ಬೌದ್ಧಿಕ ಆಸ್ತಿ ಹಕ್ಕು, ಪೇಟೆಂಟ್‌, ಜೈವಿಕ ಚೌರ್ಯ … ಇವೇ ಮುಂತಾದ ಪದಗಳು ಇಂದು ಹೆಚ್ಚು ಹೆಚ್ಚು ಸುದ್ದಿಯಲ್ಲಿ ಕೇಳಿಬರುತ್ತಿವೆ. ಇವು ವಿವಾದಾಸ್ಪದ ವಿಷಯಗಳಾಗಿವೆ ಎಂಬುದು ಸಾಮಾನ್ಯ ಮನುಷ್ಯನಿಗೂ ತಿಳಿದಿದೆ. ಆದರೆ ಅವುಗಳ ಅರ್ಥವೇನೆಂಬುದು ಮಾತ್ರ ಅವರಿಗೆ ಸ್ಪಷ್ಟವಾಗಿಲ್ಲ. ಸಾಮಾನ್ಯ ಮನುಷ್ಯನ ಬದುಕಿನ ಮೇಲೆ ಅವು ಉಂಟುಮಾಡುವ ಪರಿಣಾಮಗಳಾದರೂ ಏನು? ಅವು ಚರ್ಚಾಸ್ಪದ ವಿಷಯಗಳಾದರೂ ಆಗಿರುವುದೇಕೆ? ಜೈವಿಕ ಸಂಪನ್ಮೂಲಗಳಿಗೂ ಬೌದ್ಧಿಕ ಆಸ್ತಿ ಹಕ್ಕುಗಳಿಗೂ ಇರುವ ಸಂಬಂಧಗಳೇನು? ಕೆಲ ವರ್ಷಗಳ ಹಿಂದೆ ಅಮೆರಿಕ ಪೇಟೆಂಟ್‌ಮಾಡಿದ ಅರಿಶಿನದ ಔಷಧೀಯ ಗುಣಗಳಂತಹ ಭಾರತದ ಸಾಂಪ್ರದಾಯಕ ಜ್ಞಾನಕ್ಕೂ ಅದಕ್ಕೂ ಇರುವ ಸಂಬಂಧವೇನು? ಬಾಸುಮತಿ ಅಕ್ಕಿಯ ಮೇಲಿನ ಅಮೆರಿಕದ ಪೇಟೆಂಟ್‌ಗಳಿಂದಾಗಿ ಜನ ಪ್ರತಿಭಟಿಸುತ್ತಿರುವುದೇಕೆ? ಬೌದ್ಧಿಕ ಆಸ್ತಿ ಹಕ್ಕುಗಳ ನಿಗೂಢ ಜಗತ್ತನ್ನು ಸರಳವಾಗಿ ಅರ್ಥವಾಗುವಂತೆ ಮಾಡಲು ಈ ಕೃತಿ ಪ್ರಯತ್ನಿಸುತ್ತದೆ.

