ಪ್ರ .: ಆನುವಂಶಿಕ ವಸ್ತು, ಸಜೀವಿ ರೂಪಗಳು ಮತ್ತು ಜೈವಿಕ ಸಂಪನ್ಮೂಲಗಳಿಗೆ ಇರುವ ವ್ಯತ್ಯಾಸಗಳೇನು?

: ಆನುವಂಶಿಕ ವಸ್ತು (Genetic Material) ವೆಂದರೆ, ಜೀವಿಗಳ ರಚನೆಯ ಮೂಲಭೂತ ವಸ್ತುಗಳು. ಎಲ್ಲಾ ಜೀವಿಗಳೂ ಡಿ.ಎನ್‌.ಎ. ನಂತಹ (DNA=Deoxy ribonucleic Acid) ಆನುವಂಶಿಕ ವಸ್ತುಗಳನ್ನು ಹೊಂದುರತ್ತವೆ. ಹಾಗಾಗಿ ಬೀಜಗಳು, ಸಸ್ಯದ ಕತ್ತರಿಸಿದ ತುಂಡು, ವೀರ್ಯ, ಒಂದು ಇಡೀ ಜೀವಿ ಅಥವಾ ಜೀವಿಯೊಂದರಿಂದ ಪಡೆದ ಡಿ.ಎನ್‌.ಎ.ಗಳು ಆನುವಂಶಿಕ ವಸ್ತುಗಳಾಗುತ್ತವೆ.

 ಸಜೀವಿರೂಪಗಳು (Life Forms) ಎನ್ನುವುದು ಎಲ್ಲಾ ಜೀವಿಗಳಿಗೆ ಅನ್ವಯಿಸುವ ಒಂದು ವಿಸ್ತೃತ ಪದ.

ಜೈವಿಕ ಸಂಪನ್ಮೂಲಗಳು (Biological Resources) ಎನ್ನುವುದೂ ಸಹ ಮನುಷ್ಯರಿಗೆ ಉಪಯುಕ್ತವಾಗಬಲ್ಲ ಯಾವುದೇ ಜೈವಿಕ ಅಂಶಗಳಿಗೆ ಅನ್ವಯಿಸುವ ವಿಸ್ತೃತ ಪದ. ಜೈವಿಕ ವಸ್ತುಗಳ ಬಗ್ಗೆ ಮಾತನಾಡುವಾಗ ಈ ಆನುವಂಶಿಕ ವಸ್ತುಗಳು, ಸಜೀವಿ ರೂಪಗಳು ಹಾಗೂ ಜೈವಿಕ ಸಂಪನ್ಮೂಲಗಳು ಎನ್ನುವ ಪದಗಳನ್ನು ಬಳಸಲಾಗುತ್ತಿರುತ್ತದೆ.

ಪ್ರ. .: ಜೈವಿಕ ತಂತ್ರಜ್ಞಾನ ಎಂದರೇನು?

ಉ: ಅಣುಜೀವಿಶಾಸ್ತ್ರ, ಜೆನೆಟೆಕ್‌ಇಂಜಿನಿಯರಿಂಗ್‌ಮತ್ತು ಜೈವಿಕ ರಾಸಾಯನ ಶಾಸ್ತ್ರಗಳಂತಹ ವಿಜ್ಞಾನಶಿಸ್ತುಗಳು ಒಳಗೊಂಡಿರುವುದನ್ನು ವಿಸ್ತೃತವಾಗಿ ಸೂಚಿಸುವ ಪದ. ಸಾಮಾನ್ಯವಾಗಿ ಕೈಗಾರಿಕಾ ಉತ್ಪನ್ನಗಳಿಗಾಗಿ ಜೈವಿಕ ಸಂಪನ್ಮೂಲಗಳನ್ನು ಅಥವಾ ಜೈವಿಕ ಪ್ರಕ್ರಿಯೆಗಳನ್ನು ಬಳಸುವ ತಂತ್ರಜ್ಞಾನ. ಜೈವಿಕ ತಂತ್ರಜ್ಞಾನದಲ್ಲಿ ಒಳಗೊಂಡಿರುವ ಹಲವಾರು ವಿಜ್ಞಾನ ಶಿಸ್ತುಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಜೈವಿಕ ವೈವಿಧ್ಯತೆಗಳ ಬಗೆಗಿನ ಚರ್ಚೆಗೆ ಜೆನಟಿಕ್‌ಇಂಜಿನಿಯರಿಂಗ್‌ಅತಿ ಹೆಚ್ಚು ಪ್ರಸ್ತುತವಾದುದು.

ಪ್ರ. .: ಜೆನೆಟಿಕ್‌ಇಂಜಿನಿಯರಿಂಗ್‌ಎಂದರೇನು?

: ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಜೀವಿಗಳಲ್ಲಿ ಹೊಸ ಲಕ್ಷಣಗಳನ್ನು ಉಂಟುಮಾಡಲು ಆಯಾಜೀವಿಗಳ ವಂಶವಾಹಿಗಳಲ್ಲಿ (Genes) ಬದಲಾವಣೆಗಳನ್ನು ಉಂಟುಮಲಾಡುವ ವಿಧಾನಕ್ಕೆ ಜೆನೆಟಿಕ್‌ಇಂಜಿನಿಯರಿಂಗ್‌ಅಥವಾ ಜೆನೆಟಿಕ್‌ಮಾಡಿಫಿಕೇಶನ್‌ಎನ್ನುತ್ತಾರೆ. ಉದಾಹರಣೆಗೆ, ಸಸ್ಯದ ವಂಶವಾಹಿಗಳಲ್ಲಿ ಕೀಟ ನಿರೋಧಕತೆಯಂತಹ ಅಥವಾ ಕಾಯಿ ತಡವಾಗಿ ಹಣ್ಣಾಗುವಂತೆ ಮಾಡುವ ಅವಶ್ಯಕ ಗುಣಗಳನ್ನು ಪಡೆಯಲು ಅಥವಾ ಅನವಶ್ಯಕ ಲಕ್ಷಣಗಳನ್ನು ತೆಗೆದುಹಾಕುವ ಕಾರ್ಯವನ್ನು ಜೆನೆಟಿಕ್‌ಇಂಜಿನಿಯರಿಂಗ್‌ಮಾಡುತ್ತದೆ. ಇದಕ್ಕಾಗಿ ಒಂದು ಪ್ರಭೇದದಿಂದ ಪಡೆದ ವಂಶವಾಹಿಯನ್ನು ಮತ್ತೊಂದು ಪ್ರಭೇದಕ್ಕೆ ಸೇರಿಸಬೇಕಾಗಬಹುದು. ಉದಾಹರಣಗೆ, ಬಿ.ಟಿ. ಜೋಳದಲ್ಲಿ ಬ್ಯಾಕ್ಟೀರಿಯಾ ಸೂಕ್ಷ್ಮಜೀವಿಯಿಂದ (Bacillus thuringiensis)

ಪಡೆದ ವಂಶವಾಹಿಯನ್ನು ಜೋಳದ ವಂಶವಾಹಿ ಸರಣಿಯಲ್ಲಿ ಸೇರಿಸಿರಲಾಗುತ್ತದೆ ಹಾಗೂ ಇದರಿಂದ ಬಿ.ಟಿ. ಜೋಳದ ಸಸ್ಯ ತನ್ನದೇ ಕೀಟನಾಶಕವನ್ನು ಉತ್ಪತ್ತಿಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಜೆನೆಟಿಕ್‌ಇಂಜಿನಿಯರಿಂಗ್‌ಒಂದು ವಿವಾದಾಸ್ಪದ ವಿಷಯ. ಮೊದಲನೆಯದಾಗಿ, ಜೈವಿಕ ಪ್ರಕ್ರಿಯೆಗಳಲ್ಲಿ ಮನುಷ್ಯ ಕೈಯಾಡಿಸುವುದು ಅನೈತಿಕ ಎಂದು ಹಲವಾರು ಜನ ನಂಬುತ್ತಾರೆ ಹಾಗೂ ಜೆನೆಟಿಕ್‌ಇಂಜಿನಿಯರ್ ಗಳು ‘ದೇವರಾಗಲು’ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಸಹ ಹೊರಿಸುತ್ತಿದ್ದಾರೆ. ಎರಡನೆಯದಾಗಿ, ಮಾನವರು ಆಹಾರವನ್ನಾಗಿ ಬಳಸುವ ಪ್ರಭೇದಗಳ ನಡುವೆ ಆನುವಂಶಿಕ ವಿನಿಮಯ ಪ್ರಕ್ರಿಯೆ ಹೇಸಿಗೆಯನ್ನುಂಟು ಮಾಡುತ್ತದೆ ಎನ್ನುತ್ತಾರೆ ಕೆಲವರು. ಮೂರನೆಯದಾಗಿ, ಕುಲಾಂತರಿ ಬೆಳೆಗಳ ವಿಸ್ತೃತ ಪರಿಣಾಮಗಳು ಇನ್ನೂ ತಿಳಿದಿಲ್ಲವಾದುದರಿಂದ ಅವು ಪರಿಸರ ವ್ಯವಸ್ಥೆಯ ಜೈವಿಕ ವೈವಿಧ್ಯತೆಯ ಸ್ಥಿರತೆಗೆ ಹಾನಿಕಾರಕವಾಗಬಹುದು. ಉದಾಹರಣೆಗೆ, ಕುಲಾಂತರಿ ಸಸ್ಯಗಳ ಹಾಗೂ ಇತರ ಸಹಜ ಸಸ್ಯಗಳ ನಡುವೆ ನಡೆಯುವ ಅಡ್ಡ ಪರಾಗಸ್ಪರ್ಶದಿಂದ ಯಾವ ಪ್ರತಿಕೂಲ ಪರಿಣಾಮಗಳುಂಟಾಗಬಹುದು ಎಂಬುದರ ಬಗೆಗೆ ಹೆಚ್ಚಿನ ಮಾಹಿತಿಯಿಲ್ಲ (ಉದಾಹರಣೆಗೆ, ಇಲ್ಲಿ ಆಂತಕವಿರುವುದು ಸಸ್ಯನಾಶಕ ಸಹಿಷ್ಣು ವಂಶವಾಹಿಗಳು ಕುಲಾಂತರಿ ಸಸ್ಯಗಳಿಂದ ಕಳೆ ಸಸ್ಯಗಳಿಗೆ ವರ್ಗಾಯಿತವಾದಲ್ಲಿ ಕಳೆ ನಿಯಂತ್ರಣ ತೀರಾ ಕಷ್ಟವಾಗುತ್ತದೆ ಎನ್ನುವುದರ ಬಗ್ಗೆ).

