ಇಲ್ಲಿ ಆಯಗಾರರನ್ನು ಕುರಿತು ಇನ್ನೊಂದು ಮಾತು ಹೇಳಲೇಬೇಕು. ಹೊಲ ಹೊಲ ತಿರುಗಿ ಆಯಾ ಸಂಗ್ರಹಿಸಿದ ಆಯಗಾರರು (ಇಲ್ಲಿ ವಿಶ್ವ ಕರ್ಮರು ಮಾತ್ರ) ಹೊಸ ಧಾನ್ಯಗಳನ್ನು ತಮ್ಮಲ್ಲಿ ಸಂಗ್ರಹಿಸಿಕೊಂಡಿದ್ದರೂ ಇಲ್ಲಿಯವರಗೆ ಅವರು ಅವುಗಳನ್ನು ಊಟಕ್ಕೆ ಬಳಸುವುದಿಲ್ಲ. ಯುಗಾದಿ ಅಮವಾಸ್ಯೆ ಸಮೀಪಿಸುತ್ತಿದ್ದಂತೆಯೇ ಮನೆಗಳನ್ನು ಸಾರಿಸುತ್ತಾರೆ. ಬಟ್ಟೆ ಹಾಸಿಗೆಗಳನ್ನು ಶುಭ್ರಗೊಳಿಸಿ ಮಡಿ ಮಾಡುತ್ತಾರೆ. ಅಮವಾಸ್ಯೆಗೆ ತಮ್ಮೆಲ್ಲಾ ಉಪಕರಣಗಳನ್ನು ಜೋಡಿಸಿಟ್ಟು ಅಲಂಕರಿಸಿ ಎಲ್ಲ ಧಾನ್ಯಗಳ ‘ನಿಧಿ’ ಹಾಕುತ್ತಾರೆ. ಪೂಜಿಸುತ್ತಾರೆ. ನಂತರ ತಮ್ಮ ಕುಲದೇವತೆ ಸಿರಸಂಗಿಯ ಕಾಳಮ್ಮನ ದರ್ಶನದ ನಂತರವೇ ಹೊಸಧಾನ್ಯಗಳನ್ನು ಊಟಕ್ಕೆ ಬಳಸುತ್ತಾರೆ. ಈ ನಿಧಿ ಹಾಕಿದ ಐದು ದಿನಗಳ ಕಾಲ ಬಡಿಗಸಾಲಿ ಬಂದ್, ಕುಂಬಾರಸಾಲಿ ಬಂದ್, ಪತ್ತಾರಸಾಲಿ ಬಂದ್, ‘ಆಯಗಾರರು ಬಂದ್ ಅಂದ್ರೆ, ಲೋಕದ ವ್ಯವಹಾರೆಲ್ಲಾ ಬಂದ್’.

ಬಿಸಲಾಯ್ತು, ಕೊಳ್ಳ ಹರಿಯೂಣು

ಯುಗಾದಿ ಪ್ರತಿಪದೆಯಿಂದ ಹೊರಟ ಕಾಲ ಚಕ್ರ ಉರುಳುತ್ತಾ ಪುನಃ ಯುಗಾದಿ ಅಮವಾಸ್ಯೆಗೆ ಬಂದು ನಿಂತಿದೆ. ಕಾಲವೇ ಹಾಗೆ. ಅದು ಸರಿಯುತ್ತಲೇ ಇರುತ್ತದೆ. ಅದು ನಮಗಾಗಿ ಕಾಯುತ್ತಾ ನಿಲ್ಲದು. ನಾವು ಮಾತ್ರ ನಿಂತಲ್ಲೇ ನಿಲ್ಲಬೇಕಾಗುತ್ತದೆ. ಯಾರ ಮರ್ಜಿಗೂ ಕಾಯದ ಕಾಲದ ಬೆನ್ನು ಹತ್ತಿ ಹೋದರೆ ಮಾತ್ರ ನಮ್ಮ ಅಸ್ತಿತ್ವ, ನಮ್ಮ ಇರುವಿಕೆ ಇನ್ನೊಬ್ಬರಿಗೆ ಗೊತ್ತಾಗಲು ಸಾಧ್ಯ. ಇಲ್ಲದಿದ್ದರೆ ಅವರು ಯಾರೋ ನವ್ಯಾರೋ ಎಂಬಂತಾಗುತ್ತದೆ.

ಜಗತ್ತು ಧಾವಂತದಲ್ಲಿದೆ. ಹೊಸ ಹೊಸ ಆವಿಷ್ಕಾರಗಳು ಪ್ರತಿ ಕ್ಷಣ ಕ್ಷಣಕ್ಕೂ ನಮ್ಮ ಬದಕನ್ನೇ ಬದಲಿಸುತ್ತಿವೆ. ಈ ಕ್ಷಣದಲ್ಲಿ ಇದ್ದದ್ದು ಇನ್ನೊಂದು ಕ್ಷಣಕ್ಕೆ ಹಳೆಯದು ಎಂಬಂತಹ ಸ್ಥಿತಿ ತಲುಪಿದ್ದೇವೆ. ಪರಿವರ್ತನೆ ಎನ್ನುವುದು ಜಗದ ನಿಯಮ. ಆ ಪರಿವರ್ತನೆಯನ್ನು ನಾವೂ ಸಮಾಧಾನ ಚಿತ್ತದಿಂದ ಸ್ವೀಕರಿಸುವ ಮನಸ್ಸು ನಮ್ಮದಾಗಬೇಕು.

ಕ್ಷಣಗಳು ಉರುಳುತ್ತವೆ.

ಕ್ಷಣಗಳು ಉರುಳುತ್ತಿವೆ, ದಿನಗಳು ಉರುಳುತ್ತಿವೆ. ಅದು ನಿಸರ್ಗ ನಿಯಮವೆಂದು ಅತ್ಯಂತ ಸಮಾಧಾನವಾಗಿ ಹೇಳಿದರೂ ರೈತಾಪಿ ವರ್ಗ ಅಷ್ಟು ಸಹಜವಾಗಿ ದಿನಗಳ ಬದಲಾವಣೆ, ಋತುಮಾನಗಳ ಬದಲಾವಣೆಯನ್ನು ಒಪ್ಪಿಕೊಳ್ಳುವುದಿಲ್ಲ. ಅವಕ್ಕೆ ತಮ್ಮದೇಯಾದ ವಿಶೇಷತೆಯನ್ನು ಕಲ್ಪಿಸುತ್ತಾರೆ. ‘ಮಳಿಗಾಲ ಕಾರಹುಣ್ಣಿವೆ ಕರಿ ಹರ್ದ ಎತ್ತಿನ ಕೂಡಾ ಅರತಿ ಮಾಡಿಸ್ಕೊಂಡು ಒಳಗ ಬರ್ತೈತಿ, ದೀಪಾವಳಿ ಆರತಿ ಬೆಳಗಿಸಿಕೊಂಡು ಹೊರಗ ಹೋಗ್ತೈತಿ’. ‘ಚಳಿಗಾಲ ಶೀಗೀ ಹುಣ್ಣಿವೆ ಚರಗದ ಬುಟ್ಯಾಗ ಬಂದು ಅಗಶೀ ಬಾಗ್ಲದಾಗ ಕುಂಡರರತೈತಿ. ಹಬ್ಬದ ಆರತಿ ಬೆಳಗಿಸಿಕೊಂಡ ಒಳಗ ಬರತೈತಿ. ಹೋಳಿ ಕಾಮನ ಬೆಂಕಿ ಕಾಸಿಕೊಂಡ ಹೊರಗ ಹೊಕೈತಿ’. ಬ್ಯಾಸಿಗಿ ಎಳ್ಳಾಮಾಸಿಗಿ ಎಳ್ಳ ಕಾಳಷ್ಟು ಬೆಳೆದ, ಶಿವರಾತ್ರಿಗೆ ಶಿವಶಿವಾ ಅನಿಸಿ, ಅಕೀತ (ಅಕ್ಷತ್ತದಿಗಿ) ಅಮಾಸಿಗಿ ಮಿಕದ ತೆಲಿ ಒಡದು ಹೊಕೈತಿ’ ಎಂದು ಹೇಳುತ್ತಾರೆ.

ನಾನು ಕಂಡತೆ ಚಿಕ್ಕವನಿದ್ದಾಗ ಈ ಕೃಷಿ ಸಂಬಂಧಿತ ಆಚರಣೆಗಳು ಪ್ರತಿ ಗ್ರಾಮಗಳಲ್ಲಿಯೂ ಆಚರಣೆಯಲ್ಲಿದ್ದವು. ಸದ್ಯಕ್ಕೆ ಅಲ್ಲಷ್ಟು ಇಲ್ಲಷ್ಟು ಎಂಬಂತಾಗತೊಡಗಿವೆ. ನಮ್ಮ ಸಮಸ್ಕೃತಿಯ ಪ್ರತಿಕಗಳಾಗಿರುವ, ‘ನಮ್ಮ ಕಳ್ಳಬಳ್ಳಿ ಸಂಬಂಧ’ ಉಳಿಸುವ ಆಚರಣೆಗಳು ಮುಂದುವರೆಯ ಬೇಕೆಂಬುದು ನಮ್ಮ ಹಂಬಲ. ಇದು ‘ಕಳ್ಳಬಳ್ಲಿ ಬೇಕೂ’ ಅನ್ನುವವರ ಮಾತಾಯಿತು. ಇನ್ನು ಕರುಳ ಬಳ್ಳಿಯನ್ನೇ ಹರಿದೊಗೆಯಲು ಸಿದ್ಧವಾಗಿರುವ ಹೊಸ ಪೀಳಿಗೆಗೆ ಈ ಮಾತು ರುಚಿಸಿತೇ ? ಬಿಸಲಾಯ್ತರೀ, ನಮ್ಮೆತ್ತಗೋಳದಣೀತಾವ, ನಾವು ನಮ್ಮ ಎತ್ತಿನ ಕೊಳ್ಲ ಹರೀತಿವಿ. ಶರಣ ಮಾಡ್ತೀವಿ.