ಆಧುನಿಕ ಕೃಷಿ ಅಥವಾ ಹಸಿರು ಕ್ರಾಂತಿಯ ಅಳವಡಿಕೆ ಹಾಗೂ ನಂತರದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದಾಗಿ ಭಾರತೀಯ ರೈತರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಗಳಲ್ಲಿ ಮಹತ್ತರ ಪರಿಣಾಮಗಳುಂಟಾದವು. ಅನಿರ್ಬಂಧಿತ ಕೀಟನಾಶಕ ಹಾಗೂ ರಸಗೊಬ್ಬರಗಳ ಬಳಕೆಯಿಂದ ಮಣ್ಣು, ನೀರು ಹಾಗೂ ಗಾಳಿಯು ಕಲುಷಿತಗೊಂಡು ಮನುಷ್ಯರ ಮತ್ತು ಪ್ರಾಣಿಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೇರತೊಡಗಿತು. ೧೯೦೦ರಿಂದ ೧೯೫೦ರವರೆಗೆ ಶೇ. ೦.೩ರಷ್ಟಿದ್ದ ನಮ್ಮ ವಾರ್ಷಿಕ ಕೃಷಿ ಉತ್ಪಾದನೆ ೧೯೬೦-೭೦ರ ಅವಧಿಯಲ್ಲಿ ಅಧಿಕಗೊಂಡು ಶೇ. ೩.೩ ರಷ್ಟಾಯಿತು. ಆದರೆ ೧೯೯೦-೯೮ರ ವೇಳೆಗೆ ಶೇ. ೧.೮ರಷ್ಟಿದ್ದ ಜನಸಂಖ್ಯಾ ಬೆಳವಣಿಗೆಗೆ ಹೋಲಿಸಿದಲ್ಲಿ ಕೃಷಿ ಉತ್ಪಾದನೆ ಶೇ. ೧.೪ಕ್ಕೆ ಇಳಿಯಿತು. ಸಾಕಷ್ಟು ಅಧಿಕ ಇಳುವರಿ ತಳಿಗಳು, ರಸಗೊಬ್ಬರ, ಪೀಡೆ ನಾಶಕ, ನೀರಾವರಿ ಸೌಲಭ್ಯ ಹಾಗೂ ಸಾಲಸೌಲಭ್ಯಗಳ ಲಭ್ಯತೆಯಿದ್ದರೂ ಈ ಆಧುನಿಕ ಕೃಷಿ ಸುಸ್ಥಿರವಲ್ಲವೆಂಬುದನ್ನು ತೋರಿಸುತ್ತದೆ. ಹೆಚ್ಚಿದ ಉತ್ಪಾದನೆಯಿಂದಾಗಿ ರಫ್ತು ಮಾಡುವಂತಹ ಸ್ಥಿತಿಯಿಂದ ಈಗ ಮತ್ತೆ ಗೋಧಿಯಂತಹ ಆಹಾರ ಧಾನ್ಯವನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಕೃಷಿ ಕ್ಷೇತ್ರದ ರೂಪಾಂತರದಂತೆ ಕನ್ನಡ ಕೃಷಿವಿಜ್ಞಾನ ಸಾಹಿತ್ಯದ ರೂಪಾಂತರವೂ ನಡೆಯತೊಡಗಿತು. ಈ ಸಾಹಿತ್ಯ ರೂಪಾಂತರದ ಅವಲೋಕನೆಗೆ ಕೃಷಿ ಕ್ಷೇತ್ರದ ರೂಪಾಂತರದ ಅಧ್ಯಯನವೂ ಅಗತ್ಯವಾಗಿದೆ.

ಭಾರತೀಯ ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳನ್ನು ಮೂರು ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯ ಹಂತ ಕೌಟುಂಬಿಕ ಕೃಷಿಯ ಹಂತ. ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗ ಭಾರತೀಯ ಕೃಷಿಯು ಪ್ರಧಾನವಾಗಿ ಕೌಟುಂಬಿಕ ಕೃಷಿಯಾಗಿತ್ತು. ಸಾಮಾನ್ಯವಾಗಿ ಅದು ಬದುಕಿನ ಒಂದು ವಿಧಾನವಾಗಿತ್ತು, ಜೀವನಾಧಾರದ ಕಸುಬಾಗಿತ್ತು. ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಯೇ ಕೃಷಿ ಜೀವನದ ಆಧಾರವಾಗಿತ್ತು. ಅದು ಸಂಪೂರ್ಣ ಸ್ವಾವಲಂಬನೆಯ ಉದ್ಯೋಗವಾಗಿತ್ತು. ಅದಕ್ಕಾಗಿ ಹಿಂದಿನ ಬೆಳೆಯಿಂದ ಬಿತ್ತನೆ, ಬೀಜ, ಸಸ್ಯ ಮತ್ತು ಪ್ರಾಣಿ ತ್ಯಾಜ್ಯಗಳಿಂದ ಗೊಬ್ಬರ ಹಾಗೂ ಅವಿಭಕ್ತ ಕುಟುಂಬದ ಸದಸ್ಯರಿಂದ ಶ್ರಮ ಬರುತ್ತಿತ್ತು. ಬೇಸಾಯ ಪದ್ಧತಿಗಳು ಶತಶತಮಾನದ ಅನುಭವ ಆಧಾರಿತ ಮಿಶ್ರಬೆಳೆ, ಮಿಶ್ರಕೃಷಿ ಮತ್ತು ಬೆಳೆ ಆರ್ವತನೆ ಮುಂತಾದ ಪದ್ಧತಿಗಳಾಗಿತ್ತು ಹಾಗೂ ಕೃಷಿ ಉತ್ಪಾದನೆ ಮುಖ್ಯವಾಗಿ ಕುಟುಂಬದ ಬಳಕೆಗಾಗಿತ್ತು. ಒಟ್ಟಾರೆ ಅದು, ಸುಸ್ಥಿರ ಕೌಟುಂಬಿಕ ಉದ್ಯೋಗವಾಗಿತ್ತು.

ಎರಡನೆಯದು ಹೆಚ್ಚುವರಿ ಕೃಷಿಯ ಹಂತ. ಹೊಸದಾಗಿ ನಿರ್ಮಾಣಗೊಂಡ ದೇಶ ಬಳುವಳಿಯಾಗಿ ಪಡೆದ ತೀವ್ರ ಆಹಾರದ ಅಭಾವದಿಂದಾಗಿ ಹೆಚ್ಚುವರಿ ಕೃಷಿಯ ಅನುಸರಣೆ ತಾರ್ಕಿಕ ಅವಶ್ಯಕತೆಯಾಗಿತ್ತು. ೧೯೫೦ರ ಸುಮಾರಿಗೆ ಆಯ್ದ ಸಾಂಪ್ರದಾಯಕ ವಿಧಾನಗಳ ಆಧಾರದ ‘ಹೆಚ್ಚು ಆಹಾರ ಬೆಳೆಯಿರಿ ಆಂದೋಲನ’ವೇ ಈ ಸಮಸ್ಯೆಗೆ ಪ್ರಮುಖ ಪರಿಹಾರವಾಗಿ ಕಂಡುಬಂದಿತ್ತು. ಆದರೆ ಭಾರತೀಯ ಕೃಷಿಯ ಸುವರ್ಣಯುಗ ೧೯೬೦ರ ದಶಕದಲ್ಲಿ ಹಸಿರುಕ್ರಾಂತಿಯೊಂದಿಗೆ ಪ್ರಾರಂಭವಾಯಿತೆನ್ನಬಹುದು. ಇದರೊಂದಿಗೆ, ಭಾರತೀಯ ರೈತ ತನ್ನ ಸ್ಥಳೀಯ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಸೇರಿಸಿ ಬೆಳೆ ಇಳುವರಿಯನ್ನು ದುಪ್ಪಟ್ಟು ಮಾಡಿ ದೇಶವನ್ನು ಆಹಾರ ಸ್ವಾವಲಂಬನೆಯ ಹಂತಕ್ಕೆ ತಂದು ಚರಿತ್ರೆಯನ್ನೇ ನಿರ್ಮಾಣ ಮಾಡಿದ. ಆದರೆ ಈ ಪ್ರಕ್ರಿಯೆಯಲ್ಲಿ, ಆತ ಕೆಲವು ಖರೀದಿಸಿದ ಪರಿಕರಗಳ ಮೇಲೆ ಅವಲಂಬಿತವಾಗಬೇಕಾಯಿತು. ಈ ಹಂತದಲ್ಲಿ ಕೃಷಿ ವ್ಯವಸ್ಥೆ ಕ್ರಮೇಣ ತನ್ನ ಕೆಲವು ಅತ್ಯುತ್ತಮ ಸಾಂಪ್ರದಾಯಕ ಪದ್ಧತಿಗಳನ್ನು ತೊರೆಯಲಾರಂಭಿಸಿತೆಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಹಸಿರು ಕ್ರಾಂತಿಯ ಪ್ರಾರಂಭದಿಂದಾಗಿ ಕಾಣಿಸಿಕೊಂಡ ಮೂರನೆಯ ಹಂತವೇ ಮಾರುಕಟ್ಟೆ ಕೃಷಿಯ ಹಂತ. ಕೃಷಿರಂಗದಲ್ಲಿ ಮಾತ್ರವಲ್ಲ, ಆದರೆ ಆರ್ಥಿಕ ಪರಿಸರದಲ್ಲೂ ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಬದಲಾವಣೆಗಳಾಗುತ್ತಿವೆ. ಎಲ್ಲ ರೈತಾಪಿ ಕುಟುಂಬಗಳಿಗೂ, ಇಂದು ನಗರದ ಆದಾಯದ ಅವಶ್ಯಕತೆಯಿದೆ. ಹಾಗಾಗಿ, ಬಹುಪಾಲು ಸಣ್ಣ ರೈತರು ಸ್ಥಳೀಯ ವಾರದ ಸಂತೆಗಳಿಗೆ ಬೆಳೆದರೆ, ಹೈ-ಟೆಕ್ ರೈತರು ರಫ್ತು ಮಾರುಕಟ್ಟೆಗಾಗಿ ಬೆಳೆಯುತ್ತಾರೆಂಬ ಸಾಮಾನ್ಯ ಭಾವನೆಯಿದೆ. ಮಧ್ಯಮ ಹಂತದ ರೈತರು, ಏರುತ್ತಿರುವ ತಮ್ಮ ನಿರೀಕ್ಷೆಗಳಿಂದ ಹಾಗೂ ಪ್ರಸ್ತುತ ದಿನದ ಹೆಚ್ಚಿನ ಅರಿವಿನಿಂದಾಗಿ ಮಾರುಕಟ್ಟೆ ಮತ್ತು ಬೇಡಿಕೆಯನ್ನು ಸರಿಯಾಗಿ ಗುರುತಿಸದೆ ಹೆಚ್ಚೆಚ್ಚು ಬೆಳೆಯಲು ಪ್ರಾರಂಭಿಸಿದ್ದಾರೆ.

ಗ್ರಾಮೀಣ ಆರ್ಥಿಕ ಪರಿಸರದಲ್ಲಿ ಮೊದಲಿಗೆ ನಗದು ಹಣಕ್ಕೆ ಸ್ಥಾನವೇ ಇರಲಿಲ್ಲ. ಈಗ ಹಣ ಗ್ರಾಮೀಣ ಬದುಕನ್ನು ಸಂಪೂರ್ಣವಾಗಿ ಆಕ್ರಮಿಸಿದೆ. ಕೆಲದಶಕಗಳ ಹಿಂದೆ ಗ್ರಾಮೀಣ ಬದುಕು ಬಹಳ ಸರಳವಾಗಿತ್ತು ಹಾಗೂ ಕೃಷಿಯ ಮತ್ತು ಕೌಟುಂಬಿಕ ಅವಶ್ಯಕತೆಗಳು ಕೆಲವು ಮೂಲಭೂತ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ನೀಗಿಸಿಕೊಳ್ಳಲಾಗುತ್ತಿತ್ತು. ಸಾಂಪ್ರದಾಯಕವಾಗಿ, ಈ ಸೇವೆಗಳಿಗೆ ಸಂದಾಯವನ್ನು ಕೃಷಿ ಉತ್ಪನ್ನಗಳ ರೂಪದಲ್ಲಿಯೇ ಕುಯಿಲಿನ ಸಮಯದಲ್ಲಿ ಪಾವತಿಸಲಾಗುತ್ತಿತ್ತು. ಈಗ ಇದೆಲ್ಲಾ ಬದಲಾಗಿದೆ. ಕೃಷಿ ಕುಟುಂಬಗಳ ಅವಶ್ಯಕತೆಗಳು ಹೆಚ್ಚುತ್ತಿರುವಂತೆ, ನಗರ ಬದುಕಿನ ಶೈಲಿಯನ್ನು ಅನುಕರಿಸುವುದರಿಂದಾಗಿ ಕೃಷಿ ಅವಶ್ಯಕತೆಗಳನ್ನೂ ಸಹ ಖರೀದಿಸಿದ ಪರಿಕರಗಳಿಂದಾಗಿ ಪೂರೈಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಅದರ ಜೊತೆಗೆ ಗ್ರಾಮೀಣ ಬದುಕಿನಲ್ಲಿದ್ದ ‘ವಸ್ತು ವಿನಿಮಯ’ (Barter system) ರೂಪದ ಸಂದಾಯ ಪದ್ಧತಿ ಸಂಪೂರ್ಣ ಕಣ್ಮರೆಯಾಗಿ ಅದರ ಸ್ಥಾನವನ್ನು ಹಣದ ವ್ಯವಹಾರ ಆಕ್ರಮಿಸಿದೆ. ಹಾಗಾಗಿ, ಇಂದು ಯಾವುದೇ ರೈತ ಸಾಕಷ್ಟು ಹಣದ ಆದಾಯವಿಲ್ಲದೆ ಬದುಕಲಾರ. ಅದಕ್ಕಾಗಿ ಮಾರುಕಟ್ಟೆಗಾಗಿ ಏನನ್ನಾದರೂ ಬೆಳೆಯಲೇಬೇಕಾಗಿರುವುದು ಇಂದು ಎಲ್ಲ ರೈತರಿಗೆ ಅನಿವಾರ್ಯವಾಗಿದೆ.

ಕರ್ನಾಟಕದಲ್ಲಿ ಜೀವನಾಧಾರದ ಕೃಷಿ ವಾಣಿಜ್ಯ ಅಥವಾ ಮಾರುಕಟ್ಟೆ ಕೃಷಿಯಾಗಿ ರೂಪಾಂತರಗೊಳ್ಳುವ ಕ್ರಿಯೆ ಹಲವಾರು ದಶಕಗಳ ಹಿಂದೆಯೇ ಮಂಡ್ಯದಲ್ಲಿ ೧೯೪೮ರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿತಗೊಳ್ಳುವುದರೊಂದಿಗೆ ಪ್ರಾರಂಭವಾಯಿತು. ಅನಂತರ ೧೯೭೦ರಿಂದ ರೇಷ್ಮೆಕೃಷಿಯನ್ನು ಸರ್ಕಾರ ಜನಪ್ರಿಯಗೊಳಿಸಿತು. ಎಷ್ಟೋ ಜನ ರೈತರು ಆಹಾರ ಧಾನ್ಯವನ್ನು ಬೆಳೆಯುವುದನ್ನು ನಿಲ್ಲಿಸಿ ಕಬ್ಬು, ಹಿಪ್ಪುನೇರಳೆ ಸೊಪ್ಪು ಬೆಳೆಯಲು ಪ್ರಾರಂಭಿಸಿದರು. ೧೯೯೦ನೇ ದಶಕದಿಂದೀಚೆಗೆ ಅಲಂಕಾರಿಕ ಪುಷ್ಪಕೃಷಿ ಪ್ರಾರಂಭವಾಗಿದೆ.

ಜಾಗತೀಕರಣ ಹಾಗೂ ಉದಾರೀಕರಣ ಪ್ರಾರಂಭವಾದಾಗಲಿಂದಲೂ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಭಾರತದಲ್ಲಿ ವಿಫುಲವಾಗಿ ಸಣ್ಣ ಕೃಷಿ ಹಿಡುವಳಿಗಳಿರುವುದರಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಉತ್ಪಾದಿಸುವುದು ಕಡಿಮೆ ಪ್ರಮಾಣದಲ್ಲಿದೆ. ಆದ್ದರಿಂದ ಜಾಗತೀಕರಣದಿಂದಾಗಿ ಭಾರತದಲ್ಲಿ ರೈತಾಪಿ ವರ್ಗಗಳಿಗೆ ಏನೇನೂ ಸಿಗುವುದಿಲ್ಲ. ದೊಡ್ಡ ಹಿಡುವಳಿದಾರರಿಗೆ ಪ್ರಯೋಜನೆಗಳು ಸಿಗುತ್ತವೆ. ಜಾಗತೀಕರಣ ಉದಾರೀಕರಣದಿಂದಾಗಿ ಕೃಷಿ ಸಲಕರಣೆ ಉತ್ಪಾದಿಸುವ ಕೈಗಾರಿಕೆಗಳು ಹೆಚ್ಚು ಲಾಭಗಳಿಸುತ್ತವೆ. ಈ ಕೈಗಾರಿಕೆಗಳಲ್ಲಿ ಬಹುರಾಷ್ಟೀಯ ಕಂಪೆನಿಗಳು ಹೆಚ್ಚಿವೆ. ಕಾರ್ಗಿಲ್, ಮಾನ್ಸಂಟೊ, ಸಿಬಾ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳ ಪಟ್ಟಿಯನ್ನೇ ನೋಡಬಹುದು. ಜಾಗತೀಕರಣ ಹಾಗೂ ಉದಾರೀಕರಣ ಬಹುರಾಷ್ಟ್ರೀಯ ಕಂಪೆನಿಗಳು ಲಾಭ ಗಳಿಸುವುದಕ್ಕೆ ಪೂರಕವಾದ ಅಂಶಗಳಾಗಿವೆ. ಜಾಗತೀಕರಣ ಹಾಗೂ ಉದಾರೀಕರಣದಿಂದಾಗಿ ಇಂದು ಬಹುರಾಷ್ಟ್ರೀಯ ಕಂಪೆನಿಗಳು ಹೂಡುವ ಬಂಡವಾಳಕ್ಕೆ ಹೆಚ್ಚು ಲಾಭವಿದೆ. ಇಲ್ಲಿ ಕಡಿಮೆ ದರದಲ್ಲಿ ದೊರೆಯುವ ಕಚ್ಚಾ ಸಾಮಗ್ರಿಗಳು, ಮಾನವ ಸಂಪನ್ಮೂಲಗಳು, ಸರಕಾರದಿಂದ ಸಿಗುವ ಉತ್ತೇಜಕ ಬೆಂಬಲ ಮುಂತಾದುವುಗಳಿಂದ ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ಆಳವಾಗಿ ಬೇರು ಬಿಡಲಾರಂಭಿಸಿವೆ. ಜಾಗತೀಕರಣವು ಇಂದು ರೈತರನ್ನು ರೈತೋದ್ಯಮಿಗಳನ್ನಾಗಿ ಮಾಡುತ್ತಿದೆ ಹಾಗೂ ಅವರಲ್ಲಿ ವಿಫುಲವಾಗಿದ್ದ ಕೃಷಿಕ ಬದುಕಿನ ಸಾಂಸ್ಕೃತಿಕ ಬಂಡವಾಳವನ್ನು ಕಣ್ಮರೆಯಾಗಿಸುತ್ತಿದೆ.

ಕೃಷಿ ವಲಯದಲ್ಲಿ ಸಂಶೋಧನೆಗಳ ಮೂಲಕ ಅಭಿವೃದ್ಧಿಪಡಿಸುವ ಹೊಸ ಸಸ್ಯ ಹಾಗೂ ಪ್ರಾಣಿ ತಳಿಗಳ ಮೇಲೆ ಹೊಂದುವ ‘ಬೌಧಿಕ ಆಸ್ತಿ’ ಹಕ್ಕುಗಳನ್ನು ಅಂತರಾಷ್ಟ್ರೀಯ ಸಂಸ್ಥೆಯಾದ ‘ಹೊಸ ತಳಿಗಳನ್ನು ಸಂರಕ್ಷಿಸುವ ಪರಿಷತ್’ (UPOV) ಸ್ವಾಮ್ಯ ಕೊಡುವ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆ ೧೯೬೧ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಗೆ ಮೂವತ್ತು ರಾಷ್ಟ್ರಗಳು ಸದಸ್ಯರಾಗಿವೆ. ಈ ಎಲ್ಲ ರಾಷ್ಟ್ರಗಳು ಕೈಗಾರಿಕಾ ರಾಷ್ಟ್ರಗಳಾಗಿರುವುದರಿಂದ ತೃತೀಯ ಜಗತ್ತಿನ ರಾಷ್ಟ್ರಗಳು ಈ ಸಂಸ್ಥೆಯನ್ನು ಅನುಮಾನದಿಂದ ನೋಡುವಂತಾಗಿದೆ. ಭಾರತದ ಸರಕಾರ ಈ ಸಂಸ್ಥೆಗೆ ಸದಸ್ಯತ್ವ ಪಡೆಯಲು ಯೋಚಿಸುತ್ತಿದೆ. ಆದರೆ ರಾಷ್ಟ್ರದ ಸಂಶೋಧನೆಯ ಬಗ್ಗೆ ಕಳವಳಿಯಿರುವ ಎಲ್ಲರೂ ಇದನ್ನು ವಿರೋಧಿಸುತ್ತಿದ್ದಾರೆ. ಕೃಷಿ ಸಂಶೋಧನೆಯ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಇದುವರೆಗೂ ಯಾವುದೇ ಬೌಧ್ಧಿಕ ಆಸ್ತಿ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತಿರಲಿಲ್ಲ. ಯಾಕೆಂದರೆ ಇವು ಪ್ರಕೃತಿಯ ಕೊಡುಗೆ. ಭಾರತದಲ್ಲಿ ಉಪಯುಕ್ತ ಪ್ರಭೇದಗಳು ಲಕ್ಷಾಂತರದಷ್ಟು ಇವೆ. ರೈತರಿಗೆ ತಳಿಗಳ ಮೇಲೆ ಹಕ್ಕಿದೆ ಅಥವಾ ಇವುಗಳನ್ನು ಗುರುತಿಸಿದ ತಳಿ ಶಾಸ್ತ್ರಜ್ಞರಿಗೆ ಇದರ ಮೇಲೆ ಹಕ್ಕಿದೆ ಎಂಬ ವಿಚಾರವೇ ತಿಳಿಯದು. ಉರುಗ್ವೆ ಸುತ್ತಿನ ಮಾತುಕತೆಯ ನಂತರ ಕೃಷಿವಲಯಕ್ಕೂ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಿರ್ದೇಶಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಿಂದಾಗಿ ಇಂದು ಕಾಡಿನಲ್ಲಿ ವಿಫುಲವಾಗಿ ಬೆಳೆಯುವ ಉಪಯುಕ್ತ ಸಸ್ಯಗಳನ್ನು ರೈತರು ಆಯ್ದು ಬೆಳೆಯುವುದಕ್ಕೂ ಕುತ್ತು ಬಂದಿದೆ. ರೈತರು ಆಯ್ದು ಬೆಳೆಸುವ ಸಸ್ಯಗಳ ಮೇಲೆ ಯಾರು ಹಕ್ಕುಗಳನ್ನು ಪಡೆದಿರುತ್ತಾರೋ ಅದು ರೈತರಿಗೆ ತಿಳಿದೇ ಇರುವುದಿಲ್ಲ. ಆದ್ದರಿಂದ ಇಂದು ಬೇವಿನಂತ ಕಾಡು ಸಸ್ಯಕ್ಕೂ ಪೇಟೆಂಟ್ ಪಡೆಯುವ ಸಂಸ್ಥೆಗಳಿಗೆ ಸೇರಿರುತ್ತದೆ. ಈ ಸಂಸ್ಥೆಗಳಿಗೆ ರಾಯಧನ ಕೊಡದೇ ಈ ತಳಿಗಳನ್ನು ರೈತರು ಮುಟ್ಟಲಾಗುವುದಿಲ್ಲ. ಆದ್ದರಿಂದ ಒಂದು ಕಾಲದಲ್ಲಿ ಮುಕ್ತವಾಗಿದ್ದ ಜೈವಿಕ ವಲಯ ಇಂದು ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನುಗಳ ಸುಳಿಯಲ್ಲಿ ಸಿಲುಕಿ ರೈತರಿಗೆ ಮಾರಕವಾಗಲಿದೆ.

ಈ ಹೊಸ ವಿಚಾರಗಳ ಪ್ರಕಟಣೆಗೆ ಹಲವಾರು ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಆಸಕ್ತ ಬರಹಗಾರರು, ರೈತರು ಮುಂದಾಗಿದ್ದಾರೆ. ಈ ವಿಷಯಗಳ ಬಗೆಗೆ ನಿರ್ವಹಿಸಲು. ವಿಚಾರ ವಿನಿಮಯ ನಡೆಸಲು ರೈತರನ್ನು ಒಳಗೊಂಡಂತೆ ಹಲವಾರು ಕಮ್ಮಟ, ವಿಚಾರ ಸಂಕಿರಣಗಳು ರಾಜ್ಯಾದ್ಯಂತ ನಡೆಯುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಸಹ ಕೃಷಿ ಸಾಹಿತ್ಯ ಪ್ರಕಟಣೆಗೆ ಮುಂದಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ದೇಸಿ ಕೃಷಿ ಕಮ್ಮಟವನ್ನು ಮೇ ೨೦೦೬ರಲ್ಲಿ ಆಯೋಜಿಸಿತ್ತು. ಆಧುನಿಕ ಬೇಸಾಯದ ಹೊಡೆತಕ್ಕೆ ಸಿಲುಕಿ ಗ್ರಾಮಗಳಲ್ಲಿ ಕೃಷಿ ಸಂಸ್ಕೃತಿ ನಾಶವಾಗುತ್ತಿರುವ ಸಂದರ್ಭದಲ್ಲಿ, ನೆಲಮೂಲ ಜ್ಞಾನದಿಂದ ಜಾಗತೀಕರಣದ ಅಪಾಯವನ್ನು ಎದುರಿಸಲು ಸಾಧ್ಯ ಎಂಬುದು ಆ ಕಮ್ಮಟದ ಯೋಜನೆಯ ಹಿಂದಿನ ಉದ್ದೇಶ. ‘ಕೃಷಿ ವಿಶ್ವವಿದ್ಯಾನಿಲಯ, ಸಂಶೋಧನಾ ಕೇಂದ್ರಗಳ ತಜ್ಞರು ಬರೆದಿದ್ದೇ ಕೃಷಿ ಸಾಹಿತ್ಯವೆಂದು ವಿಜೃಂಭಿಸುತ್ತಿದೆ. ಆದರೆ ಅವರ ಅನುಭವ ಸೀಮಿತ. ನಾಡಿನ ಬಹುಸಂಖ್ಯಾತರ (ರೈತರ) ಜ್ಞಾನವನ್ನು ಜಗತ್ತಿನಿಂದ ವಂಚಿಸುವಂತೆ ಮಾಡುವುದು ಎಷ್ಟು ಸರಿ? ಕೃಷಿಯ ನಿಜವಾದ ವಾರಸುದಾರರಿಗೆ-ಅಂದರೆ ರೈತರಿಗೆ-ಸಂಶೋಧಕರ ಪ್ರಬಂಧಗಳಿಂದ ಪ್ರಯೋಜನ ಆಗಿದೆಯೇ? ಐವತ್ತು ವರ್ಷಗಳ ಹಿಂದೆ ಸುಖದಿಂದ ಬದುಕುತ್ತಿದ್ದ ರೈತ ಈಗ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಇಷ್ಟೊಂದು ಸಂಶೋಧನೆ ನಡೆದ ಬಳಿಕವೂ ಜಾಗತೀಕರಣದ ಕಿಡಿ ಸಾಂಪ್ರದಾಯಕ ಜ್ಞಾನವನ್ನು ಸುಟ್ಟುಹಾಕುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಅನುಭವಿಸುವ ಕಷ್ಟಗಳಿಗೆ ನಾವೇ ಹೊಣೆಯಾಗುತ್ತೇವೆ. ಹಾಗಾಗಿ ಪ್ರಾಧಿಕಾರ ಈ ಕೆಲಸಕ್ಕೆ ಮುಂದಾಗಿದೆ’ ಎಂದಿದ್ದರು ಪ್ರಾಧಿಕಾರದ ಆಗಿನ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ. ದೇಸಿ ಕೃಷಿ ಜ್ಞಾನವನ್ನು ದಾಖಲಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.

ಹಸಿರು ಕ್ರಾಂತಿಗೆ ಹಾದಿ ಮಾಡಿಕೊಟ್ಟ ಆಧುನಿಕ ಕೃಷಿ ಹಲವಾರು ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಮಸ್ಯೆಗಳನ್ನು ಹುಟ್ಟುಹಾಕಿತು. ಇರುವ ಜಾಗದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕಾಯಿತು. ಭೂಮಿ ತನ್ನ ಸ್ವಾಭಾವಿಕ ಫಲವತ್ತತೆ ಕಳೆದುಕೊಳ್ಳತೊಡಗಿತು. ಫಲವತ್ತತೆ ಹೆಚ್ಚಿಸುವ ರಾಸಾಯನ ಗೊಬ್ಬರಗಳನ್ನು ಬಳಸಬೇಕಾಯಿತು. ಹೊಸ ಹೊಸ ಅಧಿಕ ಇಳುವರಿ ತಳಿಗಳ ಅವಿಷ್ಕಾರ ಮಾಡಬೇಕಾಯಿತು. ಹಾಗೇ ಬೆಳೆಗಳನ್ನು ಕಾಡುವ ರೋಗಗಳು, ಕೀಟಗಳೂ ಸಹ ಹೆಚ್ಚಾಗತೊಡಗಿದವು. ಅವುಗಳನ್ನು ನಿಯಂತ್ರಿಸಲು ಕೀಟನಾಶಕ, ರೋಗನಾಶಕಗಳನ್ನು ಕಂಡುಹಿಡಿಯಲಾಯಿತು. ಅವುಗಳನ್ನು ಸತತವಾಗಿ ಉಪಯೋಗಿಸಿದಂತೆ ಅವುಗಳನ್ನೂ ಸಹಿಸಿಕೊಳ್ಳವಂತಹ ಹೊಸ ಹೊಸ ಕೀಟಗಳು, ರೋಗಗಳು ಹುಟ್ಟಿಕೊಳ್ಳತೊಡಗಿದವು. ಹಾಗೇ ಇನ್ನೂ ಹೆಚ್ಚು ಹೆಚ್ಚು ಶಕ್ತಿಯುತ ರಾಸಾಯನಿಕಗಳನ್ನು ಬಳಸಬೇಕಾಗಿ ಬಂತು.

ಇದರಿಂದಾಗಿ ಪರಿಸರದ ಜೀವರಾಶಿಗಳ ಸಮತೋಲನವೇ ಹಾಳಾಗುತ್ತಿದೆ. ರಾಸಾಯನಗಳನ್ನು ಉಪಯೋಗಿಸಿ ಬೆಳೆಸಿದ ಆಹಾರಗಳು ಮನುಷ್ಯನಲ್ಲಿ ಹಲವಾರು ರೋಗಗಳನ್ನುಂಟು ಮಾಡುತ್ತವೆ. ಪರಿಸರವೇ ವಿಷಪೂರಿತವಾಗುತ್ತಿದೆ. ಹೊಸ ತಳಿಗಳನ್ನು ಉಪಯೋಗಿಸಿ ಬೇಸಾಯ ಮಾಡಬೇಕಾದಲ್ಲಿ ರಸಗೊಬ್ಬರ, ರಾಸಾಯನಗಳನ್ನು ಉಪಯೋಗಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ಕೃಷಿಯಲ್ಲಿ ಮನುಷ್ಯ ಪ್ರಕೃತಿಯೊಂದಿಗೆ ಸಹಕರಿಸಬೇಕೇ ಹೊರತು ಅದನ್ನು ‘ಜಯಿಸಿ’ ಇನ್ನೂ ‘ಅಭಿವೃದ್ಧಿ’ ಪಡಿಸುವುದರ ಮೂಲಕವಲ್ಲ. ಗಿಡಮರ ಬೆಳೆಯುವುದನ್ನು ಯಾರೂ ಪ್ರಕೃತಿಗೆ ಹೇಳಿಕೊಡುವುದಿಲ್ಲ. ಪ್ರಕೃತಿಯಲ್ಲಿನ ಜೀವರಾಶಿ ಒಂದಕ್ಕೊಂದು ಸಹಕರಿಸಿಕೊಂಡು ಬದುಕಬಲ್ಲವು. ಪ್ರಕೃತಿಯೇ ಮಾಡುವ ಗಿಡಮರಗಳ ಬಿತ್ತನೆ ಅಷ್ಟು ಸುಲಭವಾಗಿ ರೋಗರುಜಿನಗಳಿಗೆ ತುತ್ತಾಗುವಷ್ಟು ದುರ್ಬಲವಾಗಿರುವುದಿಲ್ಲ. ಬಹಳಷ್ಟು ಗಿಡಮರಗಳು ರೋಗನಿಯಂತ್ರಣ ರಾಸಾಯನಗಳನ್ನು ತಾವೇ ಉತ್ಪಾದಿಸುತ್ತವೆ. ಈ ಆಲೋಚನೆಯನ್ನು ಪ್ರತಿಪಾದಿಸುವ ವಿಜ್ಞಾನವನ್ನೇ ಗುಮಾನಿಯಿಂದ ನೋಡುವ ಜಪಾನಿನ ವಿಜ್ಞಾನಿಯಾದ ಮಸಾನೊಬು ಫುಕುವೊಕರ ಸಹಜ ಕೃಷಿಯ ಬಗೆಗೆ ಕನ್ನಡದಲ್ಲಿ ೧೯೮೮ರಲ್ಲಿ ಜೆ. ಬಾಲಕೃಷ್ಣ ಬರೆದ ಲೇಖನ ಮೊಟ್ಟಮೊದಲನೆಯದಾಗಿ ಪ್ರಕಟವಾಯಿತು. ಈ ಸಹಜ ಕೃಷಿಯ ವಿಧಾನವನ್ನು ‘ಋಷಿ ಬೇಸಾಯ’ ಎಂತಲೂ ಕರೆಯುತ್ತಾರೆ. ಕೆಲವರು ಅದನ್ನು ‘ಕೆಲಸವೇ ಇಲ್ಲದ ಕೃಷಿ’ (ಡೂ ನಥಿಂಗ್ ಫಾರ್ಮಿಂಗ್) ಎನ್ನುತ್ತಾರೆ. ಫುಕುವೊಕ ಅದನ್ನು ‘ಗಾಂಧಿ ವಿಧಾನ’ ಎಂದೂ ಕರೆದಿದ್ದಾರೆ. ಜಪಾನಿ ಭಾಷೆಯಿಂದ ಇಂಗ್ಲಿಶಿಗೆ ಅನುವಾದಗೊಂಡು ಪ್ರಕಟವಾಗಿದ್ದ ಫುಕುವೊಕಾರ ‘ದ ಒನ್ ಸ್ಟ್ರಾ ರೆವೊಲ್ಯೂಶನ್’ ಕೃತಿಯನ್ನು ಸಂತೋಷ್ ಕೌಲಗಿ ಕನ್ನಡಕ್ಕೆ ಅನುವಾದಿಸಿ ‘ಒಂದು ಹುಲ್ಲಿನ ಕ್ರಾಂತಿ’ಯ ಹೆಸರಿನಲ್ಲಿ ಪ್ರಕಟಿಸಿದರು. ಪೂರ್ಣಚಂದ್ರ ತೇಜಸ್ವಿಯವರು ‘ಸಹಜ ಕೃಷಿ ಪರಿಚಯ’ದಲ್ಲಿ ಫುಕುವೊಕಾರ ತತ್ವಗಳನ್ನು ಕನ್ನಡಕ್ಕೆ ತಂದರು.

ಇಂದು ಕರ್ನಾಟಕದ ಬಹುಪಾಲು ಎಲ್ಲ ರೈತರಿಗೂ ಸಾವಯವ ಕೃಷಿಯ ಬಗ್ಗೆ ಹೆಚ್ಚೆಚ್ಚು ಅರಿವು ಮೂಡುತ್ತಿದೆ. ಇಂದು ವಿಶ್ವವಿದ್ಯಾನಿಲಯಗಳು, ಸರ್ಕಾರದ ಇಲಾಖೆಗಳು, ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಸಾವಯವ ಕೃಷಿಯನ್ನು ಅನುಸರಿಸುವಂತೆ ಹೇಳುತ್ತಿವೆ. ಸಾವಯವ ಗೊಬ್ಬರಗಳ ಪ್ರಾಮುಖ್ಯತೆಯ ಬಗ್ಗೆ ೧೯೪೯ರಷ್ಟು ಹಿಂದೆಯೇ ಗೋವಿಂದರಾಜನ್ (೧೯೪೯) ಎಂಬ ಕೃಷಿ ಅಧಿಕಾರಿ ಬರೆದಿದ್ದರು. ವಿರೋಧಿ ಸಂವತ್ಸರದ (೧೯೪೯-೧೯೫೦) ‘ಮೈಸೂರು ವ್ಯವಸಾಯದ ಪಂಚಾಂಗ’ದ ಸಂಚಿಕೆಯ ‘ಸಾವಯವ ಗೊಬ್ಬರಗಳು’ ಎಂಬ ಲೇಖನದಲ್ಲಿ,

ಜಮೀನಿನ ಫಲವತ್ತನ್ನು ಸತತವಾಗಿ ಕಾಪಾಡಿಕೊಂಡು ಬರುವುದಕ್ಕೆ ಸಾವಯವ ಗೊಬ್ಬರಗಳನ್ನು ಉಪಯೋಗಿಸುವುದು ಎಷ್ಟು ಮುಖ್ಯವೆಂಬುದು ನಮ್ಮ ರೈತರಿಗೆ ಇನ್ನೂ ಅಷ್ಟು ಮನದಟ್ಟಾಗಿಲ್ಲ. ಅವನ್ನೇ ಹಾಕುತ್ತಿದ್ದರೆ ಜಮೀನು ಬೀಳಾಗುವುದು ನಿಜ. ಸಾವಯವ ಗೊಬ್ಬರಗಳು ಹಾಗಲ್ಲ; ಅವುಗಳ ಪ್ರಯೋಜನ ಸ್ವಲ್ಪ ಫಲವತ್ತನ್ನು ಕೂಡಿಸಿ ಕೊಡುತ್ತದೆ. ಸಸ್ಯಗಳಿಗೆ ಆಹಾರವನ್ನು ಕೂಡಿಸಿ, ಫಲವತ್ತನ್ನು ಬೆಳೆಸುವುದರಲ್ಲಿ ಕೇಂದ್ರ ಪಾತ್ರವನ್ನು ವಹಿಸುವ ಸಾವಯವಾಂಶಕ್ಕೆ ಹ್ಯೂಮಸ್ಎಂದು ಹೆಸರು

ಎಂದು ಬರೆದಿದ್ದಾರೆ. ಹಸಿರು ಕ್ರಾಂತಿಯ ಬಗ್ಗೆ ಕೊಂಚ ತಡವಾಗಿಯಾದರೂ ಹತಾಶನಾದ ರೈತ ಬದಲಿ ವಿಧಾನಗಳನ್ನು ಹಾಗೂ ಜ್ಞಾನ ವಿನಿಮಯದ ಮಾಧ್ಯಮಗಳನ್ನು ಅರಸತೊಡಗಿದ್ದಾನೆ. ಇಂದು ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ಬದಲಿ ಕೃಷಿ ವಿಧಾನಗಳು ಬಹುಪಾಲು ಈ ಮುಂದಿನ ಅಂಶಗಳನ್ನು ಒಳಗೊಂಡಿರುತ್ತವೆ:

೧. ಪರಿಸರ ಸ್ನೇಹಿ ಮತ್ತು ಸುಸ್ಥಿರ ವಿಧಾನಗಳು.

೨. ನಿರ್ದಿಷ್ಟ ಭೌಗೋಳಿಕ ಪರಿಸರದ ರೈತರ ಅನಿಸಿಕೆ ಮತ್ತು ಅನುಭವಗಳಿಗೆ ಆದ್ಯತೆ.

೩. ಕೃಷಿಯ ಬಗೆಗೆ ಹೋಲಿಸ್ಟಿಕ್ ಅಪ್ರೋಚ್.

ಸಾವಯವ ಕೃಷಿ ಇಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಸುಸ್ಥಿರ ಕೃಷಿ, ಸಾವಯವ ಕೃಷಿ, ಪರಿಸರ ಸ್ನೇಹಿ ಕೃಷಿಯ ಹೆಸರಿನಲ್ಲಿ ಬಹಳಷ್ಟು ಸಾಹಿತ್ಯ ಪ್ರಕಟವಾಗುತ್ತಿದೆ. ಈ ಎಲ್ಲ ಪ್ರಯೋಗಗಳನ್ನು ನಡೆಸುತ್ತಿರುವಂತಹ ಬಹಳಷ್ಟು ರೈತರು ಸಹ ಕೃಷಿಸಾಹಿತ್ಯ ರಚನೆಗೆ ಕೈಹಾಕಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾರಾಯಣರೆಡ್ಡಿಯವರು ‘ಲೀಸಾ’ ಎನ್ನುವ ಕೃಷಿ ಸಂಬಂಧಿ ಇಂಗ್ಲಿಶ್ ಮಾಸಪತ್ರಿಕೆಯಲ್ಲಿ ನಿಯತವಾಗಿ ಅಂಕಣವೊಂದನ್ನು ಬರೆಯುತ್ತಿದ್ದಾರೆ. ಶಿವನಂಜಯ್ಯ ಮತ್ತು ಭರಮಪ್ಪ ಗೌಡ್ರು ಕೃಷಿ ಸಂಬಂಧಿ ವಿಚಾರ ಸಂಕಿರಣಗಳಲ್ಲಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ನಿಲುವುಗಳನ್ನು ದಿಟ್ಟತನದಿಂದ ವ್ಯಕ್ತಗೊಳಿಸುತ್ತಾರೆ ಹಾಗೂ ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುತ್ತಾರೆ. ಶಿವನಂಜಯ್ಯನವರ ಪ್ರಕಾರ ಈ ಹೊಸ ವಿಚಾರಗಳ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕೃಷಿ ಈ ಮುಂದಿನ ಅಂಶಗಳನ್ನು ಒಳಗೊಂಡಿರಬೇಕು :

೧. ಕೃಷಿಕನ ಬದುಕಿಗೆ ಬೆಸೆದುಕೊಂಡು, ಜೀವನ ವಿಧಾನವಾಗಬೇಕು.

೨. ರೈತನನ್ನು ಪರಾವಲಂಬಿಯಾಗಿಸದೆ ಸ್ವಾಲಂಬಿಯಾಗಿಸಬೇಕು.

೩. ಕೃಷಿ ಒಳಸುರಿಗಳು ರೈತನ ಉತ್ಪನ್ನಗಳೇ ಆಗಿದ್ದು, ಎಲ್ಲರ ಕೈಗೆ ಎಟುಕುವಂತಿರಬೇಕು, ಯಾವುದನ್ನೂ ಮಾರುಕಟ್ಟೆಯಿಂದ ಹಣ ತೆತ್ತುಕೊಂಡು ತರಬಾರದು.

೪. ಕಡಿಮೆ ಬಂಡವಾಳ ಬೇಡುವ, ಕಡಿಮೆ ಖರ್ಚಿನ ಕ್ರಮವಾಗಿದ್ದು ಕೃಷಿ ಉತ್ಪನ್ನಗಳಿಗೆ ಪ್ರತಿಕೂಲ ಮಾರುಕಟ್ಟೆ ಬೆಲೆಗಳ ನಡುವೆಯೂ, ಆರ್ಥಿಕವಾಗಿ ರೈತನನ್ನು ದಿವಾಳಿ ಎಬ್ಬಿಸಬಾರದು.

೫. ಕೃಷಿ ಹೆಣಭಾರದ ಕೆಲಸವಾಗದೆ, ಕ್ರೀಡೆಯಂತಿರಬೇಕು, ‘ಬೇಸಾಯ ಮನೆ ಮಂದಿಯೆಲ್ಲ ಸಾಯ’ ಎನ್ನುವ ಗಾದೆಮಾತಿಗೆ ಅಪವಾದವಾಗಿರಬೇಕು.

೬. ಹಸಿದ ಎಲ್ಲ ಹೊಟ್ಟೆಗಳಿಗೆ ‘ನೈಜ’ ಆಹಾರ ನೀಡಬೇಕು. ಈಗಿರುವಂತೆ ವಿಷ ಉಣಿಸಬಾರದು.

೭. ಹಿಗ್ಗುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ಕೈಗಾರಿಕೆಗಳಿಂದಾಗಿ, ಕುಗ್ಗುತ್ತಲೇ ನಡೆದಿರುವ ಕೃಷಿ ಭೂಮಿಯಲ್ಲಿಯೇ, ಲಭ್ಯವಿರುವ ಪ್ರಾಕೃತಿಕ ಸಂಪನ್ಮೂಲಗಳಾದ ಪ್ರತಿ ಹನಿ ನೀರು, ಪ್ರತಿ ಸೂರ್ಯರಶ್ಮಿ ಮತ್ತು ಪ್ರತಿ ಅಂಗುಲ ಮಣ್ಣನ್ನು ಸಂಪೂರ್ಣವಾಗಿ ದುಡಿಸಿಕೊಂಡು ಗರಿಷ್ಟ ಪ್ರಮಾಣದ ಉತ್ಪಾದನೆ ಪಡೆಯುವಂತಿರಬೇಕು.

೮. ಈ ಭೂಮಿಯಲ್ಲಿ ಎಲ್ಲ ಜೀವಜಂತುಗಳಿಗೂ ನಮ್ಮಂತೆಯೇ ಬದುಕಿ ಬಾಳುವ ಹಕ್ಕಿದೆ. ಇವುಗಳ ಅಸ್ತಿತ್ವದ ಮೇಲೆ ಆಕ್ರಮಣ ಮಾಡದೆ, ಸಾಧ್ಯವಿರುವ ಎಲ್ಲವನ್ನೂ ಬಳಸುತ್ತ ಸಹಕಾರ ತತ್ವದ ಆಧಾರದ ಮೇಲೆ ಕೃಷಿ ಮಾಡಬೇಕು.

೯. ಪ್ರಕೃತಿ ವೈವಿಧ್ಯಮಯ, ಸಹಕಾರ ಇದರ ಉಸಿರು. ಹಸಿರು ಇದರ ಜೀವ. ಇವೆಲ್ಲವನ್ನೂ ಉಳಿಸುತ್ತ, ಬೆಳೆಸುತ್ತ ಬೆಳೆ ತೆಗೆಯುವ ಕೃಷಿ ನಮ್ಮದಿರಬೇಕು.

೧೦. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಪ್ರಾಣಿಯ ರಾಕ್ಷಸಿ ಪ್ರವೃತ್ತಿಗೆ ಸಂಸ್ಕಾರ ನೀಡಿ ಅವನನ್ನು ಸಾತ್ವಿಕ ‘ಮಾನವ’ನನ್ನಾಗಿ ಪರಿವರ್ತಿಸುವಂತಿರಬೇಕು.