ನಮ್ಮ ಕೃಷಿಕರಿಂದು ಬೆಳೆಸುವ ಹಲವು ಉತ್ಪನ್ನಗಳಿಗೆ ಗ್ರಾಹಕರಿರುವುದು ವಿದೇಶಗಳಲ್ಲಿ. ಬೆಲೆ ಮತ್ತು ಸ್ಥಳೀಯವಾಗಿ ಲಭ್ಯವಾಗುವ ಬೆಲೆಗಳ ನಡುವೆ ಅದೆಷ್ಟೋ ವ್ಯತ್ಯಾಸ. ಇದರಿಂದ ನಮ್ಮಲ್ಲಿ ಹಲವರಿಗೆ ರಫ್ತು ಮಾಡುವ ಆಸಕ್ತಿ ಮೂಡುವುದು ಸಹಜ. ಈ ನಿಟ್ಟಿನಲ್ಲಿ ಮಾಹಿತಿಗಳ ಅಭಾವವಿರುವುದರಿಂದ ಇಂತಹ ಸಾಹಸಕ್ಕೆ ಕೈ ಹಾಕುವ ಮಂದಿ ಅತ್ಯಲ್ಪ. ಆದರೆ ಪ್ರಕೃತ ಚಾಲ್ತಿಯಲ್ಲಿರುವ ಅಂತರಾಷ್ಟ್ರೀಯ ನೀತಿಗಳು ರಫ್ತು ಮತ್ತು ಆಮದು ವ್ಯವಹಾರಗಳ ಮೇಲಿನ ನಿರ್ಬಂಧಗಳಲ್ಲಿದ್ದ ತೊಡಕುಗಳನ್ನು ತೆಗೆದು ಹಾಕಿವೆ. ಇದಕ್ಕಾಗಿ ಇಲ್ಲಿಂದು ಅವಕಾಶದ ಬಾಗಿಲು ಮುಕ್ತವಾಗಿದೆ. ಈ ದೃಷ್ಟಿಯಿಂದ ರಫ್ತು ಹೇಗೆ? ಎಂಬ ಬಗ್ಗೆ ನಾವಿಂದು ತಿಳಿದು ಕಾರ್ಯಪ್ರವೃತ್ತರಾಗಬಹುದು.

ಸಾಮಾನ್ಯವಾಗಿ ರಫ್ತು ನಾನಾ ರೀತಿಯ ತ್ರಾಸಗಳನ್ನೊಳಗೊಂಡ ಕೆಲಸವಾಗಿದೆ. ಇದನ್ನು ಕೈಗೊಳ್ಳಲು ವ್ಯಾಪಾರಿ ಚತುರತೆ, ಯೋಜನಾ ಬದ್ಧವಾದ ದೃಷ್ಟಿಯನ್ನು ಹೊಂದಿರಬೇಕು. ಇದರೊಂದಿಗೆ ಅಗತ್ಯ ಮಾಹಿತಿ ಸಂಗ್ರಹಿಸುವ ಆಸಕ್ತಿ ಕೌಶಲ್ಯಗಳಿರಲೇಬೇಕು. ಈ ನಿಟ್ಟಿನಲ್ಲಿ ಕೆಳಗಿನ ಅಂಶಗಳು ಗಣನೆಗೆ ಬರುವುವು.

೧) ರಫ್ತು ಮಾಡುವ ಉದ್ದೇಶ ಸ್ಪಷ್ಟವಾಗಿರಬೇಕು.

೨) ರಫ್ತಿಗಾಗಿರುವ ಉತ್ಪನ್ನವನ್ನು ಗುರುತಿಸಬೇಕು. ಈ ಉತ್ಪನ್ನಕ್ಕೆ ಅಂತರಾಷ್ಟ್ರೀಯ ಯಾ ಆಮದು ಮಾಡಿಕೊಳ್ಳುವ ದೇಶದಲ್ಲಿ ಸ್ಪರ್ಧಾತ್ಮಕ ಅನುಕೂಲತೆಗಳಿರಬೇಕು. ಇದರೊಂದಿಗೆ ಗುಣಮಟ್ಟ, ಬೆಲೆ, ಸಂಸ್ಕರಣಾ ಮೌಲ್ಯ ಇತ್ಯಾದಿಗಳಲ್ಲಿ ಇತರರೊಂದಿಗೆ ಹೋಲಿಕೆಯ ಅನುಕೂಲತೆಯಿರಬೇಕು.

೩) ರಫ್ತು ಮಾಡಲು ನಿಯೋಜಿಸಿರುವ ಉತ್ಪನ್ನವನ್ನು ಯಾವ ರಾಷ್ಟ್ರ ಮತ್ತು ಅಲ್ಲಿ ಯಾರು ಆಮದು ಮಾಡಿಕೊಳ್ಳ ಬಯಸುತ್ತಾರೆ ಎಂಬ ಬಗ್ಗೆ ಟಿಪ್ಪಣಿ ಮಾಡಿಕೊಂಡಿರಬೇಕು.

೪) ಆಮದು ಮಾಡಿಕೊಳ್ಳ ಬಯಸುವ ರಾಷ್ಟ್ರದ ಪ್ರಜೆಗಳ ರುಚಿ, ಭಾಷೆ, ಸಂಸ್ಕೃತಿ, ಹಣಕಾಸು ವ್ಯವಸ್ಥೆ, ಸರಕಾರದ ನೀತಿ, ಕಾನೂನು, ಸಾರಿಗೆ ವ್ಯವಸ್ಥೆ, ಇತ್ಯಾದಿ ಮಾಹಿತಿಗಳನ್ನು ಮೊದಲೇ ಹೊಂದಿರಬೇಕು.

ಆಮದುದಾರರನ್ನು ಗುರುತಿಸುವಿಕೆ

) ಆಮದುದಾರರ ಕೈಪಿಡಿ: ವಿವಿಧ ಉತ್ಪನ್ನಗಳ ಅಭಿವೃದ್ಧಿಗಾಗಿ ನಮ್ಮಲ್ಲಿ ಮಂಡಳಿಗಳಿದ್ದು ಅವರಲ್ಲಿ ಅಮದಾರರ ಕೈಪಿಡಿ ಲಭ್ಯ. ಉದಾಹರಣೆಗೆ ಸಂಬಾರ ಮಂಡಳಿ, ಈ ಕೈ ಪಿಡಿಯಲ್ಲಿ ಅವರ ವಿಳಾಸ, ಸಂಸ್ಥೆಯ ಹೆಸರು ಎಲ್ಲಾ ಲಭ್ಯ. ಇದರೊಂದಿಗೆ ಇಂಟರ್ ನೆಟ್‌ನಲ್ಲೂ ಈಗ ಈ ಮಾಹಿತಿಗಳು ದೊರಕುವುದು.

೨) ವಿದೇಶಿ ವ್ಯಾಪಾರದ ಬಗ್ಗೆ ಉತ್ಪನ್ನಗಳಲಿಗನುಗುಣವಾಗಿ ಪ್ರಕಟಗೊಳ್ಳುತ್ತಿರುವ ಮಾಹಿತಿ ಪತ್ರಗಳು.

೩) ರಾಯಭಾರಿ ಕಛೇರಿಗಳ ಮೂಲಕ ಮಾಹಿತಿ ಸಂಗ್ರಹಣೆ.

೪) ಅಂತರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದು.

೫) ಆಮದು ರಾಷ್ಟ್ರಗಳ ಟೆಲಿಫೋನ್‌ ಕೈಪಿಡಿಗಳನ್ನು ಪರಿಚಯಸ್ತರ, ಸ್ನೇಹಿತರ ಮತ್ತು ಸಂಬಂಧಿಗಳ ಮೂಲಕ ತರಿಸಿಕೊಳ್ಳುವುದು.

೬) ದೇಶೀಯವಾಗಿರುವ ಅಂತರಾಷ್ಟ್ರೀಯ ದಲ್ಲಾಳಿಗಳ ಮೂಲಕ.

