ಪ್ರ. .: ಜೈವಿಕ ಚೌರ್ಯದ ವಿರುದ್ಧ ಯಶಸ್ವಿಯಾಗಿ ಹೋರಾಡಿರುವ ಯಾವುದಾದರೂ ಸ್ಥಳೀಯ ಸಮುದಾಯಗಳ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಉದಾಹರಣೆಗಳು ಇವೆಯೆ?

: ಜೈವಿಕ ಚೌರ್ಯವನ್ನು ಯಶಸ್ವಿಯಾಗಿ ತಡೆದಿರುವ ಹಲವಾರು ಉದಾಹರಣೆಗಳಿವೆ. ಆದರೆ ಅಂತಹ ಉದಾಹರಣೆಗಳು ಬೂದಿಯಲ್ಲಿ ಮುಚ್ಚಿದ ಕೆಂಡಗಳಂತಿದ್ದು ಅಲ್ಲೊಂದು ಇಲ್ಲೊಂದು ಕಾಣುತ್ತವಷ್ಟೆ. ಜೈವಿಕ ಚೌರ್ಯವನ್ನು ತಡೆಯಲು ನಿರಂತರ ಪರಿವೀಕ್ಷಣೆ, ದೃಢ ರಾಜಕೀಯ ಶಕ್ತಿ, ಬಹಳಷ್ಟು ಹಣ, ಸಮಯ ಮತ್ತು ತಜ್ಞತೆ ಬೇಕಾಗುತ್ತದೆ. ಇವುಗಳ ಅವಶ್ಯಕತೆಯನ್ನು ಈ ಮುಂದಿನ ಬೇವಿನ ಉದಾಹರಣೆ ಎತ್ತಿ ತೋರಿಸುತ್ತಿದೆ. ಆದರೆ ಇಡೀ ವ್ಯವಸ್ಥೆಯಲ್ಲಿನ ಬದಲಾವಣೆ ಹಾಗೂ ಜೈವಿಕ ಚೌರ್ಯ ಅಸಾಧ್ಯವಾಗುವಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯನೀತಿಗಳಲ್ಲಿ ವ್ಯವಸ್ಥಿತ ಬದಲಾವಣೆಯಾಗಬೇಕು. ಅಂತಹ ಕಾರ್ಯನೀತಿಗಳು ಜಾರಿಗೆ ಬರಲು ಸಾಂಸ್ಥಿಕ ಪರಿವೀಕ್ಷಣಾ ವ್ಯವಸ್ಥೆಯ ರಚನೆಯಾಗಬೇಕು. ಜೈವಿಕ ಚೌರ್ಯವನ್ನು ಯಶಸ್ವಿಯಾಗಿ ತಡೆಗಟ್ಟಿರುವ ಕೆಲವು ಉದಾಹರಣೆಗಳನ್ನು ಈ ಮುಂದೆ ನೀಡಲಾಗಿದೆ.

ಸಿಂಜೆಂಟ ಇಂಡಿಯಾ: ೨೦೦೨ರಲ್ಲಿ ಸ್ವಿಟ್ಜರ್ ಲ್ಯಾಂಡ್‌ನ ಜಾಗತಿಕ ಕೃಷಿ ಉದ್ಯಮ ಕಂಪೆನಿಯಾದ ಸಿಂಜೆಂಟಾ ಎ.ಜಿ.ಯ ಅಂಗಸಂಸ್ಥೆಯಾದ ಸಿಂಜೆಂಟ ಇಂಡಿಯಾ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದೊಂದಿಗೆ ನೂರಾರು ಸಾಂಪ್ರದಾಯಕ ಭತ್ತದ ತಳಿಗಳ ಅಧ್ಯಯನಕ್ಕೆ ಒಪ್ಪಂದವೊಂದನ್ನು ಮಾಡಿಕೊಂಡಿತು. ಸಿಂಜೆಂಟಾದ ಆಸಕ್ತಿ ಭತ್ತದ ಬಗೆಗಿನ ಸಂಶೋಧನೆ, ಬಿತ್ತನೆ ಬೀಜಗಳ ಉತ್ಪಾದನೆ ಹಾಗೂ ಮಾರಾಟವಾಗಿತ್ತು.

