ಕೃಷಿವಿಜ್ಞಾನ ಸಾಹಿತ್ಯದ ಉಗಮ ಮತ್ತು ವಿಕಾಸವನ್ನು ಮೂರು ಹಂತಗಳಾಗಿ ವಿಭಜಿಸಿಕೊಂಡು ಅವಲೋಕಿಸಬಹುದು. ಈ ಕಾಲಘಟ್ಟಗಳಲ್ಲಿ ಕೃಷಿಯ ಚಾರಿತ್ರಿಕ, ರಾಜಕೀಯ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ತರ ಬದಲಾವಣೆಗಳಾಗಿವೆ.

. ಮೊದಲನೆಯ ಹಂತ೧೯ನೆಯ ಶತಮಾನದ ಅಂತ್ಯದಿಂದ ೧೯೪೭ರವರೆಗೆ

ಈ ಮೊದಲನೆಯ ಹಂತದಲ್ಲಿ ಕೃಷಿ ಕ್ಷೇತ್ರದ ಆಡಳಿತ ಹಾಗೂ ರಾಜಕೀಯ ರಂಗದಲ್ಲಿ ಮಹತ್ತರ ಬದಲಾವಣೆಗಳಾದುವು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಸಕ್ತಿಯಿಂದಾಗಿ ಪ್ರತ್ಯೇಕ ಕೃಷಿ ಇಲಾಖೆ ಸ್ಥಾಪಿತವಾಯಿತು. ಅವರ ಆಸಕ್ತಿಗೆ ಪೂರಕವಾಗಿ ಅವರೇ ನೇಮಿಸಿದ ಕೆನಡಾದ ಡಾ.ಲೆಸ್ಲಿ ಕೋಲ್‌ಮನ್ ರವರು ಕರ್ನಾಟಕದಲ್ಲಿ ಮೊಟ್ಟಮೊದಲ ಕೃಷಿ ಶಾಲೆ, ಆನಂತರ ಕೃಷಿ ಡಿಪ್ಲೊಮೊ ಶಿಕ್ಷಣ ಪ್ರಾರಂಭಿಸಿದರು. ಆನಂತರ ಕೃಷಿ ಕಾಲೇಜು ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳು ಪ್ರಾರಂಭವಾದುವು.

ಹತ್ತೊಂಬತ್ತನೆಯ ಶತಮಾನದ ಅಂತ್ಯದಿಂದಲೇ ಕನ್ನಡದಲ್ಲಿ ಕೃಷಿವಿಜ್ಞಾನ ಸಾಹಿತ್ಯದ ಪ್ರಕಟಣೆ ಪ್ರಾರಂಭವಾಗಿದೆಯೆನ್ನಬಹುದು. ವೈಯಕ್ತಿಕ ಪ್ರಕಟಣೆಗಳ ಜೊತೆಗೆ ಬಾಸೆಲ್ ಮಿಶನ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿಯವರು ತಮ್ಮ ಇತರ ಪ್ರಕಟಣೆಗಳ ಜೊತೆಗೆ ಕೃಷಿವಿಜ್ಞಾನ ಸಾಹಿತ್ಯದ ಪ್ರಕಟಣೆಯನ್ನೂ ಮಾಡಿದ್ದಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ೧೯೦೦ರವರೆಗೆ ಪ್ರಕಟವಾಗಿರುವ ಕೃಷಿ ಸಾಹಿತ್ಯದ ಕನ್ನಡ ಪ್ರಕಟಣೆಗಳನ್ನು ಕೋಷ್ಟಕ ೧ರಲ್ಲಿ ಕೊಡಲಾಗಿದೆ.

ಕನ್ನಡದ ಮೊದಲ ಕೃಷಿಗ್ರಂಥ

ಮಂಗಳೂರಿನ ಬಾಸೆಲ್ ಮಿಶನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿಯವರು ಗಣಪಯ್ಯ ಚಂದಾವರರ ಗೋ ವೃಷಭಾದಿಗಳ ಸಂರಕ್ಷಣ ವೈದ್ಯಾದಿಗಳ ಕ್ರಮವು ಎಂಬ ಕೃತಿಯನ್ನು ೧೮೭೭ರಲ್ಲೇ ಪ್ರಕಟಿಸಿದ್ದರೂ ಅದು ಜಾನುವಾರುಗಳ ರೋಗ ಚಿಕಿತ್ಸೆಯ ಬಗೆಗಿನ ಕೃತಿಯಾಗಿರುವುದರಿಂದ ಸುಮಾರು ೧೮೭೯ರಲ್ಲಿ ರಚಿತವಾದ ಶ್ರೀನಾಗಭೂಷಣ ಘನಮಠ ಶಿವಯೋಗಿಗಳ ಕೃಷಿಜ್ಞಾನ ಪ್ರದೀಷಿಕೆಯನ್ನು ಕನ್ನಡದ ಮೊಟ್ಟಮೊದಲ ಕೃಷಿ ಸಾಹಿತ್ಯವೆಂದು ಗುರುತಿಸಬಹುದು. ಬೇಸಾಯವೂ ಸಹ ಆಧ್ಯಾತ್ಮ ಬದುಕಿನ ಒಂದು ಭಾಗವೆಂದು ಅವರು ಪರಿಗಣಿಸಿದ್ದಿದ್ದರಿಂದಲೇ ಅವರಿಗೆ ಈ ಕೃತಿಯ ರಚನೆ ಸಾಧ್ಯವಾಗಿರಬಹುದು.

ಭೂಮಿಯು ಕಲ್ಪವೃಕ್ಷಕ್ಕೂ ಕಾಮಧೇನುವಿಗೂ ಚಿಂತಾಮಣಿಗೂ ಪರುಷದ ಕಣಿಗೂ ಸಮಾನವಾಗಿದೆ. ಇಂಥ ಭೂಮಿ ಇದ್ದು ಮನುಷ್ಯರುಗಳು ಕಾಯಶಕ್ತಿಯಿಂದಲೂ, ಬುದ್ಧಿಶಕ್ತಿಯಿಂದಲೂ, ದ್ರವ್ಯಶಕ್ತಿಯಿಂದಲೂ ಮೆಹನತು ಮಾಡಿ ಶ್ರಮಪಟ್ಟು, ಸಕಲ ಸಂಪತ್ತನ್ನು ದೊರಕಿಸಿಕೊಳ್ಳಬೇಕು. ಮೈಗಳ್ಳರಾಗಿ ದರಿದ್ರರಾಗಬಾರದು, ಮೈಗಳ್ಳತನವು ದಾರಿದ್ರ್ಯಕ್ಕೆ ಮುಖ್ಯ ಕಾರಣವಾಗಿದೆ

ಎಂದು ಒಂದನೆಯ ಪ್ರಕರಣದಲ್ಲೇ ಹೇಳಿದ್ದಾರೆ. ವೈಜ್ಞಾನಿಕ ವಿಶೇಷಣೆಯಿಂದಲ್ಲದಿದ್ದರೂ ಅನುಭಾವ ಮತ್ತು ಅನುಭವದ ಸಾರಾಮೃತದಿಂದ ಈ ಕೃತಿ ರಚಿತವಾಗಿದೆ. ಬೆಳೆಗಳ ಉತ್ಪಾದನೆಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ವಿವೇಚಿಸಿದ್ದಾರೆ. ಭೂಮಿ-ಅದರ ಮಹತ್ವ, ಹೊಲಗಳ ಆರೈಕೆ, ನಟ್ಟು ಕಡಿಸುವುದು, ಹೊಲದಲ್ಲಿ ಒಡ್ಡಿನ ಉಪಯುಕ್ತತೆ, ಗೊಬ್ಬರದ ಬಳಕೆ, ನೀರಾವರಿ ಬೇಸಾಯ, ಖುಷ್ಕಿ ಅಥವಾ ಒಣ ಬೇಸಾಯ ಮುಂತಾದ ವಿಷಯಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದರೆ. ಪ್ರತಿಯೊಂದು ವಿವರಣೆಯನ್ನೂ ಹರಿಕತೆಯಲ್ಲಿನ ಉಪಕತೆ, ದೃಷ್ಟಾಂತಗಳನ್ನು ಬಳಸುವಂತೆ ಬಳಸಿ ವಿವರಿಸಿದ್ದಾರೆ. ಅವರು ಗೊಬ್ಬರದ ಪ್ರಮುಖ್ಯತೆಯ ಬಗೆಗೆ ಹೇಳಿರುವ ಕತೆ ಅತ್ಯಂತ ಅಮೂಲ್ಯವಾದದ್ದು:

ಒಂದಾನೊಂದು ಗ್ರಾಮದಲ್ಲಿ ಒಬ್ಬ ಕೃಷಿಕನು ದೇವರನ್ನು ಕುರಿತು ಪ್ರಾರ್ಥನೆಯನ್ನು ಮಾಡುತ್ತ ಬೊಗಸೆಯನ್ನು ಒಡ್ಡಿರಲು ದೇವರು ಪ್ರಸನ್ನನಾಗಿ ಅವನ ಬೊಗಸೆಯಲ್ಲಿ ಅಮೃತವ ನೀಡಲು ಇದನ್ನೇನು ಮಾಡಬೇಕೆಂದು ದೇವರನ್ನು ಕೇಳಿದನು. ಆಗ ದೇವರು ಹೇಳಿದ್ದೇನೆಂದರೆ ಇದು ಅಮೃತವು. ಇದನ್ನು ನಿನ್ನ ಹೊಲಕ್ಕೆ ಒಯ್ದು ಹಾಕಿದರೆ ಹೊಲವು ಅತ್ಯುತ್ತಮವಾದ ಸಕಲ ಧಾನ್ಯಾದಿಗಳನ್ನು ಬೆಳೆಯುತ್ತದೆಂದು ಹೇಳಲು ಗೃಹಸ್ಥನು ತಪ್ಪು ಹೆಜ್ಜೆಯನ್ನಿಡುತ್ತ ಹೊಲಕ್ಕೆ ಹೋಗಬೇಕೆಂದು ಬೊಗಸೆಯಲ್ಲಿ ಅಮೃತವನ್ನು ಹಿಡಿದುಕೊಂಡು ಹೋಗುವುದರಲ್ಲಿ ತಿಪ್ಪೆಯಲ್ಲಿ ಎಡವಿಬಿದ್ದು ಅಮೃತವು ಚೆಲ್ಲಿಹೋಯಿತು. ಆಗ ಕೃಷಿಕನು ಚಿಂತಾತುರನಾಗಿ ಪುನಃ ದೇವರನ್ನು ಪ್ರಾರ್ಥಿಸುತ್ತಿರಲು ದೇವರು ಪ್ರತ್ಯೇಕನಾಗಿ ಯಾಕೆ ಪ್ರಳಾಪಿಸುವಿ?’ ಎಂದು ಕೇಳಿದನು. ಅದಕ್ಕೆ ಕೃಷಿಕನು ಅಂದದ್ದು, ‘ಹೇ ದೇವರೇ ನೀನು ಕೊಟ್ಟ ಅಮೃತವು ತಿಪ್ಪೆಯಲ್ಲಿ ಬಿತ್ತುಎಂದು ಹೇಳಲಾಗಿ, ದೇವರು ತಿಪ್ಪೆಯನ್ನೆಲ್ಲಾ ಒಯ್ದು ಹೊಲಕ್ಕೆ ಹಾಕು, ಯಾವನು ತಿಪ್ಪೆಯಲ್ಲಿರುವ ಗೊಬ್ಬರವನ್ನು ಹೊಲಕ್ಕೆ ಹಾಕುವನೋ ಅವನ ಹೊಲವು ಯಾವ ಬೀಜವನ್ನು ಬಿತ್ತಿದಾಗ್ಯಾದರೂ ಚನ್ನಾಗಿ ಬೆಳೆಯಾಗುವುದೆಂದು ಹೇಳಿ ಮಾಯವಾದನು.

ಈ ಕೃತಿಯ ಮತ್ತೊಂದು ವಿಶೇಷತೆಯೆಂದರೆ, ಗ್ರಂಥದ ಪೂರ್ವ ಭಾಗದಲ್ಲಿ ವಾಸ್ತವ ಪ್ರಾಪಂಚಿಕ ಕೃಷಿ ಆಚರಣೆಗಳ ಬಗ್ಗೆ ತಿಳಿಸಿದರೆ ಉತ್ತರಾರ್ಧದಲ್ಲಿ ಪರಮಾರ್ಥ ಕೃಷಿಯ ಬಗ್ಗೆ ತಿಳಿಸಿದೆ.

