ಪುರಾಣಗಳೊಂದಿಗೆ ತಳುಕು ಹಾಕಿಕೊಂಡಿರದ  ಗ್ರಾಮಗಳೇ ಈ ದೇಶದಲ್ಲಿ ಇಲ್ಲವೆಂದರೆ ಇದು ಉತ್ಪ್ರೇಕ್ಷೆಯ ಮಾತಾಗದು. ಊರಿನ ಗುಡ್ಡದ ಮೇಲಿರುವ ಮೂರು ಬಂಡೆಗಲ್ಲುಗಳನ್ನು ತೋರಿಸಿ ಭೀಮಸೇನ ಇವೇ ಬಂಡೆಗಲ್ಲುಗಳನ್ನು ಒಲೆಗುಂಡುಗಳನ್ನಾಗಿ ಮಾಡಿಕೊಂಡು ಅಡುಗೆ ಬೇಯಿಸಿಕೊಂಡು ಊಟಮಾಡಿದ್ದ, ಹಸು ಪಡಿಯ ಮೇಲಿರುವ ಶಿಲಪದರುಗಳ ಗೆರೆ ತೋರಿಸಿ ಇದು ಸೀತೆಯ ಸೆರುಗು, ಬಂಡೆಗಲ್ಲಿನಲ್ಲಿರುವ ತಗ್ಗನ್ನು ತೋರಿಸಿ ಇದು ಪಾಂಡವರು ಕಾಳು ಕುಟ್ಟಲು ಮಾಡಿದ ಒಳ್ಳು (ಒರಳು ಕಲ್ಲು) ಎಂದು ಹೇಳುತ್ತಾ ಹೋಗುವದು ನಮಗೇನು ಹೊಸದಲ್ಲ. ಊರ ಮುಂದಿನ ದನ ಕಯುವ ಹುಡುಗನನ್ನು ಕೇಳಿದರೀ ಆತ ಕೆಲವೇ ಗಂಟೆಗಳ ಹಿಂದೆ ಅದು ನಡೆದು ಹೋಗಿದೆ ಎಂಬಂತೆ ವರ್ಣಿಸತೊಡಗುತ್ತಾನೆ. ತಮ್ಮೂರಿನಲ್ಲಿ ಪಾಂಡವರು ಕೆಲಕಾಲ ವಾಸವಾಗಿದ್ದರೆಂದು, ರಾಮ ಲಕ್ಷ್ಮಣರು ಕುಂಭಕರ್ಣನನ್ನು ಇಲ್ಲೇ ಕೊಂದಿದ್ದು ಎಂದು ವರ್ಣಿಸುವುದೇ ಸಂತಸದ ಸಂಗತಿ. ಹೇಳಿಕೊಳ್ಳುವುದೇ ಆತನಿಗೆ ಹೆಮ್ಮೆಯ ವಿಷಯ. ಹೊಲದಲ್ಲಿ ಉಳುಮೆ ಮಾಡುವ ರೈತ, ಕಸ ತೆಗೆಯುತ್ತಿರುವ ಮಹಿಳೆ ಇವರೆಲ್ಲರೂ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲ ಚತುರರು, ವಾಗ್ಮಿಗಳು, ಶಾಲೆಯ ಮೆಟ್ಟಿಲನ್ನು ಕೂಡಾ ಹತ್ತದೇ, ಅನುಭವವನ್ನೇ ಅರಗಿಸಿಕೊಂಡಿರುವವರು ಅವರು. ವಿಶ್ವವಿದ್ಯಾಲಯಗಳ ಪ್ರಾಧ್ಯಪಕರ ತಲೆಯ ಮೇಲೆ ಕೈಯಾಡಿಸಬಲ್ಲ ಮೇಧಾವಿಗಳು ನಮ್ಮ ಗ್ರಾಮೇಣ ಕೃಷಿಕರು.

ಇಂತಹ ಹೇಳಿಕೆಗಳು ಎಂದಿನಿಂದ ಪ್ರಾರಂಭವಾದವು? ಯಾರು ಇವುಗಳನ್ನು ಪ್ರಾರಂಭಿಸಿದರು? ಎಂಬ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ಸಿಕ್ಕದಿದ್ದರೂ ನಮ್ಮ ಗ್ರಾಮೀಣ ಜನಪದರ ಮೇಲೆ ಪುರಾಣ, ಪುಣ್ಯ ಕಥೆಗಳು ವಿಶೇಷ ಪ್ರಭಾವ ಬೀರಿ ಅವರ ಹೃದಯಾಂತರಾಳದಲ್ಲಿ ಇಳಿದು ಶಾಶ್ವತವಾಗಿ ನೆಲೆಯೂರಿದ್ದಂತೂ ಸತ್ಯ. ಅವುಗಳನ್ನು ತಾವು ಕಾಯಕದಲ್ಲಿ ನಿರತವಾಗಿರುವಾಗಲೇ ಮೆಲುಕು ಹಾಕುತ್ತಾ ಇಂದಿನವರೆಗೆ ಜೀವಂತವಾಗಿರಿಸಿಕೊಂಡು ಬಂದ ನಮ್ಮ ಜನಪದರ ಸಾಹಸ, ಅಗಾಧ ಜ್ಞಾನ ಮೆಚ್ಚುವಂತ ಸಂಗತಿಯಾಗಿದೆ. ಆತನ ಬದುಕಿನ ಆಸರೆಯಾದ ಕೃಷಿಯೇ ಆತನ ನಂಬುಗೆ, ಪದ್ಧತಿ, ಆಚಾರ, ವಿಚಾರ ಆಚರಣೆಗಳನ್ನು ಜೀವಂತವಾಗಿಡಲು ನೆರವಾಗಿದೆ. ಇಂದಿಗೂ ನೆರವಾಗುತ್ತಿದೆ.

ಆದರೆ ಇಂದು ನಾಗರಿಕತೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ನಮ್ಮ ಗ್ರಾಮಗಳು ತೀರ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿಕೊಂಡಿವೆ. ಮುಂಚಿನ ನಮ್ಮ ಗ್ರಾಮೀಣ ಸಂಸ್ಕೃತಿ ಬದಲಾಗಿ ಪಟ್ಟಣದ ಸಂಸ್ಕೃತಿ ಕಾಲೂರ ತೊಡಗಿದೆ. ಹಳೆಯ ಪದ್ಧತಿ ಸಂಪೂರ್ಣವಾಗಿ ಗ್ರಾಮಗಳಿಂದ ಮರೆಯಾಗಿಲ್ಲ. ಪಟ್ಟಣದ ಸಂಸ್ಕೃತಿಯೂ ಇನ್ನೂ ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಹೀಗಾಗಿ ನಮ್ಮ ಗ್ರಾಮಗಳು ಇಂದು ಒಂದು ರೀತಿಯಲ್ಲಿ “ಹಂಡ ಬಂಡ” ಆಗತೊಡಗಿವೆ ಎನ್ನುವುದು ಬಹಳಷ್ಟು ಸತ್ಯ. ನಮ್ಮ ಹಳ್ಳಿಗಳ ಬದುಕಿನ ವಿವಿಧ ಮಜಲುಗಳಲ್ಲಿ ಉಂಟಾಗುವ ಬದಲಾವಣೆಗಳಿಂದಾಗಿ ನಮ್ಮಹಳೆಯ ರೀತಿ-ನೀತಿ ಸಂಪ್ರದಾಯ, ಆಚರಣೆಗಳು ಹಂತ ಹಂತವಾಗಿ ನಮ್ಮಿಂದ ದೂರ ಸರಿಯುತ್ತಿವೆ. ಸುಮಾರು ವರ್ಷಗಳ ಹಿಂದೆ ರೂಳು, ರಾಶಿಯಂತ್ರ ಬಂದದ್ದರಿಂದ ಹಂತಿ ಕಟ್ಟುವುದೇ ನಿಂತು ಹೋಯಿತು. ಹಂತಿಯೇ ನಿಂತು ಹೋದ ಮೇಲೆ ಹಂತಿ ಕನ್ನಿ, ಬೂದಗ, ಹುಲಗಣ, ಹಂತಿ ಹಾಡುಗಳು, ರಾಶಿ ಬುತ್ತಿಗಳಿಗೆ ಮತ್ತಿನ್ನೇನು ಕೆಲಸ ? ಅವೆಲ್ಲ ಅಂತರ್ಧಾನವಾಗಿ ಬಿಟ್ಟವು. ಇದು ಕೇವಲ ಹಂತಿಯೊಂದು ಮರೆಯಾಗಿ ಹೋದ ಕಾರಣಕ್ಕಾಗಿ ಇಷ್ಟೊಂದು ಸ್ಥಿತ್ಯಂತರಗೊಳ್ಳುವಂತಾದರೆ, ಆಧುನಿಕ ತಂತ್ರಜ್ಞಾನದತ್ತ ನಮ್ಮ ಬದುಕನ್ನೇ ತೆರೆದುಕೊಳ್ಳುತ್ತಾ ಹೋಗುತ್ತಿರಬೇಕಾದರೆ ದಿನನಿತ್ಯ ಎಷ್ಟೊಂದು ಬದಲಾವಣೆಗಳಾಗಬಹುದೆಂಬುವುದನ್ನು ಊಹಿಸುವುದೇ ಕಷ್ಟ ಸಾಧ್ಯ.

ನಮ್ಮ ಬಹುಪಾಲ ಬದುಕು ಅವಲಂಬಿತವಾದದ್ದೇ ಕೃಷಿಯ ಮೇಲೆ. ಈ ಕೃಷಿಯ ಮೇಲೆ ಗ್ರಾಮೀಣ ಜನತೆಯ ಸಂಪ್ರದಾಯ, ಆಚರಣೆ, ಜಾತಿ ಪದ್ದತಿ, ಉದ್ಯೋಗ ವ್ಯವಸ್ಥೆ ಒಂದಕ್ಕೊಂದು ತಳುಕು ಹಾಕಿಕೊಂಡು ನಿಂತಿವೆ. ಒಬ್ಬಕೃಷಿಕ ‘ನನ್ನದು ಹೊಲವಿದೆ, ನಾನೊಬ್ಬನೇ ಬೇಸಾಯ ಮಾಡುತ್ತೆನೆ’ ಎಂದು ಹೇಳುವಂತಿಲ್ಲ. ಆತನಿಗೆ ಊರಿನ ಆಯಗಾರರಾದ ಬಡಿಗರು, ಕಮ್ಮಾರರು, ಪತ್ತಾರರು, ಕುಂಬಾರರು, ಚಮ್ಮಾರರು ಆತನಿಗೆ ‘ಸಾಥ’ ನೀಡಿದಾಗಲೇ ಆತನ ‘ಗಳೇ’ ಮುಂದೆ ಸಾಗುವುದು. ಆತನ ‘ಗಳೇ’ ಮುಂದೆಕ್ಕೆ ಹೋದರೇನೇ ಇವರಿಗೂ ವರ್ಷದ ‘ಗಂಜಿ’ ಗಾಧಾರ. ಹೀಗೆ ಒಬ್ಬರಿಗೊಬ್ಬರು ಪೂರಕ ವಾಗಿದ್ದರೇನೇ ನಮ್ಮ ಗ್ರಾಮೀಣ ಕೃಷಿ ಸುಲಭವಾಗಿ ಸಾಗಬಲ್ಲದು. ಪ್ರಬಂಧಕಾರನೊಬ್ಬ ಹೇಳುವಂತೆ ‘ಪೆನ್ನು,’ ‘ಮಶಿ’ ಒಂದಕ್ಕೊಂದು ಪೂರಕವಾದ ವಸ್ತುಗಳು. ಮಶಿ ಇಲ್ಲದೇ ಪೆನ್ನು ಬರೆಯುವಂತಿಲ್ಲ, ಪೆನ್ನಿಲ್ಲದೆ ಮಶಿಯೊಂದೇ ಬರೆಯುವ ಕೆಲಸ ಮಾಡುವಂತಿಲ್ಲ. ಹಾಗೆಯೇ ಇಲ್ಲಿ ಕೃಷಿಕನಿಲ್ಲದೇ ಆಯಗಾರರು ಬದುಕಲಾರರು. ಆಯಗಾರರಿಲ್ಲದೇ ಕೃಷಿಕ ಬದುಕಲಾರ. ಇದು ಕೃಷಿ ಕ್ಷೇತ್ರದ ಸಮುಷ್ಷಯ ಕೂಡಾ.

ಅನ್ನ ನೀಡುವ ಭೂಮಿತಾಯಿಯನ್ನೇ ನೆಚ್ಚಿಕೊಂಡಿರುವ ನಮ್ಮ ಗ್ರಾಮೀಣ ಕೃಷಿಕರು, ಆಯಗಾರರು, ಕೂಲಿಕರರು, ಎಲ್ಲರೂ ಸೇರಿ ತಮ್ಮ ಒಕ್ಕಲುತನಕ್ಕೆ ಸಂಬಂಧಿಸಿದಂತೆ ಹಲವಾರು ಆಚರಣೆಗಳನ್ನು, ರೀತಿ ರಿವಾಜುಗಳನ್ನು, ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಆಚರಣೆಗಳು ಕಂದಾಚಾರದ ಆಚರಣೆಗಳಲ್ಲ. ಇವುಗಳಲ್ಲಿ ಮುಗ್ಧ ಭಕ್ತಿ ಇದೆ. ಗೌರವವಿದೆ. ಸಹಬಾಳ್ವೆ ಇದೆ. ಒಂದು ರೀತಿಯಲ್ಲಿ ಇವು Directive Principles of State policy (ರಾಷ್ಟ್ರ ನಿರ್ದೇಶಕ ಧೋರಣೆ ತತ್ವಗಳು) ಇದ್ದ ಹಾಗೆ. ಇವು ಕಾನೂನುಗಳಲ್ಲ, ಆದರೆ ಗ್ರಾಮದ ಸ್ವಾಸ್ಥ್ಯ, ಕಾಪಾಡಲು ಇವೆಲ್ಲವುಗಳನ್ನು ಆಚರಿಸಲೇಬೇಕೆಂಬ ‘ಅಲಿಖಿತ ಸಂವಿಧಾನ’ವಿರುತ್ತದೆ.

ಬೇಸಿಗೆಯ ಗಳೆ ಹೊಡೆಯುವುದರಿಂದ ಪ್ರಾರಂಭಗೊಳ್ಳುವ ಕೃಷಿ ಚಟುವಟಿಕೆಗಳಲ್ಲಿನ ಸಹಕರ, ಕಣಿಕೆ, ಹೊಟ್ಟುಗಳ, ಬಣಿವೆಗಳನ್ನು ಒಟ್ಟುವವರೆಗೂ ಪ್ರತಿ ದಿನ, ಪ್ರತಿ ಕ್ಷಣ ಈ ವರ್ಷದ ವಾರ್ಷಿಕ ಚಕ್ರ ಪೂರ್ಣಗೊಂಡು ಮತ್ತೊಂದು ಸುತ್ತಿಗೆಪ್ರವೇಶಿಸುವವರೆಗೂ ನಿರಂತರ ಚಲಿಸುತ್ತಲೇ ಇರುತ್ತದೆ. ಅದು ನಿಲ್ಲುವುದೇ ಇಲ್ಲ. ಅದು ನಿಂತಿತೆಂದರೆ ನಮಗಾರಿಗೂ ಬದುಕೇ ಇಲ್ಲವೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಅದನ್ನು ಊಹಿಸಿಕೊಳ್ಳುವದು ಕಷ್ಟದ ಮಾತಾಗುತ್ತದೆ. ಹೀಗೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ಆಚರಣೆಗಳು, ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವ ಹಲವಾರು ಹಬ್ಬ ಹರಿದಿನಗಳನ್ನು ಕುರಿತು ಇಲ್ಲಿ ಅವಲೋಕನ ಮಾಡಬಹುದಾಗಿದೆ. ಮೊದಲ ಭಾಗ ಅಲ್ಪ ಪ್ರಮಾಣದಲ್ಲಿ ಊರನ್ನು ಮುಟ್ಟಿಯೂ ಮುಟ್ಟದಂತಿದ್ದು ಹೊಲಗಳಲ್ಲೇ ನಡೆಯುವ ಚಟುವಟಿಕೆಗಳಾದರೆ ಎರಡನೇ ಭಾಗ ಸ್ವಲ್ಪ ಪ್ರಮಾಣದಲ್ಲಿ ಭೂಮಿಗೆ ತಾಕಿಕೊಂಡೇ ಭೂಮಿಗೆ ಸಂಬಂಧಿಸಿದಂತೆ ಊರಿನಲ್ಲೇ ನಡೆಯುವ ಆಚರಣೆಗಳಾಗಿವೆ.

ಗಳೆ ಹೊಡೆಯುವುದು (ಉಳುಮೆ ಮಾಡುವುದು)

ಮುಂಗಾರಿ ಹಾಗೂ ಹಿಂಗಾರಿ ಎಂದು ಎರಡು ಬೆಳೆಗಳನ್ನು ವಿಂಗಡಿಸಿಕೊಂಡಿರುವ ರೈತರು ಕೆಂಪು ಮಣ್ಣಿನ ಮತ್ತು ಮರಡಿಯಂತಹ (ಕೆಂಪು ಜೋಳ, ಸಜ್ಜಿ, ಶೇಂಗಾ, ಹೆಸರು, ಅಲಸಂದಿ, ತೊಗರಿ, ಹುರಳಿ, ಎಳ್ಳು) ಭೂಮಿಯಲ್ಲಿ ಮುಂಗಾರಿ ಬೆಳೆಗಳನ್ನು, ಕಪ್ಪು ಮಣ್ಣಿನ ಎರೆ ಭೂಮಿಯಲ್ಲಿ (ಬಿಳಿ ಜೋಳ, ಕಡಲೆ, ಕುಸಬೆ, ಗೋಧಿಯಂತಹ ಬೆಳೆಗಳು) ಹಿಂಗಾರಿ ಬೆಳೆಗಳನ್ನು ಬೆಳೆಯುತ್ತಾರೆ.

ಮುಂಗಾರಿ ಬೆಳೆಗಳನ್ನು ಬಿತ್ತುವ ಕಾರ್ಯ ರೋಹಿಣಿ ಮಳೆಯಿಂದಲೇ ಪ್ರಾರಂಭಗೊಂಡು ‘ಆಶ್ಲೇಷ ಮಳಿಗೆ ಅಸಲ ಹೊಲ ಬಿತ್ತು’(ಅಗಷ್ಟ ವರೆಗೆ) ಎನ್ನುವವರೆಗೂ ನಡೆಯುತ್ತಿರುತ್ತದೆ. ಹಿಂಗಾರಿ ಬಿತ್ತನೆ ಮಗಿ (ಮಘಾ) ಮಳೆಗೆ ಪ್ರಾರಂಭಗೊಂಡು ಉತ್ತರಾ, ಹಸ್ತಾ, ಚಿತ್ತಾ ಸ್ವಾತಿ ಮಳೆಯವರೆಗೂ ನಡೆಯುತ್ತದೆ. (ಸಪ್ಟೆಂಬರ್, ಅಕ್ಟೋಬರ್ ವರೆಗೆ) ಹಂಗಾಮುಗಳು ಬೇರೆ ಬೇರೆಯಾದರೂ ಉಳುಮೆ ಮಾಡುವ, ಬಿತ್ತುವ, ಎಡೆ ಹೊಡೆಯುವ, ಕೊಯ್‌ಉವ, ಕೀಳುವ, ರಾಶಿ ಮಾಡುವ ಪ್ರಕ್ರಿಯೆಗಳು ಒಂದೇ ತೆರನಾಗಿರುತ್ತವೆ.

ಯುಗಾದಿಯ ನಂತರದ ದಿನಗಳಲ್ಲಿ ಸಾಮಾನ್ಯವಾಗಿ ನಸುಕಿನಲ್ಲಿಯೇ ಗಳೇ ಕಟ್ಟಿಕೊಂಡು ಹೋಗಿ ಹರಗುವ, ಮಡಿಕೆ ಹೊಡೆಯುವ, ಕರಿಕೆ ಇದ್ದಲ್ಲಿ ನೇಗಿಲು ಹೊಡೆಯುವ ಕೆಲಸ ಮಡುತ್ತಾರೆ. ಬಿಸಿಲೇರುವದರೊಳಗಗಿ ‘ಕೊಳ್ಳ ಹರ್ದು’ ಮನೆಗೆ ವಾಪಸ್ಸಾಗುತ್ತಾರೆ. ಯಾಕೆಂದರೆ ಬಿಸಿಲಿನ ಪ್ರಖರತೆ ಹೆಚ್ಚಿ ಎತ್ತುಗಳಿಗೂ ಉಳುಮೆ ಮಾಡುವವನಿಗೂ ಆಯಾಸವಾಗುವುದರಿಂದ ಈ ಉಪಾಯವನ್ನವರು ಕಂಡುಕೊಂಡಿದ್ದಾರೆ. ಎರೆ ಭೂಮಿಯಲ್ಲಿ ಬಿತ್ತನೆ ಮಾಡುವ ದಿನಗಳು ದೂರವಿದ್ದರೂ ಗಳೆ ಮಾಡುವುದರಿಂದ ಭೂಮಿಯಲ್ಲಿ ನೀರು ಸಂಗ್ರಹಗೊಂಡು ಹಸಿ ಹಿಡಿದಿಟ್ಟುಕೊಳ್ಳುತ್ತದೆನ್ನುವುದು ಇಲ್ಲಿ ಮುಖ್ಯ ಕಾರಣವಾಗಿದೆ.

ಬಿತ್ತನೆ

ಮುಂಗಾರಿ ಹಂಗಾಮಿನ ಬಿತ್ತನೆ ಕಾರ್ಯ ರೋಹಿಣಿ ಮಳೆಯಿಂದ ಪ್ರಾರಂಭಗೊಳ್ಳುತ್ತದೆ. ಬಿತ್ತುವ ಬೀಜಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಕಳೆದ ವರ್ಷದ ಫಸಲಿನಲ್ಲಿ ದಪ್ಪ ದಪ್ಪ ಕಾಳಿನ, ದೊಡ್ಡ ತೆನೆಗಳನ್ನು ಬೇರಡೆ ಸಂಗ್ರಹಿಸಿ ಕಾಳು ಮಾಡಿಟ್ಟಿರುತ್ತಾರೆ. ಈ ವಿಷಯದಲ್ಲಿ ಎಂಥ ಕೃಷಿ ತಜ್ಞರನ್ನೂ ಮೀರಿಸು ಸಂಶೋಧನೆ ಅವರದಾಗಿದೆ. ಅವು ಕೆಡದಂತೆ, ಕ್ರಿಮಿಕೀಟಗಳ ಬಾಧೆ ತಗಲದಂತೆ ಬೀಜಕ್ಕೆ ಗಂಧಕದ ಪುಡಿಯ ಲೇಪನ ಮಾಡಿ ಇಟ್ಟಿರುತ್ತಾರೆ. ಅಕ್ಕಡಿ ಕಾಳುಗಳನ್ನು ಹಾಗೆ ಸಂಗ್ರಹಿಸಲು ಸಾಧ್ಯವಿಲ್ಲದ್ದಿದ್ದರೂ ಮೊದದಿಂದ ಕೇರಿ ಜಳ್ಳು ಕಾಳು ಹಾಗೂ ಸಣ್ಣ ಕಾಳುಗಳನ್ನು ಸರಿಸಿ ದೊಡ್ಡಕಾಳುಗಳನ್ನೇ ಆಯ್ದಿಡಲಾಗಿತ್ತದೆ. ಶೇಂಗಾ ಬಿತ್ತುವವರು ಬೇಸಿಗೆಯಲ್ಲಿಯೇ ಸಣ್ಣ ಹುಡುಗರಿಂದಲೋ, ದೊಡ್ಡವರಿಗೆ ಕೂಲಿ ಕೊಟ್ಟೋ ಕಾಯಿ ಶೇಂಗಾ ಒಡೆಸಿ ಬೀಜ ಸಂಗ್ರಹಿಸುತ್ತಾರೆ.

ಬಿತ್ತನೆ ಕಾಲ ಸಮೀಪಿಸುತ್ತಿದ್ದಂತೆಯೇ ಮುಂಚಿತವಾಗಿ ಕುಂಟೆ, ಕೂರಗಿ ಮುಂತಾದ ಸಲಕರಣೆಗಳನ್ನು ಬಡಿಗರಿಂದಲೂ, ಕುಡ, ಮುಂಜ, ಕುರುಪಿ, ಕುಡಗೋಲುಗಳನ್ನು ಕಮ್ಮಾರರಿಂದಲೂ ಬಾಯಿ ಹೆಣಸಿ (ಹದನುಗೊಳಿಸಿ) ಸಿದ್ಧವಾಗಿರಿಸಿಕೊಂಡಿರುತ್ತಾರೆ. ಹಳ್ಳಿಗಳಲ್ಲಿ ಬಡಿಗರು, ಕಮ್ಮಾರರು, ಅಕ್ಕಸಾಲಿರರು ಇವರೆಲ್ಲಾ ವಿಶ್ವಕರ್ಮ ಜನಾಂಗದವರೇ ಆಗಿದ್ದು ಹಳ್ಳಿಗರು ಅವರಿಗೆ ಬಡಿಗಗೌಡ್ರು, ಕಂಬಾರಗೌಡ್ರು, ಪತ್ತಾರಗೌಡ್ರು, ಕುಂಬಾರಗೌಡ್ರು ಎಂದೇ ಕರೆಯುತ್ತಾರೆ. ಅವರ ಆರ್ಥಿಕ ಸ್ಥಿತಿ ಎಂತದೇ ಇರಲಿ, ಅವರು ತಮ್ಮ ವೃತ್ತಿಯಿಂದ ಬೇಸಾಯದ ಬಹುಪಾಲು ಮುಖ್ಯಾಂಶವಾಗಿರುವುದರಿಂದ ಸಾಮಾಜಿಕವಾಗಿ ಅವರಿಗೆ ವಿಶೇಷ ಸ್ಥಾನಮಾನಗಳೂ ಉಂಟು.

ಈ ಗಳೇ ಸಾಮಾನುಗಳನ್ನು ಸಿದ್ಧಪಡಿಸಿಕೊಡುವ ಆಯಗಾರರಿಗೆ ದುಡ್ಡು ಕೊಡುವುದಿಲ್ಲ. ಹೊಲದಲ್ಲಿ ಜೋಳ ಕೀಳುವಾಗ ತೆನೆಗಣಿಕೆ, ಶೇಂಗಾ ಬಿಡಿಸುವಾಗ ಶೇಂಗಾ, ತೆನೆಮುರಿಯುವಾಗ ತೆನೆ, ರಾಶಿಗಳಲ್ಲಿ ಜೋಳ, ಅಕ್ಕಡಿಕಾಳು ಹೀಗೆ ಎಲ್ಲವನ್ನೂ ಈ ಆಯಾಗಾರರು ಹೊಲಕ್ಕೆ ಹೋಗಿಯೇ ಸಂಗ್ರಹಿಸಿಕೊಂಡು ತಲೆಯ ಮೇಲೆ ಹೊತ್ತುಕೊಂಡೆ ಬರುತ್ತಾರೆ. ‘ನಾವೇನ್ರೀ ಆಯ್ಗಾರಂದ್ರ ಊರ ಹೆಣ್ಮಕ್ಕಳಿದ್ದಂಗ’ ಎಂದು ಹೇಳುವ ಇವರು ಬಿತ್ತುವ ಸಂದರ್ಭದಲ್ಲಿ ಬಿತ್ತುತ್ತಿರುವ ಹೊಲಗಳಿಗೆಲ್ಲ ಬೇಟ್ಟಿನೀಡಿ ಬಿತ್ತು ಸಲಕರಣೆಗಳಿಗೆ ಏನಾದರೂ ಅಡಚಣೆಯಾಗಿದ್ದಲ್ಲಿ ತಮ್ಮ ಕೈಯಲ್ಲಿರುವ ವೃತ್ತಿಯ ಉಪಕರಣಗಳ ನೆರವಿನಿಂದ ದುರಸ್ತಿ ಮಾಡಿ ಬಿತ್ತನೆಗೆ ಅನುವು ಮಾಡಿ ಕೊಡುವುದುಂಟು. ಆಯಗಾರರು ಕಾಡಿ ತೆಗೆದುಕೊಂಡು ಹೊದಷ್ಟು ಭೂಮಿತಾಯಿ ಹುಲುಸು ಕೊಡುತ್ತಾಳೆ ಎಂಬುದು ಅವರ ನಂಬುಗೆ.

ಊರ ಹೆಣ್ಣು ಮಕ್ಕಳೆಂದು ಅವರು ಹೇಳಿಕೊಳ್ಳುವುದರಲ್ಲಾಗಲೀ, ರೈತಾಪಿ ವರ್ಗ ಕರೆಯುವುದರಲ್ಲಾಗಲೀ ಯಾವುದೇ ಕೃತಿಕತೆ, ನಾಟಕೀಯತೆ ಖಂಡಿತವಾಗಿಯೂ ಇಲ್ಲ. ಮನೆಯ ಹೆಣ್ಣುಮಕ್ಕಳನ್ನು ಲಕ್ಷ್ಮಿಯ ರೂಪದಲ್ಲಿ ಕಾಣುತ್ತಾರೆ ನಮ್ಮ ಜನ. ಹಾಗೆಯೇ ಆಕೆಗೆ ತೋರಿದಷ್ಟು ಗೌರವವನ್ನು ಈ ಆಯಗಾರರಿಗೂ ತೋರುತ್ತಾರೆ. ಇಡೀ ಊರಿಗೆ ಊರೇ ತೋರುವ ಗೌರವಕ್ಕೆ ಪ್ರತಿಯಾಗಿ ‘ಆಯಗಾರರು ಊರ ಹೆಣ್ಣುಮಕ್ಕಳೆಂದು ಹೇಳಿಕೊಳ್ಳುವುದರಲ್ಲಿ ನಿಜಕ್ಕೂ ದೊಡ್ಡ ಅರ್ಥವಿದೆ’.

ಕುಂಬಾರರನ್ನು ಹೊರೆತುಪಡಿಸಿ ಬಡಿಗರು, ಕಂಬಾರರು, ಪತ್ತಾರರು ವಿಶ್ವಕರ್ಮ ಜಾತಿಯಾಗಿರುವುದರಿಂದ ತಮ್ಮ ಜನಾಂಗದವರನ್ನು ಹೊರೆತುಪಡಿಸಿ ಬೇರೆ ಜನಾಂಗದವರ ಮನೆಯ ಮದುವೆ, ಮುಂಜಿವಿ, ಜವುಳ ಕುಬುಸದ ಕಾರ್ಯಕ್ರಮಗಳಲ್ಲಿ ಊಟಕ್ಕೆ ಹೋಗುವುದಿಲ್ಲ. ಆ ಕಾರಣಕ್ಕಾಗಿ ಅವರಿಗೆ ಬೇರೆ ಜನಾಂಗದವರು ‘ಉಲುಪಿ’ ಅಥವಾ ‘ಸೀದಾ’ ಕೊಡುತ್ತಾರೆ. ಗೋಧಿಹಿಟ್ಟು, ಬೆಲ್ಲ, ಬೇಳೆ, ಅಕ್ಕಿ, ಎಣ್ಣೆ, ಎಲೆ ಅಡಿಕೆ ಕೊಟ್ಟು ಅವರ ಮನೆಗೆನೇ ಹೋಗಿ ಕೊಟ್ಟು ಗೌರವಿಸಿ ಬರುವ ಸಂಪ್ರದಾಯ ಇನ್ನೂ ಎಲ್ಲ ಗ್ರಾಮಗಳಲ್ಲಿ ನಡೆದುಕೊಂಡು ಬರುತ್ತಿದೆ.

ಬಿತ್ತುವ ಕೂರಿಗೆಗೆ ಮೂರು ತಾಳಗಳಿರುತ್ತವೆ. (ಬೀಜ ಬೀಳುವ ದಾರಿಗಳು) ಒಕ್ಕಲಿಗರು ಹೇಳುವುದು, ‘ಮೂರು ತಾಳದ್ಲೇ ಬಿತ್ತಿದ್ರೂ ಒಕ್ಕಲಗ್ಯಾಗ ಸಿಗೂದು ಒಂದ ತಾಳಿಂದು’ ಎನ್ನುತ್ತಾರೆ. ಒಂದು ಪಾಲು ಪಶುಪಕ್ಷಿಗಳು ತಿಂದು ಹೋದರೆ ಇನ್ನೊಂದು ಪಾಲು ಕೃಷಿಗೆ ಬೇಕಾಗುವ ಸಲಕರಣೆಗಳನ್ನು ಒದಗಿಸುವ ಆಯಗಾರರು, ಇನ್ನೂ ಬೇರೆ ಬೇರೆ ಕಸುಬಿನ ಆಯಗಾರರು ಹಾಗೂ ದಾನ ಧರ್ಮಗಳಿಗೆ ಎಲ್ಲ ಸೇರಿ ಒಂದು ತಾಳದ್ದು ಹೋಗುತ್ತದೆ. ಇನ್ನುಳಿದ ಒಂದೇ ತಾಳ ಅದು ಒಕ್ಕಲಿಗರಿಗೆ ಎಂದು ಒಕ್ಕಲಿಗರು ನಿರಾಳವಾಗಿ ಹೇಳುತ್ತಾರೆ. ಒಂದು ಜಾನಪದ ತ್ರಿಪದಿಯಲ್ಲಿ ಕಡೆಯ ಬಲಕಿನ ತಾಳ ಪಶುಪಕ್ಷಿ ಜೀವನಕೆ ನಡುವಿ ತಾಳ ರೈತನಿಗೆ.

ಒಂದೊಂದು ಊರಿನಲ್ಲಿ ಇಂತಿಂತಹ ಮನೆಗಳವರೇ ಮೊದಲು ಬಿತ್ತನೆ ಕಾರ್ಯ ಪ್ರಾರಂಭಿಸಬೇಕೆಂಬ ಸಂಪ್ರದಾಯವಿದೆ. ಒಂದೊರಿನಲ್ಲಿ ಆ ಊರನ ಮೇಟಿ ಒಕ್ಕಲಿಗರೇ ಮೊದಲು ಬಿತ್ತನೆ ಮಾಡಿದರೆ ಮತ್ತೊಂದೂರಿನಲ್ಲಿ ಕುರುಬರೇ ಮೊದಲು ಬಿತ್ತನೆ ಮಾಡಬೇಕು. ಅವರು ಬಿತ್ತನೆ ಪ್ರಾರಂಭಿಸುವವರೆಗೆ ಉಳಿದವರಾರು ಬಿತ್ತನೆ ಮಾಡುವಂತಿಲ್ಲ. ಇದು ಆಯಾ ಗ್ರಾಮಸ್ಥರೇ ಹಾಕಿಕೊಂಡ’ಫತ್ವಾ’ ಆಗಿರುತ್ತದೆ.

ಬಡಿಗಸಾಲಿನಿಂದ ದುರಸ್ತಿ ಮಾಡಿಸಿಕೊಂಡ ಅಥವಾ ಹೊಸದಾಗಿ ತಂದ ಕೂರಿಗೆಯನ್ನು ಮನೆಯ ಕಟ್ಟೆಯ ಮೇಲೆ ಉತ್ತರಕ್ಕೆ ಅಥವಾ ಪೂರ್ವಕ್ಕೆ ಮುಖಮಾಡಿ ಶೆಡ್ಡಿ ಬಿಗಿದು ಇಟ್ಟಿರುತ್ತಾರೆ. ಕೂರಿಗೆಗೆ ಹೊಸ ಸೀರೆ, ಖಣ, ಏರಿಸಿ ಮಾವಿನ ತಳಿಲುಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಮನೆಯ ಮುತ್ತೈದೆಯರು ಕೂರಿಗೆಗೆ ಆರತಿ ಮಾಡಿದ ನಂತರ ಬಿತ್ತಲು ಹೋಗುವವರು ಸಿಹಿಯೂಟ ಮಾಡಿಕೊಂಡು ಹೊಲಕ್ಕೆ ಹೋಗುತ್ತಾರೆ.

ಬಿತ್ತಲು ಹೊರಟಾಗ ಎದುರಿಗೆ ವಿಧವೆ, ಖಾಲಿಕೊಡ, ಖಾಲಿಹೆಡಗೆ, ಕ್ಷೌರಿಕದವರು ಬಂದರೆ, ಬಿತ್ತುವಾಗ ನೊಗ ಮುರಿಯುವದು ಇವೆಲ್ಲಾ ಅಪಶಕುನಗಳೆಂದು ಭಾವಿಸುವ ಒಕ್ಕಲಿಗರು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಹೆಣ್ಣುಮಗಳು ಎದುರು ಬಂದರೆ ಜೋಳದ ಬೆಳೆಗೆ ಕಾಡಿಗೆ ರೋಗ ಬೀಳುವುದೆಂದು ಹೇಳುತ್ತಾರೆ.

ಎಡೆ ಹೊಡೆದು ಕಸ ತೆಗೆಯುವುದು

ಬಿತ್ತಿದ ಬೀಜ ಮೊಳಕೆಯೊಡೆದು ಮೇಲೆ ಬಂದಂತೆ ಬೆಳೆಯ ಜೊತೆ ಕಳೆಯೂ ತುಂಬಿಕೊಂಡು ಸತ್ವವನ್ನು ಎಲ್ಲಾ ಹೀರಿಕೊಂಡು ತಾನೇ ಬೆಳೆಯತೊಡಗುವುದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆಗ ದಂಡಿಗೆ ಎರಡು ಕಬ್ಬಿಣದ ತಾಳ ಸಿಕ್ಕಿಸಿ ನಡುವಿನ ಪೊಳ್ಳಿನಲ್ಲಿಯೇ ಸಸಿ ಬರುವಂತೆ ಮಾಡಿ ಎರಡೂ ಬದಿಯ ಕಸಕಿತ್ತು ಹೋಗುವಂತೆ ಮಾಡುವ ಪದ್ದತಿ ಒಂದಾದರೆ, ಎರಡು ಸಾಲುಗಳ ಸಸಿಗಳ ಮಧ್ಯೆ ಎಡೆ ಹೊಡೆದು ಕಸ ತೆಗೆಯುವ ಪದ್ದತಿ ಇನ್ನೊಂದು. ಇಷ್ಟಾಗಿಯೂ ಅಲ್ಲಲ್ಲಿ ಕಸ ಉಳಿದುಕೊಳ್ಳುವುದರಿಂದ ಅದನ್ನು ತೆಗೆಯಲು ಕೂಲಿ ಆಳುಗಳ ಮೊರೆ ಹೋಗಬೇಕಾಗುತ್ತದೆ.

ಕೊಯ್ಯುವದು, ಕೀಳುವದು

ಡಿಶೆಂಬರ ತಿಂಗಳಿನಷ್ಟೊತ್ತಿಗೆ ಮುಂಗಾರು ಫಸಲೂ, ಫೆಬ್ರುವರಿ, ಮಾರ್ಚನಷ್ಟೊತ್ತಿಗೆ ಹಿಂಗಾರಿ ಫಸಲು ಕಟಾವಿಗೆ ಬರುತ್ತವೆ. ಕೆಂಪು ಜೋಳ, ಹಾಗೂ ಸಜ್ಜೆಗಳನ್ನು ಕುಡಗೋಲಿನಿಂದ ಕೊಯ್ದರೆ, ಬಿಳಿ ಜೋಳವನ್ನು ಬೇರು ಸಮೇತ ಕೀಳುತ್ತಾರೆ. ಕೊಯ್ದ ಹಾಗೂ ಕಿತ್ತ ಜೋಳದ ದಂಟುಗಳನ್ನು ಸೂಡು ಕಟ್ಟಿ ಮೆದೆ ಹಾಕುತ್ತಾರೆ. ಒಂದೆರಡು ದಿನ ಸ್ಥಳದಲ್ಲಿಯೇ ಒಣಗಲು ಬಿಟ್ಟು ನಂತರ ಒತ್ತಟ್ಟಿಗೆ ಒಟ್ಟುತ್ತಾರೆ. ಮಳೆ ಹೋಡಾಡುತ್ತಿದ್ದರೆ ಬಿದ್ದ ನೀರು ಉರುಳಿ ಹೋಗುವಂತೆ ಶಂಕುವಿನಾಕೃತಿಯಾಗಿ ಒಟ್ಟುವುದಕ್ಕೆ ‘ಕಾಗೆ ಗೂಡು’ ಎಂತಲೂ, ಹಾಗೆಯೇ ಚೌಕಾಕಾರದಲ್ಲಿ ಒಟ್ಟಿದರೆ ಚಾಪ ಹಾಕುವುದು ಎಂತಲೂ ಕರೆಯುತ್ತಾರೆ. ಗೂಡು ಹಾಕುವುದರಲ್ಲಿಯೂ ಕುಶಲತೆ ಇರಬೇಕಾಗುತ್ತದೆ. ತೆನೆಗಳನ್ನು ಹಾದಿ ಹೋಕರ ಕೈಗೆ, ಕಳ್ಳಕಾಕರ ಕೈಗೆ, ದನಕರುಗಳಿಗೆ ನಿಲುಕದಂತೆ ಒಳ ಮಗ್ಗುಲಿಗೆ ಪೇರಿಸಿ ಕನಿಕೆ ಮಾತ್ರ ಹೊರಕಾಣುವಂತೆ ಒಟ್ಟುವುದು ಕೂಡಾ ವಿಶೇಷ ಜಾಣ್ಮೆಯಿಂದ ಕೂಡಿದ್ದಾಗಿರುತ್ತದೆ.

ಗೂಡಿಗೆ ಮಾಡುವುದು

ಮುಂಗಾರಿ, ಸಜ್ಜೆ ಬೆಳೆಗಳನ್ನು ಕೊಯ್ದು, ಬಿಳಿಜೋಳದ ಬೆಳೆಯನ್ನು ಕಿತ್ತು ಗೂಡು ಹಾಕಿದ ನಂತರ ಐದಾರು ದಿನ ಬಿಟ್ಟು (ತೆನೆಗಳು ಹಾಗೂ ಕಣಿಕೆ ಸಂಪೂರ್ಣ ಒಣಗುವ ಹಂತಕ್ಕೆ ಬಂದಾಗ) ತೆನೆ ಮುರಿಯುವ ಸಂಭ್ರಮ. ಇದನ್ನು ಏಕಾಏಕಿ ಪ್ರಾರಂಭಿಸುವಂತಿಲ್ಲ. ನಾಳೆ ತೆನೆ ಮುರಿಯುವುದಿದೆ ಎಂದು ಖಚಿತವಾದಾಗ ಗಂಡನ ಮನೆಯಲ್ಲಿರುವ ಮನೆಯ ಹೆಣ್ಣು ಮಗಳನ್ನು ಕರೆ ತರುತ್ತಾರೆ. ಆಕೆ ಬರದೇ ಹೋದಲ್ಲಿ ಪದ್ಧತಿಯಂತೆ ತಮ್ಮ ಮನೆಯ ಮಗಳಾಗುವ ಪಕ್ಕದ ಮನೆಯ ತಮ್ಮ ಕುಲಸ್ತರ ಹೆಣ್ಣು ಮಗಳನ್ನಾದರೂ ಕರೆತರುತ್ತಾರೆ. ಆಕೆ ಬರದೇ ಹೋದಲ್ಲಿ ಪದ್ಧತಿಯಂತೆ ತಮ್ಮ ಮನೆಯ ಮಗಳಾಗುವ ಪಕ್ಕದ ಮನೆಯ ತಮ್ಮ ಕುಲಸ್ತರ ಹೆಣ್ಣು ಮಗಳನ್ನಾದರೂ ಕರೆತರುತ್ತಾರೆ. ಹಾಗೆಯೇ ಇನ್ನೂ ನಾಲ್ಕು ಜನ ಮುತ್ತೈದೆಯರನ್ನು (ಒಟ್ಟು ಐದು ಜನರಾಗಬೇಕು) ಕರೆದುಕೊಂಡು ತೆನೆ ಮುರಿಯುವ ಹೊಲಕ್ಕೆ ಹೋಗುತ್ತಾರೆ. ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿ ಐದು ಕಲ್ಲಿಟ್ಟು ಅಲ್ಲಿ ಗೂಡಿಗೆ ಹೊಸ ಸೀರೆ, ಖಣ, ಬಳೆ, ಹೂವು, ಏರಿಸಿ ಪೂಜೆ ಮಾಡಿ ಮುತ್ತೈದೆಯರ ಉಡಿ ತುಂಬಿದ ನಂತರ ಮುತ್ತೈದೆಯರು ಆರತಿ ಮಾಡಿ ಊಟ ಮಾಡುತ್ತಾರೆ. ಅವರು ಊಟ ಮಾಡಿದ ನಂತರವೇ ಉಳಿದವರ ಊಟ. ನಂತರ ಐದೂ ಜನ ಮುತ್ತೈದೆಯರು ಗೂಡಿಗೆ ನಮಸ್ಕರಿಸಿ ಗೂಡಿನಿಂದ ಒಂದಿಷ್ಟು ಕನಿಕೆ ತೆಗೆದುಕೊಮಡು ತೆನೆ ಮುರಿಯುವ ಮಹೂರ್ತ ಮಾಡುತ್ತಾರೆ. ನಂತರ ತೆನೆ ಮುರಿಯಲು ಬಂದವರು ಗುಡಾರ, ತಾಡಪತ್ರೆಗಳನ್ನು ಹಾಸಿಕೊಂಡು ಮುರಿಯಲು ಪ್ರಾರಂಭಿಸುತ್ತಾರೆ. ಗೂಡಿಗೆ ಏರಿಸಿದ ಸೀರೆ ಹಾಗೂ ಖಣವನ್ನು ಮನೆಯ ಹೆಣ್ಣು ಮಗಳಿಗೂ, ಉಳಿದ ಮುತ್ತೈದೆಯರಿಗೆ ಒಂದೊಂದು ಖಣ ಕೊಟ್ಟು ಕುಂಕುಮ ಹಚ್ಚಿ ನಮಸ್ಕರಿಸಿ ಕಳಿಸುತ್ತಾರೆ.

ಒಂದರ್ಥದಲ್ಲಿ ಮನೆಯ ಹೆಣ್ಣುಮಗಳು ಬೇರೆಯಲ್ಲ, ತಮಗೆ ಅನ್ನ ನೀಡುವ ಭೂಮಿತಾಯಿ ಬೇರೆಯಲ್ಲ. ಲಕ್ಷ್ಮಿಯ ರೂಪದಲ್ಲಿರುವ ಮನೆಯ ಹೆಣ್ಣು ಮಗಳನ್ನು ಗೌರವಿಸಿ, ಸಂತೃಪ್ತಿಪಡಿಸಿದರೆ ಭೂಮಿತಾಯಿಯನ್ನು ಸಂತೃಪ್ತಿಗೊಳಿಸಿ ಗೌರವಿಸಿದಂತೆ ಎಂಬುದು ಕೃಷಿಕರ ಬಲವಾದ ನಂಬುಗೆ.