ಪ್ರ .: ಜೈವಿ೮ಕ ಸಂಪನ್ಮೂಲಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಲು ಸಾಧ್ಯವೆ?

: ಹೌದು, ಸಾಧ್ಯವಿದೆ. ಜೈವಿಕ ಸಂಪನ್ಮೂಲಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳು ಸಾಮಾನ್ಯವಾಗಿ ಪೇಟೆಂಟ್‌ಗಳು, ಸಸ್ಯತಳಿಸಂವರ್ಧಕರ ಹಕ್ಕುಗಳು ಅಥವಾ ಬೌಗೋಳಿಕ ಸೂಚಕಗಳಾಗಿರುತ್ತವೆ.

ಸಾಂಪ್ರದಾಯಿಕವಾಗಿ ಬೌದ್ಧಿಕ ಆಸ್ತಿ ಹಕ್ಕುಗಳು ಸಜೀವಿರೂಪಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಸಜೀವಿರೂಪಗಳು ಮಾನವ ನಿರ್ಮಿತವಲ್ಲ ಹಾಗೂ ಅವುಗಳನ್ನು ‘ಅನ್ವೇಷಣೆ’ಗಳೆಂದು ಸಹಾ ಕರೆಯಲಾಗದು. ಅದೇ ರೀತಿ, ಈಗಾಗಲೇ ಪ್ರಕೃತಿಯಲ್ಲಿರುವುದನ್ನೂ ಸಹ ಪೇಟೆಂಟ್‌ಮಾಡಲಾಗುವುದಿಲ್ಲ (ಆದರೆ ಅದನ್ನು ಉಲ್ಲಂಘಿಸಿರುವ ಕೆಲವು ಘಟನೆಗಳು ನಡೆದಿವೆ. ಉದಾಹರಣೆಗೆ, ೧೮೭೩ರಲ್ಲಿ ಲೂಯಿ ಪಾಶ್ಚರ್ ರವರಿಗೆ ‘ರೋಗಕಾರಕ ಜೀವಿಗಳಿಲ್ಲದ ಯೀಸ್ಟ್‌ಗೆ ಒಂದು ಉತ್ಪಾದನಾ ವಸ್ತು’ವೆಂಬಂತೆ ಪೇಟೆಂಟ್‌ನೀಡಲಾಗಿದೆ).

೧೯೯೫ರಲ್ಲಿ ಜಾರಿಗೆ ಬಂದ ಬೌದ್ಧಿಕ ಆಸ್ತಿ ಹಕ್ಕುಗಳ ಮೇಲಿನ ವಿಶ್ವ ವಾಣಿಜ್ಯ ಸಂಸ್ಥೆಯ (WTO) ನಿಬಂಧನೆಗಳಿಂದಾಗಿ ವಿಶ್ವದಾದ್ಯಂತ ಒಂದೇ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ವಿಶ್ವ ವಾಣಿಜ್ಯ ಸಂಸ್ಥೆಯ ಬೌದ್ಧಿಕ ಆಸ್ತಿ ಹಕ್ಕುಗಳ ನಿಬಂಧನೆಗಳನ್ನು ‘ಟ್ರಿಪ್ಸ್‌’ ಒಪ್ಪಂದದಲ್ಲಿ (TRIPS=Trade-Related Aspects of Intellectual Property Rights Agreement) ನೀಡಲಾಗಿದೆ.‘ ‘ ಟ್ರಿಪ್ಸ್’ ಒಪ್ಪಂದವು ಎಲ್ಲ ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯರಾಷ್ಟ್ರಗಳಿಗೆ ಅನ್ವಯಿಸುತ್ತದೆ. ಜೈವಿಕ ಸಂಪನ್ಮೂಲಗಳನ್ನು ಒಳಗೊಂಡಂತೆ ಹಲವಾರು ವ್ಯಾಪಾರ-ಸಂಬಂಧಿ ವಿಷಯಗಳಿಗೆ ವಿಶ್ವದಾದ್ಯಂತ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯನ್ನು ನಿಯಂತ್ರಿಸಿ, ಸಾಮರಸ್ಯವನ್ನು ಉಂಟು ಮಾಡುವುದು ಟ್ರಿಪ್ಸ್‌’ನ ಉದ್ದೇಶವಾ ಗಿದೆ.

ಜೈವಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯರು ಈ ಮುಂದಿನ ಅಂಶಗಳನ್ನು ಪರಿಗಣಿಸಬೇಕು:

  • ಸದಸ್ಯರು ಸೂಕ್ಷ್ಮಜೀವಿಗಳ  ಮೇಲೆ ಹಾಗೂ ಸಸ್ಯ ಮತ್ತು ಪ್ರಾಣಿಗಳನ್ನು ಉತ್ಪಾದಿಸಲು ಬಳಸುವ ಸೂಕ್ಷ್ಮ-ಜೈವಿಕ ಮತ್ತು ಅಜೈವಿಕ ಪ್ರಕ್ರಿಯೆಗಳ ಮೇಲೆ ಪೇಟೆಂಟ್‌ಗಳನ್ನು ನೀಡಬೇಕು.
  • ಸಸ್ಯಗಳ , ಪ್ರಾಣಿಗಳ ಹಾಗೂ ಸಸ್ಯ ಮತ್ತು ಪ್ರಾಣಿಗಳನ್ನು ಉತ್ಪಾದಿಸಲು ಬಳಸಲಾಗುವ ಜೈವಿಕ ಪ್ರಕ್ರಿಯೆಗಳ ಮೇಲೆ ಪೇಟೆಂಟ್‌ಗಳನ್ನು ನೀಡುವುದು ಕಡ್ಡಾಯವಲ್ಲ. ಆದರೆ, ಬಯಸಿದಲ್ಲಿ ಸದಸ್ಯರು ಅವುಗಳನ್ನು ನೀಡಬಹುದು.
  • ಸಸ್ಯಗಳಿಗೆ ಪೇಟೆಂಟ್‌ಗಳನ್ನು ನೀಡುವುದು ಕಡ್ಡಾಯವಲ್ಲದಿದ್ದರೂ, ಸಸ್ಯ ತಳಿಗಳಿಗೆ ಯಾವುದಾದರೂ ಈ ರೀತಿಯ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆ ನೀಡಬೇಕಾದುದು ಕಡ್ಡಾಯವಾಗಿದೆ. ಅಂದರೆ, ಸಸ್ಯ ತಳಿಗಳನ್ನು ಪೇಟೆಂಟ್‌ಗಳಿಂದ ರಕ್ಷಿಸುವ ಅವಶ್ಯಕತೆಯಿಲ್ಲ – ಬದಲಿಗೆ ಅವುಗಳನ್ನು ಸಸ್ಯತಳಿ ಸಂವರ್ಧಕರ ಹಕ್ಕುಗಳಂತಹ ಸೂ ಜೆನೆರಿಸ್‌ಬೌದ್ಧಿಕ ಆಸ್ತಿ ಹಕ್ಕಿನ ಮೂಲಕ ರಕ್ಷಿಸಬಹುದು ಸೂ ಜೆನೆರಿಸ್‌(Sui generis) ಎಂದರೆ ವಿಶಿಷ್ಟವಾದುದು ಅಥವಾ ‘ತನ್ನದೇ ರೀತಿಯದು’ ಎಂದರ್ಥ. ಸಸ್ಯತಳಿಯಂತಹ ಒಂದೇ ರೀತಿಯ ವಸ್ತುವನ್ನು ರಕ್ಷಿಸಲು ಒಂದು ಸೂ ಜೆನೆರಿಸ್‌ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ. ಹಾಗಾಗಿ ಸಸ್ಯತಳಿ ಸಂರಕ್ಷಣೆಯ ಒಂದು ವಿಶಿಷ್ಟ ಅಥವಾ ಒಂದು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ದೇಶಗಳಿಗೆ ‘ಟ್ರಿಪ್ಸ್‌’ (TRIPS) ಅವಕಾಶ ಕೊಡುತ್ತದೆ.
  • ಸಸ್ಯಗಳ, ಪ್ರಾಣಿಗಳ, ಸೂಕ್ಷ್ಮಜೀವಿಗಳ  ಅಥವಾ ಮನುಷ್ಯರಿಂದ ಪಡೆದ ವಂಶವಾಹಿ (Genes) ಗಳಿಗೆ ಪೇಟೆಂಟ್‌ನೀಡುವುದು ಕಡ್ಡಾಯವಲ್ಲ. ಆದರೆ, ಬಯಸಿದಲ್ಲಿ ಸದಸ್ಯರು ಅವುಗಳನ್ನು ನೀಡಬಹುದು.

‘ಟ್ರಿಪ್ಸ್‌’ ನೀಡಿರುವ ಮಾನಕಗಳ ಮಿತಿಯೊಳಗೆ, ಯಾವ್ಯಾವ ಜೈವಿಕ ಸಂಪನ್ಮೂಲಗಳನ್ನು ಬೌದ್ಧಿಕ ಆಸ್ತಿ ಹಕ್ಕುಗಳಡಿ ಸಂರಕ್ಷಿಸಬಹುದು ಹಾಗೂ ಬೌದ್ಧಿಕ ಆಸ್ತಿ ಹಕ್ಕು ಹೊಂದಿರುವವರು ಯಾವ್ಯಾವ ಹಕ್ಕುಗಳನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ಬೇರೆ ಬೇರೆ ದೇಶಗಳು ಬೇರೆ ಬೇರೆ ನಿಬಂಧನೆಗಳನ್ನು ಹೊಂದಿವೆ ಉದಾಹರಣೆಗೆ, ಭಾರತವನ್ನೊಳಗೊಂಡಂತೆ ಹಲವಾರು ದೇಶಗಳು, ಸಸ್ಯ ಮತ್ತು ಪ್ರಾಣಿ ತಳಿಗಳ ಮೇಲೆ ಪೇಟೆಂಟ್‌ನೀಡುವುದಿಲ್ಲ ಆದರೆ ಸಸ್ಯ ತಳಿಗಳಿಗೆ ಸಸ್ಯ ತಳಿಸಂವರ್ಧಕರ ಹಕ್ಕುಗಲನ್ನು ನೀಡುತ್ತವೆ. ಸಸ್ಯ ತಳಿಗಳ ಮೇಲೆ ಪೇಟೆಂಟ್‌ಗಳನ್ನು ಅಮೆರಿಕ (USA), ಜಪಾನ್‌ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾತ್ರ ನೀಡಲಾಗುತ್ತದೆ ಹಾಗೂ ಅತಿ ಹೆಚ್ಚಾಗಿ ಅಮೆರಿಕಾದಲ್ಲಿ ಮಾತ್ರ ನೀಡಲಾಗುತ್ತದೆ. ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ‘ಟ್ರಿಪ್ಸ್‌’ನ ಒಪ್ಪಂದಕ್ಕಾಗಿ ಅನುಬಂಧ ೧ ನೋಡಿ. ಭಾರತದ ಬೌದ್ಧಿಕ ಆಸ್ತಿ ಹಕ್ಕು ಸಂಬಂಧಿ ಕಾನೂನುಗಳ ವಿವರಗಳಿಗಾಗಿ ಅನುಬಂಧ ೨ ನೋಡಿ.

ಪ್ರ. .: ಸಾಂಪ್ರದಾಯಕವಾಗಿ ಮೊದಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಜೈವಿಕ ಸಂಪನ್ಮೂಲಗಳಿಗೆ ಕೊಡುತ್ತಿರಲಿಲ್ಲಆದರೆ ಈಗ ಅವುಗಳನ್ನು ನೀಡಲಾಗುತ್ತಿದೆ, ಏಕೆ?

: ಜೈವಿಕ ಸಂಪನ್ಮೂಲಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡುವುದು ೧೯೩೦ರ ದಶಕದಲ್ಲಿ ಪ್ರಾರಂಭವಾಯಿತು. ಜೀವಿಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪರಿಚಯಿಸಿದ ದೇಶಗಳಲ್ಲಿ ಉತ್ತರ ಅಮೆರಿಕ ಮೊಟ್ಟಮೊದಲ ದೇಶವಾಗಿದೆ: ಆ ದೇಶ ೧೯೩೦ ರಲ್ಲಿ ಯು.ಎಸ್‌. ಸಸ್ಯ ಪೇಟೆಂಟ್‌ಅಧಿನಿಯಮವನ್ನು ಜಾರಿಗೊಳಿಸಿ, ಲೈಂಗಿಕ ವಿಧಾನಗಳಿಂದ ಉತ್ಪಾದಿಸಿದ ಸಸ್ಯಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡಲಾಯಿತು. ಅದರಂತೆ ಇತರ ಹಲವಾರು ದೇಶಗಳೂ ಅದನ್ನು ಅನುಸರಿಸಿ ಸಸ್ಯ ತಳಿಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡಿದವು. ಅದಾದ ನಂತರದ ವರ್ಷಗಳಲ್ಲಿ, ವಿಶೇಷವಾಗಿ ಕಳೆದ ಎರಡು ಮೂರು ದಶಕಗಳಲ್ಲಿ ಕೃಷಿ ಸಂಶೋಧನೆಯಲ್ಲಿ ಸಾರ್ವಜನಿಕ ಕ್ಷೇತ್ರದ ಬಂಡವಾಳ ಹೂಡಿಕೆ ಕಡಿಮೆಯಾಗಿದೆ ಆದರೆ ಖಾಸಗಿ ಕ್ಷೇತ್ರದ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಖಾಸಗಿ ಬಂಡವಾಳ ಹೂಡಿಕೆದಾರರಿಗೆ ತಮ್ಮ ಬಂಡವಾಳ ವೆಚ್ಚವನ್ನು ಹಿಂಪಡೆಯಲು ಒಂದು ಪ್ರಆವೀ ವಿಧಾನ ಬೇಕಾಗಿತ್ತು ಹಾಗೂ ಅವರಿಗೆ ಸಸ್ಯ ತಳಿಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳು ಅಂತಹ ಒಂದು ವಿಧಾನವಾಗಿತ್ತು. ಎರಡನೆಯದಾಗಿ, ಕಳೆದ ೨೦ ವರ್ಷಗಳಿಂದೀಚಿಗೆ ಜೀವತಂತ್ರಜ್ಞಾನದಲ್ಲಿನ (ವಿಶೇಷವಾಗಿ ಜೆನೆಟಿಕ್‌ಇಂಜಿನಿಯರಿಂಗ್‌ನಲ್ಲಿ) ಹಾಗೂ ನ್ಯಾನೋಟೆಕ್ನಾಲಜಿಯಲ್ಲಿನ ಪ್ರಗತಿ ಜೈವಿಕ ವಿಜ್ಞಾನಗಳ ಕ್ಷೇತ್ರಗಳ ಸಂಶೋಧನೆಗಳನ್ನು ವಿಸ್ತರಿಸಿರುವುದರಿಂದ ಯಾವುದನ್ನು ಆವಿಷ್ಕಾರ ಎಂದು ಪರಿಗಣಿಸಬೇಕು ಯಾವುದನ್ನು ಪರಿಗಣಿಸಬಾರದು ಎಂಬ ಚರ್ಚೆಯ ಪ್ರಾರಂಭಕ್ಕೆ ಕಾರಣವಾಗಿದೆ (ಅದರಲ್ಲೂ ವಿಶೇಷವಾಗಿ ಪೇಟೆಂಟ್‌ಮತ್ತು ಸಸ್ಯ ತಳಿಸಂವರ್ಧಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳು ಅನ್ವಯಿಸುತ್ತವೆ ಯಾವುದಕ್ಕೆ ಅನ್ವಯಿಸುವುದಿಲ್ಲ ಎಂಬ ವಿಷಯದ ಬಗ್ಗೆ). ಪ್ರಕೃತಿಯಲ್ಲಿ ಜೆನೆಟಿಕ್‌ಇಂಜಿನಿಯರಿಂಗ್‌ತಂತ್ರಜ್ಞಾನಕ್ಕೊಳಗಾದ ಸಸ್ಯಗಳು ಸಹಜವಾಗಿ ಸಿಗುವುದಿಲ್ಲವಾದುದರಿಂದ ಅವುಗಳನ್ನು ಅನ್ವೇಷಣೆಗಳೆಂದು ಹಾಗೂ ಅವುಗಳನ್ನು ಪೇಟೆಂಟ್‌ಮಾಡಬಹುದೆಂದು (ಅಥವಾ ಅವುಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಅನ್ವಯಿಸುವುದೆಂದು) ವಾದಿಸಲಾಗುತ್ತಿದೆ.

