ಇದು ಇಂಟರ್‌ನೆಟ್‌ಯುಗ. ಇಂದು ಎಲ್ಲ ಕೃಷಿ ಇಲಾಖೆಗಳು, ವಿಶ್ವವಿದ್ಯಾನಿಲಯಗಳನ್ನೊಳಗೊಂಡಂತೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇತರ ಇಲಾಖೆಗಳು ಇಂಟರ್‌ನೆಟ್‌ವೆಬ್‌ಸೈಟ್ ಗಳನ್ನು ಹೊಂದಿವೆ. ಅವುಗಳ ಮೂಲಕ ರೈತರಿಗೆ ಎಲ್ಲ ಮಾಹಿತಿ ಒದಗಿಸಲು ಪ್ರಯತ್ನಿಸುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ಹಳ್ಳಿಹಳ್ಳಿಯಲ್ಲಿಯೂ ಇಂಟರ್‌ನೆಟ್‌ ಲಭ್ಯವಾಗಬಹುದು. ಆಗ ಪುಸ್ತಕ, ಪತ್ರಿಕೆ ಮುಂತಾದುವನ್ನು ಯಾರೂ ಓದುವುದಿಲ್ಲವೆಂಬ ಆತಂಕ ಕೆಲವರಲ್ಲಿದೆ. ಇಂಗ್ಲಿಷಿನಲ್ಲಿ ಈಗಾಗಲೇ ಬಹಳಷ್ಟು ಪುಸ್ತಕಗಳು ಇಂಟರ್‌ನೆಟ್‌ ನಲ್ಲಿ ಉಚಿತವಾಗಿ ಲಭಿಸುತ್ತವೆ. ಕೃಷಿ ಸಾಹಿತ್ಯವನ್ನೊಳಗೊಂಡಂತೆ ಎಲ್ಲ ಕನ್ನಡ ಸಾಹಿತ್ಯವೂ ಡಿಜಿಟಲ್ ಸಾಹಿತ್ಯವಾಗಿ ಬಿಡುತ್ತದೆಯೆ?

೧೯೯೯ರಲ್ಲಿ ಇಂಟೆಲ್ ಕಂಪೆನಿಯ ಮುಖ್ಯಸ್ಥನಾಗಿದ್ದ ಆಂಡಿ ಗ್ರೋವ್ ೨೦೦೪ರ ಹೊತ್ತಿಗೆ ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ಬೃಹತ್ ಏರೋಪ್ಲೇನ್ ಕೈಗಾರಿಕೆಗಳವರೆಗೆ ಎಲ್ಲವೂ ಇಂಟರ್‌ನೆಟ್‌ ಮೇಲೆ ಅವಲಂಭಿಸಬೇಕಾಗುತ್ತದೆ ಎಂದಾಗ ಆತನ ಮಾತನ್ನು ಎಲ್ಲರೂ ಅಪಹಾಸ್ಯ ಮಾಡಿದ್ದರು. ಇಂಟರ್‌ನೆಟ್‌ಒಂದು ಆಧುನಿಕ ಫ್ಯಾಶನ್ ಆಗದೆ ವಿದ್ಯುಚ್ಛಕ್ತಿ ಅಥವಾ ದೂರವಾಣಿಯಂತೆ ಒಂದು ಅತ್ಯಂತ ಅವಶ್ಯಕ ಮಾಧ್ಯಮವಾಗುವುದೆಂದು ಗ್ರೋವ್ ನಂಬಿದ್ದ. ಹೇಗೆ ವಿದ್ಯುತ್ ಅಥವಾ ದೂರವಾಣಿ ಇಲ್ಲದೆ ಇಂದು ಯಾವುದೇ ವ್ಯಾಪಾರ ವಹಿವಾಟು ಸಾಧ್ಯವಿಲ್ಲವೋ ಅದೇ ರೀತಿ ಇಂಟರ್‌ನೆಟ್‌ಇಲ್ಲದೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸುವುದು ಸಾಧ್ಯವಿಲ್ಲವೆಂಬುದು ಆತನ ಅನಿಸಿಕೆಯಾಗಿತ್ತು.  ವ್ಯಾಪಾರ ವಹಿವಾಟು ಮಾತ್ರವಲ್ಲ ಇಂಟರ್‌ನೆಟ್‌ಮಾಹಿತಿ ಒದಗಿಸುವ ದಿಕ್ಕಿನಲ್ಲಿ ಕ್ರಾಂತಿಯೇ ಉಂಟು ಮಾಡಿದೆ.

ಅದೇ ರೀತಿಯೇ ಸಂವಹನ ಮಾಧ್ಯಮಗಳಲ್ಲೂ ಕ್ರಾಂತಿಯಾಗುತ್ತಿದೆ. ಸಂವಹನ ಮಾಧ್ಯಮಗಳಲ್ಲಿ ಎರಡು ರೀತಿಯ ತಂತ್ರಜ್ಞಾನವಿದೆಯೆಂದು ಜಾನ್ ನಾಟನ್ ಹೇಳುತ್ತಾನೆ. ಒಂದು ‘ತಳ್ಳು’ (Push) ಮತ್ತೊಂದು ‘ಎಳೆ’ (Pull) ತಂತ್ರಜ್ಞಾನ. ಈಗ ಇರುವ ದೂರದರ್ಶನ ತಂತ್ರಜ್ಞಾನ ‘ತಳ್ಳು’ವ ಮಾಧ್ಯಮ, ಅಂದರೆ, ಆಯಾ ಚಾನೆಲ್ ನವರು ಬಿತ್ತರಿಸುವ (ತಳ್ಳುವ) ಕಾರ್ಯಕ್ರಮಗಳನ್ನಷ್ಟೇ ನಾವು ನೋಡಬೇಕು. ಆದರೆ ಇಂಟರ್‌ನೆಟ್‌ ಒಂದು ‘ಎಳೆ’ ಯುವ ಮಾಧ್ಯಮ. ಅಂದರೆ, ಬೇಕಾದನ್ನು ನಾವು ‘ಎಳೆದು’ ಪಡೆದುಕೊಳ್ಳಬಹುದು; ಆಯ್ಕೆ ನಮ್ಮ ಕೈಯಲ್ಲಿರುತ್ತದೆ.

ಇದು ಮುದ್ರಣ ಮತ್ತು ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಈ ಕ್ಷೇತ್ರಗಳಲ್ಲಿನ ಇಂಟರ್‌ನೆಟ್‌ನ ಪರಿಣಾಮ ಹಾಗೂ ಪ್ರಭಾವ ಈಗಷ್ಟೇ ಪ್ರಾರಂಭವಾಗಿದೆ. ಇಂಟರ್ ನೆಟ್ ನಲ್ಲಿ ವೃತ್ತ ಪತ್ರಿಕೆಗಳು ಹಾಗೂ ಡಿಜಿಟಲ್ ರೂಪದ ಪುಸ್ತಕಗಳು ಲಭಿಸಲು ಪ್ರಾರಂಭವಾದಾಗ ಮುದ್ರಣರೂಪದ ವೃತ್ತ ಪತ್ರಿಕೋದ್ಯಮ ಹಾಗೂ ಪುಸ್ತಕೋದ್ಯಮವನ್ನು ಮುಚ್ಚ ಬೇಕಾಗುತ್ತದೆಂದು ಎಲ್ಲರೂ ಊಹಿಸಿದರು. ಆದರೆ ಪರಿಸ್ಥಿತಿ ಹಾಗಾಗಲಿಲ್ಲ. ಇವೆರಡು ಇನ್ನೂ ಸದೃಢವಾಗಿಯೇ ಬೆಳೆಯುತ್ತಿವೆ.

ಪುಸ್ತಕಗಳನ್ನು ಡಿಜಿಟೀಕೃತಗೊಳಿಸಿ. ಅವು ವೆಬ್‌ನಲ್ಲಿ ಸಿಗುವಂತೆ ಮಾಡುವ ಪ್ರಯತ್ನಗಳು ೧೯೭೦ರಿಂದಲೂ ನಡೆಯುತ್ತಿವೆ. ೫೦.೦೦೦ಕ್ಕೂ ಹೆಚ್ಚು ಕಾಪಿರೈಟ್ ಇಲ್ಲದ ಪುಸ್ತಕಗಳು ಉಚಿತವಾಗಿ ವೆಬ್‌ನಲ್ಲಿ ಸಿಗುತ್ತವೆ. ಅದೇ ರೀತಿ ಕಾಪಿರೈಟ್ ಇರುವಂತಹ ಪುಸ್ತಕಗಳನ್ನೂ ಸಹ ಕದ್ದು ಮುಚ್ಚಿ ಅಪ್ ಲೋಡ್ ಮಾಡಿರುತ್ತಾರೆ. ಉತ್ತರ ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾನಿಲಯವು ತನ್ನ ಗ್ರಂಥಾಲಯದ ಆನ್ ಲೈನ್ ಅವೃತ್ತಿಯನ್ನು ವೆಬ್‌ನಲ್ಲಿ ಹೊಂದಿದ್ದು (ವೆಬ್ ವಿಳಾಸ : http://chla.library.cornell.edu/c/chla/browse/a.html) ಅದರಲ್ಲಿ ೧೬೨೩ರಿಂದ ೧೯೯೯ರವರೆಗೆ ತನ್ನಲ್ಲಿರುವ ಎಲ್ಲಾ ಕೃಷಿ ವೈಜ್ಞಾನಿಕ ಇಂಗ್ಲಿಶ್ ಪುಸ್ತಕಗಳನ್ನು ಕೃಷಿ ಪತ್ರಿಕೆಗಳನ್ನು ಸಮಗ್ರವಾಗಿ ಮೊದಲನೆಯ ಪುಟದಿಂದ ಕೊನೆಯ ಪುಟದವರೆಗೂ ಡಿಜಿಟಲ್ ರೂಪದಲ್ಲಿ ಹೊಂದಿದೆ.

ಇಂಟರ್‌ನೆಟ್‌ಜಗತ್ತಿನ ಸಾಧ್ಯತೆಗಳನ್ನು ನಾವು ಇನ್ನೂ ಏನೇನನ್ನೂ ನೋಡಿಲ್ಲ. ಈ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ನಾವು ಊಹಿಸಲೂ ಸಾಧ್ಯವಾಗದಷ್ಟು ಮಹತ್ತರ ಬದಲಾವಣೆಗಳಾಗಲಿವೆ. ಇವೆಲ್ಲ ಕೃಷಿ ಸಾಹಿತ್ಯಕ್ಕೂ ಅನ್ವಯಿಸುತ್ತವೆ. ರೈತರಿಗೆ ಬೇಕಾದ ಮಾಹಿತಿ ಸಿಗುತ್ತಿಲ್ಲವೆಂದು ರೈತರು ಕೊರಗುವ ಬದಲು ಅವರೇ ಇಂಟರ್‌ನೆಟ್‌ನಿಂದ ಬೇಕಾದ ಮಾಹಿತಿಯನ್ನು ಬೇಕಾದ ಸಮಯದಲ್ಲಿ ಪಡೆಯಬಹುದು.

ಆದರೆ ಭಾರತದಂತಹ ದೇಶದಲ್ಲಿ, ಬಹುಪಾಲು ರೈತರೆಲ್ಲ ಅನಕ್ಷರಸ್ಥರಾಗಿರುವಾಗ ಇಷ್ಟೆಲ್ಲ ಸಾಧ್ಯತೆಗಳು ನೆರವೇರಲು ಇನ್ನೂ ಬಹಳ ಸಮಯ ಬೇಕಾಗಬಹುದು. ಅದೇ ರೀತಿ ತಂತ್ರಜ್ಞಾನವೂ ಸಹ ಸರಳವಾಗುತ್ತಿದೆ. ಇಂದು ಹಳ್ಳಿಹಳ್ಳಿಗೂ ಮೊಬೈಲ್, ಸ್ಯಾಟೆಲೈಟ್, ಡಿಶ್, ಡಿ.ವಿ.ಡಿ ಪ್ಲೇಯರ್ ಗಳು, ಇಂಟರ್‌ನೆಟ್‌ಕಿಯೋಸ್ಕ್ ಗಳು ಕಾಲಿಟ್ಟಿವೆ. ಅನಕ್ಷರಸ್ಥರೂ ಬಳಸಬಹುದಾದ, ಧ್ವನಿ ಆಧಾರಿತ, ಸರಳ ಕಂಪ್ಯೂಟರ್ ಗಳು ಬರಲಿವೆ. ದೂರದರ್ಶನ, ಟೆಲಿಫೋನ್ ಮತ್ತು ಕಂಪ್ಯೂಟರ್ ಗಳನ್ನು ಸಂಯೋಜಿಸಿ ಒಂದೇ ಸಾಧನವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ.