ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಜನಾಂಗಗಳಲ್ಲಿ ಆಯಾದೇಶ ವಾಸಿಗಳು ಆಯಾ ಜನಾಂಗದವರು ತಮಗಿಷ್ಟವಾದ ದೈವದ ಹೆಸರಿನಲ್ಲಿಯೋ, ಮತ ಸ್ಥಾಪಕರ ಹೆಸರಿನಲ್ಲಿಯೋ ಅವರ ಜನ್ಮದಿನ, ಮತಸ್ಥಾಪನೆಯ ದಿನ, ಮತಸ್ಥಾಪನೆಯ ಸಂದರ್ಭದಲ್ಲಿ ನಡೆದು ಮಹತ್ತರ ಘಟ್ಟ ಒಂದರ ನೆನಪಿನ ದಿನಗಳನ್ನು ಆಯ್ಕೆ ಮಾಡಿಕೊಂಡು ಹೊಸ ವರ್ಷಕ್ಕೆ ನಾಂದಿ ಹಾಡುತ್ತಾರೆ. ಕ್ರಿಸ್ತ ಶಕೆ, ಹಿಜರಿ ಶಕೆ ಹೀಗೆ ಉದಾಹರಿಸಬಹುದು. ಆದರೆ ಭಾರತೀಯ ಪರಂಪರೆಯಲ್ಲಿ ಎರಡು ಬಗೆಯಾಗಿ ಹೊಸ ವರ್ಷವನ್ನು ಪ್ರಾರಂಭಿಸಲಾಗುತ್ತದೆ.

ಒಂದು, ವ್ಯಾಪಾರಸ್ಥರು ತಮ್ಮ ಇಡೀ ವರ್ಷದ ವ್ಯವಹಾರವನ್ನೆಲ್ಲಾ ದೀಪಾವಳಿಗೆ ಅಮವಾಸ್ಯಗೆ ಪೂರ್ಣಗೊಳಿಸಿ, ವರ್ಷದ ಬರಬೇಕಾದ, ಕೊಡಬೇಕಾದ ಲೆಕ್ಕವನ್ನೆಲ್ಲ ಚುಕ್ಕಾ ಮಾಡಿ ಮುಗಿಸಿ, ಮರುದಿನ ಅಂದರೆ ದೀಪಾವಳಿ ಪ್ರತಿಪದೆಯನ್ನು ವ್ಯವಹಾರಿಕವಾಗಿ ಹೊಸ ಖಾತೆಯೊಂದಿಗೆ ಹೊಸವರ್ಷವಾಗಿ ಪ್ರಾರಂಭಿಸುತ್ತಾರೆ.

ಹಾಗೆಯೇ ಮಣ್ಣಿನೊಂದಿಗೆ ಮಣ್ಣಾಗಿ ತಮ್ಮ ಬದುಕನ್ನು ಸಾಗಿಸುವ ರೈತಾಪಿ ವರ್ಗವೆಲ್ಲಾ ಯುಗಾದಿ ಅಮವಾಸ್ಯೆಗೆ ತಮ್ಮ ಹಳೆಯ ವರ್ಷದ ಕೃಷಿ ಬದುಕನ್ನು ಪೂರ್ಣಗೊಳಿಸಿ ಯುಗಾದಿಯ ಪ್ರತಿಯೊಂದು ಬೇವು ಬೆಲ್ಲದೊಂದಿಗೆ ಹೊಸ ವರ್ಷಕ್ಕೆ ಕಾಲಿರಿಸಿ ತಮ್ಮ ಬದುಕಿನ ಹೆಜ್ಜೆಗಳನ್ನೊರತೊಡಗುತ್ತಾರೆ. ಅಂದಿನಿಂದಲೇ ಅವರ ಮಣ್ಣಿನ ಒಡನಾಟದ ಬದುಕು ಬಿಚ್ಚಿಕೊಳ್ಳಲು ಆರಂಭಿಸುತ್ತದೆ.