ಮಾನವ ಆನುವಂಶಿಕ ವಸ್ತುವಿನ ಪೇಟೆಂಟ್‌

ಇತ್ತೀಚೆಗೆ ಮಾನವ ಆನುವಂಶಿಕ ವಸ್ತುವಿನ (Human Genetic Material) ಮೇಲೆ ಪೇಟೆಂಟ್‌ಹಕ್ಕು ಕೋರುತ್ತಿರುವಂತಹ ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿವೆ. ನಶಿಸುತ್ತಿರುವ ಹಲವಾರು ಬುಡಕಟ್ಟುಗಳ ವಂಶವಾಹಿಗಳು ಸಂಶೋಧಕರಿಗೆ ಅತ್ಯಂತ ಆಸಕ್ತಿಯ ವಿಷಯವಾಗಿವೆ. ಏಕೆಂದರೆ , ಅವರ ವಂಶವಾಹಿಗಳಲ್ಲಿ ವೈದ್ಯಕೀಯ ಪ್ರಗತಿಗೆ ಬಳಸಬಹುದಾದ ವಿಶಿಷ್ಟ ಲಕ್ಷಣಗಳಿರಬಹುದೆಂಬುದು ಅವರ ನಂಬಿಕೆ. ಇದರ ಮೊದಲು ಉದಾಹರಣೆಯೆಂದರೆ , ೧೯೯೦ರ ದಶಕದ ಮಧ್ಯಭಾಗದಲ್ಲಿ ಅಮೆರಿಕಾದ ವಿಜ್ಞಾನಿಗಳು ಪನಾಮಾದ ಬುಡಕಟ್ಟುಮಹಿಳೆಯೊಬ್ಬಳ ಜೀವಕೋಶ ಸಾಲಿನ ಮೇಲೆ ಪೇಟೆಂಟ್‌ಕೋರಿದರು. ಇದರಿಂದ ಉಂಟಾದ ಅಂತರರಾಷ್ಟ್ರೀಯ ಪ್ರತಿಭಟನೆ ವಿಜ್ಞಾನಿಗಳನ್ನು ಮುಜುಗರಕ್ಕೆ ಈಡುಮಾಡಿತಮ್ಮ ಹಕ್ಕನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ೧೯೯೦ರಲ್ಲೇ ಯು.ಎಸ್‌. ನ್ಯಾಶನಲ್ ಇನ್‌ಸ್ಟಿಟ್ಯೂಟ್‌ಆಫ್‌ಹೆಲ್ತ್‌ನವರಿಗೆ ಪಪುವಾ ನ್ಯೂಗಿನಿಯ ಹಾಗಹಾಯ್‌ಬುಡಕಟ್ಟು ವ್ಯಕ್ತಿಯೊಬ್ಬನಿಂದ ರಕ್ತವನ್ನು ಪಡೆದು ಲ್ಯೂಕೆಮಿಯಾ ಚಿಕಿತ್ಸೆಯ ಸಂಶೋಧನೆಗಾಗಿ ಅಭಿವೃದ್ಧಿಪಡಿಸಿದ ಜೀವಕೋಶ ಸಾಲಿಗೆ ಯು.ಎಸ್‌. ಪೇಟೆಂಟ್‌ಸಂ. ೫೩೯೭೬೯೬ ನೀಡಲಾಯಿತು. ಪೇಟೆಂಟನ್ನು ಪ್ರತಿಭಟನೆಯ ನಂತರ ೧೯೯೬ರ‍ಲ್ಲಿ ಹಿಂತೆಗೆದುಕೊಳ್ಳಲಾಯಿತು.

ನವೆಂಬರ್, ೨೦೦೦ದಲ್ಲಿ ಆಸ್ಟ್ರೇಲಿಯಾದ ಆಟೋಜೆನ್‌ಜೀನೋಮಿಕ್ಸ್‌ಕಂಪೆನಿ ಟೋಂಗನ್‌ಜನರ ಆನುವಂಶಿಕ  ಡೇಟಬೇಸ್‌ಲಭ್ಯತೆಯ ವಿಶೇಷ ಸವಲತ್ತು ಪಡೆಯುವ ಉದ್ದೇಶದಿಂದ ಟೋಂಗನ್‌ಆರೋಗ್ಯ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿತು. ಒಪ್ಪಂದದಂತೆ ಸಂಗ್ರಹಿಸಲಾಗುವ ಆನುವಂಶಿಕ ಮಾದರಿಗಳ ಆಸ್ತಿ ಹಕ್ಕುಗಳನ್ನು ಟೋಂಗಾ ಜನರೇ ಹೊಂದಿರುತ್ತಾರೆ ಆದರೆ ಆಟೋಜೆನ್‌ನವರು ಮಾತ್ರ ಅದನ್ನು ಪಡೆದು ಬಳಸಬಹುದಾಗಿರುತ್ತದೆ. ಅಂದರೆ ಕಾರ್ಯತಃ (de facto) ಆಟೋಜೆನ್‌ನವರೇ ಅದರ ಮಾಲೀಕರಾದಂತೆ. ಇದಕ್ಕೆ ಪ್ರತಿಫಲವಾಗಿ ಆಟೋಜೆನ್‌ಸಚಿವಾಲಯಕ್ಕೆ ಸಂಶೋಧನಾ ಧನಸಹಾಯ ನೀಡುತ್ತದೆ ಹಾಗೂ ಡೇಟಬೇಸ್‌ನ ಸಂಶೋಧನೆಗಳನ್ನು ವಾಣಿಜ್ಯವಾಗಿ ಬಳಸಿದಾಗ ಗೌರವಧನವನ್ನು ನೀಡುತ್ತದೆ. ಒಪ್ಪಂದದ ಮೊದಲು ಯಾವುದೇ ಸಾರ್ವಜನಿಕ ಚರ್ಚೆ ನಡೆಸಿರಲಿಲ್ಲ. ಕೊನೆಗೆ ಸ್ಥಳೀಯರ ಪ್ರತಿಭಟನೆಯಿಂದಾಗಿ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಆದರೆ ಮಾನವ ಆನುವಂಶಿಕ ವಸ್ತುಗಳ ಮೇಲಿನ ಸ್ವಾಮ್ಯತೆಯನ್ನು ಪಡೆಯುವ ಆಟೋಜೆನ್‌ನ ಪ್ರಯತ್ನಗಳು ಮುಂದುವರಿದವು. ಫೆಬ್ರವರಿ ೨೦೦೨ರ ವೇಳೆಗೆ ಅದು ಸ್ಥೂಲಕಾಯ ಮತ್ತು ಮಧುಮೇಹ ರೋಗಗಳಿಗೆ ಸಂಬಂಧಿಸಿದ ೪೧ ಮಾನವ ವಂಶವಾಹಿಗಳ ಮೇಲೆ ಪೇಟೆಂಟ್‌ಗಳನ್ನು ಹೊಂದಿತ್ತು.

