ನಮ್ಮ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರಮುಖ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಬಾಳೆ, ಏಲಕ್ಕಿ ಇತ್ಯಾದಿಗಳಿಂದು ಮಾರುಕಟ್ಟೆಯಲ್ಲಿ ಧೃತಿಗೆಡುತ್ತಿದ್ದು, ಈ ನಿಟ್ಟಿನಲ್ಲಿ ಆಧುನಿಕ ಬೆಳೆಗಳಾಗಿ ವೆನಿಲ್ಲಾ, ಸ್ಟೀವಿಯಾ, ಔಷಧೀಯ ಸಸ್ಯಗಳು, ಹಣ್ಣು ಮತ್ತು ತರಕಾರಿಗಳು ಅಲ್ಲದೆ ಪುಷ್ಪೋದ್ಯಮಗಳಿಂದು ಹೊರಹೊಮ್ಮುತ್ತಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಸಾಂಪ್ರದಾಯಿಕ ಮತ್ತು ಆಧುನಿಕ ಬೆಳೆಗಳಿಗೆ ಮುಂದೆ ಬರಬಹುದಾದ ಮಾರುಕಟ್ಟೆ ಯಾವ ರೀತಿಯದ್ದಿರಬಹುದೆಂಬ ಕುತೂಹಲ ನಮ್ಮ ಕೃಷಿಕರದ್ದು. ಈ ದೃಷ್ಟಿಯನ್ನಿಟ್ಟುಕೊಂಡು ಈ ಎಲ್ಲಾ ಬೆಳೆಗಳ ಮಾರುಕಟ್ಟೆಯ ಬಗ್ಗೆ ಸೂಕ್ಷ್ಮದೃಷ್ಟಿಯೊಂದನ್ನು ಮುಂದೆ ನೀಡಲಾಗಿದೆ. ನಮ್ಮ ಕೃಷಿಕರು ಮಾರುಕಟ್ಟೆ ಎಂದಾಕ್ಷಣ ಬೆಲೆ ಯಾ ಧಾರಣೇಯೊಂದನ್ನೇ ಗಣನೆಗೆ ತೆಗೆದುಕೊಳ್ಳುತ್ತಿದ್ದು ಇದಕ್ಕಾಗಿ ಈ ವಿಚಾರದ ಬಗ್ಗೆ ದೃಷ್ಟಿಯಲ್ಲಿ ಇಲ್ಲಿ ಹರಿಸಲು ಪ್ರಯತ್ನಿಸಲಾಗಿದೆ.

ವೆನಿಲ್ಲಾಮಾರುಕಟ್ಟೆ

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತು ನೆರೆ ಹೊರೆಯ ರಾಜ್ಯಗಳಲ್ಲಿ ಕಳೆದ ಆರೇಳು ವರ್ಷಗಳಿಂದೀಚೆಗೆ ಕೃಷಿಕರಲ್ಲಿ ಹುಚ್ಚೆಬ್ಬಿಸಿದ್ದ ವೆನಿಲ್ಲಾ ಕೃಷಿ ಇಂದು ಹಲವು ಆತಂಕಗಳನ್ನೆದುರಿಸುವ ಹಂತಕ್ಕೆ ತಲುಪಿದೆ. ಈ ರೀತಿಯ ಸ್ಥಿತಿಗೆ ಬಹುಮುಖ್ಯ ಕಾರಣ ಮಾರುಕಟ್ಟೆಯ ಅತಂತ್ರ ಸ್ಥಿತಿ. ಕಳೆದೊಂದೆರಡು ವರ್ಷಗಳಲ್ಲಿ ವೆನಿಲ್ಳಾದ ಹಸಿಕೋಡು ಮತ್ತು ಒಣವೆನಿಲ್ಲಾಕ್ಕೆ ಅನಿರೀಕ್ಷಿತ ಬೆಲೆಯೊದಗಿ ಬಂದು, ಇದರಿಂದ ಪ್ರೇರಿತರಾದ ಕೃಷಿಕರು ಈ ಬೆಳೆಯ ವಿಸ್ತರಣೆ ಕೈಗೊಂಡು ತಮ್ಮೆಲ್ಲ ಶ್ರಮವನ್ನು ಧಾರೆಯೆರೆದದ್ದಾಯಿತು. ಆದರೆ ಇದೀಗ ಈ ಸಾಲಿನ ಬೆಳೆಯನ್ನು ಖರೀದಿಸಲು ಮುಂದೆ ಬರುವ ವ್ಯಾಪಾರಿಗಳ ಸಂಖ್ಯೆ ಕ್ಷೀಣಿಸತೊಡಗಿದ್ದು ಈ ಸ್ಥಿತಿ ಈ ತನಕ ಈ ಕ್ಷೇತ್ರದಲ್ಲಿ ಕಂಡು ಬಂದಂತಿಲ್ಲ. ಈ ನಿಟ್ಟಿನಲ್ಲಿ ವೆನಿಲ್ಲಾ ಬೆಳೆಗಾರರೆಲ್ಲಾ ಒಗ್ಗೂಡಿ ಮುಂದೇನು ಎಂಬ ಚಿಂತೆಯಲ್ಲಿದ್ದು ಪರಿಣಾಮವಾಗಿ ಇಲ್ಲಿಂದು ಆತ್ಮಾವಲೋಕನ ಮಾಡಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅತಂತ್ರ ಸ್ಥಿತಿಗೆ ಕಾರಣಗಳೇನು?

೧) ವಿಶ್ವದಲ್ಲಿ ವೆನಿಲ್ಲಾದ ಉತ್ಪಾದನೆಗೆ ಹೆಸರು ಪಡೆದ ರಾಷ್ಟ್ರಗಳೆಂದರೆ ಮಡಗಾಸ್ಕರ್ ಮತ್ತು ಇಂಡೋನೇಶಿಯಾಗಳು . ಇಲ್ಲಿ ಮಡಗಾಸ್ಕರ ವೆನಿಲ್ಲಾ ಕೃಷಿ ಮತ್ತು ಉತ್ಪಾದನೆ ಮತ್ತದರ ರಫ್ತುನಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದ್ದು, ಈ ರಾಷ್ಟ್ರದಲ್ಲಿ ೨೦೦೦ ರಿಂದ ೨೦೦೩ರ ತನಕ ಉತ್ಪಾದನೆಯಾದ ಪ್ರಮಾಣ ಸರಾಸರಿ ೪೦೦ ಟನ್‌ಗಳು. ಇದೇ ಸಮಯದಲ್ಲಿ ವಿಶ್ವ ಮಾರುಕಟ್ಟೆಯಲ್ಲಿದ್ದ ಬೇಡಿಕೆ ಸರಾಸರಿ ೧,೪೦೦ ರಿಂದ ೨,೦೦೦ ಟನ್‌ಗಳಷ್ಟು ಪರಿಣಾಮವಾಗಿ ವೆನಿಲ್ಲಾಕ್ಕೆ ಬೇಡಿಕೆ ಹೆಚ್ಚಾಗಿ ಬೆಲೆಯೂ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂತು. ಆದರೆ ಪ್ರಕೃತ ಸಾಲಿನಲ್ಲಿ ಮಡಗಾಸ್ಕರನಲ್ಲಾಗಬಹುದಾದ ಉತ್ಪಾದನಾ ಪ್ರಮಾಣ ಸುಮಾರು ೧,೦೦೦ ದಿಂದ ೧,೪೦೦ ಟನ್‌ಗಳಷ್ಟಾಗಬಹುದೆಂದು ಅಂದಾಜಿಸಲಾಗಿದ್ದು, ಇದಿಂದು ವೆನಿಲ್ಲಾ ಮಾರುಕಟ್ಟೆಯನ್ನು ಅತಂತ್ರ ಸ್ಥಿತಿಗೆ ಕರೆದೊಯ್ಯುತ್ತಿದೆ.

೨) ವಿಶ್ವ ಮಾರುಕಟ್ಟೆಯಲ್ಲಿ ಮೆಡಗಾಸ್ಕರಿನ ವೆನಿಲ್ಲಾ ತನ್ನದೇ ಆದ (ಬ್ರಾಂಡ್‌ ಮೂಲಕ) ಛಾಪನ್ನು ಮೂಡಿಸಿದ್ದು, ಆ ಬಳಿಕದ ಛಾಪು ಇಂಡೋನೇಶೀಯಾದ್ದಾಗಿದೆ. ಇದರಿಂದಾಗಿ ಮಡಗಾಸ್ಕರಿನ ವೆನಿಲ್ಲಾಕ್ಕೆ ಮುಂದಿನ ದಿನಗಳಲ್ಲಿ ಬೇಡಿಕೆ ಏರಬಹುದಾಗಿದ್ದು, ಇದಿಂದು ವಿಶ್ವ ಮಾರುಕಟ್ಟೆಯಲ್ಲಿ ತನ್ನ ಛಾಪನಿನ್ನೂ ಸ್ಥಾಪಿಸದ ಭಾರತದ ವೆನಿಲ್ಲಾಕ್ಕೆ ಹೊಡೆತವನ್ನಿಕ್ಕಲು ಸನ್ನದ್ಧವಾಗಿದೆ. ಈ ರೀತಿಯದ್ದಾದ ಸ್ಥಿತಿಯನ್ನು ಊಹಿಸಿದ ವೆನಿಲ್ಲಾ ಖರೀದಿದಾರರಿಂದು ಭಾರತದ ವೆನಿಲ್ಲಾವನ್ನು ಅಧಿಕ ಬೆಲೆ ತತ್ತು ಕೊಂಡುಕೊಳ್ಳಲು  ಹಿಂಜರಿಯುತ್ತಿದ್ದು, ಪರಿಣಾಮವಾಗಿ ಮಾರುಕಟ್ಟೆಯಿಂದು ಅತಂತ್ರವಾಗಿದೆ.

೩) ಕಳೆದ ಸಾಲಿನಲ್ಲಿ ವೆನಿಲ್ಲಾ ಕೋಡಿಗಿದ್ದ ಅಧಿಕ ಧಾರಣೆ ಮತ್ತು ಕಳ್ಳರ ಹಾವಳಿಯಿಂದಾಗಿ ಹೆಚ್ಚಿನ ಬೆಳೆಗಾರರು ಎಳತು ಕೋಡುಗಳನ್ನು ಮಾರಾಟ ಮಾಡಿದ್ದು, ಇದರೊಂದಿಗೆ ಯೋಗ್ಯ ರೀತಿಯ ಸಂಸ್ಕರಣೆಯೂ ಆಗದೆ ಇದ್ದುದರಿಂದ ಇದರ ಗುಣಮಟ್ಟ ತೀರಾ ಕಳಪೆಯಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿರಸ್ಕರಿಸಲ್ಪಟ್ಟ ಉದಾಹರಣೆಗಳೂ ಕಂಡು ಬಂದವು.

೪) ಐರೋಪ್ಯ ರಾಷ್ಟ್ರಗಳಿಂದ ಸ್ವಾಭಾವಿಕ ಕೃಷಿ ಮೂಲಕ ಪರಿಸರ ಪ್ರೇಮಿ ಉತ್ಪನ್ನಗಳಿಗೆ ಬೇಡಿಕೆಯಿದ್ದು, ಇದೇ ರೀತಿಯ ಕಾನೂನುಗಳಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲು ಕಂಡು ಬರುತ್ತಿರುವ ಕಾರಣ ರಾಸಾಯನಿಕಗಳನ್ನು ಬಳಸಿ ಉತ್ಪಾದಿಸಲ್ಪಟ್ಟ ವೆನಿಲ್ಲಾಕ್ಕೆ ಬೇಡಿಕೆ ಕಂಡು ಬರುತ್ತಿಲ್ಲ. ಭಾರತದಿಂದ ರಫ್ತಾದ ಅಲ್ಪ ಪ್ರಮಾಣದ ವೆನಿಲ್ಲಾದಲ್ಲಿ ರಾಸಾಯನಿಕಗಳ ಅಂಶ ಕಂಡು ಬಂದುದರಿಂದ ಅವು ತಿರಸ್ಕರಿಸಲ್ಪಟ್ಟ ಮಾರುಕಟ್ಟೆಯಿಂದು ಅತಂತ್ರವಾಗುವಂತಾಗಿದೆ.

೫) ಅಧಿಕ ಬೆಲೆಯ ಆಸೆಯಿಂದ ನಮ್ಮಲ್ಲಿಂದು ಸಂಸ್ಕರಣೆಗೊಳ್ಪಟ್ಟ ವೆನಿಲ್ಲಾ ಕಲಬೆರಕೆಗೊಳಪಡುತ್ತಿದ್ದು, ಇದರಿಂದಾಗಿ ಈ ಮೊದಲು ತನ್ನ ಛಾಪನ್ನು ವಿಶ್ವ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಹೊರಟಿದ್ದ ಭಾರತದ ವೆನಿಲ್ಲಾಕ್ಕೊಂದು ಪ್ರಬಲ ಹೊಡೆತ ಬಿದ್ದು ಹೋಗಿದೆ.

ಪರಿಹಾರಗಳೇನು?

ವೆನಿಲ್ಲಾ ಕೃಷಿ ವಿಸ್ತರಿಸುತ್ತಿರುವ ಈ ದಿನಗಳಲ್ಲಿ ಆರಂಭಿಕ ಹೊಡೆತ ಈಗಾಗಲೇ ಬಿದ್ದಾಗಿದೆ. ಆದರೆ ಈ ಹೊಡೆತವನ್ನು ಈಗಿಂದೀಗಲೆ ತಪ್ಪಿಸಿಕೊಳ್ಳಲು ಅವಕಾಶಗಳಿದ್ದು, ಇವನ್ನು ನಮ್ಮ ವೆನಿಲ್ಲಾ ಕೃಷಿಕರು ಇನ್ನಾದರು ಅಳವಡಿಸಿ ಕಾರ್ಯರೂಪಕ್ಕೆ ತಂದಲ್ಲಿ ಮುಂದೇನು ಎಂಬ ಚಿಂತೆ ದೂರವಾಗಿ ಅತಂತ್ರ ಸ್ಥಿತಿಯನ್ನು ತಪ್ಪಿಸಬಹುದು. ಈ ದೃಷ್ಟಿಯಿಂದ ಇಲ್ಲಿಂದು ಅಳವಡಿಸಬೇಕಾಗಿರುವ ಪರಿಹಾರಗಳೆಂದರೆ,

೧) ವಿಶ್ವಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾ ಬೆಳೆಗಾರರ ಕೊಡುಗೆ ಅತ್ಯಲ್ಪ ಇಲ್ಲಿ ಬೆಲೆ ನಿರ್ಧಾರವಾಗುವುದು ಮಡಗಾಸ್ಕರ್ ಮತ್ತು ಇಂಡೋನೇಶೀಯಾಗಳ ಉತ್ಪಾದನೆಯ ಆಧಾರದಲ್ಲಿ ಆದರೆ ಈ ಎರಡೂ ರಾಷ್ಟ್ರಗಳಿಂದು ಉತ್ಪಾದಿಸುತ್ತಿರುವ ವೆನಿಲ್ಲಾದ ಗುಣಮಟ್ಟ ಗ್ರಾಹಕರ ನಿರೀಕ್ಷೆಗೆ ತಕ್ಕುದಾಗಿಲ್ಲ. ಇದನ್ನಿಂದು ಭಾರತದ ಬೆಳೆಗಾರರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬೇಕಲು. ಈ ನಿಟ್ಟಿನಲ್ಲಿ ನಮ್ಮ ಬೆಳೆಗಾರರು ಸಹಜ ಕೃಷಿ ಮೂಲಕ ಯಾ ಸಾವಯವ ಕೃಷಿ ಮೂಲಕ ವೆನಿಲ್ಲಾ ಕೃಷಿಯನ್ನು ಮುಂದುವರಿಸಿ ಉತ್ತಮ ಗುಣಮಟ್ಟದ ಕೋಡುಗಳನ್ನು ಉತ್ಪಾದಿಸಿ ರಫ್ತು ಮಾಡುವ ಹಂತಕ್ಕೆ ತಲುಪಬೇಕು. ಹೀಗಾದಲ್ಲಿ ಭಾರತದ ವೆನಿಲ್ಲಾವೆಂಬ ಛಾಪನ್ನು ಹೊಂದಿ ಉತ್ತಮ ಧಾರಣೆ ಗಳಿಸಿಕೊಳ್ಳಬಹುದಾಗಿದೆ.

೨) ನಮ್ಮಲ್ಲಿಂದು ವೆನಿಲ್ಲಾ ಬೆಳೆಗಾರರ ಪ್ರಬಲ ಸಂಘಟನೆಯನ್ನು ಹೊರಹೊಮ್ಮದಿರುವುದು ಇಲ್ಲಿನ ಪ್ರಮಲುಖ ತೊಡಕು. ಈ ದೃಷ್ಟಿಯಿಂದ ವೆನಿಲ್ಲಾ ಬೆಳೆಗಾರರೆಲ್ಲಾ ಒಗ್ಗೂಡಿ ವಾರ್ಷಿಕ ಉತ್ಪಾದನೆ ಮತ್ತು ಧಾರಣೆಯನ್ನು ನಿರ್ಧರಿಸುವ ಹಂತಕ್ಕೆ ತಲುಪಲೇಬೇಕು.

೩) ವೆನಿಲ್ಲಾ ಬೆಳೆಗಾರರ ಸಂಘಟನೆಯಿಂದು ಪ್ರಬಲವಾಗಿ ತನ್ನದೇ ಆದ ಸಂಸ್ಕರಣಾ ಘಟಕ, ಸಂಶೋಧನಾ ಕೇಂದ್ರ, ಮಾರುಕಟ್ಟೆ ವಿಭಾಗಗಳನ್ನು ಹೊಂದಿದಲ್ಲಿ ಮುಂದಿನ ದಿನಗಳು ಸುಗಮವಾಗಿ ಸಾಗಬಲ್ಲದು. ಉದಾಹರಣೆಗೆ ತಮಿಳುನಾಡಿನ ಪ್ರಮುಖ ಬೆಳೆಗಾರರು ತಮ್ಮದಾದ ಮಾರುಕಟ್ಟೆ ಜಾಲವನ್ನು ಹೊಂದಿ ಅವರಿಂದು ಫ್ರಾನ್ಸ್‌ ಮತ್ತು ಅಮೆರಿಕದ ಗ್ರಾಹಕರೊಂದಿಗೆ ದೀರ್ಘಕಾಲದ ಒಪ್ಪಂದವನ್ನು ಮಾಡಿ ಉತ್ತಮ ಧಾರಣೆಯನ್ನು ಗಳಿಸಿಕೊಳ್ಳುತ್ತಿದ್ದಾರೆ.

೪) ಬಹುಬೇಗನೆ ಹಣ ಸಂಪಾದಿಸುವ ದೃಷ್ಟಿಯನ್ನಿಟ್ಟುಕೊಂಡು ಮೀಟರುದ್ದದ ಬಳ್ಳಿಗಳನ್ನು ನಾಟಿ ಮಾಡಿ ವಿವಿಧ ರೀತಿಯ ಪ್ರೇರಕಗಳನ್ನುಪಯೋಗಿಸಿ ಹೂಬರಿಸಿ ಪರಾಗಸ್ಪರ್ಶ ಮಾಡಿ ಕೋಡನ್ನು ಪಡೆಯುತ್ತಿರುವ ರೀತಿಯಿಂದಾಗಿ ಕೋಡಿನ ಗುಣಮಟ್ಟ ಕುಸಿಯುತ್ತಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದ್ದು, ಇದನ್ನಿಂದು ತಪ್ಪಿಸಿ ಬಳ್ಳಿಯು ತನ್ನದೇ ಶಕ್ತಿಯ ಮೂಲಕ ಬೆಳವಣಿಗೆ ಸಾಧಿಸಿ ಉತ್ತಮ ಗುಣಮಟ್ಟದ ಕೋಡನ್ನು ಬಿಡುವ ರೀತಿಯ ಸಹಜ ಕೃಷಿ ಇಲ್ಲಿ ಇನ್ನಾದರೂ ಆದಲ್ಲಿ ಇದು ಗ್ರಾಹಕರನ್ನಾಕರ್ಷಿಸಬಹುದು.

೫) ಆಂತರಿಕವಾಗಿ ವೆನಿಲ್ಲಾದ ಬಳಕೆ ನಮ್ಮಲ್ಲಿನ್ನೂ ಆರಂಭವಾಗದಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ರೀತಿ, ನೀತಿಗಳಿಂದ ಒದಗಬಹುದಾದ ಸಮಸ್ಯೆಗಳನ್ನೆದುರಿಸುವ ಉದ್ದೇಶದಿಂದ ನಾವಿಂದು ಇದರ ಆಂತರಿಕ ಬಳಕೆಯ ಬಗ್ಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿಂದು ಅಗತ್ಯ ಸಂಶೋಧನೆಗಳಾಗಬೇಕು. ವೆನಿಲ್ಲಾವನ್ನಿಂದು ನಮ್ಮಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಸುವವರೆಲ್ಲಾ ಅಡಿಕೆ ಕೃಷಿಕರಾಗಿದ್ದು, ಅಡಿಕೆಯ ಬೆಲೆಯೂ ಅತಂತ್ರವಾಗಿರುವ ಕಾರಣ, ವೆನಿಲ್ಲಾದ ದ್ರವವನ್ನು ಅಡಿಕೆಯೊಂದಿಗೆ ಮಿಶ್ರ ಮಾಡಿ ಇವೆರಡಕ್ಕೂ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕಂಡುಕೊಳ್ಳಲು ಅವಕಾಶವಿದ್ದು, ಈ ದಿಶೆಯಲ್ಲಿ ನಮ್ಮ ಪ್ರಯತ್ನಗಳಿಂದು ಸಾಗಬೇಕು.

೬) ಪ್ರತಿಯೊಬ್ಬ ಜೀವಿಗೂ ಬಾಯಿಯ ದುರ್ಗಂಧವೊಂದು ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯ ಪರಿಹಾರಕ್ಕಾಗಿ ವೆನಿಲ್ಲಾದಿಂದೊಡಗೂಡಿದ ಅಡಿಕೆ ಮಿಶ್ರಣ ಉತ್ತಮ ಪರಿಹಾರವಾಗಿ ಬಾಯಿಯು ಸುಗಂಧವನ್ನು ಹೊರಸೂಸಬಹುದು. ಈ ಪ್ರಯತ್ನವನ್ನು ನಾವು ಮಾಡಿದಲ್ಲಿ ಈ ಎರಡೂ ಉತ್ಪನ್ನಗಳಿಗೆ ಬಹು ಬೇಡಿಕೆ ಬರಬಲ್ಲುದು.

ಉತ್ತಮ ಗುಣಮಟ್ಟ ಸಹಜ ಕೃಷಿ ಮೌಲ್ಯವರ್ಧನೆ ಇತ್ಯಾದಿಗಳಿಂದು ವೆನಿಲ್ಲಾ ಕೃಷಿಯಲ್ಲಾದರೆ ಈಗ ಒದಗಿ ಬಂದಿರುವ ಆತಂಕ ಮುಂದೆಂದೂ ಬರಲಾರದು. ಈಗಿರುವ ಸ್ಥಿತಿ ಆರಂಭದ ಹಂತವಾಗಿದ್ದು, ಇಲ್ಲಿ ಇನ್ನಷ್ಟು ಹೊಡೆತ ಬರುವ ಮೊದಲು ನಮ್ಮ ಬೆಳೆಗಾರರು, ಸಂಘಟನೆಗಳು ಮತ್ತು ಮಾರಾಟಗಾರರು ಸಂಘಟಿತ ಪ್ರಯತ್ನಗಳನ್ನು ಮಾಡಿದಲ್ಲಿ ಉತ್ತಮ ಭವಿಷ್ಯ ಈ ಕ್ಷೇತ್ರದ್ದಾಗಬಹುದು.

ಪುಷ್ಪೋದ್ಯಮ

ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅಂದಕ್ಕಾಗಿ ಇಲ್ಲವೇ ದೇವರ ಪೂಜೆಗಾಗಿ ಅಥವಾ ಮನೆಯೊಳಗಿನ ಅಲಂಕಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು. ಆದರೆ ಇದೀಗ ಇದೊಂದು ಪ್ರಮುಖ ಕೃಷಿ ಉದ್ದಿಮೆಗಾಗಿ ನಮ್ಮಲ್ಲಿ ಹೊರ ಹೊಮ್ಮುತ್ತಿದೆ.

ಪುಷ್ಪ ಕೃಷಿಯನ್ನಿಮದು ವಾಣಿಜ್ಯ ರೀತಿಯಲ್ಲಿ ಕೈಗೊಳ್ಳಲು ಹಲವು ರೀತಿಯ ಪ್ರೇರಣೆಗಳನ್ನಿಂದು ವಿವಿಧ ಇಲಾಖೆಗಳು, ಬಹು ರಾಷ್ಟ್ರೀಯ ಸಂಸ್ಥೆಗಳು ಮತ್ತು ಸರಕಾರಗಳು ಕೊಡಲಾರಂಭಿಸಿದ್ದು, ಪರಿಣಾಮವಾಗಿ ಈ ಕ್ಷೇತ್ರಕ್ಕಿಂದು ವಿಫುಲ ಅವಕಾಶಗಳು ಒದಗಿ ಬರಲಾರಂಭಿಸಿವೆ.

ವಿಶ್ವದಾದ್ಯಂತ ಹೂವುಗಳನ್ನು ಬಯಸದ ಕ್ಷೇತ್ರಗಳಿಲ್ಲ, ಅವುಗಳ ಅಂದಕ್ಕೆ ಮಾರು ಹೋಗದ ವ್ಯಕ್ತಿಗಳಿಲ್ಲ. ಇವನ್ನು ಆಸ್ವಾದಿಸದ ಜನರಿಲ್ಲ, ಈ ದೃಷ್ಟಿಯಿಂದ ಇವುಗಳ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಲೆಂದೇ ಒಂದು ಅಂತರಾಷ್ಟ್ರೀಯ ಸಂಘವಿದ್ದು, ಈ ಸಂಘವು ಪುಷ್ಪಗಳ ಉತ್ಪಾದನೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತಗೆ ನಿರಂತರವಾಗಿ ಮಾಹಿತಿಗಳನ್ನು ಪ್ರಕಟಿಸಿ ಗ್ರಾಹಕರಿಗೆ ಮತ್ತು ಉತ್ಪಾದಕರಿಗೆ ಅಗತ್ಯ ಪರಿಸರವನ್ನು ನಿರ್ಮಿಸುತ್ತಿದೆ.

ನಮ್ಮ ಹುಟ್ಟಿನಿಂದ ಹಿಡಿದು ಸಾವಿನತನಕ ನಡೆಯುವ ಎಲ್ಲಾ ಕಾರ್ಯಗಳಿಗೂ ನಾನಾ ರೀತಿಯ ಪುಷ್ಪಗಳು ಅತ್ಯಗತ್ಯ. ಈ ಪುಷ್ಪಗಳು ನಮ್ಮ ಸುಖ-ದುಃಖಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ದೃಷ್ಟಿಯಿಂದ ಇವಿಂದು ಎಲ್ಲರ ಆಕರ್ಷಣಾ ಬಿಂದುಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಪುಷ್ಪಗಳಿಗಿರುವ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಇದರಿಂದಾಗಿ ಇವುಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಮಹತ್ವ ನೀಡಲಾಗುತ್ತಿದೆ. ಪುಷ್ಪಗಳು ಮತ್ತು ಅಲಂಕಾರಿಕ ಗಿಡಗಳಿಗೆ ಅಧಿಕ ಬೇಡಿಕೆ ಬರಲಾರಂಭಿಸಿದೆ.

ಪುಷ್ಪ ಕೃಷಿಯಲ್ಲಿಂದು ತುಂಡು ಮಾಡಬಲ್ಲ ಹೂವುಗಳು, ಬಿಡಿಯದ ಹೂಗಳು, ಅಲಂಕಾರಿಕ ಎಲೆಗಿಡಗಳು, ಪೊದರುಗಳು, ಬಳ್ಳಿಗಳು, ಮುಳ್ಳುಗಳು, ವಾರ್ಷಿಕ, ಬಹುವಾರ್ಷಿಕ, ಹುಲ್ಲು, ಬಿದಿರು, ದುಂಡನೆಯ, ಅಗಲ ಎಲೆಯ ಅಲಂಕಾರಿಕ ಗಿಡಗಳಲು ಏಕಬೀಜ ವರ್ಗದ ಬಹುವರ್ಣದ ಹೂಬಿಡುವ ಸಸ್ಯಗಳು, ಕೆಂಪು ಮತ್ತು ನೀಲ ಕೆಂಪು ಪುಷ್ಪವುಳ್ಳ ಪೊದರು ಬಳ್ಳಿ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ನೀರಲ್ಲಿರುವ ಸಸ್ಯಗಳು, ಕಲ್ಲಿನಲ್ಲಿ ಬೆಳೆಯುವ ಸಸ್ಯಗಳು ಇತ್ಯಾದಿಗಳಿವೆ. ಇವೆಲ್ಲವುಗಳಿಗೂ ಆಂತರಿಕ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವಿಶಿಷ್ಟ ಪುಷ್ಪಗಳ ಸಂಶೋಧನೆಯಾಗಿ ಅವುಗಳಿಗೂ ಅಧಿಕ ಬೇಡಿಕೆಯಿದೆ. ಈ ಸಾಲಿನಲ್ಲಿ ಬರುವ ಪುಷ್ಪಗಳೆಂದರೆ ಯೂರೋ, ಮೊಂಕ್ಸ್‌ಹುಡ್‌, ಕಾಂಗರೂ ಪಾವ್‌ ಮುಂತಾದವುಗಳು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಷ್ಪಕೃಷಿ ಮತ್ತು ಬೇಡಿಕೆ.

ಪುಷ್ಪ ಕೃಷಿ ಮತ್ತು ಅವುಗಳ ಬಳಕೆ ಪ್ರತಿಯೊಂದು ರಾಷ್ಟ್ರಗಳಲ್ಲೂ ಆಗುತ್ತಿದ್ದರೂ ಕಳೆದ ಎರಡು ದಶಕಗಳಿಂದೀಚೆಗೆ ಈ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಾಗಿ ಇದರ ವಿಸ್ತೀರ್ಣವು ಅಧಿಕ ಗೊಳ್ಳುತ್ತಲಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಜಾಗತೀಕರಣವು ಸೃಷ್ಟಿಸಿದ್ದು ಪರಿಣಾಮವಾಗಿ ಸಾಂಪ್ರದಾಯಿಕವಲ್ಲದ ರಾಷ್ಟ್ರಗಳಲ್ಲೂ ಇದಕ್ಕೆ ಮಹತ್ವ ದೊರಕುತ್ತಲಿದೆ. ಸಾಂಪ್ರದಾಯಿಕವಾಗಿ ಪುಷ್ಪ ಕೃಷಿ ಮತ್ತು ಬಳಕೆಗೆ ಪ್ರಸಿದ್ಧಿಯನ್ನು ಪಡೆದ ರಾಷ್ಟ್ರಗಳೆಂದರೆ ನೆದರ್ ಲ್ಯಾಂಡ್‌, ಇಟಲಿ, ಜರ್ಮನಿ ಮತ್ತು ಜಪಾನ್‌ಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕವಲ್ಲದ ರಾಷ್ಟ್ರಗಳಾದ ಲ್ಯಾಟಿನ್‌ ಅಮೇರಿಕಾ, ಆಫ್ರಿಕಾ ಮತ್ತು ಏಶಿಯಾಗಳಲ್ಲಿ ಈ ಬಗ್ಗೆ ಆದ್ಯತೆ ದೊರಕಲಾರಂಭಿಸಿದೆ. ನಾನಾ ರೀತಿಯ ಪುಷ್ಪಗಳಲಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಮೊದಲ ಪಂಕ್ತಿಯಲ್ಲಿ ಪಶ್ಚಿಮ ಯುರೋಪು ಅಮೇರಿಕಾ ಮತ್ತು ಜಪಾನ್‌ಗಳು ಸೇರಿವೆ.

ವಾರ್ಷಿಕವಾಗಿ ವಿಶ್ವ ಮಾರುಕಟ್ಟೆಗೆ ರಫ್ತಾಗುತ್ತಿರುವ ವಿವಿಧ ರೀತಿಯ ಪುಷ್ಪ ಮತ್ತು ಅಲಂಕಾರಿಕ ಗಿಡಗಳ ಒಟ್ಟು ಮೌಲ್ಯ ಸುಮರು ೭,೬೬೨, ೯೨೪ ಸಾವಿರ ಡಾಲರ್ ಗಳಾಗಿದ್ದು, ನೆದರ್ ಲ್ಯಾಂಡ್‌ನ ಪಾಲು ಇದರಲ್ಲಿ ಶೇಕಡಾ ೫೦ ರಷ್ಟಾಗಿದೆ. ಬಳಕೆಯ ದೃಷ್ಟಿಯಿಂದ ವಿಶ್ವದಲ್ಲಿ ಜರ್ಮನಿಯ ಪಾಲು ಅತ್ಯಧಿಕ, ಆ ಬಳಿಕದ ಸ್ಥಾನಗಳು ಕ್ರಮವಾಗಿ ಅಮೇರಿಕಾ, ಇಂಗ್ಲೆಂಡ್‌, ಫ್ರಾನ್ಸ್‌, ನೆದರ್ ಲ್ಯಾಂಡ್‌ಗಳದ್ದಾಗಿದೆ.

ಬೇಡಿಕೆ ಯಾಕಾಗಿ?

ಪುಷ್ಪಗಳಿಗಿರುವ ಬೇಡಿಕೆ ನಾನಾ ರೀತಿಯದ್ದಾಗಿದ್ದು, ಭಾರತದಲ್ಲಿ ಅತ್ಯಧಿಕ ಪ್ರಮಾಣ ಪೂಜೆ ಮತ್ತು ಹಬ್ಬಗಳಿಗಾಗಿ ಬಳಕೆಯಾಗುತ್ತಿದೆ. ಇಡೀ ವಿಶ್ವವನ್ನು ಬೇಡಿಕೆ ದೃಷ್ಟಿಯಿಂದ ಗಣನೆಗೆ ತೆಗೆದುಕೊಂಡಲ್ಲಿ ಶೇಕಡಾ ೪೫ ರಷ್ಟು ಉಡುಗೊರೆಗೆ, ಶೇಕಡಾ ೨೫ ಹುಟ್ಟುಹಬ್ಬ ಮತ್ತು ಮದುವೆಗಳಿಗೆ ಮತ್ತು ಉಳಿದವು ಮನೆಯ ಅಲಂಕಾರ ಮತ್ತಿತರ ಸಮಾರಂಭಗಳಿಗಾಗಿ ಉಪಯೋಗಿಸಲಾಗುತ್ತಿದೆ. ಜಪಾನಿನಲ್ಲಿ ತುಂಡು ಹೂವುಗಳಿಗೆ ಅಧಿಕ ಬೇಡಿಕೆಯಿದ್ದು, ಐರೋಪ್ಯ ರಾಷ್ಟ್ರಗಳು ಉತ್ತಮ ಗುಣಮಟ್ಟದ ದೀರ್ಘಕಾಲ ಬಾಳಬಲ್ಲ ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ.

ಭಾರತದಲ್ಲಿ ಪುಷ್ಪ ಕೃಷಿ

ಭಾರತದಲ್ಲಿ ಪುಷ್ಪ ಕೃಷಿ ನಿಧಾನವಾಗಿಯಾದರೂ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇಲ್ಲಿ ಇನ್ನಷ್ಟು ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ನಾನಾ ರೀತಿಯ ಹವಾಗುಣ. ಉತ್ತಮ ಮಣ್ಣು, ಕಡಿಮೆ ಮಟ್ಟದ ಉತ್ಪಾದನಾ ವೆಚ್ಚ ಇತ್ಯಾದಿ.

ನಮ್ಮಲ್ಲಿ ವಾಣಿಜ್ಯ ರೀತಿಯ ಪುಷ್ಪ ಕೃಷಿಗೆ ಪ್ರಾಮುಖ್ಯತೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಯಾಗಿ ಇದರ ಒಟ್ಟು ವಿಸ್ತೀರ್ಣ ಸುಮಾರು ೮೯,೦೦೦ ಹೆಕ್ಟೇರ್ ಗಳಾಷ್ಟಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ಈ ಕೃಷಿಯಿದ್ದರೂ, ವಾಣಿಜ್ಯ ರೀತಿಯಲ್ಲಿ ಇದನ್ನು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಹರಿಯಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ತಾನ,  ದೆಹಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದೆ. ಇದರ ಒಟ್ಟು ವಿಸ್ತೀರ್ಣ ಇನ್ನಷ್ಟು ಹೆಚ್ಚುವ ಸಂಭವವಿದೆ.

ಪುಷ್ಪ ಕೃಷಿಯ ಒಟ್ಟು ವಿಸ್ತೀರ್ಣದ ಬಹುಪಾಲು ಸಾಂಪ್ರದಾಯಿಕ ಪದ್ಧತಿಯಡಿಯಲ್ಲಿದ್ದು, ಆಧುನಿಕ ಹಸಿರು ಮನೆ ಪದ್ಧತಿಯಡಿ ಕೇವಲ ೬೦೦ ಹೆಕ್ಟೇರ್ ಪ್ರದೇಶವಿದೆ. ಪುಷ್ಪ ಕೃಷಿಯಲ್ಲಿರುವ ಒಟ್ಟು ವಿಸ್ತೀರ್ಣದ ಮೂರನೆ ಎರಡು ಭಾಗದಲ್ಲಿ ಸಾಂಪ್ರದಾಯಿಕ ಪುಷ್ಪಗಳಾದ ಚೆಂಡುಮಲ್ಲಿಗೆ, ಮಲ್ಲಿಗೆ, ಗುಲಾಬಿ, ಸೇವಂತಿಗೆ, ಸುಗಂಧ ರಾಜ, ಮುಂತಾದವುಗಳನ್ನು ಬೆಳೆಸಲಾಗುತ್ತಿದೆ . ಇವುಗಳೊಂದಿಗೆ ಇತರ ಪುಷ್ಪಗಳಾದ ದುಂಡು ಹೂ, ಆರ್ಕಿಡ್‌, ಅಂಥೋರಿಯಂ ಇತ್ಯಾದಿಗಳಿಗೂ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಸಿರುಮನೆ ವ್ಯವಸ್ಥೆಯಡಿಯಲ್ಲಿ ನಾನಾ ರೀತಿಯ ಹೂಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಾಗ ಪೂರೈಸುವ ಉದ್ದೇಶದಿಂದ ಬೆಳೆಸಲಾಗುತ್ತಿದೆ.

ಭಾರತದಲ್ಲಿಂದು ವಾರ್ಷಿಕವಾಗಿ ಉತ್ಪಾದನೆಯಾಗುತ್ತಿರುವ ಬಿಡಿ ಹೂವಿನ ಒಟ್ಟು ಪ್ರಮಾಣ ಸುಮಾರು  ೪ ರಿಂದ ೬ ಲಕ್ಷ ಟನ್‌ಗಳೆಂದು  ಅಂದಾಜಿಸಲಾಗಿದ್ದು ಇದರೊಂದಿಗೆ ತುಂಡು ಹೂವಿನ ಪ್ರಮಾಣವು ಸುಮಾರು ೬೮೦ ಮಿಲಿಯಗಳಾಗಿವೆ. ಸಣ್ಣ ಸಣ್ಣ ಕೃಷಿಕರು ಉತ್ಪಾದಿಸುತ್ತಿರುವ ಪುಷ್ಪಗಳ ಅಂಕಿ-ಅಂಶ ಲಭ್ಯವಿಲ್ಲದೆ ಇದ್ದು, ಇವೂ ಸೇರಿದಲ್ಲಿ ಈ ಪ್ರಮಾಣವು ಇನ್ನಷ್ಟು ಏರಬಹುದಾಗಿದೆ. ರಾಜ್ಯಗಳಿಗನುಗುಣವಾಗಿ ನಮ್ಮಲ್ಲಿರುವ ಪುಷ್ಪ ಕೃಷಿ ವಿಸ್ತೀರ್ಣ ಮತ್ತು ಉತ್ಪಾದನಾ ಪ್ರಮಾಣದ ಬಗ್ಗೆ ಲಭ್ಯ ಅಂಕಿ-ಅಂಶಗಳನ್ನು ಪಟ್ಟಿಯಲ್ಲಿ ಕೊಡಲಾಗಿದೆ.

ರಾಜ್ಯಗಳಿಗನುಗುಣವಾಗಿ ಭಾರತದಲ್ಲಿ ಪುಷ್ಪ ಕೃಷಿ (ವಿಸ್ತೀರ್ಣ ಹೆಕ್ಟೇರ್ ಗಳಲ್ಲಿ)

ರಾಜ್ಯ

ವಿಸ್ತೀರ್ಣ

ಬಿಡಿ ಹೂ (ಟನ್‌ಗಳಲ್ಲಿ)

ತುಂಡು ಹೂ (ಲಕ್ಷಗಳಲ್ಲಿ)

ಆಂಧ್ರ ಪ್ರದೇಶ

೧೮,೦೮೭

೧೨೬೬೦೯

ದೆಹಲಿ

೩,೪೫೦

೨೧೦೦೭

ಹರಿಯಾಣ

೨,೨೫೦

೪೦೫೦

೭೬೦.೦೦

ಜಮ್ಮು ಮತ್ತು ಕಾಶ್ಮೀರ

೪೨

೭೧.೪೦

ಕರ್ನಾಟಕ

೨೦,೮೦೧

೧,೨೪,೪೪೦

ಮಧ್ಯಪ್ರದೇಶ

೧,೩೮೭

೮೩೨

ಮಹಾರಾಷ್ಟ್ರ

೬,೬೦೦

೨೮,೩೩೬

ರಾಜಸ್ಥಾನ

೨,೩೫೩

೨,೩೮೯

ತಮಿಳುನಾಡು

೧೮,೧೨೦

೧,೪೨,೨೫೦

ಪಶ್ಚಿಮ ಬಂಗಾಳ

೧೩,೨೨೭

೧೪,೬೪೪

೫೭೬೮.೦೦

ಇತರ

೪,೩೯೦

೮,೧೭೯

೩೫೦.೬೦

ಒಟ್ಟು

೮೮,೬೦೭

೫,೦೯,೧೯೩

೬೮೦೬.೦೦

ಸಾಂಪ್ರದಾಯಿಕವಲ್ಲದ ಪ್ರದೇಶದ ಪುಷ್ಪಗಳು

ಒಣ ಭೂಮಿ: ಹಸಿರು ಮನೆ ವ್ಯವಸ್ಥೆಯಡಿಯಲ್ಲಿ ಒಣಭೂಮಿ ಪ್ರದೇಶಗಳಲ್ಲಿ ಗುಲಾಬಿ, ಜರ್ಬೆರ ಮತ್ತು ಕಾರ್ ನೇಶನ್‌ಗಳನ್ನು ಬೆಳೆಸಬಹುದಾಗಿದೆ. ಇಲ್ಲಿ ಗುಲಾಬಿಯೊಂದಿಗೆ ಮೆಹಂದಿಯನ್ನು ಕೂಡಾ ಯಶಸ್ವಿಯಾಗಿ ಬೆಳೆಸಬಹುದೆಂಬುದನ್ನು ರಾಜಸ್ಥಾನದ ಅನುಭವದಿಂದ ತಿಳಿದುಕೊಳ್ಳಬಹುದು.

ಬೆಟ್ಟಕಾಡು ಪ್ರದೇಶ: ಈ ಪ್ರದೇಶದಲ್ಲಿ ಟ್ಯೂಲಿಪ್‌, ಡಪೋಡಿಲ್‌, ಆರ್ಕಿಡ್‌ ಮುಂತಾದವುಗಳನ್ನು ಬೆಳೆಸಲು ಸಾಧ್ಯ. ಭಾರತವಿಂದು ರಫ್ತು ಮಾಡುತ್ತಿರುವ ಶೇಕಡಾ ೬೦ ರಷ್ಟು ಒಣ ಹೂ ಈ ಪ್ರದೇಶಗಳಿಂದ ಬರುತ್ತಿದೆ.

ಹೆಚ್ಚಿನ ಉಷ್ಣಾಂಶವಿರುವ ಖಾಲಿ ಪ್ರದೇಶ:ಇಲ್ಲಿ ಆರ್ಕಿಡ್‌, ಹೆಲಿಕೋನಿಯಾಸ್‌, ಅಂಥೋರಿಯಂ ಮುಂತಾದವುಗಳನ್ನು ಬೆಳೆಸಬಹುದು.

ಕರಾವಳಿಯ ಎತ್ತರ ಪ್ರದೇಶ:ಈ ಪ್ರದೇಶದಲ್ಲಿ ಆಸ್ಟ್ರೇಲಿಯಾದ ವಿಶೇಷ ತಳಿಗಳಾದ ಕಾಂಗರೂ ಪಾವ್‌, ಜೆರಾಲ್ಡ್‌ಟನ್‌ ವಾಕ್ಸಿಪ್ಲವರ್, ಬುಗೇನ್‌ವಿಲ್ಲಸ್‌, ಪ್ಲುಮೇರಿಸ್‌, ಅಕೇಶಿಯಾ, ಗುಲ್‌ಮೊಹರ್ ಇತ್ಯಾದಿಗಳನ್ನು ಯಶಸ್ವಿಯಾಗಿ ಬೆಳೆಸಬಹುದು.

ಕರ್ನಾಟದಲ್ಲಿಪುಷ್ಪಕೃಷಿ

ಪುಷ್ಪ ಕೃಷಿಯ ವಿಸ್ತೀರ್ಣದ ದೃಷ್ಟಿಯಿಂದ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, ಇಲ್ಲಿ ವಾಣಿಜ್ಯ ರೀತಿಯಲ್ಲಿ ವ್ಯವಸಾಯಕ್ಕೊಳಪಟ್ಟ ಪುಷ್ಪಗಳೆಂದರೆ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಆಸ್ಟರ್, ಕನಕಾಂಬರ, ಚೆಂಡು ಹೂ, ಸಂಪಿಗೆ, ಕಾರ್ ನೇಶನ್‌, ಬರ್ಡ್ ಆಫ್‌ ಪ್ಯಾರಡೈಸ್‌, ಅಂಥೋರಿಯಂ, ಜರ್ಬರ, ಗ್ಲಾಡಿಯೋಲಸ್‌, ದಾಸವಾಳ, ವಿಂಕಾರೇಸಿಯಾ ಇತ್ಯಾದಿ. ಈ ರೀತಿಯದ್ದಾದ ವಿವಿಧ ಪುಷ್ಪಗಳ ಉತ್ಪಾದನೆಯು ನಮ್ಮ ರಾಜ್ಯದ ನಾನಾ ಜಿಲ್ಲೆಗಳಲ್ಲಾಗುತ್ತಿದ್ದು, ಇದರಿಂದಾಗಿ ರಾಜ್ಯಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಿದೆ.

ಪುಷ್ಪಗಳಉತ್ಪಾದನೆ: ಜಿಲ್ಲೆಗಳಸ್ಥಾನಮಾನ

ಗುಲಾಬಿ:

ಕರ್ನಾಟಕದಲ್ಲಿ ಬೆಳೆಯಲಾಗುತ್ತಿರುವ ಗುಲಾಬಿಯ ಒಟ್ಟು ವಿಸ್ತೀರ್ಣ ಸುಮಾರು ೧೮೫೦ ಹೆಕ್ಟೇರ್ ಮತ್ತು ವಾರ್ಷಿಕ ಉತ್ಪಾದನೆ ಅಂದಾಜು ೪೪೦೦ ಟನ್‌ಗಳಷ್ಟಾಗಿದೆ. ಗುಲಾಬಿ ಕೃಷಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ನಂತರದ ಸ್ಥಾನಗಳನ್ನು ಕ್ರಮವಾಗಿ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಶಿವಮೊಗ್ಗ ಆಕ್ರಮಿಸಿಕೊಂಡಿವೆ.

ಮಲ್ಲಿಗೆ:

ಮಲ್ಲಿಗೆಯ ಕೃಷಿಗೆ ಕರ್ನಾಟಕಕ್ಕೆ ಅನಾದಿಕಾಲದಿಂದಲೂ ಪ್ರಸಿದ್ಧಿಯಿದೆ . ಇದರ ಕೃಷಿಯಲ್ಲಿ ಬಳ್ಳಾರಿಜಿಲ್ಲೆ ಮೊದಲ ಸ್ಥಾನದಲ್ಲಿದ್ದು ಆ ಬಳಿಕ ಕ್ರಮವಾಗಿ ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳು ಸೇರಿವೆ.

ಸೇವಂತಿಗೆ:

ಬೆಂಗಳೂರು ಗ್ರಾಮಾಂತರ ಅಗ್ರಸ್ಥಾನದಲ್ಲಿದ್ದು, ಬೆಂಗಳೂರು ನಗರ, ಕೋಲಾರ, ಹಾವೇರಿ, ಮಂಡ್ಯ, ತುಮಕೂರು ಹಾಸನ ನಂತರದ ಸ್ಥಾನಗಳನ್ನು ಹೊಂದಿವೆ.

ಸುಗಂಧ ರಾಜ:

ಈ ಕೃಷಿಯ ಒಟ್ಟು ವಿಸ್ತೀರ್ಣ ಸುಮರು ೭೫೫೫ ಹೆಕ್ಟೇರ್ ಗಳಾಗಿದ್ದು, ಉತ್ಪಾದನೆಯು ಸುಮಾರು ೧೩೦೦೦ ಟನ್‌ಗಳಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನವನ್ನು ಹೊಂದಿದ್ದರೆ ಬೆಂಗಳೂರು ನಗರ ದ್ವಿತೀಯ ಸ್ಥಾನದಲ್ಲಿದೆ. ಆ ನಂತರದ ಸ್ಥಾನಗಳು ಕ್ರಮವಾಗಿ ಹಾವೇರಿ , ಚಿತ್ರದುರ್ಗ, ಮೈಸೂರು ಚಾಮರಾಜನಗರ ಜಿಲ್ಲೆಗಳಿಗೆ.

ಆಸ್ಟರ್:

ರಾಜ್ಯದಲ್ಲಿ ಇದರ ಕೃಷಿ ಕೇವಲ ೭೯೫ ಹೆಕ್ಟೇರ್ ಪ್ರದೇಶದಲ್ಲಿದ್ದು ಉತ್ಪಾದನೆಯು ಸುಮರು ೬೫೦೦ ಟನ್‌ಗಳಾಗಿವೆ. ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನವನ್ನು ತನ್ನದಾಗಿಸಿದ್ದು, ಗ್ರಾಮಾಂತರ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಮಂಡ್ಯ ಮತ್ತು ಚಿತ್ರದುರ್ಗ ಜಿಲ್ಲೆಗಳು ತೃತೀಯ ಸ್ಥಾನದಲ್ಲಿದ್ದರೆ ಹಾಸನ ಚತುರ್ಥ ಸ್ಥಾನವನ್ನು ತನ್ನದಾಗಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಇದರ ಪ್ರವೇಶವಿನ್ನು ಆಗಿಲ್ಲ.

ಕನಕಾಂಬರ:

ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಇದರ ಕೃಷಿ ಅತ್ಯಧಿಕ ಪ್ರದೇಶದಲ್ಲಾಗುತ್ತಿದೆ . ಒಟ್ಟಾರೆಯಾಗಿ ಕನಕಾಂಬರವನ್ನು ರಾಜ್ಯದ ಸುಮಾರು ೨೨೮೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು ಇದರಿಂದ ಲಭ್ಯವಾಗುವ ಉತ್ಪಾದನೆಯ ಸುಮಾರು ೮೦೦೦ ಟನ್‌ಗಳಾಗಿವೆ.

ಚೆಂಡೂ ಹೂ:

ರಾಜ್ಯವು ಚೆಂಡು ಹೂವಿನ ಉತ್ಪಾದನೆಯ ದೃಷ್ಟಿಯಿಂದ ದೇಶದಲ್ಲಿ ಉನ್ನತಸ್ಥಾನದಲ್ಲಿದ್ದು, ಇದರ ಕೃಷಿಯನ್ನು ಸುಮರು ೫೧೨೫ ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳುತ್ತಿದೆ. ಮಂಡ್ಯ ಜಿಲ್ಲೆಯ ಈ ಕೃಷಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳನ್ನು ಕ್ರಮವಾಗಿ ಚಾಮರಾಜ ನಗರ, ಕೋಲಾರ, ತುಮಕೂರು, ಬೆಂಗಳೂರು ನಗರ ಹೊಂದಿದೆ.

ಸಂಪಿಗೆ:

ಸಂಪಿಗೆ ಕೃಷಿಗೆ ಬೆಂಗಳೂರು ನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಪ್ರಸಿದ್ಧಿಯನ್ನು ಹೊಂದಿವೆ.

ಇತರೆ:

ಕಾರ್ನೇಶನ್‌, ಬರ್ಡ್ ಆಫ್‌ ಪ್ಯಾರಡೈಸ್‌, ಆಥೋರಿಯಂ, ಜರ್ಬರ, ಗ್ಲಾಡಿಯೋಲಸ್‌ ಇತ್ಯಾದಿಗಳ ಕೃಷಿಯಲ್ಲಿ ಬೆಂಗಳೂರು ನಗರ ಮತ್ತು ಕೊಡಗು ಜಿಲ್ಲೆಗಳು ಪ್ರಸಿದ್ಧಿಯಾಗಿದ್ದು ಇನ್ನುಳಿದ ಜಿಲ್ಲೆಗಳಲ್ಲಿ ಇವು ಹೆಚ್ಚು ಕಡಿಮೆ ನಗಣ್ಯ.

ಪುಷ್ಪ ಕೃಷಿ ಸಂಶೋಧನೆ ಅಭಿವೃದ್ಧಿ ಕಾರ್ಯ ನಡೆಸುತ್ತಿರುವ ಸಂಸ್ಥೆಗಳು

ಪುಷ್ಪ ಕೃಷಿಯ ವಿವಿಧ ವಿಚಾರಗಳ ಬಗ್ಗೆ ಪ್ರಸ್ತುತ ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಹಲವು ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಇವುಗಳಲ್ಲಿ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಹಾರ್ಟಿ ಕಲ್ಚರ್ ರೀಸರ್ಚ್ (ಐಐಎಆರ್), ಇಂಡಿಯನ್‌ ಕೌನ್ಸಿಲ್‌ ಆಫ್‌ ಎಗ್ರಿಕಲ್ಚರಲ್‌ ರೀಸರ್ಚ್ ( ಐಸಿಎಆರ್), ಟ್ರೋಪಿಕಲ್‌ ಬೊಟೇನಿಕ್‌ ಗಾರ್ಡನ್‌ ಯ್ಯಾಂಡ್‌ ರೀಸರ್ಚ್ ಇನ್‌ಸ್ಟಿಟ್ಯೂಟ್‌ (ಟಿಬಿಜಿಆರ್ಐ). ಪಂಜಾಪ್‌ ಎಗ್ರಿಕಲ್ಚರಲ್‌ ಯೂನಿವರ್ಸಿಟಿ (ಪಿಎಯು), ತಮಿಳುನಾಡು ಎಗ್ರಿಕಲ್ಚರಲ್‌ ಯುನಿವರ್ಸಿಟಿ (ಟಿಎನ್‌ಓಯು), ಧಾರವಾಡ ಮತ್ತು ಬೆಂಗಳೂರುಗಳಲ್ಲಿರುವ ಕೃಷಿ ವಿಶ್ವವಿದ್ಯಾಲಯ ಮತ್ತು ಹಲವು ಖಾಸಗಿ ಸಂಶೋಧನಾ ಕೇಂದ್ರಗಳು ಸೇರಿವೆ. ಖಾಸಗಿ ಸಂಶೋಧನಾ ಕೇಂದ್ರಗಳು ಬೆಂಗಳೂರು, ಪೂನಾ, ಮುಂಬಯಿ, ಹೈದರಾಬಾದ್‌ ಮುಂತಾದ ಮೆಟ್ರೋ ಪ್ರದೇಶಗಳಲ್ಲಿವೆ. ಹೈಬ್ರಿಡ್‌ ಸೀಡ್ಸ್‌ (ಐಎಎಚ್‌ಎಸ್‌) ಪ್ರಮುಖ ಪಾತ್ರ ವಹಿಸುತ್ತಿದೆ . ಇದರೊಂದಿಗೆ ದೇಶದಲ್ಲಿಂದು ಸುಮಾರು ೧೨೨ಕ್ಕಿಂತಲೂ ಹೆಚ್ಚು ಅಂಗಾಂಶ ಕಸಿ ಕೇಂದ್ರಗಳಿದ್ದು ಇವುಗಳಲ್ಲಿ ಮುಖ್ಯವಾದವುಗಳೆಂದರೆ ಕುಮಾರ್ ಜೆನ್‌ಟೆಕ್‌, ಕಾಡಿಲಾ ಟಿಸ್ಯೂಕಲ್ಚರ್, ಎ.ಪಿ. ಥೋಮಸ್‌, ಮತ್ತಿತರರು. ಪುಷ್ಪಗಳು ಮತ್ತು ಪುಷ್ಪಗಳ ಉತ್ಪನ್ನಗಳನ್ನು ರಫ್ತು ಮಾಡುವಲ್ಲಿ ಎಪೆಡಾ ದೇಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ವ್ಯವಸ್ಥೆಯಲ್ಲಿ ನೂರಾರು ಖಾಸಗಿ ಉದ್ದಿಮೆದಾರರು ಭಾಗಿಯಾಗಿದ್ದು, ಇವರೆಲ್ಲಾ ದೇಶದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾರುಕಟ್ಟೆ

ಆಂತರಿಕವಾಗಿ ದಕ್ಷಿಣದ ರಾಜ್ಯಗಳಲ್ಲಿ ಪುಷ್ಪಗಳಿಗಿರುವ ಬೇಡಿಕೆ ಉತ್ತರದ ರಾಜ್ಯಗಳಿಗೆ ಹೋಲಿಸಿದಾಗ ಅಧಿಕ ಪ್ರಮಾಣದ್ದಾಗಿದೆ. ಸಾಂಪ್ರದಾಯಿಕ ಪುಷ್ಪಗಳಿಗಿರುವ ಬೇಡಿಕೆಯೊಂದಿಗೆ ಆಧುನಿಕ ಅಲಂಕಾರಿಕ ಪುಷ್ಪಗಳಿಗೂ ಹೆಚ್ಚಿನ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಅಧಿಕಗೊಳ್ಳುತ್ತಿದೆ. ಇವೆಲ್ಲ ನಮ್ಮಲ್ಲಿ ಇವಕ್ಕಿರುವ ವಿಫುಲ ಅವಕಾಶಗಳನ್ನು ಎತ್ತಿ ತೋರಿಸುತ್ತಿವೆ. ಭಾರತದಲ್ಲಿ ಪುಷ್ಪಗಳ ವ್ಯಾಪಾರ ಅಧಿಕ ಪ್ರಮಾಣದಲ್ಲಿ ಮುಂಬಯಿ, ಪೂನಾ, ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಚಂಡೀಗಢ, ಲಕ್ನೋ ಮತ್ತು ಕಲ್ಕತ್ತಾಗಳಲ್ಲಿ ನಡೆಯುತ್ತಿದೆ.

ನಮ್ಮಲ್ಲಿರುವ ಮಾರುಕಟ್ಟೆ ವ್ಯವಸ್ಥೆಯು ಎರಡು ರೀತಿಯಲ್ಲಿದ್ದು, ಮೊದಲನೆಯ ವ್ಯವಸ್ಥೆಯು ತೀಋಆ ಅಸಂಘಟಿತ ರೀತಿಯಲ್ಲಿದ್ದು, ಇಲ್ಲಿ ಸಣ್ಣ ಸಣ್ಣ ಕೃಷಿಕರು ಉತ್ಪಾದಿಸುತ್ತಿರುವ ವಿವಿಧ ಹೂಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಉತ್ಪಾದಕನಿಗೆ ದೊರಕುತ್ತಿರುವ ಬೆಲೆ ಗ್ರಾಹಕನು ಕೊಡುವ ಬೆಲೆಯ ಶೇಕಡಾ ೩೦ರಷ್ಟಾಗಿದೆ.

ಎರಡನೆಯ ವ್ಯವಸ್ಥೆಯಲ್ಲಿ ರಫ್ತಿನ ಉದ್ದೇಶ ಇಟ್ಟುಕೊಂಡು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಮಾಡಿ ವಿದೇಶಿ ಮಾರುಕಟ್ಟೆಯಲ್ಲಿ ಆಕರ್ಷಣೆಗೊಳಗಾಗಿರುವ ಹೂವುಗಳನ್ನು ಉತ್ಪಾದಿಸುವ ಉದ್ದಿಮೆದಾರರಿದ್ದು, ಇವರಲ್ಲಿ ಟಾಟಾ, ಬಿರ್ಲಾ, ಥಾಪರ್, ಎಂ.ಆರ್.ಎಫ್‌ ಸಮೂಹ, ಗೊಯೆಂಕಾ ಸಮೂಹ, ಹಲವು ಬಹು ರಾಷ್ಟ್ರೀಯರು ಸೇರಿದ್ದಾರೆ. ಈ ಎಲ್ಲಾ ಉದ್ದಿಮೆದಾರರು ಮುಖ್ಯವಾಗಿ ತುಂಡು ಹೂವುಗಳಾದ ಗುಲಾಬಿ, ಗ್ಲಾಡಿಯೋಲಿ, ಜರ್ಬರ, ಅಂಥೋರಿಯಂ, ದಹ್ಲಿಯಾಸ್‌, ಸುಗಂಧ ರಾಜ, ಆರ್ಕಿಡ್‌ಗಳ ಉತ್ಪಾದನೆಯನ್ನು ಹಸಿರು ಮನೆ ಮತ್ತಿತರ ವ್ಯವಸ್ಥೆಗಳ ಮೂಲಕ ಕೈಗೊಂಡು ತಾವೇ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾರೆ.

ಭಾರತದಲ್ಲಿ ಉತ್ಪಾದಿಸಲ್ಪಡುವ ಪುಷ್ಪಗಳಿಗೆ ಆಂತರಿಕವಾಗಿ ಹೋಟೇಲುಗಳು ಅದರಲ್ಲೂ ಮುಖ್ಯವಾಗಿ ತಾರಾ ಹೋಟೇಲುಗಳು ಪ್ರಮುಖ ಗ್ರಾಹಕರು, ಇದರೊಂದಿಗೆ ದೊಡ್ಡ ಉದ್ದಿಮೆದಾರರು, ವಿಮಾನ ನಿಲ್ದಾಣಗಳು ಇವೆಲ್ಲಾ ಪುಷ್ಪಗಳಿಗಿರುವ ಪ್ರಮುಖ ಮಾರುಕಟ್ಟೆಗಳು. ದೇಶಕ್ಕೆ ಆಗಮಿಸುವ ವಿದೇಶಿಯರು ಹೆಚ್ಚಾದಂತೆ ಪುಷ್ಪಗಳಿಗಿರುವ ಆಂತರಿಕ ಮಾರುಕಟ್ಟೆಯೂ ವಿಸ್ತರಿಸುತ್ತಿರುವುದನ್ನು ಕಳೆದ ಹಲವು ವರ್ಷಗಳ ಬೇಡಿಕೆಯಿಂದ ತಿಳಿದುಕೊಳ್ಳಲಾಗಿದೆ.

ಭಾರತದಿಂದ ಪುಷ್ಪಗಳ ರಫ್ತು

ಕೃಷಿಕ್ಷೇತ್ರದಲ್ಲಿ ತನ್ನದೇ ಆದ ಪರಂಪರೆ ಭಾರತದ್ದಾಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಪಾಲು ಅತ್ಯಲ್ಪ. ಇದೇ ಸ್ಥಿತಿ ಪುಷ್ಪ ಕೃಷಿ ಕ್ಷೇತ್ರದ್ದಾಗಿದೆ. ಹೀಗಿದ್ದರೂ ಕಳೆದೊಂದು ದಶಕದಿಂದೀಚೆಗೆ ಸರಕಾರಗಳು ಕೊಡುತ್ತಿರುವ ಪ್ರೋತ್ಸಾಹಗಳಿಂದಾಗಿ ನಮ್ಮಲ್ಲಿಂದು ಹಲವು ಪುಷ್ಪ ಕೃಷಿ ಘಟಕ ರಫ್ತಿನ ದೃಷ್ಟಿ ಇಟ್ಟುಕೊಂಡು ನಾನಾ ರೀತಿಯ ಹೂವುಗಳನ್ನು ಬೆಳೆಸಿ ರಫ್ತು ಮಾಡುತ್ತಿದೆ. ಈ ರೀತಿಯ ಘಟಕಗಳು ಹೆಚ್ಚಾಗಿ ಮುಂಬಯಿ, ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್‌ಗಳಂತ ಮೆಟ್ರೋಗಳಲ್ಲಿ ಡಚ್‌ ಮತ್ತು ಇಸ್ರೇಲಿ ತಜ್ಞರ ಸಲಹೆಯಂತೆ ತಾಂತ್ರಿಕತೆಯನ್ನು ಅಳವಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಉದ್ದಿಮೆದಾರರು ಹಸಿರುಮನೆ ಮತ್ತಿತರ ಮೂಲಭೂತ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತದಿಂದ ರಫ್ತು ಮಾಡುತ್ತಿರುವ ಪುಷ್ಪಗಳನ್ನು ಮುಖ್ಯವಾಗಿ ೪ ವಿಭಾಗಗಳಲ್ಲಿ ಗುರುತಿಸಿಕೊಳ್ಳಬಹುದು. ಅವುಗಳೆಂದರೆ

) ತುಂಡುಹೂಗಳು: ಈ ತುಂಡು ಹೂವುಗಳನ್ನು ಒಂದನೆಯದಾಗಿ ಹಸಿಯಾಗಿ ಪುಷ್ಪಗುಚ್ಛ ಮತ್ತು ಅಲಂಕಾರಕ್ಕಾಗಿ ಬಳಸಲು ರಫ್ತು ಮಾಡುವುದಾದಲ್ಲಿ ಇನ್ನೊಂದೆಡೆಯಲ್ಲಿ ಅವನ್ನು ಬೇರೆ ಬೇರೆ ರೀತಿಯ ಬಳಕೆಗಾಗಿ ಒಣಗಿಸಿ ಇಲ್ಲವೆ ತೊಳೆದು ಕೂಡ ರರ್ಫತು ಮಾಡಲಾಗುತ್ತಿದೆ.

೨) ಬಲ್ಬುಗಳು, ನಳಿಕೆಗಳು, ಬೇರು ಸಹಿತ ಇತ್ಯಾದಿ ರೂಪಗಳಲ್ಲಿ

೩) ಜೀವವಿರುವ ಬೇರು ಸಹಿತ ತುಂಡುಗಳು

೪) ಪುಷ್ಪಗುಚ್ಛಗಳ ತಯಾರಿಗಾಗಿ ರೆಂಬೆಗಳು, ಗಿಡದ ಬೇರೆ ಬೇರೆ ಭಾಗಗಳು, ಹಸಿ, ಒಣ ಇತ್ಯಾದಿ ರೂಪಗಳಲ್ಲಿ, ಭಾರತದಿಂದ ರಫ್ತಾಗುತ್ತಿರುವ ನಾನಾ ರೀತಿಯ ಪುಷ್ಪ ಮತ್ತದರ ಉತ್ಪನ್ನಗಳ ಒಟ್ಟು ಮೌಲ್ಯದಲ್ಲಿ ಶೇಕಡಾ ೭೨ ತುಂಡು ಹೂವುಗಳದ್ದಾದರೆ, ರೆಂಬೆ, ಗಿಡದ ಬೇರೆ ಭಾಗಗಳ ಪಾಲು ಶೇಕಡಾ ೧೭, ಜೀವವಿರುವ ಗಿಡಗಳ ಪಾಲು ಶೇಕಡಾ ೯ ಆಗಿವೆ. ಭಾರತದ ಪುಷ್ಪಗಳಿಗಿರುವ ಮುಖ್ಯ ವಿದೇಶಿ ಮಾರುಕಟ್ಟೆಗಳೆಂದರೆ ಅಮೇರಿಕಾ, ನೆದರ್ ಲ್ಯಾಂಡ್‌, ಜಪಾನು, ಜರ್ಮನಿ ಮತ್ತು ಇಂಗ್ಲೆಂಡ್‌ಗಳಾಗಿವೆ.

ವಿಸ್ತರಣೆಗಿರುವ ಅವಕಾಶಗಳು

ಭಾರತವು ಪುಷ್ಪ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ವಿಶ್ವ ಮಾರುಕಟ್ಟೆಯಲ್ಲಿರುವ ಆಗಾಧ ಬೇಡಿಕೆ, ಮುಕ್ತವಾಗಿರುವ ವಿಶ್ವ ಮಾರುಕಟ್ಟೆ, ಆಂತರಿಕವಾಗಿ ಕೃಷಿ ಕ್ಷೇತ್ರ ಅನುಭವಿಸುತ್ತಿರುವ ಸಮಸ್ಯೆಗಳು, ನಿರುದ್ಯೋಗ ಇತ್ಯಾದಿಗಳಿಗೆ ಹೋಲಿಸಿದಾಗ ಇಲ್ಲಿನ ಬೆಳವಣಿಗೆ ಇನ್ನೂ ಸಾಲದು. ಈ ನಿಟ್ಟಿನಲ್ಲಿ ಪುಷ್ಪ ಕೃಷಿಗೆ ನಾವಿನ್ನಾದರೂ ಒತ್ತು ಕೊಡಲೇಬೇಕು. ಈ ದಿಶೆಯಲ್ಲಿ ನಮ್ಮಲ್ಲಿರುವ ಹಲವು ಪೂರಕ ಅಂಶಗಳು ಸಹಾಯವನ್ನೊದಗಿಸಲಬಲ್ಲವು. ಅವುಗಳೆಂದರೆ:

೧) ನಮ್ಮಲ್ಲಿರುವ ಹವಾಗುಣ ವೈವಿಧ್ಯತೆಯಿಂದ ಕೂಡಿದ್ದು, ಇದು ನಾನಾ ರೀತಿಯ ಪುಷ್ಪ ಕೃಷಿಗೆ ಯೋಗ್ಯ.

೨) ಕಡಿಮೆ ವೆಚ್ಚದಲ್ಲಿ ಕೆಲಸಗಾರರ ಲಭ್ಯತೆ.

೩) ಮೂಲ ಉತ್ಪನ್ನಗಳ ವೆಚ್ಚ ವಿದೇಶಗಳಿಗೆ ಹೋಲಿಸಿದಾಗ ಅತ್ಯಲ್ಪ.

೪) ವಿದೇಶಿ ಮಾರುಕಟ್ಟೆಗಳಲ್ಲಿ ಪರಿಸರ ಪ್ರೇಮಿ, ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ.

೫) ವಿಶ್ವದಲ್ಲಿ ಇಂದು ವಾರ್ಷಿಕವಾಗಿ ಸರಾಸರಿ ಶೇಕಡಾ ೨೫ ರಿಂದ ೩೦ ರಷ್ಟು ಬೇಡಿಕೆ ಹೆಚ್ಚುತ್ತಿರುವಿಉದು.

೬) ಗುಲಾಬಿ ಮತ್ತು ಆರ್ಕಿಡ್‌ಗಳ ಕೃಷಿಗೆ ನಮ್ಮ ಹವೆ ಹೇಳಿ ಮಾಡಿಸಿದಂಥಿದೆ.

೭) ಹೆಚ್ಚಿನ ಉದ್ಯೋಗಾವಕಾಶ ಲಭ್ಯ.

೮) ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮಲ್ಲಾಗಬಹುದಾದ ಉತ್ಪಾದನಾ ವೆಚ್ಚ ಅತ್ಯಲ್ಪ.

ನಮ್ಮಲ್ಲಿ ಪುಷ್ಪ ಕೃಷಿಗೆ ವಿಫುಲ ಅವಕಾಶಗಳಿಂದು ಇದ್ದರೂ ಈ ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳು ಈಗಾಗಲೇ ಕಂಡು ಬರುತ್ತಿದ್ದು, ಇವುಗಳ ನಿವಾರಣೆಯಾದಲ್ಲಿ ಇಲ್ಲಿ ಉತ್ತಮ ಭವಿಷ್ಯ ನಿಶ್ಚಿತ. ಈ ಸಮಸ್ಯೆಗಳೆಂದರೆ:-

೧) ಪ್ರಕೃತ ನಮ್ಮಲ್ಲಿ ಪುಷ್ಪ ಕೃಷಿ ಬಗ್ಗೆ ಲಭ್ಯವಿರುವ ಮಾಹಿತಿ ಅತ್ಯಲ್ಪ. ನಮ್ಮ ಕೃಷಿಕರು ಏನನ್ನು, ಯಾವಾಗ ಎಲ್ಲಿ ಹೇಗೆ ಬೆಳೆಯಬೇಕೆಂಬ ಬಗ್ಗೆ ಅರಿವನ್ನು ಹೊಂದಿಲ್ಲ. ಈಗಾಗಲೇ ಈ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಘಟಕಗಳು ಹಸಿರುಮನೆ ವ್ಯವಸ್ಥೆಯನ್ನು ವಿದೇಶಿ ತಂತ್ರಜ್ಞಾನದ ನೆರವಿನಿಂದ ಮಾಡಿಕೊಂಡಿದ್ದು, ಇದಕ್ಕಾಗುವ ವೆಚ್ಚ ಅತ್ಯಧಿಕ, ನಮ್ಮಲ್ಲಿನ್ನೂ ಆಂತರಿಕ ಅಲ್ಪ ವೆಚ್ಚದ ತಂತ್ರಜ್ಞಾನ ಈ ತನಕ ಹೊರಹೊಮ್ಮದಿರುವುದು ಇಲ್ಲಿ ಕಾಣಬಹುದಾದ ಬಹುದೊಡ್ಡ ಸಮಸ್ಯೆ.

೨) ಪುಷ್ಪಗಳು ಬೇಗನೆ ಹಾಳಾಗುವಂಥವುಗಳು, ಇವನ್ನು ಉತ್ಪಾದನಾ ಪ್ರದೇಶದಿಂದ ಗ್ರಾಹಕರಿಗೆ ಅತೀ ವೇಗದಲ್ಲಿ ಹಾಳಾಗದಂತೆ ಸಾಗಿಸುವ ವ್ಯವಸ್ಥೆ ಅತೀ ಅಗತ್ಯ. ಆದರೆ ನಮ್ಮಲ್ಲಿಂದು ಇವನ್ನು ಹಾಳಾಗದಂತೆ ರಕ್ಷಿಸಲು ಅಗತ್ಯವಿರುವ ಶೀತಲೀಕರಣ ವ್ಯವಸ್ಥೆ ಕೇವಲ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದು, ಇವಿನ್ನೂ ಗ್ರಾಮಮಟ್ಟದಲ್ಲಿ ಆರಂಭಗೊಂಡಿಲ್ಲ. ಇದರೊಂದಿಗೆ ಶೀತಲೀಕರಣ ವ್ಯವಸ್ಥೆಯುಳ್ಳ ವಾಹನ ಸೌಕರ್ಯಗಳು ನಮ್ಮಲ್ಲಿ ಲಭ್ಯವಿಲ್ಲದಿರುವುದು ಇಲ್ಲಿರುವ ದೊಡ್ಡ ಸಮಸ್ಯೆ.

೩) ಅಸಂಘಟಿತ ಮಾರಾಟ ವ್ಯವಸ್ಥೆ ಇಲ್ಲಿದ್ದು, ಪರಿಣಾಮವಾಗಿ ಕೃಷಿಕರು ಗಳಿಸುತ್ತಿರುವ ಆದಾಯ ಅತ್ಯಲ್ಪ. ಇದರೊಂದಿಗೆ ಮಾರುಕಟ್ಟೆಯ ಬಗ್ಗೆ ಅಗತ್ಯದ ಮಾಹಿತಿ ದೊರಕದೆ ಉತ್ಪಾದಕರು ಕೊರಗುವಂತ ಸ್ಥಿತಿ ನಮ್ಮಲ್ಲಿದೆ.

೪) ಮೂಲಭೂತ ಸೌಕರ್ಯಗಳ ಅಭಾವ

೫) ತುಂಡು ಹೂವುಗಳನ್ನು ರಫ್ತು ಮಾಡುವ ಸಂದರ್ಭದಲ್ಲಿ ಇವನ್ನು ೨ ರಿಂದ ೪ ಡಿಗ್ರಿ ಉಷ್ಣಾಂಶದಲ್ಲಿ ಶೇಖರಿಸಿಡಬೇಕು. ಆದರೆ ಪ್ರಕೃತ ಲಭ್ಯವಿರುವ ಶೇಖರಣಾ ವ್ಯವಸ್ಥೆ ಏನೇನೂ ಸಾಳದು. ಇದರೊಂದಿಗೆ ಪುಷ್ಪಗಳನ್ನು ಆಮದು ಮಾಡಿಕೊಳ್ಳುತ್ತಿರುವ ಅಮ್‌ಸ್ಟರ್ ಡಾಂ, ಕೋಪನ್‌ ಹೇಗನ್‌ ಮುಂತಾದ ಮಾರುಕಟ್ಟೆಗಳಿಗೆ ನಮ್ಮಲ್ಲಿಂದ ನೇರ ವಿಮಾನ ಹಾರಾಟವಿಲ್ಲದಿರುವುದು ರಫ್ತುದಾರರಿಗೆ ನುಂಗಲಾರದ ತುತ್ತಾಗಿದೆ.

೬) ಹೆಚ್ಚುತ್ತಿರುವ ವಿಮಾನದರ ಮತ್ತು ವಿಮಾನಗಳಲ್ಲಿ ಸ್ಥಳಾವಕಾಶದ ಕೊರತೆ ಪ್ರಮುಖ ಸಮಸ್ಯೆಗಳಾಗಿವೆ.

೭) ಪುಷ್ಪ ಕೃಷಿ ಕೈಗೊಳ್ಳುತ್ತಿರುವವರಿಗೆ ಆಂತರಿಕೆ ಮತ್ತು ಬಾಹ್ಯ ಮರುಕಟ್ಟೆಗಳಲ್ಲಿರುವ ಬೇಡಿಕೆ, ಬೆಲೆ, ಗ್ರಾಹಕರ ರುಚಿ ಇತ್ಯಾದಿಗಳ ಬಗ್ಗೆ ಮಾಹಿತಿಯ ಅಭಾವ.

೮) ಉತ್ಪಾದಕ, ಸಂಸ್ಕರಣೆಗಾರ ಮತ್ತು ರಫ್ತುದಾರರ ನಡುವೆ ಸಂಪರ್ಕದ ಅಭಾವ.

೯) ನಿರೀಕ್ಷಿತ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ಕಾರ್ಯಗಳಾಗದಿರುವುದು.

೧೦) ಪ್ರದೇಶಕ್ಕನುಗುಣವಾದ ತಳಿ, ಬೆಳೆಗಳ ಬಗ್ಗೆ ಮಾಹಿತಿಯ ಕೊರತೆ.