ಯುಗಾದಿಯ ಹಿಂದಿನ ದಿನವೇ ಕುಂಬಾರರ ಮನೆಯಿಂದ ಗ್ರಾಮದ ಪ್ರಮುಖರೆಲ್ಲಾ ಸೇರಿ ಹೊಸ ಮಣ್ಣಿನ ಮಡಿಕೆಗಳನ್ನು ತಂದು ಅವೆಲ್ಲವುಗಳಲ್ಲಿ ನವಧಾನ್ಯಗಳನ್ನು ತುಂಬಿ ಊರ ಮುಂದಿನ ಹೊಲದಲ್ಲಿ ಸೂರ್ಯ ಮುಳುಗುವ ಹೊತ್ತಿಗೆ ಗುರುತಿಸಲಾದ ಸ್ಥಳದಲ್ಲಿ ಅವೆಲ್ಲವುಗಳ ಮೇಲೆ ಎಕ್ಕೆ ಎಲೆ ಮುಚ್ಚಿ ಇಡುತ್ತಾರೆ. ಮಡಿಕೆಗಳ ಎದುರಿಗೆ ಮಣ್ಣಿನಿಂದಲೇ ಮಾಡಿದ ನೊಗ ಹೊಡಿದ ಜೋಡೆತ್ತುಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ನಸುಕಿನ ಜಾವ ಹಿರಿಯರೆಲ್ಲರೂ ಸೇರಿ (ಸೂರ್ಯ ಅರನಾಲಿಗಿ ಕಚ್ಚೂಕಿಂತ್ಲೂ ಮೊದ್ಲು) ಎಲ್ಲಾ ಮಡಿಕೆಗಳಿಗೂ, ಎದುರಿನ ಬಸವಣ್ಣನಿಗೂ ಪೂಜೆ ಸಲ್ಲಿಸಿ, ನಮಸ್ಕರಿಸಿ ಮಡಿಕೆಯ ಮೇಲಿನ ಒಂದೊಂದೇ ಎಲೆಗಳನ್ನು ಸರಿಸುತ್ತಾ ಸಾಗುತ್ತಾರೆ. ಈ ಎಲ್ಲಾ ಮಡಿಕೆಗಳಿಗೂ ಮೂಂಗಾರು ಹಾಗೂ ಹಿಂಗಾರಿನ ಪ್ರಮುಖ ಮಳೆಗಾಗಿ ಅವರು ಅನುಕ್ರಮವಾಗಿ ಹೇಳುತ್ತಾ ಹೋಗುತ್ತಾರೆ. ಅಸುನಿ (ಅಶ್ವಿನಿ), ಭರಣಿ, ಕುರಚಿಗ್ಯಾ (ಕೃತಿಕಾ), ಅರದ್ರಿ (ಅರಿದ್ರಾ), ಹಿರಿಪುಶ್ಯಾ (ಪುನರ್ವಸು), ಚಿಕಪೂಶ್ಯಾ (ಪುಷ್ಯಾ), ಉತ್ರಿ (ಉತ್ತರಾ), ಹಸ್ತ (ಹಸ್ತಾ), ಚಿತ್ತಿ (ಚಿತ್ತಾ), ಇಸಕ್ಕಿ (ವಿಶಾಖಾ), ಅನರಾಜ (ಅನುರಾಧಾ) ಹೀಗೆ ಒಂದೊಂದು ಮಡಿಕೆಯು ಇಲ್ಲಿ ಒಂದೊಂದು ಮಳೆ ನಕ್ಷತ್ರವಾಗಿರುತ್ತದೆ. ಸರಿಸಿದ ಎಲೆಯ ಒಳಭಾಗದಲ್ಲಿ ತೇವಾಂಶ ತುಂಬಿದ ನೀರಿನ ಬಿಂದುಗಳು (ಬೆವರು ಹನಿಯಂತೆ) ಬಹಳಷ್ಟು ತುಂಬಿಕೊಂಡಿದ್ದಲ್ಲಿ ಆ ನಕ್ಷತ್ರದ ಮಳೆ ಹೆಚ್ಚು ಸುರಿಯುವುದೆಂದೂ, ಕಡಿಮೆ ತೇವಾಂಶ ಇದ್ದಲ್ಲಿ ಮಳೆ ಕಡಿಮೆ ಎಂದೂ, ತೇವಾಂಶ ಒಟ್ಟಾರೆ ಇರದ್ದಿದ್ದಲ್ಲಿ ಆ ಮಳೆ ಸುರಿಯುವುದೇ ಇಲ್ಲವೆಂಬುದನ್ನು ಗಟ್ಟಿಯಾಗಿ ಆ ವರ್ಷದ ಮಳೆ ಬೆಳೆ ಲೆಕ್ಕ ಹಾಕಿಡುತ್ತಾರೆ.

ಅಶ್ವಿನಿಯಿಂದ ರೇವತಿಯವರೆಗೆ ೨೭ ಮಳೆ ನಕ್ಷತ್ರಗಳ ಹೆಸರಿನಲ್ಲಿ ೨೭ ಸಣ್ಣ ಸಣ್ಣ ಕುಡಿಕೆಗಳನ್ನಿಟ್ಟಿರುತ್ತಾರೆ. ಪ್ರತಿ ಮಡಿಕೆಯ ಮೇಲೂ ನಾಲ್ಕು ನಾಲ್ಕು ಎಕ್ಕೆ ಗಿಡದ ಎಲೆಗಳನ್ನಿಟ್ಟುರುತ್ತಾರೆ. ಪ್ರತಿ ಒಂದು ಎಲೆಯೂ ಪ್ರತಿ ಮಳೆ ನಕ್ಷತ್ರದ ಒಂದೊಂದು ಚರಣವನ್ನು ಪ್ರತಿನಿಧಿಸುತ್ತದೆ. ಯಾವ ಸಂಖ್ಯೆಯ ಎಲೆಯ ಮೇಲೆ ನೀರಿನ ಬಿಂದುಗಳು ಸಂಗ್ರಹಗೊಂಡಿರುತ್ತವೆಯೋ ಆ ಚರಣದಲ್ಲಿ ಮಳೆ ಸುರಿಯುತ್ತದೆಂದು ಅವರ ನಂಬಿಕೆ. ಈ ನಂಬಿಕೆಯನ್ನು ಅಂಧ ಶೃದ್ಧೆ ಎಂದು ಹೇಳುವಂತಿಲ್ಲ. ಇತ್ತೀಚೆಗೆ ನಾವು ಮಾಡುತ್ತಿರುವುದು ನಮ್ಮ ಹಿರಿಯರು ಮಾಡುತ್ತಿದ್ದರೆಂದೇ ನಾವು ಅನುಸರಿಸಿಕೊಂಡು ಬಂದುದಾಗಿದೆ ಎಂದು ಹೇಳುವುದಿಲ್ಲಿ ಅನವಾರ್ಯ.

ಆದರೆ ಇದನ್ನು ಪ್ರಾರಂಭಿಸಿದ ನಮ್ಮ ಪೂರ್ವಿಕರು ನೀರಿಗಾಗಿ ವರಾಹಮಿಹಿರನ ‘ಬೃಹದ್ ಸಂಹಿತ’ ಹಾಗೂ ಕಾಶ್ಯಪ ಮುನಿಯಿಂದ ರಚಿತವಾದ ‘ಕಾಶ್ಯಪೀಯ ಕೃಷಿ ಸೂಕ್ತಿ’ಯನ್ನು ಅಧ್ಯಯನ ಮಾಡಿ, ಪಾರಂಗತರಾಗಿ ಈ ಪ್ರಯೋಗಕ್ಕಿಳಿದಿದ್ದರೆಂಬುದು ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ.

ಗಣಿತ ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ವರಾಹಮಿಹರ (ಕೃ. ಶ. ೬ ನೇ ಶತಮಾನ) ಬರೆದ ‘ಬೃಹತ್ ಸಂಹಿತ’ದ ೧೦೬ ಅಧ್ಯಾಯ ಗಳಲ್ಲಿ ೩ನೇ ೧ ಭಾದಷ್ಟುನ್ನು ಮೋಡಗಳು ಹಾಗೂ ಮಳೆಯ ಕುರಿತಾಗಿಯೇ ವಿವರಿಸಿದ್ದಾನೆ. ಆಯಾ ತಿಂಗಳು ಚಂದ್ರಮಾನಕ್ಕೆ ತಕ್ಕಂತೆ ಗ್ರಹಗಳು ಹಾಗೂ ನಕ್ಷತ್ರಗಳ ಚಲನೆಯನ್ನಾಧರಿಸಿ ಅವನು ಮಳೆಯನ್ನು ಅಂದಾಜಿಸುತ್ತಿದ್ದ. ಮೋಡ ಕಟ್ಟುವಿಕೆಯನ್ನು ಆತ ಗರ್ಭಧಾರಣವೆಂದು ವರಾಹಮಿಹಿರ ಕರೆದಿದ್ದಾನೆ. ವೇಳೆ ಹಾಗೂ ಮಳೆಯ ಪ್ರಮಾಣವನ್ನಾಧರಿಸಿ ಅಧ್ಯಯನ ಮಾಡುತ್ತಲೇ ಅತ ಸಿದ್ದಾಂತಗಳನ್ನು ರೂಪಿಸಿದ್ದಾನೆ. ಈ ಸಿದ್ಧಾಂತಗಳೂ ಸಹ ಆತನ ಜ್ಯೋತಿಷ್ಯಶಾಸ್ತ್ರದ ಭದ್ರ ತಳಪಾಯದ ಮೇಲೆ ನಿಂತವುಗಳಾಗಿವೆ. ಹೀಗೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ವಿಜ್ಞಾನಕ್ಕೆ ರೂಪ ನೀಡಿದ ಗರ್ಗ, ಕಾಶ್ಯಪ, ಪರಾಶರ ಇವರುಗಳೆಲ್ಲಾ ಆತನ ಪೂರ್ವಾಧಿಕಾರಿಗಳೆಂದು ಹೇಳಬಹುದಾಗಿದೆ.

ನಕ್ಷತ್ರಗಳ ಚಲನೆಯೇ ಮೋಡ ಕಟ್ಟುವಿಕೆ ನೇರ ಕಾರಣವೆಂದು ಗಟ್ಟಿಯಾಗಿ ನಂಬಿದ್ದ ಆತ ಅಂತರ್ಜಲದ ಮೂಲವನ್ನು ಗುರುತಿಸುವುದು ಹೇಗೆ ಎಂದು ಹೇಳುತ್ತಲೇ ಮಳೆ ನೀರನ್ನು ಹೇಗೆ ಹೇಗೆ ಸಂಗ್ರಹಿಸಿಕೊಳ್ಳಬೇಕೆಂದು ವಿವರಣೆ ನೀಡುತ್ತಾನೆ.

ಅಂತರ್ಜಲ ಸಂಗ್ರಹಣೆಗಾಗಿ ತಲೆ ಕೆಡಿಸಿಕೊಳ್ಳುತ್ತಿರುವ ಇಂದಿನ ನಾಗರಿಕ ಜಗತ್ತು ಸರಕಾರದತ್ತ ಆಶೆಗಣ್ಣುಗಳಿಂದ ನೋಡುವುದೂ, ಸರಕಾರ ಹಲವಾರು ಯೋಜನೆಗಳನ್ನು ರೂಪಿಸುವುದೂ, ಅವರಷ್ಟು ತಿಂದು, ಇವರಷ್ಟು ತಿಂದು ಯೋಜನೆಗಳು ನೆಲಕಚ್ಚುವದೂ ದಿನನಿತ್ಯದ ಮಾತಾಗಿದೆ. ಕ್ರಿ. ಪೂ ೭೦೦ ರಿಂದ ೮೦೦ ಅವಧಿಯಲ್ಲಿ ಕಶ್ಯಪ ಮುನಿಯು ತನ್ನ ‘ಕಶ್ಯಪೀಯ ಕೃಷಿ ಸೂಕ್ತಿ’ಯಲ್ಲಿ ನೀರಿನ ಸಂಗ್ರಹಣೆಯ ಬಗ್ಗೆ ವಿವರಣೆ ನೀಡುತ್ತಾ ಹೋಗುತ್ತಾನೆ.

ನೀರನ್ನು ಆಳವಾದ, ಭದ್ರವಾದ ಗೋಡೆಗಳನ್ನು ಅಳವಡಿಸಿದ, ವೃತ್ತಾಕಾರದ ಜಲಾಶಯಗಳಲ್ಲಿ ಅಳವಡಿಸಬೇಕು. ನೆಲದ ಸಮತಟ್ಟು ಭಾಗ ಹಾಗೂ ಅದರ ರಚನೆಯೂ ಇಲ್ಲಿ ಮುಖ್ಯವಾಗಿರುತ್ತದೆ. ನೀರನ್ನು ತಲುಪಲು ಧೃಢವಾದ ಹಾಗೂ ರಕ್ಷಣಾತ್ಮಕ ಮೆಟ್ಟಿಲುಗಳನ್ನು ನಿರ್ಮಿಸಬೇಕು. ನೀರು ಸಂಗ್ರಹಣೆಯ ನೆಲ ಗಟ್ಟಿಯಾಗಿರಬೇಕು. ಅದು ನೈಸರ್ಗಿಕ ನೀರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು. ನೀರಿನ ಸಂಗ್ರಹಣೆ ಹೆಚ್ಚಾದಾಗ ಅದು ಹರಿದು ಹೋಗಲು ತೂಬುಗಳನ್ನು ನಿರ್ಮಿಸಿರಬೇಕು. ಪರ್ವತಗಳಿಂದ ಹಾಗೂ ಸರೋವರಗಳಿಂದ ಹರಿದು ಬರುವ ನೀರು ಈ ಜಲಾಶಯದೊಳಗೆ ನುಗ್ಗಬಾರದು. ನೀರಿನ ಶುದ್ಧತೆಗಾಗಿ ಜಲಾಶಯದ ಪಕ್ಕ ನಿಂಬ ಹಾಗೂ ಕದಂಬ ಮರಗಳನ್ನು ನೆಡಬೇಕೆಂದು ಕಶ್ಯಪಮುನಿ ವಿವರಣೆ ನೀಡುತ್ತಾನೆ.

ಗ್ರಾಮಗಳ ಹಾಗೂ ಹಳ್ಳಿಗಳ ಉದ್ಧಾರಕ್ಕಾಗಿ ಕಾಲುವೆಗಳ ಅಗಲಳತೆ ಬಾವಿಗಳ ನಿರ್ಮಾಣ, ನೀರನ್ನು ಮೇಲೆತ್ತುವ ವಿಧಾನ, ನೀರು ಮೇಲೆತ್ತಲು ಬಳಸಲು ಬಾಗಿಲು ಇಂಥ ಚಿಕ್ಕ ಪುಟ್ಟ ವಿಚಾರಗಳ ಕುರಿತಾಗಿಯೂ ಮಾಹಿತಿ ನೀಡುತ್ತಾನೆ.

೧೬ ನೇ ಶತಮಾನದಲ್ಲಿ ರಾಜಸ್ತಾನದಲ್ಲಿ ಮಿಶ್ರ ಚಕ್ರಪಾಣಿ ಬರೆದ ‘ವಿಶ್ವ ವಲ್ಲಭ’ ಕೃತಿಯಲ್ಲಿ ಕೂಡಾ ಜಲಾಶಯಗಳ ನಿರ್ಮಾಣದ ಕುರಿತಾಗಿಯೇ ವಿವರಿಸಿದ್ದಾರೆ. ಒಣ ಹಾಗೂ ಮರುಭೂಮಿ ಪ್ರದೇಶಗಳಲ್ಲಿ ನೀರು ಸಂಗ್ರಹಣೆಗಾಗಿ ಸರೋವರ, ಕೆರೆ ಮತ್ತು ಅಣೆಕಟ್ಟೆ, ಭಾವಿ ಹೀಗೆಲ್ಲ ಜಲಾಶಯಗಳ ನಿರ್ಮಾಣ ಅತ್ಯವಶ್ಯವೆಂದು ಹೇಳಿರುವ ಅವರು, ಕುಡಿಯುವ ನೀರಿಗೆ ಬಾವಿ ನಿರ್ಮಾಣ ಉತ್ತಮ. ಇದರ ನೆಲಗಟ್ಟು ಹೇಗಿರಬೇಕು, ಮೆಟ್ಟಿಲುಗಳು ಹೇಗಿರಬೆಕು, ನೀರು ಮೆಲೆತ್ತಲು ಬೇಕಾದ ಪರಿಕರಗಳು ಹೇಗಿರಬೇಕು ಎಂದು ಹೇಳುತ್ತಲೇ ಕುಡಿಯುವ ನೀರು ನಿರ್ಮಲವಾಗಿರಲು ವಿಧ ವಿಧದ ಸಸ್ಯಗಳು ಹಾಗೂ ನಾರು ಬೆರುಗಳನ್ನು ಬಳಕೆ ಮಾಡಬೇಕೆಂದು ವರಾಹಮಿಹಿರನ ಸೂತ್ರವನ್ನು ಅನುಸರಿಸುತ್ತಾರೆ.

ಕಲ್ಲು ನೆಲದಲ್ಲಿ ಬಾವಿ ತೋಡುವುದು, ಅಂತಹ ಕಲ್ಲುಗಳ ಮಧ್ಯೆ ಬಿರುಕು ಉಂಟು ಮಾಡದೇ ಬಾವಿ ತೋಡುವ ಬಗ್ಗೆಯೂ, ಕಲ್ಲುಗಳ ನಡುವೆ ಗುಂಡಿ ತೋಡಿದರೆ ಮಳೆ ನೀರು ಸಂಗ್ರಹಣೆ ಮಾಡುವುದು ಸುಲಭವೆಂದು ಮಿಶ್ರಚಕ್ರಪಾಣಿ ವಿವರಿಸುತ್ತಾರೆ.

ಯುಗಾದಿ ಪ್ರತಿಪದೆಯ ನಸುಕಿನ ಜಾವ ನಮ್ಮ ಒಕ್ಕಲಿಗರು ಆ ವರ್ಷದ ಮಳೆ ಬೆಳೆಯ ಫಲಾ ಫಲಗಳನ್ನು ಅರಿಯಲು ನಿನ್ನೆ ತಾನೇ ಜೋಡಿಸಲಾಗಿದ್ದ ಒಂದೊಂದೇ ಮಡಿಕೆಯ ಮೇಲಿನ ಎಲೆಗಳನ್ನು ಸರಿಸುತ್ತ, ಪ್ರತಿ ಎಲೆಯನ್ನು ಪರೀಕ್ಷಿಸುತ್ತಾ, ದಾಖಲಿಸುತ್ತಾ ಹೋಗುವುದು ಏನೋ ಕಾಟಾಚಾರದ ಅಂಧ ಶೃದ್ಧೆಯ ಪದ್ಧತಿಯಲ್ಲ. ಖಂಡಿತವಾಗಿಯೂ ಅವರಿಗೆ ವರಾಹಮಿಹಿರ, ಕಾಶ್ಯಪ, ಗರ್ಗ, ಮಿಶ್ರಚಕ್ರಪಾಣಿಯ ಮಾಹಿತಿಗಳಿಲ್ಲದಿದ್ದರೂ ಬೃಹತ್ ಸಂಹಿತೆ ವೃಕ್ಷಾಯುರ್ವೇದ, ವಿಶ್ವವಲ್ಲಭ, ಉಪವನ, ವಿನೋದ ಕೃತಿಗಳು ಅವರಿಗೆ ತಿಳಿದಿವೆ. ಅವರ ತಿಳುವಳಿಕೆ ಅವರ ಪೂರ್ವಿಕರು ಮಾಡುತ್ತಿದ್ದ ಆಚರಣೆಗಳು ವರ್ಷದಿಂದ ವರ್ಷಕ್ಕೆ, ತಲೆ ತಲಾಂತರದಿಂದ ಸಾಗಿ ಬಂದವುಗಳಾಗಿವೆ. ಅವು ಹೀಗೆಯೇ ಮುಂಕ್ಕೆ ಸಾಗಿ ಬರುತ್ತವೆ ಕೂಡ.

ಹಲಗಲಿ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪೂಜಾರಿ ವೀರಭದ್ರಯ್ಯ ಮಠಪತಿ ಎನ್ನುವವರು ಯುಗಾದಿ ಪ್ರತಿಪದೆಯ ದಿನ ಸಾಯಂಕಾಲ ತಮ್ಮ ಮನೆ ಮಾಳಿಗೆ ಮೇಲೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಕುಳಿತು ಸೂಸುವ ತಂಗಾಳಿಯ ಆಧಾರದ ಮೇಲೆ ಆ ವರ್ಷ ಮಳೆಯ ವಿಚಾರ ಹೇಳುತ್ತಿದ್ದರಂತೆ. ನಮ್ಮ ಪೂರ್ವಿಕರು ಹವಾಮಾನ ತಜ್ಞರಾಗಿದ್ದರೆಂದು ಹೇಳಲು ಇನ್ನೇನು ಪುರಾವೆ ಬೇಕು.

ಯುಗಾದಿಯ ಪ್ರತಿಪದೆ ಸಾಡೇತೀನಿ ಮುಹೂರ್ತದಲ್ಲಿ ಯಾವುದೇ ಕೆಲಸ ಆರಂಭಿಸಿದರೂ ಆ ಕಾರ್ಯ ಯಶಸ್ವಿಯಾಗುತ್ತದೆಂಬುದು ಅವರ ನಿಲುವು. ಹೀಗಾಗಿ ಹೊಸ ಹೋರಿಗಳನ್ನು ನೊಗ ಹೊಡಿ ಬೇಸಾಯಕ್ಕಿಳಿಸುವದೂ, ಹೋರಿಗಳನ್ನು ತರಡು ಒಡೆದು ನಿರ್ಬೀಜಿಕರಣಗೊಳಿಸುವದು ಕೂಡಾ ಇದೇ ಶುಭಗಳಿಗೆಯಲ್ಲಿ, ಗಾಯಗಳಾದರೂ ಬೇಸಿಗೆ ಇರುವದರಿಂದ ಗಾಯ ವಾಸಿಯಾಗುತ್ತದೆನ್ನುವ ಕಾರಣವೂ ಇರಬಹುದು.