ನಾವಿಂದು ಉತ್ಪಾದಿಸುತ್ತಿರುವ ಅಡಿಕೆ, ತೆಂಗು, ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ, ವೆನಿಲ್ಲಾ,  ಗೋಡಂಬಿ, ರಬ್ಬರ್, ಹಣ್ಣುಹಂಪಲು, ತರಕಾರಿ ಎಂಬಿತ್ಯಾದಿ ತೋಟಗಾರಿಕಾ ಇಲ್ಲವೆ ವಾಣಿಜ್ಯ ಬೆಳೆಗಳ ಬೆಲೆ ಸದಾ ಏರುಪೇರಾಗುತ್ತಿದೆ. ಬೆಲೆಯನ್ನು ನಂಬಿ ಬೆಳೆ ಬೆಳೆಯಲಾರದ ಸ್ಥಿತಿ ನಮ್ಮ ಕೃಷಿಕರದ್ದಾಗಿದೆ. ಈ ಸ್ಥಿತಿ ಇಂದು ನಿನ್ನೆಯದಲ್ಲ, ಇದು ಅನಾದಿಕಾಲದಿಂದಲೂ ಕಂಡು ಬರುತ್ತಿದ್ದು,  ಈ ನಿಟ್ಟಿನಲ್ಲಿ ಇದಕ್ಕಿರುವ ಕಾರಣಗಳನ್ನು ಕಂಡುಕೊಂಡು ಇಲ್ಲಿಗಿಂದು ಪರಿಹಾರಗಳ ಅಗತ್ಯವಿದೆ. ಈ ದೃಷ್ಟಿಯಿಂದ ಇಲ್ಲಿ ಹಲವು ಕಾರಣಗಳನ್ನು ಹೆಸರಿಸಲಾಗಿದೆಯಲ್ಲದೆ ಅಳವಡಿಸಬೇಕಾದ ಪರಿಹಾರೋಪಾಯಗಳನ್ನು ಸೂಚಿಸಲಾಗಿದೆ.

ಕಾರಣಗಳು:

೧) ನಮ್ಮ ಕೃಷಿ ಚಟುವಟಿಕೆಗಳಲ್ಲಿ ಮುಖ್ಯವಾಗಿ ಉತ್ಪಾದನಾ ದೃಷ್ಟಿಯಿಂದ ಸ್ಥಿರತೆಯನ್ನು ತೋರಿಸಲಾರದ ಸ್ಥಿತಿಯಲ್ಲಿದ್ದು ಪರಿಣಾಮವಾಗಿ ಇಲ್ಲಿ ಕಂಡು ಬರುತ್ತಿರುವ ಏರಿಳಿತ ಇತರ ಉತ್ಪಾದನಾ ರಾಷ್ಟ್ರಗಳಿಗೆ ಹೋಲಿಸಿದಾಗ ಭಿನ್ನವಾಗಿರುವುದರಿಂದ ಬೆಲೆಯಲ್ಲೂ ಏರಿಳಿತ ಕಂಡು ಬರುತ್ತಿದೆ.

೨) ಉತ್ಪಾದಕನ ಹಂತದಲ್ಲಿ ಉತ್ಪನ್ನವನ್ನು ಗುಣಮಟ್ಟಕ್ಕನುಗುಣವಾಗಿ ವರ್ಗೀಕರಿಸದಿರುವುದು , ಗ್ರಾಹಕನ ರುಚಿಗನುಗುಣವಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳದಿರುವುದು, ಸರಿಯಾದ ಪ್ಯಾಕಿಂಗ್‌ ಮಾಡದಿರುವುದು ಎಂಬಿತ್ಯಾದಿ ವಿಚಾರಗಳು ಬೆಲೆ ಏರಿಳಿತಕ್ಕೆ ದಾರಿ ಮಾಡಿಕೊಡುತ್ತಿವೆ.