ಆದರೆ, ಜನರ ಅರಿವಿಗೆ ಬರದಂತೆ ಅವರ ಕೂದಲು, ರಕ್ತ ಅಥವಾ ಊತಕ ಮಾದರಿಗಳನ್ನು ಸಂಗ್ರಹಿಸಿಹೊರಜಗತ್ತಿನ ಅರಿವಿಗೆ ಬಾರದಂತೆ ಜಗತ್ತಿನಾದ್ಯಂತ ಮಾನವ ಆನುವಂಶಿಕ ವಸ್ತುಗಳ ಮೇಲೆ ಪೇಟೆಂಟ್‌ಹಕ್ಕು ಪಡೆಯುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಜೈವಿಕ ರೂಪಗಳಿಗೆ ಮೊಟ್ಟಮೊದಲ ಪೇಟೆಂಟ್‌೧೯೮೦ರಲ್ಲಿ ಅಮೆರಿಇಕಾದ ಸುಪ್ರೀಂಕೋರ್ಟ್‌ತೀರ್ಮಾನವೊಂದರಲ್ಲಿ ನೀಡಲಾಯಿತು. ಆನಂದ ಚಕ್ರವತಿ ಎನ್ನುವವರು ({ಜೆನೆಟಿಕ್‌ಇಂಜಿನಿಯರಿಂಗ್‌ಮೂಲಕ ರೂಪಿಸಿದ) ಬ್ಯಾಕ್ಟೀರಿಯಾ ತಳಿ ಪ್ರಭೇದಕ್ಕೆ ಪೇಟೆಂಟ್‌ಅರ್ಜಿಸಲ್ಲಿಸಿದರು. ಈ ಹಕ್ಕೊತ್ತಾಯವನ್ನು ಅಮೆರಿಕಾದ ಸುಪ್ರೀಂಕೋರ್ಟ್‌ಮಾನ್ಯಮಾಡಿತು ಹಾಗೂ ಯಾವುದೇ ‘ಮಾನವ ನಿರ್ಮಿತ’ ಜೀವರೂಪಕ್ಕೆ ಅಂದರೆ ಪ್ರಾಕೃತಿಕವಾಗಿ ಲಭಿಸದಿರುವಂತಹುವುಗಳಿಗೆ ಪೇಟೆಂಟ್‌ನೀಡಬಹುದು ಎನ್ನುವ ವಾದಕ್ಕೆ ಬೆಂಬಲ ದೊರಕಿತು. ಅದಾದನಂತರ ಆನುವಂಶಿಕವಾಗಿ ಮಾರ್ಪಾಡು ಮಾಡಲ್ಪಟ್ಟ ಜೀವಿಗಳನ್ನು ಪೇಟೆಂಟ್‌ಮಾಡಿರುವ ಹಲವಾರು ಉದಾಹರಣೆಗಳಿವೆ. ಅಮೆರಿಕಾದ ಹಾರ್ವರ್ಡ್‌ವಿಶ್ವವಿದ್ಯಾನಿಲಯ ರೂಪಿಸಿದ ಕ್ಯಾನ್ಸರ್ ಇಲಿ ಇದಕ್ಕೆ ಒಂದು ಪ್ರಖ್ಯಾತ ಉದಾಹರಣೆ. ಈ ಇಲಿಯನ್ನು ಅಧಿಕ ಸಂಖ್ಯೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವಂತೆ ಆನುವಂಶಿಕವಾಗಿ ಮಾರ್ಪಡಿಸಲಾಗಿತ್ತು ಹಾಗೂ ಇದರಿಂದ ಕ್ಯಾನ್ಸರ್ ಸಂಶೋಧನೆಗೆ ಸಹಾಯವಾಗುತ್ತಿತ್ತು.

ಕೆಲವು ದೇಶಗಳಲ್ಲಿ (ಉದಾ: ಅಮೆರಿಕಾ ಹಾಗೂ ಯೂರೋಪಿಯನ್‌ಯೂನಿಯನ್‌ದೇಶಗಳಲ್ಲಿ) ಅಸ್ತಿತ್ವದಲ್ಲಿರುವ ಪ್ರಾಕೃತಿಕ ಸನ್ನಿವೇಶಗಳ ‘ಅನ್ವೇಷಣೆ’ಗಳಿಗೂ ಪೇಟೆಂಟ್‌ನೀಡಲಾಗಿದೆ. ಅಂದರೆ ಜೀವಿಗಳ ವಂಶವಾಹಿಗಳನ್ನು  (Genes) ಅಥವಾ ಆನುವಂಶಿಕ ಸರಣಿ  (Genetic Sequence) ಗಳನ್ನು ಸಹ ಅನ್ವೇಷಣೆಗಳೆಂದು ಪರಿಗಣಿಸಲಾಗಿದೆ. ಪ್ರಾಕೃತಿಕ ಪರಿಸರದಿಂದ ಪ್ರತ್ಯೇಕಿಸಲ್ಪಟ್ಟ ವಂಶವಾಹಿಗಳಿಗೆ ಯೂರೋಪಿಯನ್‌ಒಕ್ಕೂಟದ ದೇಶಗಳು ಪೇಟೆಂಟ್‌ನೀಡುತ್ತಿವೆ. ವಂಶವಾಹಿಗಳು ಪ್ರತ್ಯೇಕವಾಗಿ ಪರಿಸರದಲ್ಲಿ ಲಭ್ಯವಾಗುವುದಿಲ್ಲ, ಹಾಗಾಗಿ ಅವುಗಳನ್ನು ಪ್ರತ್ಯೇಕಿಸಲು ಮಾನವನ ನವೀನ ಶೋಧದ ಕೈವಾಡದ ಅವಶ್ಯ;ಕತೆಯಿದೆ ಎನ್ನುವುದೇ ಅದಕ್ಕೆ ಆ ದೇಶಗಳು ನೀಡುವ ಸಮರ್ಥನೆ. ಇದರಿಂದಾಗಿ ಅದು ಪ್ರಕೃತಿಯಲ್ಲಿರುವುದನ್ನು ಕಂಡು ಹಿಡಿಯುವುದಲ್ಲ ಬದಲಿಗೆ ಪೇಟೆಂಟ್‌ಮಾಡಬಲ್ಲ ಹೊಸ ಅನ್ವೇಷಣೆಯಾಗುತ್ತದೆ ಎನ್ನುತ್ತಾರೆ.

ಪ್ರ. .: ಜೆನೆಟಿಕ್‌ಇಂಜಿನಿಯರಿಂಗ್‌ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ನಡುವಿನ ಸಂಬಂಧವೇನು?

: ಸಜೀವರೂಪಗಳಿಗೆ ಪೇಟೆಂಟ್‌ನೀಡಲಾಗುತ್ತಿರುವ ಪರಿಪಾಠ ಜೆನೆಟಿಕ್‌ಇಂಜಿನಿಯರಿಂಗ್‌ಕ್ಷೇತ್ರದಲ್ಲಾಗುತ್ತಿರುವ ಪ್ರಗತಿಯನ್ನು ಅವಲಂಬಿಸಿದೆ. ಪರಿಸರದಲ್ಲಿ ಸಹಜ ಸ್ಥಿತಿಯಲ್ಲಿರುವ ಜೀವಿಯನ್ನು ಜೆನೆಟಿಕ್‌ಇಂಜಿನಿಯರಿಂಗ್‌ಮೂಲಕ ಬದಲಿಸಬಹುದು ಹಾಗೂ ಆ ರೀತಿ ಮಾರ್ಪಾಡಿಗೆ ಒಳಗಾದ ಜೀವಿ ಈ ಮೊದಲು ಪ್ರಕೃತಿಯಲ್ಲಿರಲಿಲ್ಲ, ಹಾಗಾಗಿ ಅದೊಂದು ಆವಿಷ್ಕಾರವೆಮದು ಹೇಳಿ ಅದರ ಮೇಲೆ ಬೌದ್ಧಿಕ ಆಸ್ತಿ ಹಕ್ಕನ್ನೂ ಕೋರಬಹುದು. ಜೆನೆಟಿಕ್‌ಇಂಜಿನಿಯರಿಂಗ್‌ನಲ್ಲಾಗುತ್ತಿರುವ ಪ್ರಗತಿಯ ಪ್ರತಿಫಲವೇ ಸಜೀವಿರೂಪಗಳ  ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಬಹುಪಾಲು ಕಾರಣವಾಗಿದೆ. ಏಕೆಂದರೆ, ಆನುವಂಶಿಕವಗಿ ರೂಪಾಂತರಿಸಿದ ಜೀವಿಗಳ ರಚನೆಯಲ್ಲಿ ಬಂಡವಾಳ ಹೂಡುವ ದೇಶಗಳು/ ಕಾರ್ಪೊರೇಶನ್‌ಗಳು ಅವುಗಳ ವಾಣಿಜ್ಯ ಬಳಕೆಯಿಂದ ತಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳಲು ಅವುಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಕೋರುತ್ತವೆ. ಇಲ್ಲಿರುವ ಒಂದು ಸಮಸ್ಯೆಯೆಂದರೆ, ಒಂದು ಜೈವಿಕ ಸಂಪನ್ಮೂಲದ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಕೋರಲು ಅದರ ಪ್ರಾಕೃತಿಕ ಅವಸ್ಥೆಯಿಂದ ಅತಿಸ್ವಲ್ಪ ಬದಲಾವಣೇ ಮಾತ್ರ ಮಾಡಬಹುದು.