ಪುಷ್ಪ ಕೃಷಿಯನ್ನು ಸರಕಾರವು ೯ನೇ ಪಂಚವಾರ್ಷಿಕ ಯೋಜನೆಯಿಂದೀಚೆಗೆ ಆದ್ಯತಾ ರಂಗವೆಂದು ಪರಿಗಣಿಸಿ ಇಲ್ಲಿಗೆ ಹಲವು ಪ್ರೇರಣೆಗಳನ್ನು ನೀಡುತ್ತಾ ಬಂದಿದ್ದು, ಇದಕ್ಕಾಗಿ ಹಲವು ರಿಯಾಯಿತಿಗಳನ್ನು ಪ್ರಕಟಿಸಿದ್ದು, ಇವೆಲ್ಲವು ನಿಕರೀಕ್ಷಿತ ಮಟ್ಟದಲ್ಲಿ ಕ್ಷೇತ್ರಕ್ಕೆ ತಲುಪದಿರುವುದರಿಂದ ಮೇಲೆ ತಿಳಿಸಿದ ಸಮಸ್ಯೆಗಳನ್ನೂ ನಮ್ಮ ಕೃಷಿಕರನ್ನು ಸುತ್ತುವರಿದಿದೆ. ಈ ನಿಟ್ಟಿನಲ್ಲಿ ಇಲ್ಲಿಗಿಂದ ಅಗತ್ಯ ಪರಿಹಾರಗಳು ಆಗಲೇಬೇಕು. ಈ ಪರಿಹಾರಗಳು ಕಾರ್ಯರೂಪಕ್ಕೆ ಬಂದಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆಯನ್ನು ಕಂಡುಕೊಳ್ಳಬಹುದು. ಈ ದಿಶೆಯಲ್ಲಿ ಕೆಳಗೆ ಸೂಚಿಸಿದ ಪರಿಹಾರೋಪಾಯಗಳು ಸೂಕ್ತವಾಗಬಲ್ಲವು ಅವುಗಳೆಂದರೆ:

೧) ಪ್ರದೇಶಕ್ಕನುಗುಣವಾದ ಪುಷ್ಪಕೃಷಿ ಬಗ್ಗೆ ಮಾಹಿತಿ ತಂತ್ರಜ್ಞಾನದ ಪೂರೈಕೆ.

೨) ಕೊಯ್ಲಿನ ಪೂರ್ವ ಮತ್ತು ಕೊಯ್ಲಿನ ನಂತರದ ತಂತ್ರಜ್ಞಾನ, ಮೂಲಭೂತ ಸೌಕರ್ಯಗಳ ಪೂರೈಕೆ.

೩) ರಫ್ತಿನ ಅಭಿವೃದ್ಧಿಗಾಗಿ ರಫ್ತು ನಿಗಮದ ಸ್ಥಾಪನೆ.

೪) ಉತ್ತಮ ಮಾರಾಟ ವ್ಯವಸ್ಥೆಯನ್ನು ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದ ತನಕ ನಿರ್ಮಿಸುವುದು.

೫) ಪುಷ್ಪ ಕೃಷಿ ಮತ್ತು ಮಾರಾಟ ವ್ಯವಸ್ಥೆಗಾಗಿ ಸಹಕಾರಿ ಸಂಘಗಳ ಸ್ಥಾಪನೆ.

೬) ವಿದೇಶದಿಂದ ಆಮದಾಗುವ ತಂತ್ರಜ್ಞಾನದ ಮೇಲಿನ ಸುಂಕವನ್ನು ತಗ್ಗಿಸುವುದು.

೭) ವಿಮಾನದ ದರವನ್ನು ಕಡಿಮೆಗೊಳಿಸುವುದು.

೮) ಕಡಿಮೆ ಬಡ್ಡಿ ದರದಲ್ಲಿ ಸಾಲದ ಪೂರೈಕೆ.

೯) ಪುಷ್ಪ ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ವಿವಿಧ ರೀತಿಯ ಪ್ರೋತ್ಸಾಹ ಕೊಡುವುದು.

೧೦) ಪುಷ್ಪ ಕೃಷಿಯ ಅಭಿವೃದ್ಧಿಗಾಗಿ ಕೃಷಿಕರಿಗೆ ತರಬೇತಿ ಮತ್ತು ಶಿಕ್ಷಣ ಒದಗಿಸುವುದು.

೧೧) ಸಮಸ್ಯೆಗಳಿಗನುಗುಣವಾದ ಪರಿಹಾರಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

೧೨) ಉತ್ಪಾದಕ, ಮಾರಾಟಗಾರ ಮತ್ತು ರಫ್ತುದಾರರೊಳಗೆ ಸಂಪರ್ಕ ಕಲ್ಪಿಸಿ ಸಂಬಂಧವನ್ನು ಅಭಿವೃದ್ಧಿ ಪಡಿಸುವುದು.

೧೩) ಬೇಡಿಕೆ ಮತ್ತು ಪೂರೈಕೆಗಳ ಬಗ್ಗೆ ಕಾಲಕ್ಕನುಗುಣವಾಗಿ ಮಾಹಿತಿ ಒದಗಿಸುವುದು.

೧೪) ಉತ್ತಮ ಗುಣಮಟ್ಟದ ಬೀಜ, ಗಿಡಗಳ ಪೂರೈಕೆ ಮತ್ತು ಕಸಿಕಟ್ಟುವ ಬಗ್ಗೆ ಮಾಹಿತಿ ಒದಗಿಸುವಿಕೆ ಇಂದಿನ ಅಗತ್ಯಗಳಲ್ಲೊಂದಾಗಿದೆ.

ಔಷಧೀಯಸಸ್ಯಗಳಿಗಿರುವಮಾರುಕಟ್ಟೆ

ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಔಷಧೀಯ ಸಸ್ಯಗಳಿಗೆ ಅಗಾಧ ಬೇಡಿಕೆಯಿದೆ. ಆದರೆ ಇಲ್ಲೆಲ್ಲ ಇವುಗಳಿಗಿರುವ ಮಾರುಕಟ್ಟೆ ಅಥವಾ ಮಾರಾಟ ವ್ಯವಸ್ಥೆ ಅಸಂಘಟಿತ ಕ್ಷೇತ್ರದಲ್ಲಿದೆ. ಭಾರತದಲ್ಲಿ ಈ ಮೂಲಿಕೆಗಳ ಮಾರಾಟ ವ್ಯವಸ್ಥೆಯಲ್ಲಿ ಹೆಚ್ಚಾಗಿ ಗ್ರಾಮಮಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರು ಪಾಲುದಾರರಾಗಿದ್ದು, ಇವರಿಂದ ಸಂಗ್ರಹಿಸಲ್ಪಟ್ಟ ಮೂಲಿಕೆಗಳನ್ನು ಮಧ್ಯವರ್ತಿಗಳು, ಸಣ್ಣ ಅಂಗಡಿ ಹೊಂದಿರುವವರು, ಸಂತೆಗಳಲ್ಲಿನ ವ್ಯಾಪಾರಸ್ಥರು ಕೊಂಡು ಕೊಂಡು ಅವನ್ನು ಖಾಸಗಿ ಮೂಲಿಕಾ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.  ಈ ಆಸಗಿ ವ್ಯಾಪಾರಸ್ಥರು ಅವನ್ನು ಖಾಸಗಿ ಔಷಧ ತಯಾರಕರಿಗೆ ಪೂರೈಸುತ್ತಾರೆ. ಇದರೊಂದಿಗೆ ದೇಶದ ನಾನಾ ಭಾಗಗಳಲ್ಲಿ ಈ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳು, ಸರಕಾರದ ಮತ್ತು ಸರಕಾರದ ಹತೋಟಿಯಲ್ಲಿರುವ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಎರಡೂ ರೀತಿಯ ಮಾರಾಟ ವ್ಯವಸ್ಥೆಯಲ್ಲಿ ಅಸಂಘಟಿತ ವಲಯದ ಪ್ರಾಬಲ್ಯ ಅಧಿಕವಾಗಿದೆ.

ಅಸಂಘಟಿತ ವ್ಯವಸ್ಥೆಯಲ್ಲಿ ಗಿಡಮೂಲಿಕೆಗಳನ್ನು ಗ್ರಾಮೀಣ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಮಕ್ಕಳು ಅರಣ್ಯ ಪ್ರದೇಶಗಳಿಂದ ಸಂಗ್ರಹಿಸುತ್ತಾರೆ. ಇದರೊಂದಿಗೆ ಸ್ಥಳೀಯ ವರ್ತಕರು ಅವರದ್ದೇ ಆದ ಜಾಲವನ್ನು ಹೊಂದಿಕೊಂಡು ಸಂಗ್ರಹವಾದ ಮೂಲಿಕೆಗಳನ್ನು ವಾರದ ಸಂತೆಗಳು ಇಲ್ಲವೇ ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಇಲ್ಲಿ ಸಂಗ್ರವಾದ ಉತ್ಪನ್ನಗಳು ಬಳಿಕ ಸ್ಥಳೀಯ ಇಲ್ಲವೇ ಪ್ರಾದೇಶಿಕ ಸಗಟು ವ್ಯಾಪಾರಸ್ಥರತ್ತ ಚಲಿಸಿ ಅಲ್ಲಿಂದ ಪಟ್ಟಣಗಳತ್ತ ಹೋಗುತ್ತವೆ. ಈ ರೀತಿಯ ಮಾರಾಟ ಕೊಂಡಿಯಲ್ಲಿ ಅಧಿಕ ಸಂಖ್ಯೆಯ ಸಂಗ್ರಹಕಾರರು, ಸಂಸ್ಕರಣಾಕಾರರು, ವ್ಯಾಪಾರಸ್ಥರು, ದಲ್ಲಾಳಿಗಳು, ಮಧ್ಯವರ್ತಿಗಳು ಮತ್ತು ವ್ಯವಹಾರಸ್ಥರಿರುತ್ತಾರೆ. ಭಾರತದಲ್ಲಿ ಈ ರೀತಿಯ ಮಾರಾಟ ಜಾಲವಿರುವುದರಿಂದ ಗಿಡ ಮೂಲಿಕೆಗಳ ಒಟ್ಟು ಮಾರಾಟ         ಎಷ್ಟಾಗುತ್ತಿದೆಯೆಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ.

ಕೇರಳ ರಾಜ್ಯದಲ್ಲಿ ಔಷಧೀಯ ಸಸ್ಯಗಳ ಮಾರಾಟ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಇದೊಂದು ವ್ಯವಸ್ಥಿತ ಮಾರಾಟ ಜಾಲವಾಗಿದೆ. ಕೇರಳ ರಾಜ್ಯ ಸಂಸ್ಥಾನ ಹಿಂದುಳಿ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಹಕಾರಿ ನಿಯಮಿತವು ತಿರುವನಂತಪುರ, ಅಡಿಮಲಿ, ತ್ರಿಶೂರು ಮತ್ತು ಕಲ್ಲಪೆಟ್ಟ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಈ ಶಾಖೆಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ೩೪ ಸಹಕಾರಿ ಸಂಘಗಳಿಂದ ಔಷಧೀಯ ಸಸ್ಯಗಳನ್ನು ಖರೀದಿಸುತ್ತಿದೆ. ಈ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ ಅರಣ್ಯ ಸಮಿತಿಯು ಬೇರೆ ಬೇರೆ ಅರಣ್ಯ ಪ್ರದೇಶಗಳನ್ನು ಬುಡಕಟ್ಟು ಸಂಸ್ಥೆಗಳಿಗೆ ಅರಣ್ಯಗಳಲ್ಲಿರುವ ಸಸ್ಯಗಳ ಸಂಗ್ರಹಣೆಗೆ ನಿಗದಿಪಡಿಸುತ್ತದೆ. ಸಂಗ್ರಹಕಾರರಿಗೆ ಅನುಕೂಲವನ್ನು ಕಲ್ಪಿಸುವ ಉದ್ದೇಶದಿಂದ ಈ ಸಹಕಾರಿ ಸಂಸ್ಥೆಗಳು ಅರಣ್ಯ ಪ್ರದೇಶಗಳಲ್ಲಿ ಸಂಗ್ರಹಣಾ ಶಾಖೆಗಳನ್ನು ತೆರೆಯುತ್ತವೆ. ಈ ಶಾಖೆಗಳನ್ನು ಬುಡಕಟ್ಟು ಜನಾಂಗಕ್ಕೆ ಸೇರಿದ ಮುಖ್ಯ ನಿರ್ವಾಹಕರು ನಿರ್ವಹಿಸುತ್ತಾರೆ. ಅಧಿಕ ಪ್ರಮಾಣದ ಸಂಗ್ರಹಣೆಯಾದಾಗ ಈ ಶಾಖೆಗಳು ಸಂಸ್ಥಾನಕ್ಕೆ ಮಾಹಿತಿಯೊದಗಿಸಿ ಹರಾಜು ವ್ಯವಸ್ಥಾಯನ್ನು ಮಾಡುತ್ತದೆ. ಈ ಸಂಸ್ಥಾನವು ಗಿಡಮೂಲಿಕಾ ವ್ಯವಹಾರಸ್ಥರನ್ನು ಆಹ್ವಾನಿಸಿ ವ್ಯವಹಾರವನ್ನು ಕುದುರಿಸಿಕೊಳ್ಳುತ್ತದೆ. ಹೀಗಿದ್ದರೂ ಹಣಕಾಸಿನ ತೊಂದರೆ, ಶೇಖರಣಾ ವ್ಯವಸ್ಥೆಯ ಕೊರತೆ ಇತ್ಯಾದಿ ಸಮಸ್ಯೆಗಳಿಂದಾಗಿ ಸಂಸ್ಥಾನಕ್ಕೆ ಕೇವಲ ಶೇಕಡಾ ೩೦ ರಷ್ಟು ಗಿಡಮೂಲಿಕೆಗಳ ಮಾರಾಟ ಸಾಧ್ಯವಾಗುತ್ತಿದೆ, ಉಳಿದ ಶೇಕಡಾ ೭೦ನ್ನು ಖಾಸಗಿ ವರ್ತಕರು ನಡೆಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ ಖಾಸಗಿ ವರ್ತಕರು ಬುಡಕಟ್ಟು ಜನಾಂಗದ ಸಂಗ್ರಹಕಾರರಿಗೆ ಹಣಕಾಸಿನ ನೆರವು, ಆಹಾರ, ಬಟ್ಟೆ ಇತ್ಯಾದಿಗಳನ್ನು ಕೊಟ್ಟು ಅವರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ಖಾಸಗಿ ವರ್ತಕರಿಂದ ಪಡೆದ ಹಣಕಾಸಿನ ಸಾಲದಿಂದಾಗಿ ಶಾಶ್ವತವಾಗಿ ಅವರ ವರ್ತುಲಕ್ಕೆ ಬಿದ್ದು ಬಿಡುತ್ತಾರೆ .

ಈ ಎರಡೂ ರೀತಿಯ ಮಾರಾಟ ವ್ಯವಸ್ಥೆಯೊಂದಿಗೆ ಕೇರಳದ ಕೊಟ್ಟೂರಿನಲ್ಲಿ ಖಾಸಗಿ ಸಂಗ್ರಹಕಾರರು ಗಿಡಮೂಲಿಕೆಗಳನ್ನು ಪ್ರತ ಈ ಬುಧವಾರ ಮತ್ತು ಶನಿವಾರ ಈ ಪ್ರದೇಶಗಳಲ್ಲಾಗುವ ಹರಾಜು ವ್ಯವಸ್ಥೆಯಲ್ಲಿ ಬುಡಕಟ್ಟು ಸಂಗ್ರಹಕಾರರಿಂದ ಪಡೆದುಕೊಳ್ಳುತ್ತಾರೆ. ಈ ಹರಾಜು ಪದ್ಧತಿಯ ಹತೋಟಿ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿರುವತ್ತದೆ. ಆದರೆ ಈ ವ್ಯವಸ್ಥೆಗೆ ಸರಕಾರದ ಪರವಾನಗಿ ಇಲ್ಲದಿದ್ದರೂ ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಗಿಡಮೂಲಿಕೆಗಳಿಗಿರುವ ಒಟ್ಟು ಬೇಡಿಕೆಯಷ್ಟು ಎಂಬುದನ್ನು ಔಷಧ ತಯಾರಕರ ವ್ಯವಹಾರದಿಂದ ಅರಿತು ಕೊಳ್ಳಬಹುದಾಗಿದ್ದರೂ, ಇದರ ಬಗ್ಗೆ ಮಾಹಿತಿ ನೀಡಲು ಇವರು ಹಿಂಜರಿಯುತ್ತಿದ್ದಾರೆ. ಇದರೊಂದಿಗೆ ಔಷಧೀಯ ಸಸ್ಯಗಳ ಮೂಲದ ವಿವಿಧ ಉತ್ಪನ್ನಗಳೊ ರಫ್ತಿನಿಂದ ದೊರಕಬಲ್ಲ ಆದಾಯದ ಬಗ್ಗೆ ಸರಕಾರದ ವಿವಿಧ ವಿಭಾಗಗಳಿಂದ ಅಂಕಿ-ಅಂಶಗಳು ದೊರಕುತ್ತಿದ್ದು, ಇವುಗಳ ಪ್ರಕಾರ ಭಾರತವು ವಾರ್ಷಿಕವಾಗಿ ಸುಮಾರು ೫೫೦ ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಯವನ್ನು ಗಳಿಸಿಕೊಳ್ಳುತ್ತಿದೆ.

ಮಾರುಕಟ್ಟೆ ಸಂಬಂಧಿ ಸಮಸ್ಯೆಗಳು

೧) ಸ್ಥಳೀಯವಾಗಿ ವಿವಿಧ ರೀತಿಯ ಔಷಧೀಯ ಸಸ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಲಭ್ಯವಿಲ್ಲದಿರುವುದು.

೨) ವಿವಿಧ ರೀತಿಯ ಔಷಧೀಯ ಸಸ್ಯಗಳಿಗಿರುವ ಅಧಿಕೃತ ಬೆಲೆ ಪಟ್ಟಿಯ ಅಭಾವ ಮತ್ತು ಲಭಿಸಬೇಕಿರುವ ಬೆಲೆಯ ಬಗ್ಗೆ ಮಾಹಿತಿಯ ಕೊರತೆ.

೩) ಸಂಸ್ಕರಣೆಯ ಬಗ್ಗೆ ತರಬೇತಿನ ಅಭಾವ.

೪) ವಿವಿಧ ರೀತಿಯ ಸಸ್ಯಗಳಿಗಿರುವ ಬೇಡಿಕೆಯೆಷ್ಟು, ಯಾವ ಗುಣಮಟ್ಟದಲ್ಲಿ ಯಾವಾಗ ಎಲ್ಲಿಗೆ ಪೂರೈಸಬೇಕು ಎಂಬಿತ್ಯಾದಿ ಮಾಹಿತಿಯಿಲ್ಲದಿರುವುದು.

೫) ಭವಿಷ್ಯದ ಮಾರುಕಟ್ಟೆಯ ಬಗ್ಗೆ ವ್ಯವಸ್ಥಿತ ಸಂಸ್ಥೆಗಳಿಂದ ಮತ್ತು ಸರಕಾರಗಳಿಂದ ಮಾಹಿತಿ ಕೊರತೆ.

೬) ಅಂತರಾಷ್ಟ್ರೀಯ ಮಾರುಕಟ್ಟೆ, ರಫ್ತಗಿರುವ ಅವಕಾಶ, ರಫ್ತು ಮಾಡಲು ಅಗತ್ಯವಿರುವ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಯಾವುದೇ ಕಲ್ಪನೆಯಿಲ್ಲದಿರುವುದು.

