ವಿಶ್ವದ ಮೊಟ್ಟಮೊದಲ ಕೃಷಿ ಪತ್ರಿಕೆ ಫ್ರಾನ್ಸ್‌ನ ಪ್ಯಾರಿಸ್ಸಿನಲ್ಲಿ ೧೭೬೩ರಲ್ಲಿ ಪ್ರಕಟವಾಯಿತು. ಅದರ ಹೆಸರು ‘ಅಗ್ರಿಕಲ್ಚರ್ ದ ಫ್ರಾನ್ಸ್’ (Agriculture De France). ಆನಂತರ ೧೮೪೦ರಲ್ಲಿ ಉತ್ತರ ಅಮೆರಿಕಾದಲ್ಲಿ ‘ಸೆನ್ಸಸ್ ಅಗ್ರಿಕಲ್ಚರ್’ (Census Agriculture) ಎಂಬ ಪತ್ರಿಕೆ ಪ್ರಕಟವಾಯಿತು. ೧೯ನೆಯ ಶತಮಾನದಲ್ಲಿ ಇಂಗ್ಲಿಶ್ ಕೃಷಿ ಸಾಹಿತ್ಯ ಹೆಚ್ಚೆಚ್ಚು ಪ್ರಕಟವಾಗಲು ಪ್ರಾರಂಭವಾಯಿತು. ಮೊದಮೊದಲು ಕಡಿಮೆಯಿದ್ದರೂ ೧೯ನೆಯ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ಕೃಷಿ ಪದ್ಧತಿಗಳಲ್ಲಿ ಬದಲಾವಣೆಗಳಾದಂತೆ ಹೆಚ್ಚೆಚ್ಚು ಸಾಹಿತ್ಯ ಪ್ರಕಟವಾಗಲಾರಂಭಿಸಿತು.

ಭಾರತದಲ್ಲಿ ಪ್ರಕಟವಾದ ಮೊಟ್ಟಮೊದಲ ಕೃಷಿ ಪತ್ರಿಕೆ, ೧೯೧೪ರಲ್ಲಿ ಪ್ರಕಟವಾದ ಹಿಂದಿಯ ‘ಕೃಷಿ ಸುಧಾರ್’ ಹಾಗೂ ಎರಡನೆಯ ಪತ್ರಿಕೆ ಬಹುಶಃ ೧೯೨೪ರಲ್ಲಿ ಪ್ರಕಟವಾದ ಕನ್ನಡದ ‘ಮೈಸೂರು ವ್ಯವಸಾಯ ಶೋಧಕರ ಸಂಘದ ಪತ್ರಿಕೆ’. ೧೯೩೧ರ ನಂತರ ಇಲಾಖೆಗಳು ಕೃಷಿ ಪತ್ರಿಕೆಗಳನ್ನು ಪ್ರಕಟಿಸಲು ಪ್ರಾರಂಭಿಸಿದವು. ೧೯೩೮ರಲ್ಲಿ ಬಿಹಾರ್ ಸರ್ಕಾರ ‘ಗಾಂವ್’ ಎನ್ನುವ ಪತ್ರಿಕೆ ಪ್ರಕಟಿಸಲು ಪ್ರಾರಂಭಿಸಿತು ಹಾಗೂ ೧೯೪೮ರಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ‘ಖೇತಿ’ ಎನ್ನುವ ಪತ್ರಿಕೆ ಪ್ರಕಟಿಸಲು ಪ್ರಾರಂಭಿಸಿತು.

ಕಳೆದ ಒಂದೆರಡು ದಶಕಗಳಿಂದ ಕೃಷಿ ಪತ್ರಿಕೋದ್ಯಮ ಹಾಗೂ ಕೃಷಿ ಸಾಹಿತ್ಯ ರಚನೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕೃಷಿ ಸಂಶೋಧನೆಗೆ ಬೆಂಬಲ ನೀಡುವುದರ ಜೊತೆಗೆ ರೈತರಿಗೆ ಕೃಷಿಯ ಹೊಸ ತಂತ್ರಜ್ಞಾನಗಳ ಬಗೆಗೆ, ಪರಿಸರದ ಬಗೆಗೆ, ಜಾಗತಿಕ ಕೃಷಿ ಆಗುಹೋಗುಗಳ ಬಗೆಗೆ ಅರಿವು ನೀಡಲು ಪ್ರಯತ್ನಿಸುತ್ತದೆ, ಕೃಷಿ ವಿಜ್ಞಾನದ ಸರಳೀಕರಣಕ್ಕೆ ಪ್ರಯತ್ನಿಸುತ್ತದೆ. ಈ ಸರಳೀಕರಣದ ಉದ್ದೇಶವೇ ಕೃಷಿ ವಿಜ್ಞಾನ ಹೆಚ್ಚು ಉಪಯುಕ್ತವಾಗಲೆಂಬುದು. ಕೃಷಿ ವಿಜ್ಞಾನದಲ್ಲಿ ಮಹತ್ತರ ಸಾಧನೆಗಳಾಗಿವೆ. ಅವು ತಲುಪಬೇಕಾದವರಿಗೆ ತಲುಪದಿದ್ದಲ್ಲಿ ಅವು ನಿಷ್ಪ್ರಯೋಜಕ. ಕೃಷಿ ಸಾಹಿತಿ ಅಥವಾ ಪತ್ರಿಕಾ ವರದಿಗಾರನಾಗಲೆಂಬುದು. ರೈತರ ದೃಷ್ಟಿಕೋನದಿಂದ ಬರೆಯುವುದನ್ನು ರೂಢಿಸಿಕೊಳ್ಳಬೇಕು. ರೈತನಂತೆ ಆಲೋಚಿಸಿ ಬರೆಯಬೇಕೇ ಹೊರತು ವಿಜ್ಞಾನಿಯಂತಲ್ಲ. ಅಂತಹ ಬರಹವನ್ನು ರೈತ ಸುಲಭವಾಗಿ ಅರ್ಥಮಾಡಿಕೊಳ್ಳುವಂತಿರಬೇಕು. ಉತ್ತರ ಅಮೆರಿಕಾದಲ್ಲಿ ೧೯ನೇ ಶತಮಾನದ ಪ್ರಾರಂಭದಿಂದಲೇ (೧೮೦೦) ಕೃಷಿ ಪತ್ರಿಕೆಗಳಲ್ಲಿ ರೈತರು ಆಸಕ್ತಿ ತೋರಿದ್ದಾರೆ.

ಹಸಿರು ಕ್ರಾಂತಿಯ ಪ್ರಾರಂಭವು ಕೃಷಿ ಸಂವಹನೆಗೆ ಇನ್ನೂ ಹೆಚ್ಚು ಒತ್ತು ಕೊಟ್ಟಿತು. ಸಂವಹನೆಯ ವಿಧಾನ ಮತ್ತು ಧ್ಯೇಯೋದ್ದೇಶಗಳು ಆಧುನಿಕ ಕೃಷಿಯ ಆದ್ಯತೆಗಳನುಸಾರ ಬದಲಾಗುತ್ತಾ ಹೋಯಿತು. ಪರಿಸ್ಥಿತಿ ಹೀಗಿರುವಾಗ ಕೃಷಿ ಪತ್ರಿಕೋದ್ಯಮ ಬದಲಾವಣೆಯ ಒಂದು ಪ್ರಮುಖ ಅಂಗವಾಗಿದೆ. ಇಂದು ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ವಯಂಸೇವಾ ಸಂಸ್ಥೆಗಳು, ವ್ಯಾಪಾರಿ ಸಂಸ್ಥೆಗಳು ಕೃಷಿ ಪತ್ರಿಕೆಗಳನ್ನು ಪ್ರಕಟಿಸುತ್ತಿವೆ. ಉದಾ: ಕಾಫೀ ಮಂಡಳಿ, ಸಾಂಬಾರ ಮಂಡಳಿ, ರಬ್ಬರ್ ಮಂಡಳಿ, ತೆಂಗು ಅಭಿವೃದ್ಧಿ ಮಂಡಳಿ, ಕೇಂದ್ರ ರೇಷ್ಮೆ ಮಂಡಳಿ, ಟೀ ಮಂಡಳಿ, ರಾಷ್ಟ್ರೀಯ ತೋಟಗಾರಿಕಾ ಮಂಡಳಿ, ಕೃಷಿ ವಿಶ್ವವಿದ್ಯಾಲಯಗಳು, ಜಲಾನಯನ ಅಭಿವೃದ್ಧಿ ಸಂಸ್ಥೆಗಳು. ಇಂದು ಮಲಯಾಳಂನ ‘ಕರ್ಶಕಾರೀ-ಮಲಯಾಳ ಮನೋರಮಾ ಗ್ರೂಪ್ ನ ಪ್ರಕಟಣೆ ೪೦,೦೦೦ ಪ್ರತಿಗಳು ಹಾಗೂ ರಾಷ್ಟ್ರ ದೀಪಿಕಾ ಲಿ., ನವರ ಕರ್ಶಕನ್ ೨೮,೦೦೦ ಪ್ರತಿಗಳು ಪ್ರಕಟವಾಗುತ್ತಿವೆ.

ಕೋಲ್ಮನ್ ರವರು ೧೯೧೮ರಲ್ಲಿ ಪ್ರಾರಂಭಿಸಿ ಮೈಸೂರು ವ್ಯವಸಾಯ ಶೋಧಕ ಸಂಘವು ಹೊರತಂದ ‘ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ’ ಕನ್ನಡದ ಮೊಟ್ಟಮೊದಲ ಕೃಷಿ ನಿಯತಕಾಲಿಕ. ಮೈಸೂರು ವ್ಯವಸಾಯ ಶೋಧಕ ಸಂಘವು ೧೯೫೪ರಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದೊಂದಿಗೆ ವಿಲೀನವಾಗಿ ಕರ್ನಾಟಕ ವ್ಯವಸಾಯ ಪತ್ರಿಕೆಯಾಗಿ ನಿರಂತರವಾಗಿ ಪ್ರಕಟವಾಗುತ್ತಿದೆ.

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೃಷಿ ಪತ್ರಿಕೋದ್ಯಮ ಒಂದು ಉದ್ಯಮವಾಗಿ ನೆಲೆಯೂರಿದೆ. ಇಂದು ಕನ್ನಡದಲ್ಲಿ ೧೭ರಿಂದ ೨೫ ಕೃಷಿ ಪತ್ರಿಕೆಗಳಿವೆ. ನಾಯಿಕೊಡೆಗಳಂತೆ ಕೃಷಿ ಪತ್ರಿಕೆಗಳು ಹುಟ್ಟುಕೊಳ್ಳುತ್ತವೆ ಹಾಗೂ ಕೆಲಸಮಯದ ನಂತರ ಹಾಗೆಯೇ ಕಣ್ಮರೆಯಾಗುತ್ತವೆ. ಪ್ರಕಟವಾಗುತ್ತಿರುವ ಕೃಷಿ ಪತ್ರಿಕೆಗಳಲ್ಲಿ ೬ ಮಾತ್ರ ೫೦೦೦ಕ್ಕಿಂತ ಹೆಚ್ಚಿನ ಪತ್ರಿಕೆಗಳನ್ನು, ೬ ಪತ್ರಿಕೆಗಳು ೨೦೦೦-೫೦೦೦ ಪ್ರತಿಗಳನ್ನು ಹಾಗೂ ಇನ್ನುಳಿದವು ೨೦೦೦ಕ್ಕಿಂತ ಕಡಿಮೆ ಪ್ರತಿಗಳನ್ನು ಮುದ್ರಿಸುತ್ತವೆ. ಕೃಷಿ ವಿಶ್ವವಿದ್ಯಾನಿಲಯಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು. ಹಲವಾರು ಖಾಸಗಿ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಕೃಷಿ ಪತ್ರಿಕೆಗಳನ್ನು ಪ್ರಕಟಿಸುತ್ತಿವೆ. ಪ್ರಸ್ತುತ ಪ್ರಕಟವಾಗುತ್ತಿರುವ ಪ್ರಮುಖ ಕೃಷಿ ಪತ್ರಿಕೆಗಳನ್ನು ಕೋಷ್ಟಕ ೭ರಲ್ಲಿ ಕೊಡಲಾಗಿದೆ.

ಸರ್ಕಾರದ ಇಲಾಖೆಗಳ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಪ್ರಕಟಣೆಗಳು ಪ್ರಾರಂಭವಾದಾಗಿನಿಂದ ಇಂದಿಗೂ ವಿಸ್ತರಣಾ ಕರಪತ್ರಗಳಂತೆ, ಶೈಕ್ಷಣಿಕ ರೂಪದ ಪ್ರಕಟಣೆಗಳಾಗಿವೆ ಹಾಗೂ ಸಂಶೋಧನೆಯಲ್ಲಿ ಸಿಕ್ಕಿ ಫಲಿತಾಂಶಗಳಂತೆ ಅಂಕಿ ಅಂಶಗಳಿಂದ ಕೂಡಿರುತ್ತವೆ. ಅಲ್ಲದೆ ಅವು ಒಂದು ರೀತಿಯಲ್ಲಿ ಏಕಮುಖ ಪ್ರಕಟಣೆಗಳು, ತಮ್ಮ ಅಭಿಪ್ರಾಯಗಳನ್ನು ಮಾತ್ರ ತಿಳಿಸುತ್ತವೆ, ರೈತರ ಅನಿಸಿಕೆ, ಅನುಭವದ ಪತ್ರಿಕೆಗಳಿಗೆ ಅಲ್ಲಿ ಹೆಚ್ಚಿನ ಸ್ಥಾನವೇ ಇರುವುದಿಲ್ಲ.

ಇತರ ಜ್ಞಾನಶಿಸ್ತುಗಳಂತೆ ಕೃಷಿ ಪತ್ರಿಕೋದ್ಯಮದಲ್ಲಿ ಅದರ ರೂಪ ಮತ್ತು ಒಳಾಂಶಗಳಲ್ಲಿ ವಾಸ್ತವಿಕ ವಿಷಯಗಳ ಬಗೆಗೆ ವಸ್ತುನಿಷ್ಠ ವಿಶ್ಲೇಷಣೆಗೆ ಹೆಚ್ಚು ಆಸ್ಪದ ಕೊಡುವುದಿಲ್ಲ. ಈ ರೀತಿಯ ವಿಶ್ಲೇಷಣಾರಹಿತ ವಿಧಾನದಲ್ಲಿ ಕೆಲವು ಅನುಕೂಲಗಳಿದ್ದರೂ ಹೆಚ್ಚು ತಟಸ್ಥ ಮನೋಭಾವವಿರುತ್ತದೆ. ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳ ಬಳಕೆ ಕೃಷಿಕನಿಗೆ ಸುಲಭವಾಗಿ ಅರ್ಥವಾಗುವ ಭಾಷೆಯ ಮಟ್ಟಕ್ಕೆ ಇಳಿದಿರುವುದಿಲ್ಲ. ಇದರಿಂದಾಗಿ ವಾಸ್ತವಾಂಶಗಳನ್ನು ವಾಸ್ತವಾಂಶಗಳನ್ನಾಗಿಯೇ ಪ್ರಕಟಿಸಿದರೂ ರೈತರು ಅದನ್ನು ಅರ್ಧಸತ್ಯವೆಂದು ಗ್ರಹಿಸುತ್ತಾರೆ. ಶಿವರಾಂ ಪೈಲೂರ್ ರವರು ಹೇಳುವಂತೆ, ‘ಈ ಸುಂದರ ಅರ್ಧ ಸತ್ಯಕ್ಕೆ ಆಕರ್ಷಿತರಾಗುವ ರೈತರು ಇನ್ನುಳಿದ ಅರ್ಧವನ್ನು ತಾವೇ ಅರಸುವ ಹಾಗೂ ಅರ್ಥೈಸಿಕೊಳ್ಳುವ ಪ್ರಯತ್ನಕ್ಕೆ ತೊಡಗಬೇಕಾಗುತ್ತದೆ. ಸಾಮಾನ್ಯವಾಗಿ ಈ ಇನ್ನುಳಿದ ಅರ್ಧ ಕಹಿಯಾದುದು ಹಾಗೂ ಹತಾಶೆ ತಂದುಕೊಡುವಂಥದೂ ಆಗಿರುತ್ತದೆ.’ ದೇಶೇ ಜ್ಞಾನ ಪರಂಪರೆಯನ್ನು, ಗ್ರಾಮೀಣ ಸಂಸ್ಕೃತಿಯನ್ನು ಹಾಗೂ ರೈತರ ಆಸಕ್ತಿಯನ್ನು ಮತ್ತು ಗ್ರಹಿಕೆಯನ್ನು ಕಡೆಗಣಿಸಿರುವ ಕೃಷಿ ಪತ್ರಿಕೋದ್ಯಮ ಇಂದು ದುರ್ಬಲವಾಗಿದೆ. ಬಹುಪಾಲು ಕೃಷಿ ಪತ್ರಿಕೆಗಳಲ್ಲಿ ಬರುವ ಲೇಖನಗಳು ಇಂದು ಇಂಗ್ಲಿಷ್ ಲೇಖನಗಳ ಅನುವಾದಗಳು, ಪುಸ್ತಕಗಳಿಂದ ಆಯ್ದ ಭಾಗಗಳು, ಒಬ್ಬನೇ ಲೇಖಕ ಹಲವಾರು ಪತ್ರಿಕೆಗಳಿಗೆ ಬರೆದ, ಕೊಂಚ ಬದಲಾಯಿಸಿದ ಲೇಖನಗಳಾಗಿರುತ್ತವೆ. ಅವು ಯಾರಿಗಾಗಿ ಉದ್ದೇಶಿಸಿ ಬರೆದದ್ದಾಗಿರುತ್ತದೆಯೋ ಅಂಥವರಿಗೆ ಅವು ಯಾವ ರೀತಿಯಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ.