೩) ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಯೋಗ್ಯ ರೀತಿಯಲ್ಲಿ ಶೇಖರಿಸಿಡಲು ಅಗತ್ಯ ಗೋದಾಮು, ಶೀತಲೀಕರಣ, ವ್ಯವಸ್ಥೆಗಳ ಕೊರತೆ.

೪) ರೈತರಿಗೆ ಕೊಯ್ಲೊತ್ತರ ತಂತ್ರಜ್ಞಾನದ ತರಬೇತಿ ಮತ್ತು ಮಾಹಿತಿಗಳ ಅಭಾವ.

೫) ಯೋಗ್ಯ ರಸ್ತೆ, ಸಂಚಾರ ವ್ಯವಸ್ಥೆಗಳ ಕೊರತೆ.

೬) ಗ್ರಾಮಮಟ್ಟದಲ್ಲಿರುವ ಅಧಿಕ ಸಂಖ್ಯೆಗಳ ಮಧ್ಯವರ್ತಿಗಳ ಕಾರ್ಯನಿರ್ವಹಿಸುವಿಕೆ.

೭) ರೈತರಿಗೆ ಬೇಡಿಕೆ, ಪೂರೈಕೆ ಬೆಲೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿಯ ಅಭಾವ.

೮) ಉತ್ಪಾದನಾ ವಲಯದಲ್ಲಿ ಸಂಸ್ಕರಣಾ ಘಟಕಗಳ ಅಭಾವ.

೯) ಮಾರುಕಟ್ಟೆಯಲ್ಲಿಂದು ತುಂಬಿ ತುಳುಕುತ್ತಿರುವ ಅಧಿಕ ಸಂಖ್ಯೆಯ ತಾತ್ಕಾಲಿಕ ಊಹಿಸುವ ಮಧ್ಯವರ್ತಿಗಳು.

೧೦) ಪ್ರತಿಯೊಂದು ಉತ್ಪನ್ನದ ವಿವಿಧ ವಿಚಾರಗಳ ಬಗ್ಗೆ ಸಂಶೋಧನೆ, ಅಧ್ಯಯನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸುವ ಸಂಸ್ಥೆಗಳಿಲ್ಲದಿರುವುದು.

೧೧) ಉತ್ಪಾದಕರಿಂದ ಹಿಡಿದು ಗ್ರಾಹಕನ ತನಕ ಉತ್ಪನ್ನ ಚಲಿಸುವಾಗ ಹಂತ ಹಂತದಲ್ಲೂ ಕಲಬೆರಕೆಗೊಳಪಡುತ್ತಿರುವುದು.

೧೨) ಉತ್ತಮ ಗುಣಮಟ್ಟವನ್ನು ಹೊಂದುವುದು ಮತ್ತು ಕಾಯ್ದು ಕೊಳ್ಳುವಲ್ಲಿ ವಿಫಲರಾಗಿರುವುದು.

೧೩) ಸರಕಾರದ ಮನವೊಲಿಸಲು, ಸರಕಾರದ ಹಸ್ತಕ್ಷೇಪಕ್ಕೆ ಆಹ್ವಾನಿಸಲು, ಸಮಸ್ಯೆಗಳ ವಿರುದ್ಧ ಹೋರಾಡಲು ಕೃಷಿಕರ ಪ್ರಬಲ ಸಂಘಟನೆಯ ಕೊರತೆ.

೧೪) ಅಂತರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಬೆಳೆಗಾರರಿಗೆ ತಿಳುವಳಿಕೆ ಮೂಡಿಸದಿರುವುದು.

೧೫) ಉತ್ಪಾದಕರು ಉತ್ಪನ್ನವನ್ನು ಗ್ರಾಹಕರಿಗೆ ನೇರ ಮಾರಾಟ ಮಾಡಲು ಪ್ರಯತ್ನಿಸದಿರುವುದು.

೧೬) ಮಾರುಕಟ್ಟೆಯಲ್ಲಿ ಸದಾ ಕಂಡು ಬರುತ್ತಿರುವ ಗೊಂದಲ ಮತ್ತು  ಊಹಾಪೋಹಗಳು.

