‘ಇತರ ಪತ್ರಿಕೆಗಳವರು ಸಂಘಕ್ಕೆ ತಮ್ಮ ಪತ್ರಿಕೆಗಳನ್ನು ವಿನಿಮಯವಾಗಿ ಕಳಿಸಿ, ಅವರಲ್ಲಿ ಕೆಲವರು ವ್ಯವಸಾಯ ಶೋಧಕರ ಸಂಘದ ಪತ್ರಿಕೆಯಲ್ಲಿನ ಲೇಖನಗಳನ್ನು ಆಯ್ದುಕೊಂಡು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಅವುಗಳ ಉಪಯುಕ್ತತೆಯ ಬಗ್ಗೆ ನಮ್ಮಲ್ಲಿ ಧೈರ್ಯತುಂಬಿದ್ದಾರೆ’ ಎಂದು ಜನವರಿ ೧೯೪೧, ಸಂಚಿಕೆ ೧, ಸಂಪುಟ ೧೭ರ ಸಂಪಾದಕೀಯದಲ್ಲಿ ಬರೆಯಲಾಗಿದೆ. ೧೯೫೪ರಿಂದ ತಾಯಿನಾಡು ದಿನಪತ್ರಿಕೆಯಲ್ಲಿ ವಾರಕ್ಕೆ ಎರಡು ಸಾರಿ ‘ರೈತರ ವೃತ್ತಾಂತಗಳ’ ಬಗೆಗಿನ ಪ್ರಕಟಣೆ ಪ್ರಾರಂಭವಾಯಿತು. ಜನವರಿ ೧೯೫೫, ಸಂಚಿಕೆ ೧, ಸಂಪುಟ ೩೧ರ ವ್ಯವಸಾಯ ಶೋಧಕರ ಸಂಘದ ಪತ್ರಿಕೆಯಲ್ಲಿ ತಾಯಿನಾಡು ಪತ್ರಿಕೆಯ ವ್ಯವಸ್ಥಾಪಕರು ಜಾಹಿರಾತೊಂದನ್ನು ನೀಡಿ, ‘ಕಳೆದ ಒಂದೆರಡು ತಿಂಗಳಿಂದ ಈ ರೈತರ ವಿಭಾಗವನ್ನು ತೆರೆದಿದ್ದೇವೆ. ಸಂಸ್ಥಾನದ ನಾನಾ ಕಡೆಗಳಿಂದ ನಮಗೆ ಪ್ರಶಂಸೆಯ ಪತ್ರಗಳು ಬರುತ್ತಿವೆ. ಆದರಿಂದ ರೈತರಲ್ಲಿ ಹೊಸ ಉತ್ಸಾಹವೂ, ಹುರುಪೂ ಮೂಡಿದೆ. ನಮ್ಮ ಮೈಸೂರು ರೈತರು ಹೆಚ್ಚಿನ ಪ್ರೋತ್ಸಾಹ ನೀಡುವುದಾದರೆ, ಆ ವಿಭಾಗವನ್ನು ವಿಸ್ತರಿಸಿ ಇನ್ನೂ ಹೊಸ ವಿಷಯಗಳನ್ನು ಬರೆದು ರೈತರ ಮುಂದಿಡುತ್ತೇವೆ’ ಎಂದಿದ್ದರು. ಕನ್ನಡದ ದಿನಪತ್ರಿಕೆಗಳಲ್ಲಿ ಕೃಷಿ ಲೇಖನ ಮತ್ತು ಕೃಷಿ ಅಂಕಣಗಳು ಪ್ರಕಟವಾದದ್ದು ಇದೇ ಮೊದಲು.

ಕನ್ನಡ ವೃತ್ತ ಪತ್ರಿಕೆಗಳಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಒದಗಿಸುವ ಮಾಹಿತಿಯನ್ನು ಪ್ರಕಟಿಸುವ ಕಾರ್ಯವು ೧೯೬೮ರಿಂದ ನಡೆಸಲಾಗುತ್ತಿದೆ. ಪತ್ರಿಕೆಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಪ್ರಕಟಿಸುವ ಪ್ರಶ್ನೋತ್ತರ ಅಂಕಣಗಳು (ಉದಾ: ‘ಪ್ರಜಾವಾಣಿ’- ಬೇಸಾಯ ಬೆನ್ನೆಲುಬು: ಈಗ ನಿಲ್ಲಿಸಲಾಗಿದೆ) ರೈತರಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಈ ಅಂಕಣವನ್ನು ನಿಲ್ಲಿಸುವ ಇಚ್ಛೆಯನ್ನು ಕೆಲವು ಪತ್ರಿಕೆಗಳು ವ್ಯಕ್ತಪಡಿಸಿದಾಗ ಹಲವಾರು ರೈತರು ಅವುಗಳನ್ನು ನಿಲ್ಲಿಸಬಾರದೆಂದೂ, ಅದರಿಂದ ಬಹಳಷ್ಟು ಉಪಯುಕ್ತ ಮಾಹಿತಿ ದೊರಕುತ್ತಿದೆಯೆಂದು ಕೋರಿ ಪತ್ರಗಳನ್ನು ಬರೆದಿದ್ದರು.

ಕನ್ನಡದ ಬಹುಪಾಲು ಎಲ್ಲ ದಿನಪತ್ರಿಕೆಗಳು ಕೃಷಿ ವಿಷಯಗಳ ಅಂಕಣಗಳನ್ನು ಪ್ರಕಟಿಸಲು ಪ್ರಾರಂಭಿಸಿ ಕ್ರಮೇಣ ವಾರದ ಒಂದು ನಿರ್ದಿಷ್ಟ ದಿನ ಪ್ರತ್ಯೇಕ ಪುರವಣಿಯನ್ನೇ ತರಲು ಪ್ರಾರಂಭಿಸಿವೆ. ಕೃಷಿವಿಜ್ಞಾನ ಪುಸ್ತಕಗಳಾದರೆ ಸೀಮಿತ ಜನರನ್ನು ಮಾತ್ರ ತಲುಪುತ್ತವೆ. ಆದರೆ ದಿನಪತ್ರಿಕೆಗಳು ಇಂದು ಹಳ್ಳಿಹಳ್ಳಿಗೂ ತಲುಪುತ್ತವೆ.

ದಿನ ಪತ್ರಿಕೆಗಳ ಈ ಕೃಷಿ ಅಂಕಣ/ಪುರವಣಿಗಳಲ್ಲಿ ಆಧುನಿಕ ಮತ್ತು ಸುಧಾರಿತ ಕೃಷಿ ವಿಧಾನಗಳನ್ನು ಪರಿಚಯಿಸುವುದರ ಜೊತೆಗೆ ರೈತರ ಅನುಭವಗಳ ಮಂಡನೆಗೆ, ಸಾಂಪ್ರದಾಯಕ ಕೃಷಿ ಜ್ಞಾನದ ಪುನರುಜ್ಜೀವನದ ಬಗೆಗೆ ಹಾಗೂ ರೈತರೇ ತಮ್ಮ ಹೊಲಗದ್ದೆಗಳಲ್ಲಿ ನಡೆಸುವ ಅನ್ವೇಷಣೆಗಳ ಬಗೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಇದೆಲ್ಲದರ ಜೊತೆಗೆ ರೈತರಿಗೆ ಹೆಚ್ಚು ಅವಶ್ಯಕವಿರುವ ಮಾರುಕಟ್ಟೆಯ ಬಗೆಗೂ ತಿಳಿವಳಿಕೆಯನ್ನು ಈ ಪುರವಣಿಗಳು ನೀಡುತ್ತಿವೆ.