ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆ ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣುಮೆಯ ಆಗಮನಕ್ಕಾಗಿ ಕಾಯುತ್ತಿರುವ ನಾಗರ ಪಂಚಮಿ ‘ಬಂದ್ಯಾ ಬಂಗಾರದ ಕರಣಿ, ಕಾರುಣ್ಣಿ’ ಎಂದಿತಂತೆ ಅಕ್ಕರೆಯಿಂದ. ಅದಕ್ಕುತ್ತರವಾಗಿ ಕಾರ ಹುಣ್ಣಿಮೆ ‘ಬಂದೀನಿ ತುಗೊಳೋ ನಿನ್ನ ಹಿಟ್ಟಿನ ಮೂಳನ ಹಡ್ಡಿ’ ಎಂದಿತಂತೆ ವ್ಯಂಗ್ಯವಾಗಿ.

ಈ ಕಾರ ಹುಣ್ಣಿಮೆ ಜಾನುವಾರಗಳಿಗಾಗಿಯೇ ಮಾಡಿದ ಹಬ್ಬವಾಗಿದೆ. ಕಾರ ಹುಣ್ಣಿಮೆ ಇನ್ನೂ ವಾರವುರುವಾಗಲೇ ಎತ್ತುಗಳ ಕೊಂಬು ಸವರಿ ಕೊಂಬಣಸು ಕಟ್ಟಿಸುತ್ತಾರೆ. ಕಾಲುಗಳಿಗೆ ನಾಲು ಕಟ್ಟಿಸುತ್ತಾರೆ. ಗೋದಲಿ, ಮನೆ ಬಾಗಿಲು, ಕಿಟಕಿಗಳಿಗೆ, ಚಕ್ಕಡಿಗಳಿಗೆ, ಕೃಷಿ ಉಪಕರಣಗಳಿಗೆ ಎಣ್ಣೆ ಹಾಗೂ ಹುರಮಂಜ ಸೇರಿಸಿ ಸವರುತ್ತಾರೆ. ಮಳೆಗಾಲದಲ್ಲಿ ನೀರು ಹತ್ತಿ ಕಟ್ಟಿಗೆಯ ಉಪಕರಣಗಳು ಹಾಳಾಗಬಾರದೆಂಬುದೇ ಇಲ್ಲಿ ಮುಖ್ಯ ಕಾರಣವಾಗಿದೆ. ಎತ್ತಿನ ಕೊಂಬಿಗೆ ವಾರ್ಣೀಸು, ಎಮ್ಮೆಗಳ ಕೊಂಬುಗಳಿಗೆ ಗಾಣದೆಣ್ಣೆ, ಹುರಮಂಜು ಹಚ್ಚುವ ಕಾರಣ ಕೂಡಾ ಇದೇಯಾಗಿದೆ. ಎಣ್ಣೆ, ವಾರ್ನೀಸಿನ ಮೇಲೆ ಬಿದ್ದ ನೀರು ಜಾರಿ ಹೋಗುತ್ತದೆ. ಇಲ್ಲದಿದ್ದರೆ ಕೊಂಬಿನ ಕೆಳಭಾಗದಲ್ಲಿ ತಲೆಯ ಹತ್ತಿರ ಸಂಗ್ರಹಣೆಗೊಂಡು ಪ್ರಾಣಿಯ ತೊಗಲು ಸೆಲೆಯುತ್ತದೆ ಎಂಬ ವೈಜ್ಞಾನಿಕ ಹಿನ್ನೆಲೆಯೂ ಇದಕ್ಕಿರಬಹುದು.

ಹುಣ್ಣಿಮೆಗಿಂತೂ ಮೊದಲ ದಿನಕ್ಕೆ ‘ಹೊನ್ನ ಹುಗ್ಗಿ’ ಎಂದು ಕರೆಯುತ್ತಾರೆ. ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ದಿನ ಎಲ್ಲ ಜಾನುವಾರಗಳಿಗೂ ಜೋಳದ ಅಂಬಲಿ, ಗಾನದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಗಂಟಲಕ್ಕೆ ಸುರುವುತ್ತಾರೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಜಾನುವಾರುಗಳೂ ಹೊಂದಿಕೊಳ್ಳಲು ಈ ವ್ಯವಸ್ಥೆ ಇರಬಹುದೇನೋ ಎನಿಸುತ್ತದೆ. ಜಾನುವಾರಗಳ ಮೈ ತೊಳೆದು ನಂತರ ಎತ್ತುಗಳಿಗೆ ಬಣ್ಣ ಹಚ್ಚಿದರೆ ಎಮ್ಮೆ ಕೋಣಗಳಿಗೆ ಸುಣ್ಣ ಹುರಮಂಜಿನ ಗುಲ್ಲುಗಳನ್ನು ಕೊಡುತ್ತಾರೆ. ಅವೆಲ್ಲವುಗಳಿಗೆ ಪೂಜೆ ಸಲ್ಲಿಸಿದ ನಂತರ ಅವುಗಳಿಗೂ ಹೋಳಿಗೆಯ ಎಡೆ ತೋರಿಸುತ್ತಾರೆ.

ಸಂಜೆ ಆಯಾ ಬಾಬಿನ ಮನೆತನದ ಎತ್ತುಗಳನ್ನು ಅಗಸೆ ಬಾಗಿಲಿಗೆ ತಂದು ಓಡಿಸಿ ಕರಿ ಹರಿಯುತ್ತಾರೆ. ಅಲ್ಲಿ ಯಾವ ಬಣ್ಣದ ಎತ್ತು ಮುಂದೆ ಬರುವುದೋ ಆ ಬೆಳೆ ಹುಲುಸು. ಅಂದರೆ ಕೆಂದು ಬಣ್ಣದ ಎತ್ತು ಮುಂದೆ ಬಂದರೆ ಮುಂಗಾರಿಫಸಲು, ಬಿಳಿ ಬಣ್ಣದ ಎತ್ತು ಮುಂದೆ ಬಂದರೆ ಬಿಳಿ ಜೋಳದ ಫಸಲು ಹೆಚ್ಚಿಗೆ ಬೆಳೆಯುತ್ತವೆ ಎನ್ನುವುದು ಕೃಷಿಕರ ನಂಬುಗೆ. ಅಂತೂ ಈ ಕಾರ ಹುಣ್ಣಿವೆ ಎನ್ನುವದು ಜಾನುವಾರಗಳಿಗಾಗಿ ಹಾಗೂ ಕೃಷಿ ಉಪಕರಣಗಳ ಜೋಪಾನಕ್ಕಾಗಿಯೇ ಮಾಡಿದ ಹಬ್ಬವಾಗಿದೆ.