ಸಾಂಪ್ರದಾಯಕ ಭತ್ತದ ತಳಿಗಳ ಬೀಜಗಳನ್ನು ಭತ್ತದ ವಿಜ್ಞಾನಿ ಹಾಗೂ ಕೇಂದ್ರ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ರಿಚಾರಿಯಾರವರು ೧೯೭೧ರಿಂದಲೇ ಸಂಗ್ರಹಿಸಿದ್ದರು. ಅವರು ಅವುಗಳನ್ನು ಆದಿವಾಸಿ ರೈತರಿಂದ, ಮಧ್ಯಪ್ರದೇಶದ (ಈತಿನ ಚತ್ತೀಸ್‌ಗಡ್‌) ಕೃಷಿ ಇಲಾಖೆಯ ಕಾರ್ಯಕರ್ತರಿಂದ ಸಂಗ್ರಹಿಸಿದ್ದರು. ಆ ಸಂಗ್ರಹವನ್ನು ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಸಣ್ಣ ಕೋಣೆಯೊಂದರಲ್ಲಿ ಇರಿಸಲಾಗಿತ್ತು. ರೈತ ಸಮುದಾಯ ತಲೆತಲೆಮಾರುಗಳಿಂದ ಪೋಷಿಸಿಕೊಂಡು ಬಂದಿದ್ದ ನೂರಾರು ಭತ್ತದ ತಳಿಗಳನ್ನು ಡಾ. ರಿಚಾರಿಯಾ ಸಂಗ್ರಹಿಸಿದ್ದರು ಹಾಗೂ ಅವುಗಳಿಂದ ಪಡೆಯಲಾಗುವ ಸುಧಾರಿತ ತಳಿಗಳನ್ನು ಅವರಿಗೇ ಹಿಂದಿರುಗಿಸುವ ಮೌಖಿಕ ಒಪ್ಪಂದವೂ ಆಗಿತ್ತು. ೨೦೦೨ರ ಹೊತ್ತಿಗೆ ಆ ಸಂಗ್ರಹದಲ್ಲಿ ೨೦೦ ಸುವಸಿತ ಭತ್ತದ ತಳಿಗಳು ಹಾಗೂ ೨೩,೦೦೦ ವಿಭೇದಗಳು ಇದ್ದವು.

ಸಿಂಜೆಂಟಾ ಆ ಸಂಗ್ರಹವನ್ನು ಬಳಸಿ ಅಭಿವೃದ್ಧಿಪಡಿಸುವ ತಳಿಗಳನ್ನು ಪೇಟೆಂಟ್‌ಮಾಡುತ್ತದೆ ಹಾಗೂ ರೈತರಿಂದ ಸಂಗ್ರಹಿಸಿದ ಜ್ಞಾನಭಂಡಾರವನ್ನು ಒಂದು ಬಹುರಾಷ್ಟ್ರೀಯ ಕಂಪೆನಿಗೆ ನೀಡಲಾಗುತ್ತದೆ ಎಂಬುದನ್ನು ತಿಳಿದ ಸಾರ್ವಜನಿಕರು ಪ್ರತಿಭಟನೆ, ಒತ್ತಡ ತಂದನಂತರ ಸಿಂಜೆಂಟಾ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಸಿಂಜೆಂಟಾದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಇಂದಿರಾಗಾಂಧಿಕೃಷಿ ವಿಶ್ವವಿದ್ಯಾನಿಲಯ ಭಾರತ ಕೃಷಿ ಸಂಶೋಧನಾ ಸಂಸ್ಥೆ ಅಥವಾ ರಾಷ್ಟ್ರೀಯ ಸಸ್ಯ ಆನುವಂಶಿಕ ಸಂಪನ್ಮೂಲ ಬ್ಯೂರೋದಂತಹ ರಾಷ್ಟ್ರೀಯ ಪ್ರಾಧಿಕಾರಗಳ ಸಲಹೆ ಪಡೆದಿರಲಿಲ್ಲವೆಂಬುದೂ ತಿಳಿಯಿತು. ಜೈವಿಕ ಸಂಪನ್ಮೂಲಗಳ ಮೇಲೆ ಹಾಗೂ ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲೆ ಸಾಮುದಾಯಕ ಸ್ವಾಮ್ಯದ ಅವಶ್ಯಕತೆ ಇದೆಯೆಂಬುದನ್ನು ಈ ಘಟನೆ ಒತ್ತಿ ಹೇಳುತ್ತದೆ. ಅಲ್ಲದೆ ಜೈವಿಕ ಚೌರ್ಯವನ್ನು ತಡೆಯಲು ರಾಷ್ಟ್ರೀಯ ಸಂಸ್ಥೆಗಳು ಸನ್ನದ್ಧವಾಗಿಲ್ಲ ಎಂಬುದನ್ನೂ ಈ ಘಟನೆ ತೋರಿಸುತ್ತದೆ.