ಗ್ರಂಥದ ಪೂರ್ವ ಭಾಗದಲ್ಲಿ ಕೃಷಿಯ ವಿಷಯವಾಗಿ ಹೇಳಿದ ಸುಲಭವಾದ ಸಕಲ ಯಕ್ತಿಗಳನ್ನು ಚೆನ್ನಾಗಿ ತಿಳಿದು ಕೃಷಿಕರಾದ ಪ್ರವೀಣರು ಸಕಾಮದಿಂದ ಧೈರ್ಯಶಾಲಿಗಳಾಗಿ ಕೃಷಿಯುದ್ಯೋಗದ ಸಕಲ ಕಾರ್ಯಗಳನ್ನು ಮಾಡೇನು, ಸಕಲ ಫಲ ಪದಾರ್ಥಗಳನ್ನು ಸಮೃದ್ಧಿಯಾಗಿ ಪಡದೇನು, ಎಂದು ಯತ್ನಿಸುವ ಸಾಧಕರ್ಗೆ ಭೂಮಿಯು ಹ್ಯಾಗೆ ಸಧ್ಯಃ ಫಲವನ್ನು ಕೊಡುತ್ತಿಹುದೋ ಹಾಗೆ ಪಾರಮಾರ್ಥ ಕೃಷಿಕರಾದ ಮುಮುಕ್ಷು ಜನರುಗಳಿಗೆ ಪುಣ್ಯರ್ರಂಥವು ಸದ್ಯೊನ್ಮುಕ್ತಿಯಂ ಕೊಡುತ್ತಿಹುದು. ಪಾರಮಾರ್ಥ ಕೃಷಿಕನು ತನ್ನ ಕೃಷಿಯಲ್ಲಿ ಪಂಚ ಪ್ರಕರಣಗಳಾದಂತಹ ನಿಜ ನಿರ್ಮಲತ್ವ, ಸತ್ಯ ಸದಾಚಾರ, ಸಹಜ ಸುಜ್ಞಾನ, ಶಿವೈಕ್ಯ ಸದ್ಭಕ್ತಿ ಮತ್ತು ನಿಜಲಿಂಗೈಕ್ಯಗಳ ಸಾರ ಸಮ್ಮಿಶ್ರಣದಿಂದ ಸದ್ಯೋನ್ಮುಕ್ತಿಯಂ ಪಡೆಯಬಹುದು

ಕೋಷ್ಟಕ : ಹತ್ತೊಂಬತ್ತನೆಯ ಶತಮಾನದಲ್ಲಿ ೧೯೦೦ರವರೆಗೆ ಪ್ರಕಟವಾಗಿರುವ ಕೃಷಿ ಸಾಹಿತ್ಯದ ಕನ್ನಡ ಪ್ರಕಟಣೆಗಳು

ಕ್ರಸಂ. ಪ್ರಕಟಣೆಯ ವರ್ಷ ಕೃತಿಯ ಶೀರ್ಷಿಕೆ ಲೇಖಕರು ಪ್ರಕಾಶಕರು
೧. ೧೮೭೭ ಗೋ ವೃಷಭಾದಿಗಳ ಸಂರಕ್ಷಣ ಗಣಪಯ್ಯ ಚಂದಾವರ, ವೈದ್ಯಾದಿಗಳ ಕ್ರಮವು ಬಾಸೆಲ್ ಮಿಶನ್ ಬುಕ್ ಮತ್ತು ಟ್ರ್ಯಾಕ್ಟ್
ಡೆಪಾಸಿಟರಿ, ಮಂಗಳೂರು
೨. ೧೮೭೯ ಕೃಷಿ ಜ್ಞಾನ ಪ್ರದೀಪಿಕೆ ಶ್ರೀ ನಾಗಭೂಷಣ ಘನಮಠ ಶಿವಯೋಗಿಗಳು
೩. ೧೮೭೯ ವ್ಯವಸಾಯಕ್ರಮ ಬೋಧಿನಿ, ಹರ್ಮನ್, ಎಫ್.ಇ.,
ರಾಮಸ್ವಾಮಿ ಶಾಸ್ತ್ರಿ
ಮೈಸೂರು ಸರ್ಕಾರದ ಪ್ರೆಸ್, ಬೆಂಗಳೂರು
೪. ೧೮೮೮ ದನ ಕರುಗಳ ಅಂಟುರೋಗ ಡೈಲಿಪೋಸ್ಟ್ ಆಂಡ್ ಎಕ್ಸಾಮಿನರ್ ಪ್ರೆಸ್, ಬೆಂಗಳೂರು
೫. ೧೮೯೫ ಪಶು ವೈದ್ಯ ಸಂಗ್ರಹ ನರಸಿಂಹ ಜಿ.ಟಿ.ಎ. ಪ್ರೆಸ್, ಮೈಸೂರು
೬. ೧೮೯೮ ಜಲರತ್ನಾಕರ ಅಯ್ಯಂಗಾರ್ ಕೊರವಂಡ ಅಪ್ಪಯ್ಯ ಮೈಸೂರು ಬುಕ್, ಡಿಪೊ, ಬೆಂಗಳೂರು
೭. ೧೮೯೮ ವ್ಯವಸಾಯ ಚಂದ್ರಿಕೆ ರಾಮಸ್ವಾಮಿ ಅಯ್ಯಂಗಾರ್, ಕೆ.ಹೊನ್ನಾಳಿ
೮. ೧೯೦೦ ವ್ಯವಸಾಯ ಬೋಧಿನಿ ಶೇಷಾದ್ರಿ ಅಯ್ಯಂಗಾರ್. ಕೆ ಮೈಸೂರು ಶಿಕ್ಷಣ ಇಲಾಖೆ, ಮೈಸೂರು

ಎನ್ನುತ್ತಾರೆ ಲೇಖಕರಾದ ಶ್ರೀ ನಾಗಭೂಷಣ ಘನಮಠ ಶಿವಯೋಗಿಗಳು. ಈ ಕೃತಿಯು ಹಲವಾರು ಮರುಮುದ್ರಣಗಳನ್ನು ಕಂಡಿದೆ.

‘ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ಯು ೧೯೧೭ರಲ್ಲಿ ‘ವಿಜ್ಞಾನ’ ಎಂಬ ಒಂದು ಮಾಸಪತ್ರಿಕೆಯನ್ನು ಹೊರಡಿಸುವ ಸಾಹಸ ಮಾಡಿದರೂ ವಿಜ್ಞಾನಕ್ಕೇ ಮೀಸಲಾದ ಪತ್ರಿಕೆಯೊಂದನ್ನು ಸ್ವೀಕರಿಸಲು ಆ ಸಮಯದಲ್ಲಿ ಕನ್ನಡಿಗರು ಸಿದ್ಧವಿಲ್ಲದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಆ ಸಮಿತಿಯು ಒಂದೆರಡು ಕೃಷಿವಿಜ್ಞಾನ ಕೃತಿಗಳನ್ನು ಪ್ರಕಟಿಸಿತು. ಹಲವಾರು ಖಾಸಗಿ ಸಂಸ್ಥೆಗಳು, ಬಾಸೆಲ್ ಮಿಶನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿಯನ್ನು ಹಾಗೂ ಹಲವಾರು ಲೇಖಕರು ತಮ್ಮ ಖುದ್ದು ಆಸಕ್ತಿಯಿಂದ ಹಲವಾರು ಪ್ರಕಟಣೆಗಳನ್ನು ಹೊರತಂದರು. ೧೯೦೧ರಿಂದ ೧೯೪೭ರವರೆಗೂ ಪ್ರಕಟವಾಗಿರುವ ಕನ್ನಡ ಕೃಷಿವಿಜ್ಞಾನ ಸಾಹಿತ್ಯದ ಪ್ರಕಟಣೆಗಳನ್ನು ಕೋಷ್ಟಕ ೨ರಲ್ಲಿ ಕೊಡಲಾಗಿದೆ.

ಮೈಸೂರು ವ್ಯವಸಾಯ ಶೋಧಕ ಸಂಘ

ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ರಾಜ್ಯದ ಕೃಷಿಯ ಬಗ್ಗೆ ಆಸ್ಥೆವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಇಂಗಿತದಂತೆ ೧೮೯೯ರಲ್ಲಿ ಪ್ರತ್ಯೇಕ ಕೃಷಿ ಇಲಾಖೆಯನ್ನು ಪ್ರಾರಂಭಿಸಲಾಯಿತು ಹಾಗೂ ಅದರ ಮುಖ್ಯಸ್ಥರನ್ನಾಗಿ ಜರ್ಮನ್ ರಾಷ್ಟ್ರದವರಾದ ಡಾ. ಲೆಹ್‌ಮನ್ ರವರನ್ನು ಕೃಷಿ ರಾಸಾಯನಶಾಸ್ತ್ರಜ್ಞ ಎಂಬ ಪದನಾಮದೊಂದಿಗೆ ನೇಮಿಸಲಾಯಿತು. ಅದುವರೆಗೂ ಎಲ್ಲ ಕೃಷಿ ಸಂಶೋಧನಾ ಕಾರ್ಯಗಳು ಲಾಲ್‌ಬಾಗ್‌ನಲ್ಲಿ ನಡೆಯುತ್ತಿತ್ತು. ಡಾ. ಲೆಹ್‌ಮನ್‌ರವರು ಈಗಿನ ಸೆಂಟ್ರಲ್ ಕಾಲೇಜಿನ ಬದಿಯಲ್ಲಿ ಕೃಷಿರಾಸಾಯನ ಶಾಸ್ತ್ರಜ್ಞರ ಪ್ರಯೋಗಾಲಯ ಹಾಗೂ ೧೯೦೪-೦೫ರಲ್ಲಿ ಹೆಬ್ಬಾಳ ಗ್ರಾಮದಲ್ಲಿ ೩೦ ಎಕರೆಗಳ ಕೃಷಿ ಪ್ರಾಯೋಗಿಕ ಕ್ಷೇತ್ರವನ್ನು ಸ್ಥಾಪಿಸಿದರು. ೨೦ನೇ ಶತಮಾನದ ಪ್ರಾರಂಭದಿಂದಲೂ ರಾಜ್ಯದ ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ಹೆಬ್ಬಾಳವು ಪ್ರಮುಖ ಪಾತ್ರ ವಹಿಸಿದೆ.

ಡಾ. ಲೆಹ್‌ಮನ್ ರವರ ನಂತರ ೧೯೦೮ ಕೆನಡಾದ ಡಾ.ಲೆಸ್ಲಿ ಕೋಲ್ ಮನ್‌ರವರು ರಾಜ್ಯದ ‘ವ್ಯವಸಾಯ ಡೈರೆಕ್ಟರ್’ ಆದರು. ೧೯೧೩ರಲ್ಲಿ ಹೆಬ್ಬಾಳದಲ್ಲಿ ಮೈಸೂರು ಕೃಷಿ ಶಾಲೆ ಪ್ರಾರಂಭಿಸುವುದರ ಜೊತೆಗೆ ಡಾ. ಕೋಲ್ ಮನ್‌ರವರು ಮಂಡ್ಯದ ಸಕ್ಕರೆ ಕಾರ್ಖಾನೆ ಹಾಗೂ ಇನ್ನೂ ಹತ್ತು ಹಲವಾರು ಕೃಷಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದರು. ಅವುಗಳಲ್ಲಿ ಕೃಷಿ ಸಾಹಿತ್ಯ ಹಾಗೂ ಪತ್ರಿಕೋದ್ಯಮಕ್ಕೆ ಮುಖ್ಯವಾಗುವುದೆಂದರೆ ‘ಮೈಸೂರು ವ್ಯವಸಾಯ ಶೋಧಕ ಸಂಘದ ಸ್ಥಾಪನೆ. ಅದಕ್ಕೂ ಮೊದಲು ಡಾ.ಕೋಲ್ ಮನ್‌ರವರು, ೧೯೧೫ರಲ್ಲಿ ಮೈಸೂರು ವ್ಯವಸಾಯದ ಇಲಾಖೆಯಿಂದ ಮೈಸೂರು ವ್ಯವಸಾಯದ ಕ್ಯಾಲೆಂಡರ್ ಅಥವಾ ಪಂಚಾಂಗದ ಪ್ರಕಟಣೆಯನ್ನು ಪ್ರಾರಂಭಿಸಿದರು. ಆಗ ಬೆಲೆ ೧ ಆಣೆ ಇತ್ತು. ೧೯೪೨ರವರೆಗೂ ಪ್ರಕಟವಾದ ಈ ಪಂಚಾಂಗ ವಿಶ್ವಯುದ್ಧದಿಂದಾಗಿ ೧೯೪೯ರವರೆಗೂ ಪ್ರಕಟವಾಗಲಿಲ್ಲ. ‘ಯುದ್ಧ ೧೯೪೫ರಲ್ಲೇ ಮುಗಿಯುತಾದರೂ ಕಾಗದದ ಅಭಾವ, ಇತರ ಮುಗ್ಗಟ್ಟು ಇದ್ದೇ ಇದ್ದು ಪ್ರಕಟನೆಯನ್ನು ಇದುವರೆಗೂ ನಿಧಾನಿಸಬೇಕಾಯಿತು’ ಎಂದು ಆಗಿನ ವ್ಯವಸಾಯದ ಇಲಾಖೆಯ ಡೈರೆಕ್ಟರ್ ಆಗಿದ್ದ ಕೆ.ಹೆಚ್. ಶ್ರೀನಿವಾಸನ್‌ರವರು ೧೯೪೯, ವಿರೋಧಿ ಸಂವತ್ಸರದ (೧೯೪೯-೧೯೫೦) ಪಂಚಾಂಗದ ‘ಸ್ವಕೀಯ’ದಲ್ಲಿ ಬರೆದಿದ್ದಾರೆ.

ಮೈಸೂರು ವ್ಯವಸಾಯದ ಪಂಚಾಂಗವು ಭಾರತದಲ್ಲಿ ಪ್ರಚುರವಾಗುವ ವ್ಯವಸಾಯ ಪ್ರಕಟಣೆಗಳಲ್ಲಿ ಒಂದು ವೈಶಿಷ್ಟ್ಯವನ್ನು ಪಡೆದಿದೆ. ಇದು ಪಂಚಾಂಗವಲ್ಲದೆ ಮತ್ತು ವಾರ್ಷಿಕ ಪುಸ್ತಕವಲ್ಲದೆ ರೈತರ ವ್ಯವಸಾಯ ಕೈಪಿಡಿಯೂ ಆಗಿದೆ. ಇದರಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಸಂಶೋಧನೆಗಳ ಫಲಿತಗಳನ್ನು ಜನಪ್ರಿಯವಾಗುವಂತೆ ತಿಳಿಸುವ ಅನೇಕ ಲೇಖನಗಳಿವೆ.