ಕೃಷಿಯ ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಹಲವಾರು ಕೃಷಿಯ ಪೂರಕ ಉದ್ದಿಮೆಗಳು ಹುಟ್ಟಿಕೊಳ್ಳುತ್ತಿವೆ. ಈ ಎಲ್ಲ ಅವಕಾಶಗಳಿಂದಾಗಿ ಜಾಹೀರಾತಿನಿಂದ ಸಿಗುವ ಆದಾಯವೂ ಸಹ ಗಣನೀಯವಾಗಿರುವುದರಿಂದ ‘ವ್ಯಾಪಾರೀ’ ಕೃಷಿ ಪತ್ರಿಕೆಗಳು ಪ್ರಕಟವಾಗುತ್ತಿವೆ. ಅವುಗಳ ಉದ್ದೇಶ ರೈತರಿಗೆ ಯಾವುದೇ ಮಾಹಿತಿ ಅಥವಾ ತಿಳಿವಳಿಕೆ ನೀಡುವುದಿಲ್ಲ. ಬದಲಿಗೆ ಜಾಹೀರಾತುಗಳನ್ನು ಪ್ರಕಟಿಸಿ ಹಣ ಸಂಪಾದಿಸಿಕೊಳ್ಳುವುದೇ ಆಗಿದೆ. ಕನ್ನಡ ಬಾರದವರೂ ಸಹ ಕನ್ನಡ ಕೃಷಿ ಪತ್ರಿಕೆಗಳ ಸಂಪಾದಕರಾಗಿದ್ದಾರೆ ಹಾಗೂ ನೆರೆಹೊರೆಯ ರಾಜ್ಯಗಳಿಂದಲೂ ಸಹ ಕನ್ನಡ ಕೃಷಿ ಪತ್ರಿಕೆಗಳು ಪ್ರಕಟವಾಗುತ್ತಿವೆ.

ಕೋಷ್ಟಕ : ಕನ್ನಡದ ಕೆಲವು ಪ್ರಮುಖ ಕೃಷಿ ಪತ್ರಿಕೆಗಳು

ಕ್ರ.ಸಂ. ಪತ್ರಿಕೆ ನಿಯತಕಾಲಿಕತೆ ಪ್ರಕಾಶಕರು
೧. ಕೃಷಿ ವಿಜ್ಞಾನ ತ್ರೈಮಾಸಿಕ ಕೃಷಿ.ವಿ., ಬೆಂಗಳೂರು
೨. ಕೃಷಿ ಮುನ್ನಡೆ ತ್ರೈಮಾಸಿಕ ಕೃಷಿ ವಿ.ವಿ., ಧಾರವಾಡ
೩. ಜಲ ಸಂವರ್ಧನೆ
ವಾರ್ತಾ ಪತ್ರ
ಮಾಸಿಕ ಜಲಸಂವರ್ಧನೆ ಯೋಜನೆ ಸಂಘ, ಬೆಂಗಳೂರು.
೪. ಸ್ಪೈಸ್ ಇಂಡಿಯ ಮಾಸಿಕ ಸ್ಪೈಸ್ ಮಂಡಳಿ, ಎರ್ನಾಕುಲಂ
೫. ಕರ್ನಾಟಕ ವ್ಯವಸಾಯ ಮಾಸಿಕ ಪತ್ರಿಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಂಗಳೂರು (ಮೊದಲಿಗೆ ಮೈಸೂರು ವ್ಯವಸಾಯ ಶೋಧಕರ ಸಂಘದ ಪತ್ರಿಕೆ)
೬. ಅಡಿಕೆ ಪತ್ರಿಕೆ ಮಾಸಿಕ ಫಾರ್ಮರ್ಸ್ ಫಸ್ಟ್ ಟ್ರಸ್ಟ್, ಪುತ್ತೂರು.
೭. ಸುಜಾತ ಸಂಚಿಕೆ ಮಾಸಿಕ ಮಂಗಳೂರು.
೮. ಹಿತ್ತಲಗಿಡ ಚಾತುರ್ಮಾಸಿಕ ಬೆಂಗಳೂರು.
೯. ವಾಯ್ಸ್ ಆಫ್ ಫಾರ್ಮರ್ ಮಾಸಿಕ ಬೆಂಗಳೂರು.
೧೦. ಕೃಷಿ ಬೆಳಕು ದ್ವೈಮಾಸಿಕ ತರೀಕೆರೆ
೧೧. ಇಂಡಿಯನ್ ಕಾಫಿ ಮಾಸಿಕ ಕಾಫಿಮಂಡಳಿ, ಬೆಂಗಳೂರು.
೧೨. ಕೃಷಿಕ ಬಂಧು ಮಾಸಿಕ ವಸುಂಧರ ಪಬ್ಲಿಕೇಷನ್ಸ್, ಹೈದರಾಬಾದ್.
೧೩. ಕ್ಷೀರಸಾಗರ ಮಾಸಿಕ ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಂಡಳಿ ಬೆಂಗಳೂರು.
೧೪. ಐಶ್ವರ್ಯ ಕನ್ನಡನಾಡು ಮಾಸ ಪತ್ರಿಕೆ ವಡಮಲೈ ಮೀಡಿಯ ಪ್ರೈ. ಲಿ., ಬೆಂಗಳೂರು.
೧೫. ಅಗ್ರೋ ಇಂಡಿಯಾ ತ್ರೈಮಾಸಿಕ ಬೆಂಗಳೂರು.
೧೬. ಸಹಜ ಸಾಗುವಳಿ ದ್ವೈಮಾಸಿಕ ಸಾಂಸ್ಕೃತಿಕ ಸಂಶೋಧನೆ ಮತ್ತು ಕ್ರಿಯಾ ಸಂಸ್ಥೆ, ಬೆಂಗಳೂರು.
೧೭. ರೇಷ್ಮೆ ದರ್ಪಣ ತ್ರೈಮಾಸಿಕ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
೧೮. ಕೃಷಿ ಪೇಟೆ ಮಾಸಿಕ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ.

ಪುತ್ತೂರಿನ ‘ಫಾರ್ಮರ್ಸ್ ಫಸ್ಟ್’ ಎಂಬ ಟ್ರಸ್ಟ್ ‘ಕೃಷಿಕರ ಕೈಗೆ ಲೇಖನಿ’ ಎಂಬ ಶಿಬಿರಗಳನ್ನು ನಡೆಸಿ ರೈತರೇ ಕೃಷಿ ಬರಹಗಳನ್ನು ಬರೆಯುವಂತೆ ಉತ್ತೇಜಿಸುತ್ತದೆ. ‘ಫಾರ್ಮರ್ಸ್ ಫಸ್ಟ್’ ನ ಅಧ್ಯಯನದಂತೆ, ಕೃಷಿಕ ಹಾಗೂ ಸಾಹಿತಿಗಳಾಗಿದ್ದ ಪೂರ್ಣಚಂದ್ರ ತೇಜಸ್ವಿಯವರ ಹಾಗೂ ಬದಲಿ ಕೃಷಿ ಮಾಧ್ಯಮ ಕೇಂದ್ರದ ನಿರ್ದೇಶಕರಾಗಿರುವ ಶಿವರಾಂ ಪೈಲೂರರ ಕನ್ನಡ ಕೃಷಿ ಮಾಧ್ಯಮ ಕೇಂದ್ರದ ನಿರ್ದೇಶಕರಾಗಿರುವ ಶಿವರಾಂ ಪೈಲೂರರ ಕನ್ನಡ ಕೃಷಿ ಪತ್ರಿಕೆಗಳ ಅವಲೋಕನ ಈ ಮುಂದಿನ ಅಂಶಗಳನ್ನು ಹೊರಗೆಡವಿದೆ:

೧. ಬಹುಪಾಲು ಕೃಷಿ ಪತ್ರಿಕೆಗಳು ರೈತರಿಗೆ ಅವಶ್ಯಕವಿರುವ ಮಾಹಿತಿಯನ್ನು ಒದಗಿಸುವುದಿಲ್ಲ.

೨. ಕೃಷಿ ಪತ್ರಿಕೆಗಳಲ್ಲಿ ವಿವರಿಸಿರುವ ಕೃಷಿ ಪದ್ಧತಿ ಅಥವಾ ವಿಧಾನಗಳನ್ನು ರೈತರ ಹೊಲಗದ್ದೆಗಳಲ್ಲಿ ಪರೀಕ್ಷಿಸಿರುವುದಿಲ್ಲ.

೩. ಬಹುಪಾಲು ಲೇಖನಗಳು ಯಾವುದೋ ಇಂಗ್ಲಿಶ್ ಲೇಖನದ ಅನುವಾದಗಳಾಗಿರುತ್ತವೆ ಅಥವಾ ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ವಿಜ್ಞಾನಿಗಳು ಒಂದೆರಡು ಲೇಖನಗಳು ಪ್ರಕಟವಾದಲ್ಲಿ ತಮ್ಮ ಪದೋನ್ನತಿಯಲ್ಲಿ ಅಂಕಗಳು ಸಿಗುತ್ತವೆನ್ನುವ ಕಾರಣಕ್ಕೆ ಹಳೆಯ ಸರಕನ್ನೇ ರೂಪ ಬದಲಿಸಿ ಒಂದೇ ಲೇಖನಕ್ಕೆ ನಾಲ್ಕೈದು ಜನರ ಹೆಸರನ್ನು ಸೇರಿಸಿ ಪ್ರಕಟಿಸುವ ಲೇಖನಗಳಾಗಿರುತ್ತವೆ.

೪. ರೈತರ ಅನುಭವ ಕಥನಗಳಿಗೆ ಅವುಗಳಲ್ಲಿ ಸ್ಥಾನವೇ ಇರುವುದಿಲ್ಲ.

೫. ಬಹುಪಾಲು ಲೇಖಕರಿಗೆ ರೈತರ ಅಥವಾ ಗ್ರಾಮೀಣ ಬದುಕಿನ ಅನುಭವವೇ ಇರುವುದಿಲ್ಲ. ತಾವು ತಿಳಿದಿರುವುದು ಹಾಗೂ ಬರೆದಿರುವುದೇ ಅಂತಿಮ ಸತ್ಯವೆಂಬ ಮನೋಭಾವ ಆ ಲೇಖನಗಳಲ್ಲಿ ವ್ಯಕ್ತವಾಗುತ್ತದೆ.

೬. ಅಂತಹ ಪತ್ರಿಕೆಗಳಲ್ಲಿ ಜಾಹೀರಾತಿಗೆ ಹೆಚ್ಚಿನ ಆದ್ಯತೆ.