ಔಷಧೀಯ ಸಸ್ಯಗಳ ಕೃಷಿಗಿರುವ ಭವಿಷ್ಯ

ಗಿಡಮೂಲಿಕೆಯನ್ನಾದರಿಸಿದ ಔಷಧೀಯ ಪದ್ಧತಿಗೆ ನಮ್ಮಲ್ಲಿ ಅನಾದಿಕಾಲದಿಂದಲೂ ಪ್ರಮುಖ ಪಾತ್ರವಿದೆ. ಆರೋಗ್ಯವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ. ಆರೋಗ್ಯದ ರಕ್ಷಣೆಗೆ ಅಲ್ಪ ವೆಚ್ಚದಲ್ಲಿ ಔಷಧಿಗಳು ಲಭ್ಯವಾಗಿರಬೇಕಾಗಿರುವುದು ಇಂದಿನ ಅಗತ್ಯಗಳಲ್ಲೊಂದು. ಜಗತ್ತಿನಾದ್ಯಂತ ವಿವಿಧ ರೀತಿಯ ಆಧುನಿಕ ರೋಗಗಳು ಕಂಡು ಬರುತ್ತಿದ್ದು, ಇದರೊಂದಿಗೆ ಸಾಂಪ್ರದಾಯಿಕ ರೋಗಗಳೂ ಉಲ್ಬಣಗೊಳ್ಳುತ್ತಿವೆ. ಈ ರೋಗಗಳ ಶಮನಕ್ಕಾಗಿ ವಿವಿಧ ರೀತಿಯ ಪ್ರಯತ್ನಗಳು ಸಾಗುತ್ತಿವೆ. ಇನ್ನೊಂದೆಡೆಯಲ್ಲಿ ಆಧುನಿಕ ಚಿಕಿತ್ಸಾ ವಿಧಾನದಲ್ಲಿ ದೊರಕುವ ಪರಿಹಾರಗಳು ಒಂದಲ್ಲ ಒಂದು ರೀತಿಯ ಉಪರೋಗಗಳಿಗೆ ದಾರಿ ಮಾಡಿಕೊಡುತ್ತಿದ್ದು, ಇದರಿಂದಾಗಿ ವಿಶ್ವದಾದ್ಯಂತ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈಗಾಗಲೇ ಪ್ರಾಚೀನ ಕಾಲದ ವೈದ್ಯಪದ್ಧತಿಗೆ ಪ್ರಾಶಸ್ತ್ಯ ದೊರಕಲಾರಂಭಿಸಿದ್ದು, ಇದೇ ಪ್ರವೃತ್ತಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೂ ಕಂಡು ಬರುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಔಷಧೀಯ ಸಸ್ಯಗಳ ಕೃಷಿಗೆ ನಮ್ಮಲ್ಲಿ ಉತ್ತಮ ಅವಕಾಶವಿದೆಯೆನ್ನಬಹುದು. ಇದರೊಂದಿಗೆ ಕೆಳ ಕಾಣಿಸಿದ ವಿಚಾರಗಳಿಂದ ಇವುಗಳಿಗೆ ಇರುವ ಭವಿಷ್ಯವನ್ನು ಅರಿತುಕೊಳ್ಳಬಹುದು.

೧) ಸಸ್ಯಮೂಲದ ಉತ್ಪನ್ನಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬೇಡಿಕೆಯು ವಾರ್ಷಿಕವಾಗಿ ಶೇಕಡಾ ೧೦ ರಿಂದ ೧೫ ರಷ್ಟು ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ.

೨) ಭಾರತದಲ್ಲಿರುವ ವಿವಿಧ ರೀತಿಯ ಹವಾಗುಣ ಮತ್ತು ಮಣ್ಣು ಗಿಡ ಮೂಲಿಕೆಗಳ ಕೃಷಿಗೆ ಸೂಕ್ತವಾಗಿರುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ.

೩) ಪ್ರಕೃತ ವಿಶ್ವದಲ್ಲಿ ಬಳಕೆದಾರರ ರುಚಿಗನುಗುಣವಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಹಿಂದೂಸ್ಥಾನ್‌ ಲಿವರ್, ಔಷಧಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಸಿಪ್ಲ ಸಂಸ್ಥೆ , ಇವುಗಳಿಂದು ಸಸ್ಯಗಳನ್ನಾಧರಿಸಿದ ಔಷಧಗಳ ತಯಾರಿಗೆ ಹೊರಟಿದ್ದು, ಇವುಗಳಿಗಿರುವ ಅಂತರಾಷ್ಟ್ರೀಯ ಮಾನ್ಯತೆ ಗಿಡಮೂಲಿಕೆಗಳಿಗೆ ಹೆಚ್ಚಿನ ಬೇಡಿಕೆಯನ್ನು ತರಿಸಬಹುದು.

೪) ವಿಶ್ವ ಆರೋಗ್ಯ ಸಂಘಟನೆ ಸಾಂಪ್ರದಾಯಿಕ ಔಷಧ ಪದ್ಧತಿಗೆ ಕಳೆದ ೨೫ ವರ್ಷಗಳಿಂದ ಒತ್ತು ನೀಡುತ್ತಿದ್ದು, ಇದಕ್ಕನುಗುಣವಾಗಿ ಪ್ರೋತ್ಸಾಹನೀಡುತ್ತಿರುವುದರಿಂದ ಇಲ್ಲಿ ಉತ್ತಮ ಭವಿಷ್ಯವಿದೆಯೆನ್ನಬಹುದು.

೫) ಸ್ವಾಭಾವಿಕ, ಪರಿಸರ ಪ್ರೇಮಿ, ಸಸ್ಯಮೂಲಗಳ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ.

೬) ಬಹುಬೇಡಿಕೆಯುಳ್ಳ ಔಷಧೀಯ ಸಸ್ಯಗಳು ನಾಶವಾಗುತ್ತಿರುವುದು.

೭) ಆಧುನಿಕ ವೈದ್ಯ ಪದ್ಧತಿಯಲ್ಲಿ ಉತ್ಪಾದನೆಯಾಗುತ್ತಿರುವ ಔಷಧಗಳಲ್ಲಿ ಗಿಡಮೂಲಿಕೆಗಳ ಸಾರ ಅಧಿಕಗೊಳ್ಳುತ್ತಿರುವುದು.

೮) ಸೌಂಧರ್ಯವರ್ಧಕ, ಪ್ರಸಾದನ ಮುಂತಾದ ಉತ್ಪನ್ನಗಳ ತಯಾರಿಯಲ್ಲಿ ಗಿಡಮೂಲಿಕೆಗಳ ಪ್ರಮಾಣ ಹೆಚ್ಚುತ್ತಿರುವುದು, ಅಲ್ಲದೆ ಈ ಬಗ್ಗೆ ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು.

೯) ಆಧುನಿಕ ಜಗತ್ತಿನಲ್ಲಿ ವಿವಿಧ ರೀತಿಯ ಮೂಲಿಕಾ ಪ್ರಸಾದನಗಳಿಗೆ ಹೆಚ್ಚುತ್ತಿರುವ ಬೇಡಿಕೆ.

೧೦) ವಿಶ್ವದಲ್ಲಿ ಆಯುರ್ವೇದ ಮತ್ತು ಸಿದ್ಧ ಪದ್ಧತಿಯ ಔಷಧಗಳಿಗೆ ಏರುತ್ತಿರುವ ಬೇಡಿಕೆ.

೧೧) ಇತ್ತೀಚಿನ ವರ್ಷಗಳಲ್ಲಿ ಕೋಟಕ್ಕಲ್‌ ಆರ್ಯ ವೈದ್ಯಶಾಲಾ, ನಾಗರ್ಜುನ ಆಯುರ್ವೇದ ಸಮೂಹಗಳು ಅರಬ್ಬ್‌ ರಾಷ್ಟ್ರಗಳು, ಹಂಗೇರಿ ಮುಂತಾದೆಡೆಗಳಲ್ಲಿ ಗಿಡಮೂಲಿಕೆ ಆಧಾರಿತ ಔಷಧಗಳ ಮಾರಾಟಕ್ಕಿಳಿದಿದ್ದು, ಇದೇ ರೀತಿಯ ವ್ಯವಸ್ಥೆಗೆ ದೇಶದ ನಾನಾ ರಾಜ್ಯಗಳ ಸಂಸ್ಥೆಗಳೂ ಹೊರಟಿದ್ದು, ಇವು ಭಾರತದ ರಫ್ತಿನ ಪ್ರಮಾಣವನ್ನೇರಿಸಬಲ್ಲವು.

ಈ ಎಲ್ಲಾ ಅಂಶಗಳ ಆಧಾರದಲ್ಲಿ ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ನಮ್ಮಲ್ಲಿ ಯೋಗ್ಯ ಪರಿಸರ ನಿರ್ಮಾಣವಾಗಿದೆಯೆನ್ನಬಹುದು. ಇದರ ಪರಿಪೂರ್ಣ ಪ್ರಯೋಜನವನ್ನು ಪಡೆಯಲು ನಮ್ಮ ಸರಕಾರಗಳು, ಸರಕಾರದ ಅಂಗ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಸಹಕಾರಿಗಳು, ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳು, ಕೃಷಿಕರು ಮತ್ತು ವ್ಯಾಪಾರಸ್ಥರು ಶ್ರಮಿಸಬೇಕು. ಪ್ರಕೃತ ಇಲ್ಲಿರುವ ಕುಂದು ಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ನೀಗಿಸಲು ಸರಕಾರಗಳು ಶ್ರಮಿಸಿ, ಕೃಷಿಕರಿಗೆ ಪ್ರೋತ್ಸಾಯಹವನ್ನೀಯಬೇಕು. ಹೀಗಾದಲ್ಲಿ ದೇಶದ ಪ್ರಜೆಗಳ ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತು ದೇಶ ಅಭಿವೃದ್ಧಿಯನ್ನು ಸಾಧಿಸಬಹುದು. ಇದರೊಂದಿಗೆ ನೆಮ್ಮದಿಯ ಜೀವನಕ್ಕೆ ಅಗತ್ಯವಿರುವ ಆರೋಗ್ಯ ಎಲ್ಲಾ ಜೀವಿಗಳಿಗೆ ದೊರಕಬಹುದು.

ಗೋಡಂಬಿ

ಗೋಡಂಬಿಯ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತು ಈ ಎಲ್ಲಾ ವಿಚಾರಗಳಲ್ಲಿ ಭಾರತಕ್ಕೆ ವಿಶ್ವದಲ್ಲಿ ಪ್ರಮುಖ ಸ್ಥಾನವಿದೆ. ದೇಶದ ಅಭಿವೃದ್ಧಿಗೆ ಅತ್ಯಗತ್ಯವಿರುವ ವಿದೇಶಿ ವಿನಿಮಯವನ್ನು ದೊರಕಿಸಿಕೊಡುವಲ್ಲಿ ಗೋಡಂಬಿಗೆ ವಿಶಿಷ್ಟ ಸ್ಥಾನವಿದೆ. ಕೃಷಿಯುತ್ಪನ್ನಗಳ ರಫ್ತಿನಿಂದ ದೇಶವಿಂದು ಗಳಿಸಿಕೊಳ್ಳುತ್ತಿರುವ ವಿದೇಶಿ ವಿನಿಮಯದಲ್ಲಿ ಇದಕ್ಕೆ ಮೂರನೇ ಸ್ಥಾನ ಲಭ್ಯ. ೧೯೭೦ರ ತನಕ ಭಾರತವು ವಿಶ್ವ ಗೋಡಂಬಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹೊಂದಿತ್ತು. ಆದರೆ ಆ ಬಳಿಕ  ಬ್ರೆಜಿಲ್‌, ವಿಯೆಟ್ನಾಂ, ದಕ್ಷಿಣ ಆಫ್ರಿಕಾದ ರಾಷ್ಟ್ರಗಳು ಭಾರತಕ್ಕೆ ಪ್ರಬಲ ಪೈಪೋಟಿ ನೀಡಲಾರಂಭಿಸಿದವು. ಪ್ರಕೃತ ಗೋಡಂಬಿ ಉತ್ಪಾದನೆಯ ದೃಷ್ಟಿಯಲ್ಲಿ ಭಾರತದ ಪಾಲು ಶೇ. ೧೧, ಆಫ್ರಿಕಾದ ರಾಷ್ಟ್ರಗಳು ಶೇ.೧೫, ಇಂಡೋನೇಶಿಯಾ ಶೇ.೩ ಮತ್ತಿತರ ರಾಷ್ಟ್ರಗಳ ಪಾಲು ಶೇ. ೧೦ ರಷ್ಟಾಗಿದೆ.

ಆಂತರಿಕವಾಗಿ ಗೋಡಂಬಿಯ ಕೃಷಿಯನ್ನಿಂದು ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಒರಿಸ್ಸಾ, ಗೋವಾ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮುಖ್ಯವಾಗಿ ಕೈಗೊಳ್ಳಲಾಗುತ್ತಿದ್ದು, ಈ ಕೃಷಿಯ ಒಟ್ಟಾರೆ ವಿಸ್ತೀರ್ಣ ಸುಮಾರು ೦.೭೭ ಮಿಲಿಯ ಹೆಕ್ಟೇರ್ ಗಳಾಗಿದ್ದು, ಉತ್ಪಾದನೆ ಸುಮಾರು ೦.೫೦ ಮಿಲಿಯ ಮೆಟ್ರಿಕ್‌ ಟನ್‌ಗಳಾಗಿವೆ. ಈ ಉತ್ಪಾದನೆಯ ಶೇ. ೬೫ ರಷ್ಟು ರಫ್ತಿಗೆ ಮೀಸಲಾಗಿದೆ.

ಭಾರತವಿಂದು ಗೋಡಂಬಿಯನ್ನು ಸುಮಾರು ೬೦ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದು, ಇವುಗಳ ಪೈಕಿ ಅಮೆರಿಕದ ಪಾಲು ಒಟ್ಟು ರಫ್ತಿನ ಶೇ. ೩೭, ನೆದರ್ ಲ್ಯಾಂಡ್‌ ಶೇ. ೨೪, ಜಪಾನ್‌ ಶೇ. ೮, ಇಂಗ್ಲೆಂಡ್‌ ಶೇ.೬., ಆಸ್ಟ್ರೇಲಿಯಾ ಶೇ. ೪, ಅರಬ್‌ ರಾಷ್ಟ್ರಗಳು ಶೇ. ೩ ರಷ್ಟಾಗಿದೆ. ಒಟ್ಟಾರೆಯಾಗಿ ಗೋಡಂಬಿಯನ್ನು ಹೆಚ್ಚಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಳಸುತ್ತಿದ್ದು, ಈ ನಿಟ್ಟಿನಲ್ಲಿ ಗೋಡಂಬಿಯನ್ನಿಂದು “ಬಡವರು ಬೆಳೆಸುವ, ಶ್ರೀಮಂತರು ಬಳಸುವ” ಬೆಳೆಯೆಂದೇ ಪರಿಗಣಿಸಲಾಗುತ್ತಿದೆ. ಹೀಗಿದ್ದರೂ ಈ ಉತ್ಪನ್ನವು ಬಡರಾಷ್ಟ್ರಗಳಿಗೆ ಅತ್ಯಗತ್ಯದ ವಿದೇಶಿ ವಿನಿಮಯವನ್ನು ಒದಗಿಸಿಕೊಡುತ್ತಿರುವುದು ಇಲ್ಲಿ ಉಲ್ಲೇಖನೀಯ.

ಗೋಡಂಬಿಯನ್ನಿಂದು ಶ್ರೀಮಂತ ರಾಷ್ಟ್ರಗಳು ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ಬಳಸುತ್ತಿದ್ದು, ಇದರಿಂದಾಗಿ ಈ ರಾಷ್ಟ್ರಗಳು ಇದಕ್ಕೆ ಹೆಚ್ಚಿನ ಬೇಡಿಕೆಯನ್ನು ಸಲ್ಲಿಸುತ್ತಿವೆದ. ಆದರೆ ಇದೀಗ ಗೋಡಂಬಿಯ ಮೇಲೊಂದು ವಕ್ರದೃಷ್ಟಿ ಬಿದ್ದಿದ್ದು, ಇದು ಮುಂದಿನ ದಿನಗಳಲ್ಲಿ ಈ ಉದ್ದಿಮೆಯ ಮೇಲೆ ಪರಿಣಾಮಕಾರಿ ಹೊಡೆತವನ್ನೀಯಬಹುದೆಂಬ ಸಂದೇಹ ಎದ್ದು ಕಾಣುತ್ತಿದೆ.

ಗೋಡಂಬಿಯ ಮೇಲೋಂದು ವಕ್ರದೃಷ್ಟಿ

ಅಮೆರಿಕ ಮತ್ತಿತರ ಶ್ರೀಮಂತ ರಾಷ್ಟ್ರಗಳು ನಾನಾ ರೀತಿಯ ಬೀಜಗಳನ್ನು ಹೃದಯ ಸ್ತಂಭನವನ್ನು ಕಡಿಮೆಗೊಳಿಸಲು ಸಹಾಯಕಾರಿಯೆಂಬ ದೃಷ್ಟಿಯಿಂದ ಬಳಸುತ್ತಿದ್ದು, ಈ ನಿಟ್ಟಿನಲ್ಲಿ ಈ ರಾಷ್ಟ್ರಗಳು ಅವಲ್ಲಿ ಅಡಗಿರುವ ಕೊಬ್ಬು, ಕೊಲಸ್ಟ್ರಾಲ್‌, ಸಂಸ್ಕೃರಿಸಲ್ಪಟ್ಟ ಕೊಬ್ಬು ಇತ್ಯಾದಿಗಳನ್ನು ಲೆಕ್ಕ ಹಾಕಿ ಬಳಕೆಗೆ ಶಿಫಾರಸು ಮಾಡುತ್ತವೆ. ಈ ಶಿಫಾರಸನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗವು ಮಾಡುತ್ತಿದ್ದು, ಈ ವಿಭಾಗವು  ಬಳಕೆಗಾಗಿರುವ ವಿವಿಧ ಬೀಜಗಳನ್ನು ಪಟ್ಟಿಮಾಡಿ ಅವುಗಳು ಮಾರಾಟಕ್ಕೆ ಲಭ್ಯವಾದಾಗ ಪ್ಯಾಕೇಟ್‌ಗಳಲ್ಲಿ ಅವುಗಳಲ್ಲಿ ಅಡಗಿರುವ ವಿವಿಧ ಆರೋಗ್ಯಕರ ಅಂಶಗಳನ್ನು ಹೆಸರಿಸಲು ಆದೇಶ ನೀಡುತ್ತಿದೆ.

ಇದೀಗ ಈ ವಿಭಾಗವು ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗೋಡಂಬಿಯನ್ನು ಈ ಪಟ್ಟಿಗೆ ಅರ್ಹವಲ್ಲವೆಂದು ಹೆಸರಿಸಿದೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಡಗಿರುವ ತುಂಬು ಪ್ರಮಾಣದ ಕೊಬ್ಬು, ನಿಗದಿಪಡಿಸಿದ  ಕೊಬ್ಬಿಗಿಂತ ಹೆಚ್ಚಾಗಿರುವುದು. ಆದರೆ ಈ ತನಕ ಈ ಬಗ್ಗೆ ಚಕಾರವೆತ್ತದ ಈ ವಿಭಾಗ ಇದೀಗ ಈ ವಕ್ರದೃಷ್ಟಿಯನ್ನು ಹರಿಸಲು ಮುಖ್ಯ ಕಾರಣ ಅಂತಾರಾಷ್ಟ್ರೀಯ ಮರಗಳ ಬೀಜಗಳ ಪೌಷ್ಟಿಕಾಂಶಗಳ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರವು ಸಲ್ಲಿಸಿದ ಅರ್ಜಿಯಾಗಿದೆ. ಇದರ ಪ್ರಕಾರ ಸಾಮಾನ್ಯವಾಗಿ ಬಳಕೆಗಾಗಿ ಬಿಡುಗಡೆ ಮಾಡುವ ೫೦ ಗ್ರಾಂ ಆಹಾರ ಪದಾರ್ಥದಲ್ಲಿ ಇರಬೇಕಾದ ಶೆ. ೧೩ ಗ್ರಾಂ ಕೊಬ್ಬು, ೪ಗ್ರಾಂ ತುಂಬು ಪ್ರಮಾಣದ ಕೊಬ್ಬು, ೬೦ಮಿ. ಗ್ರಾಂ ಕೊಲೆಸ್ಟ್ರಾಲ್‌ ಅಥವಾ ೪೮೦ ಮಿ.ಗ್ರಾಂ ಸೋಡಿಯಂಗಳಿರಬೇಕು. ಈ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಅಂಶಗಳಿದ್ದ ಆಹಾರ ಪದಾರ್ಥವು ಪಟ್ಟಿಯಿಂದ ಅರ್ಹತೆಯನ್ನು ಕಳಕೊಳ್ಳುವುದು. ಇದರ ಪ್ರಕಾರ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗವು ಗೋಡಂಬಿಯನ್ನಿಂದು ಇದರಲ್ಲಿರುವ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಕೊಬ್ಬಿದೆಯೆಂದು ಹೆಸರಿಸಿ ತಾನು ಹೊರ ಹಾಕಿರುವ ಆರೋಗ್ಯಕ್ಕೆ ಪೂರಕವಾದ, ಹೃದಯ ಸ್ತಂಭನವನ್ನು ಕಡಿಮೆಗೊಳಿಸಲ್ಪಡುವ ಪಟ್ಟಿಯಿಂದ ಕೈಬಿಟ್ಟಿದೆ.

ವಕ್ರದೃಷ್ಟಿಗೆ ಮೂಲ ಕಾರಣ

ಅಂತಾರಾಷ್ಟ್ರೀಯ ಪೌಷ್ಠಿಕಾಂಶ ವಿಭಾಗವು ಈ ಮೊದಲು ಅಮೆರಿಕದ ಆಹಾರ ಆಡಳಿತ ವಿಭಾಗಕ್ಕೆ ಸಲ್ಲಿಸಿದ ಅರ್ಜಿ ಪ್ರಕಾರ ದಿನವೊಂದರ ಒಂದು ಔನ್ಸ್‌ ಬಳಕೆಯಾಗುವ ಬೀಜಗಳಲ್ಲಡಗಿರುವ ಕೊಬ್ಬು, ಕೊಲೆಸ್ಟ್ರಾಲ್‌ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಹೃದಯ ಸ್ತಂಭನವನ್ನು ಕಡಿಮೆ ಗೊಳಿಸುವ ಸಾಮರ್ಥ್ಯವುಳ್ಳ ಬೀಜಗಳ ಪಟ್ಟಿಯನ್ನು ಅಮೆರಿಕದ ಆಡಳಿತ ವಿಭಾಗವು ತಯಾರಿಸಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಆಡಳಿತ ವಿಭಾಗವು ಈ ಕೋರಿಕೆಯನ್ನು ತಿರುಚಿ ದಿನವೊಂದರ ಒಂದೂವರೆ ಔನ್ಸ್‌ ಬೀಜ ಬಳಕೆಯೆಂಬ ಲೆಕ್ಕಕ್ಕಿಳಿದು ಗೋಡಂಬಿಯ ಮೇಲೆ ವಕ್ರದೃಷ್ಟಿ ಬೀರಿತು. ಆದರೆ ಈ ರೀತಿಯದ್ದಾದ ಲೆಕ್ಕಾಚಾರಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗ ಯಾಕಾಗಿ ಹೊರಟಿತು ಎಂಬುದಿನ್ನೂ ನಿಗೂಢ.

ಗೋಡಂಬಿಯ ಮೇಲೆ ಇದೀಗ ಬಿದ್ದಿರುವ ವಕ್ರದೃಷ್ಟಿ ಭಾರತದ ಗೋಡಂಬಿ ಉದ್ಯಮದ ಮೇಲೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ನಮ್ಮ ಗೋಡಂಬಿ ರಫ್ತು ನಿಗಮ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗದೆದುರು ಅರ್ಜಿಯನ್ನು ಸಲ್ಲಿಸಲು ತಯಾರಾಗಿದೆ. ಈ ಪ್ರಯತ್ನಕ್ಕೆ ನಮ್ಮ ಗೋಡಂಬಿ ಉದ್ದಿಮೆದಾರರ ಸಹಾಯಹಸ್ತವಿದ್ದಲ್ಲಿ ಈಗಿರುವ ವಕ್ರದೃಷ್ಟಿ ತಪ್ಪಿಸಬಹುದು.

ಭಾರತದ ಗೋಡಂಬಿ ಉದ್ದಿಮೆ ಈಗಾಗಲೇ ಬೆಲೆ ಕುಸಿತ, ವಿಯೆಟ್ನಾಂನಂತಹ ರಾಷ್ಟ್ರದ ಪೈಪೋಟಿ, ಕಚ್ಛಾ ಗೋಡಂಬಿಯ ಆಮದಿಗಿರುವ ತೊಡಕು ಇತ್ಯಾದಿ ಸಮಸ್ಯೆಗಳನ್ನೆದುರಿಸುತ್ತಿದ್ದು, ಇದೀಗ ಬಿದ್ದಿರುವ ವಕ್ರದೃಷ್ಟಿ ಈ ಸಮಸ್ಯೆಗಳಿಗೆ ಇನ್ನಷ್ಟು ತುಪ್ಪವನ್ನು ಸುರಿದು ರಫ್ತಿನ ಮೇಲೆ ಪ್ರಬಲ ಹೊಡೆತಗಳನ್ನೀಯಬಹುದು. ಈ ನಿಟ್ಟಿನಲ್ಲಿ ನಮ್ಮ ಸರಕಾರಗಳು ತಕ್ಷಣ ಕಾರ್ಯಕ್ಕಿಳಿಯುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.

ಹಣ್ಣುಮತ್ತುತರಕಾರಿಗಳಿಗಿರುವಮಾರುಕಟ್ಟೆ

ಹಸಿರುಕ್ರಾಂತಿಯ ಪರಿಣಾಮವಾಗಿ ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲೂ ಭಾರತ ಗಣನೀಯ ಪ್ರಗತಿ ಸಾಧಿಸುತ್ತಲಿದೆ. ನಮ್ಮಲ್ಲಿಂದು ನಾನಾ ರೀತಿಯ ೬೦ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಇವುಗಳೊಂದಿಗೆ ದೇಶವು ವಿವಿಧ ರೀತಿಯ ಹಣ್ಣುಗಳ ಉಗಮ ಸ್ಥಾನವಾಗಿದೆ. ವಿಶ್ವದಲ್ಲಿ ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೆ ಸ್ಥಾನವಿದೆ.

ವಿಶ್ವದ ತರಕಾರಿ ಕೃಷಿ ವ್ಯವಸ್ಥೆಗೆ ಹೋಲಿಸಿದಾಗ ಭಾರತ ಹೂಕೋಸು, ಕುಂಬಳಗಳಲ್ಲಿ ಪ್ರಥಮ ಸ್ಥಾನ ಹೊಂದಿದ್ದು, ಬದನೆ, ಕ್ಯಾಬೇಜ್‌, ಈರುಳ್ಳಿಗಳಲ್ಲಿ ದ್ವಿತೀಯ, ಬೀನ್ಸ್‌ , ಕಲ್ಲಂಗಡಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅದೇ ರೀತಿ ಹಣ್ಣುಗಳ ದೃಷ್ಟಿಯಿಂದ ಮಾವಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಭಾರತದ ಪ್ರಾಕೃತಿಕ ಲಕ್ಷಣವು ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಲು ಪೂರಕವಾಗಿದ್ದು, ಇವುಗಳ ಕೃಷಿಯಿಂದ ಬಡತನ ನಿರ್ಮೂಲನೆ, ಪೌಷ್ಟಿಕಾಂಶಗಳ ಪೂರೈಕೆ, ದೇಶಕ್ಕೆ ಅಗತ್ಯವಿರುವ ವಿದೇಶಿ ವಿನಿಮಯ ಇತ್ಯಾದಿಗಳನ್ನು ಗಳಿಸಿಕೊಳ್ಳಲು ಸಾಧ್ಯವಿದ್ದರೂ ಇಲ್ಲಿಂದು ನಿರೀಕ್ಷಿತ ಬೆಳವಣಿಗೆ ಕಂಡು ಬರುತ್ತಿಲ್ಲ. ನಮ್ಮಲ್ಲಿಂದು ಉತ್ಪಾದನೆಯಾಗುತ್ತಿರುವ ಹಣ್ಣು ಮತ್ತು ತರಕಾರಿಗಳ ಒಟ್ಟು ಪ್ರಮಾಣದ ಶೇಕಡಾ ೩೦ ರಿಂದ ೩೫ ಉತ್ಪಾದಕನ ಹಂತದಲ್ಲಿಯೆ ಹಾಳಾಗಿ ಹೋಗುತ್ತಿದೆ. ಪರಿಣಾಮವಾಗಿ ಉತ್ಪಾದಕನಿಂದು ಸೋಲಿನಿಂದ ಕಂಗೆಡುತ್ತಿದ್ದಾನೆ. ಈ ರೀತಿಯ ಸ್ಥಿತಿಗೆ ಹಲವು ಕಾರಣಗಳಿದ್ದು ಇವುಗಳ ಪೈಕಿ ಯೋಗ್ಯ ಮಾರುಕಟ್ಟೆಯ ಅಭಾವವೂ ಒಂದು. ಈ ಮಾರುಕಟ್ಟೆ ಸಮಸ್ಯೆಯಲ್ಲಿ ಹತ್ತು ಹಲವು ಒಳ ಸಮಸ್ಯೆಗಳೂ ಸೇರಿವೆ. ಅವುಗಳೆಂದರೆ:

೧) ಹಣ್ಣು ಮತ್ತು ತರಕಾರಿಗಳನ್ನು ಹಾಳಾಗದಂತೆ ಉಳಿಸಿಕೊಳ್ಳಲು ಸರಿಯಾದ ತಂತ್ರಜ್ಞಾನದ ಅಭಾವ.

೨) ಇವುಗಳನ್ನು ಸರಿಯಾದ ರೀತಿಯಲ್ಲಿ ಪ್ಯಾಕ್‌ ಮಾಡಲು ಅಗತ್ಯವಿರುವ ತಂತ್ರಜ್ಞಾನದ ಕೊರತೆ.

೩) ವರ್ಗೀಕರಣ ಮಾಡುವ ಬಗ್ಗೆ ರೈತರಿಗೆ ತರಬೇತಿ ಲಭ್ಯವಿಲ್ಲದಿರುವುದು.

೪) ಶೇಖರಣೆಗೆ ಅಗತ್ಯವಿರುವ ಶೀತಲೀಕರಣ ವ್ಯವಸ್ಥೆ ಉತ್ಪಾದನಾ ಪ್ರದೇಶ ಮತ್ತು ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು.

೫) ಕೊಯ್ಲಿನ ಮೊದಲು ಮತ್ತು ಆ ಬಳಿಕ ಸೇರಿಕೊಳ್ಳುವ ಮಧ್ಯವರ್ತಿಗಳ ಹಾವಳಿ.

೬) ಸಾರಿಗೆ-ಸಂಪರ್ಕ ವ್ಯವಸ್ಥೆಯ ಕೊರತೆ.

೭) ಸಂಘಟಿತ ಮಾರುಕಟ್ಟೆ ವ್ಯವಸ್ಥೆಯ ಕೊರತೆ.

೮) ಸಂಸ್ಕರಣಾ ಘಟಕಗಳ ಅಭಾವ.

೯) ರಫ್ತಿನ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗದಿರುವುದು.

೧೦) ಹಣ್ಣು ಮತ್ತು ತರಕಾರಿಗಳ ಉತ್ಪಾದನೆ, ಮಾರುಕಟ್ಟೆ ಇತ್ಯಾದಿ ವಿಚಾರಗಳ ಬಗ್ಗೆ ಯೋಜನೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಅಗತ್ಯಕ್ಕನುಗುಣವಾಗಿ ನಮ್ಮಲ್ಲಾಗದಿರುವುದು.

೧೧) ಹಣ್ಣು ಮತ್ತು ತರಕಾರಿಗಳಿಗೆ ಬೆಲೆ ನೀತಿಯಿಲ್ಲದಿರುವುದು.

೧೨) ಇವುಗಳ ವಿಸ್ತೀರ್ಣ, ಉತ್ಪಾದನೆ, ಬೇಡಿಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ನಂಬಲರ್ಹವಾದ ಅಂಕಿ-ಅಂಶಗಳ ಕೊರತೆ.

೧೩) ಹಣಕಾಸು ಪೂರೈಕೆಯಲ್ಲಾಗುತ್ತಿರುವ ತೊಂದರೆ.

ಭವಿಷ್ಯದ ದೃಷ್ಟಿಯಿಂದ ಇಲ್ಲಾಗಬೇಕಾದ ಬದಲಾವಣೆಗಳು

ಹಣ್ಣು ಮತ್ತು ತರಕಾರಿಗಳು ನಮ್ಮ ದೇಹಕ್ಕೆ ಅತೀ ಅಗತ್ಯವಾದ ಪೌಷ್ಠಿಕಾಂಶಗಳನ್ನು ಪೂರೈಸುತ್ತಿದ್ದು, ಇವುಗಳ ಉತ್ಪಾದನೆಯು ಹೆಚ್ಚಾದಂತೆ ನಮ್ಮ ವೈಯಕ್ತಿಕ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯೂ ಸಾಧ್ಯ. ಆದರೆ ಈ ಕ್ಷೇತ್ರದಲ್ಲಿ ಇಂದಿರುವ ಮಾರುಕಟ್ಟೆ ತೀರಾ ಅಸಂಘಟಿತ ರೀತಿಯದ್ದಾಗಿದ್ದು, ಪರಿಣಾಮವಾಗಿ ಗ್ರಾಹಕ ಉತ್ಪನ್ನಕ್ಕೆ ಕೊಡುವ ಬೆಲೆಯ ಶೇಕಡಾ ೩೦ ರಿಮದ ೪೦ ಮಾತ್ರ ಉತ್ಪಾದಕನಿಗೆ ದೊರಕುತ್ತಿದೆದ. ಇದರೊಂದಿಗೆ ಬಹುಪಾಲು ಉತ್ಪನ್ನವು ಹಾಳಾಗಿ ಹೋಗುತ್ತಿದೆ. ಈ ರೀತಿಯ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ದಿನನಿತ್ಯವೂ ಹಾದು ಹೋಗುತ್ತಿದ್ದು ಇದಕ್ಕೆ ಟೊಮೊಟೊ, ಹಸಿಮೆಣಸು, ಎಲೆಕೋಸು, ಮಾವು, ಇತ್ಯಾದಿಗಳು ಉದಾಹರಣೆಗಳಾಗಿ ನಿಂತಿವೆ. ಈ ನಿಟ್ಟಿನಲ್ಲಿ ಇಲ್ಲಿಗಿಂದು ಯೋಜನಾಬದ್ಧವಾದ ಪರಿಹಾರಗಳು ಬೇಕಾಗಿವೆ.

ಪರಿಹಾರೋಪಾಯಗಳು:

೧) ಉತ್ಪನ್ನದ ಕೊಯ್ಲಿನ ಬಳಿಕ ಮಾರುಕಟ್ಟೆಗೆ ಕೊಂಡೊಯ್ಯುವಲ್ಲಿ ಯಾವ್ಯಾವ ರೀತಿಯ ತಂತ್ರಜ್ಞಾನ ಬಳಸಬೇಕೆಂಬ ಬಗ್ಗೆ ಅಗತ್ಯ ಮಾಹಿತಿ ಕೃಷಿಕನಿಗೆ ಒದಗಿಸುವ ವ್ಯವಸ್ಥೆ.

೨) ಶೀತಲೀಕರಣ ವ್ಯವಸ್ಥೆ ಗ್ರಾಮಮಟ್ಟದಿಂದ ಹಿಡಿದು ಅಂತಿಮ ಗ್ರಾಹಕನಿರುವ ಪ್ರದೇಶದ ತನಕ ಒದಿಗುಸುವುದು.

೩ ) ಶೀಘ್ರ ಹಾಳಾಗದಂತಿಡುವ ಉತ್ತಮ ಗುಣಮಟ್ಟದ ಪ್ಯಾಕಿಂಗ್‌ ವ್ಯವಸ್ಥೆಯ ಅವಿಷ್ಕಾರ.

೪) ದಕ್ಷ ರೀತಿಯ ಸಾರಿಗೆ-ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವುದು.

೫) ಸರಿಯಾದ ರೀತಿಯ ವರ್ಗೀಕರಣಕ್ಕೆ ಅಗತ್ಯವುಳ್ಳ ತರಬೇತಿ.

೬) ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಗ್ರಾಮಮಟ್ಟದಲ್ಲಿ ಸಹಕಾರಿ ಸಂಸ್ಥೆಗಳ ಸ್ಥಾಪನೆ.

೭) ಹಣ್ಣು ಮತ್ತು ತರಕಾರಿಗಳಿಗೆ ಯೋಗ್ಯ ರೀತಿಯ ತಳಮಟ್ಟದ ಮತ್ತು ಗರಿಷ್ಠ ಮಟ್ಟದ ಬೆಲೆ ನಿಗದಿಪಡಿಸುವುದು.

೮) ಹಣ್ಣು ಮತ್ತು ತರಕಾರಿಗಳನ್ನು ಮೌಲ್ಯ ವರ್ಧನೆಗೊಳಪಡಿಸಲು ಸಂಸ್ಕರಣಾ ಉದ್ದಿಮೆಗಳನ್ನು ಕನಿಷ್ಠ ತಾಲೂಕು ಮಟ್ಟದಲ್ಲಾದರೂ ಸ್ಥಾಪಿಸಲು ಪ್ರೇರಣೆಗಳನ್ನು ನೀಡಿ ಅಗತ್ಯ ನೆರವನ್ನು ಒದಗಿಸುವುದು.

೯) ರಫ್ತಿಗಿರುವ ಅವಕಾಶಗಳನ್ನು ಕೃಷಿಕರಿಗೆ ತಿಳಿ ಹೇಳಿ ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವುದು.

೧೦) ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ರೈತರ ಅಗತ್ಯಕ್ಕನುಗುಣವಾಗಿ ಕೈಗೊಂಡು ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸುವುದು.

೧೧) ಕ್ಷೇತ್ರದ ವಿವಿಧ ವಿಚಾರಗಳ ಬಗ್ಗೆ ಸರಿಯಾದ ಅಂಕಿ-ಅಂಶಗಳ ಸಂಗ್ರಹಣೆಗೆ ಶ್ರಮಿಸುವುದು.

೧೨) ಬೆಳೆ ವಿಮಾ ಯೋಜನೆಯನ್ನು ಇಲ್ಲಿಗೂ ವಿಸ್ತರಿಸುವುದು.

ಕರಿಮೆಣಸು

೧೯೪೦ರ ದಶಕದ ತನಕ ವಿಶ್ವದಲ್ಲಿ ಕರಿಮೆಣಸಿನ ಉತ್ಪಾದನೆಯಲ್ಲಿ ಶೇಕಡಾ ೮೦ ರಷ್ಟನ್ನು ತನ್ನದಾಗಿರಿಸಿಕೊಂಡಿದ್ದ ಭಾರತ ಇದೀಗ ಕೇವಲ ಶೇಕಡಾ ೨೫ ನ್ನು ಮಾತ್ರ ಉತ್ಪಾದಿಸುತ್ತಿದೆ. ಕಪ್ಪು ಬಂಗಾರವೆಂದೇ ಖ್ಯಾತಿಯಾಗಿರುವ ಕರಿಮೆಣಸಿನ ಉತ್ಪಾದನೆಯ ಕಡೆಗೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ರೈತರ ಆಸಕ್ತಿ ಗಣನೀಯವಾಗಿ ಕುಸಿಯ ತೊಡಗಿದ್ದು, ಇದಕ್ಕೆ ಕಾರಣಗಳು ಹಲವು. ಇವುಗಳ ಪೈಕಿ ಪ್ರಮುಖ ಕಾರಣವೆಂದರೆ ಇದರ ಬೆಲೆಯಲ್ಲಿ ಯಾವುದೇ ರೀತಿಯ ಪ್ರೇರಣಾಂಶಗಳು ಕಂಡು ಬರದಿರುವುದು. ಒಂದೊಮ್ಮೆ ಕರಿಮೆಣಸಿನ ಬೆಲೆ ಕಿಲೋವೊಂದರ ಕೇವಲ ರೂಪಾಯಿ ೪೦ ಇದ್ದುದು ಬಳಿಕ ಗಣನೀಯವಾಗಿ ಏರಿ ರೂಪಾಯಿ ೨೦೦ ಕ್ಕಿಂತಲೂ ಮೇಲಕ್ಕೇರಿತ್ತು. ಆದರೆ ಬಳಿಕ ಶೀಘ್ರವಾಗಿ ಇಳಿಯುತ್ತಾ ಹೋಗಿ ಇದೀಗ ೬೦ ರಿಂದ ೮೦ ರೊಳಗೆ ಏರುಪೇರಾಗುತ್ತಿದೆ. ನಮ್ಮಲ್ಲಿಂದು ಉತ್ಪಾದನೆಯಾಗುತ್ತಿರುವ ಕರಿಮೆಣಸಿನ ಬಹುಪಾಲು ರಫ್ತಿಗಾಗಿಯೇ ಮೀಸಲಾಗಿದ್ದು, ಇದರಿಂದ ದೇಶಕ್ಕೆ ಅತ್ಯಮೂಲ್ಯವಾದ ವಿದೇಶಿ ವಿನಿಮಯ ದೊರಕುತ್ತಿದೆ. ಆದರೆ ನಮ್ಮ ರಫ್ತಿನ ಪ್ರಮಾಣ ಸದಾ ಏರು ಪೇರಾಗುತ್ತಿದ್ದು ಇದರಿಂದಾಗಿ ಇಲ್ಲಿ ಸ್ಥಿರತೆ ಮತ್ತು ಬೆಳವಣಿಗೆ ನಿರಂತರವಾಗಿ ಕಂಡು ಬರುತ್ತಿಲ್ಲ. ಇದರೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಡೋನೇಷಿಯಾ, ಮಲೇಶಿಯಾ, ವಿಯೆಟ್ನಾಂ ಮತ್ತು ಬ್ರೆಜಿಲ್‌ ರಾಷ್ಟ್ರಗಳು ಪ್ರಬಲ ಪೈಪೋಟಿಯೊಡ್ಡುತ್ತಿದ್ದು, ಇವೆಲ್ಲಾ ನಮ್ಮ ರಫ್ತಿನ ಮೇಲೆ ಹೊಡೆತವನ್ನೊಡ್ಡುತ್ತಿದೆ.

