ಆಲ್ಡಸ್ ಹಕ್ಸ್ಲೀ ಹೇಳುವಂತೆ, ಮಾನವನ ಸಾರ್ವಜನಿಕ ಅನುಭವಗಳನ್ನು ಪರಿಶೋಧಿಸುವ, ವ್ಯವಸ್ಥಿತವಾಗಿ ರೂಪಿಸುವ ಮತ್ತು ಸಂವಹಿಸಲು ಬಳಸುವ ಸಲಕರಣೆಯೇ ವಿಜ್ಞಾನ. ಅವರ ಅಭಿಪ್ರಾಯದಂತೆ ಸಾಹಿತ್ಯವೂ ಸಹ ಅಂತಹುದೇ ಅನುಭವಗಳೊಂದಿಗೆ ವ್ಯವಹರಿಸುತ್ತದೆ, ಆದರೆ ಹೆಚ್ಚಾಗಿ ಮಾನವನ ಖಾಸಗಿ ಅನುಭವಗಳೊಂದಿಗೆ. ವಿಜ್ಞಾನಿ ಮಾನವನ ಸಾರ್ವಜನಿಕ ಅನುಭವಗಳನ್ನು ಗಮನಿಸಿ ಅವುಗಳನ್ನು ತನ್ನ ವೈಜ್ಞಾನಿಕ ಪರಿಭಾಷೆಯಲ್ಲಿ ಮೂರ್ತರೂಪಗೊಳಿಸಿ, ತರ್ಕಬದ್ಧವಾಗಿ ತನ್ನ ಪರಿಕಲ್ಪನೆಗಳನ್ನು ಅವಲೋಕನ ಮತ್ತು ಪ್ರಯೋಗಗಳಿಂದ ರುಜುವಾತುಗೊಳಿಸಲು ಪ್ರಯತ್ನಿಸುತ್ತಾನೆ. ಸಾಹಿತಿಯೂ ಸಹ ಪ್ರಕೃತಿ, ಸಂಸ್ಕೃತಿ ಮತ್ತು ಭಾಷಾ ಜಗತ್ತಿನಲ್ಲಿನ ಮಾನವನ ಖಾಸಗಿ ಮತ್ತು ಸಾರ್ವಜನಿಕ ಅನುಭವಗಳನ್ನು ಗಮನಿಸಿ ಪರಿವ್ಯಕ್ತಗೊಳಿಸಲು ಪ್ರಯತ್ನಿಸುತ್ತಾನೆ. ವಿಜ್ಞಾನ ಮತ್ತು ಸಾಹಿತ್ಯ ಈ ರೀತಿಯ ನಿಕಟ ಸಂಬಂಧ ಹೊಂದಿರುವುದು ಪರಸ್ಪರ ಬೆಳವಣಿಗೆಗೆ ಪೂರಕವಾಗಿವೆ.

ಆದರೂ ಅವುಗಳ ನಿಕಟತೆಯನ್ನು ಇನ್ನಷ್ಟು ಹೆಚ್ಚಿಸುವುದನ್ನು ಪ್ರಜ್ಞಾಪೂರ್ವಕವಾಗಿ, ಬಲವಂತವಾಗಿ ಮಾಡಬೇಕಿದೆ. ನಮ್ಮ ಶಿಕ್ಷಣದ ಜೊತೆಗೆ, ಎಲ್ಲ ಸಂದರ್ಭದಲ್ಲೂ ವಿಜ್ಞಾನ ಮತ್ತಿ ಸಾಹಿತ್ಯ ಸ್ಪಂದನವಿಲ್ಲದೆ ವಿದ್ಯಾರ್ಥಿಗಳಿಗೆ, ವಾಚಕರಿಗೆ ಸಾಕಷ್ಟು ವಂಚಿಸಿದೆ. ಈ ಕಾರಣದಿಂದಾಗಿಯೇ ಅನೇಕ ಸಾಹಿತ್ಯಾಸಕ್ತರಲ್ಲಿ, ಸಾಹಿತ್ಯಭ್ಯಾಸಿಗಳಿಗೆ ವಿಜ್ಞಾನದ ವಿಚಾರಗಳು ತಮಗರ್ಥವಾಗದ ಕ್ಲಿಷ್ಟ, ಬೇಡವಾದವು ಅನ್ನಿಸಿದ್ದರೆ ವಿಜ್ಞಾನದ ಅಭ್ಯಾಸಿಗಳಿಗೆ ಸಾಹಿತ್ಯ ಸತ್ಯದಿಂದ ದೂರವಾದ ಕೇವಲ ಕಾಲ್ಪನಿಕ ಕಟ್ಟುಕತೆಯನ್ನಿಸಿಬಿಟ್ಟಿದೆ. ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳ ಹುಟ್ಟು ಬೇರೆ ಬೇರೆ ಕಾಲದಲ್ಲಿ, ಒಂದನ್ನೊಂದು ಅವಲಂಭಿತವಾಗದಂತಹ ಸಂದರ್ಭದಲ್ಲಿ ಆಗಿದ್ದಲ್ಲಿ ಒಂದಕ್ಕೊಂದು ವಂಚಿಸುವ ಸಮರ್ಥನೆ ಇದ್ದೀತು. ಅದೂ ಅಲ್ಲದೆ ಅವುಗಳ ಸೃಷ್ಟಿಯ ಹಾಗೂ ಉಪಯೋಗಿಸುವ ಸಂದರ್ಭಗಳ ಪರಿಕರಗಳು ಸಂಪೂರ್ಣ ಸ್ವತಂತ್ರವಾಗಿಯೇ ಇರಬೇಕು ಎನ್ನುವ ಮನೋಭಾವ ಉಳ್ಳದ್ದಾಗಿದ್ದರೆ ಈ ಮಾತು ನಿಜ. ಬಹಳ ವೇಳೆ ಇವುಗಳ ಒಂದನ್ನೊಂದು ಅವಲಂಬಿತವಾಗಿರುವಂತಹ ಸನ್ನಿವೇಶಗಳನ್ನು ಶೇಷ್ಠ ಬರಹಗಾರರೂ, ಕಲಾವಿದರೂ ಮತ್ತು ವಿಜ್ಞಾನಿಗಳೂ ಅನುಭವಿಸಿದ್ದರೂ, ಅಪೇಕ್ಷಿಸಿದ್ದರೂ ಸಹ ಬರುಬರುತ್ತಾ ಅವುಗಳ ನಡುವಿನ ಸಂಬಂಧ ಅಷ್ಟು ಹತ್ತಿರವಾದಂತಿಲ್ಲ. ಈ ಕಾರಣದಿಂದಾಗಿ ಇಂದಿನ ಜ್ಞಾನಾರ್ಜನೆಯ ಸನ್ನಿವೇಶದಲ್ಲಿ ಸಣ್ಣಪುಟ್ಟ ಕಾರಣದಿಂದಾಗಿ ತೊಡಕುಂಟಾಗುವುದು. ಆದರೆ ಪರಿಸ್ಥಿತಿಯ ಅವಶ್ಯಕತೆಯೇ ಬೇರೆ. ಎಲ್ಲಾ ಜ್ಞಾನ ಅನಿವಾರ್ಯತೆಯೂ ಜೀವನವನ್ನು ವಿವಿಧ ಜ್ಞಾನ ಶಿಸ್ತುಗಳ ಮಧ್ಯೆ ಅರಳಿಸುವಂತಾಗಬೇಕಾಗಿದೆ.

ಕೃಷಿವಿಜ್ಞಾನ ಒಂದು ಅನ್ವಯಿಕ ವಿಜ್ಞಾನ. ಅದು ಪ್ರಯೋಗಾಲಯದ ಸಂಶೋಧನೆಗಳಿಗಷ್ಟೇ ಸೀಮಿತವಾಗಿಲ್ಲ. ಬಹುಪಾಲು ಎಲ್ಲ ಶುದ್ಧ, ಅನ್ವಯಿಕ ಹಾಗೂ ಸಾಮಾಜಿಕ ವಿಜ್ಞಾನಗಳ ಸಂಗಮವದು-ಜೀವಶಾಸ್ತ್ರದ ಎಲ್ಲ ವಿಭಾಗಗಳು, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮನಶಾಸ್ತ್ರ, ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನಶಾಸ್ತ್ರಗಳನ್ನೊಳಗೊಂಡಿರುತ್ತದೆ.

೧೯ನೇ ಶತಮಾನದ ಅಂತ್ಯದಲ್ಲಿಯೇ ಕೆಲವು ಕೃಷಿ ಸಾಹಿತ್ಯ ಕೃತಿಗಳು ಪ್ರಕಟವಾಗಿದ್ದರೂ (ಕೋಷ್ಟಕ ೧) ಅವು ಯಾವುದೇ ಆಧುನಿಕ ‘ವೈಜ್ಞಾನಿಕ ಸಿದ್ಧಾಂತ’ಗಳನ್ನು ಆಧರಿಸಿರಲಿಲ್ಲವಾದುದರಿಂದ ಇತರ ವಿಜ್ಞಾನಿಗಳು ಅವುಗಳನ್ನು ಜನಪ್ರಿಯ ವೈಜ್ಞಾನಿಕ ಕೃತಿಗಳೆಂದು ಪರಿಗಣಿಸಿರಲಿಲ್ಲ. ೧೯೧೭ರಿಂದೀಚೆಗಷ್ಟೇ ಕನ್ನಡದಲ್ಲಿ ಆಧುನಿಕ ವೈಜ್ಞಾನಿಕ ಸಾಹಿತ್ಯವನ್ನು ಕಾಣಬಹುದು.

ಮೈಸೂರು ವಿಶ್ವವಿದ್ಯಾನಿಲಯವು ೧೯೧೬ರಲ್ಲಿ ಸ್ಥಾಪಿತವಾಯಿತು. ಆಗ ಇಡೀ ಮೈಸೂರು ರಾಜ್ಯಕ್ಕೆ ಸೆಂಟ್ರಲ್ ಕಾಲೇಜು ಮಾತ್ರ ವಿಜ್ಞಾನದ ಕಾಲೇಜಾಗಿತ್ತು ಹಾಗೂ ಅಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದರು. ವಿಜ್ಞಾನದಲ್ಲಿ ಕನ್ನಡದ ಬಳಕೆ ಕಡಿಮೆ ಇದ್ದಂತಹ ಸನ್ನಿವೇಶದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮತ್ತು ಮೈಸೂರು ಸರ್ಕಾರದ ಪವನಶಾಸ್ತ್ರ ವೀಕ್ಷಣಾಲಯದ ಮುಖ್ಯಸ್ಥರಾಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ ರವರು ವಿಜ್ಞಾನವನ್ನು ಕನ್ನಡ ಭಾಷೆಯ ಮೂಲಕ ಜನತೆಯಲ್ಲಿ ಹರಡುವ ಅವಶ್ಯಕತೆಯನ್ನು ಮನಗಂಡು ‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ೧೯೧೭ರಲ್ಲಿ ‘ವಿಜ್ಞಾನ’ ಎಂಬ ಒಂದು ಮಾಸಪತ್ರಿಕೆಯನ್ನು ಹೊರಡಿಸುವ ಸಾಹಸ ಮಾಡಿದರು. ಪತ್ರಿಕೆಗೆ ಸಾಮಗ್ರಿಯನ್ನೊದಗಿಸುವುದರಲ್ಲಿ ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನೆದುರಿಸಿ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರಲು ಅಗತ್ಯವಾದ ಶ್ರದ್ಧೆ, ಉತ್ಸಾಹಗಳು ಸಂಪಾದಕರಲ್ಲಿದ್ದುವಾದರೂ ವಿಜ್ಞಾನಕ್ಕೇ ಮೀಸಲಾದ ಪತ್ರಿಕೆಯೊಂದು ಅಭಿವೃದ್ಧಿ ಹೊಂದಲು ಕಾಲವಿನ್ನೂ ಪಕ್ವವಾಗಿರಲಿಲ್ಲ. ಜನತೆಯಿಂದ ಅದಕ್ಕೆ ಆಸರೆ ದೊರೆಯಲಿಲ್ಲ. ಹನ್ನೆರಡು ಸಂಚಿಕೆಗಳ ಒಂದು ಸಂಪುಟ ಮುಗಿಸಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.

‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ಯ ಚಟುವಟಿಕೆ ‘ವಿಜ್ಞಾನ’ ಪತ್ರಿಕೆಯ ನಿರ್ವಹಣೆಗೆ ಮಾತ್ರ ಮೀಸಲಾಗಿರಲಿಲ್ಲ. ಸಮಿತಿಯ ಆಶ್ರಯದಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ, ವಿಜ್ಞಾನ ವಿಷಯಗಳನ್ನು ಕುರಿತು ಕನ್ನಡದಲ್ಲಿ ಉಪನ್ಯಾಸ ಮಾಲೆಗಳನ್ನು ಏರ್ಪಡಿಸಲಾಗುತ್ತಿತ್ತು. ‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ಯು ಅನಿವಾರ್ಯ ಕಾರಣಗಳಿಂದಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿದ ನಂತರವೂ ಸಮಿತಿಯ ಪ್ರಮುಖ ಕಾರ್ಯಕರ್ತರಾಗಿದ್ದ ವೆಂಕಟನಾರಾಯಣಪ್ಪನವರು ಮತ್ತು ವೆಂಕಟೇಶ ಅಯ್ಯಂಗಾರ್ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಮತ್ತು ಮೈಸೂರಿನ ಯುವರಾಜರೂ ಆಗಿದ್ದ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ಧನಸಹಾಯ ಪಡೆದು ಅವರ ಹೆಸರಿನಲ್ಲಿ ಒಂದು ‘ವೈಜ್ಞಾನಿಕ ಗ್ರಂಥಮಾಲೆ’ ಯನ್ನು ಪ್ರಾರಂಭಿಸಿದರು. ಆ ಗ್ರಂಥಮಾಲೆಯ ಮೊದಲ ಪ್ರಕಟಣೆ ೧೯೩೧ರಲ್ಲಿ ನಂಗಪುರಂ ವೆಂಕಟೇಶ ಅಯ್ಯಂಗಾರ್ ರವರ ಫ್ರೆಂಚ್ ವಿಜ್ಞಾನ ಲೇಖಕ ಕೆಮಿಲ್ ಫ್ಲಮೇರಿಯೊ ಅವರ ‘ಅಸ್ಟ್ರಾನಮಿ ಫಾರ್ವಿಮೆನ್’ ಎಂಬ ಪುಸ್ತಕದ ಕನ್ನಡಾನುವಾದ ‘ಜ್ಯೋತಿರ್ವಿನೋದಿನಿ’ ಎಂಬ ಕೃತಿ ಪ್ರಕಟವಾಯಿತು. ೧೯೩೯ರಲ್ಲಿ ವೆಂಕಟನಾರಾಯಣಪ್ಪನವರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದನಂತರ ‘ಜೀವವಿಜ್ಞಾನ’ವೆಂಬ ೩೫೦ ಪುಟಗಳ ಪುಸ್ತಕವನ್ನು ಬರೆದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯಲ್ಲಿ ಪ್ರಕಟಿಸಿದರು.

ಕನ್ನಡ ವಿಜ್ಞಾನ ಸಾಹಿತ್ಯದ ಬೆಳವಣಿಗೆಯಲ್ಲಿ ಮಹತ್ತದ ಪಾತ್ರವಹಿಸಿದ ಮತೊಬ್ಬರೆಂದರೆ ಡಾ.ಶಿವರಾಮ ಕಾರ್ರಂತರು ಸ್ವತಃ ವಿಜ್ಞಾನಿಯಲ್ಲ, ಶಾಲಾ ಕಾಲೇಜುಗಳಲ್ಲಿ ಕ್ರಮಬದ್ಧವಾಗಿ ವಿಜ್ಞಾನವನ್ನು ವ್ಯಾಸಂಗ ಮಾಡಿದವರೂ ಅಲ್ಲ. ಆದರೆ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಇಂಗ್ಲೀಶ್‌ನಲ್ಲಿ ಹೇರಳವಾಗಿ ದೊರೆಯುವ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿ ತಾವು ಪಡೆದ ಜ್ಞಾನವನ್ನು ಕನ್ನಡ ಭಾಷೆಯ ಮೂಲಕ ಕನ್ನಡಿಗರಿಗೆ ನೀಡುವ ಪ್ರಯತ್ನ ಮಾಡಿದರು. ೧೯೩೧ರಲ್ಲಿ ಅವರು ಹೊರತಂದ ‘ಬಾಲ ಪ್ರಪಂಚ’ವೆಂಬ ಮೂರು ಸಂಪುಟಗಳ ಮಕ್ಕಳ ವಿಶ್ವಕೋಶದಲ್ಲಿ ವಿಜ್ಞಾನದ ಲೇಖನಗಳಿಗೆ ಗಣನೀಯ ಸ್ಥಾನವನ್ನು ಕೊಟ್ಟಿದ್ದಾರೆ. ತರುವಾಯ ೧೯೫೫-೬೫ರ ದಶಕದಲ್ಲಿ ವಿಜ್ಞಾನಕ್ಕೇ ಮೀಸಲಾದ ನಾಲ್ಕು ಸಂಪುಟಗಳ ‘ವಿಜ್ಞಾನ ಪ್ರಪಂಚ’ವೆಂಬ ವೈಜ್ಞಾನಿಕ ವಿಶ್ವಕೋಶವನ್ನು ಪ್ರಕಟಿಸಿದ್ದಾರೆ.

ಜನಪ್ರಿಯ ವಿಜ್ಞಾನ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಘ ಸಂಸ್ಥೆಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನೂ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ೧೯೧೯ರಲ್ಲಿ ಪ್ರಾರಂಭವಾದ ‘ಪ್ರಬುದ್ಧ ಕರ್ಣಾಟಕ’ ಪತ್ರಿಕೆಯನ್ನು ಮೊದಲು ಹೆಸರಿಸಬೇಕು. ಈ ಪತ್ರಿಕೆ ಪ್ರಾರಂಭದಲ್ಲಿ ಕೇವಲ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯಾಗಿತ್ತು. ಆದರೆ ವೈಜ್ಞಾನಿಕ ಸಾಹಿತ್ಯವೂ ಜೊತೆಯಲ್ಲಿಯೇ ಬೆಳೆಯದೇ ಹೋದಲ್ಲಿ, ಭಾಷೆಯ ಮತ್ತು ಸಾಹಿತ್ಯದ ಸರ್ವತೋಮುಖ ಪ್ರಗತಿ ಸಾಧ್ಯವಿಲ್ಲವೆಂಬುದನ್ನು ಬಹುಬೇಗನೆ ಅರಿತುಕೊಂಡು ೧೯೨೩ರಲ್ಲಿಯೇ, ಅಂದರೆ ತನ್ನ ಐದನೆಯ ಸಂಪುಟದ ಮೊದಲ ಸಂಚಿಕೆಯಲ್ಲಿಯೇ ವೈಜ್ಞಾನಿಕ ಲೇಖನಗಳಿಗೆ ತನ್ನ ಬಾಗಿಲು ತೆರೆಯಿತು. ಅಲ್ಲಿಂದ ಮುಂದೆ ಕ್ರಮೇಣ ವಿಜ್ಞಾನ ಲೇಖನಗಳು ಹೆಚ್ಚು ಹೆಚ್ಚಾಗಿ ಬರಲು ಪ್ರಾರಂಭಿಸಿದುದರಿಂದ ೧೯೬೩ರ ವೇಳೆಗೆ ‘ಪ್ರಬುದ್ಧ ಕರ್ಣಾಟಕ’ವು ಆರು ತಿಂಗಳಿಗೊಮ್ಮೆ ಒಂದು ವಿಜ್ಞಾನ ವಿಶೇಷಾಂಕವನ್ನು ಪ್ರಕಟಿಸಬೇಕಾಯಿತು. ೧೯೬೯ರಲ್ಲಿ ‘ಪ್ರಬುದ್ಧ ಕರ್ಣಾಟಕ’ವು ತನ್ನ ಚಿನ್ನದ ಹಬ್ಬವನ್ನಾಚರಿಸಿದ ಸಂದರ್ಭದಲ್ಲಿ ಹೊರತಂದ ಚಿನ್ನದ ಸಂಚಿಕೆಯ ವಿಜ್ಞಾನ ವಿಭಾಗವು ಕನ್ನಡ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ಮಾರ್ಗದಲ್ಲಿ ಒಂದು ಪ್ರಮುಖ ಮೈಲಿಗಲ್ಲು.

೧೯೬೬ರ ಕೊನೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಾರಂಭವಾಯಿತು. ವಿಶ್ವವಿದ್ಯಾನಿಲಯದ ಎಲ್ಲ ಹಂತಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಬಳಸಬೇಕೆಂಬ ನೀತಿಗನುಗುಣವಾಗಿ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗವನ್ನು ಸ್ಥಾಪಿಸಲಾಯಿತು. ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳನ್ನು ಮತ್ತು ಸಂದರ್ಭ ಗ್ರಂಥಗಳನ್ನು ಹೊರತರುವುದೇ ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಮಾನವಿಕ ಮತ್ತು ವೈಜ್ಞಾನಿಕ ಸಾಹಿತ್ಯನಿರಂತವಾಗಿ ಭಾಷಾಂತರಗಳನ್ನು ಅವಲಂಭಿಸಿಕೊಂಡಿರುವುದು ಸಾಧ್ಯವಿಲ್ಲ. ಹೊಸ ಮೌಲಿಕ ಅಥವಾ ಸ್ವತಂತ್ರ ಗ್ರಂಥಗಳನ್ನು ರಚಿಸಲು ಅನುವಾಗುವಂತೆ ವಿಷಯ ಸಂಪತ್ತನ್ನು ಸಮೃದ್ಧಗೊಳಿಸಿಕೊಂಡಿರುವ ಅಧ್ಯಾಪಕವರ್ಗ ಕನ್ನಡ ಭಾಷೆಯ ಜಾಯಮಾನಕ್ಕೆ ಅನುಗುಣವಾದ ನಿರೂಪಣ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕಾಗುತ್ತದೆನ್ನುವ ದೃಷ್ಟಿಯಿಂದ ೧೯೭೦ರಲ್ಲಿ ಕನ್ನಡ ಭಾಷೆಯ ಬಳಕೆಯ ವಿಚಾರದಲ್ಲಿ ಬೇಸಿಗೆ ಶಿಬಿರ’ ವೊಂದನ್ನು ಏರ್ಪಡಿಸಿ ಅದರಲ್ಲಿ ವಿಜ್ಞಾನ ಪಠ್ಯಪುಸ್ತಕ ಬರಹಗಾರರು ಒಂದುಗೂಡಿ ವಿಜ್ಞಾನ ಪಠ್ಯಪುಸ್ತಕ ರಚನೆ ಮತ್ತು ಬೋಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿದರು. ಈ ಶಿಬಿರ ತುಂಬ ಉಪಯುಕ್ತವೆಂದು ಕಂಡು ಬಂದುದರಿಂದ ೧೯೭೧, ೧೯೭೨, ೧೯೭೩ ಮತ್ತು ೧೯೭೪ರಲ್ಲಿ ಈ ಬಗೆಯ ಶಿಬಿರಗಳನ್ನು ನಡೆಸಲಾಯಿತು.