ಬೇವಿನ ಮೇಲಿನ ಯು.ಎಸ್‌.ಡಿ.. ಮತ್ತು ಡಬ್ಲ್ಯು.ಆರ್ . ಗ್ರೇಸ್‌ರವರ ಪೇಟೆಂಟ್‌: ನೂರಾರು ವರ್ಷಗಳಿಂದ ಭಾರತದಲ್ಲಿ ಸಾಂಪ್ರದಾಯಕ ಔಷಧವಾಗಿ ಹಾಗೂ ಕೀಟನಾಶಕವಾಗಿ ಬಳಸಲಾಗುತ್ತಿರುವ ಬೇವಿನ ಮೇಲಿನ ಪೇಟೆಂಟ್‌ಸಂಖ್ಯೆ. ೪೩೬೨೫೭ ಅನ್ನು ಯೂರೋಪಿಯನ್‌ಪೇಟೆಂಟ್‌ಕಚೇರಿಯು ೨೦೦೫ರ ಮಾರ್ಚ್‌‌ನಲ್ಲಿ ರದ್ದುಗೊಳಿಸಿತು. ಇದಕ್ಕಾಗಿ ೧೦ ವರ್ಷಗಳ ಸುದೀರ್ಘ ಕಾನೂನು ಸಮರ ನಡೆಸಬೇಕಾಯಿತು. ಬೇವಿನ ಪೇಟೆಂಟನ್ನು ಯೂರೋಪಿಯನ್‌ಪೇಟೆಂಟ್‌ಕಚೇರಿಯು ೧೯೯೪ರಲ್ಲಿ ಯುನೈಟೆಡ್‌ಸ್ಟೇಟ್ಸ್ ಡಿಪಾರ್ಟ್‌‌ಮೆಂಟ್‌ಆಫ್‌ಅಗ್ರಿಕಲ್ಚರ್ (ಯು.ಎಸ್‌.ಡಿ.ಎ) ಮತ್ತು ನ್ಯೂಯಾರ್ಕ್‌‌ನ ಬಹುರಾಷ್ಟ್ರೀಯ ಕೃಷಿ ಉದ್ಯಮ ಕಾರ್ಪೊರೇಶನ್‌ಆಗಿದ್ದ ಡಬ್ಲ್ಯು.ಆರ್.ಗ್ರೇಸ್‌ರವರಿಗೆ ನೀಡಿತ್ತು. ಸಸ್ಯ ಶಿಲೀಂಧ್ರದ ನಿಯಂತ್ರಣಕ್ಕೆ ಜಲಅಪಕರ್ಷಕ ಬೇವಿನ ತೈಲದ ಸಾರದ ಬಳಕೆಯ ವಿಧಾನಕ್ಕೆ ಈ ಪೇಟೆಂಟ್‌ನೀಡಲಾಗಿತ್ತು. ೧೯೯೫ರಲ್ಲಿ ಡಾ. ವಂದನಾ ಶಿವ (ರೀಸರ್ಚ್‌ಫೌಂಡೇಶನ್‌ಫಾರ್ ಸೈನ್ಸ್‌, ಟೆಕ್ನಾಲಜಿ ಅಂಡ್‌ಇಕಾಲಜಿ), ಮಿಸ್‌. ಮ್ಯಾಗ್ಡಾ ‘ಏಲ್ವೋಟ್‌’ (ಯೂರೋಪಿಯನ್‌ಪಾರ್ಲಿಮೆಂಟ್‌ನಲ್ಲಿನ ‘ಗ್ರೀನ್‌ಗ್ರೂಪ್‌’) ಹಾಗೂ ಮಿಸ್‌ಲಿಂಡಾ ಬುಲ್ಲರ್ಡ್‌(ಇಂಟರ್ ನ್ಯಾಷನಲ್‌ಫೆಡರೇಶನ್‌ಆಪ್‌ಆರ್ಗ್ಯಾನಿಕ್‌ಅಗ್ರಿಕಲ್ಚರ್ ಮೂವ್‌ಮೆಂಟ್ಸ್) ಇವರು ಮೂವರೂ ಜಂಟಿಯಾಗಿ ಪೇಟೆಂಟ್‌ವಿರೋಧಿಸುವ ಕಾನೂನು ದಾವೆ ಹೂಡಿದರು. ಈ ಕಾನೂನು ಸಮರವನ್ನು ಬೆಂಬಲಿಸುವ ಯಾವುದೇ ಕಾರ್ಯವನ್ನು ಭಾರತ ಸರ್ಕಾರ ಮಾಡಲಿಲ್ಲ. ಪೇಟೆಂಟ್‌ಅನ್ನು ೨೦೦೦ದಲ್ಲಿ ರದ್ದುಗೊಳಿಸಲಾಯಿತು. ಆದರೆ ಯು.ಎಸ್‌.ಡಿ.ಎ.ಮತ್ತು ಡಬ್ಲ್ಯು.ಆರ್.ಗ್ರೇಸ್‌ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಈ ಪ್ರಕರಣ ೨೦೦೫ರವರೆಗೆ ನಡೆದು ಕೊನೆಗೂ ಆ ಪೇಟೆಂಟ್‌ರದ್ದಾಯಿತು. ಈ ಪ್ರಕರಣ ಬೇವಿನ ಒಂದು ನಿರ್ದಿಷ್ಟ ಪೇಟೆಂಟ್‌ಗೆ ಮಾತ್ರ ಸಂಬಂಧಿಸಿದ್ದು. ಆದರೆ ಸಾಂಪ್ರದಾಯಕ ಬೇವಿನ ಬಳಕೆಯ ವಿಧಾನಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿ ಅವುಗಳನ್ನು ಅಮೆರಿಕಾದಲ್ಲಿ ಪೇಟೆಂಟ್‌ಮಾಡಿರುವ ಹತ್ತು ಹಲವಾರು ಉದಾಹರಣೆಗಳಿವೆ. ಆರ್ಥಿಕ ಸಂಪನ್ಮೂಲವಿಲ್ಲದೆ ಪ್ರತಿಯೊಂದು ಪೇಟೆಂಟನ್ನೂ ಕಾನೂನಿನ ಮೂಲಕ ವಿರೋಧಿಸುವುದು ಸಾಧ್ಯವಿಲ್ಲ. ಹಾಗಾಗಿ ಇದು ಒಂದು ಸೀಮಿತ ಜಯ ಮಾತ್ರ ಹಾಗೂ ಜೈವಿಕ ಚೌರ್ಯದ ಸಮಸ್ಯೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ತೋರಿಸುತ್ತದೆ.