‘ಮೈಸೂರು ವ್ಯವಸಾಯ ಶೋಧಕ ಸಂಘ ಮುಂತಾದ ಇತರ ಏಕೈಕ ಸಂಸ್ಥೆಗಳು ಮತ್ತು ಇತರ ಶಾಖೆಗಳನ್ನು ಸ್ಥಾಪಿಸಿದಂತೆ ಈ ಪಂಚಾಂಗವನ್ನು ಮೊದಲು ಪ್ರಕಟಿಸುವ ಕಾರ್ಯವನ್ನು ಪ್ರಾರಂಭಿಸಿದವರು ಮೈಸೂರಿನ ಮೊಮ್ಮೊದಲಿನ ವ್ಯವಸಾಯದ ದೈರೆಕ್ಟರಾದ ಡಾ. ಕೋಲ್ಮನ್ ರವರು’ ಎಂದು ‘ಮೈಸೂರು ವ್ಯವಸಾಯದ ಪಂಚಾಂಗ’ದ ೧೯೫೪ರ ಜಯ ಸಂವತ್ಸರ (೧೯೫೪-೧೯೫೫) ಸಂಚಿಕೆಯ ಮೊದಲ ಮಾತು ಅಂಕಣದಲ್ಲಿ ಬರೆಯಲಾಗಿದೆ.

೧೯೧೮ರಲ್ಲಿ ಪ್ರಾರಂಭವಾದ ಮೈಸೂರು ವ್ಯವಸಾಯ ಶೋಧಕ ಸಂಘವು ಮೈಸೂರು ಸಂಸ್ಥಾನದ ೧೯೦೪ನೇ ಇಸವಿಯ ೩ ಮತ್ತು ೧೯೩೯ನೇ ಇಸವಿಯ ೫ನೇ ಕಾನೂನು ಪ್ರಕಾರ ರಿಜಿಸ್ಟರಾದದ್ದು ಹಾಗೂ ಸಂಘದ ಹೆಸರನ್ನು ಇಂಗ್ಲೀಷಿನಲ್ಲಿ ‘ದಿ ಮೈಸೂರು ಅಗ್ರಿಕಲ್ಚರಲ್ ಎಂಡ್ ಎಕ್ಸ್ಪೆರಿಮೆಂಟ್ ಯೂನಿಯನ್’ ಮತ್ತು ಕನ್ನಡದಲ್ಲಿ ‘ಮೈಸೂರು ವ್ಯವಸಾಯ ಶೋಧಕ ಸಂಘ, ಬೆಂಗಳೂರು’ ಎಂದು ಕರೆಯಲಾಯಿತು. ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆಯಲ್ಲಿ ಪ್ರಕಟವಾಗಿದ್ದಂತೆ ಆ ಸಂಘವನ್ನು ಪ್ರಾರಂಭಿಸಿದ ಉದ್ದೇಶ ಈ ಮುಂದಿನಂತಿದೆ:

ಕೋಷ್ಟಕ : ೧೯೦೧ರಿಂದ ೧೯೪೭ರವರೆಗೆ ಪ್ರಕಟವಾಗಿರುವ ಕೃಷಿ ಸಾಹಿತ್ಯ ಪ್ರಕಟಣೆಗಳು

ಕ್ರ.ಸಂ. ಪ್ರಕಟಣೆಯ ವರ್ಷ ಕೃತಿಯ ಶೀರ್ಷಿಕೆ ಲೇಖಕರು ಪ್ರಕಾಶಕರು
೧. ೧೯೦೨ ಕಾಫಿ ತೋಟದಲ್ಲಿ ತರಗು ಹೊದಿಕೆ ಹೊದಿಸುವುದನ್ನು ಕುರಿತು ವ್ಯವಸಾಯ ಇಲಾಖೆ, ಬೆಂಗಳೂರು
೨. ೧೯೦೩ ಇಂಡಿಯಾ ದೇಶದ ವಿಶೇಷ ಅಪಾಯಕರವಾದ ಜಾನುವಾರು ರೋಗಗಳನ್ನು ಕುರಿತು ಸಂಕ್ಷಿಪ್ತ ಗ್ರಂಥವು  ವಾಕರ್, ಜಿ.ಕೆ ಸರ್ಕಾರಿ ಮುದ್ರಣಾಲಯ, ಮದ್ರಾಸ್
೩. ೧೯೦೫ ಕೃಷಿಶಾಸ್ತ್ರದ ಮೊದಲ ಪುಸ್ತಕ ಸುಬ್ಬರಾವ್, ಸಿ.ಕೆ. ಬೆನ್ಸನ್.ಸಿ., ಡೆಪಾಸಿಟರಿ, ಮಂಗಳೂರು. ಬ್ಯಾಸೆಲ್ ಮಿಶನ್ ಬುಕ್ ಮತ್ತು ಟ್ರ್ಯಾಕ್ಟ್
೪. ೧೯೦೬ ಕೃಷಿ ಕರ್ಮ ಶಾಸ್ತ್ರವು ರಾಮಚಂದ್ರ ಮಾಧ್ವ ಮಹಿಷಿ ವಿದ್ಯಾವರ್ಧಕ ಸಂಘ, ಧಾರವಾಡ.
೫. ೧೯೦೮ ವ್ಯವಸಾಯ ಧರ್ಮ ಬೋಧಿನಿ ಕೊರವಂಡ ಅಪ್ಪಯ್ಯ ಬೆಂಗಳೂರು
೬. ೧೯೦೯ ವ್ಯವಸಾಯ ಕ್ರಮ ಬೋಧಿನಿ ಹನುಮಂತಯ್ಯ ಗೌಡ ಬಿ., ಬೆಂಗಳೂರು
೭. ೧೯೦೯ ಗೊಬ್ಬರವು ಒಡೆಯರ್ ಎಸ್.ಕೆ. ಗ್ರಾಮಾಧಿಕಾರಿ ಮುದ್ರಣಾಲಯ, ಬಿಜಾಪುರ
೮. ೧೯೦೯ ಗೋಮಯ-ಅದರ ಗುಣದೋಷಗಳು ಸಲ್ಟು,ಸಿ ಸ್ಟ್ಯಾಂಡರ್ಡ್ ಪ್ರೆಸ್, ಬೆಂಗಳೂರು
೯. ೧೯೧೦ ಆಲೂಗಡ್ಡೆಯ ವ್ಯವಸಾಯ ಸೋಮಾಚಾರ್ಯ ಎಚ್.ಪಿ ಕಾಕ್ಸ್ ಟೌನ್ ಪ್ರೆಸ್, ಬೆಂಗಳೂರು
೧೦. ೧೯೧೧ ದಕ್ಷಿಣ ಹಿಂದೂ ದೇಶದ ವ್ಯವಸಾಯ ಪದ್ಧತಿ, ಭಾಗ-೧ ಹನುಮಂತ ಗೌಡ, ಸಿ. ವಿ.ಎಂ.ವಿ. ಪ್ರೆಸ್, ಬೆಂಗಳೂರು.
೧೧. ೧೯೧೨ ಬೇಸಾಯದ ಪಾಠಗಳು ಜೆ.ಬಿ. ನೈಟ್ ಬ್ಯಾಸೆಲ್ ಮಿಶನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿ, ಮಂಗಳೂರು
೧೨. ೧೯೧೨ ತೆಂಗಿನ ಫಸಲು ಸಾಗುವಳಿ ವೆಂಕಟ ನರಸಿಂಹಯ್ಯ. ಎಸ್.ಕೆ ಒಕ್ಕಲಿಗರ ಸಂಘ ಪ್ರಕಟಣೆ, ಬೆಂಗಳೂರು.
೧೩. ೧೯೧೬ ಕೃಷಿ ಸಂಜೀವಿನಿ ಶೆಟ್ಟಣ್ಣ ಆರ್. ಕ್ರೌನ್ ಪ್ರೆಸ್, ಮೈಸೂರು,
೧೪. ೧೯೧೭ ಗೋ ವೈದ್ಯ ಸಾರ ಸಂಗ್ರಹ ನಂಜಪ್ಪ ಬಿ.ಎನ್.,
ವೆಂಕಟಾಚಲಂ ಸೆಟ್ಟಿ, ಎಂ.ಆರ್.
೧೫. ೧೯೧೮ ಪಶು ವೈದ್ಯ ನರಸಿಂಗ ಅಯ್ಯಂಗಾರ್ ಮೈಸೂರು ಶಿಕ್ಷಣ ಇಲಾಖೆ, ಮೈಸೂರು
೧೬. ೧೯೧೯ ವ್ಯವಸಾಯ ಶಾಸ್ತ್ರದ ಭೀಮರಾಯ ಕೆ.
ಕೆಲವು ಮುಖ್ಯ ತತ್ವಗಳು
ಕರ್ನಾಟಕ ವಿಜ್ಞಾನ ಪ್ರಚಾರಿಣಿ ಸಮಿತಿ, ಬೆಂಗಳೂರು.
೧೭. ೧೯೨೫ ಗೋಮಾತೆ (ನನ್ನ ಮೂಗ ತಾಯಿ) ಖಾದ್ರಿ ಗುಂಡು ರಾವ್ ಶ್ರೀ ಗೋರಕ್ಷಕ ಮಂಡಳಿ, ಬೆಂಗಳೂರು.
೧೮. ೧೯೨೭ ಸರಳ ವ್ಯವಸಾಯ ಪಾಠ ನರಸಿಂಹ ಅಯ್ಯಂಗಾರ್, ಕೆ
ಬೆಂಗಳೂರು.
ಮೈಸೂರು ಶಿಕ್ಷಣ ಇಲಾಖೆ 
೧೯. ೧೯೨೯ ಭೂಲೋಕದ ಕಾಮಧೇನು ಶಿವಾಚಾರ್ಯ ನೀಲಕಂಠ ಲಿಂಗ,ಶರ್ಮ, ಎಸ್.ಬಿ ಹಿಮಾಲಯ ಅಷ್ಟವರ್ಗ ವನಸ್ಪತಿ ಭಂಡಾರ, ಯಾದಗೀರ್
೨೦. ೧೯೩೦ ಹಣ್ಣುಹಂಪಲುಗಳ ಬಾಗಾಯತು ಹರಿ ಪುರುಷೋತ್ತಮ ಪರಾಂಜಪೆ, ಶಂಭು ಶಂಭು ಭಟ್ಟ, ಮಹದೇವ ವಾಮನ ಗೋಡಬೋಲೆ ಕಾರವಾರ
೨೧. ೧೯೩೨ ಹೊಲದಲ್ಲಿಯ ಒಡ್ಡು ಒಟ್ಟಲುಗಳು ರಾಘವೇಂದ್ರ ಭೀಮರಾವ್, ಮುತಾಲಿಕ ದೇಸಾಯಿ ಧಾರವಾಡ
೨೨. ೧೯೩೬ ಕೃಷಿ ಜ್ಞಾನ ಪ್ರದೀಪಿಕೆ ಹಲಕಟ್ಟಿ, ಎಫ್.ಜಿ. (ಸಂ) ಬಿಜಾಪುರ
೨೩. ೧೯೩೭ ಒಕ್ಕಲಿಗರ ಕೈಪಿಡಿ ಹನುಮಪ್ಪ ರಾಮಪ್ಪ ಕಳವಾಡ ವೇರ್ಲಾಪುರ.
೨೪. ೧೯೩೮ ಮಾದರಿಯ ತೋಟ ಅರ್ಥಾತ್ ಕಾಯಿಪಲ್ಲೆ ಸಾಗುವಳಿ ಅಮರಗೋಳ ಮಠ,
ಹಿರೇಮಠ, ಬಿ.ವಿ.
ಕಿತ್ತೂರು, ಬೆಳಗಾಂ
೨೫. ೧೯೪೩ ಮಾನವ ಆರೋಗ್ಯ,
ಅಕ್ಕಿಯಲ್ಲಿನ ಜೀವ ಸತ್ವಗಳು ಹಾಗೂ ಅಕ್ಕಿಯ ಪ್ರಾಮುಖ್ಯತೆ ತಿಳಿಸುವ ಪುಸ್ತಕ 
ಜೋಸೆಫ್ ಕಾರ್ನಿಲಿಯಾಸ್, ಕುಮಾರಪ್ಪ, ಹರಿ ಅನಂತ ಪೈ, ಅಕ್ಕಿ ಭಾರತ್ ಸ್ಲೇಟ್ ಪೆನ್ಸಿಲ್ ವರ್ಕ್ಸ್, ಹುಬ್ಬಳ್ಳಿ
೨೬. ೧೯೪೪ ಪಶುಪಾಲನೆ ಕೃಷ್ಣಶಾಸ್ತ್ರಿ, ಎಂ. ಸರ್.ಕೆ.ಪಿ. ಪುಟ್ಟಣ್ಣಚೆಟ್ಟರ ಪುದುವಟ್ಟಿನ ಪ್ರಕಟನಮಾಲೆ, ಮೈಸೂರು
ವಿಶ್ವವಿದ್ಯಾನಿಲಯ, ಮೈಸೂರು.
೨೭. ೧೯೪೫ ಜೇನಿನ ವ್ಯವಸಾಯ ಪೈಲೂರು ಲಕ್ಷ್ಮೀ ನಾರಾಯಣ ರಾವ್, ಚೊಕ್ಕಾಡಿ ದಕ್ಷಿಣ ಕನ್ನಡ.
೨೮. ೧೯೪೬ ದಕ್ಷಿಣ ಭಾರತದಲ್ಲಿ ಕಾಫಿ ಸಂಶೋಧನೆ -ಒಂದು ಟಿಪ್ಪಣಿ ವಿಲ್ಸನ್, ಡಬ್ಲ್ಯೂ,
ಸೀತಾರಾಮಯ್ಯ. ಎಂ.ವಿ.
ಇಂಡಿಯನ್ ಕಾಫಿ ಬೋರ್ಡ್, ಬೆಂಗಳೂರು.
೨೯. ೧೯೪೬ ನೂತನ ಲಘು ವಿಜ್ಞಾನ ಪಶುಸಂಗೋಪನಾ ಸಾಹಿತ್ಯ, ಭಾಗ-೧ ದಾಮೋದರ ಬಾಳಿಗ ಬಾಸೆಲ್ ಮಿಶನ್ ಬುಕ್ ಡಿಪೊ, ಮಂಗಳೂರು.
೩೦. ೧೯೪೭ ನಮ್ಮ ವ್ಯವಸಾಯ ಶಾಮರಾವ್, ಆರ್.ಜಿ. ಮಹದೇವ ಸನ್ಸ್, ಬೆಂಗಳೂರು.
೩೧. ೧೯೪೭ ತುಂಡು ಹೊಲಗಳ ಸಂಯೋಜನೆ ಕೊಲ್ಲನ ಗೌಡ ಪಾಟೀಲ ಬ್ಯಾಡಗಿ
೩೨. ೧೯೪೭ ಗೊಬ್ಬರ ಹಿತ್ತಲಮನಿ, ವೀ.ಚ. ಶರಾವತಿ ಸಾಹಿತ್ಯ, ಧಾರವಾಡ

ಬೆಳೆಗಳು, ಕಾಲ್ನಡೆಗಳು, ಹಣ್ಣುಹಂಪಲುಗಳು ಎಲ್ಲವನ್ನೂ ಒಳಗೊಂಡ ವ್ಯವಸಾಯವನ್ನು ಉತ್ತಮಗೊಳಿಸಿ ತನ್ಮೂಲಕ ರೈತನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ಉದ್ದೇಶ ಸಾಧನೆಗಾಗಿ ಹಲವಾರು ಕಾರ್ಯಕ್ರಮಗಳ ಜೊತೆಗೆ ವ್ಯವಸಾಯವನ್ನು ಕುರಿತ ಲೇಖನಗಳುಳ್ಳ ಒಂದು ಕನ್ನಡ ಪತ್ರಿಕೆಯನ್ನೂ ಒಂದು ಇಂಗ್ಲೀಷ್ ಪತ್ರಿಕೆಯನ್ನೂ ಪ್ರಕಟಿಸುವುದು. ವ್ಯವಸಾಯ, ಕಾಲ್ನಡೆಗಳು, ಹಣ್ಣುಹಂಪಲು ಮತ್ತು ಸಂಬಂಧಪಟ್ಟ ಇತರ ವಿಷಯಗಳ ಮೇಲೆ ಸಾಮಾನ್ಯ ಜನರಿಗೆ ಹಿಡಿಸುವ ಹಾಗೆ ಸಣ್ಣ ವಿಷಯ ಪತ್ರಿಕೆಗಳನ್ನು ಪ್ರಕಟಿಸುವುದು ಹಾಗೂ ವ್ಯವಸಾಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ನಿಯತಕಾಲಿಕ ಪತ್ರಿಕೆಗಳನ್ನು ಸದಸ್ಯರು ಓದಿಕೊಳ್ಳಲು ಒದಗಿಸುವುದು.

ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ ಮೊದಲು ತ್ರೈಮಾಸಿಕವಾಗಿದ್ದು ೫ನೆಯ ಸಂಪುಟದಿಂದ ಮಾಸಪತ್ರಿಕೆಯಾಗಿ ಪರಿವರ್ತಿತಗೊಂಡಿತು.

೧೯೩೮ರ ಸಂಪುಟ ೧೪, ಸಂಚಿಕೆ ೩ರಲ್ಲಿ ಮೈಸೂರು ವ್ಯವಸಾಯ ಶೋಧಕ ಸಂಘದ ಕಾರ್ಯದರ್ಶಿಯವರಾದ ನಿಡತದ ವೆಂಕಟಸುಬ್ಬಯ್ಯನವರು ೧೭೧.೧೯೩೮ರಂದು ಶಿವಗಂಗೆ ಗಂಗಾಧರೇಶ್ವರ ಸ್ವಾಮಿಯವರ ಜೊತೆ ಸ್ಕೌಟ್ ಕ್ಯಾಂಪಿಗೆ ಬಂದಿದ್ದ ಪಟೇಲರು, ಶ್ಯಾನುಭೋಗರುಗಳಿಗೆ ವ್ಯವಸಾಯದ ವಿಚಾರದಲ್ಲಿ ಅವರು ಹೇಗೆ ಮುಂದುವರಿಯಬೇಕು ಎಂಬ ವಿಷಯವಾಗಿ ಈ ಮುಂದಿನಂತೆ ಭಾಷಣ ಮಾಡಿದರು.

ವ್ಯವಸಾಯ ಶೋಧಕ ಸಂಘವೊಂದಿದೆ. ಸಂಘಕ್ಕೆ ಮೆಂಬರುಗಳಾಗಿರುವವರಿಗೆ ತಳಿಯ ಬೀಜ, ಮುಂತಾದುವುಗಳನ್ನು ಮುಫತ್ತಾಗಿ ಕೊಟ್ಟು, ಅವರ ಅಜಮಾಯಿಷಿಗಳನ್ನು ಮತ್ತು ಅನುಭವಗಳನ್ನು ಮೇಲ್ಕಂಡ ಸಂಘದವರು ತರಿಸಿಕೊಂಡು, ಸಂಘದ ಮಾಸಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಅದರಲ್ಲಿ ವ್ಯವಸಾಯದ ವಿಚಾರದಲ್ಲಿ ರೈತರು ಹೇಗೆ ಮುಂದುವರಿಯಬೇಕೆಂಬುದನ್ನು ಕೂಡ ನಿಮ್ಮ ಏಳಿಗೆಗಾಗಿ ಮತ್ತು ನಿಮ್ಮ ತಿಳಿವಳಿಕೆಗಾಗಿಯೂ ಪ್ರಕಟಿಸಿರುತ್ತಾರೆ. ಸಂಘದ ಪತ್ರಿಕೆಗೆ ವಾರ್ಷಿಕ ಚಂದಾ ರೂಪಾಯಿಗಳು ಮಾತ್ರ; ಅದನ್ನು ದಯವಿಟ್ಟು ಈಗಿನಿಂದಲಾದರೂ ತರಿಸಿಕೊಳ್ಳಿರಿ. ಓದು ಬಾರದವರಿಗೆ ವಾರಕ್ಕೆ ಒಂದು ದಿವಸ ಗ್ರಾಮಪಂಚಾಯಿತಿ ಚಾವಡಿಯಲ್ಲಿ ಸಭೆ ಸೇರಿಸಿ ಓದಿ ಹೇಳಿ ತಿಳಿವಳಿಕೆಯನ್ನು ಹೆಚ್ಚಿಸಿರಿ. ಗ್ರಾಮಾಭಿವೃದ್ಧಿಗೆ ಇದೊಂದು ದಾರಿ.

ವ್ಯವಸಾಯದ ಇಲಾಖೆಯವರು ವ್ಯವಸಾಯಗಾರರ ಜಮೀನುಗಳಲ್ಲಿ ನಡೆಸಿದ ಪರೀಕ್ಷೆಗಳ ಹಾಗೂ ಪ್ರದರ್ಶನಗಳ ಬಗ್ಗೆ ಹಾಗೂ ಇಲಾಖೆಯ ಸಲಹೆಯ ಪ್ರಕಾರ ಬೇಸಾಯ ಮಾಡಿದವರ ಅಭಿಪ್ರಾಯಗಳನ್ನು ಸಂಘದ ಪತ್ರಿಕೆಯಲ್ಲಿ ಪ್ರಕಟಿಸುವುದರ ಜೊತೆಗೆ ರೈತರ ಅನುಭವಗಳನ್ನು ಕುರಿತ ಟಿಪ್ಪಣಿಗಳನ್ನು ಮತ್ತು ಅಲ್ಲಲ್ಲಿಂದ ಆಯ್ದ ವ್ಯವಸಾಯ ವಾರ್ತೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. ಉದಾಹರಣೆ, ಪಂಜಾಬಿನ ಗ್ರಾಮಾಭಿವೃದ್ಧಿ ವಿಷಯ ಪತ್ರಿಕೆ, ಇಂಟರ್ ನ್ಯಾಷನಲ್ ರಿವ್ಯೂ ಆಫ್ ಅಗ್ರಿಕಲ್ಚರಲ್, ಮಿನ್ನೆಸೋಟಾ ವ್ಯವಸಾಯ ಪತ್ರಿಕೆ, ಟ್ರಾಪಿಕಲ್ ಅಗ್ರಿಕಲ್ಚರಿಸ್ಟ್ ಜಮೈಕ ವ್ಯವಸಾಯ ಪತ್ರಿಕೆ, ಅಮೆರಿಕಾದ ಸಂಯುಕ್ತ ಸಂಸ್ಥಾನದ ವ್ಯವಸಾಯ ಶಾಖೆಯ ವಿಷಯಪತ್ರಿಕೆ, ಮೈಸೂರು ಗೆಜೆಟ್, ಮಲಯಾದ ವ್ಯವಸಾಯ ಪತ್ರಿಕೆ ಮುಂತಾದುವುಗಳಿಂದ ಆಯ್ದ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ವಿದೇಶದ ಕೃಷಿಯ ಬಗ್ಗೆಯೂ ಲೇಖನಗಳು ಪ್ರಕಟವಾಗುತ್ತಿದ್ದವು. ಉಲ್ಲೇಖಿಸಬಹುದಾದ ಕೆಲವು ಉದಾಹರಣೆಗಳೆಂದರೆ, ‘ಸಿಲೋನಿನಲ್ಲಿ ಹಣ್ಣಿನ ಬೇಸಾಯಕ್ಕಿರುವ ತೊಂದರೆಗಳು’, ‘ಮಲಯಾದಲ್ಲಿ ಸಬ್ಬಕ್ಕಿ ಕೈಗಾರಿಕೆ’ ಹಾಗೂ ‘ಸಿಂಗಪುರದ ಕಾರ್ಖಾನೆಗಳಲ್ಲಿ ಸೇಗೋ ಹಿಟ್ಟನ್ನು ತಯಾರಿಸುವುದು’ (ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ, ಸಂ. ೧೪, ಸಂಚಿಕೆ ೩, ೧೯೩೮).

ಇತರ ಪತ್ರಿಕೆಗಳವರು ಸಂಘಕ್ಕೆ ತಮ್ಮ ಪತ್ರಿಕೆಗಳನ್ನು ವಿನಿಮಯವಾಗಿ ಕಳಿಸಿ, ಅವರಲ್ಲಿ ಕೆಲವರು ವ್ಯವಸಾಯ ಶೋಧಕರ ಸಂಘದ ಪತ್ರಿಕೆಯಲ್ಲಿನ ಲೇಖನಗಳನ್ನು ಆಯ್ದುಕೊಂಡು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಅವುಗಳ ಉಪಯುಕ್ತತೆಯ ಬಗ್ಗೆ ನಮ್ಮಲ್ಲಿ ಧೈರ್ಯ ತುಂಬಿದ್ದಾರೆ’ ಎಂದು ಜನವರಿ ೧೯೪೧, ಸಂಚಿಕೆ ೧, ಸಂಪುಟ ೧೭ರ ಸಂಪಾದಕೀಯದಲ್ಲಿ ಬರೆಯಲಾಗಿದೆ. ೧೯೪೦ರಿಂದಲೇ ಕನ್ನಡದ ದಿನಪತ್ರಿಕೆಗಳಲ್ಲಿ ಕೃಷಿ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಲಾಗಿದೆ. ೧೯೫೪ರಿಂದ ತಾಯಿನಾಡು ದಿನಪತ್ರಿಕೆಯಲ್ಲಿ ವಾರಕ್ಕೆ ಎರಡು ಸಾರಿ ‘ರೈತರ ವೃತ್ತಾಂತಗಳ’ ಬಗ್ಗೆ ಪ್ರಕಟಿಸಲು ಪ್ರಾರಂಭಿಸಿತು. ಜನವರಿ ೧೯೫೫, ಸಂಚಿಕೆ ೧, ಸಂಪುಟ ೩೧ರ ವ್ಯವಸಾಯ ಶೋಧಕ ಸಂಘದ ಪತ್ರಿಕೆಯಲ್ಲಿ ತಾಯಿನಾಡು ಪತ್ರಿಕೆಯ ವ್ಯವಸ್ಥಾಪಕರು ಜಾಹಿರಾತೊಂದನ್ನು ನೀಡಿ. ‘ಕಳೆದ ಒಂದೆರಡು ತಿಂಗಳಿಂದ ಈ ರೈತರ ವಿಭಾಗವನ್ನು ತೆರೆದಿದ್ದೇವೆ. ಸಂಸ್ಥಾನದ ನಾನಾಕಾಡೆಗಳಿಂದ ನಮಗೆ ಪ್ರಶಂಸೆಯ ಪತ್ರಗಳು ಬರುತ್ತಿವೆ. ಆದರಿಂದ ರೈತರಲ್ಲಿ ಹೊಸ ಉತ್ಸಾಹವೂ, ಹುರುಪೂ ಮೂಡಿದೆ. ನಮ್ಮ ಮೈಸೂರು ರೈತರು ಹೆಚ್ಚಿನ ಪ್ರೋತ್ಸಾಹ ನೀಡುವುದಾದರೆ, ಆ ವಿಭಾಗವನ್ನು ವಿಸ್ತರಿಸಿ ಇನ್ನೂ ಹೊಸ ವಿಷಯಗಳನ್ನು ಬರೆದು ರೈತರ ಮುಂದಿಡುತ್ತೇವೆ’ ಎಂದಿದ್ದರು.

ಆ ಪತ್ರಿಕೆಗೆ ಲೇಖನಗಳನ್ನು ರೈತರಿಂದಲೂ ಸಹ ಆಹ್ವಾನಿಸುವ ಸಲುವಾಗಿ ಸಂಪುಟ ೧೪, ಫೆಬ್ರವರಿ ೧೯೩೮, ಸಂಚಿಕೆ ೨ರಲ್ಲಿ ಬರಹಗಾರರಿಗೆ ಈ ಕೆಳಗಿನಂತೆ ಸೂಚನೆ ನೀಡಲಾಗಿತ್ತು:

ಶಾಸ್ತ್ರವನ್ನೋದಿದ ಪಂಡಿತರು ಮಾತ್ರವೇ ಪತ್ರಿಕೆಗೆ ಲೇಖನಗಳನ್ನು ಬರೆಯಬಲ್ಲರೆಂದೂ ಇತರರಿಗೆ ಸಾಧ್ಯವಿಲ್ಲವೆಂದೂ ತಿಳಿಯಬಾರದು. ವ್ಯವಸಾಯ ವೃತ್ತಿಯನ್ನು ಕೈಕೊಂಡಿರುವವರೆಲ್ಲರೂ ಬರೆಯಬಹುದು. ಸಾಮಾನ್ಯ ರೈತರೂ ಕೂಡ ತಮ್ಮ ಅನುಭವಗಳನ್ನು ಪರಸ್ಪರವಾಗಿ ಹೇಳಿ ಕೇಳಿ ತಿಳಿದುಕೊಳ್ಳುವುದು ಏಳಿಗೆಗೆ ದಾರಿಯಾಗುವುದು. ಯಾವ ವಿಷಯವನ್ನೂ ಅಲ್ಪವೆಂದು ಅಸಡ್ಡೆ ಮಾಡಬೇಡಿ.

ಅದೇ ರೀತಿ ಸಂಪುಟ ೧೭, ಜನವರಿ ೧೯೪೧, ಸಂಚಿಕೆ ೧ರ ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆಯ ಸಂಪಾದಕೀಯದಲ್ಲಿ,

ವ್ಯವಸಾಯಗಾರರ ಜಮೀನುಗಳಲ್ಲಿಯೇ ಪರೀಕ್ಷೆಗಳನ್ನೂ ಪ್ರದರ್ಶನಗಳನ್ನೂ ಸಾವಿರಗಟ್ಟಲೆಯಾಗಿ ನಡೆಸುವ ಏರ್ಪಾಡನ್ನು ವ್ಯವಸಾಯದ ಇಲಾಖೆಯವರು ಕೈಗೊಂಡಿದ್ದಾರಷ್ಟೆ. ಇಲಾಖೆಯ ಸಲಹೆಯ ಪ್ರಕಾರ ಬೇಸಾಯ ಮಾದಿದವರ ಅಭಿಪ್ರಾಯಗಳನ್ನು ನಮ್ಮ ಪತ್ರಿಕೆಯಲ್ಲಿ ಕ್ರಮವಾಗಿ ಪ್ರಕಟಿಸುತ್ತಾ ಬಂದಿದ್ದೇವೆ. ತಮ್ಮ ತಮ್ಮ ಹಿಡುವಳಿಗಳಲ್ಲಿ ಪ್ರಯೋಗಗಳನ್ನು ನಡೆಸಬೇಕೆಂಬುದು ಮೊದಲಿನಿಂದಲೂ ವ್ಯವಸಾಯ ಶೋಧಕ ಸಂಘದ ಸದಸ್ಯರುಗಳ ಉದ್ದೇಶವಾಗಿರುತ್ತದೆ. ರೀತಿ ಪರೀಕ್ಷೆಗಳನ್ನು ನಡೆಸಿ ತಾವು ಗಳಿಸಿದ ಅನುಭವಗಳನ್ನು ಕುರಿತ ಟಿಪ್ಪಣಿಗಳನ್ನು ಸದಸ್ಯರು ಪತ್ರಿಕೆಗೆ ಕಳಿಸಿಕೊಡುತ್ತಿರಬೇಕು. ಅಲ್ಲದೆ ಅಲ್ಲಲ್ಲಿಂದ ಆಯ್ದ ವ್ಯವಸಾಯ ವಾರ್ತೆಗಳನ್ನೂ ಪತ್ರಿಕೆಯಲ್ಲಿ ಕೊಡುತ್ತಿರಲಾಗಿದೆ

ಐವತ್ತರ ದಶಕದಲ್ಲಿ ಡಾ. ಪಂಜಾಬರಾವ್ ದೇಶಮುಖರು ಭಾರತ ಕೃಷಿಕ ಸಮಾಜ ಸ್ಥಾಪನೆ ಮಾಡಿದ ನಂತರ ಮೈಸೂರು ವ್ಯವಸಾಯ ಶೋಧಕ ಸಂಘವು ಭಾರತದಾದ್ಯಂತ ಒಂದೇ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುವ ಸಲುವಾಗಿ ಅದರೊಂದಿಗೆ ವಿಲೀನಗೊಂಡು ‘ಮೈಸೂರು ಕೃಷಿಕ ಸಮಾಜ’ವನ್ನು ಪ್ರಾರಂಭಿಸಿತು. ಸಂಪುಟ ೩೪, ಜನವರಿ ೧೯೫೮, ಸಂಚಿಕೆ ೧ರ ಸಂಚಿಕೆಯ ಸಂಪಾದಕೀಯದಲ್ಲಿ ಆ ಘಟನೆಯ ಬಗ್ಗೆ ಈ ರೀತಿ ಬರೆಯಲಾಗಿದೆ.

ನಾವು ಭಾರತ ಕೃಷಿಕ ಸಮಾಜದೊಂದಿಗೆ ಬೆರೆತು ಕಾರ್ಯ ಸಾಧಿಸಬೇಕೆಂದು ನಿಶ್ವಯಿಸಿ ಒಂದು ವರ್ಷವಾಯಿತು. ಅಲ್ಲಿಯವರೆಗೆ ಮೈಸೂರು ವ್ಯವಸಾಯ ಸಂಶೋಧನಾ ಸಂಘವಾಗಿ ೧೯೧೮ರಲ್ಲಿ ದಿವಂಗತ ಡಾ. ಕೋಲ್ಮನ್ ರವರಿಂದ ನಾಟಲ್ಪಟ್ಟ ವೃಕ್ಷವು, ಕಾಲಕಾಲಕ್ಕೆ ವ್ಯವಸಾಯತಜ್ಞರ ಪರಿಶೋಧನಾ ತಿಳುವಳಿಕೆಗಳನ್ನು ಒಕ್ಕಲುತನದವರಿಗೆ ಬೀರುತ್ತಲೂ, ರೈತರ ಹಿಡುವಳಿಗಳಲ್ಲಿ ಸಂಶೋಧನೆ ನಡೆಸುತ್ತಲೂ, ಕ್ಷೇತ್ರೋತ್ಸವ, ರೈತರ ಸಮ್ಮೇಳನಗಳನ್ನು ನಡೆಸುತ್ತ ಒಕ್ಕಲುತನದ ವೃತ್ತಿಯ ಮೇಲ್ಮೈಗೆ ದುಡಿಯುತ್ತಿತ್ತು. ಈ ೩ ವರ್ಷಗಳ ಕೆಳಗೆ ಡಾ. ಪಂಜಾಬರಾವ್ ದೇಶಮುಖರು ಭಾರತ ಕೃಷಿಕ ಸಮಾಜಸ್ಥಾಪನೆ ಮಾಡಿದರು. ಅಖಿಲ ಭಾರತಕ್ಕೂ, ವಿಶ್ವದ ಭ್ರಾತೃತ್ವದಿಂದ ಕಾರ್ಯಭಾಗಗಳನ್ನು ಸಾಧಿಸಲು ಪ್ರಾರಂಭಿಸಿದರು….ನಾವು ಮೊದಲು ಭಾರತೀಯರು ನಂತರ ಮೈಸೂರಿನವರು; ರೈತರೆಲ್ಲರೂ ಆಸೇತು ಹಿಮಾಚಲ ಪರ್ಯಂತ ಒಂದು. ಒಂದುಗೂಡಿ ಕಾರ್ಯ ಸಾಧಿಸೋಣವೆಂದು ನಾವೂ ಮೈಸೂರು ಕೃಷಿಕ ಸಮಾಜವೆಂದು ಕಾರ್ಯ ಪ್ರಾರಂಭಿಸಿದೆವು.

ಆನಂತರ ಅದು ‘ಕರ್ನಾಟಕ ಪ್ರದೇಶ ಕೃಷಿಕ ಸಮಾಜ’ವೆಂದು ಬದಲಾಯಿತು ಹಾಗೂ ‘ಮೈಸೂರು ವ್ಯವಸಾಯ ಶೋಧಕರ ಸಂಘದ ಪತ್ರಿಕೆ’ಯು ‘ಕರ್ನಾಟಕ ವ್ಯವಸಾಯ ಪತ್ರಿಕೆ’ಯೆಂದು ಬದಲಾಗಿ ಮಾಸಿಕ ಪತ್ರಿಕೆಯ ರೂಪದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದೆ. ಇಂದು ಜಿಲ್ಲಾವಾರು ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜಗಳಿವೆ.

. ಎರಡನೆಯ ಹಂತ೧೯೪೮ರಿಂದ ೧೯೮೦ರವರೆಗೆ

ಭಾರತ ಸ್ವಾತಂತ್ರ್ಯಾನಂತರ ಆಹಾರ ಕ್ಷಾಮ ಎದುರಿಸುವ ಸ್ಥಿತಿಯಲ್ಲಿತ್ತು. ಅಧಿಕ ಇಳುವರಿ ತಳಿ ಹಾಗೂ ರಾಸಾಯನಿಕ ಗೊಬ್ಬರಗಳ ಸಾಂದ್ರ ಬಳಕೆಯಿಂದಾಗಿ ಎಲ್ಲ ತೃತೀಯ ಜಗತ್ತಿನ ದೇಶಗಳ ಕೃಷಿಯಲ್ಲಿ ಬಹು ದೊಡ್ಡ ಕ್ರಾಂತಿಯೇ ಸಂಭವಿಸಿ ಇಳುವರಿಯಲ್ಲಿ ಬಹಳ ಹೆಚ್ಚಳ ಕಂಡುಬಂದಿತು. ಇದನ್ನು ‘ಹಸಿರು ಕ್ರಾಂತಿ’ ಎಂದು ಕರೆಯಲಾಯಿತು. ಶತಮಾನಗಳ ಕಾಲದಿಂದ ಸಾಂಪ್ರದಾಯಕ ಜ್ಞಾನದ ದೀವಿಗೆಯ ಬೆಳಕಲ್ಲಿ ಕೃಷಿ ಮಾಡುತ್ತಿದ್ದ ರೈತನಿಗೆ ಅಪರಿಚಿತ ‘ಆಧುನಿಕ ಹಾಗೂ ವೈಜ್ಞಾನಿಕ ಕೃಷಿ’ಯನ್ನು ಅನುಸರಿಸಬೇಕಾಯಿತು. ಈ ಬೆಳವಣಿಗೆಗಳೊಂದಿಗೆ ಹೊಸ ರೀತಿಯ ಕೃಷಿ ಸಾಹಿತ್ಯದ ಅಭಿವ್ಯಕ್ತಿ ಅನಿವಾರ್ಯವಾಯಿತು. ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಇತರ ವಿಶ್ವವಿದ್ಯಾಲಯಗಳು, ವಯಸ್ಕರ ಶಿಕ್ಷಣ ಇಲಾಖೆ ಮುಂತಾದುವು ರೈತರ ಅರಿವು ಹೆಚ್ಚಿಸುವ ಸಲುವಾಗಿ ಕೃಷಿ ವಿಜ್ಞಾನ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದುವು.

ಅರವತ್ತರ ದಶಕದವರೆಗೆ ಪ್ರಕಟವಾಗಿರುವ ಕೃಷಿವಿಜ್ಞಾನ ಸಾಹಿತ್ಯ ಪುಸ್ತಕಗಳು ಸಂಖ್ಯೆಯಲ್ಲಿ ಕಡಮೆ ಹಾಗೂ ಅವು ರೈತರಿಗೆ ಹೊಸತೇನನ್ನೂ ಹೇಳಿಲ್ಲ. ಈಗ ನಾವು ಆಧುನಿಕ ಎಂದು ಹೇಳುವ ಯಾವ ಕೃಷಿ ತಂತ್ರಜ್ಞಾನವೂ ಆಗ ಇರಲಿಲ್ಲ. ತಿಳಿದಿದ್ದ ಕೃಷಿ ವಿಧಾನ ಮತ್ತು ಪದ್ಧತಿಗಳನ್ನಷ್ಟೇ ಇನ್ನೂ ಅಭಿವೃದ್ಧಿ ಪಡಿಸಬೇಕಿತ್ತು. ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳೂ ಹಾಗೂ ಕೃಷಿ ವಿಸ್ತರಣ ತಜ್ಞರಾಗಿರುವ ಡಾ. ಆರ್. ದ್ವಾರಕೀನಾಥ್ ರವರು ಐವತ್ತರ ದಶಕದಲ್ಲಿ ಕ್ಷೇತ್ರ ಮಟ್ಟದಲ್ಲಿ ರೈತರೊಂದಿಗೆ ವ್ಯವಹರಿಸುವಾಗ ಅವರಿಗೆ ತಿಳಿಹೇಳಲು ನೀರಾವರಿ, ಉತ್ತಮ ಬೇಸಾಯದ ಪದ್ಧತಿಗಳು ಹಾಗೂ ಉತ್ತಮ ಬಿತ್ತನೆಯ ಹೊರತಾಗಿ ಹೊಸತೇನೂ ಇರುತ್ತಿರಲಿಲ್ಲವೆಂದು ಹೇಳಿದ್ದಾರೆ. ಆ ಸಮಯದಲ್ಲಿ ಪ್ರಕಟವಾಗಿರುವ ಕೆಲವು ಕೃತಿಗಳನ್ನು ನಾವು ಅವಲೋಕಿಸಿದಲ್ಲಿ ಈ ವಿಷಯ ಸ್ಫುಟವಾಗುತ್ತದೆ. ಇದಕ್ಕೆ ಪೂರಕವಾಗಿ ೫೦-೬೦ರ ದಶಕದಲ್ಲಿ ಪ್ರಕಟವಾಗಿರುವ ಕೃಷಿವಿಜ್ಞಾನ ಸಾಹಿತ್ಯದ ಪ್ರಕಟಣೆಗಳನ್ನು ಕೋಷ್ಟಕ ೩ರಲ್ಲಿ ಕೊಡಲಾಗಿದೆ.

ಕೋಷ್ಟಕ : ೫೦೬೦ರ ದಶಕದಲ್ಲಿ ಪ್ರಕಟವಾದ ಕೆಲವು ಕನ್ನಡ ಕೃಷಿ ವಿಜ್ಞಾನ ಪ್ರಕಟಣೆಗಳು

ಕ್ರ.ಸಂ. ಶೀರ್ಷಿಕೆ ಲೇಖಕರು ಪ್ರಕಟವಾದ ವರ್ಷ
೧. ಪಶುಪಾಲನೆ ಕೃಷ್ಣಶಾಸ್ತ್ರಿ, ಎಂ. ೧೯೪೪
೨. ಗೊಬ್ಬರ ಹಿತ್ತಲಮನಿ, ವೀ.ಚ. ೧೯೪೭
೩. ಕಾಮಧೇನು ಸಿದ್ದವನಹಳ್ಳಿ ಕೃಷ್ಣಶರ್ಮ ೧೯೪೯
೪. ರೇಷ್ಮೆ ಕೈಗಾರಿಕೆ ದೇಸಿಗೌಡ, ಎಲ್. ೧೯೪೯
೫. ಕೀಟಕ ಪಿಡುಗುಗಳ ಸಮೀಕ್ಷಣೆ ಕಟಿಗಿಹಳ್ಳಿಮಠ, ಎಸ್.ಎಸ್ ೧೯೫೬
೬. ವ್ಯವಸಾಯದ ಮಣ್ಣುಗಳು ಕೂರಪಾಡು ಗುಂಡಪ್ಪ, ೧೯೫೮
೭. ಜೇನು ಮುರಿಗಪ್ಪ ಶ್ರೇಷ್ಠಿ, ಡಿ.ಎಸ್. ೧೯೫೮
೮. ಮೈಸೂರಿನ ವ್ಯವಸಾಯ ನರಸಿಂಹ ಅಯ್ಯಂಗಾರ್, ಮ.ಲ. ೧೯೬೧
೯. ರೇಷ್ಮೆ ನರಸಿಂಹಮೂರ್ತಿ, ಎಲ್. ೧೯೬೨
೧೦. ಕುರಿ ಸಾಕಣೆ ಮುನಿಯಪ್ಪ, ಜೆ. ೧೯೬೩
೧೧. ನೀರಾವರಿ ಕಪನೀಪತಿಭಟ್ಟ, ಎಚ್.ಸಿ. ೧೯೬೪
೧೨. ಬೆಳವಲ ಹೊಸಮನಿ, ಎಂ.ಎಂ. ೧೯೬೫
೧೩. ವನಮಾಲಿ ನರಸಿಂಹ ಅಯ್ಯಂಗಾರ್, ಮ.ಲ. ೧೯೬೬

ಹಸಿರು ಕ್ರಾಂತಿಯ ಪ್ರಾರಂಭವು ಕೃಷಿ ಸಂವಹನೆಗೆ ಹೆಚ್ಚು ಒತ್ತು ಕೊಟ್ಟಿತು. ಸಂವಹನೆಯ ವಿಧಾನ ಮತ್ತು ಧ್ಯೇಯೋದ್ದೇಶಗಳು ಆಧುನಿಕ ಕೃಷಿಯ ಆದ್ಯತೆಗಳನುಸಾರ ಬದಲಾಗುತ್ತಾ ಹೋಯಿತು. ಕೃಷಿ ವಿಸ್ತರಣ ತತ್ವಗಳ ತಳೆಹದಿಯ ಮೇಲೆಯೇ ಕೃಷಿ ಸಾಹಿತ್ಯ ರಚನೆ ಮತ್ತು ಕೃಷಿ ಪತ್ರಿಕೋದ್ಯಮ ಬೆಳೆಯುತ್ತಾ ಹೋಯಿತು. ಕಳೆದ ಶತಮಾನದ ಐದನೇ ದಶಕದ ಈ ಸಂದಿಗ್ಧ ಹಂತದಲ್ಲಿ ಕೃಷಿ ಸಂವಹನೆ ಒಂದು ಸಾಂಸ್ಥಿಕ ರೂಪ ತಳೆಯಿತು. ಆದರೂ ವಿಸ್ತರಣೆ ಮತ್ತು ಕೃಷಿ ಸಾಹಿತ್ಯ ರಚನೆ ಅಥವಾ ಕೃಷಿ ಪತ್ರಿಕೋದ್ಯಮಗಳ ನಡುವೆ ಅಂತರ ಸಂಬಂಧಗಳ ಸಮಗ್ರತೆ ಏರ್ಪಡಲಿಲ್ಲವಾದುದರಿಂದ ಕೃಷಿ ಪತ್ರಿಕೋದ್ಯಮ ಹಲವಾರು ವರ್ಷಗಳ ಕಾಲ ಮಡುಗಟ್ಟಿದ ನೀರಿನಂತಾಗಿತ್ತು.

ಕೃಷಿ ಸಂವಹನೆಯ ಅವಶ್ಯಕತೆಯ ಬಗೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಕುಲಪತಿಗಳಾದ ಡಾ. ಕೆ.ಸಿ. ನಾಯಕ್ ‘ಆಧುನಿಕ ವ್ಯವಸಾಯ’ ಪುಸ್ತಕದ ಮುನ್ನುಡಿಯಲ್ಲಿ ಇಂದಿನ ಯಾಂತ್ರಿಕ ಬೇಸಾಯದ ತಳಹದಿಯ ಮೇಲೆ ಭಾರತದ ಬೇಸಾಯ ಪದ್ಧತಿಯನ್ನು ಬದಲಿಸಬೇಕಾದರೆ ಬಹಳ ಮುಖ್ಯ, ಆದುದರಿಂದ ಆಧುನಿಕ ಬೇಸಾಯದ ವಿಜ್ಞಾನಗಳು ಮತ್ತು ಶಿಕ್ಷಣ ತಜ್ಞರು ಪೇಟೆ ಪಟ್ಟಣಗಳ ಹಾಗೂ ಹಳ್ಳಿಗಾಡುಗಳ ಜನರಿಗೆ ವಿವರಿಸಿ ಹೇಳುವುದು ಅವರ ಕರ್ತವ್ಯವೆಂದು ಹೇಳಿದ್ದಾರೆ. ಅದರಂತೆ ಅರವತ್ತರ ದಶಕದ ಕೊನೆಯಿಂದ ಪ್ರಕಟವಾದ ಸಾಹಿತ್ಯದಲ್ಲಿ ಕೃಷಿವಿಜ್ಞಾನ ಹೊಸರೂಪ ಪಡೆಯತೊಡಗಿದ್ದನ್ನು ಸ್ಫುಟವಾಗಿ ಕಾಣಬಹುದು. ೬೦-೭೦ರ ದಶಕದಲ್ಲಿ ಪ್ರಕಟವಾದ ಕೆಲವು ಕೃಷಿವಿಜ್ಞಾನ ಸಾಹಿತ್ಯದ ಕೃತಿಗಳನ್ನು ಕೋಷ್ಟಕ ೪ರಲ್ಲಿ ಕೊಡಲಾಗಿದೆ.

ಕೋಷ್ಟಕ : ೬೦೭೦ರ ದಶಕದಲ್ಲಿ ಪ್ರಕಟವಾದ ಕನ್ನಡದ ಕೆಲವು ಕೃಷಿವಿಜ್ಞಾನ ಪ್ರಕಟಣೆಗಳು

ಕ್ರ.ಸಂ. ಶೀರ್ಷಿಕೆ

ಲೇಖಕರು

ಪ್ರಕಟವಾದ ವರ್ಷ
೧. ಸಸ್ಯ ಸಂರಕ್ಷಣೆ ಚಿನ್ನಾಸ್ವಾಮಿ ರೆಡ್ಡಿ, ಎಂ. ೧೯೬೭
೨. ಕ್ಯಾವೆಂಡಿಶ್ ಬಾಳೆ ಕೃಷ್ಣಪ್ಪ ಗೌಡ ೧೯೬೭
೩. ತೆಂಗು ವಿಜಯೇಂದ್ರ ಮೂರ್ತಿ ೧೯೬೭
೪. ಅಧಿಕ ಉತ್ಪಾದನೆಗಾಗಿ ಬೆಳೆಗಳು ಮಿಶ್ರತಳಿ ಕಲ್ಯಾಣಿ ಮಠ, ಎ.ಸಿ. ೧೯೬೮
೫. ನಮ್ಮ ರೈತರೇಕೆ ಹಿಂದುಳಿದಿದ್ದಾರೆ ಕೊಡ್ಲಿ, ಎಂ.ಸಿ. ೧೯೬೮
೬. ರೇಶ್ಮೆ ಹುಳು ಮತ್ತು ಅದರ ಸಾಕಾಣೆ ಚೌಧರಿ, ಎಸ್.ಎನ್ ೧೯೬೮
೭. ಆಧುನಿಕ ಬೇಸಾಯ ಗೊದ್ದು ವೀರೇಶ್ ೧೯೭೧
೮. ಸಸ್ಯ ಸಂರಕ್ಷಣೆ – ಕೈಪಿಡಿ ಶೇಷಗಿರಿರಾವ್, ಡಿ. ೧೯೭೧
೯. ವ್ಯವಸಾಯ ಕೈಪಿಡಿ ಕುವೆಂಪು
[ಪ್ರ.ಸಂ.]
೧೯೭೨
೧೦. ಮೆಕ್ಸಿಕನ್ ಗೋಧಿ ಹನುಮಂತಪ್ಪ, ಪಿ. ೧೯೭೩
೧೧. ಹೊಸ ಬಿತ್ತನೆ-ಹೆಚ್ಚು ಲಾಭ
‘ಪೂರ್ಣರಾಗಿ’
ಶ್ರೀರಂಗರಾಜು, ಎಸ್.ಎಲ್. ೧೯೭೩
೧೨. ಸಂಕರಣ ಜೋಳ ಕಿತ್ತೂರ್, ಜಿ.ಡಿ. ೧೯೭೩
೧೩. ಮೈಸೂರು ರಾಜ್ಯದಲ್ಲಿ ಕೃಷಿ ಹಿತ್ತಲಮನಿ, ವಿ.ಸಿ. ೧೯೭೩
೧೪. ಆಧುನಿಕ ಬೇಸಾಯ ಪ್ರಶ್ನೆ
ಪರಿಹಾರ (ಭಾಗ-೧)
ಶೇಷಾದ್ರಿ ಅಯ್ಯರ್, ಅ
ಹಾಗೂ ಇತರರು
೧೯೭೩

ಈ ಕೃತಿಗಳಲ್ಲಿ ಸಾಂಪ್ರದಾಯಕ ಕೃಷಿಯಿಂದ ಆಧುನಿಕ, ‘ವೈಜ್ಞಾನಿಕ’ ಕೃಷಿಯಾಗಿ ರೂಪಾಂತರವಾಗುವ ಕೃಷಿ ಸಂಕ್ರಮಣಾವಸ್ಥೆಯನ್ನು ಸ್ಫುಟವಾಗಿ ಕಾಣಬಹುದು. ೧೯೬೮ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಉಪನ್ಯಾಸ ಗ್ರಂಥಮಾಲೆಯಡಿ ಪ್ರಕಟಿಸಿರುವ ‘ಅಧಿಕ ಉತ್ಪಾದನೆಗಾಗಿ ಮಿಶ್ರತಳಿ ಬೆಳೆಗಳು’ ಕೃತಿಯ ಅರಿಕೆಯಲ್ಲಿ,

ಮಿಶ್ರತಳಿಯ ವ್ಯವಸಾಯ ನಮ್ಮ ದೇಶಕ್ಕೆ ತೀರ ಹೊಸದಾದ ವಿಷಯ, ಜನಸಾಮಾನ್ಯರಲ್ಲಿ ಮತ್ತು ರೈತರಲ್ಲಿ ಮಿಶ್ರ ತಳಿಗಳನ್ನು ಬೆಳೆದು ಹೆಚ್ಚು ಉತ್ಪಾದನೆಯನ್ನು ಮತ್ತು ಲಾಭವನ್ನು ಪಡೆಯುವ ಹಂಬಲ ಪ್ರಬಲವಾಗಿದೆ. ಇಂಥ ರೈತರಿಗೆ ಅವಶ್ಯಕವಾದ ತಾಂತ್ರಿಕ ಜ್ಞಾನ ಮತ್ತು ಸೂಕ್ತ ಸಲಹೆ ಸೂಚನೆಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಮಾಡಿಕೊಡುವುದು ಅವಶ್ಯವೆನಿಸುತ್ತದೆ.

ಎಂದಿದ್ದಾರೆ ಲೇಖಕರಾದ ಕಲ್ಯಾಣಿಮಠ, ಎ.ಸಿ.ಯವರು. ಈ ಕೃತಿಯಲ್ಲಿ ಮಿಶ್ರತಳಿಗಳ ಸಂಶೋಧನೆಯ ಕಾರ್ಯವಿವರಣೆ, ಮಿಶ್ರತಳಿ ಬೀಜಗಳ ಉತ್ಪಾದನೆ, ಮಿಶ್ರತಳಿ ಬೀಜಗಳ ವೈಶಿಷ್ಟ್ಯಗಳು, ಸಾಗುವಳಿ ಕ್ರಮಗಳು ಮತ್ತು ಮಿಶ್ರತಳಿ ಬೆಳೆಗಳಿಗಿರುವ ಭವಿತವ್ಯಗಳನ್ನು ವಿವರಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಇದೇ ಮಾಲಿಕೆಯಡಿ ಪ್ರಕಟವಾಗಿರುವ ‘ನಮ್ಮ ರೈತರೇಕೆ ಹಿಂದುಳಿದಿದ್ದಾರೆ’, ಕೃತಿಯಲ್ಲಿ ರೈತರೇಕೆ ಹಿಂದುಳಿದಿದ್ದಾರೆಂದು ವಿಮರ್ಶಿಸುತ್ತಾ ಹಲವಾರು ಕಾರಣಗಳನ್ನು ಪಟ್ಟಿಮಾಡಿ, ಸುಧಾರಿಸಿದ ಬೀಜ ಮತ್ತು ಸಸ್ಯ ಸಂರಕ್ಷಣೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಾ ಈ ಮುಂದಿನಂತೆ ಹೇಳಿದೆ:

ನಮ್ಮ ದೇಶದಲ್ಲಿ ರಾಸಾಯನಿಕ ಗೊಬ್ಬರದ ಉಪಯೋಗ ಬಹಳ ಕಡಿಮೆ ಇದೆ. ಬೇಸಾಯದ ಸುಧಾರಣೆಯಲ್ಲಿ ರಾಸಾಯನಿಕ ಗೊಬ್ಬರದ ಪಾತ್ರ ಮಹತ್ವದ್ದುರಾಸಾಯನಿಕ ಗೊಬ್ಬರದ ಉತ್ಪಾದನೆಯು ನಮ್ಮಲ್ಲಿ ಕಡಿಮೆ ಇದೆ. ಮೂರನೆಯ ಪಂಚವಾರ್ಷಿಕ ಯೋಜನೆಯ ಕೊನೆಯಲ್ಲಿ ನಮ್ಮ ಉತ್ಪಾದನೆಯು ಕೇವಲ ೩೯೨ ಲಕ್ಷ ಟನ್ ಮಾತ್ರ ಆಗಿತ್ತು.

ನಮ್ಮ ರೈತರೆಲ್ಲರೂ ಸುಧಾರಿಸಿದ ಬೀಜಗಳನ್ನು ಉಪಯೋಗಿಸಿದರೆ ಉತ್ಪಾದನೆಯನ್ನು ನಾವು ಎಷ್ಟೋ ಪಾಲು ಹೆಚ್ಚಿಸಬಹುದು. ಇತ್ತೀಚೆಗೆ ಬಳಕೆಗೆ ಬಂದಿರುವ ಹೈಬ್ರಿಡ್ ಜೋಳದ ಬೀಜಗಳು ಇದಕ್ಕೆ ನಿದರ್ಶನವಾಗಬಲ್ಲವು. ಜೊತೆಗೆ ನಮ್ಮ ರೈತರು ಬೆಳೆಯ ಸುರಕ್ಷಿತತೆಯ ಬಗೆಗೂ ಸಾಕಷ್ಟು ಕಾಳಜಿ ತೆಗೆದುಕೊಳ್ಳಬೇಕು. ಪ್ರತಿ ವರುಷವೂ ಮಿಡತೆ, ಇಲಿಗಳು ಮತ್ತು ಅನೇಕ ರೋಗಗಳಿಂದ ಬೆಳೆಗಳು ವಿಪರೀತ ನಾಶವಾಗುತ್ತವೆ. ಆದ್ದರಿಂದ ಪ್ರತಿಯೊಂದು ಗ್ರಾಮಗಳಲ್ಲಿಯೂ ಕ್ರಿಮಿನಾಶಕ ಔಷಧಿ ಮತ್ತು ಪಂಪುಗಳು ಇರಬೇಕು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ೧೯೬೮ರಲ್ಲಿ ಕೃಷಿ ಸಂವಹನೆಯ ಪ್ರಾಮುಖ್ಯತೆಯನ್ನು ಮನಗಂಡು ‘ಡಿಫ್ಯೂಶನ್ ಆಫ್ ಅಗ್ರಿಕಲ್ಚರಲ್ ಇನ್ನೊವೇಶನ್ಸ್’ ಎಂಬ ಗ್ರಂಥವನ್ನು ಪ್ರಕಟಿಸಿತು. ಕೃತಿ ಇಂಗ್ಲೀಶ್ ಭಾಷೆಯದಾದರೂ ಮೈಸೂರು ವಿಶ್ವವಿದ್ಯಾನಿಲಯವು ಇದನ್ನು ಪ್ರಕಟಿಸಿರುವುದರಿಂದ ಅದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ರೈತರು ಕೃಷಿ ಉತ್ಪಾದನೆಯಲ್ಲಿ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಆಹಾರ ಸಮಸ್ಯೆಗೆ ಪರಿಹಾರವೇ ಇಲ್ಲ. ಆದುದರಿಂದ ಕೃಷಿ ಸಂವಹನೆಯು ಅತ್ಯಂತ ಅವಶ್ಯಕವೆಂದಿದ್ದಾರೆ ಲೇಖಕರು.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಆಧುನಿಕ ವ್ಯವಸಾಯ’, ಕೃತಿಯ ಮುನ್ನುಡಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಕುಲಪತಿಗಳಾದ ಡಾ. ಕೆ.ಸಿ. ನಾಯಕ್ ರವರು.

ಇಂದಿನ ಯಾಂತ್ರಿಕ ಬೇಸಾಯದ ತಳಹದಿಯ ಮೇಲೆ ಭಾರತದ ಬೇಸಾಯ ಪದ್ಧತಿಯನ್ನು ಬದಲಿಸಬೇಕಾದರೆ ಬೇಸಾಯಗಾರ ಮತ್ತು ಜನ ಸಾಮಾನ್ಯರಲ್ಲಿ ಬಗ್ಗೆ ತಿಳಿವಳಿಕೆ ಬೆಳೆಸುವುದು ಬಹಳ ಮುಖ್ಯ ಆಧುನಿಕ ತಾಂತ್ರಿಕ ಬೇಸಾಯದ ತಿಳಿವಳಿಕೆಯನ್ನು ಸಾಮಾನ್ಯ ಬೇಸಾಯಗಾರರಿಗೆ ಒದಗಿಸುವ ಸಾಹಸದ ಕಾರ್ಯವನ್ನು ಕೀಟಶಾಸ್ತ್ರದ ಉಪ ಪ್ರಾಧ್ಯಾಪಕ ಶ್ರೀ ಗೊದ್ದು ವೀರೇಶ ಅವರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಬೇಸಾಯವು ಮಾಡಿರುವ ಪರಿವರ್ತನೆಯನ್ನು ಸುಮಾರು ೨೦೦ ಪುಟಗಳ ಪುಸ್ತಕವು ಚಿತ್ರಿಸುತ್ತದೆ. ಜ್ಞಾನದ ಆಸ್ಫೋಟ ಮತ್ತು ಅದ್ಭುತ ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಯ ದಿವಸಗಳಲ್ಲಿ ಜನಸಾಮಾನ್ಯರಿಗೆ ಅವುಗಳೊಡನೆ ಹೆಜ್ಜೆಯಿಟ್ಟು ಸಾಗುವುದು ಸುಲಭವಾಗಿಲ್ಲ. ನೋಬೆಲ್ ಪಾರಿತೋಷಕ ವಿಜೇತ ಡಾ.ಬೊರ್ಲಾಗ್ ಮತ್ತು ಫಿಲಿಪ್ಪಾಯಿನ್ಸ್ ಅಂತರರಾಷ್ಟ್ರೀಯ ಭತ್ತ ಸಂಶೋಧನ ಸಂಸ್ಥೆಯ ಡಾ. ಚಾಂಡ್ಲರರು ಆಧುನಿಕ ಯಂತ್ರ ತಂತ್ರ ವಿಜ್ಞಾನಗಳ ಸಹಾಯದಿಂದ ಬೇಸಾಯದ ಹುಟ್ಟುವಳಿಯಲ್ಲಿ ಭಾರೀ ದೊಡ್ಡ ಬದಲಾವಣೆಯನ್ನು ತರಲು ಶಕ್ಯವೆಂದಿರುವವರು. ಆದುದರಿಂದ ಆಧುನಿಕ ಬೇಸಾಯದ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಪೇಟೆ ಪಟ್ಟಣಗಳ ಹಾಗೂ ಹಳ್ಳಿಗಾಡುಗಳ ಜನರಿಗೆ ವಿವರಿಸಿ ಹೇಳುವುದು ಅವರ ಕರ್ತವ್ಯ

ಎಂದಿದ್ದಾರೆ. ಲೇಖಕರ ಮಾತಿನಲ್ಲಿಯೂ ಸಹ ಬದಲಾಗುತ್ತಿರುವ ಕೃಷಿ ವಿಧಾನಗಳ ಚಿತ್ರಣ ಮತ್ತು ಅದಕ್ಕಾಗಿ ಅವಶ್ಯಕವಿರುವ ಕೃಷಿ ಸಂವಹನೆಯ ಪ್ರಾಮುಖ್ಯತೆ ಕಂಡುಬರುತ್ತದೆ :

ಕಳೆದ ಒಂದು ದಶಕದಿಂದ ಪ್ರಪಂಚದ ಹಿಂದುಳಿದ ರಾಷ್ಟ್ರಗಳು ಆಹಾರ ಸ್ವಾವಲಂಬನೆಗೆ ಬಹಳ ಹೋರಾಡುತ್ತಿವೆ. ಇದರಲ್ಲಿ ಭಾರತದ ಪಾತ್ರ ಬಹಳ ಮಹತ್ವವಾದದ್ದು. ಕಳೆದ ಎರಡು ದಶಕಗಳಲ್ಲಿ ನಮ್ಮ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಿದ್ದರೂ, ಪ್ರತಿ ವರ್ಷದ ಹೆಚ್ಚಿನ ಆಹಾರ ಉತ್ಪನ್ನ ಶೇ. .೫ರಷ್ಟೇ ಇದೆ. ಕನಿಷ್ಠ ಶೇ. ೫ರಷ್ಟಕ್ಕೆ ಪ್ರತಿ ವರ್ಷ ಆಹಾರ ಉತ್ಪನ್ನ ಹೆಚ್ಚಿಸದಿದ್ದರೆ, ಆಹಾರ ಸ್ವಯಂಪೂರ್ಣತೆ ಪಡೆಯುವುದು ಕಷ್ಟವಾಗುವುದು. ಕಳೆದ ನಾಲ್ಕೈದು ವರ್ಷಗಳಲ್ಲಿ ಗುರಿಯನ್ನು ಸಾಧಿಸುವ ಚಿಹ್ನೆಗಳು ಕಂಡುಬರುತ್ತಿವೆ. ದಶಕದಲ್ಲಿ ನಡೆದ ಕೃಷಿರಂಗದ ಪ್ರಗತಿಯನ್ನು ಹಸಿರುಕ್ರಾಂತಿಯೆಂದು ಕರೆಯಲಾಯಿತು. ಇದ್ದಕ್ಕಿದ್ದಂತೆಯೇ ಎಲ್ಲೆಲ್ಲೂ ರೈತರಲ್ಲಿ ಒಂದು ಹೊಸ ಚೈತನ್ಯ ಮೂಡಿ, ಅಧಿಕ ಫಸಲು ತೆಗೆಯುವ ಕೂಗು ಕೇಳಿಬರುತ್ತಿವೆ. ಹಿಂದೆಂದೂ ಇಲ್ಲದ ಹುಮ್ಮಸ್ಸು ಈಗ ಬರುವುದಕ್ಕೆ ಸಹಾಯವಾದ ಕೆಲವು ಅಂಶಗಳನ್ನು ಮನವರಿಕೆ ಮಾಡಿಕೊಡ ಬೇಕೆಂದಿರುವುದೇ ಪುಸ್ತಕದ ಮುಖ್ಯ ಉದ್ದೇಶವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ರೈತರಿಗಾಗಿಯೇ ಪ್ರಕಟಿಸಿದ ಮೊಟ್ಟಮೊದಲ ಬೃಹದ್ಗ್ರಂಥ ವ್ಯವಸಾಯ ಕೈಪಿಡಿ. ೮೮೮ ಪುಟಗಳ ಈ ಗ್ರಂಥಕ್ಕೆ ಪ್ರಧಾನ ಸಂಪಾದಕರಾಗಿದ್ದ ಕುವೆಂಪುರವರು ಸಹ ತಮ್ಮ ಮುನ್ನುಡಿಯಲ್ಲಿ ಅಧಿಕ ಕೃಷಿ ಉತ್ಪಾದನೆಗೆ ಆಧುನಿಕ ಪದ್ಧತಿ ಮತ್ತು ಅಧಿಕ ಇಳುವರಿ ಕೊಡಬಲ್ಲ ತಳಿಗಳ ಬಳಕೆ ಮುಖ್ಯ, ರೈತರಿಗೆ ಈ ಮುಖ್ಯಾಂಶಗಳ ಅರಿವಿರದಿದ್ದರೆ ಇದು ಸಾಧ್ಯವಿಲ್ಲವೆಂದು ಹೇಳುತ್ತ ಈ ರೀತಿ ಹೇಳಿದ್ದಾರೆ :

ತೀವ್ರಗತಿಯಲ್ಲಿ ಹೆಚ್ಚುತ್ತಿರುವ ರಾಜ್ಯದ ಜನತೆಗೆ ಅಗತ್ಯವಾದ ಆಹಾರವನ್ನು ಹೆಚ್ಚು ಹೆಚ್ಚಾಗಿ ಬೆಳೆಸುವುದು ಅತ್ಯಾವಶ್ಯಕ. ವ್ಯವಸಾಯ ಯೋಗ್ಯ ಭೂ ವಿಸ್ತೀರ್ಣಕ್ಕೆ ಮಿತಿಯಿದೆ. ಆದ್ದರಿಂದ ಇರುವ ಭೂ ಪ್ರದೇಶದಲ್ಲೇ ಹೆಚ್ಚು ಉತ್ಪತ್ತಿ ಪಡೆಯಬೇಕು. ಇದಕ್ಕೆ ಆಧುನಿಕ ಪದ್ಧತಿ ಮತ್ತು ಅಧಿಕ ಇಳುವರಿ ಕೊಡಬಲ್ಲ ತಳಿಗಳ ಬಳಕೆ ಮುಖ್ಯ. ರೈತರಿಗೆ ಮುಖ್ಯಾಂಶಗಳ ಅರಿವಿರದಿದ್ದರೆ ಇದು ಸಾಧ್ಯವಿಲ್ಲವೈಜ್ಞಾನಿಕ ಸಂಶೋಧನೆ ಅತಿವೇಗವಾಗಿ ಮುಂದುವರಿಯುತ್ತಿದೆ. ಇದರಿಂದ ನವೀನ ತಳಿ ಅಥವ ಪದ್ಧತಿ ನಾಳೆ ಹಳತಾಗಬಹುದು. ಚಂದ್ರಲೋಕವನ್ನು ಮುಟ್ಟಿ, ಮುಟ್ಟಿ, ವಾಸಿಸಲು ಪ್ರಯತ್ನಿಸುತ್ತಿರುವ ಕಾಲವಿದು. ಆದ್ದರಿಂದ ಮೂಲಾಂಶಗಳನ್ನು ಅರಿತಿದ್ದಲ್ಲಿ ಸಂಶೋಧನೆಯ ಫಲವನ್ನು ತಿಳಿಯುವುದು ಸುಲಭ. ಪುಸ್ತಕದಲ್ಲಿ ಸಾಮಾನ್ಯ ರೈತರಿಗೆ ಅನುಕೂಲವಾಗುವಂತಹ ಅಂಶವೆಲ್ಲವನ್ನೂ ವಿವರಿಸಲು ಪ್ರಯತ್ನಿಸಲಾಗಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪ್ರಕಟಿಸಿದ ಮೈಸೂರು ರಾಜ್ಯದಲ್ಲಿ ಕೃಷಿಯ ಮುನ್ನುಡಿಯಲ್ಲಿ.

ಸಂಪ್ರದಾಯಬದ್ಧ ಕೃಷಿಯ ಉತ್ಪನ್ನ ತೀರ ಕನಿಷ್ಠ. ತಲೆಮಾರಿನಿಂದ ಬಂದ ಬೇಸಾಯ ಪದ್ಧತಿಗಳೇ ಕೃಷಿ ಉದ್ಯಮಕ್ಕೆ ಆಧಾರ. ಮರದ ನೇಗಿಲು; ಅದರ ಮುಂದೆ ನಿಶ್ಚಿಕ್ತ ಎತ್ತುಗಳು; ಹಿಂದೆ ಅವುಗಳನ್ನು ಹೊಡೆಯುತ್ತಿರುವ ಬಡಕಲು, ಅರೆ ಬೆತ್ತಲೆ ರೈತ! ಇದು ನಮ್ಮ ಬೇಸಾಯದ ಸಂಕೇತ. ಪ್ರಪಂಚದ ಇತರೆಡೆ ಅಗಾಧ ಪ್ರಗತಿಯಾಗಿರುವಾಗ ನಮ್ಮಲ್ಲಿ ಕೃಷಿಪ್ರಧಾನ ಅಂಗಗಳಾದ ಉಳುಮೆ, ಬಿತ್ತನೆ, ಕಟಾವು, ಒಕ್ಕಣೆ, ತೂರುವುದು, ಶೇಖರಣೆ, ಕೊನೆಯದಾಗಿ ಧಾನ್ಯ, ಸಾಗಾಣಿಕೆ ಇವೆಲ್ಲಾ ಹಿಂದಿದ್ದಂತೆಯೇ, ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ವಿಶ್ವದ ಇತರ ಮುಂದುವರಿದ ದೇಶಗಳಲ್ಲಿ ಕೃಷಿ, ವೈಜ್ಞಾನಿಕ ಕ್ರಮಗಳ ಅಳವಡಿಕೆಯಿಂದ ಅಪಾರ ಪ್ರಗತಿ ಸಾಧಿಸಿದೆ. ಆಧುನಿಕ ಕೃಷಿ ಅನುಷ್ಠಾನಕ್ಕೆ ರೈತನ ಅರಿವಿನ ಮಟ್ಟ ಸಾಕಷ್ಟು ಹೆಚ್ಚಿರಬೇಕು. ಅವನಿಗೆ ವಿವಿಧ ಹಂತಗಳಲ್ಲಿ ಅಳವಡಿಸುವ ನೂತನ ಕ್ರಮಗಳ ಆಗುಹೋಗುಗಳ ಪ್ರಜ್ಞೆ ಅವಶ್ಯಕ. ರೈತನಿಗೆ ದಿಕ್ಕಿನಲ್ಲಿ ಅರಿವು ಉಂಟುಮಾಡುವ ಕಾರ್ಯಕ್ರಮ ಅವ್ಯಾಹತವಾಗಿ ನಡೆಯುತ್ತಿರಬೇಕು. ಕೃಷಿಗೆ ವಿಜ್ಞಾನ ನೀಡುವ ಕೊಡುಗೆಯ ಅರಿವೂ ರೈತನಿಗೆ ಸದಾ ಇರಬೇಕು.

ಎಂದು ಹೇಳಿದೆ. ಈ ರೀತಿಯ ಕೃಷಿಗೆ ವಿಜ್ಞಾನ ಕೊಡುವ ಕೊಡುಗೆ ಯಾವ ರೀತಿಯಲ್ಲಿರಬೇಕೆಂಬುದನ್ನು ಡಾ.ಆರ್. ದ್ವಾರಕೀನಾಥ್ ರವರು ಆಧುನಿಕ ಬೇಸಾಯ ಪ್ರಶ್ನೆ-ಪರಿಹಾರ (ಭಾಗ-೧)ರ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ :

ನಮ್ಮ ಬೇಸಾಯದಲ್ಲಿ ಇದು ಒಂದು ಪರ್ವ ಕಾಲ. ಸಾಂಪ್ರದಾಯಕ ಬೇಸಾಯವು ಸ್ವಲ್ಪ ಸ್ವಲ್ಪವಾಗಿ ಬದಲಾವಣೆ ಹೊಂದಿ ವಾಣಿಜ್ಯ ಬೇಸಾಯವಾಗಿ ರೂಪುಗೊಳ್ಳುತ್ತಿದೆ. ಹೀಗೆ ವ್ಯವಸಾಯ, ರೂಪಾಂತರವನ್ನು ಹೊಂದುವಾಗ ಅನೇಕ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಇತ್ತೀಚೆಗೆ ದೊರೆಯುತ್ತಿರುವ ತಾಂತ್ರಿಕ ಜ್ಞಾನವು ಒಂದು ಮುಖ್ಯ ಅಂಶ. ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳ ದೆಸೆಯಿಂದ ಅನೇಕ ಹೊಸ ವಿಚಾರಗಳು ಹೊರಬೀಳುತ್ತಿರುತ್ತವೆ. ವಿಚಾರಗಳು ಸರಳವೂ, ಸುಲಭವೂ ಆದ ರೀತಿಯಲ್ಲಿ ನಮ್ಮ ರೈತರಿಗೆ ದೊರಕಬೇಕಾಗಿದೆ.

ಇದೇ ಸಮಯದಲ್ಲಿ ಮೈಸೂರಿನ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಹಲವಾರು ಕಿರುಹೊತ್ತಿಗೆಗಳನ್ನು ಪ್ರಕಟಿಸಿತು. ವಯಸ್ಕರ ಶಿಕ್ಷಣ ಗ್ರಾಮೀಣ ಜನರನ್ನು ಉದ್ದೇಶಿಸಿಯೇ ಇದ್ದುದರಿಂದ ಹಾಗೂ ಗ್ರಾಮೀಣ ಜನರೆಲ್ಲರೂ ಬಹುಪಾಲು ರೈತರೇ ಆಗಿರುವುದರಿಂದ ಈ ವಯಸ್ಕರ ಶಿಕ್ಷಣ ಸಾಹಿತ್ಯದಲ್ಲೂ ಕೃಷಿ ವಿಚಾರಗಳನ್ನು ಪ್ರಕಟಿಸಲಾಗುತ್ತಿತ್ತು. ಈ ರೀತಿಯ ಕೆಲವು ಪ್ರಮುಖ ಪ್ರಕಟಣೆಗಳನ್ನು ಕೋಷ್ಟಕ ೫ರಲ್ಲಿ ಕೊಡಲಾಗಿದೆ.

ಕೋಷ್ಟಕ : ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಪ್ರಕಟಿಸಿದ ಕೆಲವು ಕೃಷಿ ಪ್ರಕಟಣೆಗಳು

ಕ್ರ.ಸಂ. ಶೀರ್ಷಿಕೆ ಲೇಖಕರು ಪ್ರಕಟಣೆಯ ವರ್ಷ
೧. ಪಶುಪಾಲನೆ ಕೃಷ್ಣಶಾಸ್ತ್ರಿ, ಎಂ. ೧೯೪೪
೨. ಹೆಸರು ಮೇವಿನ ಕಣಜ ವೆಂಕಟಸುಬ್ಬಯ್ಯ,ಆರ್.ಬಿ. ೧೯೭೨
೩. ಕಸಿ ಮತ್ತು ಗೂಟಿ ಗುರುಮೂರ್ತಿ, ಬಿ.ವೈ. ೧೯೭೨
೪. ಕಾಳಿನ ಉಳಿಕೆ-ರೈತನ ಗಳಿಕೆ ವಾಮದೇವಯ್ಯ, ಬಿ.ಎಂ. ೧೯೭೨
೫. ಮೆಕ್ಸಿಕನ್ ಗೋಧಿ ಹನುಮಂತಪ್ಪ,ಪಿ. ೧೯೭೩
೬. ಹೊಸ ಬಿತ್ತನೆ-ಹೆಚ್ಚು ಲಾಭ
‘ಪೂರ್ಣರಾಗಿ’
ಶ್ರೀರಂಗರಾಜು, ಎಸ್.ಎಲ್. ೧೯೭೩
೭. ಸಂಕರಣ ಜೋಳ ಕಿತ್ತೂರ್, ಜಿ.ಡಿ ೧೯೭೩

. ಮೂರನೆಯ ಹಂತ೧೯೮೧ರಿಂದ ಇಂದಿನವರೆಗೆ

ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ, ತನ್ಮೂಲಕ ಕೃಷಿವಿಜ್ಞಾನ ಸಾಹಿತ್ಯದ ವಿಕಾಸದಲ್ಲಿ ಈ ಮೂರನೆಯ ಹಂತ ಅತ್ಯಂತ ಸಂದಿಗ್ಧವಾದುದು. ಕೃಷಿ ಇಂದು ಬದುಕಿನ ಒಂದು ಬದುಕಿನ ವಿಧಾನವಾಗಷ್ಟೇ ಉಳಿದಿಲ್ಲ. ಎಲ್ಲ ಕ್ಷೇತ್ರಗಳ ವಾಣಿಜ್ಯೀಕರಣವಾಗಿರುವಂತೆ ಕೃಷಿ ಕ್ಷೇತ್ರದ ವಾಣಿಜ್ಯಕರಣವೂ ಆಗಿದೆ. ಜಾಗತೀಕರಣವೆಂಬ ಕತ್ತಿಯು ಸಂಸ್ಕೃತಿಯ ಬೇರಿಗೇ ಕೊಡಲಿಯೇಟು ಹಾಕಿದೆ. ಶತಮಾನಗಳಿಂದ ನಿರಂತರವಾಗಿ ಸಾಗಿದ್ದ ಸಂಸ್ಕೃತಿಯ ಗತಿ ಹಾಗೂ ದಿಕ್ಕು ಶರವೇಗದ ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ತುಂಡರಿಸಿದೆ. ಅಂದು ಪ್ರಕೃತಿಯ ವಿಕೋಪಗಳನ್ನಷ್ಟೇ ಎದುರಿಸಬೇಕಾಗಿದ್ದ ರೈತ ಇಂದು ಪರಿಸರ ಮಾಲಿನ್ಯ, ಬಹುರಾಷ್ಟೀಯ ಸಂಸ್ಥೆಗಳ ಮೇಲಿನ ಅವಲಂಬನೆ, ಪೇಟಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕು, ರೈತ ವಿರೋಧಿ ಕೃಷಿ ನೀತಿಗಳು, ದಿನದಿನಕ್ಕೆ ಕಾಣಿಸಿಕೊಳ್ಳುತ್ತಿರುವ ಹೊಸ ಹೊಸ ರೋಗ ಮತ್ತು ಪೀಡೆಗಳು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಸಿರು ಕ್ರಾಂತಿಯಿಂದ ಇಂದು ಪರಿಸರ ಮಾಲಿನ್ಯ, ಅಂತರ್ಜಲ ನಿಕ್ಷೇಪ ಖಾಲಿಯಾಗಿರುವುದು, ನೀರು ಮತ್ತು ಗಾಳಿಯ ಮಲಿನತೆ, ಭೂಮಿ ಬರಡಾಗಿರುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ಕೃಷಿವಿಜ್ಞಾನ ಸಾಹಿತ್ಯ ಹೊಸ ಹಾಗೂ ವಿಶಿಷ್ಟ ರೂಪು ಪಡೆಯುತ್ತಿದೆ; ರೈತನ ಅರಿವನ್ನು ಮತ್ತೊಂದು ದಿಕ್ಕಿನಲ್ಲಿ ಹೆಚ್ಚಿಸುವ ಪ್ರಯತ್ನ ಈ ಸಾಹಿತ್ಯ ನಡೆಸುತ್ತಿದೆ.

ಕೃಷಿ ವಿಜ್ಞಾನ ಇಂದು ಶರವೇಗದಲ್ಲಿ ಸಾಗುತ್ತಿದೆ. ಜೀವತಂತ್ರಜ್ಞಾನ ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ.  ಇದರ ಪರ  ಮತ್ತು ವಿರೋಧ ದನಿಗಳು ಎಲ್ಲೆಡೆಯೂ ಕೇಳಿಬರುತ್ತಿದೆ. ಹಾಗಾಗಿ ಕೃಷಿ ವಿಜ್ಞಾನ ಸಾಹಿತ್ಯದ ಹೊಣೆಗಾರಿಕೆ ಇನ್ನೂ ಹೆಚ್ಚಾಗಿದೆ.