೭. ಕೃಷಿ ವಿಶ್ವವಿದ್ಯಾನಿಲಯಗಳು ಪ್ರಕಟಿಸುವ ಕೃಷಿ ಪತ್ರಿಕೆಗಳು ನಿಯತಕಾಲಿಕೆಗಳಾದರೂ ನಿಯತವಾಗಿ ಪ್ರಕಟವಾಗುವುದಿಲ್ಲ ಹಾಗೂ ಬಹುಪಾಲು ರೈತರಿಗೆ ಅವು ಪ್ರಕಟವಾಗುವ ವಿಷಯವೇ ತಿಳಿದಿರುವುದಿಲ್ಲ ಮತ್ತು ಅವು ತೀರಾ ಕಡಿಮೆ ಸಂಖ್ಯೆಯಲ್ಲಿ ಪ್ರಕಟವಾಗುವುದರಿಂದ ಉದ್ದೇಶಿಸಿದವರನ್ನೆಂದೂ ಅವು ತಲುಪುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಕಟವಾಗುವ ಅಡಿಕೆ ಪತ್ರಿಕೆ ಈ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದೆ. ಕೃಷಿಕರ ಬೇಕು-ಬಯಕೆಗೆ ಸ್ಪಂದಿಸುವ, ಕೃಷಿಕರ ಹಿತ ಬಯಸುವ ಮಾಹಿತಿ ಕೊರತೆ ಬಹುಕಾಲದಿಂದಲೂ ಇದ್ದು, ಕೃಷಿಕರ ಸಂವಹನ ಅರ್ಥಪೂರ್ಣ ಹಾಗೂ ಉಪಯುಕ್ತ ಆಗಬೇಕಾದರೆ ಕೃಷಿಕರು ಓದುಗರಾಗಿ ಮಾತ್ರವಲ್ಲ, ಬರಹಗಾರರಾಗಿಯೂ ರೂಪು ಪಡೆಯಬೇಕೆಂಬ ಆಶಯದಿಂದ ಪುತ್ತೂರಿನ ‘ಫಾರ್ಮರ್ಸ್ ಫಸ್ಟ್’ ಎಂಬ ಟ್ರಸ್ಟ್ ‘ಕೃಷಿಕರ ಕೈಗೆ ಲೇಖನಿ’ ಎಂಬ ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ ಶಿಬಿರಗಳನ್ನು ನಡೆಸಿದೆ. ಕೃಷಿ ಪತ್ರಿಕೋದ್ಯಮ ತರಬೇತಿ ನೀಡುವ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಬದಲಿ ಕೃಷಿ ಮಾಧ್ಯಮ ಕೇಂದ್ರದ ನಿರ್ದೇಶಕರ ಪ್ರಕಾರ ಕೃಷಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಮಾಹಿತಿ ಸಂವಹನವನ್ನೂ ಮೀರಿ ರೈತರನ್ನು ತಲುಪಬೇಕಿದೆ. ಅಂದರೆ,

೧. ರೈತರಿಗಾಗಿ ಅವಶ್ಯಕತೆ ಆಧಾರಿತ ಸಂವಹನ ವ್ಯವಸ್ಥೆ ಇರಬೇಕು.

೨. ಕೃಷಿ ಸಂವಹನದಲ್ಲಿ ಬದಲಿ ಪ್ರಯತ್ನಗಳನ್ನು ಉತ್ತೇಜಿಸುವುದು.

೩. ರೈತರಲ್ಲಿ ಸ್ವ-ಸಹಾಯ ಪತ್ರಿಕೋದ್ಯಮವನ್ನು ಉತ್ತೇಜಿಸುವುದು.

೪. ರೈತರ ಮತ್ತು ಸರ್ಕಾರದ/ವಿಜ್ಞಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು.

೫. ರೈತರ ಅನ್ವೇಷಣೆ/ಸಂಶೋಧನೆ ಮತ್ತು ರೈತಪರ ವಿಷಯಗಳ ಮೇಲೆ ಕೇಂದ್ರೀಕರಿಸುವುದು.

೬. ಬದಲಿ ಕೃಷಿ ಮತ್ತು ಬದಲಿ ಕೃಷಿ ಮಾಧ್ಯಮಗಳ ಬಗೆಗೆ ಗ್ರಂಥಾಲಯವನ್ನು ಸ್ಥಾಪಿಸುವುದು ಮುಂತಾದುವು.