೭) ವಾಣಿಜ್ಯ ಮಂಡಳಿಯ ಮೂಲಕ.

೮) ವಿವಿಧ ರಾಷ್ಟ್ರಗಳಲ್ಲಿರುವ ವ್ಯಾಪಾರ ಅಭಿವೃದ್ಧಿ ನಿಗಮಗಳೊಂದಿಗೆ ಸಂಪರ್ಕ ಮಾಡಿಕೊಂಡು.

೯) ಅಂತರಾಷ್ಟ್ರೀಯ ಮಟ್ಟದಲ್ಲಿ ಚಲಾವಣೆಯಲ್ಲಿರುವ ಪತ್ರಿಕೆ, ಮಾಸಿಕಗಳಲ್ಲಿ ಪ್ರಚಾರ ಕೈಗೊಂಡು.

೧೦) ಅಪೆಡಾದ ಮೂಲಕ ಮಾಹಿತಿ ಸಂಗ್ರಹಣೆ-ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಕಾರ್ಯದಲ್ಲಿ ಅಪೆಡಾವಿದ್ದು, ಇದರ ಶಾಖೆ ಬೆಂಗಳೂರಿನಲ್ಲಿದ್ದು ಇದರ ಮೂಲಕ ವ್ಯಾಪಾರಿ ಮೇಳಗಳಲ್ಲಿ ಭಾಗವಹಿಸಲು ಅವಕಾಶವಿದೆ. ಇದು ವಿವಿಧ ಉತ್ಪನ್ನಗಳಿಗಿರುವ ಮಾರುಕಟ್ಟೆ ಬಗ್ಗೆ ಮಾಹಿತಿಯನ್ನೊದಗಿಸುತ್ತಿದೆ. ಈ ಎಲ್ಲಾ ಮಾಹಿತಿಗಳು www.apeda.com ನಲ್ಲೂ ಲಭ್ಯ.

ರಫ್ತು ಮಾಡುವ ಮೊದಲು

ಉತ್ಪನ್ನವನ್ನು ರಫ್ತು ಮಾಡಲು ನಿರ್ಧರಿಸಿದ ಬಳಿಕ ಆಮದುದಾರನಿಗೆ ಮೊತ್ತಮೊದಲು ಮಾದರಿ ಉತ್ಪನ್ನವನ್ನು ಕಳುಹಿಸಬೇಕು. ಇಲ್ಲಿ ರಫ್ತುದಾರ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಆಮದುದಾರನಿಗೆ ಮಾದರಿಯನ್ನು ಕಳುಹಿಸಿ ಆತ ಅದಕ್ಕೊಪ್ಪಿದ ಬಳಿಕ ಮಾತ್ರ ರಫ್ತು ಕಾರ್ಯಕ್ಕಿಳಿಯುವುದು. ಇಲ್ಲಿ ಕೂಡ ಒಂದು ಅಂಶ ಅತೀ ಮುಯ. ಆಮದುದಾರನ ಕೋರಿಕೆ ಮೇರೆಗೆ ಮಾದರಿ ತಕ್ಷಣ ಕಳುಹಿಸುವುದರ ಬದಲು ಆತನನ್ನು ಇ-ಮೇಲ್‌ ಯಾ ಫ್ಯಾಕ್ಸ್‌ ಮೂಲಕ ಸಂಪರ್ಕಿಸಿ, ಆತನಿಗೆ ನಿಮ್ಮ ಉತ್ಪನ್ನ, ಪ್ಯಾಕಿಂಗ್‌, ದರ, ಸಾಗಿಸುವ ವ್ಯವಸಥೆ, ಗುಣಮಟ್ಟ, ಪಾವತಿ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಚರ್ಚಿಸಿ, ಸರಿಯಾದ ಹೊಂದಾಣಿಕೆಯಾದಲ್ಲಿ ಮಾತ್ರ ಕಳುಹಿಸಬೇಕು. ನಮ್ಮಲ್ಲಿ ಅನೇಕರು ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡ ನಿದರ್ಶನಗಳಿವೆ.