ಆಂತರಿಕ ಮಾರುಕಟ್ಟೆ ವ್ಯವಸ್ಥೆ

ಆಂತರಿಕವಾಗಿ ಕರಿಮೆಣಸಿನ ಮಾರುಕಟ್ಟೆಯಿಂದು ಕೇವಲ ಕೆಲವೇ ವ್ಯಾಪಾರಿಗಳು ಮತ್ತು ರಫ್ತುದಾರರ ಕೈಯಲ್ಲಿದ್ದು ಇಲ್ಲಿ ಸರಕಾರದ  ಹಸ್ತಕ್ಷೇಪ ಮಾರುಕಟ್ಟೆ ವ್ಯವಸ್ಥೆ ಇಲ್ಲವೆ ಬೆಲೆಯಲ್ಲಾಗಲಿ ಇಲ್ಲವೆನ್ನಬಹುದು. ಕರಿಮಣಸಿನ ವ್ಯವಹಾರವಿಂದು ಖಾಸಗಿ ವಲಯದಲ್ಲಿದ್ದು, ಪರಿಣಾಮವಾಗಿ ಗ್ರಾಹಕರಿಂದು ತೆರುತ್ತಿರುವ ಬೆಲೆಯ ಶೇಕಡಾ ೬೦ ರಿಂದ ೭೦ ಮಾತ್ರ ಕೃಷಿಕರ ಕೈ ಸೇರುತ್ತಿದೆ. ಸ್ಥಳೀಯವಾಗಿ ಖಾಸಗಿ ವ್ಯಾಪಾರಸ್ಥರು ಸಂಗ್ರಹಿಸುವ ಕರಿಮೆಣಸನ್ನು ಒಂದು ದೊಡ್ಡ ಪ್ರಮಾಣವಾದ ಬಳಿಕ ಇದನ್ನು ಪ್ರಮುಖ ಮಾರುಕಟ್ಟೆ ಕೇಂದ್ರಗಳಿಗೆ ರವಾನಿಸುತ್ತಾರೆ. ಇಲ್ಲಿ ಕೇರಳದ ಕೊಚ್ಚಿ ಇದರ ಪ್ರಮುಖ ಸಂಗ್ರಹಣಾ ಕೇಂದ್ರ ಮತ್ತು ಮಾರುಕಟ್ಟೆಯಾಗಿದ್ದು, ಇಲ್ಲಿಂದ ಇದು ವಿದೇಶಗಳಿಗೆ ಮತ್ತು ಆಂತರಿಕ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ಈ ಪ್ರಮುಖ ಮಾರುಕಟ್ಟೆ ಕೇಂದ್ರಗಳಿಗೆ ಖಾಸಗಿ ವ್ಯಾಪಾರಸ್ಥರು ತಾವು ಸಂಗ್ರಹಿಸಿದ ಕರಿಮೆಣಸನ್ನು ದಲ್ಲಾಳಿಗಳಿಗೆ ಮಾರುತ್ತಾರೆ. ಬಳಿಕ ಅವರದನ್ನು ಬ್ರೋಕರ್ ಇಲ್ಲವೆ ದೊಡ್ಡ ವ್ಯಾಪಾರಸ್ಥರುಗಳಿಗೆ ಹಸ್ತಾಂತರಿಸುತ್ತಾರೆ. ಇವರಿಂದ ರಫ್ತುದಾರರು ಖರೀದಿ ಮಾಡಿ ತಮ್ಮ ಶೇಖರಣಾ ಕೇಂದ್ರಗಳಲ್ಲಿರಿಸಿ ಬೇಡಿಕೆ ಬಂದಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ . ಈ ಸಂದರ್ಭದಲ್ಲಿ ಕರಿಮೆಣಸನ್ನು ಗುಣಮಟ್ಟಕ್ಕನುಗುಣವಾಗಿ ವರ್ಗೀಕರಿಸಿ ಅವಕ್ಕೆ ಗುಣಮಟ್ಟದ ಪ್ರಮಾಣ ಪತ್ರವನ್ನು ಪಡೆದು ಹಡಗುಗಳ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಗೆ ರವಾನಿಸುತ್ತಾರೆ.

ಬೆಲೆ ಏರುಪೇರಿಗೆ ಕಾರಣಗಳು

೧) ಕರಿಮೆಣಸಿನ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕಾಗುತ್ತಿರುವ ಏರುಪೇರು ಇದರ ಬೆಲೆಯ ಮೇಲೆ ಅದರದ್ದಾದ ಪರಿಣಾಮ ಬೀರುತ್ತಿದೆ.

೨) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡು ಬರುವ ಬೇಡಿಕೆ ಇದರ ಬೆಲೆಯ ನಿರ್ಧರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು.

೩) ಸದಾ ಏರು ಪೇರಾಗುತ್ತಿರುವ ಪೂರೈಕೆಯ ಪ್ರವೃತ್ತಿಯಿಂದಾಗಿ ಇಲ್ಲಿನ ಮಾರುಕಟ್ಟೆಯಲ್ಲಿರುವ ಉಹಾಪೋಹಗಳು ಅಥವಾ ಊಹಿಸುವ ವರ್ತಕರಿಂದಾಗಿ ಬೆಲೆಯಲ್ಲಿ ಏರಿಳಿಕೆ ಕಂಡು ಬರುತ್ತಿದೆ.

೪) ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುವ ಹೆಚ್ಚುವರಿ ಉತ್ಪನ್ನ.

೫) ವಿದೇಶಿ ಮಾರುಕಟ್ಟೆಗೆ ಪೂರೈಕೆಯಾಗುವ ಕರಿಮೆಣಸು ಕಲಬೆರಕೆಗೆ ಒಳಗಾಗುತ್ತಿರುವುದು.

೬) ಇತ್ತೀಚಿನ ವರ್ಷಗಳಲ್ಲಿ ಐರೋಪ್ಯ ರಾಷ್ಟ್ರಗಳು ಸಾವಯು ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕ ಸಲ್ಲಿಸುತ್ತಿರುವುದರಿಂದ ಆಧುನಿಕ ವ್ಯವಸಾಯಕ್ಕೊಳಪಟ್ಟ ಉತ್ಪನ್ನಕ್ಕಿರುವ ಬೇಡಿಕೆ ಕುಸಿಯುತ್ತಿರುವುದು.

೭) ವಿಯೆಟ್ನಾಂ, ಬ್ರೆಜಿಲ್‌ ಮತ್ತು ಇಂಡೋನೇಶಿಯಾಗಳಲ್ಲಿ ಉತ್ಪಾದನ ವೆಚ್ಚ ನಮ್ಮಲ್ಲಿಗೆ ಹೋಲಿಸಿದಾಗ ಕಡಿಮೆ ಪ್ರಮಾಣದ್ದಾಗಿದ್ದು ಇದರಿಂದ ನಿರ್ಮಿತವಾದ ಪ್ರಬಲ ಪೈಪೋಟಿ.

೮) ಉತ್ಪಾದಕನ ಹಂತದಲ್ಲಿ ಮೌಲ್ಯವರ್ಧನೆಯಾಗದಿರುವುದು.

೯) ವ್ಯವಸ್ಥಿತ ಮಾರುಕಟ್ಟೆಯ ಅಭಾವ.

೧೦) ಸರಕಾರದ ಹಸ್ತಕ್ಷೇಪದ ಕೊರತೆ.

ಏಲಕ್ಕಿ

ಸಂಬಾರ ಪದಾರ್ಥಗಳ ರಾಣಿಯೆಂದೆ ಕರೆಯಲ್ಪಡುವ ಏಲಕ್ಕಿ ಕಳೆದ ಕೆಲವು ವರ್ಷಗಳಲ್ಲಿ ಪ್ರಾಮುಖ್ಯತೆಯನ್ನು ಕಳಕೊಂಡಿದ್ದರೂ ಇದೀಗ ಚೇತರಿಸಿಕೊಳ್ಳಲಾರಂಭಿಸಿದೆ. ಕಾಫಿ ಬೆಲೆ ಉತ್ತಮವಾಗಿದ್ದಾಗ ಏಲಕ್ಕಿ ತೋಟಗಳು ಕಾಫಿ ತೋಟಗಳಾದ ಕಾಲವೊಂದಿತ್ತು. ಆದರೆ ಇದೀಗ ಇದೇ ಕಾಫಿ ತೋಟಗಳು ಏಲಕ್ಕಿ ತೋಟಗಳಾಗಿ ಪರಿವರ್ತನೆಗೊಳಗಾಗುತ್ತಿರುವುದನ್ನು ನಾವಿಂದು ಕಾಣಬಹುದು, ಅಲ್ಲದೆ ಕಾಫಿ ತೋಟಗಳಲ್ಲಿ ಇದೀಗ ಮಿಶ್ರಬೆಳೆಯಾಗಿ ತನ್ನ ವಿಸ್ತೀರ್ಣ ವೃದ್ಧಿಸುವತ್ತ ಏಲಕ್ಕಿಯಿಂದು ಸಾಗುತ್ತಿದೆ.

ಪ್ರಕೃತ ದೇಶದಲ್ಲಿಂದು ಏಲಕ್ಕಿಯನ್ನು ಪಶ್ಚಿಮ ಘಟ್ಟ ಪ್ರದೇಶ ಮತ್ತು ಪೂರ್ವೋತ್ತರ ರಾಜ್ಯಗಳಲ್ಲಿ ಬೆಳೆಸಲಾಗುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಣ್ಣ ಮತ್ತುಳಿದ ಪ್ರದೇಶದಲ್ಲಿ ದೊಡ್ಡ ಏಲಕ್ಕಿಯನ್ನು ಒಟ್ಟು ಪ್ರಮಾಣ ಸುಮಾರು ೧೧ ಸಾವಿರ ಟನ್‌ಗಳಾಗಿವೆ. ಭಾರತವಿಂದು ಉತ್ಪಾದಿಸುತ್ತಿರುವ ಏಲಕ್ಕಿಯ ಶೇಕಡಾ ೬೦ ಅಂತರಾಷ್ಟ್ರೀಯ ಮಾರುಕಟ್ಟೆ ಚಲಿಸುತ್ತಿದ್ದು, ೧೯೮೫ರ ತನಕ ದೇಶವು ಇಲ್ಲಿ ಏಕಸ್ವಾಮ್ಯವನ್ನು ಹೊಂದಿತ್ತು. ಆದರೆ ಕ್ರಮೇಣ ಗ್ವಾಟೆಮಾಲದ ಪ್ರವೇಶವಾಗಿ ಭಾರತವಿಂದು ದ್ವಿತೀಯ ಸ್ಥಾನಕ್ಕೆ ತಳಲ್ಪಟ್ಟಿದೆ. ಆಂತರಿಕವಾಗಿ ನಮ್ಮಲ್ಲಿ ಏಲಕ್ಕಿಗೆ ಅತಿ ದೊಡ್ಡ ಗ್ರಾಹಕ ತಿರುಪತಿಯ ತಿಮ್ಮಪ್ಪನಾಗಿದ್ದಾನೆ.

ಏಲಕ್ಕಿಯ ಆಂತರಿಕ ಮಾರುಕಟ್ಟೆ ವ್ಯವಸ್ಥೆಯು ಹರಾಜು ಪದ್ಧತಿ ಮತ್ತು ಖಾಸಗಿ ವ್ಯಾಪಾರಸ್ಥರ ಹತೋಟಿಯಲ್ಲಿದೆ. ಉತ್ಪಾದಕನಿಂದ ಏಲಕ್ಕಿಯು ಗ್ರಾಹಕನಿಗೆ ತಲುಪುವಲ್ಲಿ ಇಲ್ಲಿ ಹಲವು ಮಧ್ಯವರ್ತಿಗಳು ಪ್ರವೇಶಿಸಿ ಬೆಲೆಯನ್ನು ನಿರ್ಧರಿಸುತ್ತಿದ್ದಾರೆ . ೧೯೭೭ ರ ಏಲಕ್ಕಿ ಮಾರಾಟ ಪರವಾನಗಿ ಕಾನೂನು ಪ್ರಕಾರ ಇದರ ವ್ಯಾಪಾರದಲ್ಲಿರುವವರೆಲ್ಲಾ ಪರವಾನಗಿ ಹೊಂದಿರಬೇಕಿದ್ದರೂ ಇಲ್ಲಿನ್ನೂ ಅಸಂಘಟಿತ ಮಾರಾಟ ವ್ಯವಸ್ಥೆ ಚಾಲನೆಯಲ್ಲಿದೆ. ದೇಶದ ಪ್ರಮುಖ ಹರಾಜು ಕೇಂದ್ರಗಳು ಬೊದಿನಾಯಕನ್ನೂರು, ವಿರುದುನಗರ, ಸಕಲೇಶಪುರ, ಮಡಿಕೇರಿ, ಕುಬಂಗಳಲ್ಲಿವೆ. ಆಂತರಿಕವಾಗಿರುವ ಪ್ರಮುಖ ಗ್ರಾಹಕ ಮಾರುಕಟ್ಟೆಗಳು ದೆಹಲಿ, ಕಾನ್ಪುರ, ಲಕ್ನೋ, ಅಲಹಾಬಾದ್‌, ಆಗ್ರಾ, ಮುಂಬೈ, ನಾಗ್ಪುರ, ಕಲ್ಕತ್ತಾ, ಅಹಮದಾಬಾದ್‌, ಅಜ್ಮೆರ್, ಜೈಪುರ, ಅಮೃತಸರ, ಲುಧಿಯಾನ, ಪಾಟ್ನಾ, ಕಟಕ್‌, ಭೋಪಾಲ್‌, ಇಂದೋರ್, ಹೈದರಾಬಾದ್‌, ವಿಜಯವಾಡ ಮತ್ತು ರಾಮಮುಂಡ್ರಿಗಳಾಗಿವೆ. ಮುಂಬೈಯು ಪ್ರಮುಖ ರಫ್ತು ಮಾರುಕಟ್ಟೆ ಕೇಂದ್ರವಾಗಿದೆ.

ಏಲಕ್ಕಿಯ ಬೆಲೆ ಸಾಮಾನ್ಯವಾಗಿ ಅದರ ಗುಣವೈವಿಧ್ಯತೆಗನುಗುಣವಾಗಿ ನಿರ್ಧಾರವಾಗುವುದು. ನಮ್ಮಲ್ಲಿ ಉತ್ತಮ ಗುಣಮಟ್ಟದ ೮ ಮಿ.ಮಿ. ಏಲಕ್ಕಿಗೆ ಬೆಲೆ ಹೆಚ್ಚಿದ್ದರೂ ಬೇಡಿಕೆ ಕಡಿಮೆ . ಆದರೆ ಕಡಿಮೆ ಗುಣಮಟ್ಟದ ಏಲಕ್ಕಿಗೆ ಬೇಡಿಕೆ ಅಧಿಕ.

ಬೆಲೆಯಲ್ಲಿ ಏರಿಳಿತಗಳೇಕೆ?

೧) ಪೂರೈಕೆಯಲ್ಲಾಗುತ್ತಿರುವ ಏರುಪೇರು.

೨) ವಿದೇಶಿ ಬೇಡಿಕೆಯಲ್ಲಿ ಕಂಡು ಬರುತ್ತಿರುವ ಬದಲಾವಣೆ.

೩) ಗ್ವಾಟೆಮಾಲದಿಂದ ಕಂಡುಬರುತ್ತಿರುವ ಪ್ರಬಲ ಪೈಪೋಟಿ.

೪) ಗುಣಮಟ್ಟದ ಬಗ್ಗೆ ಗಮನ ಅತ್ಯಲ್ಪವಾಗಿರುವುದು.

೫) ಮೌಲ್ಯವರ್ಧನೆಗೆ ಒತ್ತು ಸಾಕಾಷ್ಟಾಗದಿರುವುದು.

೬) ಆಂತರಿಕ ಬಳಕೆ ವೃದ್ಧಿಸದಿರುವುದು.

೭) ಅಂತರಾಷ್ಟ್ರೀಯ ಮಾರುಕಟ್ಟೆಗೆ ನೇರ ಮಾರಾಟಕ್ಕೆ ಇಳಿಯುವ ಪ್ರಯತ್ನಗಳಾಗದಿರುವುದು.

೮) ಅಧಿಕ ಮಧ್ಯವರ್ತಿಗಳಿರುವುದು.

ಅಡಿಕೆ

ಅಡಿಕೆ ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಏರು ಪೇರಾಗುತ್ತಿದ್ದು, ಇದಕ್ಕೆ ಕಾರಣಗಳು ಹಲವು ಇವುಗಳೆಂದರೆ:

೧) ಮಾರುಕಟ್ಟೆ ವ್ಯವಸ್ಥೆ ಮಧ್ಯವರ್ತಿಗಳ ಹತೋಟಿಗೊಳಪಟ್ಟಿರುವುದು.

೨) ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಪ್ರಬಲವಾಗಿ ಹೊರಹೊಮ್ಮಲು ಕೃಷಿಕರ ಸಹಕಾರ ಲಭ್ಯವಾಗದಿರುವುದು.

೩) ಮಾರುಕಟ್ಟೆಯ ಒಳ ಹೊರವಿನ ಬಗ್ಗೆ ಅಧ್ಯಯನಗಳಾಗದಿರುವುದು.

೪) ಮೌಲ್ಯವರ್ಧನೆಗೆ ಉತ್ಪಾದನಾ ವಲಯದಲ್ಲಿ ಪ್ರಯತ್ನಗಳಾಗದಿರುವುದು.

೫) ಉತ್ಪಾದನೆ, ಪೂರೈಕೆ, ಬೇಡಿಕೆ ಎಂಬಿತ್ಯಾದಿ ವಿಚಾರಗಳ ಪರಿಪೂರ್ಣ ಅಧ್ಯಯನ ನಡೆಸುವ ವ್ಯವಸ್ಥೆಯಿಲ್ಲದಿರುವುದು.

೬) ತಾತ್ಕಾಲಿಕವಾಗಿ ಮಾರುಕಟ್ಟೆಯನ್ನು ಯಾ ಬೆಲೆಯನ್ನು ಏರುಪೇರು ಮಾಡುವ ಊಹಿಸುವ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗಿರುವುದು.

೭) ಮಾರುಕಟ್ಟೆಯ ಸ್ಥಿತಿಗತಿಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡುವ ಊಹಿಸುವ ವ್ಯಾಪಾರಸ್ಥರ ಅಭಾವ.

೮) ವಿದೇಶದಿಂದ ಆಗುತ್ತಿರುವ ಆಮದು.