ಮ್ಯಾನ್ಸಾಂಟೋದ ನ್ಯಾಪ್ ಹಾಲ್‌ಗೋಧಿಯ ತಳಿ: ಗ್ರೀನ್‌ಪೀಸ್‌ಸಂಘಟನೆಯ ಬೆಂಬಲದಿಂದ ಭಾರತೀಯ ರೈತರು ಮಾನ್ಸೊಂಟೋದ ತನ್ನ ‘ನ್ಯಾಪ್‌ಹಾಲ್‌’ ಗೋಧಿ ತಳಿಯ ಮೇಲಿನ ಪೇಟಂಟನ್ನು (EP445929 ಯಶಸ್ವಿಯಾಗಿ ವಿರೋಧಿಸಿ, ಪ್ರತಿಭಟಿಸಿದರು. ಗೋಧಿಯಲ್ಲಿನ ಬೇಯಿಸುವ ಒಂದು ವಿಶೇಷ ಗುಣವನ್ನು ಕಂಡು ಹಿಡಿದಿರುವುದಾಗಿ ಮಾನ್ಸೊಂಟೊ ಹೇಳಿಕೊಂಡಿತ್ತು. ಭಾರತೀಯ ರೈತರು ಹಾಗೂ ಗ್ರೀನ್‌ಪೀಸ್‌ತಂಡದವರು ಗೋಧಿಯ ಈ ಗುಣ ಮಾನ್ಸಾಂಟೋನ ಆವಿಷ್ಕಾರವಲ್ಲ, ಬದಲಿಗೆ ರೈತರು ಸಾಂಪ್ರದಾಯಕವಾಗಿ ಬೆಳೆಸಿ ಅಭಿವೃದ್ಧಿಪಡಿಸಿಕೊಂಡು ಬಂದಿರುವುದು ಎಂದು ರುಜುವಾತು ಮಾಡಿದನಂತರ ೨೦೦೪ರಲ್ಲಿ ಈ ಪೇಟೆಂಟ್‌ಅನ್ನು ರದ್ದುಗೊಳಿಸಲಾಯಿತು.

ಅರಿಶಿನದ ಮೇಲಿನ ಪೇಟೆಂಟ್‌: ೧೯೯೫ರಲ್ಲಿ ಅಮೆರಿಕಾದ ಮಿಸ್ಸಿಸಿಪ್ಪಿ ವಿಶ್ವವಿದ್ಯಾನಿಲಯದ ಆರೋಗ್ಯ ಕೇಂದ್ರದ ಇಬ್ಬರು ಭಾರತೀಯ ಸಂಜಾತ ಅಮೆರಿಕನ್ನರಿಗೆ ಅರಿಶಿನದ ಗಾಯವಾಸಿಮಾಡುವ ಗುಣಗಳಿಗಾಗಿ ಪೇಟೆಂಟ್‌ಸಂ.೫-೪೦೧-೫೦೪ ಅನ್ನು ನೀಡಲಾಯಿತು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರವು (ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ, ಇದರಡಿಯ ಒಂದು ಸ್ವಾಯತ್ತ ಸಂಸ್ಥೆ) ಅಮೆರಿಕಾದ ಪೇಟೆಂಟ್‌ಮತ್ತು ಟ್ರೇಡ್‌ಮಾರ್ಕ್ ಕಚೇರಿಯು ಈ ಪೇಟೆಂಟ್‌ಅನ್ನು ಮರು ಪರಾಮರ್ಶಿಸುವಂತೆ ಕೋರಿತು. ನೂರಾರು ವರ್ಷಗಳಿಂದ ಅರಿಶಿನದ ಗಾಯ ಗುಣಪಡಿಸುವ ಗುಣಗಳು ಭಾರತದಲ್ಲಿ ತಿಳಿದಿದ್ದರೂ ಸಹ ಪೇಟೆಂಟ್‌ಮಾಡಿರುವ ವಿಷಯ ನವೀನ ಶೋಧನೆಯಲ್ಲ ಎಂದು ರುಜುವಾತು ಮಾಡಲು ಅಮೆರಿಕದ ಪೇಟೆಂಟ್‌ಕಾನೂನಿನುಸಾರ ಆ ಜ್ಞಾನ ಲಿಖಿತ ಅಥವಾ ಪ್ರಕಟಿತ ರೂಪದಲ್ಲಿ ಇರಬೇಕಾಗಿತ್ತು . ಸಂಸ್ಕೃತ, ಉರ್ದು ಮತ್ತು ಹಿಂದಿಯಲ್ಲಿದ್ದ ಹಾಗೂ ಕೆಲವು ನೂರುವರ್ಷಗಳಿಗೂ ಹಳೆಯದಾದ ಲಿಖಿತ ದಾಖಲೆಗಳನ್ನು ಬಹಳಷ್ಟು ಕಷ್ಟಪಟ್ಟು ಹುಡುಕಿ ಸಲ್ಲಿಸಲಾಯಿತು. ಇದರ ಆಧಾರದ ಮೇಲೆ ಅಮೆರಿಕಾದ ಪೇಟೆಂಟ್‌ಮತ್ತು ಟ್ರೇಡ್‌ಮಾರ್ಕ್ ಕಚೇರಿಯು ಆ ಪೇಟೆಂಟನ್ನು ರದ್ದುಗೊಳಿಸಲಾಯಿತು.

ಬಾಸುಮತಿ ಅಕ್ಕಿಯ ಮೇಲಿನ ಪೇಟೆಂಟ್‌: ಅಮೆರಿಕದ ಕಂಪೆನಿಯೊಂದಕ್ಕೆ ೧೯೯೭ರಲ್ಲಿ ಬಾಸುಮತಿ ಭತ್ತದ ತಳಿ ವಿಭೇದಗಳಿಗೆ ಹಾಗೂ ಕಾಳುಗಳಿಗೆ ಅಮೆರಿಕದಲ್ಲಿ ಪೇಟೆಂಟ್‌ನೀಡಲಾಯಿತು. ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರವು ಆ ಹಕ್ಕನ್ನು ಮರುಪರಿಶೀಲಿಸಲು ಕೋರಿಕೊಂಡನಂತರ ಆ ಪೇಟೆಂಟನ್ನು ರದ್ದುಪಡಿಸಲಾಯಿತು. (ವಿವರಗಳಿಗೆ ನೋಡಿ ಪುಟ ೪೦)

ದಕ್ಷಿಣ ಆಫ್ರಿಕಾದ ಸಿ.ಎಸ್‌..ಆರ್. ಹೂಡಿಯಾ ಸಸ್ಯದ ಪೇಟೆಂಟ್‌: ದಕ್ಷಿಣ ಆಫ್ರಿಕಾದ ಸ್ಯಾನ್‌ಮೂಲನಿವಾಸಿಗಳು ಸಾವಿರಾರು ವರ್ಷಗಳಿಂದ ಹೂಡಿಯಾ ಸಸ್ಯವನ್ನು ಬೆಳೆಸುತ್ತಾ ಬಂದಿದ್ದಾರೆ. ಕಲಹಾರಿ ಮರುಭೂಮಿಯಲ್ಲಿ ಬೇಟೆಗೆ ಹೊರಟಾಗ ಅವರು ಹೂಡಿಯಾ ಸಸ್ಯದ ಕಾಂಡವನ್ನು ಜಗಿದು ಅದರ ರಸವನ್ನು ಹೀರುತ್ತಿದ್ದರು. ಅದು ಅವರ ಹಸಿವು ಹಾಗೂ ಬಾಯಾರಿಕೆಯನ್ನು ತಗ್ಗಿಸುತ್ತಿತ್ತು . ದಕ್ಷಿಣ ಆಫ್ರಿಕಾದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ (CSIR) ಮಂಡಳಿಯು ಹೂಡಿಯಾ ಸಸ್ಯದಲ್ಲಿನ ‘ಪಿ೫೭’ ಎಂಬ ಸಕ್ರಿಯ ಅಂಶವನ್ನು ಪ್ರತ್ಯೇಕಿಸಿ ಅದನ್ನು ಪೇಟೆಂಟ್‌ಮಾಡಿತು. ೧೯೯೭ರಲ್ಲಿ ಆ ಸಕ್ರಿಯ ಅಂಶವನ್ನು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯು (CSIR) ಪೈಟೊಫಾರ್ಮ್ ಎಂಬ ಬ್ರಿಟನ್ನಿನ ಜೈವಿಕ ತಂತ್ರಜ್ಞಾನದ ಕಂಪೆನಿಗೆ ಆ ಸಕ್ರಿಯ ಅಂಶವನ್ನು ಪರವಾನಗಿ ಮಾಡಿಕೊಟ್ಟಿತು. ಅನಂತರ ಪೈಟೊಫಾರ್ಮ್ ಬಹುರಾಷ್ಟ್ರೀಯ ಔಷಧ ಸಂಸ್ಥೆಯಾದ ಫೀಜರ್ ನೊಂದಿಗೆ ಆ ಸ್ರಕಿಯ ಅಂಶವನ್ನು ವಾಣಿಜ್ಯವಾಗಿ ತಯಾರಿಸುವ ಒಪ್ಪಂದ ಮಾಡಿಕೊಂಡಿತು. ಹೂಡಿಯಾದ ಹಸಿವು ತಗ್ಗಿಸುವ ಗುಣಲಕ್ಷಣವುಳ್ಳ ವಸ್ತುವನ್ನು ಸ್ಥೂಲಕಾಯದ ಚಿಕಿತ್ಸೆಗೆ ನೀಡಲಾಗುವ ಹೊಸ ಔಷಧದಲ್ಲಿ ಬಳಸಲಾಗುವುದೆಂದು ಪೈಟೊಫಾರ್ಮ್ ೨೦೦೧ರಲ್ಲಿ ಪ್ರಕಟಿಸಿತು. ಆ ಹೊಸ ಔಷಧ ಹೆಚ್ಚು ಲಾಭದಾಯಕವಾಗಿದ್ದು ಅದರ ಮೌಲ್ಯ ವಾರ್ಷಿಕ ೨ ಬಿಲಿಯನ್‌ಡಾಲರ್ ಗಳಷ್ಟಿರಬಹುದೆಂದು ನಿರೀಕ್ಷಿಸಲಾಗಿದೆ. ಈ ಘಟನೆಗಳ ನಡುವೆ ಹಸಿವು ಹಾಗೂ ಬಾಯಾರಿಕೆಯನ್ನು ತಗ್ಗಿಸುವ ಸಸ್ಯವನ್ನು ಮೊದಲು ಕಂಡುಹಿಡಿದ ಸ್ಯಾನ್‌ಬುಡಕಟ್ಟು ಜನರನ್ನು ಸಂಪೂರ್ಣ ಮರೆಯಲಾಯಿತು. ೨೦೦೧ರಲ್ಲಿ ಸ್ಯಾನ್‌ಜನರು ಪರಿಹಾರ ಕೋರಿ ದಾವೆ ಹೂಡಿದರು ಹಾಗೂ ಕೊನೆಗೆ ಲಾಭಹಂಚಿಕೆ ಒಪ್ಪಂದವನ್ನು ಮಾಡಿಕೊಂಡರು. ಅದರಂತೆ ಅವರಿಗೆ ಲಾಭದಲ್ಲಿ ಒಂದಷ್ಟು ಭಾಗ ದೊರಕುವಂತಾಯಿತು. ಆದರೆ ಅದನ್ನು ‘ಬಲವಂತದ ಮಾರಾಟ’ ಎನ್ನಬಹುದು. ಏಕೆಂದರೆ ಹೂಡಿಯ ಸಸ್ಯದ ಗುಣಲಕ್ಷಣಗಳನ್ನು ಪೇಟೆಂಟ್‌ಮಾಡಬಹುದೆ, ಬೇಡವೇ ಎಂಬುದನ್ನು ಅವರನ್ನು ಮೊದಲು ಯಾರೂ ಕೇಳಿರಲೇ ಇಲ್ಲ.

ಪ್ರ. .: ಹಾಗಿರುವಾಗ ಮುಂದಿನ ಹಾದಿ ಯಾವುದು?

: ಪ್ರತಿಯೊಂದು ಜೈವಿಕ ಚೌರ್ಯದ ಕೃತ್ಯದ ವಿರುದ್ಧವೂ ಕಾನೂನು ಸಮರ ನಡೆಸುವುದು ಅಸಾಧ್ಯವಾದುದು. ಅಂತಹ ಕಾನೂನಿನ ಸವಾಲುಗಳಿಗೆ ಬೇಕಾಗುವ ಸಮಯ ಮತ್ತು ಸಂಪನ್ಮೂಲ ಅಪಾರವಾದುದು. ಬೇವಿನ ಮೇಲಿನ ಒಂದೇ ಒಂದು ಪೇಟೆಂಟನ್ನು ಹಿಂಪಡೆಯುವಂತೆ ಮಾಡಲು ಯೂರೋಪಿಯನ್‌ಪೇಟೆಂಟ್‌ಕಚೇರಿಯಲ್ಲಿ ನಡೆಸಿದ ಹತ್ತು ವರ್ಷಗಳ ಸತತ ಹೋರಾಟ ಇಂತಹ ಅಂತರರಾಷ್ಟ್ರೀಯ ಕಾನೂನು ಪ್ರಕ್ರಿಯೆಗಳು ಎಷ್ಟು ದುಬಾರಿಯಾದುವು ಹಾಗೂ ಎಷ್ಟೊಂದು ಸಮಯ ತೆಗೆದುಕೊಳ್ಳುತ್ತದೆನ್ನುವುದಕ್ಕೆ ಉದಾಹರಣೆಯಾಗಿದೆ. ಈಗ ತುರ್ತಾಗಿ ಬೇಕಿರುವುದು ವ್ಯವಸ್ಥೆಯಲ್ಲಿನ ಬದಲಾವಣೆ: ಜೈವಿಕ ಸಂಪನ್ಮೂಲಗಳ ಮೇಲೆ ಹಾಗೂ ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲೆ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳು ಅಥವಾ ಏಕಸ್ವಾಮ್ಯಗಳಿರಬಾರದೆನ್ನುವುದು ನಮ್ಮ ನಂಬಿಕೆ. ಆದುದರಿಂದ ಟ್ರಿಪ್ಸ್‌ನ ಆರ್ಟಿಕಲ್‌೨೭.೩ಬಿಯನ್ನು ತೆಗೆದುಬಿಡಬೇಕು.

ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಜ್ಞಾನದ ಮೇಲಿನ  ಸಾಮುದಾಯಕ ಹಕ್ಕುಗಳು ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಜ್ಞಾನದ ಮೇಲೆ ಯಾವುದೇ ಏಕಸ್ವಾಮ್ಯತೆ ಇರಬಾರದು ಎನ್ನುವ ಪರಿಕಲ್ಪನೆಯನ್ನಾಧರಿಸಿರಬೇಕು. ಅಂದರೆ, ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಜ್ಞಾನದ ಮೇಲೆ ಅದರಲ್ಲೂ ಸಂಶೋಧನೆ ಮತ್ತು ಔಷಧಗಳ ಉತ್ಪಾದನೆಯ ಉದ್ದೇಶಗಳಿಗಾಗಿ ಸಾಮಾಜಿಕವಾಗಿ ಅಥವಾ ಔಷಧೀಯ ಪ್ರಯೋಜನವುಳ್ಳಂತಹವುಗಳ ಮೇಲೆ ಸ್ಥಳೀಯ ಸಮುದಾಯಗಳನ್ನು ಒಳಗೊಂಡಂತೆ ಯಾರೊಬ್ಬರೂ ಏಕಸ್ವಾಮ್ಯವನ್ನು ಹೊಂದಿರಬಾರದು. ಅವುಗಳ ಬಳಕೆ ಮತ್ತು ಲಾಭಾಂಶ ಹಂಚಿಕೆಯನ್ನು ನಿರ್ಧರಿಸುವ ಹಕ್ಕನ್ನು ಸಮುದಾಯಗಳು ಹೊಂದಿರಬೇಕು. ಅಂದರೆ, ಅತಿ ಹೆಚ್ಚು ಹಣ ನೀಡುವವನಿಗೆ ಹಾಗೂ ಆತ ಮುಂದೆ ಅದರ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆಯುವಂಥವನಿಗೆ ಸಾಂಪ್ರದಾಯಕ ಜ್ಞಾನವನ್ನು ಮಾರಾಟ ಮಾಡುವುದು ಎಂದರ್ಥವಲ್ಲ. ಅದಕ್ಕೆ ತದ್ವಿರುದ್ಧವಾಗಿ ಮುಕ್ತ ಲಭ್ಯತೆ ಹಾಗೂ ಬಳಕೆ ಎಂದರೆ ತಮ್ಮ ಕೊಡುಗೆ ಅಥವಾ ನವೀನ ಶೋಧಗಳಿಗಾಗಿ ಸಮುದಾಯಗಳಿಗೆ ಯಾವುದೇ ರೀತಿಯ ಪ್ರಾಶಸ್ತ್ಯವಿರುವುದಿಲ್ಲ ಎಂಬುದು.

ಪ್ರಸ್ತುತ ಬೌದ್ಧಿಕ ಆಸ್ತಿ ಹಕ್ಕಿನ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಅಥವಾ ಅಂತರರಾಷ್ಟ್ರೀಯವಾಗಿ ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಜ್ಞಾನವನ್ನು ಸಂರಕ್ಷುಸವಂತಹ ಯಾವುದೇ ಅತ್ಯುತ್ತಮ ಸಾರ್ವತ್ರಿಕ ಒಪ್ಪಂದವಿಲ್ಲ. ಸೂಚಿಸಲಾಗಿರುವ ಬದಲಿ ಪರಿಹಾರಗಳಲ್ಲಿಯೂ ಸಹ ಯಾವುದೇ ವಿಧಾನವು ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಸಂರಕ್ಷಣೆಯ ಪ್ರಶ್ನೆಗೆ ಇಂದಿಗೂ ಸೂಕ್ತ ಉತ್ತರ ಒದಗಿಸಿಲ್ಲ. ವಿಸ್ತೃತ ಸಮಾಲೋಚನೆ ಹಾಗೂ ಚರ್ಚೆಗಳಿಲ್ಲದೆ ಒಂದು ಸಾರ್ವತ್ರಿಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯೂ ಕಷ್ಟಸಾಧ್ಯವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ಈ ವಿಷಯದ ಬಗ್ಗೆ ಸ್ವಯಂಸೇವಾಸಂಸ್ಥೆಗಳಲ್ಲಿ, ಸಕ್ರಿಯ ಸಮುದಾಯಗಳೊಳಗೆ ಹಾಗೂ ಸರ್ಕಾರಗಳ ವಿವಿಧ ಹಂತಗಳಲ್ಲಿ ನಿರಂತರವಾಗಿ ಚರ್ಚೆಗಳು ನಡೆಯುತ್ತಿವೆ. ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಸಂರಕ್ಷಣೆಯ ವಿವಿಧ ಮಾದರಿಗಳನ್ನು ಪ್ರಯತ್ನಿಸಲಾಗುತ್ತಿದೆ.

ಅದೇ ರೀತಿ ಭಾರತದಲ್ಲೂ ಸಹ ರಾಷ್ಟ್ರೀಯ ಮಟ್ಟದಲ್ಲಿ, ಸಮಾಲೋಚನೆ ಮತ್ತು ಚರ್ಚೆಯ ಮೂಲಕ ಒಂದು ಸಾಮರಸ್ಯದ ಹಾಗೂ ಸಮನ್ವಯದ ಹಾದಿಯನ್ನು ಕಂಡುಕೊಳ್ಳಬೇಕಿದೆ. ಈ ಪ್ರಕ್ರಿಯೆಯಲ್ಲಿ ಗಮನದಲ್ಲಿರಿಸಿಕೊಳ್ಳಬೇಕಾದ ಕೆಲವು ಪ್ರಶ್ನೆಗಳೆಂದರೆ: ಗೌರವಿಸಬೇಕಾಗಿರುವ ನೈತಿಕ, ಪರಿಸರಾತ್ಕಮಕ ಹಾಗೂ ಸಾಂಸ್ಕೃತಿಕ ಮಿತಿಗಳು ಯಾವುವು? ಜೈವಿಕ ಸಂಪನ್ಮೂಲಗಳ ಕ್ಷೇತ್ರದಲ್ಲಿ ಈ ಮಿತಿಗಳನ್ನು ದಾಟದೆ, ಹಾಗೂ ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲೆ ಖಾಸಗಿ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡದೆ ಸಮಾಜವು ಪ್ರಾಮಾಣಿಕ ನವೀನ ಆವಿಷ್ಕಾರಗಳನ್ನು ಪುರಸ್ಕರಿಸುವುದು ಹೇಗೆ? ಸ್ಥಳೀಯ ಸಮುದಾಯಗಳು ತಮ್ಮ ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನವನ್ನು ದುರ್ಬಳಕೆ ಮತ್ತು ಏಕಸ್ವಾಮ್ಯದಿಂದ ರಕ್ಷಿಸುವ ಹಾಗೂ ಈ ಸಂಪನ್ಮೂಲಗಳ ವಿಸ್ತೃತ ಬಳಕೆಯಿಂದ ದೊರೆಯುವ ಆರ್ಥಿಕ ಮತ್ತು ಇತರ ಲಾಭಗಳ ಹಂಚಿಕೆಗೆ ಪಾಲುದಾರರಾಗುವುದನ್ನು ಖಾತ್ರಿಪಡಿಸಿಕೊಳ್ಳುವುದು ಹೇಗೆ? ಒಂದು ಸಮಂಜಸ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಎದುರಿಸಬೇಕಾಗಿರುವ ಪ್ರಮುಖ ಪ್ರಶ್ನೆಗಳು ಇವು. ಸಾಧ್ಯವಿರುವ ಎಲ್ಲಾ ಬದಲಿ ವಿಧಾನಗಳನ್ನು ಪರಿಶೀಲಿಸಿ ಒಂದು ವಿಸ್ತೃತ, ಸಮಾಲೋಚಜಕ ಪ್ರತಕ್ರಿಯೆಯ ಮೂಲಕ ಎಲ್ಲ ರೀತಿಯಲ್ಲಿಯೂ ಸರಿಹೊಂದುವಂತಹ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕವಾಗಿದೆ. ಈ ಹಾದಿಯಲ್ಲಿ ಮುನ್ನಡೆಯುವಾಗ ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೂಲ ಪಾಲಕರು ಮತ್ತು ಪೋಷಕರೂ ಆಗಿರುವಂತಹ ಹಾಗೂ ಬದುಕಿನಲ್ಲಿ ಅದನ್ನೇ ಅವಲಂಬಿಸಿರುವಂತಹ ಸ್ಥಳೀಯ ಸಮುದಾಯದ ಅವಶ್ಯಕತೆಗಳು ಮತ್ತು ಆತಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾದುದು ಅತ್ಯವಶ್ಯಕವಾದುದು.