ಈ ಶತಮಾನ ಆರಂಭಗೊಂಡ ತಕ್ಷಣ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದ ಕೃಷಿಕರು ಎಲ್ಲಿಲ್ಲದ ಸೋಲನ್ನು ಅನುಭವಿಸಲಾರಂಭಿಸಿದರು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕೃಷಿಕರ ಮುಖ್ಯ ಬೆಳೆಗಳಾದ ಅಡಿಕೆ, ತೆಂಗು, ಕಾಫಿ, ರಬ್ಬರ್, ಇತ್ಯಾದಿಗಳ ಬೆಲೆ ಕುಸಿಯಲಾರಂಭಿಸಿದ್ದು, ಪರಿಣಾಮವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ವಿವಿಧ ಪ್ರಯತ್ನಗಳಾದವು. ಇದರೊಂದಿಗೆ ಸಾಂಪ್ರದಾಯಿಕ ಬೆಳೆಗಳೊಂದಿಗೆ ವೆನಿಲ್ಲಾ, ಸ್ಟೀವಿಯಾ, ಔಷಧೀಯ ಸಸ್ಯಗಳು, ಪುಷ್ಪ ಕೃಷಿ ಇವೆಲ್ಲಾ ಬೆಳೆಸುವ ಆಸಕ್ತಿಯೂ ಮೂಡಿ ಬಂತು. ಆರಂಭದ ಹಂತದಲ್ಲಿ ಈ ಆಧುನಿಕ ಬೆಳೆಗಳು ರೈತನ ಮುಖದಲ್ಲಿ ಕಿರುನಗೆಯನ್ನು ಮೂಡಿಸಿದವು. ಆದರೆ ಕ್ರಮೇಣ ಇವುಗಳು ರೈತನನ್ನು ಪ್ರಪಾತಕ್ಕೆ ತಳ್ಳುವ ಹಂತಕ್ಕೆ ತಲುಪಿಸಿದವು. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮಲ್ಲಿ ಉತ್ಪಾದನೆಗೆ ಕೊಟ್ಟಷ್ಟು ಪ್ರಾಮುಖ್ಯತೆ ಮಾರುಕಟ್ಟೆ ತಂತ್ರಜ್ಞಾನಕ್ಕೆ ಕೊಡದಿರುವುದು. ಈ ದೃಷ್ಟಿಯಿಂದ ನಮ್ಮ ಕೃಷಿಕರಿಗೆ ಮಾರುಕಟ್ಟೆಯ ಒಳ ಹೊರವಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಈ ಕಿರುಪುಸ್ತಕದಲ್ಲಿ ಮಾಡಲಾಗಿದೆ.

ಕೃಷಿ ಮಾರುಕಟ್ಟೆ ಎಂದಾಕ್ಷಣ ನಮ್ಮೆಲ್ಲಾ ರೈತರು ಕೇವಲ ಬೆಲೆ ಯಾ ಧಾರಣೆಯೊಂದನ್ನೇ ಗಣನೆಗೆ ತೆಗೆದುಕೊಳ್ಳುತ್ತಿದ್ದು, ಇದು ನಿಜಕ್ಕೂ ತಪ್ಪು. ಇಲ್ಲಿ ಹಲವು ವಿಚಾರಗಳು ಸೇರಿಕೊಂಡಿವೆ. ಇವನ್ನಿಂದು ನಮ್ಮ ಕೃಷಿಕರು ಅರಿತುಕೊಳ್ಳಲೇಬೇಲಕು. ಇದಕ್ಕಾಗಿ ಎರಡನೆಯ ಅಧ್ಯಾಯದಲ್ಲಿ ಕೃಷಿ ಮಾರುಕಟ್ಟೆಯ ಬಗ್ಗೆ ವಿವರಣೆ ನೀಡಲಾಗಿದೆ. ಮೂರನೆ ಅಧ್ಯಾಯದಲ್ಲಿ ವಿವಿಧ ಕೃಷಿಯುತ್ಪನ್ನಗಳ ಮಾರುಕಟ್ಟೆ ಬಗ್ಗೆ, ಬೆಲೆಯಲ್ಲಾಗುವ ಏರಿಳಿತ, ಅವುಗಳಿಗಿರುವ ಕಾರಣಗಳು ಮತ್ತು ಪರಿಹಾರೋಪಾಯಗಳನ್ನು ಹೆಸರಿಸಲಾಗಿದೆ. ನಾಲ್ಕನೆ ಅಧ್ಯಾಯದಲ್ಲಿ ವಿವಿಧ ಕೃಷಿಯುತ್ಪನ್ನಗಳಿಗೆ ಬೆಲೆ ಯಾಕಾಗಿ ಎರಿಳಿತವಾಗುತ್ತಿದೆ ಮತ್ತು ನಾವು ಕೈಗೊಳ್ಳ ಬೇಕಾದ ಪರಿಹಾರಗಳ ಬಗ್ಗೆ ಸೂಚಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ರಫ್ತುದಾರನಾಗಲು ನಾವೇನು ಮಾಡಬೇಕೆಂಬ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಲಾಗಿದೆ.