ಮಾನವ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲ ಸೆಲೆ ಕೃಷಿಯೇ ಆಗಿದೆ. ಗೆಡ್ಡೆಗೆಣಸು ಸಂಗ್ರಹಿಸುವ ಮತ್ತು ಬೇಟೆಯಾಡುತ್ತಿದ್ದ ಮಾನವ ಕ್ರಮೇಣ ಕೃಷಿಗಾಗಿ ಒಂದೆಡೆ ನೆಲೆಯೂರಿದಾಗ ನಾಗರಿಕತೆ ಪ್ರಾರಂಭವಾಯಿತು. ಈ ರೀತಿ ಕೃಷಿಗಾಗಿ ಒಂದೆಡೆ ನೆಲೆಯೂರಿದುದರಿಂದಾಗಿ ನಂತರದ ಆರ್ಥಿಕತೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯ ಮೇಲೂ ಮಹತ್ತರ ಪರಿಣಾಮಗಳು ಬೀರತೊಡಗಿದವು. ವ್ಯವಸಾಯ ಭಾರತದ ರೈತನಿಗೆ ಜೀವನೋಪಾಯದ ಒಂದು ವಿಧಾನವಷ್ಟೇ ಆಗಿರದೆ ಅವನ ದಿನನಿತ್ಯದ ಹಾಗೂ ಸಾಂಸ್ಕೃತಿಕ ಜೀವನ ವಿಧಾನವೇ ಆಗಿತ್ತು. ಭಾರತಿಯ ಕೃಷಿಯಲ್ಲಿ ಕೆಲವು ದಶಕಗಳ ಹಿಂದಿನವರೆಗೂ ಮಹತ್ತರ ಬದಲಾವಣೆಗಳೇನೂ ಇರಲಿಲ್ಲ. ತನ್ನ ಪೂರ್ವಜರಿಂದ ಪಾರಂಪರಿಕವಾಗಿ ಪಡೆದ ಜ್ಞಾನ ಮತ್ತು ಅನುಭವದಿಂದ ತನ್ನ ರೈತಾಪಿ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದ. ರೈತನ ಕೃಷಿಯ ಹಾಗೂ ಕೌಟುಂಬಿಕ ಅವಶ್ಯಕತೆಗಳು ಕೆಲವು ಮೂಲಭೂತ ಅವಶ್ಯಕತೆಗಳನ್ನೊಳಗೊಂಡಂತೆ ತೀರಾ ಸೀಮಿತವಾಗಿದ್ದವು. ಹಲವಾರು ಈ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ನೀಗಿಸಿಕೊಳ್ಳಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ಈ ಸೇವೆಗಳಿಗೆ ಸಂದಾಯವನ್ನು ಕೃಷಿ ಉತ್ಪನ್ನಗಳ ರೂಪದಲ್ಲಿಯೇ ಕೊಯ್ಲಿನ ಸಮಯದಲ್ಲಿ ಪಾವತಿಸಲಾಗುತ್ತಿತ್ತು. ಆದರೆ ಈಗ ಆಧುನಿಕ ಕೃಷಿ ವಿಧಾನಗಳಿಂದ ಹಾಗೂ ಜಾಗತೀಕರಣಗಳಿಂದಾಗಿ ಇಂದು ಯಾವುದೋ ಮೂಲೆಯಲ್ಲಿನ ಹಳ್ಳಿಯ ರೈತನೂ ತನ್ನಷ್ಟಕ್ಕೆ ತಾನು ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಕೃಷಿ ಕ್ಷೇತ್ರದಲ್ಲಾಗುತ್ತಿರುವ ಮಹತ್ವದ ಘಟನೆಗಳು ಇಂದು ಕೃಷಿಯ ರೂಪುರೇಷೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿವೆ.

ಯಾವುದೇ ಸಾಹಿತ್ಯ ಕೃತಿ ಲೇಖಕನ ಆಯಾ ಸಮಯದ ಪರಿಸರ ಪ್ರಜ್ಞೆಗಳಿಗೆ ಅನುಗುಣವಾಗಿ ರಚಿತವಾಗುವುದರಿಂದ ಕೃಷಿವಿಜ್ಞಾನ ಸಾಹಿತ್ಯದ ಅವಲೋಕನ ಕೃಷಿಯೆಂಬ ಸಂಸ್ಕೃತಿಯ ಚಲನೆಯ ಪರಾಮರ್ಶನೆಯನ್ನು ಸಾಧ್ಯವಾಗಿಸುತ್ತದೆ. ಈ ಕೃತಿಯಲ್ಲಿ ಅಂತಹ ಅವಲೋಕನದ ಕಿರುಪ್ರಯತ್ನವನ್ನು ಮಾಡಲಾಗಿದೆ.

ಈ ಸಮಯದಲ್ಲಿ ನನಗೆ ಕೃಷಿವಿಜ್ಞಾನದ ಅರಿವಿನ ಶಿಕ್ಷಣವನ್ನು ನೀಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಅಲ್ಲಿನ ಅಧ್ಯಾಪಕರನ್ನು ನಾನು ಸ್ಮರಿಸಲೇಬೇಕು. ಈ ಕೃತಿಯ ರಚನೆಯಲ್ಲಿ ನನ್ನೊಂದಿಗೆ ಚರ್ಚಿಸಿ, ಸಲಹೆ ಸೂಚನೆ ನೀಡಿದ ಗೆಳೆಯ ಡಾ. ಟಿ.ಎಸ್. ಚನ್ನೇಶ್ ಅವರಿಗೆ ಕೃತಜ್ಞತೆಗಳು, ಪುಸ್ತಕರೂಪದಲ್ಲಿ ಹೊರತರುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ. ಮುರಿಗೆಪ್ಪನವರಿಗೆ ಮತ್ತು ಪ್ರಸಾರಾಂಗದ ಎಲ್ಲ ಬಂಧುಗಳಿಗೆ ನನ್ನ ಹಾರ್ಧಿಕ ಕೃತಜ್ಞತೆಗಳು.

ಡಾ. ಜೆ. ಬಾಲಕೃಷ್ಣ