ನಮ್ಮ ಸುತ್ತಮುತ್ತಲಿನ ಸ್ಥಾವರ ಜಂಗಮಗಳ ವೈಜ್ಞಾನಿಕ ಪರಿಚಯ ಜನಪ್ರಿಯ ವಿಜ್ಞಾನಕ್ಕೆ ಮೊದಲನೆಯ ಮೆಟ್ಟಿಲು ಎಂದು ಬಿ.ಜಿ.ಎಲ್. ಸ್ವಾಮಿಯವರು ಭಾವಿಸಿದ್ದರು. ಅವರ ‘ಹಸುರು ಹೊನ್ನು’ ಮತ್ತು ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಇದರ ಉದಾಹರಣೆಗಳು ‘ಹೆಸರು ಹೊನ್ನು’ವಿನಲ್ಲಿ ‘ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದುಬಂದಿರುವ ಕೆಲವು ಗಿಡಮರಗಳ ಪರಿಚಯ ಮಾಡಿಕೊಡುವುದು ಈ ಬರವಣಿಗೆಯ ಪ್ರಯತ್ನ’ವಾದರೂ ಅದರ ಸಾಹಿತ್ಯದ ಮೌಲ್ಯವೂ ಹಿರಿದಾದುದು. ಇಂದಿನ ರೈತನ ವ್ಯವಸಾಯದಲ್ಲಿರುವ ಹಲವಾರು ಬೆಳೆಗಳ ಮೂಲ ದಕ್ಷಿಣ ಅಮೆರಿಕ ಎಂಬುದನ್ನು ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಕೃತಿ ವಿವರಿಸುತ್ತದೆ. ಮೆಣಸಿನಕಾಯಿ, ಮುಸುಕಿನ ಜೋಳ, ಟೊಮೇಟೋ, ನೆಲಗಡಲೆ, ಗೋಡಂಬಿ, ತಿಂಗಳ ಹುರುಳಿಕಾಯಿ, ಚಪ್ಪರದ ಬದನೆ, ಆಲೂಗಡ್ಡೆ, ಸಿಹಿಗೆಣಸು, ಮರಗೆಣಸು, ಪಪಾಯ, ಅನಾನಸ್, ಸಪೋಟ, ಸೀಬೆ ಮುಂತಾದುವು ಇಂದು ರೈತನ ಸ್ಥಿತಿಗತಿಯನ್ನು ನಿರ್ಧರಿಸುವಂತಹ ಬೆಳೆಗಳಾಗಿವೆ ಹಾಗೂ ಇವುಗಳಲ್ಲಿ ಹಲವಾರು ಬೆಳೆಗಳು ನಮ್ಮ ದಿನನಿತ್ಯದ ಆಹಾರದ ಅವಿಭಾಜ್ಯ ಭಾಗವಾಗಿವೆ.

ಕೃಷಿ ಪದವೀಧರರಾದ ಡಿ.ಎಸ್. ಮುರಿಗಪ್ಪ ಶ್ರೇಷ್ಠಿಯವರು ೧೯೫೮ರಲ್ಲಿ ರಚಿಸಿದ ಜೇನು ಕೃತಿಯಲ್ಲಿ (ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯಾ) ವಿಜ್ಞಾನ ಮತ್ತು ಸಾಹಿತ್ಯದ ಸಮಾಗಮವನ್ನು ಕಾಣಬಹುದು. ಜೇನಿನ ಬದುಕಿನ ಬಗೆಗಿನ ಅತ್ಯಂತ ಸುಂದರ ಕಾವ್ಯಮಯ ವರ್ಣನೆಯ ಈ ಕೃತಿಯಲ್ಲಿನ ರಾಣಿ ಜೇನು ಗಂಡು ಜೇನುನೊಣಗಳೊಂದಿಗೆ ಕೂಡುವ ‘ಸುನೀಲ ಶೂನ್ಯದಲ್ಲಿ ಪರಿಣಯ ಪರ್ಯಟನ’ ಅಧ್ಯಾಯನ ಆಯ್ದ ಭಾಗವನ್ನು ಈ ಮುಂದೆ ಕೊಡಲಾಗಿದೆ:

ಕುಮಾರಿಯಾದ ರಾಣಿ ದಿಗಂತದ ದಿವ್ಯ ಸುನೀಲ ಶೂನ್ಯದಲ್ಲಿ ಪ್ರಣಯಿಯನ್ನು ಸೇರಿ ಗರ್ಭದಾನ ಪಡೆಯುತ್ತಾಳೆ. ಒಂದು ನಗರದಲ್ಲಿ (ಜೇನುಗೂಡಿನಲ್ಲಿ) ಮೈತುಂಬಿ ಬೆಳೆದ ನೂರಾರು, ಕೆಲವುಸಾರಿ ಸಾವಿರಾರು ಗಂಡು ಜೇನುಹುಳುಗಳು ಕುಮಾರಿಯಾದ ರಾಣಿಯೊಡನಿರುತ್ತವೆ. ಇವು ಗೂಡಿನಲ್ಲಿ ಕುಮಾರಿ ರಾಣಿಯನ್ನು ನೋಡಿದಾಗ ಇರಲಿ, ಅವಳ ಸುಪುಷ್ಟ ಸುಂದರ ಮೈಗೆ ತಮ್ಮ ಮೈ ಉಜ್ಜಿ ನಡೆದಾಗಲೂ ಸಹ ಪ್ರೇಮ ಕೆರಳಿ ಕಾಮ ಕಾಲ್ಕೆದರು ವುದಿಲ್ಲ. ಆದರೆ ನಿತ್ಯ ಮಧ್ಯಾಹ್ನ ಮೂರು ಘಂಟೆಯವರೆಗೂ ಅಂತರಿಕ್ಷದಲ್ಲಿ ಸುತ್ತುತ್ತವೆ, ಪ್ರೇಯಸಿಯನ್ನು ಕೂಡಬಯಸಿ, ರಾಜಕುಮಾರಿಯ ಬೇಟ ಬಯಸಿ; ಅವಳ ಪ್ರೇಮಬಂಧನದಲ್ಲಿ ಪ್ರಾಣಾರ್ಪಣೆ ಮಾಡಲು ಕಾತರರಾಗಿ, ಕ್ಷಣಕಾಲ ಪ್ರೇಮಸುಧೆಯಲ್ಲಿ ತೇಲಿ ಅನುವೀಯಲು ಸಿದ್ಧರಾಗಿ; ಸುರ ಕಿನ್ನರ, ಗಂಧರ್ವಲೋಕಗಳ ಸರ್ವ ಸುಖಗಳಿಗೆ ಮಿಗಿಲಾದ ಮಾಟಗಾತಿ ರಾಜಕುಮಾರಿಯ ಅನುರಾಗ ಆಲಿಂಗನದಲ್ಲಿ ಸಾವನ್ನಪ್ಪಲು ಬೇರೆ ಬೇರೆ ನಗರಗಳಿಂದ ಕೊಬ್ಬಿ ಬೆಳೆದ ಸಾವಿರಾರು ಗಂಡು ಜೇನುಗಳೂ ಪ್ರಕೃತಿಯ ಬಟ್ಟ ಬಯಲಲ್ಲಿ ಒಟ್ಟು ಸೇರುತ್ತವೆ. ಪ್ರೇಮೋನ್ಮತ್ತ ಗಂಡುಗಳ ಹಿಂಡಿನಲ್ಲಿ ಕುಮಾರಿ ರಾಣಿಯ ಪ್ರೇಮಸುಧೆಯಲ್ಲಿ ಮಿಂದು ಮಡಿಯುವುದು ಒಂದೇ ಒಂದು ಗಂಡುಭೀಮ ಬಲಕಾಯ ಗಂಡುಇದು ಪ್ರಕೃತಿಯ ನಿಯಮಸುಪುಷ್ಟವಾಗಿ ಬೆಳೆದ ಬೇರೆ ಬೇರೆ ತಳಿಗಳು ಹೆಣ್ಣು (ಕುಮಾರಿ ರಾಣಿ) ಗಂಡುಗಳ ಮಿಲನದಿಂದ ಉತೃಷ್ಟ ಭಾವಿ ಜನಾಂಗದ ಉತ್ಪತ್ತಿಯಾಗಬೇಕುಇದು ಪ್ರಕೃತಿ ಕಟ್ಟು.

ರಾಣಿ ಜೇನುನೊಣ ಸಾಮಾನ್ಯವಾಗಿ ತನ್ನ ಗೂಡನ್ನು ಬಿಟ್ಟು ಹೊರ ಹೋಗುವುದೇ ಇಲ್ಲ. ಅದು ತನ್ನ ಇಡೀ ಜೀವನದಲ್ಲಿ ಹೊರಹೊರಡುವುದು ಕೇವಲ ಎರಡು ಮೂರು ಬಾರಿ ಮಾತ್ರ. ಅದೂ ತನ್ನ ‘ಮಧುಚಂದ್ರ’ಕ್ಕಾಗಿ ಗಂಡು ಜೇನುನೊಣಗಳನ್ನು ಆಕರ್ಷಿಸಲು ಲೈಂಗಿಕ ಫೆರೊಮೋನುಗಳನ್ನು ಸ್ರವಿಸಿ ಹಾರುವ ರಾಣಿನೊಣವನ್ನು ಗಂಡುನೊಣಗಳು ಹಿಂಬಾಲಿಸುತ್ತವೆ. ಅವುಗಳಲ್ಲಿ ಒಂದು ಬಲಿಷ್ಠ ಗಂಡುನೊಣದೊಂದಿಗೆ ರಾಣಿ ಜೇನುನೊಣ ಕೊಡುತ್ತದೆ ಹಾಗೂ ಆನಂತರ ಆ ಗಂಡುನೊಣ ಸತ್ತುಹೋಗುತ್ತದೆ. ಅದನ್ನು ಮುರಿಗಪ್ಪ ಶ್ರೇಷ್ಠಿಯವರು ವರ್ಣಿಸಿದ್ದಾರೆ. ಇದರಲ್ಲಿ ವಿಜ್ಞಾನವೂ ಇದೆ, ಕಾವ್ಯವೂ ಇದೆ:

ತಾಯಾಗಲು ಚಡಪಡಿಸುತ್ತಾಳೆ ಕುಮಾರಿ ರಾಣಿ. ಆದರೆ ಗರ್ಭದಾನ ಪಡೆಯಲು ಗಗನಕ್ಕೆ ಹಾರಬೇಕು.ಕಾರ್ಮೋಡ, ಮಳೆಮಿಂಚು, ಬಿರುಗಾಳಿ, ಹಿರಿಮಂಜು, ಕೊಳೆ ಧೂಳು ತುಂಬಿದ ಗಗನಕ್ಕೆ ರಾಣಿ ಕಾಲಿಡಲೆಳಸುವುದಿಲ್ಲ. ಮೋಡ, ಮಳೆಗಳಿಲ್ಲದ ನಿರ್ಮಲ ಆಕಾಶ, ನೀಲಿಯ ಸುಂದರ ಸುಪ್ಪತ್ತಿಗೆಯನ್ನು ಹಾಸಿ ಹರೆಯದ ಈ ಹೆಣ್ಣನ್ನು ಕೈ ಹಿಡಿದು ಕರೆಯಬೇಕು, ಪ್ರಥಮ ಸಮಾಗಮದ ಸುಖದ ಸೀಮೆಗೆ. ಪ್ರಕೃತಿಮಾತೆಯ ಆದರದ ಆಹ್ವಾನವಿಲ್ಲದೆ ರಾಜಕುಮಾರಿ ಪ್ರಕೃತಿಯ ಪವಿತ್ರ ಶಯ್ಯಾಗಾರವನ್ನು ಸೇರಲಾರಳು. ಕಾತರದಿಂದ ಕಾಯುತ್ತಿದ್ದ ಪ್ರಕೃತಿಯ ಕರೆ ಕೈ ಸೇರುತ್ತದೆ. ನೀಲಾಕಾಶದ ಕಣ್ಣು ಕರೆಯುತ್ತಿದೆ ರಾಣಿಯನ್ನು ನಲವಿನ ನಾಡಿಗೆನಿಶೆಯುಡಿಸಿದ್ದ ಕಪ್ಪುಡಿಗೆಯನ್ನೆಳೆದು ಹಚ್ಚ ಹಸುರಿನ ಉಡಿಗೆ ಉಡಿಸಿ, ಬಣ್ಣ ಬಣ್ಣದ ತೊಡಿಗೆ ತೊಡಿಸಿ, ವನಕನ್ನೆಯರು ಸುಂದರ ವದನಗಳನ್ನು ಹನಿ ಹನಿ ಹಿಮಮಣಿಗಳಿಂದ ಮುಂಜಾವಿನ ಹೊಂಗಿರಣಗಳು ತೊಳೆಯುವಾಗ ಕುಮಾರಿ ರಾಣಿ ಸಡಗರದಿಂದ ಹೊರಬಂದು ತಾನು ಹುಟ್ಟಿದಂದಿನಿಂದ ಕಾಣದ ಹೊಂಬೆಳಕನ್ನು, ನೋಡುತ್ತಾಳೆ. ತನ್ನ ನಗರದ ಬಾಗಿಲಿಂದ ಸ್ವಲ್ಪದೂರ ಹಾರಿ ತಕ್ಷಣ ಹಿಂತಿರುಗಿ ಬಾಗಿಲ ಬಳಿ ಇಳಿಯುತ್ತಾಳೆ. ಹೀಗೆ ಎರಡು, ಮೂರು ಸಾರಿ ಹಾರಾಡಿ ತನ್ನ ಗೂಡಿರುವ ನೆಲೆಯನ್ನು ಚಿತ್ತದಲ್ಲಿ ಚಿತ್ರಿಸಿಕೊಂಡು ಹಾರುತ್ತಾಳೆ. ಕಾಮನ ಬಿಲ್ಲಿನಿಂದ ಹಾರುವ ಪ್ರೇಮಬಾಣದಂತೆ ಪ್ರಶಾಂತ ಉಜ್ವಲ ಸುನೀಲ ಶೂನ್ಯ ಶಯ್ಯಾಗಾರಕ್ಕೆ ಹಾರುತ್ತಾಳೆ ಹರೆಯದ ಹೆಣ್ಣು. ರಾಜಕುಮಾರಿಯ ಮೈಯಿಂದ ಹೊರಹೊಮ್ಮಿದ ಮಾಯಾವೀಣೆಯನಾದ, ಮಾಟದ ಮಲ್ಲಿಗೆಯ ಕಂಪು, ಬಿಸಿಲಿಗೆ ಮೈಯೊಡ್ಡಿ ಪುಷ್ಪಪತ್ರದ ಮೇಲೆ ನಲಿಯುತ್ತಿರುವ ಗಂಡುಗಳ ಹಿಂಡನ್ನು ಸೆರೆಹಿಡಿದು ಶೂನ್ಯಕ್ಕೆ ಎಳೆಯುತ್ತದೆ. ಮನ್ಮಥನು ಬಿಟ್ಟ ಶರವರ್ಷದಂತೆ ಗಂಡುಗಳ ಹಿಂಡು ಗಗನಕ್ಕೇರುತ್ತವೆ. ಭೀಮಬಲಕಾಯ ಗಂಡು ಮಾತ್ರ ದಷ್ಟಪುಷ್ಟ ಹೆಣ್ಣಿನೊಡನೆ ಸೇರಬೇಕೆಂಬ ಪ್ರಕೃತಿಯ ನಿಯಮವನ್ನು ನೆರವೇರಿಸುವ ರಾಣಿ ಆಕಾಶದ ಅನಂತತೆಯನ್ನು ಭೇದಿಸುವಂತೆ ಮಾಯಾವೇಗದಲ್ಲಿ ಮೇಲ ಮೇಲಕ್ಕೆ ಹಾರುತ್ತಾಳೆಬೇರೆ ಜೇನುಹುಳುಗಳು ತಮ್ಮ ಜೀವಮಾನದಲ್ಲಿ ಎಂದೆಂದೂ ಹಾರದ ಎತ್ತರಕ್ಕೆ ಹಾರುತ್ತಾಳೆ. ಕಾಮ ಕೆರಳಿ ರೆಕ್ಕೆಗಳ ಬಲ ಸೊಕ್ಕಿದ ಗಂಡು ಜೇನುಗಳು ಕುಮಾರಿಯನ್ನು ಕೂಡಲು ನಾನು ತಾನೆಂದು ಅವಳ ಹಿಂದೆ ಹಿಂದೆ ಹಾರುತ್ತವೆ. ಹಕ್ಕಿಗಳ ಸುಳಿವಿಲ್ಲದ ನಿರ್ಮಲ ನೀಲಾಕಾಶದ ನಿಲುವನ್ನು ನಿಲುಕುತ್ತಾಳೆ ರಾಣಿ. ಅಷ್ಟರಲ್ಲಿ ಪ್ರಕೃತಿ ನಿಯಮಿತವಾದ ಈ ವಿಚಿತ್ರ ಪಂದ್ಯದಲ್ಲಿ ಗೆಲ್ಲಲು ಗಡುಸಿಲ್ಲದ ಬಲಹೀನ ಗಂಡು ಜೇನುಗಳ ಹಿಂಡು ರಾಣಿಯಿಂದ ಬಹಳ ಹಿಂದುಳಿಯುತ್ತದೆ. ನಾಶದ ನಕಾಶೆಯನ್ನು ನಿರ್ಮಿಸುತ್ತಿರುವ ನಗರಗಳಿಂದ ಹಾರಿಬಂದ ಅರೆಹೊಟ್ಟೆಯ ಗಂಡುಗಳು, ಹರಿದ ರೆಕ್ಕೆಯ ಮುರಿದ ಮೈಯ ಹರೆಯ ಕುಗ್ಗಿದ ಗಂಡುಗಳು, ಮುಂದೆ ಹಾರಲಾರದೆ ಹಿಂದುಳಿದು ಪಂದ್ಯ ತ್ಯಜಿಸಿ ದಿಗಂತದಲ್ಲಿ ಕರಗಿಹೋಗುತ್ತವೆ. ಆಯಾಸವನ್ನು ಅರಿಯದ ಕೆಲವು ಬಲಶಾಲಿ ಗಂಡುಗಳ ಒಂದು ಸಣ್ಣ ಗುಂಪು ಕುಮಾರಿ ರಾಣಿಯ ಸುತ್ತ ಸುತ್ತುತ್ತದೆ. ಅರಿಸಿದ ಗಂಡುಗಳಲ್ಲಿ ಭೀಮಬಲಕಾಯದ ಗಂಡೊಂದು ರಾಣಿಯ ಪ್ರೇಮಾಲಿಂಗನದಲ್ಲಿ ಅಡಗುವುದು. ಕಾಮಸೂತ್ರದಿಂದ ಕಟ್ಟಿದ ಹರೆಯದ ಹೆಣ್ಣು ಗಂಡುಗಳೆರಡು ಕ್ಷಣಕಾಲ ಸುನೀಲ ಶೂನ್ಯದಲ್ಲಿ ಸುತ್ತುತ್ತವೆ. ರಾಣಿ ಗರ್ಭಧರಿಸುತ್ತಾಳೆ.

ಗರ್ಭದಾನ ಮಾಡಿ ಭಾವಿಜನಾಂಗಕ್ಕೆ ಜೀವಕೊಟ್ಟು ಗಂಡು ಜೇನು ಸಾವನ್ನಪ್ಪಬೇಕುರಾಣಿ ಮತ್ತು ಬಲಿಷ್ಠ ಗಂಡು ಜೇನಿನ ಕಾಮಕೇಳಿ ಕೊನೆಗಾಣುವುದು ಗಂಡಿನ ಭೀಕರ ಕೊಲೆಯಲ್ಲಿ. ಗಂಡು ಜೇನಿಗೆ ಮಾದ್ರಿಯನ್ನಪ್ಪಿದ ಪಾಂಡುವಿನಂತೆ ಶೃಂಗಾರರಂಗವೇ ಸಾವಿನ ಚಿತೆಯಾಗುತ್ತದೆ. ಉನ್ಮತ್ತ ಹೆಣ್ಣು ಗಂಡುಗಳ ಕಾಮಕೇಳಿ ಕೊನೆ ಮುಟ್ಟಿದಾಕ್ಷಣ ಗಂಡಿನ ಉದರ ಒಡೆದು ವೀರ್ಯಕೋಶ ಸಂಪೂರ್ಣವಾಗಿ ಕುಮಾರಿ ರಾಣಿಯ ಗರ್ಭವನ್ನು ಸೇರುತ್ತದೆ. ಗಂಡುಜೇನು ತನ್ನನ್ನೆ ಬಲಿದಾನಕೊಟ್ಟು ಹೆಣ್ಣಿಗೆ ಧಾರೆ ಎರೆದ ವೀರ್ಯಕೋಶದೊಂದಿಗೆ, ಅದರ ಹೊಟ್ಟೆಯ ಕರುಳೆಲ್ಲಾ ಹೊರ ಬರುತ್ತದೆ. ರೆಕ್ಕೆಗಳು ಸೊಕ್ಕಡಗಿ ನಿಲ್ಲುತ್ತವೆ. ಮಾಟಗಾತಿ ರಾಣಿಗೆ ಕರುಳಿನ ಮಾಲೆಯನ್ನು ಹಾಕಿ, ಗಂಡು ಜೇನು ಕೆಳಕ್ಕೆ ಉರುಳುರುಳಿ ಮಣ್ಣುಗೂಡುತ್ತದೆ.

ಇಂದು ವಿಜ್ಞಾನಕ್ಕೇ ಮೀಸಲಾಗಿರುವ ಕನ್ನಡ ಪತ್ರಿಕೆಗಳೆಂದರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸುತ್ತಿರುವ ‘ಬಾಲವಿಜ್ಞಾನ’ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿರುವ ‘ವಿಜ್ಞಾನ ಸಂಗಾತಿ’ಗಳು ಮಾತ್ರ ಕರ್ನಾಟಕ ರಾಜ್ಯ ವಿಜ್ಞಾನ ಸಾಹಿತ್ಯ ಪ್ರಕಟಣೆ ಮತ್ತು ಪ್ರಸರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇತ್ತೀಚೆಗೆ ಪ್ರಾರಂಭವಾಗಿರುವ ಕರ್ನಾಟಕ ವಿಜ್ಞಾನ ಅಕಾಡೆಮಿ ತ್ರೈಮಾಸಿಕ ವೈಜ್ಞಾನಿಕ ಪತ್ರಿಕೆಯೊಂದನ್ನು (‘ವಿಜ್ಞಾನಲೋಕ’) ತರುತ್ತಿದೆ.