ಮುಂಗಾರಿ, ಸಜ್ಜೆ ಕೊಯ್ಯತ್ತಿರುವಂತೆಯೇ ಕಣ ಮಾಡಲು ಸಿದ್ಧತೆ ನಡೆಯುತ್ತದೆ. ಮುಂಗಾರಿ, ಸಜ್ಜೆ ರಾಶಿಗೆ ಮಾಡಿದ ಕಣವೇ ಮುಂದೆ ಅಕ್ಕಡಿ ಕಾಳಿನ ರಾಶಿಮಾಡಲು ಹಾಗೂ ಬಿಳಿ ಜೋಳದ ರಾಶಿಗೂ ಬಳಸಿಕೊಳ್ಳಲಾಗುತ್ತದೆ.ಹೆಚ್ಚಾಗಿ ಊರ ಸಮೀಪಕ್ಕೆ ಇರುವ ಹೊಲಗಳಲ್ಲಿ ಅಥವಾ ತಮ್ಮ ಸಮೀಪವಾಗಿರುವಂತಹ ಹೊಲಗಳಲ್ಲಿ ಕಣ ಮಾಡುತ್ತಾರೆ. ಗಟ್ಟಿಯಾದ ನೆಲವನ್ನು ತಮ್ಮ ರಾಶಿ ಎಷ್ಟಾಗಬಹುದೆಂಬ ಅಂದಾಜಿನ ಮೇಲೆ ಆಯಾ ಪ್ರಮಾಣಕ್ಕನುಗುಣವಾಗಿ ದುಂಡಗಾಗಿ ಅಗಿದು ಒಳಗಿನ ಮಣ್ಣನ್ನು ತಗೆದು ಸುತ್ತಲೂ ಹಾಕುತ್ತಾರೆ. ನಂತರ ಕಣದ ಕೇಂದ್ರ ಸ್ಥಾನದಲ್ಲಿ ಮೇಟಿ ಕಟ್ಟಿಗೆಯೊಂದನ್ನು ಭದ್ರವಾಗಿ ಶುಭ ಮುಹೂರ್ತದಲ್ಲಿ ನೆಡುತ್ತಾರೆ. ನಂತರ ಒಂದಿಷ್ಟು ಎತ್ತುಗಳನ್ನು ಜೋಟಿ ಕಟ್ಟ ಮೇಟಿ ಕಟ್ಟಿಗೆಯ ಸುತ್ತಲೂ ಬಹಳ ಹೊತ್ತಿನವರೆಗೆ ತಿರುಗಿಸುತ್ತಾರೆ. ಎತ್ತಿನ ಗೊರಸುಗಳ ತುಳಿಯುವಿಕೆಯಿಂದ ನೆಲ ಗಟ್ಟಿಗೊಳ್ಳುತ್ತದೆ ಅದು ಎಷ್ಟು ಗಟ್ಟಿಯಾಗಿರಬೇಕೆಂದರೆ ಕಬ್ಬಿಣದ ಮಳೆ ಇಟ್ಟು ಹೊಡೆದರೂ ಅದು ಕಣದಲ್ಲಿ ಇಳಿಯಕೊಡದು. ಹಾಗಾದಾಗ ಮಾತ್ರ ರಾಶಿಯಲ್ಲಿ ಹರಳು, ಉಸುಕು, ಮಣ್ಣು ಸೇರದೇ ರಾಶಿ ಸ್ವಚ್ಛವಾಗಿರುತ್ತದೆಂಬುದು ಅವರ ಪ್ರಯೋಗಶಿಲತೆಗೆ ಸಾಕ್ಷಿ. ನೆಲಗಟ್ಟಿಗೊಂಡ ನಂತರ ಶೆಗಣಿ ನೀರು ಹಾಕಿ ಕಣವನ್ನು ಸಾರಿಸುತ್ತಾರೆ. ಕಣ ಗಚ್ಚಿನ ಗಿಲಾಯಿಗಿಂತಲೂ ಅತ್ಯಂತ ಸುಂದರವಾಗಿ ಕಾಣುತ್ತದೆ. ಈಗ ಕಣ ರಾಶಿ ಮಾಡಲುಸಿದ್ಧ.

 ತೆನೆ ಮುರಿಯುವುದು

ತೆನೆ ಮುರಿಯುವ ಕೆಲಸ ಹೆಣ್ಣುಮಕ್ಕಳಿಂದಲೇ ನಡೆಯುವಂತಹುದು. ಆದರೂ ತೆನೆಗಣಿಕೆ ಹಾಕಲು ಹಾಗೂ ಮಂಡಗಣಿಕೆ ತೆಗೆಯುಲು ಇಬ್ಬರು ಗಂಡಾಳುಗಳ ಅವಶ್ಯಕತೆಯೂ. ಇದೆ ಜೋಳವನ್ನು ಕೊಯ್ದು ಅಥವಾ ಕಿತ್ತ ನಂತರ ಹಾಕಲಾಗಿರುವ ಗೂಡು ಅಥವಾ ಚಾಪಿನ ಹತ್ತಿರವೇ ಈ ತೆನೆ ಮುರಿಯುವ ಕೆಲಸ ನಡೆಯುತ್ತದೆ.

ಗೂಡಿನ ಹತ್ತಿರ ಮಧ್ಯದಲ್ಲಿ ಗುಡಾರ, ತಾಡಪತ್ರಿ, ಕಂಬಳಿಗಳನ್ನು ಹಾಸಿಕೊಂಡು ಮಹಿಳೆಯರು ಒಂದೊಂದೇ ಸೂಡುಗಳನ್ನೆತ್ತಿಕೊಂಡು ದಂಟಿನ ತುದಿಯಲ್ಲಿದ್ದ ತೆನೆಗಳನ್ನು ಕೈಯಲ್ಲಿದ್ದ ಸಣ್ಣ ಕುಡುಗೋಲಿನಿಂದ ಬೇರ್ಪಡಿಸಿ ಎದುರಿಗಿದ್ದ ಗುಡಾರದ ಮೇಲೆ ಹಾಕುತ್ತಾರೆ. ತೆನೆಗಳನ್ನೆಲ್ಲಾ ಬಿಡಿಸಿ ಖಾಲಿಯಾದ ಮಂಡಗಣಿಕೆಯನ್ನು ಬೇರೆಡೆಗೆ ಒಟ್ಟುತ್ತಾರೆ. ತೆನೆಗಳನ್ನೆಲ್ಲಾ ಬಿಡಿಸಿ ಖಾಲಿಯಾದ ಮಂಡಗಣಿಕೆಯನ್ನು ಬೇರೆಡೆಗೆ ಒಟ್ಟುತ್ತಾರೆ. ಕಣ ಸಮೀಪದಲ್ಲಿದ್ದರೆ ಆಳುಗಳು ಜೆಲ್ಹೆಡಗಿಯಲ್ಲಿ ತೆನೆತುಂಬಿ ತಲೆಯ ಮೇಲೆ ಹೊತ್ತುಕೊಂಡೇ ಕಣಕ್ಕೆ ಸುರುವುತ್ತಾರೆ. ಕಣ ದೂರದಲ್ಲಿದ್ದರೆ ಚಕ್ಕಡಿಗೆ ಚೀಲ ಕಟ್ಟಿ ಚಕ್ಕಡಿ ಚೀಲದಲ್ಲಿ ತುಂಬುತ್ತಾರೆ. ಚಕ್ಕಡಿ ಎಳೆಯುವ ಎತ್ತುಗಳು ಸಧೃಡವಾಗಿದ್ದಲ್ಲಿ ಚಕ್ಕಡಿ ತುಂಬಿದ ಮೇಲೆ ಸೊಂಡಿ ಚೀಲದಲ್ಲಿ ತೆನೆ ತುಂಬಿ ಚಕ್ಕಡಿಯ ಮೇಲೆ ಹೇರಿ ಕೊಂಡು ಬಂದು ಕಣಕ್ಕೆ ಸುರಿಯುತ್ತಾರೆ.

ಹಂತಿ, ರಾಶಿ

ವಿದ್ಯೇಕ್ಕ ಮೊದಲಿಗೀ ಬುದ್ಧಿವಂರನ್ನ ನೆನಿಯೋ | ತಿದ್ದಿದ ಸೊಂಡಿ ಗಜಮುಖ | ತಿದ್ದಿದ ಸೊಂಡಿ ಗಜಮುಖನ್ನ ನೆನದರೆ ಬುದ್ಧಿಬಂದಿತೋ ಸರ್ವರಿಗೆ ಎಂಬ ಸುಶ್ರಾವ್ಯವಾದ ಹಾಡುಗಳು ತಂಗಾಳಿಯಲ್ಲಿ ತೇಲಿ ಬರುತ್ತಿದ್ದರೆ ಅಲ್ಲೆಲ್ಲೋ ಸಮೀಪದಲ್ಲಿ ರಾಶಿ ನಡೆದಿದೆ. ಹಂತಿಕಟ್ಟುತ್ತಿದ್ದಾರೆ ಎಂಬುದು ಥಟ್ಟನೆ ಹೋಳೆಯುತ್ತದೆ.

ತೆನೆಗಣಿಕೆಯಿಂದ ಬೇರ್ಪಡಿಸಲಾದ ತೆನೆಗಳನ್ನು ತಂದು ಮೇಟಿ ಕಟ್ಟಗೆಯ ಸುತ್ತಲು, ಕಣದ ತುಂಬಾ ಹರವುತ್ತಾರೆ. ರಾಶಿ ಮಡುವಾಗ, ಹಂತಿ ಕಟ್ಟಿದಾಗ ಕಾಳು ಕಣ ದಿಂದ ಸಿಡಿದು ಹೊರಗೆ ಹೋಗಬಾರದೆಂದು ಜೋಳದ ಕಣಿಕೆಯ ಇಂಡಿ (ಸೂಡು) ಕಟ್ಟಿ ಕಣದ ಸುತ್ತಲೂ ಪೇರಿಸಿಟ್ಟಿರುತ್ತಾರೆ.

ಶುಭ ಮೂರ್ಹತದ ಸಮಜೆಯ ಹೊತ್ತು ತಮ್ಮ ಎತ್ತುಗಳನ್ನು ಸಾಕಾಗದಿದ್ದಲ್ಲಿ ಬೇರೆಯವರ ಎತ್ತುಗಳನ್ನು ತಂದು ಸಾಲಾಗಿ ಒಂದನ್ನೊಂದು ಕಟ್ಟಿದ ನಂತರ ಮೇಟಿಗೂ ಎತ್ತುಗಳಿಗೂ ಪೂಜೆ ಸಲ್ಲಿಸಿ ಹಂತಿ ಆರಂಭಿಸುತ್ತಾರೆ.

ಎತ್ತುಗಳು ಹಂತಿ ತಿರುಗುತ್ತಿರುವಾಗ ಅವುಗಳ ಕಾಲಿನ ಗೊರಸುಗಳಿಗೆ ತೆನೆಗಳು ಸಿಕ್ಕಿ ಕಾಳು, ಹೊಟ್ಟು ತೆನೆಯಿಂದ ಬೇರ್ಪಡುತ್ತವೆ. ಅವು ಬೇರೆ ಬೇರೆಯಾಗುತ್ತಿರುವಂತೆ ತಲೆರಾಶಿ, ನಡುಗಣ, ಕಡೆಗಣ ಎಂದು ಮೂರು ಭಾಗವಾಗಿ ವಿಂಗಡಿಸುತ್ತಾರೆ. ಇತ್ತ ಹಂತಿ ಆರಂಭಗೊಳ್ಳುತಿದ್ದಂತೆ ನುರಿತ ಹಾಡುಗಾರರು ರಾತ್ರಿಯುದ್ದಕ್ಕೂ ಹಂತಿ ಹಾಡುಗಳನ್ನು ಹಾಡುತ್ತಲೇ ಇರುತ್ತಾರೆ. ಕಿವಿಗಿಂಪು ನೀಡುವ ಈ ಹಾಡುಗಳಲ್ಲಿ ವಿಘ್ನ ನಿವಾರಕ ಬೆನಕನಿಂದಲೇ ಆರಂಭಗೊಂಡು ತನಗೆ ಅನ್ನ, ಆಶ್ರಯ ಕೊಟ್ಟು ಭೂಮಿತಾಯಿ, ಕೃಷಿ ಸಂಗಾತಿಯಾದ ಬಸವಣ್ಣ (ಎತ್ತುಗಳು), ಕೃಷಿ ಸಲಕರಣೆ ಪೂರೈಸುವ ಆಯಗಾರರನ್ನು (ಬಡಿಗ, ಕಂಬಾರ, ಚಮ್ಮಾರ) ತಮ್ಮೆಲ್ಲಾ ಹಾಡುಗಳಲ್ಲಿ ಹೃದಯತುಂಬಿ ಸ್ಮರಿಸುತ್ತಾ ಹೋಗುತ್ತಾರೆ.

ಬೂದುಗ

ಇದೇ ಸಂದರ್ಭದಲ್ಲಿ ರಾಶಿ ಕಾಯುವ ದೇವರೆಂದು ನಂಬಿರುವ ಒಕ್ಕಲಿಗರು “ಬೂದುಗ”ನನ್ನು ಶಂಕಾಕೃತಿಯಲ್ಲಿ ಶೆಗಣಿಯಲ್ಲಿ ತಟ್ಟಿ ಬೂದುಗನನ್ನು ಮಾಡಿ, ಹಂತಿಯ ಸಾಲಿನ ಕೊನೆಯ ಎತ್ತಿನ ಬಾಲದ ಜವೆಯನ್ನು ಕಿತ್ತುಕೊಂಡು ಬೂದುಗನ ತಲೆಯ ಮೇಲೆ ಜುಟ್ಟಿಲಿನಂತೆ ಸಿಕ್ಕಿಸಿ ಕಣದ ಮಗ್ಗುಲಿನಲ್ಲಿ ಪ್ರತಿಷ್ಠಾಪಿಸುತ್ತಾರೆ.

ಹುಲುಗಣ ಹರಿಯುವುದು

ಹೊತ್ತೇರುವ ಸಮಯದಲ್ಲಿ ಹಂತಿ ಮುಗಿಸುತ್ತಿದ್ದಂತೆ ಹೆಗಲ ಮೇಲೆ ರ್ಯಾಗೋಲೊಂದನ್ನು ಇಟ್ಟುಕೊಂಡ ಒಬ್ಬ ಕಣದ ಸುತ್ತಲೂ ಓಡುತ್ತಿರುತ್ತಾನೆ. ಅವನ ಹಿಂದೆ ಇನ್ನೊಬ್ಬ ಒಂದು ಕೈಯಲ್ಲಿ ಶೆಳ್ಳನ್ನು, ಇನ್ನೊಂದು ಕೈಯಲ್ಲಿ ನೀರು ತುಂಬಿದ ತಂಬಿಗೆಯೊಂದನ್ನು ಹಿಡಿದು ಶೆಳ್ಳನ್ನು ತಂಬಿಗೆಯಲ್ಲಿ ಎದ್ದುತ್ತ ಮುಂದೆ ಓಡುವವನಿಗಡ ನೀರು ಸಿಂಒಡಿಸುತ್ತಾ ಓಡುತ್ತಾನೆ ಹೀಗೆ ಕಣದ ಸುತ್ತಲೂ ಐದು ಸುತ್ತ ಓಡಿದ ನಂತರ ಈ ಹುಲಿಗಣ ಹರಿಯುವುದು ಮುಗಿದಂತೆ.

ಹುಲುಗಣ ಹರಿಯುವಾಗ ಮುಂದಿನವ ‘ಹುಲುಲಿಗ್ಯೋ’ ಎಂದೂ, ಹಿಂದಿನವ ‘ಸಲಮಲಿಗ್ಯೋ’ ಎಂದು ಹೇಳುತ್ತಿರತ್ತಾರೆ. ಎಂದರೆ ಇಲ್ಲಿ ಭೂತಾಯಿ ನೀಡಿದ ಪ್ರತಿ ಹುಲ್ಲಿನ ಕಡ್ಡಿಗೂ (ಹುಲುಲಿಗ್ಯೋ) ಶರಣು ಮಲ್ಲಿಗೆ (ಸಲಮಲ್ಲಿಗ್ಯೋ) ಎಂದು ಗೌರವಿಸಿ, ನಮಿಸಿ, ಕೃತಜ್ಞತೆ ಸಲ್ಲಿಸುವುದೇ ಆಗಿದೆ.

ತೂರುವುದು

ತೆನೆಯಿಂದ ಬೇರ್ಪಟ್ಟ ಕಾಳುಗಳನ್ನು ಮೆಟ್ನಾಲಿಗೆಯ ಮೇಲೆ ನಿಂತು ಒಬ್ಬ ತೂರಿದರೆ, ಇನ್ನೊಬ್ಬ ಕೆಳಗೆ ಕುಳಿತು ಕಾಳು, ಕಂಕಿ ಬೇರ್ಪಡಿಸಲು ಶೆಳ್ಳು ಹೊಡೆಯುತ್ತಿರುತ್ತಾನೆ. ಗಾಳಿಗೆ ತೂರುವುದರಿಂದ ಹೊಟ್ಟು ದೂರಕ್ಕೆ ಹೋಗಿ ಮುತ್ತಿನಂತಹ ಕಾಳು ಕಣದಲ್ಲಿ ಸಂಗ್ರಹಗೊಳ್ಳುತ್ತವೆ. ಅದಕ್ಕಾಗಿಯೇ ಗಂಡನ ಮನೆಯಲ್ಲಿದ್ದ ಅಕ್ಕ ಹಬ್ಬಕ್ಕೆಕರೆಯಲು ಬಂದಿದ್ದ ತಮ್ಮನನ್ನು ಉಭಯಕುಶ ಲೋಪರಿಯಲ್ಲಿ ಪ್ರಶ್ನಿಸುತ್ತಾಳೆ ‘ತಮ್ಮಾ ನಿಮ್ಮೂರಾಗ ಮಳಿ ಹೆಂಗ? ಬೆಳಿ ಹೆಂಗ?’ ಎಂದು ಹಾಡಿನಲ್ಲಿಯೇ ಪ್ರಶ್ನಿಸುವ ಅಕ್ಕನಿಗೆ ‘ಅಕ್ಕಾ ನಮ್ಮೂರಾಗ ಮಳಿಬಾಳ, ಬಳಿಬಾಳ, ನಿನ್ನ ಬೆಂಡೋಲಿ ಮುತ್ತಿನ್ಹಾಂಗ ಬಿಳಿಜೋಳ’ ಎಂದು ಹಾಡಿನಲ್ಲಿ ಉತ್ತರಿಸಿ ತನ್ನ ಹೊಲದ ಜೋಳ ಮುತ್ತಿನಂತೆ ಕಾಣುತ್ತವೆ ಎಂದು ಅತ್ಯಂತ ಸ್ವಾಭಿಮಾನದಿಂದ ಹೇಳುತ್ತಾನೆ.

ದಿನವಿಡೀ ತೂರಿ ಸಂಗ್ರಹಿಸಿದ ಕಾಳನ್ನು ಮೆಟ್ಟಿಗೊತ್ತಿ ಪೂಜೆ ಮಾಡಲಾಗುತ್ತದೆ. ಆದರೆ ಚೀಲಕ್ಕೆ ಕಾಳನ್ನು ತುಂಬುವಂತಿಲ್ಲ.

ರಾಶಿ ಬುತ್ತಿ

ಕಾಳು, ಕಂಕಿ, ಹೊಟ್ಟು ಬೇರ್ಪಟ್ಟು ಸ್ವಚ್ಛಗೊಂಡ ನಂತರ ಎಲ್ಲಾ ರಾಶಿಯನ್ನು ಮೆಟೀಯ ಸುತ್ತಲೂ ಒಟ್ಟಿ ರಾತ್ರಿ ರಾಶಿಗೆ, ಕಣಕ್ಕೆ, ಬೂದಗಪ್ಪನಿಗೂ, ಬಸವಣ್ಣನಿಗೂ, ತೂರುವ ಬುಟ್ಟಿ, ರಾಗೋಲ, ಶೆಳ್ಳು, ಮೆಟ್ನಾಲಿಗೆ ಹೀಗೆ ಎಲ್ಲಾವೂಗಳ ಪೂಜೆ ಸಲ್ಲಿಸಿ ಎಡೆ ತೋರಿಸುತ್ತಾರೆ.

ಬಂದು ಬಾಂಧವರು, ನೆರೆಹೊರೆಯ ಹೊಲದವರು, ಆಳುಕಾಳುಗಳನ್ನೆಲ್ಲ ಕರೆದುಕೊಂಡು ನೈವೇದ್ಯಕ್ಕೆ ಮಾಡಿದ ಪಕ್ವಾನ್ನಗಳನ್ನೆಲ್ಲಾ ಬುತ್ತಿ ಬಿಚ್ಚಿ ಊಟ ಮಾಡುತ್ತಾರೆ. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ತರತರಹದ ಹಿಂಡಿಗಳು, ಗಟ್ಟಿ ಮೊಸರು, ಹೋಳಿಗೆ, ಹುಗ್ಗಿ, ನಂಜಿಕೊಳ್ಳಲು ಮೆಂತೆ ಸೊಪ್ಪು, ಮೂಲಂಗಿ, ಉಳ್ಳಗಡ್ಡಿ, ಹಾತರಕಿ, ಉಪ್ಪಿನಕಾಯಿ, ಸೆಂಡಗಿ, ಹಪ್ಪಳ ಎಲ್ಲವೂ ಇರುತ್ತದೆ. ಭೂಮಿ ತಾಯಿ ಕೊಟ್ಟದ್ದನ್ನು ಎಲ್ಲರನ್ನೂ ಕರೆದುಕೊಂಡು ಹರಿದು ಹಂಚಿಕೊಂಡು ತಿನ್ನುವದೇ ಮಣ್ಣಿನ ಮಕ್ಕಳ ಮೂಲ ಮಂತ್ರ.

ದಾನ ಧರ್ಮ, ಆತಿಥ್ಯ

ರಾಶಿ ನಡೆದರೂ ಹೊಲದ ಹತ್ತಿರದಲ್ಲಿ ಹಾದು ಹೋಗುವ ದಾರಿಯಲ್ಲಿ ರಾಶಿಗೆ ಸಂಬಂಧಿಸಿದವರು ಬೂದಿಯಿಂದ ಅಥವಾ ಕಣ ಅಗಿದ ಮಣ್ಣಿನಿಂದ +, x, + * ಹೀಗೆ ಸಂಕೇತಗಳನ್ನು ಹಾದಿಯಲ್ಲಿ ಹೋಗುವವರಗೆ ಎದ್ದು ಕಾಣುವಂತೆ ಹಾಕಿರುತ್ತಾರೆ. ಈ ಸಂಕೇತದ ಅರ್ಥ, ನಾವು ರಾಶಿ ಮಾಡುತ್ತಿದ್ದೇವೆ. ಹಾದಿ ಹೋಕರು ಬಂದು ನಮ್ಮಲ್ಲಿ ಆತಿಥ್ಯ ಸ್ವೀಕರಿಸಿ ಹೋಗಬೇಕು. ಸಾಧು ಸಂತರು ಬಂದು ದಾನವನ್ನು ಸ್ವೀಕರಿಸಿ ಹೋಗಬೇಕೆಂಬ ಮನವಿ ಆಗಿರುತ್ತದೆ.

ಮನೆಗೆ ಬಂದವರಿಗೆ ಒಂದು ತುಂಬಿಗೆ ಕುಡಿಯಲು ನೀರು ಕೊಡದೇ ಹೊರಗಿನಿಂದ ಹೊರಗೇನೆ ಮಾತನಾಡಿಸಿ ‘bye, see you ಮತ್ತೇ ಭೇಟಿಯಾಗೋಣ’ ಎಂದು ಕಳಿಸುತ್ತಿರುವ ಇಂದಿನ ನಾಗರೀಕ ಪ್ರಪಂಚದಲ್ಲಿ ಅತಿಥಿಗಳನ್ನು ತಾವಾಗಿಯೇ ಕರೆದು ನ್ಯಾರಿ (ಉಪಹಾರ), ಊಟಮಾಡಿಸಿ, ಸಾಧು ಸಂತರಿದ್ದರೆ ಅವರ ಜೋಳಿಗೆ ತುಂಬುವಷ್ಟು ದಾನ ನೀಡಿ ಕೈ ಮುಗಿದು ಕೃತಾರ್ಥ ಭಾವದಿಂದ ಕಳಿಸುವುದು ನಿಜಕ್ಕೂ ಆಶ್ಚರ್ಯ ಮೂಡಿಸುವಂತಹದ್ದು ‘ದೇವ್ರು ಕೊಟ್ಟಾನ್ರೀ ಎಲ್ಲಾರ್ನೂ ಕರಕೊಂಡ ತಿನ್ನೋದ ನೋಡ್ರಿ’ ಎಂದು ಹೃದಯ ತುಂಬಿ ಹೇಳುತ್ತಿರುವುದು ಎಂತಹ ದೊಡ್ಡ ಮನಸ್ಸು ನಮ್ಮ ಗ್ರಾಮೀಣ ಪರಂಪರೆಯಲ್ಲಿ ಅಡಗಿದೆ ಎಂಬುವುದು ಮನದಟ್ಟಾಗುತ್ತದೆ.

ದಿನ ಬೆಳಗಾದರೆ ಎಲ್ಲರ ಬಾಯಿಯಲ್ಲಿಯೂ ಜಾಗತೀಕರಣ, ಉದಾರೀಕರಣ, ಖಾಸಗೀಕರಣದಂತಹ ಮಾತುಗಳೇ ತುಂಬಿಕೊಂಡಿರುತ್ತವೆ. ಈ ಶಬ್ದಗಳನ್ನಾಡುವವರಿಗೆ ನಿಜಕ್ಕೂ ಈ ಶಬ್ದಗಳ ಅರ್ಥ ಗೊತ್ತಿಲ್ಲದಿದ್ದರೂ ತಾವು ಬುದ್ದಿಜೀವಿಗಳೆಂದು ಕರೆಸಿಕೊಳ್ಳಲು, ವಿದ್ವಾಂಸರೆನಿಸಿಕೊಳ್ಳಲು, ಪ್ರಗತಿ ಪರರೆಂದು, ಚಿಂತನಶೀಲರೆಂದು, ಬಿರುದು ಗಳಿಸಿಕೊಳ್ಳಲು ಗೊತ್ತಿರಲಿ. ಗೊತ್ತಿಲ್ಲದಿರಲಿ, ಮಾತಿಗೆ ನಿಂತರೆ ಆಡಿದ್ದೇ ಆಡಿದ್ದು. ಇವಾವುಗಳ ಕಡೆಗೆ ಗಮನ ಹರಿಸದ ನಮ್ಮ ಹಳ್ಳಿಗರು ಒಂದನ್ನಂತೂ ತಮ್ಮ ಹೃದಯದಿಂದ ತುಂಬ ಹರಡಿಕೊಂಡಿದ್ದಾರೆ. ಅದುವೇ ‘ಅಂತಃ ಕರಣ’ ಈ ಜಗತ್ತಿನಲ್ಲಿ ಇದಕ್ಕಿಂತಲೂ ಯಾವುದಾದರೂ ದೊಡ್ಡದಿದೆಯೇ? ಖಂಡಿತವಾಗಿ ಎಲ್ಲಿಯೂ ಸಿಕ್ಕದ್ದು ನಮ್ಮ ಹಳ್ಳಿಗರ ಅಂತಃರಾಳದಲ್ಲಿ ಮಾತ್ರ ಸಿಕ್ಕುತ್ತದೆ.

ನಸುಕಿನಲ್ಲಿ ಹುಲಿಗಿ(ಹುಲುಸಾಗಲಿ) ಎಂದು ಹೇಳುತ್ತಾ ಮೊದಲು ಮನೆಯ ಗುರುವಿಗೂ, ಮನೆಯ ದೇವರಿಗೂ, ಗ್ರಾಮದೇವರಿಗೂ, ಆಯಗಾರರಿಗೂ, ನಿಧಿ ತೆಗೆದಿಟ್ಟು (ಇಷ್ಟೇ ತೆಗೆದಿಡಬೇಕೆಂಬ ಕರಾರಿಲ್ಲ, ತಮ್ಮ ಶಕ್ತಿತನುಸಾರ ತಮ್ಮ ರಾಶಿಯ ಪ್ರಮಾಣಕ್ಕನುಗುಣವಾಗಿ) ನಂತರ ಚೀಲ ತುಂಬಿ ರಾಶಿಯನ್ನು ಮನೆಗೆ ಸಾಗಿಸುತ್ತಾರೆ. ರಾಶಿ ನಡೆಯುವ ಸಂದರ್ಭದಲ್ಲಿ, ರಾಶಿ ತುಂಬಿವ ಸಂದರ್ಭದಲ್ಲಿ ಕಣದಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಸೀನುವಂತಿಲ್ಲ, ಕೆಮ್ಮುವಂತಿಲ್ಲ, ತೂರುವ ತಟ್ಟೆಗಳನ್ನು ಬುಡಮೇಲು ಮಾಡಿ ಇಡಕೂಡದು, ಆಕಸ್ಮಾತ ಶಬ್ದ ಮಾಡಿದಲ್ಲಿ ‘ಹುಲಿಗಿ’ ಎನ್ನಬೇಕು. ಇವು ಕಣದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳು.

ಮನಕ್ಕೆ ಮುದ ನೀಡಬಹುದಾಗಿದ್ದ ಕಣ, ರಾಶಿ, ಹಂತಿ ಹಾಡುಗಳು, ರೂಲು ಬಂದನಂತರ ಒಂದಿಷ್ಟು, ರಾಶಿಯಂತ್ರ ಬಂದ ನಂತರ ಇನ್ನಷ್ಟು, ರಸ್ತೆಯ ಮೇಲೆ ರಾಶಿ ಪ್ರಾರಂಭಿಸಿದ ನಂತರ ಮತ್ತಷ್ಟು ಹೀಗೆ ಎಲ್ಲವೂ ನಶಿಸಿ ನಮ್ಮಿಂದ ದೂರ ಹೋಗ ತೊಡಗಿವೆ. ರಾಶಿಯಲ್ಲಿ ಅನುಸರಿಸುತ್ತಿದ್ದ ಕಟ್ಟು ನಿಟ್ಟುಗಳು ಮಾಯವಾಗ ತೊಡಗಿವೆ. ಇವೆಲ್ಲವುಗಳನ್ನು ನಾಳೆ ಮಕ್ಕಳಿಗೂ, ಮೊಮ್ಮಕ್ಕಳಿಗೂ ಮ್ಯೂಜಿಯಂನಲ್ಲಿ ತೋರಿಸಬೇಕಾದ ಕಾಲ ದೂರವೇನಿಲ್ಲ.

ಬಣವೆ ಒಟ್ಟುವದು

ಮುಂದೆ ಹದಿನೈದು ದಿನಕ್ಕೆ ಮಹಾ ಶಿವರಾತ್ರಿ, ಶಿವರಾತ್ರಿಯಿಂದ ಹದಿನೈದು ದಿನಕ್ಕೆ ಹೋಳಿ ಹುಣ್ಣಿಮೆ. ಬಿಸಿಲು ಬಲಿತಿರುತ್ತದೆ. ಕುಳಿತರೆ, ನಿಂತರೆ ಶಿವ ಶಿವಾ ಎಂದು ನೀರು ಕುಡಿದಿದ್ದೇ ಕುಡಿದಿದ್ದು. ರಾಶಿಗಳೆಲ್ಲ ಮುಗಿದು ಧಾನ್ಯಗಳನ್ನೆಲ್ಲ ತಂದು ಕಣಜ, ಹಗೇವು, ಬಳತಗಳಿಗೆ ಸಂಗ್ರಹಿಸುತ್ತಾರೆ. ಧಾನ್ಯಗಳು ತಮಗಾದರೆ ತಮ್ಮನ್ನು ಸಾಕಿ ಸಲುಹುತ್ತಿರುವ ಪಶು ಸಂಪತ್ತಿಗೆ ಹೊಟ್ಟು, ಕಣಿಕೆಗಳ ಸಂಗ್ರಹವಾಗಬೇಕು. ಅದು ನಸುಕಿನ ಕೆಲಸ. ತಾಸೆರಡು ತಾಸು ರಾತ್ರಿ ಇರುವಾಗಲೇ ಎತ್ತುಗಳ ಕೊರಳು ಕಟ್ಟಿ ಚಕ್ಕಡಿ ಹೊಡಿಕೊಂಡು ಹೋಗುತ್ತಾರೆ. ಚಕ್ಕಡಿಗೆ ಎರಡಾಳಿನಂತೆ ಹೋಗಿ ಕಣಿಕೆ ಹೊರೆ ಕಟ್ಟಿ ಒಬ್ಬ ಕೆಳಗಿನಿಂದ ಹೊರೆ ಎತ್ತಿ ಕೊಟ್ಟರೆ, ಇನ್ನೊಬ್ಬ ಚಕ್ಕಡಿಯ ಮೇಲೆ ಹೊರೆ ಎತ್ತಿಕೊಂಡು ಕಟ್ಟುತ್ತಾನೆ. ಊರ ಹತ್ತಿರದ ತಮ್ಮ ಸ್ವಂತದ ಜಾಗೆಯಲ್ಲಿಯೋ ಇರದಿದ್ದರೆ ಇನ್ಯಾರದೋ ಜಾಗೆಯಲ್ಲಿಯೋ ತಂದು ಬಣಿವೆ ಕಟ್ಟುತ್ತಾರೆ.

ನಸುಕಿನಲ್ಲಿ ಜಾವ ಅವರು ಕಣಿಕೆ ಹೊಟ್ಟು ಹೇರಿಕೊಂಡು ಚಕ್ಕಡಿ ತೆಗೆದುಕೊಂಡು ಬರುತ್ತಿರಬೇಕಾದರೆ ಇಬ್ಬರೂ ಸ್ವರ ಸೇರಿ ಆಲಾಪನೆ ಮಾಡುತ್ತಾ ಹಾಡುತ್ತಾ ಬರುತ್ತಾರೆ. ಅವರ ಹಾಡುಗಳಲ್ಲಿ ಭೂಮಿ ತಾಯಿ, ಬಸವಣ್ಣ, ತಮ್ಮೂರ ದೇವರು, ಪವಾಡ ಪುರುಷರು ಎಲ್ಲವನ್ನು ನೆನೆಯುತ್ತ ಅವರೆಲ್ಲರ ಉಪಕಾರ ಸ್ಮರಿಸುತ್ತಾರೆ. ತರುಣರಿದ್ದರಂತೂ ತಮ್ಮೂರಿನ ಸುಂದರಿಯರ ‘ನವರಂಧ್ರ ಅಂಬೋ ನವರಂಧ್ರ’ಗಳನ್ನು ವರ್ಣಿಸುತ್ತಾ ಹಾಡುತ್ತಿರುತ್ತಾರೆ. ತಂಗಾಳಿಯಲ್ಲಿ ಎಷ್ಟೇ ದೂರದಲ್ಲಿ ಅವರು ‘ಭಲೆರೆ’ ಹಾಡುತ್ತಾ ಬರುತ್ತಿರುವಗ ಊರಿನಲ್ಲಿ ಮಲಗಿರುವವರು. ನಮ್ಮ ಗೊಣ್ಣಿ ಬಸ್ಯಾ ನವಣಕ್ಕಿ ಶೇಕ್ರ ಹಾಡಕತ್ಯಾರ ನೋಡು, ತುಡಗ ಹಡಿಸಿ ಗಂದ್ರ, ದನಿಕೇಳೋ ಅವರ್ದು, ಎಷ್ಟು ಇಂಪೈತಿ ಎನ್ನುತ್ತಾರೆ. ತರುಣಿಯರಿಗೆ ಕಚಗುಳಿ ಇಡುವ ಹಾಡುಗಳಾಗಿದ್ದರೆ, ಅವು ತಮಗೇನಾದರೂ ತಗುಲುವಂತಹವುಗಳಾಗಿದ್ದರೆ ‘ಹಾಂಟ್ಯಾನ ಮಗ ಒಬ್ನ ಸಿಗ್ಲಿ, ಇನ್ನೊಮ್ಮೆ ನನ್ನ ಕೈಗೆ, ಅವ್ನ ತಡ್ಡ ಹರ್ದು ತಳಿ ಹಕ್ತೀನಿ’ ಎಂದೋ, ‘ಮುಡದಾರ, ನನ್ನ ಹಾಡ್ಯಾ, ನನ್ನ ಹಾಂಡ ಕುಡದಾಂವಾ ಬಾಳ ಬೆರಕಿ ಕೂಸಗ್ಯಾನ’ ಎಂದೋ ಹುಸಿ ಮುನಿಸು ತೋರಿಸುತ್ತಲೇ ಗಾಳಿಯಲ್ಲಿ ಹರಿದು ಬರುವ ಇಂಪಾದ ಹಾಡಿಗೆ ಮತ್ತೆ ಮತ್ತೆ ಕಿವಿಗೊಡುತ್ತಲೇ ಇರುತ್ತಾರೆ.

ಹೀಗೆ ವಾರಗಟ್ಟಲೇ ತಂದ ಕಣಿಕೆ ಹಾಗೂ ಹೊಟ್ಟನ್ನು ಒಳ್ಳೇಯ ದಿನ ನೋಡಿ (ಶುಭ ಮುಹೂರ್ತದಲ್ಲಿ) ಪಾಯಾ ಹಕಿ ಬಣಿವೆ ಒಟ್ಟುತ್ತಾರೆ. ಬಣಿವೆ ಒಟ್ಟುವದು ಕೂಡಾ ಒಂದು ಕೌಶಲ್ಯವೇ ಹೌದು. ಮನೆ ಕಟ್ಟಲು ತಳಪಾಯ ಎಷ್ಟು ಮುಖ್ಯವೋ ಬಣವೆಯ ತಳಪಾಯ ಹಾಕುವುದು ಕೂಡಾ ಇಲ್ಲಿ ಅಷ್ಟೇ ಮಹತ್ವದ್ದಾಗುತ್ತದೆ. ಏಕೆಂದರೆ ತಳಪಾಯ ಸಡಿಲವಾದಲ್ಲಿ ಮಳೆಗಾಲದಲ್ಲಿ ಹರಿದು ಬರುವ ನೀರು ಬಣವೆಯ ತಳಪಾಯದಲ್ಲಿ ಸೇರಿಕೊಂಡಲ್ಲಿ ಕಣಿಕೆ ಹಾಗೂ ಹೊಟ್ಟು ಕೊಳೆತು ಹೋಗಿ ಇಡೀ ವರ್ಷದುದ್ದಕ್ಕೂ ರೈತರ ದನಗಳ ಆಹಾರಕ್ಕೆ ಪೇಚಾಡಬೇಕಾಗುತ್ತದೆ. ತಮಗೆ ಒಂದು ರೊಟ್ಟಿ ಕಡಿಮೆಯಾದರೂ ‘ಇರ್ಲಿ ಬಿಡು’ ಎಂದು ಮೀಸೆ ತಿರುವಿ ನಗುತ್ತಾ ಏಳುವ ರೈತರು ತಮ್ಮ ದನ ಕರುಗಳು ಉಪವಾಸವಿರುವುದನ್ನು ಸಹಿಸರು. ಎರಡು ವರ್ಷಕ್ಕಾಗುವಷ್ಟು ಮೇವು, ಹೊಟ್ಟು ಅವರ ಸಂಗ್ರಹಣೆಯಲ್ಲಿದ್ದರೇನೇ ಅವರಿಗೆ ಸಮಾಧಾನ. ಆ ಕಾರಣಕ್ಕಾಗಿ ಬಣಿವೆ ಒಟ್ಟುವಾಗ ಹೆಚ್ಚು ಜಾಗರೂಕತೆ ವಹಿಸುತ್ತಾರೆ.

ಅವರು ಏನೇ ಮಾಡಲಿ ಅಲ್ಲಿ ನಯ ನಜೂಕು ಎದ್ದು ಕಾಣುತ್ತದೆ. ಜೋಳದ ಕಣಿಕೆಯ ತುದಿಯನ್ನು ಬಣಿವೆಯ ಒಳಮಗ್ಗಲಲ್ಲಿರುವಂತೆ, ಬೇರುಗಳು ಹೊರಮಗ್ಗಲಿಗೆ ಬರುವಂತೆ ನೋಡಿಕೊಂಡು ಬಣಿವೆ ಒಟ್ಟಲು ಪ್ರಾರಂಭಿಸುತ್ತಾರೆ. ಬೇರು ಎತ್ತ ಹೊರಳಿಸಿದರೂ ಹೊರಳುವಷ್ಟು ಸೂಕ್ಷ್ಮವಾಗಿರುವುದರಿಂದ ‘ಬಡಮಣಿಯಿಂದ’ ಬೇರನ್ನು ಬಡಿಯುತ್ತಾ ಹೋಗುತ್ತಾರೆ. ಬೇರುಗಳು ಮಡಿಚಿಕೊಂಡು ಯಾವ ತಾರಸಿ ಕಟ್ಟಡಕ್ಕೂ ಕಡಿಮೆ ಇಲ್ಲದಷ್ಟು ಬಣವೆಗಳು ನುಣುಪಾಗಿ ಆ ನುಣುಪಿನಲ್ಲಿಯೇ ಸೃಷ್ಟಿಗೆ ಕಾರಣಕರ್ತನಾದ ಈಶ್ವರ, ಉಳುವ ಬಸವಣ್ಣ, ಚಂದ್ರ, ಸೂರ್ಯರು ಎದ್ದು ಕಾಣುವಂತೆ ಕಲಾತ್ಮಕವಾಗಿ ಕಣಿಕೆಯನ್ನು ಒಟ್ಟುತ್ತಾ ಹೋಗುವದು ಕೂಡಾ ವೈಶಿಷ್ಟ್ಯ ಪೂರ್ಣವಾದದ್ದು.

ಬಣಿವೆ ಒಟ್ಟುವದು ಮುಗಿದ ಮೇಲೆ ಮೇಲ್ಭಾಗದಲ್ಲಿ ತೊಗರಿ ಕಟ್ಟಿಗೆ ಅಥವಾ ಹತ್ತಿ ಕಟ್ಟಿಗೆಗಳನ್ನು ಹರಡಿ ಅದರ ಮೇಲೆ ಕೆಸರು ಹಾಕುತ್ತಾರೆ. ಎತ್ತರದ ಬಣಿವೆಗಳ ಮೇಲೆ ಕೆಸರು ಹಾಕುವದು ಒಬ್ಬೊಬ್ಬರಿಂದ ಸಾಧ್ಯವಿಲ್ಲ. ಅಕ್ಕ ಪಕ್ಕದವರೆಲ್ಲಾ ಸೇರಿ ಮುಯ್ಯಾ(ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ನೆರವಾದಲ್ಲಿ, ಅವರ ಕೆಲಸದ ಸಂದರ್ಭದಲ್ಲಿ ಇವರು ಹೋಗಿ ನೆರವು ನೀಡುವುದು) ಮಾಡಿ ಹತ್ತೋ ಹನ್ನೆರಡೋ ಜನ ಕೆಸರು (ಮೇಲ್ಮುದ್ದಿ) ಹಾಕುತ್ತಾರೆ. ಈ ಮೇಲ್ಮುದ್ದಿ ಹಾಕುವದರಿಂದ ಎಂಥ ಬಿರುಗಾಳಿಗೂ ಬಣಿವೆ ಅಲುಗಾಡುವುದಿಲ್ಲ. ಹಾಗೂ ಎಂಥ ಮಳೆಗೂ ಬಣಿವೆ ನೀರು ಹತ್ತುವದಿಲ್ಲ. ಬಣಿವೆ ಬಟ್ಟಲು, ಮೇಲ್ಮುದ್ದಿ ಹಾಕಲು ಬಂದವರಿಗೆಲ್ಲಾ ಮನೆಯಾತ ಚಹಾ ಫರಾಳ ಮಾಡಿಸುತ್ತಾನೆ. ಬೇಸಿಗೆಯ ಹಂಗಾಮಾಗಿರುವುದರಿಂದ ರಾತ್ರಿ ಎಲ್ಲರೂ ಸೇರಿ ಮಸರ ಗಡಗಿ (ಗಟ್ಟಿಯಾದ ಕನೆ ಮೊಸರು ತುಂಬಿದ ಗಡಿಗೆಯಲ್ಲಿ ಚುರುಮುರಿ ಅಥವಾ ಅವಲಕ್ಕಿ ಹಾಕಿ ನೆನೆಯಿಸಿ ಶೇಂಗಾ ಚಟ್ನಿ, ಪುಟಾಣಿ ಚಟ್ನಿ, ಖಾರಪುಡಿ, ಉಳ್ಳಿಗಡ್ಡಿ ಸೇರಿಸಿ) ತಿನ್ನುತ್ತಾರೆ. ಇತ್ತೀಚಗೆ ಇಲ್ಲಿಯೂ ‘ಚೀಯರ್ಸ’ ಹಣಿಕೆ ಹಾಕತೊಡಗಿದೆ.

ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಸುಗ್ಗಿ ಕಾಲದಲ್ಲಿ ಬಯಲಲ್ಲಿಟ್ಟಿದ್ದ ಹೊಟ್ಟು, ಮೇವಿನ ಸಂಗ್ರಹಣೆ ಮುಗಿಯುತ್ತಾ ಬಂದಿರುತ್ತದೆ. ಆಗ ಬಣಿವೆಗೆ ‘ಬಾಯಿ ಮಾಡಿ’ ಕಣಿಕೆ ಹೊರತೆಗೆಯಲಾಗುತ್ತದೆ. ಬಣಿವೆ ಒಟ್ಟುವಾಗ ಹಾಗೂ ಬಾಯಿ ಮಾಡುವಾಗ ರೈತರು ಶುಭ ಮಹೂರ್ತ ಆಯ್ದುಕೊಳ್ಳುತ್ತಾರೆ. ಪಂಚಕದಂತಹ ಸಂದರ್ಭದಲ್ಲಿ (ಧನಿಷ್ಠ, ಶತತಾರ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ರೇವತಿ ನಕ್ಷತ್ರಗಳಲ್ಲಿ) ಬಣಿವೆಗಳಿಗೆ ಪಾಯ ಹಾಕುವುದಾಗಲೀ, ಬಣಿವೆ ಒಟ್ಟಲು ಪ್ರಾರಂಭಿಸುವದಾಗಲೀ, ಬಾಯಿ ಮಾಡುವುದಾಗಲೀ ಮಾಡಿದ್ದಲ್ಲಿ ಬಣಿವೆಗಳು ಆಕಸ್ಮಿತವಾಗಿ ಬೆಂಕಿ ಹೊತ್ತಿ ಸುಟ್ಟು ಹೋಗುತ್ತವೆ ಎಂದು ಗ್ರಾಮೀಣ ಜನರ ನಂಬಿಕೆ. ಹೀಗಾಗಿ ಬಣಿವೆ ಎಂದೊಡನೆ ‘ಛಲೋ ದಿನ’ಕ್ಕಾಗಿ ಕಾಯುತ್ತಾರೆ. ಈ ಬಣಿವೆಗಳಿಗೆ ಸಂಬಂಧಿಸಿದಂತೆ ನಮ್ಮ ಗ್ರಾಮೀಣ ಜನ ಅದರಲ್ಲೂ ಹಿರಿಯರು ತಮಗಿಂತಲೂ ಕಿರಿಯರಿಗೊಂದು ಮಾತನ್ನು ಮೇಲಿಂದ ಮೇಲೆ ಜ್ಞಾಪಿಸುತ್ತಿರುತ್ತಾರೆ. ‘ಬರಕ್ಕೆ ಬಾರಿ ಕಾಯಿ ಸುಕಾಲಕ್ಕ ಉಂಚಿಕಾಯಿ’ ಎಂದು ಹೇಳುತ್ತಿರುತ್ತಾರೆ. ಈ ವಾಕ್ಯದ ಸರಿಯಾದ ಅರ್ಥವನ್ನು ಗ್ರಹಿಸದ ನಾವು ಈ ವರ್ಷ ಬಾರಿ (ಬೋರೆ) ಹಣ್ಣಿನ ಫಸಲು ಸಮೃದ್ಧವಾಗಿ ಬಂದರೆ ಈ ವರ್ಷ ಖಂಡಿತವಾಗಿ ಬರಗಾಲ ಬರುತ್ತದೆಂದೂ ಹುಣಿಸೇ ಹಣ್ಣು ಸಮೃದ್ದವಾಗಿ ಬೆಳೆದರೆ ಮಳೆಗಾಲ ಚೆನ್ನಾಗಿ ಬಂದು ಬೆಳೆಗಳು ಸಮೃದ್ದವಾಗಿ ಬೆಳೆಯುತ್ತವೆ ಎಂದೂ ನಾವು ಅರ್ಥೈಸುತ್ತೇವೆ.

ಆದರೆ ವಯೋವೃದ್ದರ ತಾಕೀತು ಏನೆಂದರೆ ‘ಮಳೆಗಾಲ ಕೈಕೊಟ್ಟು ಯಾವಾಗ ಬರಗಾಲ ಬಂದು ವಕ್ಕರಿಸುತ್ತದೆಯೋ ಹೇಳಲುಬಾರದು ಆ ಕಾರಣಕ್ಕಾಗಿ ಬಾರಿ (ಮುಟ್ಟಿ ಬರಿ, ಏತ)ಯನ್ನು ಜೋಪಾನವಾಗಿಟ್ಟುಕೊಳ್ಳಿ. ಬರಗಾಲ ಒಕ್ಕರಿಸಿದಾಗ ಮುಟ್ಟಿ ಬಾರಿಯ ಸಲಕರಣೆಗಳನ್ನು ಜೋಡಿಸುತ್ತಾ ದುರಸ್ತಿ ಮಾಡುತ್ತಾ ಕುಳಿತರೆ ಬಿತ್ತಿದ ಬೆಳೆ, ನಾಡಿಕೆಗಳು ಕಮರಿ ಹೋಗಿ ನಷ್ಟ ಅನುಭವಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಮಳೆ ದೂರ ಸರಿದರೆ ತಕ್ಷಣ ಒಂದಿಷ್ಟು ನೀರನ್ನು ಭಾವಿಯಿಂದ ಒದಗಿಸಿದಲ್ಲಿ ಬೆಳೆ ಕೈಗೆಟುಕುತ್ತದೆ. ಎಮಬ ಅರ್ಥ ಬರಕ್ಕ ಬಾರಿ ಕಾಯಿ’ ಎಂಬ ಗೂರ್ಢಾರ್ಥವಾಗಿದೆ.

‘ಸುಕಾಲಕ್ಕ ಉಂಚಿ ಕಾಯಿ’ ಎಂದು ಹೇಳುತ್ತಿರುವುದರಲ್ಲಿ ಸುಕಾಲ ಎಂದರೆ ಅತೀ ಮಳೆ ಎಂಬ ಅರ್ಥವನ್ನು ಧ್ವನಿಸುತ್ತದೆ. ಮಳೆಗಾಲದಲ್ಲಿ ಮಳೆ ಧೋ ಎಂದು ಎಡೆ ಬಿಡದೆ ಸುರಿಯುತ್ತಿರುಬೇಕಾದರೆ ಹೊಲಗದ್ದೆಗಳೆಲ್ಲಾ, ಬೆಟ್ಟ ಗುಡ್ಡಗಳೆಲ್ಲಾ ಕಾಲಿಡಲು ಸಾಧ್ಯವಾಗದಷ್ಟು ಕೆಸರಿನಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಮನೆಯಲ್ಲಿಯ ದನಕರುಗಳು ಕೆಸರಿನಲ್ಲಿ ತುರುಗಾಡಿ ಬಂದರೆ ಅವುಗಳಿಗೆ ಕಾಲು ಬೇನೆ, ಬಾಯಿ ಬೇನೆ ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ದನಕರುಗಳನ್ನು ಮನೆಯಲ್ಲಿ ಕಟ್ಟಿ ಮೇಯಿಸಬೇಕಾಗುತ್ತದೆ. ದನಕರುಗಳನ್ನುಕಟ್ಟಿ ಮೇಯಿಸುವುದು ಸುಲಭದ ಮಾತಲ್ಲ. ಕಟ್ಟಿ ಮೇಯಿಸಲು ಅಪಾರ ಪ್ರಮಾಣದ ಹೊಟ್ಟು, ಕಣಿಕೆಗಳ ಸಂಗ್ರಹವಿರಬೇಕು. ಇಲ್ಲದಿದ್ದರೆ ತಮ್ಮ ಕರುಳ ಕುಡಿಗಿಂತಲೂ ಹೆಚ್ಚಾಗಿ ಕಾಣುವ ದನ ಕರುಗಳು ತಮ್ಮ ಕಣ್ಣೆದುರೇ ಉಪವಾಸ ಬೀಳುವ ಕರುಣಾಜನಕ ಸ್ಥಿತಿಯನ್ನು ತಮ್ಮ ಕಣ್ಣಿನಿಂದ ನೋಡಬೇಕಾಗುತ್ತದೆ. ಅದಕ್ಕಾಗಿಯೇ ಸುಕಾಲಕ್ಕ ‘ಉಂಚಿ ಕಾಯಿ’ ಎಂಬುದು ಅವರ ತಾಕೀತು.

ಇಲ್ಲಿ ಉಂಚಿ (ಉಣಚಿ) ಎಂದರೆ ಜೋಳದ ದಂಟಿನ ತೆನೆಯನ್ನು ಕುಡುಗೋಲಿನಿಂದ ಬೇರ್ಪಡಿಸಿದಾಗ ತೆನೆ ಹಾಗೂ ದಮಟಿನ ಮುಂಭಾಗ ಚೂಪಾಗಿ ತೋರುತ್ತದೆ. ಈ ಚೂಪಾದ ಭಾಗವನ್ನು ಅವರು ‘ಉಣಚಿ’ ಎಂದು ಕರೆಯುತ್ತಾರೆ. ಒಟ್ಟಾರೆ ಆ ಶಬ್ದ ದಂಟಿನ ಕುರಿತಾಗಿಯೇ ಇದ್ದದ್ದುನ್ನು ಸೂಚಿಸುತ್ತಿರಬಹುದು. ಅದೇ ಉಣಚಿ ಎಂಬ ಪದವನ್ನು ಮೇವು, ಹೊಟ್ಟು, ಕಣಿಕೆಗಳಿಗೆ ಇಡಿಯಗಿ ಬಳಸುತ್ತಿರಬಹುದು. ಒಂದು ಮಾತಂತೂ ಸತ್ಯ. ಮಳೆಗಾಲದ ಸಂದರ್ಭದಲ್ಲಿ ನಮ್ಮ ಪಶು ಸಂಪತ್ತನ್ನು ಜೋಪಾನ ಮಾಡಲು ಮೇವಿನ ಸಗ್ರಹವನ್ನು ಜತನ ಮಾಡಿಕೊಳ್ಳಲು ‘ಸುಕಾಲಕ್ಕ ಉಂಚಿ ಕಾಯಿ’ ಎಂಬುದೇ ಆಗಿದೆ. ಒಂದು ಸಣ್ಣ ವಾಕ್ಯದಲ್ಲಿ ತಮ್ಮ ಪಶು ಸಂಪತ್ತಿನ ಬದುಕಿಗಾಗಿ, ಅವುಗಳ ಹೊಟ್ಟೆಯ ಚಿಂತೆಗಾಗಿ ಎಂಥ ಅರ್ಥವನ್ನು ನಮ್ಮ ಗ್ರಾಮೀಣ ಜನರು ಹಿಡಿದಿಟ್ಟಿದ್ದಾರೆಂದು ಊಹಿಸುವದೇ ಕಷ್ಟದ್ದು. ಕೇವಲ ತಮ್ಮ ಅನುಭವಗಳ ಆಧಾರದ ಮೇಲಿಂದಲೇ ವಿಶ್ವವಿದ್ಯಾಲಯಗಳ ಡಾಕ್ಟರೇಟ್‌ಗಳನ್ನು ಮೀರಿಸುವಂತಹ, ಅವರ ಸಂಶೋಧನೆಗಳಿಗೂ ನಲುಕದ, ಮೀರಿಸುವಂತಹ, ಮಾತುಗಳನ್ನು ಆಡುತ್ತಾರೆಂಬುದೆ ವಿಸ್ಮಯದ ಸಂಗತಿ ಎನಿಸುತ್ತದ