ಒಂದು ಭಾಷೆಯಲ್ಲಿನ ಗ್ರಂಥಗಳ ಸಮೂಹವನ್ನು ವಿಶಾಲವಾದ ಅರ್ಥದಲ್ಲಿ ಸಾಹಿತ್ಯ ಎನ್ನಬಹುದು. ವಿಶಿಷ್ಟ ಅರ್ಥದಲ್ಲಿ ಹೇಳುವುದಾದಲ್ಲಿ ಅದನ್ನು ಭಾಷಾ ಮಾಧ್ಯಮದ ಮೂಲಕ ಸೃಷ್ಟಿಯಾಗುವ ಕಲಾಕೃತಿಯೂ ಎನ್ನಬಹುದು. ಒಂದು ಭಾಷೆಯ ಸಾಹಿತ್ಯವನ್ನು ಶುದ್ಧಸಾಹಿತ್ಯ ಕೃತಿಗಳೆಂದೂ ಶಾಸ್ತ್ರ ಸಾಹಿತ್ಯ ಕೃತಿಗಳೆಂದೂ ಎರಡು ಭಾಗ ಮಾಡಬಹುದು. ಶುದ್ಧ ಸಾಹಿತ್ಯ, ಮಾತಿನ ಕಲೆಯಾದರೆ, ಶಾಸ್ತ್ರಸಾಹಿತ್ಯ ವೈಜ್ಞಾನಿಕ ನಿರೂಪಣೆ. ಸಾಮಾನ್ಯವಾಗಿ ಸಾಹಿತ್ಯ ಹೃದಯ ಸಂಬಂಧಿಯಾದದ್ದು; ಶಾಸ್ತ್ರ ಬುದ್ಧಿಪ್ರಧಾನವಾದದ್ದು. ಒಂದರ ಗುರಿ ಆನಂದಾನುಭೂತಿ; ಇನ್ನೊಂದರ ಉದ್ದೇಶ ಜ್ಞಾನಪ್ರಸಾರ. ಸಾಹಿತ್ಯಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಷ್ಟೇ ವೈಜ್ಞಾನಿಕ ಪರಂಪರೆಯೂ ಮುಖ್ಯವಾದದ್ದು. ಈ ಪರಂಪರೆಯ ವಿವಿಧ ಮುಖಗಳನ್ನು ಜನಸಾಮಾನ್ಯರಿಗೂ ಅಧಿಕೃತವಾಗಿ ತಿಳಿಯಪಡಿಸುವುದು ಇತರೆ ಪರಂಪರೆಗಳಷ್ಟೇ ಅವಶ್ಯಕವಾದದ್ದು.

ಮನುಷ್ಯನ ಪ್ರತಿಯೊಂದು ಅನುಭವಕ್ಕೂ ಚಟುವಟಿಕೆಗೂ ಒಂದು ಚರಿತ್ರೆ ಇದ್ದೇ ಇರುತ್ತದೆ. ಹಾಗೆಯೇ ಸಾಹಿತ್ಯಕ್ಕೂ ಒಂದು ಚರಿತ್ರೆ ಇರುತ್ತದೆ; ಯಾವ ಸಾಹಿತ್ಯವಾದರೂ ಕೇವಲ ಸಮಕಾಲೀನ ಸಾಹಿತ್ಯವಾಗಿ ಇರಲಾರದು. ಕೆಲವು ಸಾಹಿತ್ಯಗಳ ಚರಿತ್ರೆಯನ್ನು ತಿಳಿಯಲು ಅಗತ್ಯವಾದ ಆಧಾರಗಳು ದೊರೆಯುವುದಿಲ್ಲ. ಆಧಾರಗಳು ಇಲ್ಲದ ಮಾತ್ರಕ್ಕೆ ಚರಿತ್ರೆಯೇ ಇಲ್ಲವೆಂದು ಅರ್ಥವಲ್ಲ. ಮಾತು ಕಾಲದೇಶಗಳ ಕಟ್ಟಿಗೆ ಒಳಗಾದದ್ದು, ಆಡಿದಾಗಲೆ ಅದರ ಅಸ್ತಿತ್ವ ಮುಗಿದುಹೋಗುತ್ತದೆ. ಅದನ್ನು ಉಳಿಸಿಕೊಳ್ಳುವ ಮಾರ್ಗ ಇದುವರೆಗೆ ಇದ್ದದ್ದು ಎರಡೇ: ಒಂದು ನೆನಪು; ಇನ್ನೊಂದು ಬರವಣಿಗೆ. ಮಾತಿನ ಮಾಧ್ಯಮದಲ್ಲಿ ಸೃಷ್ಟಿಗೊಳ್ಳುವ ಕಲಾಕೃತಿಯಾಗಲಿ, ಶಾಸ್ತ್ರ ನಿರೂಪಣೆಯಾಗಲಿ ಹೀಗೆಯೇ ಉಳಿದು ಬರಬೇಕು. ಕೇವಲ ತಲೆಮಾರುಗಳ ನೆನಪಿನಲ್ಲಿ ಉಳಿದು ಬಂದ ಸಾಹಿತ್ಯದ ಚರಿತ್ರೆಯನ್ನು ಕ್ರಮವಾಗಿ ನಿರೂಪಿಸುವುದು ಸಾಧ್ಯವಿಲ್ಲ. ಬರವಣಿಗೆಯಲ್ಲಿ ಬಂದ ಸಾಹಿತ್ಯದ ಬೆಳವಣಿಗೆಯನ್ನು ಹಂತಹಂತವಾಗಿ ಗುರುತಿಸುವುದು ಸುಲಭವಾಗುತ್ತದೆ. ಆದುದರಿಂದ ಸಾಹಿತ್ಯಚರಿತ್ರೆಗೆ ಮುಖ್ಯ ಆಧಾರ ಒಂದು ಭಾಷೆಯಲ್ಲಿರುವ ಗ್ರಂಥಸಮುದಾಯ. ಇಂಥ ಒಂದು ಗ್ರಂಥ ಸಮುದಾಯದ ಚರಿತ್ರೆಯ ನಿರೂಪಣೆಯೇ ಸಾಹಿತ್ಯ ಚರಿತ್ರೆ. ಇದು ಶುದ್ಧ ಸಾಹಿತ್ಯಕ್ಕೆ ಅನ್ವಯಿಸುವಂತೆ ಶಾಸ್ತ್ರ ಸಾಹಿತ್ಯಕ್ಕೂ ಅನ್ವಯಿಸುತ್ತದೆ.

ಪ್ರತಿಯೊಂದು ಕೃತಿಯೂ ಒಂದು ಗೊತ್ತಾದ ಕಾಲದಲ್ಲಿ, ಗೊತ್ತಾದ ಜಾಗದಲ್ಲಿ ಲೇಖಕನ ಪರಿಸರ ಪ್ರಜ್ಞೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುತ್ತದೆ. ಸಾಹಿತ್ಯ ಮತ್ತು ಸಮಾಜ-ಸಂಸ್ಕೃತಿಗಳ ನಡುವಿನ ಸಂಬಂಧ ಸಂಕೀರ್ಣವಾದುದು. ಚರಿತ್ರೆಯೊಳಗೆ ನಡೆಯುವ ಅನೇಕ ಸಾಂಸ್ಕೃತಿಕ ಚಲನೆಗಳಿಗೆ ಸ್ಪಂದಿಸುತ್ತ ಅವನ್ನು ವಿಶಿಷ್ಟ ರೀತಿಯಲ್ಲಿ ಕಾಣಿಸುವುದರಲ್ಲಿ ಸಾಹಿತ್ಯದ ಮಹತ್ವವಿದೆ. ಈ ಕಾಣಿಸುವಿಕೆಯು ಸಾಹಿತ್ಯಕ್ಕಿರುವ ಸಾಧ್ಯತೆಗಳಲ್ಲಿ ಬಹಳ ಮುಖ್ಯವಾದುದು. ಗೊತ್ತಾದ ಕಾಲದ, ನಿರ್ದಿಷ್ಟ ಸಮಾಜದ ವಿನ್ಯಾಸವನ್ನು ಪರಂಪರಾಗತವಾದ ಅನೇಕ ವಿಷಯಗಳು ರೂಪಿಸುತ್ತವೆ. ಸಾಂದರ್ಭಿಕ ಜೀವನ ವ್ಯವಸ್ಥೆ, ಒಪ್ಪಿರುವ ಮೌಲ್ಯಗಳು, ಆಚಾರ ವ್ಯವಹಾರಗಳು, ವಿಧಿವಿಧಾನಗಳು, ಜೀವನ ವಿಧಾನಗಳು ಮುಖ್ಯವೆನ್ನಿಸುತ್ತವೆ. ಒಂದು ಅರ್ಥದಲ್ಲಿ ಇವುಗಳ ಸಮೂಹ ರೂಪವನ್ನು ಸಂಸ್ಕೃತಿ ಎಂದೆನ್ನಬಹುದು.

ಕೃಷಿಯನ್ನು ಮತ್ತು ಸಂಸ್ಕೃತಿಯನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ. ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲ ಸಲೆಯೇ ಕೃಷಿ. ಗೆಡ್ಡೆಗೆಣಸು ಸಂಗ್ರಹಿಸುವ ಮತ್ತು ಬೇಟೆಯಾಡುತ್ತಿದ್ದ ಮಾನವ ಕ್ರಮೇಣ ಕೃಷಿಗಾಗಿ ಒಂದೆಡೆ ನೆಲೆಯೂರಿದಾಗ ನಾಗರಿಕತೆ ಪ್ರಾರಂಭವಾಯಿತು. ಈ ರೀತಿ ಕೃಷಿಗಾಗಿ ಒಂದೆಡೆ ನೆಲೆಯೂರಿದುದರಿಂದಾಗಿ ನಂತರದ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಮೇಲೂ ಮಹತ್ತರ ಪರಿಣಾಮಗಳು ಬೀರತೊಡಗಿದವು. ಹಾಗಾಗಿ ಕೃಷಿ ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಪೂರಕವಾಗಿ ಕೃಷಿ ಚರಿತ್ರೆಯ ಅಧ್ಯಯನವೂ ಅವಶ್ಯಕವಾದುದು.

ಕನ್ನಡದಲ್ಲಿ ಕೃಷಿ ಸಾಹಿತ್ಯ ಚರಿತ್ರೆ ಕೃಷಿಯ ಚರಿತ್ರೆಯಷ್ಟು ಪ್ರಾಚೀನವಲ್ಲ. ಕೃಷಿಗೆ ಸುಮಾರು ೯೦೦೦-೧೦೦೦೦ ವರ್ಷಗಳ ಚರಿತ್ರೆಯಿದೆ. ಆದರೆ ಕನ್ನಡದ ಕೃಷಿ ಸಾಹಿತ್ಯಕ್ಕೆ ಸುಮಾರು ಒಂದು ಶತಮಾನದ ಚರಿತ್ರೆಯಷ್ಟೇ ಇದೆ. ಕೃಷಿ ಸಾಹಿತ್ಯವನ್ನು ಶಾಸ್ತ್ರ ಅಥವಾ ವೈಜ್ಞಾನಿಕ ಸಾಹಿತ್ಯವೆಂದು ಪರಿಗಣಿಸುವುದಾದಲ್ಲಿ. ಕನ್ನಡದ ವೈಜ್ಞಾನಿಕ ಸಾಹಿತ್ಯದ ಚರಿತ್ರೆಯೂ ದೀರ್ಘವಾಗಿಲ್ಲ. ೧೯೧೭ರಿಂದೀಚೆಗಷ್ಟೇ ಕನ್ನಡದಲ್ಲಿ ಆಧುನಿಕ ವೈಜ್ಞಾನಿಕ ಸಾಹಿತ್ಯವನ್ನು ಕಾಣಬಹುದು. ಆದರೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬರದಿರಲು ಕಾರಣಗಳೂ ಹಲವಾರು. ದಾಸ್ಯದಲ್ಲಿದ್ದ ನಮಗೆ ಆಧುನಿಕ ವಿಜ್ಞಾನದ ಅಧ್ಯಯನಕ್ಕೆ ಆಸ್ಪದ ದೊರೆತದ್ದು ಬಹಳ ತಡವಾಗಿ. ಪಾಶ್ಯಾತ್ಯ ಶಿಕ್ಷಣ ಪದ್ಧತಿಯನ್ನು ಭಾರತಕ್ಕೆ ತಂದ ಬ್ರಿಟಿಷರು ನಮಗೆ ವೈಜ್ಞಾನಿಕ ಶಿಕ್ಷಣವನ್ನು ಒದಗಿಸುವ ಬಗ್ಗೆ ಆಸಕ್ತಿ ತೋರಲಿಲ್ಲ. ಅವರು ನೀಡಿದ ಶಿಕ್ಷಣ ಉದ್ದೇಶ ತಮಗೆ ಬೇಕಾದ ಗುಮಾಸ್ತರನ್ನೂ, ಆಡಳಿತಗಾರರನ್ನೂ ತಯಾರು ಮಾಡುವುದಷ್ಟೇ ಆಗಿತ್ತು. ಆದರೆ ನಮ್ಮ ದೇಶದ ನೈಸರ್ಗಿಕ ಸಂಪತ್ತಿನ ಪೂರ್ಣ ಪ್ರಯೋಜನ ಪಡೆಯುವುದಕ್ಕಾಗಿ ಆಧುನಿಕ ವಿಧಾನಗಳನ್ನು ಬಳಸಬೇಕಾಗಿ ಬಂದು. ಅದಕ್ಕೆ ಅವಶ್ಯವೆನಿಸುವ ತಂತ್ರಜ್ಞರನ್ನೂ ಇಲ್ಲಿಯೇ ತಯಾರು ಮಾಡಬೇಕಾಗಿ ಬಂದುದರಿಂದ ಅಲ್ಪ ಪ್ರಮಾಣದಲ್ಲಿಯಾದರೂ ವೈಜ್ಞಾನಿಕ ಶಿಕ್ಷಣವನ್ನು ಪ್ರಾರಂಭಿಸಲೇಬೇಕಾಯಿತು. ಹೀಗಾಗಿ ನಮ್ಮ ಜನತೆಗೆ ಆಧುನಿಕ ವಿಜ್ಞಾನದ ಸಂಪರ್ಕ ಒದಗಿ ಬಂದದ್ದು ಬಹಳ ನಿಧಾನವಾಗಿ ಮತ್ತು ಬಹು ಕಡಿಮೆ ಪ್ರಮಾಣದಲ್ಲಿ. ಆದುದರಿಂದ ಇತ್ತೀಚಿನವರೆಗೂ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಜನತೆಯಿಂದ ಬೇಡಿಕೆ ಬರುವ ಸಂಭವವೇ ಇರಲಿಲ್ಲ.

ಮೈಸೂರು ವಿಶ್ವವಿದ್ಯಾನಿಲಯವು ೧೯೧೬ರಲ್ಲಿ ಸ್ಥಾಪಿತವಾಯಿತು. ಆಗ ಇಡೀ ಮೈಸೂರು ರಾಜ್ಯಕ್ಕೆ ಸೆಂಟ್ರಲ್ ಕಾಲೇಜು ಮಾತ್ರ ವಿಜ್ಞಾನದ ಕಾಲೇಜಾಗಿತ್ತು ಹಾಗೂ ಅಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದರು. ವಿಜ್ಞಾನದ ಮಾತಿರಲಿ, ಯಾವುದಕ್ಕೇ ಆಗಲಿ, ವಿದ್ಯಾವಂತರೆನಿಸಿಕೊಂಡವರು ಕನ್ನಡವನ್ನು ಬಳಸಿದರೆ ಅವಮಾನವೆಂದು ಜನ ಭಾವಿಸಿದ್ದ ಕಾಲವದು. ಅಂತಹ ಸನ್ನಿವೇಶದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮತ್ತು ಮೈಸೂರು ಸರ್ಕಾರದ ಪವನಶಾಸ್ತ್ರ ವೀಕ್ಷಣಾಲಯದ ಮುಖ್ಯಸ್ಥರಾಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ ರವರು ವಿಜ್ಞಾನವನ್ನು ಕನ್ನಡ ಭಾಷೆಯ ಮೂಲಕ ಜನತೆಯಲ್ಲಿ ಹರಡುವ ಅವಶ್ಯಕತೆಯನ್ನು ಮನಗಂಡು ‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ೧೯೧೭ರಲ್ಲಿ ‘ವಿಜ್ಞಾನ’ ಎಂಬ ಒಂದು ಮಾಸಪತ್ರಿಕೆಯನ್ನು ಹೊರಡಿಸುವ ಸಾಹಸ ಮಾಡಿದರು. ಪತ್ರಿಕೆಗೆ ಸಾಮಗ್ರಿಯನ್ನೊದಗಿಸುವುದರಲ್ಲಿ ಎಷ್ಟೇ ಕಷ್ಟಗಳಿದ್ದಾರೂ ಅವುಗಳನ್ನೆದುರಿಸಿ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರಲು ಅಗತ್ಯವಾದ ಶ್ರದ್ಧೆ, ಉತ್ಸಾಹಗಳು ಸಂಪಾದಕರಲ್ಲಿದ್ದುವಾದರೂ ವಿಜ್ಞಾನಕ್ಕೇ ಮೀಸಲಾದ ಪತ್ರಿಕೆಯೊಂದು ಅಭಿವೃದ್ಧಿ ಹೊಂದಲು ಕಾಲವಿನ್ನೂ ಪಕ್ವವಾಗಿರಲಿಲ್ಲ. ಜನತೆಯಿಂದ ಅದಕ್ಕೆ ಆಸರೆ ದೊರೆಯಲಿಲ್ಲ. ಹನ್ನೆರಡು ಸಂಚಿಕೆಗಳ ಒಂದು ಸಂಪುಟ ಮುಗಿಸಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಕರ್ನಾಟಕ ವಿಜ್ಞಾನ ಪ್ರಾಚಾರಿಣಿ ಸಮಿತಿಯು ೧೯೧೭ರಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯದ ಪ್ರಕಟಣೆಯ ಪ್ರಯತ್ನ ನಡೆಸುವುದಕ್ಕೆ ಮೊದಲೇ ೧೯೧೫ರಲ್ಲಿ ಮೈಸೂರು ವ್ಯವಸಾಯ ಇಲಾಖೆಯಿಂದ ಕೃಷಿಕರಿಗಾಗಿ ‘ಮೈಸೂರು ವ್ಯವಸಾಯದ ಕ್ಯಾಲೆಂಡರ್’ ಅಥವಾ ‘ಪಂಚಾಂಗ’ ಎಂಬ ವಾರ್ಷಿಕ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಅದು ಪಂಚಾಂಗ ಮತ್ತು ವಾರ್ಷಿಕ ಪುಸ್ತಕವಲ್ಲದೆ ರೈತರ ವ್ಯವಸಾಯ ಕೈಪಿಡಿಯೂ ಆಗಿತ್ತು. ಅದರಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಸಂಶೋಧನೆಗಳ ಫಲಿತಗಳನ್ನು ಜನಪ್ರಿಯವಾಗುವಂತೆ ತಿಳಿಸುವ ಅನೇಕ ಲೇಖನಗಳಿತ್ತು. ಅಷ್ಟೆಲ್ಲ ಪ್ರಯತ್ನಗಳಾಗಿದ್ದರೂ ಭಾರತ ದಾಸ್ಯಮುಕ್ತವಾದ ನಂತರವೂ ಕನ್ನಡದಲ್ಲಿ ಕೃಷಿ ಸಾಹಿತ್ಯ ಗಮನೀಯವಾಗಿ ಕಂಡುಬರಲಿಲ್ಲ. ಅದಕ್ಕೆ ಕಾರಣಗಳೇ ಬೇರೆಯವು.

ಭಾರತದಲ್ಲಿ ಈ ಮೊದಲು ಕೃಷಿ ಒಂದು ಉದ್ಯಮವಾಗಿರಲಿಲ್ಲ. ಹಾಗೂ ಯಾವುದೇ ಆರ್ಥಿಕ ಲಾಭಕ್ಕಾಗಿ ಕೃಷಿಯನ್ನು ಕೈಗೊಳ್ಳುತ್ತಿರಲಿಲ್ಲ. ಕೃಷಿ ಜೀವನಾಧಾರದ ಬದುಕಿನ ಒಂದು ವಿಧಾನವಾಗಿತ್ತು. ಕೃಷಿಯ ಬಗೆಗಿನ ಜ್ಞಾನ ಪಾರಂಪರಿಕವಾಗಿ ತಲತಲಾಂತರಗಳಿಂದ ಮೌಖಿಕವಾಗಿ ಹರಿದು ಬರುತ್ತಿತ್ತು. ರೈತನೊಬ್ಬನಿಗೆ ತನ್ನ ವ್ಯವಸಾಯದ ಬದುಕಿನಲ್ಲಿ ತನಗೆ ತಿಳಿದಿರದಿದ್ದುದು ಏನೂ ಇರುತ್ತಿರಲಿಲ್ಲ. ಆ ಹಂತದಲ್ಲಿ ಅವನ ಅರಿವನ್ನು ಹೆಚ್ಚಿಸುವ ಯಾವುದೇ ಬಾಹ್ಯ ಜ್ಞಾನ ಪರಿಕರದ ಅವಶ್ಯಕತೆ ಇರಲಿಲ್ಲ. ಮೌಖಿಕ ಜ್ಞಾನ ಪರಂಪರೆಯ ಅರಿವಷ್ಟೇ ಇದ್ದ, ಬಹುಪಾಲು ಅನಕ್ಷರಸ್ಥರಾಗಿದ್ದ ಅವರಿಗೆ ಶಿಷ್ಟ ಲಿಖಿತ ಸಾಹಿತ್ಯರೂಪದಲ್ಲಿ ಕೃಷಿಜ್ಞಾನ ಲಭಿಸಬಹುದು ಎಂಬ ಕಲ್ಪನೆಯೂ ಇರಲಿಕ್ಕಿಲ್ಲ. ಬದುಕಿನ ಹಲವಾರು ಅಂಶಗಳು ಜನಪದದಲ್ಲಿ ಹಾಸುಹೊಕ್ಕಾಗಿರುವಂತೆ ಕೃಷಿಯ ಬಗೆಗಿನ ಅನುಭವ ಹಾಗೂ ಪಾರಂಪರಿಕ ಜ್ಞಾನವು ಸಹ ಜನಪದದಲ್ಲಿ ಹಾಸುಹೊಕ್ಕಾಗಿತ್ತು. ಕೃಷಿಯ ಬದುಕನ್ನು ಜನಪದರು ಗ್ರಹಿಸಿಕೊಳ್ಳುತ್ತಾ ತಮ್ಮ ಅನುಭವಗಳನ್ನು ಸಾಮಾಜಿಕ ಅರಿವಿನ ಅಭಿವ್ಯಕ್ತಿರೂಪದಲ್ಲಿ ಮೌಖಿಕ ಪರಿಭಾಷೆಯಲ್ಲಿ ‘ದಾಖಲಿಸುತ್ತಾ’ ಹೋಗುತ್ತಾರೆ. ಇಂದು ನಾವು ಸಾಮಾನ್ಯ ಅರ್ಥದಲ್ಲಿ ಒಕ್ಕಲುತನ ಎಂದು ಕರೆಯುವುದು ಮತ್ತು ಜನಪದವು ಗ್ರಹಿಸುವುದು ಸುತ್ತಮುತ್ತಲಿನ ಗ್ರಾಮೀಣ ಹಾಗೂ ಒಕ್ಕಲುತನದ ಪರಿಸರವನ್ನಷ್ಟೆ. ಜನಪದವು ತನಗೆ ವಿಶಿಷ್ಟವಾದ ಪ್ರಯೋಗಾತ್ಮಕ ನೆಲೆಯಲ್ಲಿ ಕೃಷಿ ಉತ್ಪಾದನೆ, ಕೃಷಿ ಆಚಾರ ವಿಚಾರಗಳು, ನೈಸರ್ಗಿಕ ನಿಯಮಗಳು, ಕೃಷಿಕನಿಗ ಸಂಬಂಧಿಸಿದಂತೆ ಜಾನುವಾರುಗಳ ಉತ್ಪಾದನೆ ಮುಂತಾದವುಗಳ ಬಗೆಗಿನ ಅಸಾಧಾರಣ ಜ್ಞಾನ ಹಾಗೂ ಅನುಭವವನ್ನು ದಾಖಲಿಸುವುದು ಜಾನಪದದ ಒಂದು ಪರಿಭಾಷೆಯಾದ ಭಾಷಾ ಮಾಧ್ಯಮದಲ್ಲಿ. ಅಂತಹ ಭಾಷಾ ಮಾಧ್ಯಮದ ಒಂದು ಉದಾಹರಣೆ ಗಾದೆಗಳು, ಗಾದೆಗಳು ಜನಪದ ಕತೆ, ನಂಬಿಕೆ, ಪುರಾಣಗಳಂತೆ ನಿರ್ದಿಷ್ಟ ಸಾಂಸ್ಕೃತಿಕ, ಚಾರಿತ್ರಿಕ ಸನ್ನಿವೇಶದಲ್ಲಿ ಬದುಕುವ ಮನುಷ್ಯನ ಸಾಮಾಜಿಕ ಬದುಕಿನ ಇರುವಿಕೆ ಮತ್ತು ಮುಂದುವರಿಕೆಯ ಸಲುವಾಗಿ ಅವು ರೂಪು ತಾಳುತ್ತಿರುತ್ತವೆ. ಈ ಅರ್ಥದಲ್ಲಿ ಜಾನಪದ ಅಧ್ಯಯನ ವರ್ಗೀಕರಿಸುವ ಕತೆ, ನಂಬಿಕೆ, ಪುರಾಣಗಳಂತೆ ಗಾದೆಗಳೂ ಸಹ ಕೇವಲ ಕತೆಯಾಗಿ, ನಂಬಿಕೆಯಾಗಿ, ಪುರಾಣವಾಗಿ ಮತ್ತು ಆಯಾ ಸಂದರ್ಭದ ವಿವೇಕದ ಮಾತಾಗಿ ಉಳಿಯದೆ ಅವು ಜನಪದ ಬದುಕಾಗುತ್ತವೆ. ಕೃಷಿಗೆ ಸಂಬಂಧಿಸಿದಂತೆ ಅವು ತಲೆತಲಾಂತರಗಳ ಅನುಭವದ ಮೂಸೆಯಿಂದ ಮೂಡಿಬಂದ ಉಕ್ತಿಗಳಷ್ಟೇ ಅಲ್ಲ. ಕೃಷಿಯ ಸಾಂಪ್ರದಾಯಕ ಜ್ಞಾನವನ್ನು ಪರಿಸುವ ಮೌಖಿಕ ಮಾಧ್ಯಮವೂ ಆಗಿವೆ.

ಭಾರತದಲ್ಲಿ ಮೊದಲಿನಿಂದಲೂ ಕೃಷಿಕರು ಅನಕ್ಷರಸ್ಥರು. ಅವರಿಗೆ ಮೂಲಭೂತವಾಗಿ ಶಿಕ್ಷಣ ನೀಡುವ ಪ್ರಯತ್ನಗಳು ನಡೆಯುತ್ತಿದ್ದವೇ ಹೊರತು ಅವರಿಗೆ ಅವರದೇ ಕಸುಬಿನ, ಜೀವನ ವಿಧಾನದ ಬಗೆಗಿನ ಸಾಹಿತ್ಯ ನೀಡಬೇಕೆಂದು ಯಾರಿಗೂ ಅನ್ನಿಸಿರಲಿಲ್ಲ. ಅಲ್ಲದೆ ಯಾವುದೇ ಸಾಹಿತ್ಯ ಪ್ರಕಟಿವಾಗಿದ್ದರೂ ಸಹ ಅದು ವಿಜ್ಞಾನಿಗಳ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳ ಕರಪತ್ರ, ವೈಜ್ಞಾನಿಕ ಲೇಖನಗಳಾಗಿದ್ದವು.

ಕೃಷಿಯ ಲಿಖಿತ ಸಾಹಿತ್ಯ ಬರುವುದಕ್ಕೂ ಮೊದಲು ಕೃಷಿ ಮಾಹಿತಿಯ ಸಂವಹನಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸಿ ಹೊಸ ಕೃಷಿ ವಿಧಾನಗಳನ್ನು ಅನುಸರಿಸುವಂತೆ ಹಳ್ಳಿಗರನ್ನು ಓಲೈಸುತ್ತಿದ್ದರು ಅಥವಾ ಹತ್ತಿರದ ಸರ್ಕಾರಿ ಕೃಷಿಕ್ಷೇತ್ರಗಳಿಗೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ರೈತ ಅನರಕ್ಷರಸ್ಥನಾಗಿದ್ದುದರಿಂದ ಆತನಿಗೆ ಅಧಿಕಾರಿಗಳು ಹೇಳುತ್ತಿದ್ದುದರಲ್ಲಿ ಅಥವಾ ತಾನು ತನ್ನ ಹೊಲದಲ್ಲಿ ಅಥವಾ ಇತರರ ಹೊಲಗಳಲ್ಲಿ ಕಣ್ಣಾರೆ ಕಾಣುತ್ತಿದ್ದುದರಲ್ಲಿ ನಂಬಿಕೆ ಇರುತ್ತಿತ್ತು.

ಕ್ಷೇತ್ರ ಭೇಟಿಗಳಿಗೆ ಹೊರಡುವ ಅಂತಹ ಕೃಷಿ ಅಧಿಕಾರಿಗಳ ಸಲಕರಣೆಗಳು ಸಾಮಾನ್ಯವಾಗಿ ಒಂದು ಎತ್ತಿನಗಾಡಿ, ಒಂದು ಜೊತೆ ಎತ್ತುಗಳು, ನೇಗಿಲು ಮತ್ತು ಇತರ ಸಲಕರಣೆಗಳು, ಅವುಗಳ ಪ್ರಾತ್ಯಕ್ಷಿಕೆಗಾಗಿ ವ್ಯಕ್ತಿಯೊಬ್ಬ, ಲಾಟೀನು, ಗ್ರಾಮಾಫೋನ್, ಅಧಿಕಾರಿಗಳ ಉಪಯೋಗಕ್ಕಾಗಿ ಆಯ್ದು ಮಾಹಿತಿ ಪುಸ್ತಕಗಳು, ಪ್ರದರ್ಶನಕ್ಕಾಗಿ ಪೋಸ್ಟರುಗಳು, ಉಚಿತ ವಿತರಣೆಗಾಗಿ ಮಾದರಿ ಬೀಜಗಳು, ಗಂಧಕ, ಅಮೋನಿಯಂ ಸಲ್ಫೇಟ್ ಮುಂತಾದವು ಇರುತ್ತಿದ್ದವು. ಅಂತಹ ಮಾಹಿತಿ ಸಂವಹನ ಗಾಡಿಗಳು ಮೊದಲೇ ರೆವೆನ್ಯೂ ಅಧಿಕಾರಿಗಳ ಮೂಲಕ ಹಳ್ಳಿಗಳಿಗೆ ತಾವು ಬರುವ ವಿಷಯ ತಿಳಿಸಿ ಪೂರ್ವ ನಿರ್ಧಾರಿತ ಹಾದಿಯಲ್ಲಿ ಹೋಗಿಬರುತ್ತಿದ್ದವು. ಪ್ರಮುಖ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಕೆಲದಿನಗಳು ಮೊಕ್ಕಾಂ ಹೂಡಿ ರೈತರೊಂದಿಗೆ ಚರ್ಚೆ, ಸಭೆಗಳನ್ನು ನಡೆಸಿ, ಅವರ ಹೊಲಗದ್ದೆಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಿದ್ದರು. ಆ ರೀತಿ ವರ್ಷದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ, ಪ್ರತಿ ತಿಂಗಳು ಸುಮಾರು ಹನ್ನೆರಡರಿಂದ ಹದಿಮೂರು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು.

ಕೃಷಿ ಸಾಹಿತ್ಯ ವಿಕಾಸದ ಅಧ್ಯಯನಕ್ಕೆ ಪೂರಕವಾಗಿ ಕೃಷಿ ಚರಿತ್ರೆಯ ಅಧ್ಯಯನವೂ ಅತ್ಯಂತ ಅವಶ್ಯಕ. ಏಕೆಂದರೆ ಕೃಷಿ ಸಾಹಿತ್ಯ ವಿಕಾಸ ಸಂಪೂರ್ಣ ಅವಲಂಬಿತವಾಗಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಯ ಮೇಲೆ. ಕೃಷಿ ಇಂದು ಬದುಕಿನ ಒಂದು ವಿಧಾನವಾಗಷ್ಟೇ ಉಳಿದಿಲ್ಲ. ಎಲ್ಲ ಕ್ಷೇತ್ರಗಳ ವಾಣಿಜ್ಯೀಕರಣವಾಗಿರುವಂತೆ ಕೃಷಿಕ್ಷೇತ್ರದ ವಾಣಿಜ್ಯೀಕರಣವೂ ಆಗಿದೆ. ಜಾಗತೀಕರಣವು ಸಂಸ್ಕೃತಿಯ ಬೇರುಗಳಿಗೇ ಕುತ್ತಾಗಿದೆ. ಈ ಮೊದಲು ಗ್ರಾಮೀಣ ಬದುಕಿನಲ್ಲಿ ಹಣಕ್ಕೆ ಸ್ಥಾನವೇ ಇರಲಿಲ್ಲ. ಈ ಪರಿಸ್ಥಿತಿಯ ಬಗ್ಗೆ ಖ್ಯಾತ ಕೃಷಿ ವಿಸ್ತಾರಣಾ ತಜ್ಞ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಡಾ. ದ್ವಾರಕೀನಾಥ್ ರವರು ಈ ರೀತಿ ಹೇಳುತ್ತಾರೆ:

ಕೆಲದಶಕಗಳ ಹಿಂದೆ ಗ್ರಾಮೀಣ ಬದುಕು ಬಹಳ ಸರಳವಾಗಿತ್ತು ಹಾಗೂ ಕೃಷಿಯ ಹಾಗೂ ಕೌಟುಂಬಿಕ ಅವಶ್ಯಕತೆಗಳು ಕೆಲ ಮೂಲಭೂತ ಅವಶ್ಯಕತೆಗಳನ್ನೊಳಗೊಂಡಂತೆ ತೀರಾ ಸೀಮಿತವಾಗಿದ್ದವು. ಬಹುಪಾಲು ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ನೀಗಿಸಿಕೊಳ್ಳಲಾಗುತ್ತಿತ್ತು. ಸಾಂಪ್ರದಾಯಕವಾಗಿ. ಸೇವೆಗಳಿಗೆ ಸಂದಾಯವನ್ನು ಕೃಷಿ ಉತ್ಪನ್ನಗಳ ರೂಪದಲ್ಲಿಯೇ ಕುಯಿಲಿನ ಸಮಯದಲ್ಲಿ ಪಾವತಿಸಲಾಗುತ್ತಿತ್ತು. ಈಗ ಇದೆಲ್ಲಾ ಬದಲಾಗಿದೆ. ಕೃಷಿ ಕುಟುಂಬಗಳ ಅವಶ್ಯಕತೆಗಳು ಹೆಚ್ಚುತ್ತಿರುವಂತೆ, ನಗರ ಬದುಕಿನ ಶೈಲಿಯನ್ನು ಅನುಕರಿಸುವುದರಿಂದಾಗಿ ಕೃಷಿ ಅವಶ್ಯಕತೆಗಳನ್ನೂ ಸಹ ಖರೀದಿಸಿದ ಪರಿಕರಗಳಿಂದಾಗಿ ಪೂರೈಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಅದರ ಜೊತೆಗೆ ಗ್ರಾಮೀಣ ಬದುಕಿನಲ್ಲಿದ್ದ ವಸ್ತುವಿನಿಮಯ‘ (Barter System) ರೂಪದ ಸಂದಾಯಪದ್ಧತಿ ಸಂಪೂರ್ಣ ಕಣ್ಮರೆಯಾಗಿ ಅದರ ಸ್ತಾನವನ್ನು ಹಣದ ವ್ಯವಹಾರ ಆಕ್ರಮಿಸಿದೆ. ಹಾಗಾಗಿ, ಇಂದು ಯಾವುದೇ ರೈತ ಸಾಕಷ್ಟು ಹಣದ ಆದಾಯವಿಲ್ಲದೆ ಬದುಕಲಾರ. ಅದಕ್ಕಾಗಿ ಮಾರುಕಟ್ಟೆಗಾಗಿ ಏನನ್ನಾದರೂ ಬೆಳೆಯಲೇ ಬೇಕಾಗಿರುವುದು ಇಂದು ಎಲ್ಲ ರೈತರಿಗೆ ಅನಿವಾರ್ಯವಾಗಿದೆ.

ಶತಶತಮಾನಗಳಿಂದ ನಿರಂತರವಾಗಿ ಸಾಗಿದ್ದ ಸಂಸ್ಕೃತಿಯ ಗತಿ ಹಾಗೂ ದಿಕ್ಕು ಶರವೇಗದ ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ತುಂಡರಿಸಿದೆ. ಅಂದು ಪ್ರಕೃತಿಯ ವಿಕೋಪಗಳನ್ನಷ್ಟೇ ಎದುರಿಸಬೇಕಾಗಿದ್ದ ರೈತ ಇಂದು ಪರಿಸರ ಮಾಲಿನ್ಯ, ಬಹುರಾಷ್ಟ್ರೀಯ ಸಂಸ್ಥೆಗಳ ಮೇಲಿನ ಅವಲಂಬತೆ, ಪೇಟಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕು. ರೈತ ವಿರೋಧಿ ಕೃಷಿ ನೀತಿಗಳು. ದಿನದಿನಕ್ಕೆ ಕಾಣಿಸಿಕೊಳ್ಳುತ್ತಿರುವ ಹೊಸ ಹೊಸ ರೋಗ ಮತ್ತು ಪೀಡೆಗಳು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಕೃಷಿ ಕ್ಷೇತ್ರದಲ್ಲಿನ ಬದಲಾವಣೆ ಅರವತ್ತರ ದಶಕದಲ್ಲಾದ ಹಸಿರುಕ್ರಾಂತಿಯಿಂದ ಪ್ರಾರಂಭವಾಯಿತು. ಸ್ವಾತಂತ್ರ್ಯೋತ್ತರದ ಮೊದಲ ವರ್ಷಗಳಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಕಾಡತೊಡಗಿತು. ಭಾರತ ತೀವ್ರ ಕ್ಷಾಮ ಎದುರಿಸಬೇಕಾಗಬಹುದೆಂಬ ಭೀತಿ ಸರ್ಕಾರವನ್ನು ಕಾಡತೊಡಗಿತು. ಅದರಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಸಮಗ್ರ ವಿಧಾನಗಳ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತು. ಇದರಲ್ಲಿ ಬೇಸಾಯದ ವಿಧಾನಗಳ ಆಧುನೀಕರಣವೂ ಒಂದು. ಭಾರತೀಯ ರೈತ ಜೀವನಾಧಾರದ ಕೃಷಿಯಿಂದ ‘ಹೆಚ್ಚುವರಿ ಕೃಷಿ’ ನಡೆಸಬೇಕಾದ ಅನಿವಾರ್ಯ ಸಂದರ್ಭ ಬಂದೊದಗಿತು. ಅಧಿಕ ಇಳುವರಿ ತಳಿಗಳು. ರಸಗೊಬ್ಬರಗಳು ಹಾಗೂ ಕೀಟ ಮತ್ತು ರೋಗನಾಶಕ ರಾಸಾಯನಿಕಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದೆನ್ನುವ ತರ್ಕದಿಂದ ‘ಆಧುನಿಕ’ ಕೃಷಿ ಪದ್ಧತಿಗಳನ್ನು ಬಿರುಸಿನಿಂದ ಜಾರಿಗೆ ತರಲಾಯಿತು. ಈ ಕಾರ್ಯಕ್ರಮದನ್ವಯ ೧೯೬೩ರಲ್ಲಿ ಭಾರತ ಸರ್ಕಾರ ಮೆಕ್ಸಿಕೋದಿಂದ ೨೫೦ ಟನ್ ಅಧಿಕ ಇಳುವರಿ ತಳಿಯ ಬಿತ್ತನೆ ಬೀಜಗಳನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಬರಲಿಲ್ಲ. ತನ್ನದೇ ತಳಿ ಸಂವರ್ಧನಾ ಕಾರ್ಯಕ್ರಮಗಳಿಂದ ಬಿತ್ತನೆ ಬೀಜದ ಉತ್ಪಾದನೆ ತಾನೇ ಮಾಡಿಕೊಳ್ಳತೊಡಗಿತು. ಸಾಂಪ್ರದಾಯಕ ವಿಧಾನಗಳಲ್ಲಿ ನೂರಾರು ವರ್ಷಗಳಿಂದ ಬೇಸಾಯ ಮಾಡಿಕೊಂಡು ಬಂದಿದ್ದ ರೈತರು ಆಧುನಿಕ ವಿಧಾನಗಳಿಗೆ ವರ್ಗಾಯಿಸಿಕೊಳ್ಳಬೇಕಾಯಿತು.

ಹಸಿರು ಕ್ರಾಂತಿಯ ಪ್ರಾರಂಭವು ಕೃಷಿ ಸಂವಹನೆಗೆ ಇನ್ನೂ ಹೆಚ್ಚು ಒತ್ತು ಕೊಟ್ಟಿತು. ಸಂವಹನೆಯ ವಿಧಾನ ಮತ್ತು ಧ್ಯೇಯೋದ್ದೇಶಗಳು ಆಧುನಿಕ ಕೃಷಿಯ ಆದ್ಯತೆಗಳನುಸಾರ ಬದಲಾಗುತ್ತಾ ಹೋಯಿತು. ಕಳೆದ ಶತಮಾನದ ಐದನೇ ದಶಕದ ಈ ಸಂದಿಗ್ಧ ಹಂತದಲ್ಲಿ ಕೃಷಿ ಸಂವಹನೆ ಒಂದು ಸಾಂಸ್ಥಿಕ ರೂಪ ತಳೆಯಿತು. ಈ ಸಂವಹನೆಯ ಅವಶ್ಯಕತೆಯ ಬಗೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಕುಲಪತಿಗಳಾದ ಡಾ. ಕೆ.ಸಿ. ನಾಯಕ್ ‘ಆಧುನಿಕ ವ್ಯವಸಾಯ’ ಪುಸ್ತಕದ ಮುನ್ನುಡಿಯಲ್ಲಿ ಈ ಮುಂದಿನಂತೆ ಹೇಳಿದ್ದಾರೆ.

ಇಂದಿನ ಯಾಂತ್ರಿಕ ಬೇಸಾಯದ ತಳಹದಿಯ ಮೇಲೆ ಭಾರತದ ಬೇಸಾಯ ಪದ್ಧತಿಯನ್ನು ಬದಲಿಸಬೇಕಾದರೆ ಬೇಸಾಯಗಾರ ಮತ್ತು ಜನಸಾಮಾನ್ಯರಲ್ಲಿ ಬಗ್ಗೆ ತಿಳಿವಳಿಕೆ ಬೆಳೆಸುವುದು ಬಹಳ ಮುಖ್ಯ ಜ್ಞಾನದ ಆಸ್ಫೋಟ ಮತ್ತು ಅದ್ಭುತ ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಯ ದಿವಸಗಳಲ್ಲಿ ಜನಸಾಮಾನ್ಯರಿಗೆ ಅವುಗಳೊಡನೆ ಹೆಜ್ಜೆಯಿಟ್ಟು ಸಾಗುವುದು ಸುಲಭವಾಗಿಲ್ಲ. ನೋಬೆಲ್ ಪಾರಿತೋಷಕ ವಿಜೇತ ಡಾ. ಬೊರ್ಲಾಗ್ ಮತ್ತು ಫಿಲಿಪ್ಟಾಯಿನ್ಸ್ ಅಂತರಾಷ್ಟ್ರೀಯ ಭತ್ತ ಸಂಶೋಧನ ಸಂಸ್ಥೆಯ ಡಾ. ಚಾಂಡ್ಲರರು ಆಧುನಿಕ ಯಂತ್ರ ತಂತ್ರ ವಿಜ್ಞಾನಗಳ ಸಹಾಯದಿಂದ ಬೇಸಾಯದ ಹುಟ್ಟುವಳಿಯಲ್ಲಿ ಭಾರೀ ದೊಡ್ಡ ಬದಲಾವಣೆಯನ್ನು ತರಲು ಶಕ್ಯವೆಂದಿರುವವರು. ಆದುದರಿಂದ ಆಧುನಿಕ ಬೇಸಾಯದ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಪೇಟೆ ಪಟ್ಟಣಗಳ ಹಾಗೂ ಹಳ್ಳಿಗಾಡುಗಳ ಜನರಿಗೆ ವಿವರಿಸಿ ಹೇಳುವುದು ಅವರ ಕರ್ತವ್ಯ

ಹೇಗೆ ಎರಡನೇ ಹಂತದಲ್ಲಿ ‘ಗ್ರೀನ್ ರೆವೊಲ್ಯೂಶನ್’ (ಹಸಿರು ಕ್ರಾಂತಿ) ನಡೆಯಿತೋ, ಅದೇ ರೀತಿ ಕೃಷಿರಂಗದಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಜೀನ್ ರೆವೊಲ್ಯೂಶನ್’ ಪ್ರಾರಂಭವಾಗಿದೆ. ಅಂದರೆ ಜೀವವಿಜ್ಞಾನದ ವಿವಿಧ ಶಿಸ್ತುಗಳಾದ ಅನುವಂಶಿಕತೆ ಹಾಗೂ ವಂಶಿವಾಹಿ ವಿಜ್ಞಾನ, ಜೈವಿಕ ರಾಸಾಯನಶಾಸ್ತ್ರ, ಅಣುಸೂಕ್ಷ್ಮ ಜೀವಿಶಾಸ್ತ್ರ ಇತ್ಯಾದಿಗಳ ಸಂಗಮದಿಂದ ರೂಪುಗೊಂಡ ಹೊಸ ವಿಜ್ಞಾನ ‘ಜೈವಿಕ ತಂತ್ರಜ್ಞಾನ’. ಇದು ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾರಂಭಿಸಿದೆ. ಹೇಗೆ ಹಸಿರುಕ್ರಾಂತಿಯ ಸಮಯದಲ್ಲಿ ಹಸಿವು ನೀಗಿಸಲು ಅಧಿಕ ಇಳುವರಿ ತಳಿಗಳಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿತ್ತೋ, ಈಗ ಅದೇ ರೀತಿ ಹಸಿವು ನೀಗಿಸಲು ಕುಲಾಂತರಿ ಸಸ್ಯ ತಳಿಗಳಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿದೆ.

ಕನ್ನಡದಲ್ಲಿ ಕೃಷಿವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಲಾಗಿದೆ. ಸ್ವಾತಂತ್ರ್ಯಾ ನಂತರ ೧೯೬೪ರಲ್ಲಿ ಸ್ಥಾಪನೆಗೊಂಡ ಶಿಕ್ಷಣ ಆಯೋಗದಿಂದ ೧೯೬೮ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಂಗೀಕೃತವಾಯಿತು. ಇದರ ಮೇರೆಗೆ ಭಾರತದ ೧೪ ಮುಖ್ಯ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯೂ ಹಿಂದಿ ಭಾಷೆಯೊಂದಿಗೆ ಬೆಳೆಯಬೇಕು. ರಾಜ್ಯ ಭಾಷೆಗಳೆಲ್ಲವೂ ಸಂಪದ್ಭರಿತವಾಗಿ ಬೆಳೆದು ಆಧುನಿಕ ಕಾಲದ ಜ್ಞಾನ ಪ್ರಸಾರ ಸಾಧನಗಳಾಗುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸಂಯೋಜಿತ ಯತ್ನ ನಡೆಸಬೇಕು ಎಂದು ಸಂಸತ್ತು ನಿರ್ಧಾರ ಕೈಗೊಂಡಿತು. ಈ ನಿರ್ಧಾರದೊಂದಿಗೆ ಕೇಂದ್ರವು ಒಂದೊಂದು ರಾಜ್ಯಕ್ಕೂ ೪ನೇ ಪಂಚವಾರ್ಷಿಕ ಯೋಜನಾವಧಿಯಲ್ಲಿ ಪ್ರಾದೇಶಿಕ ಭಾಷೆಯ ವೈಜ್ಞಾನಿಕ ಸಾಹಿತ್ಯ ಬೆಳವಣಿಗೆಗಾಗಿ ಒಂದೊಂದು ವಿಭಾಗಗಳನ್ನು ತೆರೆಯಲು ಯೋಜಿಸಿತು. ಹೀಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಈ ಯೋಜನೆಯಡಿಯಲ್ಲಿ ಕನ್ನಡದಲ್ಲಿ ಕೃಷಿವಿಜ್ಞಾನ ಸಾಹಿತ್ಯ ನಿರ್ಮಾಣಕ್ಕಾಗಿ ೧೯೬೯-೭೦ರಲ್ಲಿ ಕನ್ನಡ ಅಧ್ಯಯನ ವಿಭಾಗವನ್ನು ತೆರೆಯಲಾಯಿತು. ಈ ವಿಭಾಗವು ೧೯೭೦ರಿಂದೀಚೆಗೆ ೨೮೩ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಅಲ್ಲದೆ ಕನ್ನಡದಲ್ಲಿ ಕೃಷಿವಿಜ್ಞಾನ ಸಾಹಿತ್ಯ ರಚಿಸುವವರು, ರೈತರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ನೆರವಾಗಲೆಂದು ಇಲ್ಲಿರುವರೆಗೆ ಕೃಷಿವಿಜ್ಞಾನದ ವಿವಿಧ ವಿಷಯಗಳ ೧೪ ಪಾರಿಭಾಷಿಕ ಶಬ್ದಕೋಶಗಳನ್ನು ಮತ್ತು ಒಂದು ಸಮಗ್ರ ಕೃಷಿ ಮತ್ತು ಪಶುವೈದ್ಯಕೀಯ ವಿಜ್ಞಾನ ಪಾರಿಭಾಷಿಕ ಪದಕೋಶವನ್ನು ಹಾಗೂ ಕನ್ನಡದ ಮೊಟ್ಟಮೊದಲ ಜೀವತಂತ್ರಜ್ಞಾನ ಅರ್ಥವಿವರಣಾ ಕೋಶ (ಇಂಗೀಶ್-ಕನ್ನಡ)ವನ್ನು ಸಹ ಪ್ರಕಟಿಸಿದೆ.

ಇಡೀ ವಿಶ್ವದಾದ್ಯಂತ ಬೀಸುತ್ತಿರುವ ಜಾಗತೀಕರಣ, ಅದಾರೀಕರಣದ ಗಾಳಿ ಭಾರತೀಯ ಕೃಷಿ ಕ್ಷೇತ್ರದ ಮೇಲೂ ಬೀಸುತ್ತಿದೆ. ಇದರಿಂದಾಗಿ ಸ್ಥಳೀಯ ತಳಿಗಳು ಹಾಗೂ ಅವುಗಳ ಒಡೆತನ, ಸ್ಥಳೀಯ ಕೃಷಿಜ್ಞಾನ ಹಾಗೂ ಬೌದ್ಧಿಕ ಹಕ್ಕಿನ ವ್ಯಾಖ್ಯಾನಗಳು ಬದಲಾಗುತ್ತಿವೆ. ಇವೆಲ್ಲವುದರ ಜೊತೆಗೆ ಹಸಿರುಕ್ರಾಂತಿಯ ಅನುಭವಗಳಿಂದ ಬೇಸತ್ತವರು, ಜಾಗತೀಕರಣ ಹಾಗೂ ಉದಾರೀಕರಣವನ್ನು ವಿರೋಧಿಸುತ್ತಿರುವವರು ಪರಿಸರಸ್ನೇಹಿ ಕೃಷಿ ಪದ್ಧತಿಗಳಾದಂತಹ ಸಹಜ ಕೃಷಿ, ಸಾವಯವ ಕೃಷಿ, ಸುಸ್ಥಿರ ಕೃಷಿ ಇತ್ಯಾದಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಈ ಗೊಂದಲಮಯ ಪರಿಸ್ಥಿತಿಯಲ್ಲಿ ಕೃಷಿವಿಜ್ಞಾನ ಸಾಹಿತ್ಯ ವಿಶೇಷವಾದ ರೂಪು ಪಡೆದುಕೊಳ್ಳತೊಡಗಿದೆ. ಯಾವುದನ್ನು ಅನುಸರಿಸಬೇಕು, ಯಾರನ್ನು ಬೆಂಬಲಿಸಬೇಕು ಎನ್ನುವುದು ಅರ್ಥವಾಗದ ರೈತ ಇಂದು ಗೊಂದಲಮಯದ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಚಿತವಾಗುವ ಕೃಷಿವಿಜ್ಞಾನ ಸಾಹಿತ್ಯದ ಅಧ್ಯಯನ ಹಾಗೂ ಅದು ಪಡೆದುಕೊಳ್ಳುವ ರೂಪ ಮತ್ತು ದಿಕ್ಕನ್ನು ಗುರುತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.