೧೭) ಕೃಷಿಕರು, ಮಾರಾಟಗಾರರು ಮತ್ತು ರಫ್ತುದಾರರೊಳಗೆ ಉತ್ತಮ ಸಂಬಂಧಗಳಿಲ್ಲದಿರುವುದು.

೧೮) ಪ್ರತಿಯೊಂದು ಬೆಳೆಯ ಉತ್ಪಾದನಾ ವೆಚ್ಚ, ದೊರಕಬೇಕಾದ ಆದಾಯಗಳ ಬಗ್ಗೆ ಅಧ್ಯಯನಗಳಾಗದಿರುವುದು.

೧೯) ಗ್ರಾಹಕರೊಡನೆ ಸಂಪರ್ಕ ಸಾಧಿಸದಿರುವುದು.

೨೦) ಪ್ರಚಾರ ಕಾರ್ಯಗಳಿಲ್ಲದಿರುವುದು.

೨೧) ಉತ್ಪಾದನೆಗೆ ಕೊಟ್ಟ ಮಹತ್ವ ಮಾರುಕಟ್ಟೆ ಇಲ್ಲವೆ ಮಾರಾಟ ಪ್ರಕ್ರಿಯೆಗೆ ಕೊಡದಿರುವುದು.

ಪರಿಹಾರೋಪಾಯಗಳು:

ಯಾವುದೇ ಒಂದು ಕೃಷಿಯುತ್ಪನ್ನದ ಭವಿಷ್ಯ ನಿರ್ಧಾರವಾಗುವುದು ಪ್ರಕೃತಿಯನ್ನು ಅವಲಂಬಿಸಿ. ಉತ್ಪನ್ನದ ಭವಿಷ್ಯದ ಬೆಲೆ ತಾತ್ಕಾಲಿಕವಾಗಿ ಊಹಿಸಬಹುದಾಗಿದ್ದರೂ ನಿಖರವಾಗಿ ನುಡಿಯಲು ಅಸಾಧ್ಯ. ಹೀಗಿದ್ದರೂ ಬೆಲೆಯನ್ನು ನಿರ್ಧರಿಸುವಲ್ಲಿ ಪೂರೈಕೆ, ಬೇಡಿಕೆ,  ಸಂಸ್ಕರಣೆ ಯಾ ಮೌಲ್ಯವರ್ಧನೆ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದರೊಂದಿಗೆ ಉತ್ಪಾದಕನಿಗಿರುವ ಮಾರುಕಟ್ಟೆ ಜ್ಞಾನ, ಆತನು ಅಳವಡಿಸುವ ತಂತ್ರಜ್ಞಾನ, ಮಾರಾಟ ಮಾಡುವಲ್ಲಿನ ದಕ್ಷತೆ, ಹಿಂದಿನ, ಇಂದಿನ, ಮುಂದೆ ಬರಬಹುದಾದ ರೀತಿ ನೀತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ದೃಷ್ಟಿಯಿಂದ ನಮ್ಮಲ್ಲಿ ಕೃಷಿಕರಿಂದು ಉತ್ಪಾದಿಸುತ್ತಿರುವ ವಿವಿಧ ಬೆಳೆಗಳಿಗೆ ಉತ್ತಮ ಭವಿಷ್ಯ ಕಂಡು ಕೊಳ್ಳಲಲು ವಿವಿಧ ರೀತಿಯ ಬದಲಾವಣೆಗಳಾಗಬೇಕಾಗಿವೆ ಮತ್ತು ಅವು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬೇಕಿದೆ. ಇವುಗಳೆಂದರೆ:

೧) ಕೊಯ್ಲಿನ ತಕ್ಷಣ ಉತ್ಪನ್ನವನ್ನು ಮಾರಾಟ ಮಾಡುವ ಪ್ರವೃತ್ತಿ ನಿಲ್ಲಿಸಬೇಕು. ಉತ್ಪನ್ನವನ್ನು ಹಂತ ಹಂತವಾಗಿ ಮಾರುಕಟ್ಟೆ ಬಿಡುಗಡೆ ಮಾಡುವ ಪ್ರವೃತ್ತಿ ಹೆಚ್ಚಬೇಕು.

೨) ಉತ್ಪನ್ನವನ್ನು ಮಾರಾಟ ಮಾಡುವ ಮೊದಲು ಗುಣಮಟ್ಟಕ್ಕನುಗುಣವಾಗಿ ವರ್ಗೀಕರಿಸಬೇಕು. ಕಳಪೆ ಗುಣಮಟ್ಟವುಳ್ಳ ಉತ್ಪನ್ನವನ್ನು ಶೀಘ್ರವಾಗಿ ಮಾರಾಟ ಮಾಡಬೇಕು.

೩) ಹೆಚ್ಚಿನ ಧಾರಣೆ ಗಳಿಸುವ ಉದ್ದೇಶದಿಂದ ಆಗುತ್ತಿರುವ ಕಲಬೆರಕೆಗೆ ಕಡಿವಾಣ ಹಾಕಬೇಕು.

೪) ಮಾರುಕಟ್ಟೆಯಲ್ಲಿರುವ ಧಾರಣೆ ಬಗ್ಗೆ ಅರಿವು ಹೊಂದಿರಬೇಕು.

೫) ಮಧ್ಯವರ್ತಿಗಳಿಂದ ಸಾಕಷ್ಟು ದೂರವಿದ್ದು ವ್ಯವಸ್ಥಿತ ರೀತಿಯ ಮಾರುಕಟ್ಟೆ ಸಂಸ್ಥೆಗಳ ಮೂಲಕ ವಹಿವಾಟನ್ನು ಕೈಗೊಳ್ಳುತ್ತಿರಬೇಕು.

೬) ಸಹಕಾರಿ ಸಂಸ್ಥೆಗಳನ್ನು ಬೆಳೆಸುವಲ್ಲಿ ಕೃಷಿಕರು ಶ್ರಮಿಸುವುದರೊಂದಿಗೆ, ಸಂಸ್ಥೆಗಳೂ, ಕೃಷಿಕರನ್ನು ಬೆಳೆಸುವ ವಾತಾವರಣ ಸೃಷ್ಟಿಯಾಗಬೇಕು.

೭ ) ಉತ್ಪಾದಕರದ್ದಾದ ಪ್ರಬಲ ಸಂಘಟನೆ ಹೊರಹೊಮ್ಮಬೇಕು.

೮) ಉತ್ಪಾದಕರು ಒಟ್ಟಾಗಿ ತಮ್ಮದಾದ ಸಂಸ್ಕರಣಾ ಘಟಕ, ಶೀತಲೀಕರಣ ವ್ಯವಸ್ಥೆ ಇತ್ಯಾದಿಗಳನ್ನು ಸ್ಥಾಪಿಸಬೇಕು.

೯) ಕೃಷಿಕರದ್ದಾದ ಸಂಶೋಧನಾ ಕೇಂದ್ರ, ಪೂರೈಕೆ ಬೇಡಿಕೆಗಳ ಅಧ್ಯಯನ ನಡೆಸುವ ಸಂಸ್ಥೆಯನ್ನು ಉತ್ಪನ್ನಗಳಿಗನುಗುಣವಾಗಿ ಸ್ಥಾಪಿಸಬೇಕು.

೧೦) ಗ್ರಾಹಕ, ವ್ಯಾಪರಿ ಮತ್ತು ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ ಮತ್ತು ಭಾಂದವ್ಯಗಳಿರಬೇಕು.

೧೧) ವಿದೇಶಿ ಮಾರುಕಟ್ಟೆಗೆ ಉತ್ಪನ್ನವನ್ನು ರಫ್ತು ಮಾಡಲು ಪ್ರದೇಶಕ್ಕನುಗುಣವಾಗಿ ಸಂಸ್ಥೆಗಳನ್ನು ಸ್ಥಾಪಿಸಬೇಕು.