ಪೇಟೆಂಟ್‌ಗಳು, ಕಾಪಿರೈಟ್‌ಗಳು ಮತ್ತು ಸಸ್ಯ ತಳಿಸಂವರ್ಧಕರ ಹಕ್ಕುಗಳಂತಹ ಬೌದ್ಧಿಕ ಆಸ್ತಿ ಹಕ್ಕುಗಳನ್ನು ವಿವರಿಸಲು ಸಾಮಾನ್ಯವಾಗಿ ಬೌದ್ಧಿಕ ಆಸ್ತಿ ಹಕ್ಕು ಅಥವಾ ಐ.ಪಿ.ಆರ್. (IPR= ಇಂಟಲೆಕ್ಚುಯಲ್‌ಪ್ರಾಪರ್ಟಿ ರೈಟ್ಸ್) ಪದಗಳನ್ನು ಬಳಸುತ್ತಾರೆ. ಬೌದ್ಧಿಕ ಆಸ್ತಿ ಹಕ್ಕಿನ ಉದ್ದೇಶವೇನೆಂದರೆ ಅನ್ವೇಷಣೆಗಳಿಗೆ ಮತ್ತು ನವೀನ ಶೋಧಗಳಿಗೆ ಉತ್ತೇಜನ ನೀಡುವುದು, ತಮ್ಮ ಅನ್ವೇಷಣೆಯನ್ನು ಇತರ ಸ್ಪರ್ಧಿಗಳು ನಕಲು ಮಾಡುವ ಹೆದರಿಕೆಯಿಲ್ಲದೆ ಅನ್ವೇಷಕರು ತಮ್ಮ ಅನ್ವೇಷಣೆಗಳಿಗೆ ತಕ್ಕ ಆರ್ಥಿಕ ಪ್ರತಿಫಲ ಪಡೆಯುವುದನ್ನು ಖಾತ್ರಿ ಪಡಿಸಿಕೊಳ್ಳುವುದು. ಒಬ್ಬರ ಅನ್ವೇಷಣೆಯನ್ನು ಮತ್ತೊಬ್ಬರು ವಾಣಿಜ್ಯವಾಗಿ ತಯಾರುಮಾಡುವುದನ್ನು, ಮಾರಾಟ ಅಥವಾ ಬಳೆಕಮಾಡುವುದನ್ನು ತಡೆಯುವುದರಿಂದ ಬೌದ್ಧಿಕ ಆಸ್ತಿ ಹಕ್ಕು ಆ ಅನ್ವೇಷಣೆಯ ಮೇಲೆ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಏಕಸ್ವಾಮ್ಯತೆಯನ್ನು ನೀಡುತ್ತದೆ ಹಾಗೂ ಇದರಿಂದ ಬೌದ್ಧಿಕ ಆಸ್ತಿ ಹಕ್ಕುದಾರನಿಗೆ ಗರಿಷ್ಠ ಲಾಭ ದೊರಕುವಂತಾಗುತ್ತದೆ. ಒಟ್ಟಾರೆಯಾಗಿ ಸಮಾಜಕ್ಕೆ ಅನುಕೂಲವಾಗುವ ಹೊಸ ತಂತ್ರಜ್ಞಾನಗಳನ್ನು ಮತ್ತು ಆವಿಷ್ಕಾರಗಳನ್ನು ಜನರು ಅಭಿವೃದ್ಧಿಪಡಿಸುವುದನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಸೂಕ್ತ ಉತ್ತೇಜನ ದೊರಕುವಂತೆ ಮಾಡಿ ವಿಸ್ತೃತ ಸಾಮಾಜಿಕ ಅನುಕೂಲತೆಗಳನ್ನು ಉಂಟುಮಾಡುವುದು ಬೌದ್ಧಿಕ ಆಸ್ತಿ ಹಕ್ಕುಗಳ ಉದ್ದೇಶವಾಗಿರುತ್ತದೆ.

ಸಾಂಪ್ರದಾಯಕವಾಗಿ, ಬೌದ್ಧಿಕ ಆಸ್ತಿ ಹಕ್ಕುಗಳು ಜೀವಿಗಳ ಮೇಲೆ ಅನ್ವಯಿತವಾಗುವುದಿಲ್ಲ, ಏಕೆಂಧರೆ ಸರಳವಾಗಿ ಹೇಳುವುದಾದರೆ ಜೀವಿಗಳು ಮಾನವ ರಚನೆಗಳಲ್ಲ ಹಾಗೂ ಅವುಗಳನ್ನು  ‘ಅನ್ವೇಷಣೆ’ಗಳು ಎಂದು ಹೇಳಲಾಗದು. ಜೀವಿಗಳ ಅಥವಾ ಜೈವಿಕ ಸಂಪನ್ಮೂಲಗಳ (ಉದಾ: ಪ್ರಾಣಿಗಳು, ಸಸ್ಯಗಳು, ಸೂಕ್ಷ್ಮಜೀವಿಗಳು, ವಂಶವಾಹಿಗಳು, ಜೀವಕೋಶಗಳು) ಮೇಲಿನ ಬೌದ್ಧಿಕ ಆಸ್ತಿ ಹಕ್ಕು ಇತ್ತೀಚಿನ ಬೆಳವಣಿಗೆಯಾಗಿದೆ. ಯಾವ ರೀತಿಯ ಜೀವ ರೂಪಗಳನ್ನು ಬೌದ್ಧಿಕ ಆಸ್ತಿ ಹಕ್ಕುಗಳಡಿ ತರಬಹುದು ಹಾಗೂ ಅವುಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುದಾರನ ಹಕ್ಕುಗಳೇನೇನು ಎಂಬುದರ ಬಗೆಗೆ ವಿವಿಧ ದೇಶಗಳು ವಿವಿಧ ರೀತಿಯ ಕಾನೂನುಗಳನ್ನು ಹೊಂದಿವೆ. ಆದರೆ, ೧೯೯೪ರ ವಿಶ್ವ ವಾಣಿಜ್ಯ ಸಂಸ್ಥೆಯ (WTO) ‘ಟ್ರಿಪ್ಸ್’ (TRIPS) ಒಪ್ಪಂದದಲ್ಲಿ ತನ್ನ ಸದಸ್ಯ ರಾಷ್ಟ್ರಗಳಿಗೆ ಜೀವರೂಪಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಅನುವು ಮಾಡಿಕೊಡುವ ನಿಯಮಾವಳಿಗಳನ್ನು ಪರಿಚಯಿಸುವುದನ್ನೊಳಗೊಂಡಂತೆ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮಾವಳಿಗಳನ್ನು ರೂಪಿಸಿದ್ದು ಈ ಬೌದ್ಧಿಕ ಆಸ್ತಿ ಹಕ್ಕಿನ ಕಾರ್ಯನೀತಿಯು ಕೆಲವೇ ದೇಶಗಳಿಗೆ ಮಾತ್ರ ಸೀಮಿತವಾಗಿದೆ.

ಜೈವಿಕ ಸಂಪನ್ಮೂಲಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳ ಪರಿಣಾಮಗಳು

ಜೈವಿಕ ಸಂಪನ್ಮೂಲಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮೂರು ವಿಸ್ತೃತ ಕಾರಣಗಳಿಂದಾಗಿ ಆತಂಕದಿಂದ ನೋಡಲಾಗುತ್ತಿದೆ ಹಾಗೂ ಟೀಕಿಸಲಾಗುತ್ತಿದೆ. ಮೊದಲನೆಯದಾಗಿ, ಪ್ರತ್ಯೇಕಿಸಿದ ವಂಶವಾಹಿ ಸರಣಿ (Gene Sequence) ಯನ್ನು ಒಳಗೊಂಡಂತೆ ಯಾವುದೇ ಸಸ್ಯವನ್ನು, ಪ್ರಾಣಿಯನ್ನು ಅಥವಾ ಸೂಕ್ಷ್ಮಜೀವಿಗಳನ್ನು ಒಳಗೊಂಡು ಸಮಸ್ತ ಮನುಕುಲಕ್ಕೆ ಪರಂಪರಾನುಗತ ಬಳುವಳಿಯಾಗಿ ಬಂದಿರುವ ಜೈವಿಕ ರಾಶಿಯನ್ನು ‘ಅನ್ವೇಷಣೆ’ಗಳು ಎಂದು ಪರಿಗಣಿಸಿ ಅವುಗಳ ಮೇಲೆ ಖಾಸಗಿ ಒಡೆತನ ಸಾಧಿಸುವುದು ಅನೈತಿಕ ಎನ್ನುವುದು ಬಹಳಷ್ಟು ಜನರ ಭಾವನೆ. ಎರಡನೆಯದಾಗಿ, ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ವಿಜ್ಞಾನಿಗಳು ಮತ್ತು ಅಲ್ಲಿನ ವ್ಯಾಪಾರ ಸಂಸ್ಥೆಗಳು ಸಾಂಪ್ರದಾಯಕವಾಗಿ ಬಳಸಲಾಗುತ್ತಿರುವ ಬೇವು, ಅರಿಶಿನ ಮತ್ತು ಬಾಸುಮತಿ ಅಕ್ಕಿಗಳಂತಹ ಜೈವಿಕ ಸಂಪನ್ಮೂಲಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದಿರುವುದು. ಇದನ್ನು ‘ಜೈವಿಕ ಚೌರ್ಯ’ವೆಂದು (Biopiracy) ಕರೆಯಲಾಗುತ್ತದೆ. ಇದು ಜೈವಿಕ ಸಂಪನ್ಮೂಲಗಳು ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಗಳು ಖಾಸಗಿ ಏಕಸ್ವಾಮ್ಯದ ನಿಯಂತ್ರಣದಡಿ ಬರುವಂತಹ ಆತಂಕಕಾರಿ ಮತ್ತು ಅನ್ಯಾಯದ ಬೆಳವಣಿಗೆಯ ಬಗೆಗೆ ಜನರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಮೂರನೆಯದಾಗಿ, ಜೈವಿಕ ಸಂಪನ್ಮೂಲಗಳ ಮೇಲಿನ ಖಾಸಗಿ ಏಕಸ್ವಾಮ್ಯದ ಒಡೆತನ, ಇತರರ ಅವುಗಳ ನ್ಯಾಯಬದ್ಧ ಬಳಕೆಯನ್ನು ತಡೆಯುತ್ತದೆನ್ನುವ ಆತಂಕವಿದೆ. ಉದಾಹರಣೆಗೆ, ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ತಳಿಯ ಬೆಳೆಯನ್ನು ಬೆಳೆದ ಬೀಜವನ್ನು ಮಾರಾಟಮಾಡದಂತೆ ರೈತನ ಮೇಲೆ ನಿರ್ಬಂಧ ಹೇರುವುದು ಅಥವಾ ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ವಂಶವಾಹಿ ಸರಣಿಯೊಂದರ ಬಳಕೆಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸಲು ನಿರ್ಬಂಧ ಹೇರುವುದರ ಮೂಲಕ ವೈಜ್ಞಾನಿಕ ಸಂಶೋಧನೆಗೆ ತೊಡಕುಂಟುಮಾಡುವುದು ಮುಂತಾದುವು. ಅವುಗಳನ್ನು ಹೇಗೆ ಬಳಸಲಾಗುತ್ತದೆನ್ನುವುದರ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳು ಜೀವನಾಧಾರ ಮತ್ತು ಪ್ರಗತಿ ಅವಲಂಬಿತವಾಗಿರುವ ಸಂಪನ್ಮೂಲಗ ಳ ಮತ್ತು ಮಾಹಿತಿಯ ಸರಾಗ ಹರಿವನ್ನು ನಿರ್ಬಂಧಿಸಬಹುದಾಗಿವೆ. ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳು ಅವುಗಳ ಮೇಲಿನ ಖಾಸಗಿ ಏಕಸ್ವಾಮ್ಯಕ್ಕೆ, ವಿಶೇಷವಾಗಿ ವ್ಯಾಪಾರ ಸಂಸ್ಥೆಗಳ ಖಾಸಗಿ ಏಕಸ್ವಾಮ್ಯಕ್ಕೆ ಎಡೆಮಾಡಿಕೊಡುತ್ತದೆನ್ನುವ ಹೆದರಿಕೆ ಈ ಎಲ್ಲ ಆತಂಕಗಳಿಗೆ ಕೇಂದ್ರವಾಗಿದೆ.

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಜಾರಿಗೆ ತರಬೇಕೆನ್ನುವ ಒತ್ತಡ ಹಾಗೂ ಅದರ ಪರಿಣಾಮದಿಂದ ಉಂಟಾಗುವ ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲಿನ ಖಾಸಗಿ ಏಕಸ್ವಾಮ್ಯತೆಯು ಭಾರತದ ಆಹಾರ ಸುರಕ್ಷತೆ, ಜೈವಿಕ ವೈವಿಧ್ಯತೆ, ಸಾಂಪ್ರದಾಯಕ ಜ್ಞಾನದ ಸಂರಕ್ಷಣೆ ಹಾಗೂ ರೈತ ಮತ್ತು ಅರಣ್ಯವಾಸಿಗಳಂತಹ ಸಾಂಪ್ರದಾಯಕ ಸಮುದಾಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಭಾರತದ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯು ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯೊಂದಿಗೆ ನೇರ ಸಂಪರ್ಕಹೊಂದಿದೆ. ಈ ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ರೂಪುಗೊಳ್ಳದೇ ಇರುವುದರಿಂದ ಭಾರತವು ಕ್ಷಿಪ್ರ ಅಂತರರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಹೇಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ ಎನ್ನುವುದು ಸ್ಥಳೀಯ ಶಾಸನ ಮತ್ತು ತಳಮಟ್ಟದ ವಿಧಾನಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಸರಳ, ಸ್ಪಷ್ಟ ಮಾಹಿತಿಯ ಅವಶ್ಯಕತೆ

ಈ ಬೆಳವಣಿಗೆಗಳ ಪರಿಣಾಮವು ಅತ್ಯಂತ ವಿಸ್ತೃತವಾಗಿರುವುದಾದರೂ, ಬೌದ್ಧಿಕ ಆಸ್ತಿ ಹಕ್ಕುಗಳ, ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲಿನ ಚರ್ಚೆ ಕೆಲವೇ ಅಧಿಕಾರಿಗಳ, ಶಿಕ್ಷಣ ತಜ್ಞರ ಮತ್ತು ಕಾರ್ಯನೀತಿ ರಚನಾಕಾರರಿಗೆ ಮಾತ್ರ ಸೀಮಿತವಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ಬಗೆಗಿನ ಚರ್ಚೆಯು ಸಾಮಾನ್ಯ ಮನುಷ್ಯನಿಗೆ ಅರ್ಥವಾಗದ ಅತ್ಯಂತ ಕ್ಲಿಷ್ಟ ಭಾಷೆ ಮತ್ತು ಪದಗಳನ್ನು ಸದಾ ಒಳಗೊಂಡಿರುವುದೇ ಇದಕ್ಕೆ ಬಹುಮುಖ್ಯ ಕಾರಣವಾಗಿದೆ. ಬೌದ್ಧಿಕ ಆಸ್ತಿ ಹಕ್ಕು ಸಂಬಂಧಿತ ಬಹುಪಾಲು ಬರಹಗಳೂ ಸಹ ಓದುಗ ಈ ವಿಷಯಗಳ ಬಗೆಗೆ ಚಿರಪರಿಚಿತನಾಗಿದ್ದಾನೆ ಎನ್ನುವ ಭಾವನೆಯಿಂದಲೇ ರಚಿತಗೊಂಡು, ಅರ್ಥವಾಗದ ಕಾನೂನು ಪದಗಳನ್ನು, ಅಂತರರಾಷ್ಟ್ರೀಯ ಒಪ್ಪಂದಗಳನ್ನು ಹಾಗೂ ರಾಷ್ಟ್ರೀಯ ಕಾನೂನುಗಳನ್ನು ಉಲ್ಲೇಖಿಸಿ ಈಗಾಗಲೇ ಜಟಿಲವಾಗಿರುವ ವಿಷಯವನ್ನು ಕಬ್ಬಿಣದ ಕಡಲೆಯನ್ನಾಗಿಬಿಡುತ್ತವೆ. ಇದರಿಂದಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ವಿಷಯವು ತಜ್ಞರು ಮಾತ್ರ ವ್ಯವಹರಿಸುವಂಥದು ಎನ್ನುವಂತಾಗಿದೆ. ಇದು ಬದಲಾಗಬೇಕಿದೆ.

ಸಾರ್ವಜನಿಕ ವಲಯದಲ್ಲಿನ ಬೌದ್ಧಿಕ ಆಸ್ತಿ ಹಕ್ಕುಗಳ ಬಗೆಗಿನ ಮಾಹಿತಿಯ ಕೊರತೆಯು ಬಹುಪಾಲು ಸಂದರ್ಭಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಪರಿಣಾಮಗಳ ಬಗೆಗೆ ಆತಂಕಕಾರಿ ಹೇಳಿಕೆಗಳಿಗೆ ಹಾಗೂ ಜೈವಿಕಚೌರ್ಯ, ಟ್ರಿಪ್ಸ್‌(TRIPS), ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಬಗೆಗಿನ ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಡುತ್ತದೆ. ಇವುಗಳ ಬಗೆಗೆ ನಾವು ಎಚ್ಚರದಿಂದಿರುವುದು ಅವಶ್ಯಕವಾದರೂ ತಪ್ಪು ಮಾಹಿತಿ ಹಾಗೂ ಊಹಾಪೋಹಗಳಿಂದ ನಮ್ಮಲ್ಲಿ ಆತಂಕ ಉಂಟಾದಲ್ಲಿ ಅದರಿಂದ ಪ್ರಯೋಜನವಿಲ್ಲ. ಅದರ ಬದಲಿಗೆ , ವಾಸ್ತವಾಂಶಗಳನ್ನು ಸರಿಯಾಗಿ ಅರಿತುಕೊಳ್ಳುವುದರಿಂದ ಮಾತ್ರ ಆಹಾರ ಸುರಕ್ಷತೆ, ಜೈವಿಕ ವೈವಿಧ್ಯತೆ, ಸಾಂಪ್ರದಾಯಕ ಸಮುದಾಯಗಳ ಹಕ್ಕುಗಳು ಹಾಗೂ ಸಾಂಪ್ರದಾಯಕ ಜ್ಞಾನಕ್ಕೆ ಮಾರಕವಾಗುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿಗಳ ವಿರುದ್ಧ ಪ್ರಭಾವೀ ಕಾರ್ಯತಂತ್ರವನ್ನು ರೂಪಿಸಬಹುದು.

ಈ ದಿಸೆಯಲ್ಲಿ ಮುನ್ನಡೆಯಲು ‘ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಕ ಜ್ಞಾನ’ ಕೃತಿಯು ಮೊದಲ ಹೆಜ್ಜೆಯಾಗಿದೆ. ಈ ಕೃತಿಯು ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಜೈವಿಕ ಸಂಪನ್ಮೂಲಗಳು ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಮೇಲೆ ಯಾವುದೇ ಬೌದ್ಧಿಕ ಆಸ್ತಿ ಹಕ್ಕು ಅಥವಾ ಏಕಸ್ವಾಮ್ಯ ಇರಬಾರದೆಂಬುದು ನಮ್ಮ ನಂಬಿಕೆ . ಅನ್ಯಾಯದ ಬೌದ್ಧಿಕ ಆಸ್ತಿ ಹಕ್ಕು ನೀತಿಗಳ ವಿರುದ್ಧ, ಜೈವಿಕಚೌರ್ಯದ ವಿರುದ್ಧ ಹಾಗೂ ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಖಾಸಗಿ ಏಕಸ್ವಾಮ್ಯದ ವಿರುದ್ಧ ವಿರೋಧ ಇಲ್ಲಿ ವ್ಯಕ್ತವಾಗಿದೆ. ಇಲ್ಲಿರುವ ಪ್ರಶ್ನೆ ‘ಅಂತರ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿಯನ್ನು ಇಲ್ಲಿ ಯಶಸ್ವಿಯಾಗಿ ಅಳವಡಿಸುವುದು ಹೇಗೆ? ಎನ್ನುವುದಲ್ಲ. ಬದಲಿಗೆ, ‘ಸುಸ್ಥಿರ ಅಭಿವೃದ್ಧಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಪೂರಕವಾಗಬಲ್ಲವೆ?’ ಎಂಬುದು. ಇಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೆ, ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯ;ಕ ಜ್ಞಾನಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆಯ ಸುಸ್ಥಿರ ಬಳಕೆ ಹಾಗೂ ಈ ಜೈವಿಕ ವೈವಿಧ್ಯತೆಯ ಮೇಲೆ ಅವಲಂಬಿತವಾಗಿರುವ ಸಮುದಾಯಗಳ ಜೀವನಾಧಾರ ಪೋಷಣೆ ಮತ್ತು ಎಲ್ಲ ಸಮುದಾಯಗಳ ಸಮಾನ ಅಭಿವೃದ್ಧಿ. ಈ ಎಲ್ಲ ಪ್ರಶ್ನೆ, ಸಂದೇಹಗಳ ಬಗೆಗೆ ಈ ಕೃತಿಯಲ್ಲಿ ಉತ್ತರ ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ.