ಜೀವತಂತ್ರಜ್ಞಾನ ಇಂದು ಬದುಕಿನ ಪ್ರತಿ ರಂಗದಲ್ಲೂ ಹಾಸುಹೊಕ್ಕಾಗುತ್ತಿದೆ. ಕೃಷಿ ಪಶುವೈದ್ಯಕೀಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಇದರ ಪಾತ್ರ ಮಹತ್ತರವಾದುದು. ಹಸಿರುಕ್ರಾಂತಿಯಿಂದಾದ ಇಳುವರಿಯ ಲಾಭಗಳು ಕ್ಷಣಿಕವಾಗಿದ್ದು ಆದರಿಂದ ಹಲವಾರು ಪರಿಸರ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳುಂಟಾದುವು. ೧೯೫೦ರ ದಶಕದಿಂದೀಚೆಗೆ ಜೀವತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಮಹತ್ತರ ಅಭಿವೃದ್ಧಿಗಳಿಂದಾಗಿ ಇಂದು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು, ಲಭ್ಯವಿರುವ ಸಂಪನ್ಮೂಲಗಳಿಂದಲೇ ಹೆಚ್ಚುಹೆಚ್ಚು ಉತ್ಪಾದಿಸಲು ಜೀವತಂತ್ರಜ್ಞಾನದಿಂದಲೇ ಸಾಧ್ಯ ಎನ್ನುವ ಮಾತೂ ಕೇಳಿಬರುತ್ತಿದೆ. ಕುಲಾಂತರಿ ಸಸ್ಯಗಳನ್ನು ಹಾಗೂ ‘ಟರ್ಮಿನೇಟರ್’ ತಂತ್ರಜ್ಞಾನವನ್ನು ಪರಿಚಯಿಸುವ ಲೇಖನ ‘ಸುಧಾ’ ವಾರಪತ್ರಿಕೆಯಲ್ಲಿ ಮೊದಲಿಗೆ ನಾಗೇಶ್ ಹೆಗಡೆ ಬರೆದರು. ಬಿ.ಟಿ ಹತ್ತಿಯನ್ನು ಪರಿಚಯಿಸಿದ ನಂತರ ಕರ್ನಾಟಕ ರೈತ ಸಂಘ ರೈತರಲ್ಲಿ ಅದರ ಅಪಾಯಗಳ ಬಗೆಗೆ ರೈತರಲ್ಲಿ ಅರಿವು ಮೂಡಿಸಲು ಸಾಕಷ್ಟು ಕರಪತ್ರಗಳನ್ನು ತಂದಿತು. ಅಲ್ಲದೆ ಜೀವತಂತ್ರಜ್ಞಾನ ಕೆಲವೇ ವಿದೇಶೀ ಕಂಪೆನಿಗಳ ನಿಯಂತ್ರಣದಲ್ಲಿದ್ದು ರೈತರು ಪ್ರತಿ ಬೆಳೆಯ ಬಿತ್ತನೆಯನ್ನು ಆ ವಿದೇಶೀ ಕಂಪೆನಿಗಳಿಂದ ಹಾಗೂ ಅವರು ಹೇಳಿದ ಬೆಲೆಯಲ್ಲೇ ಕೊಂಡು ತರಬೇಕಾಗುತ್ತದೆಂದು ೧೯೯೦ ರಿಂದೀಚೆಗೆ ಕರ್ನಾಟಕ ರಾಜ್ಯ ರೈತ ಸಂಘದ ಪ್ರೊ. ನಂಜುಂಡಸ್ವಾಮಿಯವರು ಹೊಸ ಕೃಷಿ ನೀತಿಯ ಮೇಲೆ ಹಾಗೂ ಕಾರ್ಗಿಲ್ ಮತ್ತು ನಂತರದ ಮಾನ್ಸಾಂಟೋ ಕಂಪೆನಿಗಳ ಮೇಲೆ ದಾಳಿ ನಡೆಸಿದರು, ಹೊಲಗಳಲ್ಲಿ ಬೆಳೆದು ನಿಂತಿದ್ದ ಬಿ.ಟಿ. ಹತ್ತಿಯನ್ನು ಸುಟ್ಟು ಹಾಕಿದರು.

ಇಷ್ಟೆಲ್ಲಾ ಆದರೂ ಜೀವತಂತ್ರಜ್ಞಾನವನ್ನು, ಅದರ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸುವ ಅಲ್ಲೊಂದು ಇಲ್ಲೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆಯೇ ಹೊರತು ವಿಜ್ಞಾನ ಸಾಹಿತ್ಯ ಕೃತಿ ಕನ್ನಡದಲ್ಲಿ ಪ್ರಕಟವಾಗಿಲ್ಲ. ಈ ದಿಸೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗವು ಜೀವತಂತ್ರಜ್ಞಾನ ಅರ್ಥವಿವರಣಾ ಕೋಶ (ಇಂಗ್ಲಿಷ್-ಕನ್ನಡ) ವೊಂದನ್ನು ಪ್ರಕಟಿಸಿದೆ.