಂಟ್‌ಸಹಕಾರ ಒಪ್ಪಂದ, ೧೯೭೦ ಮತ್ತು ಪೇಟೆಂಟ್‌ಕಾನೂನು ಒಪ್ಪಂದ, ೨೦೦೦ (Patent Cooperation Treaty [1970] and Patent Law Treaty [2000]):

ಈ ಒಪ್ಪಂದಗಳು ವಿಶ್ವ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆ (WIPO) ಯಡಿ ಬರುತ್ತವೆ. ಈ ಸಂಸ್ಥೆಯು ಸ್ವಿಟ್ಜರ್ ಲ್ಯಾಂಡ್‌ನ ಜಿನೀವಾದಲ್ಲಿದ್ದು ಅದನ್ನು ವಿಶ್ವಸಂಸ್ಥೆ ವ್ಯವಸ್ಥೆಯ ಒಂದು ವಿಶೇಷ ಏಜೆನ್ಸಿಯೆಂದು ಗುರುತಿಸಲಾಗಿದೆ. ೨೩ ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದಗಳ ನಿರ್ವಹಣೆ, ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದಗಳ ಸಂಧಾನಕ್ಕಾಗಿ ವೇದಿಕೆ ಒದಗಿಸುವುದು, ಸರ್ಕಾರಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ತಾಂತ್ರಿಕ ಮತ್ತು ಕಾನೂನು ಸಹಾಯ ಒದಗಿಸುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಪರಿವೀಕ್ಷಣೆ ಮಾಡುವುದು ಮತ್ತು ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ನಿಯಮಗಳನ್ನು ಸಮನ್ವಯಗೊಳಿಸುವಲ್ಲಿ ಸಹಕಾರ ನೀಡುವುದು ಇವೇ ಕೆಲವು ವಿಶ್ವ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆಯ ಯಾವುದೇ ಕಾನೂನುಗಳನ್ನು ಮಾಡುವುದಿಲ್ಲ. ಬದಲಿಗೆ ಅದು ವಿಧಾನಗಳನ್ನು ಮುಂದಿಡುತ್ತದೆ. ಕಾನೂನು ಬದ್ಧತೆಯ ಅನುಸರಣೆಯನ್ನು ಹೇರುವ ಮತ್ತು ಒಂದೇ ಜಾಗತಿಕ ಬೌದ್ಧಿಕ ಆಸ್ತಿ ಹಕ್ಕಿನ ಒಪ್ಪಂದವಾಗಿರುವ ಟ್ರಿಪ್ಸ್‌ನ ಜಾರಿಯ ನಂತರ ವಿಶ್ವ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆಯ ಪಾತ್ರ ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ಅದು ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ. ಅದು ನಿರ್ವಹಿಸುವ ೨೩ ಅಂತರರಾಷ್ಟ್ರೀಯ  ಬೌದ್ಧಿಕ ಆಸ್ತಿ ಹಕ್ಕು ಒಪ್ಪಂದಗಳಲ್ಲಿ ಈ ಚರ್ಚೆಗೆ ಮುಖ್ಯವಾಗಿರುವವೆಂದರೆ,

  • ಬೌದ್ಧಿಕ ಆಸ್ತಿ ಮತ್ತು ಆನುವಂಶಿಕ ಸಂಪನ್ಮೂಲಗಳು, ಸಾಂಪ್ರದಾಯಕ ಜ್ಞಾನ ಹಾಗೂ ಜಾನಪದದ ಮೇಲಿನ ಅಂತರ ಸರ್ಕಾರ ಸಮಿತಿ (೨೦೦೦)
  • ಪೇಟೆಂಟ್‌ಸಹಕಾರ ಒಪ್ಪಂದ (೧೯೭೯)
  • ಪೇಟೆಂಟ್‌ಕಾನೂನು ಒಪ್ಪಂದ (೨೦೦೦)

. ಸಸ್ಯಗಳ ಹೊಸ ತಳಿಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಡಂಬಡಿಕೆ, ೧೯೬೧, ಪರಿಷ್ಕೃತ ೧೯೭೨, ೧೯೭೮ ಮತ್ತು ೧೯೯೧) (International Converntion for the Protection of New Varieties of Plants [UPOV], 1961, revised in 1972, 1978 and 1991)

ಸಸ್ಯಗಳ ಹೊಸತಳಿಗಳ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು ಒಂದು ಅಂತರಸರ್ಕಾರಗಳ ಸಂಸ್ಥೆಯಾಗಿದ್ದು ಸ್ವಿಟ್ಜರ್ ಲ್ಯಾಂಡ್‌ನ ಜಿನೀವಾದಲ್ಲಿ ತನ್ನ ಕಚೇರಿಯನ್ನು ಹೊಂದಿದೆ. ಇದನ್ನೇ ೧೯೯೧ರಲ್ಲಿ ಅಸ್ತಿತ್ವಕ್ಕೆ ಬಂದ ಸಸ್ಯಗಳ ಹೊಸ ತಳಿಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಡಂಬಡಿಕೆ ಎಂದೂ ಕರೆಯುತ್ತಾರೆ. ಸಸ್ಯಗಳ ಹೊಸ ತಳಿಗಳ ಸಂರಕ್ಷಣೆಗಾಗಿ ಇರುವ ಏಕೈಕ ಅಂತರಸರ್ಕಾರಗಳ ಸಂಸ್ಥೆ ಇದಾಗಿದೆ. ಸಸ್ಯ ತಳಿ ಸಂವರ್ಧಕರ ಹಕ್ಕುಗಳೆಂಬ (ನೋಡಿ ಪ್ರಶ್ನೆ ೨.೧೨) ಒಂದು ವಿಧದ ಬೌದ್ಧಿಕ ಆಸ್ತಿ ಹಕ್ಕಿನ ಮೂಲಕ ಇದು ಸಸ್ಯ ತಳಿ ಸಂವರ್ಧಕರ ಹಕ್ಕುಗಳನ್ನು ಕಾಪಾಡುತ್ತದೆ.

ಹೊಸ ತಳಿಗಳ ಅಭಿವೃದ್ಧಿಯನ್ನು  ಪ್ರೋತ್ಸಾಹಿಸಲು, ಸಸ್ಯ ತಳಿ ಸಂರಕ್ಷಣೆಗೆ ಒಂದು ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಭಾರತ ಈ ಒಕ್ಕೂಟದ ಸದಸ್ಯತ್ವಕ್ಕಗಿ ೨೦೦೨ರಲ್ಲೇ ಅರ್ಜಿ ಸಲ್ಲಿಸಿದೆ. ಆದರೆ ಹಲವಾರು ಸಂಘ ಸಂಸ್ಥೆಗಳು ಇದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿ ಆ ಅರ್ಜಿಯನ್ನು ತಡೆಹಿಡಿದಿವೆ. ಇದು ಭಾರತೀಯ ರೈತರ ಹಿತಾಸಕ್ತಿಗೆ ಹಾಗೂ ಆಹಾರ ಸುರಕ್ಷಿತತೆಗೆ ವಿರುದ್ಧವಾಗಿದೆ ಎಂಬುದು ಈ ಪ್ರತಿಭಟನೆಗಳಿಗೆ ಕಾರಣವಾಗಿದೆ.