೧೨) ಉತ್ಪನ್ನಕ್ಕನುಗುಣವಾಗಿ ವಿವಿಧ ವಿಚಾರಗಳನ್ನು ವ್ಯಕ್ತ ಪಡಿಸಲು ಅಧ್ಯಯನ ನಿರತ ವಕ್ತಾರರಿರಬೇಕು.

೧೩) ಮಾಧ್ಯಮಗಳ ಮೂಲಕ ಉತ್ಪನ್ನಗಳ ಬಗ್ಗೆ ಪ್ರಚಾರ ಕೈಗೊಳ್ಳಬೇಕು.

೧೪) ಗ್ರಾಹಕ ಪ್ರದೇಶಗಳಲ್ಲಿ ಉತ್ಪನ್ನಗಳ ವಿವಿಧ ವಿಚಾರಗಳ ಬಗ್ಗೆ, ಅವುಗಳ ಪ್ರಯೋಜನಗಳ ಬಗ್ಗೆ ನಿರಂತರವಾಗಿ ಮಾಹಿತಿ ಒದಗಿಸುವ ಪ್ರಯತ್ನಗಳಾಗಬೇಕು.

೧೫) ರಫ್ತಿನ ದೃಷ್ಟಿಯಿಂದ ಉತ್ಪಾದಿಸಲ್ಪಡುವ ಉತ್ಪನ್ನಗಳನ್ನು ಆಂತರಿಕವಾಗಿ ಬಳಸುವ ಪ್ರಯತ್ನಗಳಾಗಬೇಕು.

೧೬) ಪ್ರತಿಯೊಂದು ಉತ್ಪನ್ನಕ್ಕೂ ಒಂದೊಂದು “ಬ್ರಾಂಡ್‌” ಸೃಷ್ಟಿಯಾಗಬೇಕು.

೧೭) ಕೃಷಿಕರಲ್ಲಿ ತಾವು ಬೆಳೆಸುವ ಉತ್ಪನ್ನವನ್ನು ಬಳಸುವ ಪ್ರವೃತ್ತಿ ಹೆಚ್ಚಾಗಬೇಕು.

೧೮) ಮಾರುಕಟ್ಟೆಯಲ್ಲಿನ ಗೊಂದಲಗಳಿಗೆ ಕಿವಿಗೊಡದೆ, ಅನಾವಶ್ಯಕ ಗೊಂದಲಗಳನ್ನು ಸೃಷ್ಟಿಸಲು ಅವಕಾಶ ನೀಡದೆ ಊಹಾಪೋಹಗಳಿಗೆ ತೆರೆಹಾಕಬೇಕು.

೧೯) ವಾರ್ಷಿಕವಾಗಿ ಪ್ರತಿಯೊಬ್ಬ ಕೃಷಿಕನು ತಾನು ಬೆಳೆದ ಉತ್ಪನ್ನದ ಶೇಕಡಾ ೧೦ ನ್ನಾದರೂ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕಲ್ಲದೆ, ಗ್ರಾಹಕರಿಗೆ ಉಚಿತವಾಗಿ ಕೊಟ್ಟು, ಗ್ರಾಹಕರಲ್ಲದವರಿಗೆ ಉತ್ಪನ್ನದ ಬಗ್ಗೆ ಆಸಕ್ತಿ ಮೂಡಿಸುವ ಪರಿಸರ ನಿರ್ಮಾಣ ಮಾಡಬೇಕು.

೨೦) ಮಾರುಕಟ್ಟೆಯಲ್ಲಿರುವ ಅಧಿಕೃತ ಸಂಸ್ಥೆಗಳು ತಮ್ಮ ಲಾಭಾಂಶದಲ್ಲಿ ಸ್ವಲ್ಪ ಪಾಲನ್ನಾದರೂ ಮಾರುಕಟ್ಟೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕು.