ದೀಪಾವಳಿ ಪ್ರತಿಪದೆಯಿಂದ ಛಟ್ಟಿ ಅಮವಾಸ್ಯೆಯವರೆಗಿನ ತಿಂಗಳೇ ಕಾರ್ತಿಕಮಾಸ. ಛಟ್ಟಿ ಅಮವಾಸ್ಯೆಯ ನಂತರ ಒಂದೆರಡು ವಾರಗಳ ನಂತರ (ಅಥವಾ ಎಳ್ಳಮಾಸ್ಯೆಗಿಂತಲೂ ಒಂದು ವಾರ ಮುಂಚೆ) ಆಯಾ ಊರಿನ ಪ್ರಮುಖ ದೇವರುಗಳ ಕಾರ್ತಿಕ ಇಳಿಸುವ ಕಾರ್ಯಕ್ರಮ ನಡೆಯುತ್ತದೆ. ಎಂದರೆ ದೇಪಾವಳಿಯ ಪ್ರತಿಪದೆಯಿಂದ ಆಯಾ ಊರಿನ ಪ್ರಮುಖ ದೇವರುಗಳ ಮುಂದೆ ನಂದಾದೀಪ ಒಂದನ್ನು ವಿಶೇಷ ಪೂಜೆ ಸಲ್ಲಿಸಿ ಹಚ್ಚುತ್ತಾರೆ. ಅದು ನಿರಂತರವಗಿ ಎರಡು ತಿಂಗಳು ಕಾಲ (ಕಾರ್ತಿಕ ಇಳಿಸುವವರೆಗೆ) ಉರಿಯುತ್ತಿರುತ್ತದೆ. ಜಾತ್ರೆ, ಉತ್ಸವ ಮಾಡಿ ಆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅ ದೀಪವನ್ನು (ಕಾರ್ತಿಕ) ಇಳಿಸುವ ಉತ್ಸವವೇ ಕಾರ್ತಿಕೋತ್ಸವ.

ಊರ ಪ್ರಮುಖ ದೇವರಿಗಿಂತಲೂ ಮುಂಚೆಯೇ ಊರಿನಲ್ಲಿರುವ ಸಣ್ಣ ಪುಟ್ಟ ದೇವರುಗಳ ಕಾರ್ತಿಕ ಪ್ರಾರಂಭಗೊಳ್ಳುತ್ತದೆ. ಶುಕ್ರವರ ದ್ಯಾಮುವ್ವ, ದುರ್ಗವ್ವನ ಕಾರ್ತಿಕ, ಶನಿವಾರ ಹನುಮಂತ ದೇವರ ಕಾರ್ತಿಕ, ಸೋಮವಾರ ಈಶ್ವರ ದೇವರ ಕಾರ್ತಿಕಗಳು ನಡೆಯುತ್ತವೆ. ನಾಲ್ಕಾರು ದಿನಗಳ ಕಾಲ ನಡೆಯುವ ಕಾರ್ತಿಕೋತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡುತ್ತಾರೆ ನಿತ್ಯವೂ ಟಗರಿನ ಕಾದಾಟ, ಹಗ್ಗ ಜಗ್ಗುವ ಸ್ಪರ್ಧೆ, ಭಾರ ಎತ್ತುವ ಸ್ಪರ್ಧೆ, ಶೆರೆಗೆರೆ ಪಂದ್ಯಾಟ, ಸ್ಥಳೀಯ ಕಲಾವಿದರಿಂದ ನಾಟಕ, ಆಸಕ್ತ ಊರುಗಳಲ್ಲಿ ಗೀಗೀಮೇಳ, ಲಾವಣಿ, ಬೈಲಾಟ, ಯರಿಗೆ ಏನು ಮೇಕೋ ಅವೆಲ್ಲಾ ದೊರೆಯುವಂತಾ ವಾತಾವರಣ ನಿರ್ಮಾಣಗೊಂಡು ಒಂದು ರೀತಿಯಲ್ಲಿ ಊರಿಗೆ ಊರೇ ‘ದರೂ’ (ಪ್ರತಿಧ್ವನಿ) ಹಿಡಿಯುವಂತಾಗಿರುತ್ತದೆ.

ಮುಂಗಾರು ಹಂಗಾಮು ಮುಗಿದು, ಸ್ವಲ್ಪ ಬಿಡುವಾಗಿರುವಾಗ ಮಣ್ಣಿನ ಮಕ್ಕಳು ತೀರಾ ಚಳಿಯೂ ಅಲ್ಲದ ತೀರಾ ಬಿಸಿಲೂ ಅಲ್ಲದ ಆಹ್ಲಾದಕರವಾದ ವಾತಾವರಣದಲ್ಲಿ ತಮ್ಮೂರು ಕಾರ್ತಿಕೋತ್ಸವಕ್ಕೆ ನೆಂಟರಿಸ್ಟರನ್ನು, ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಕರೆ ತಂದು ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತಸದಿಂದ ನಲಿಯುತ್ತಾರೆ.

ಬೆಂಡು, ಬತ್ತಾಸು, ಚುರುಮುರಿ, ಉಂಡಿ ಜಿಲೇಬಿಗಳು, ಸಾಮೂಹಿಕವಾಗಿ ಖರೀದಿಸುವ ವಸ್ತುಗಳಾದರೆ, ಪೀಪಿ, ಕೊಳಲು, ಚಾಳೀಸು, ಚೆಂಡು, ಗಂಡು ಮಕ್ಕಳ, ಹೇರುಪಿನ್ನು, ರಿಬ್ಬನ್ನು, ಕುಂಕುಮ, ಟಿಕಳಿ, ಬಳೆ, ಗೊಂಬೆಗಳು ಹೆಣ್ಣುಮಕ್ಕಳ ಖರೀದಿಯ ವಸ್ತುಗಳು. ಅಜ್ಜ ಅಜ್ಜಿಯರು ಎಳೆಯರ ಕೈಹಿಡಿದು, ಜೇಬು ಖಾಲಿಯಾಗುತ್ತಿರುವುದನ್ನು ನೋಡುವುದೇ ಒಂದು ಸೊಬಗು

ನಾಲ್ಕಾರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ದಿನನಿತ್ಯ ಎಲ್ಲರ ಮನೆಯಲ್ಲಿ ಪಂಚ ಪಕ್ವಾನ್ನಗಳಿದ್ದರೂ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಚವಳಿಕಾಯಿ, ಅವರೇಕಾಯಿ ಪಲ್ಯೆ, ಅಗಸಿ, ಗುರೆಳ್ಳು ಹಿಂಡಿ, ಸವಟಿನಿಂದ ಜಡಿಸಿದರೂ ಕೆಳಕ್ಕೆ ಬೀಳದಂತಹ ಗಟ್ಟಿ ಕೆನೆ ಮೊಸರು ಇರಲೇಬೇಕೆಂಬುದು ಆತಿಥೇಯರ ವೈಶಿಷ್ಟ್ಯ. ಅದಕ್ಕಾಗಿಯೇ ಇಲ್ಲಿಯ ಜನ ಸಜ್ಜಿರೊಟ್ಟಿ ಚವಳಿಕಯಿ ಗೋವಿಂದ ಗೋವಿಂದ ಗೋವಿಂದಾ, ಅರ್ಧ ರೊಟ್ಟಿ ಅವರಿಕಾಯಿ ‘ಗೋವಿಂದ ಗೋವಿಂದ ಗೋವಿಂದಾ’ ಎನ್ನುತ್ತಲೇ ಪೇಟೆಯಿಂದ ಬಂದವರಿಗೆ ಗ್ರಾಮೀಣ ಸೊಗಡಿನ ಊಟ ಉಣಬಡಿಸುತ್ತಾರೆ.

ಕಾರ್ತಿಕೋತ್ಸವದ ರಾತ್ರಿ ಗುಡಿಗಳಲ್ಲಿ ಸಾವಿರ ಸಾವಿರ ಹಣತೆಗಳನ್ನು ಹಚ್ಚಿ ಆಕಾಶದಲ್ಲಿಯ ನಕ್ಷತ್ರಗಳೆಲ್ಲವೂ ಭೂಮಿಗೆ ಇಳಿದು ಬಂದಿವೆ ಏನೋ ಎನ್ನುವಂತೆ ಹೊಸ ಲೋಕ ಸೃಷ್ಠಿಸಿ ತಮಗೆ ಅನ್ನ ಕೊಡುವ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಾ ಭಾವಪೂರಿತರಾಗಿ ಕೈಮುಗಿಯುತ್ತಾರೆ.