ಬೌದ್ಧಿಕ ಆಸ್ತಿ ಹಕ್ಕುಗಳಿಗೆ ‘ಜೈವಿಕ’ ಸಂರಕ್ಷಣೆ ಒದಗಿಸಲು ಜೆನೆಟಿಕ್‌ಇಂಜಿನಿಯರಿಂಗ್‌ಅನ್ನು ಸಹ ಬಳಸಲಾಗುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ವಾಣಿಜ್ಯ ಹೈಬ್ರಿಡ್‌ಜೋಳ. ಈ ತಳಿಯ ಬೆಳೆಯಿಂದ ಪಡೆದ ಬೀಜಗಳನ್ನು ರೈತರು ತಾವೇ ಸ್ವತಃ ಮುಂದಿನ ಬೆಳೆಯ ಬಿತ್ತನೆಗೆ ಬಳಸಲಾಗುವುದಿಲ್ಲ. ಬಿತ್ತನೆಗೆ ಬಳಸಿದಲ್ಲಿ ಅದು ಕಸುವು ಕಳೆದುಕೊಂಡು ತೀರಾ ಕಡಿಮೆ ಇಳುವರಿ ನೀಡಿ ರೈತರಿಗೆ ನಷ್ಟವಾಗುತ್ತದೆ. ಅಂತಹ ‘ಜೈವಿಕ’ ರಕ್ಷಣೆ ಪೇಟೆಂಟ್ ಅಥವಾ ಸಸ್ಯತಳಿ ಸಂವರ್ಧಕರ ಹಕ್ಕುಗಳಂತೆಯೇ ಇರುತ್ತದೆ, ಏಕೆಂದರೆ ಅದು ರೈತರನ್ನು ಪ್ರತಿವರ್ಷ ಮಾರಾಟಗಾರರಿಂದ ಬಿತ್ತನೆ ಬೀಜವನ್ನು ಕೊಳ್ಳುವಂತೆ ಮಾಡುತ್ತದೆ. ವಾಸ್ತವವಾಗಿ ಪೇಟೆಂಟ್‌ಅಥವಾ ಸಸ್ಯತಳಿಸಂವರ್ಧಕರ ಹಕ್ಕುಗಳಿಗಿಂತ ಜೈವಿಕ ಸಂರಕ್ಷಣೆ ಹೆಚ್ಚು ಪರಿಣಾಮಕಾರಿಯಾದುದು ಏಕೆಂದರೆ ಇದರಲ್ಲಿ ಯಾವುದೇ ಮೇಲ್ವಿಚಾರಣೆಯ ಅವಶ್ಯಕತೆ ಇರುವುದಿಲ್ಲ-ಅದೇ ಸ್ವತಃ ಜಾರಿಗೆ ಬರುವಂತಹುದು.

ಜೈವಿಕ ಸಂರಕ್ಷಣೆಯ ಬಹುದೊಡ್ಡ ಉದಾಹರಣೆಯೆಂದರೆ ‘ಟರ್ಮಿನೇಟರ್’ ತಂತ್ರಜ್ಞಾನ . ಈ ತಂತ್ರಜ್ಞಾನದಲ್ಲಿ ಬಂಜೆ ಬೀಜಗಳನ್ನು ತಯಾರಿಸಲಾಗುತ್ತದೆ. ಅಂದರೆ ಟರ್ಮಿನೇಜರ್ ಬೀಜಗಳನ್ನು ಬಿತ್ತಿ ಫಸಲನ್ನು ಪಡೆಯಬಹುದು. ಆದರೆ ಫಸಲಿನಲ್ಲಿ ಪಡಯುವ ಬೀಜಗಳಲು ಬಂಜೆಯಾಗಿರುತ್ತವೆ ಹಾಗೂ ಅವುಗಳನ್ನು ಮುಂದೆ ಬಿತ್ತನೆಗೆ ಬಳಸಲಾಗದು. ಹಾಗಾಗಿ ರೈತ ತನ್ನ ಮುಂದಿನ ಬೆಳೆಗೆ ಮತ್ತೆ ಬಿತ್ತನೆ ಬೀಜಗಳನ್ನು ಕೊಳ್ಳಬೇಕಾಗುತ್ತದೆ. ಈ ಟರ್ಮಿನೇಟರ್ ತಂತ್ರಜ್ಞಾನ ಯಾವುದೇ ರೀತಿಯ ಬೌದ್ಧಿಕ ಆಸ್ತಿ ಹಕ್ಕಿಗಿಂತ ಹೆಚ್ಚು ಪರಿಣಾಮಕಾರಿಯಾದುದು. ವಾಣಿಜ್ಯ ಕಾರ್ಪೊರೇಶನ್ನುಗಳು ಅವರ ಬೀಜದ ಯಾವುದೇ ‘ಕಾನೂನು ಬಾಹಿರ’ ಬಳಕೆಯ ಮೇಲೆ ಕಣ್ಣಿಡಬೇಕಾಗಿಲ್ಲ. ಬೀಜವು ಆಂತರಿಕವಾಗಿ ಜೈವಿಕ ‘ಬೀಗ’ವೊಂದನ್ನು ಹೊಂದಿದ್ದು ಕಾರ್ಪೊರೇಶನ್ನಿನ ‘ಹಕ್ಕನ್ನು’ ಅದು ಸಂರಕ್ಷಿಸುತ್ತದೆ. ಟರ್ಮಿನೇಟರ್ ತಂತ್ರಜ್ಞಾನವನ್ನು ಅಮೆರಿಕಾದ ಸರ್ಕಾರ ಹಾಗೂ ಬಹುರಾಷ್ಟ್ರೀಯ ಬೀಜ ಮತ್ತು ಕೃಷಿ ರಾಸಾಯನಿಕ ಕಾರ್ಪೊರೇಶನ್ನುಗಳು ತಮ್ಮ ಬೀಜೋದ್ಯಮದ ಲಾಭವನ್ನು ಗರಿಷ್ಠ ಪಡಿಸಿಕೊಳ್ಳಲು ಅಭಿವೃದ್ಧಿಪಡಿಸಿದವು. ಟರ್ಮಿನೇಟರ್ ಬೀಜಗಳನ್ನು ಇನ್ನೂ ವಾಣಿಜ್ಯವಾಗಿ ಬಿಡುಗಡೆ ಮಾಡಿಲ್ಲ (ಜುಲೈ, ೨೦೦೫ರವರೆಗೂ) ಅಥವಾ ಕ್ಷೇತ್ರ ಪರೀಕ್ಷೆಗೆ ಒಳಪಡಿಸಿಲ್ಲ. ಆದರೆ ಅಮೆರಿಕಾದಲ್ಲಿ ಹಸಿರು ಮನೆಗಳಲ್ಲಿ ಅವುಗಳನ್ನು ಪರೀಕ್ಷಿಸಲಾಗುತ್ತಿದೆ.

ಟರ್ಮಿನೇಟರ್ ತಂತ್ರಜ್ಞಾನವು ಬಾಹಯ್ಯ ಬೀಜಸಂಪನ್ಮೂಲಗಳ ಮೇಲೆ ರೈತರು ಅನಿವಾರ್ಯವಾಗಿ ಅವಲಂಬಿತವಾಗುವಮತೆ ಮಾಡುವುದರಿಂದ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ (ಇತರ ಬೆಳೆಗಳೊಂದಿಗಿನ ಅಡ್ಡ ಪರಾಗಸ್ಪರ್ಶದಿಂದ ಆ ಬೆಳೆಗಳ ಬೀಜಗಳನ್ನೂ ಬಂಜೆ ಮಾಡುವುದು, ಮುಂತಾದುವು) ತಿಳಿದಿಲ್ಲವಾದುದರಿಂದ ಭಾರತವು ಟರ್ಮಿನೇಟರ್ ತಂತ್ರಜ್ಞಾನದ ಬೀಜಗಳ ಬಳಕೆಯನ್ನು ನಿಷಿದ್ಧಗೊಳಿಸಿದೆ. ೨೦೦೦ದ ವಿಶ್ವಸಂಸ್ಥೆಯ  ಜೈವಿಕ ವೈವಿಧ್ಯತೆಯ ಒಡಂಬಡಿಕೆಯಲ್ಲಿ (CBD) ಸರ್ಕಾರಗಳು ಟರ್ಮಿನೇಟರ್ ತಂತ್ರಜ್ಞಾನವನ್ನು ವಾಣಿಜ್ಯಗೊಳಿಸಬಾರದು ಅಥವಾ ಕ್ಷೇತ್ರ ಪರೀಕ್ಷೆಗೊಳಿಸಬಾರದೆಂಬ ಶಿಫಾರಸ್ಸನ್ನು ಮಾಡಿದೆ. ಇದೊಂದು ರೀತಿಯಲ್ಲಿ ಆ ತಂತ್ರಜ್ದಞಾನದ ಅಂತರರಾಷ್ಟ್ರೀಯ ನಿಷೇಧದಂತೆ ಕೆಲಸ ಮಾಡುತ್ತಿದೆ. ಆದರೆ ಬೀಜ ನಿಗಮಗಳು ಈ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ತರುತ್ತಿವೆರ.

ಪ್ರ. .: ಜೀವಿಗಳ ಹಾಗೂ ಜೈವಿಕ ಸಂಪನ್ಮೂಲಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡಬಹುದೆ?

: ಈ ಪ್ರಶ್ನೆ ಹಲವಾರು ನೈತಿಕ ಹಾಗೂ ತತ್ವಚಿಂತನೆಯ ಆತಂಕಗಳನ್ನು ಹುಟ್ಟುಹಾಕಿದೆ. ಪರಿಸರ ಸಂರಕ್ಷಕರು, ಸ್ಥಳೀಯ ಸಮುದಾಯಗಳು, ಸಾರ್ವಜನಿಕರು ಮುಂತಾದವರು ಈ ಮುಂದಿನ ಕಾರಣಗಳಿಗಾಗಿ ಜೀವಿಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಮುಖ್ಯವಾಗಿ ಪೇಟೆಂಟ್‌ಗಳು ಮತ್ತು ಸಸ್ಯ ತಳಿಸಂವರ್ಧಕರ ಹಕ್ಕುಗಳನ್ನು) ನೀಡಬಾರದೆನ್ನುತ್ತಾರೆ:

ಬೆಳೆಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಪಡೆಯುವ ಕಾರ್ಪೊರೇಶನ್‌ಗಳು ರೈತರ ಸುರಕ್ಷತೆಯನ್ನು ಹೇಗೆ ಅಭದ್ರಗೊಳಿಸುತ್ತವೆ

ಬೌದ್ಧಿಕ ಆಸ್ತಿ ಹಕ್ಕುದಾರರು ತಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸುತ್ತಾರೆ ಎನ್ನುವುದನ್ನು ಅವಲಂಬಿಸಿ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಬೆಳೆ ತಳಿಗಳ ಇಳುವರಿಯ ಬೀಜಗಳನ್ನು ರೈತರು ಸಂಗ್ರಹಿಸಿಟ್ಟು ಮುಂದಿನ ಬೆಳೆಗೆ ಬಳಸುವುದು ಕಾನೂನುಬಾಹಿರವಾಗಬಹುದು. ಆದರೆ ಇಂತಹ ಪರಿಸ್ಥಿತಿ ಭಾರತದಲ್ಲಿಲ್ಲ. ಪ್ರಸ್ತುತವಿರುವ ಕಾನೂನಿನಡಿಯಲ್ಲಿ ರೈತರು ಎಲ್ಲ ಬೆಳೆಗಳ ಹಾಗೂ ತಳಿಗಳನ್ನು ಬಿತ್ತಿ, ಬೆಳೆದು ಅದರ ಬೀಜಗಳನ್ನು ಸಂಗ್ರಹಿಸಿಟ್ಟು ಮುಂದಿನ ಬಿತ್ತನೆಗೆ ಅದನ್ನೇ ಉಪಯೋಗಿಸಬಹುದು (ಭಾರತದ ಸಸ್ಯ ತಳಿಗಳ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಅಧಿನಿಯಮಕ್ಕೆ ಅನುಬಂಧ ನೋಡಿ). ಆದರೆ ಅಂತರರಾಷ್ಟ್ರೀಯ ಅನುಭವಗಳು ಇಂತಹ ಆತಂಕಗಳು ವಾಸ್ತವವಾದುದು ಹಾಗೂ ಭಾರತದಲ್ಲಿ ಅದರ ವಿರುದ್ಧ ಸಂರಕ್ಷಣೆಯನ್ನು ಪಡೆಯುವುದು ಅತ್ಯವಶ್ಯಕ ಎಂಬುದಾಗಿ ತೋರಿಸಿಕೊಟ್ಟಿವೆ. ಮಾನ್ಸಾಂಟೋನಂತಹ ಕಾರ್ಪೊರೇಷನ್‌ಗಳು ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ತಳಿಗಳ  ಬೀಜವನ್ನು ಕಾನೂನುಬಾಹಿರವಾಗಿಬಳಸಿರುವ ಅಥವಾ ಮರುಬಳಸಿರುವ ರೈತರ ಮೇಲೆ ದಾವೆ ಹೂಡಲು ಸಿದ್ಧವಾಗಿರುತ್ತವೆ.

ಈಗಾಗಲೇ ಮಾನ್ಸಾಂಟೋ ಅದರ ಅನುಮತಿಯಿಲ್ಲದೆ ಬೀಜಗಳನ್ನು ಬಳಸಿರುವ ರೈತರ ಮೇಲೆ ೧೫೦ ದಾವೆಗಳನ್ನು ಹೂಡಿದೆ. ಕೆನಡಾದ ಪರ್ಸಿಶ್ಮೀಸರ್ ಎಂಬಾತನ ತೋಟದಲ್ಲಿ ಮಾನ್ಸಾಂಟೋದ ರೌಂಡ್‌ಆಫ್‌ರೆಡಿ ಕೆನೋಲಾ ಬೆಳೆಯ (ಒಂದು ವಂಶವಾಹಿ ರೂಪಾಂತರಿತ ಬೆಳೆ) ಅವಶೇಷಗಳಿವೆಯೆಂದೂ, ರೈತನ ಆದಾಯದಲ್ಲಿ ಪಾಲು ಕೊಡಬೇಕೆಂಧು ಮಾನ್ಸಾಂಟೋ ದಾವೆ ಹೂಡಿತ್ತು. ಏಳು ವರ್ಷಗಳ ಕಾಲ ನಡೆದ ನ್ಯಾಯಾಲಯದ ವಾದವಿವಾದಗಳಲ್ಲಿ ಆತ ಮಾನ್ಸಾಂಟೋದ ಕೆನೋಲಾ ತಳಿಯನ್ನು ಬಿತ್ತನೆ ಮಾಡಲಿಲ್ಲವೆಂದೂ, ಅಕ್ಕಪಕ್ಕದ ತೋಟಗಳಲ್ಲಿನ ಬೆಳೆಗಳಿಂದ ಅಥವಾ ಕೆನೋಲಾ ಇಳುವರಿ ಸಾಗಿಸುವ ಟ್ರಕ್ಕುಗಳಿಂದ ಅನ್ಯಪರಾಗಸ್ಪರ್ಶದಿಂದ ತನ್ನ ಹೊಲದಲ್ಲಿ ಮಾನ್ಸಾಂಟೋದ ತಳಿಯ ಅವಶೇಷಗಳಿರಬಹುದೆಂದು ವಾದಿಸಿದ. ರೈತ ಮಾನ್ಸಾಂಟೊ ತಳಿಯನ್ನು ತಿಳಿದು ಬಿತ್ತನೆ ಮಾಡಿದ್ದಾನೆಯೋ ಅಥವಾ ತಿಳಿಯದೇ ಮಾಡಿದ್ದಾನೆಯೋ ಎಂಬುದು ಮುಖ್ಯವಲ್ಲಆತನ ಬೆಳೆಯಲ್ಲಿ ಮಾನ್ಸಾಂಟೋ ತಳಿಯ ಆನುವಂಶಿಕ ಅಂಶಗಳು ಇವೆಅದು ಮುಖ್ಯವಾದುದು ಆದುದರಿಂದ ಆತ ದಂಡವನ್ನು ತೆರಲೇಬೇಕು ಎಂದು ಮಾನ್ಸಾಂಟೋ ತನ್ನ ಪಟ್ಟು ಬಿಡದೆ ವಾದಿಸಿತು. ದಾವೆ ಕೆನಡಾದ ಉಚ್ಛ ನ್ಯಾಯಾಲಯ ತಲುಪಿತು ಹಾಗೂ ಅಲ್ಲಿ ರೈತನದೇ ತಪ್ಪು ಹಾಗೂ ಆತನ ಮೇಲೆ ಕ್ರಮಕೈಗೊಳ್ಳಲು ಮಾನ್ಸಾಂಟೋಗೆ ಹಕ್ಕಿದೆ ಎಂದು ತೀರ್ಪು ನೀಡಿತು. ಅಷ್ಟೇ ಅಲ್ಲ ವಂಶವಾಹಿಯೊಂದು (Gene) ಪೇಟೆಂಟ್‌ಆಗಿದ್ದಲ್ಲಿ, ವಂಶವಾಹಿ ಹೊಂದಿರುವ ಮತ್ತೊಂದು ಉಚ್ಛ ಜೀವಿಗೂ ಪೇಟೆಂಟ್‌ಅನ್ವಯಿಸುತ್ತದೆ ಎಂದೂ ಸಹ ನ್ಯಾಯಾಲಯ ತೀರ್ಪು ನೀಡಿತು. ಹಾಗಾಗಿ ರೈತರು ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಬೆಳೆಯನ್ನು ಬೆಳೆಯದೇ ಇದ್ದರೂ ಅಕ್ಕಪಕ್ಕದ ಹೊಲಗಳಿಂದ ಅಥವಾ ಮತ್ತಾವುದಾದರೂ ಮಾರ್ಗದಿಂದ ಅನ್ಯಪರಾಗ ಸ್ಪರ್ಶವಾಗಿ ತಮ್ಮ ಬೆಳೆ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಬೆಳೆಯಿಂದ ಕಲುಷಿತಗೊಂಡರೂ ಸಹ ಅಂತಹ ರೈತರು ಶಿಕ್ಷಾರ್ಹರಾಗುತ್ತಾರೆ! ೨೦೦೪ರಲ್ಲಿ ಮೆಕ್ಸಿಕೋದ ಚಿಯಾಪಸ್‌ನಲ್ಲಿ ಯಾರಾದರೂ ರೈತರು ಮಾನ್ಸಾಂಟೋದ ಬೀಜಗಳನ್ನು ಕಾನೂನುಬಾಹಿರವಾಗಿ ಬಳಸುತ್ತಿದ್ದಲ್ಲಿ ಅಂತಹವರಿಗೆ ದಂಡ ವಿಧಿಸಬಹುದು ಹಾಗೂ ಜೈಲಿಗೆ ಹಾಕಬಹುದೆಂದು ಎಚ್ಚರಿಕೆಯ ಜಾಹೀರಾತನ್ನು ಮಾನ್ಸಾಂಟೋ ಪ್ರಕಟಿಸಿತ್ತು.

* ‘ಜೀವ ಯಾಜಮಾನ್ಯ ಸಾಧ್ಯವಿಲ್ಲ:

‘ಜೀವ’ವನ್ನು ಪೇಟೆಂಟ್‌ಮಾಡುವುದು ಸಾಧ್ಯವಿಲ್ಲವೆಂದು ವಾದಿಸಲಾಗುತ್ತಿದೆ; ಅದು ಹಲವಾರು ನೈತಿಕ ಪ್ರಶ್ನೆಗಳಿಗೆ ಕಾರಣವಾಗುತ್ತದೆ ಹಾಗೂ ಅದು ಬಹಳಷ್ಟು ಸಾರಿ ಸಮುದಾಯದ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳನ್ನು ಅವಲಂಬಿಸಿರುತ್ತದೆ . ಉದಾಹರಣೆಗೆ, ಕೆಲವು ಧರ್ಮಗಳು ಎಲ್ಲ ಜೀವಿಗಳೂ ಆತ್ಮವನ್ನು ಹೊಂದಿರುತ್ತವೆ ಎಂಬ ನಂಬಿಕೆ ಹೊಂದಿರುವುದರಿಂದ ಮನುಷ್ಯ ಜೀವಿಯೊಂದರ ಯಜಮಾನನಾಗುವುದು ಸಾಧ್ಯವೆ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಯಾವುದೇ ಜೀವಿ ಅಥವಾ ಪ್ರಕೃತಿ ಮಾನವ ನಿರ್ಮಿತ ಅಲ್ಲದಿರುವುದರಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅವುಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸಬಾರದು ಹಾಗೂ ಅವು ಎಲ್ಲ ಮಾನವರಿಗೂ ಸೇರಿರುವುದೆಂದು ವಾದಿಸಲಾಗುತ್ತಿದೆ.

* ಜೈವಿಕ ಅನ್ವೇಷಣೆಗಳಿಗೆ ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿಯ ಬುದ್ಧಿವಂತಿಕೆ ಕಾರಣವಲ್ಲ.

ಮಿಶ್ರತಳಿ ಜಾನುವಾರುಗಳು ಅಥವಾ ಸುಧಾರಿಸಿದ ಬೆಳೆಗಳಂತಹ ಜೈವಿಕ ಅನ್ವೇಷಣೆಗಳು ಯಾವುದೇ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯ ಪ್ರತಿಫಲವಲ್ಲ. ಅದಕ್ಕಾಗಿ ಹಲವಾರು ತಲೆಮಾರುಗಳ ಜನ ಲಭ್ಯವಿದ್ದ ಜ್ಞಾನವನ್ನು ಅಭಿವೃದ್ಧಿಪಡಿಸಿ ಅನ್ವೇಷಣೆ ನಡೆಸಿರುತ್ತಾರೆ . ಉದಾಹರಣೆಗೆ, ಹೈಬ್ರಿಡ್‌ಬೆಳೆಯ ತಳಿಗಳನ್ನು ಲಭ್ಯವಿರುವ ಸಾಂಪ್ರದಾಯಕ ಬೆಳೆಯ ತಳಿಗಳನ್ನು ಹಲವಾರು ತಲೆಮಾರುಗಳ ರೈತರು ಅಭಿವೃದ್ಧಿಪಡಿಸಿದ ತಳಿಗಳ ಆಧಾರದ ಮೇಲೆ ತಳಿಸಂವರ್ಧನೆ ಮಾಡಿರುತ್ತಾರೆ ಹಾಗೂ ಅವುಗಳನ್ನು ಸಾಮಾನ್ಯವಾಗಿ ಯಾರೊಬ್ಬರ ಸ್ವತ್ತು ಎಂದು ಪರಿಗಣಿಸುವುದಿಲ್ಲ. ಜಗತ್ತಿನಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ರೈತ ಸಮುದಾಯವು ಅಂತಹ ಜ್ಞಾನವು ಇಡೀ ಸಮುದಾಯಕ್ಕೆ ಸೇರಿದುದೆಂದೂ ಅಥವಾ ಅದು ‘ದೇವರ ವರದಾನ’ವೆಂದೂ ಅಥವಾ ತಮ್ಮ ಪೂರ್ವಿಕರ ಬಳವಳಿಯೆಂದು ನಂಬಿರುತ್ತಾರೆಯೇ ಹೊರತು ಅದನ್ನು ಖಾಸಗಿ ಸ್ವತ್ತೆಂದು ಪರಿಗಣಿಸಿರುವುದಿಲ್ಲ.

* ಖಾಸಗಿ ಏಕಸ್ವಾಮ್ಯತೆ ಜೈವಿಕ ಸಂಪನ್ಮೂಲಗಳ ಬಳಕೆಯನ್ನು ನಿರ್ಬಂಧಿಸುತ್ತದೆ.

ಸಂಪನ್ಮೂಲಗಳ ಮೇಲಿನ ಖಾಸಗಿ ಏಕಸ್ವಾಮ್ಯತೆ (ವಿಶೇಷವಾಗಿ ಕಾರ್ಪೊರೇಟ್‌ಇತರರು ಅದರ ಸುದಪಯೋಗ ಮಾಡಿಕೊಳ್ಳುವುದನ್ನು ತಡೆಯುತ್ತದೆ. ಉದಾಹರಣೆಗೆ, ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಸಸ್ಯತಳಿಯ ಬೆಳೆಯಿಂದ ಪಡೆದ ಬೀಜಗಳನ್ನು ಮಾರಾಟ ಮಾಡಲು ನಿರ್ಬಂಧವಿರುತ್ತದೆ. ಅಥವಾ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ವಂಶವಾಹಿ ಸರಣಿಯ್ನು (Gene Sequence) ಸಂಶೋಧನೆಗೆ ಬಳಸಲು ನಿರ್ಬಂಧವಿರುತ್ತದೆ. ಮಾಹಿತಿ ಹಾಗೂ ಸಂಪನ್ಮೂಲಗಳ ಹರಿವನ್ನು ನಿರ್ಬಂಧಿಸುವ ಹಾಗೂ ತನ್ಮೂಲಕ ಅದನ್ನು ಅವಲಂಬಿಸಿರುವ ಜನರ ಜೀವನಾಧಾರ,  ಆಹಾರ ಸುರಕ್ಷತೆ ಹಾಗೂ ಜೈವಿಕ ವೈವಿಧ್ಯತೆಯ ಮೇಲೆ ಬೀರುವ ಪರಿಣಾಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೇಗೆ ಬಳಸಲಗುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಸಸ್ಯ ತಳಿ ಸಂವರ್ಧಕರ ಹಕ್ಕುಗಳನ್ನು (PBR) ನೀಡಿದುದರಿಂದ ರೈತರಿಗೆ ಹೆಚ್ಚಿನ ಬಿತ್ತನೆ ವಸ್ತು ದೊರಕಿದುದಾಗಲೀ ಅಥವಾ ಹೆಚ್ಚಿನ ಅನ್ವೇಷಣೆಗಳಿಗೆ ಅವಕಾಶ ಮಾಡಿಕೊಟ್ಟಿದುದಾಗಲೀ ಕಂಡುಬರಲಿಲ್ಲ. ಬದಲಿಗೆ ಸಸ್ಯ ಸಂವರ್ಧಕರ ಹಕ್ಕುಗಳ ಸಂರಕ್ಷಣೆಯಿಂದ ದೊಡ್ಡ ವಾಣಿಜ್ಯ ರೈತರಿಗೆ ಹಾಗೂ ಬೀಜದ ಕಂಪೆನಿಗಳಿಗೆ ನೇರ ಲಾಭ ದೊರಕಿರುವುದಾಗಿ ಕಂಡುಬಂದಿತು. ಬಡ ರೈತರಿಗೆ ಯಾವುದೇ ಪರೋಕ್ಷ ಅನುಕೂಲ ಅದರಿಂದ ದೊರಕಿರಲಿಲ್ಲ. ಅಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿ, ಸಂರಕ್ಷಿಸಿ , ವಿನಿಮಯ ಮಾಡಿಕೊಳ್ಳುವುದರ ಮೇಲೆ ನಿರ್ಬಂಧವಿದ್ದುದರಿಂದ ಭವಿಷ್ಯದಲ್ಲಿ ಆ ರೈತರ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಂಭವತೆಯೇ ಹೆಚ್ಚು.