‌ಜನನ ಮರಣಗಳ ಚಕ್ರದ ನಡುವೆಯೇ ಮಾನವ ತನ್ನ ಬದುಕನ್ನು ಅರಳಿಸಿಕೊಳ್ಳಲು ನಿರಂತರ ಯತ್ನಿಸುತ್ತಿರುತ್ತಾನೆ. ಕಷ್ಟ, ನೋವುಗಳ ಮಧ್ಯದಲ್ಲಿಯೇ ತನ್ನ ಜೀವನವನ್ನು ಆನಂದ, ಸುಖ ಸಂತೋಷಗಳಿಗೆ ತಳುಕು ಹಾಕಿಕೊಂಡು ನೋವನ್ನು ಮರೆಯಲು ಯತ್ನಿಸುತ್ತಾನೆ. ಆನಂದಾಶ್ರುಗಳನ್ನು ಸುರಿಸಿ ತನ್ನ ಬದುಕನ್ನು ಹಗುರ ಮಾಡಿಕೊಳ್ಳಲು ಧರ್ಮ, ದೇವರ ಹೆಸರಿನಲ್ಲಿ ಹಲವಾರು ಆಚರಣೆಗಳತ್ತ ಗಮನ ಹರಿಸುತ್ತಾನೆ. ಅವುಗಳಲ್ಲಿಯೇ ಮನರಂಜನಯನ್ನಿರಿಸಿಕೊಂಡು ನಕ್ಕು ನಲಿಯುತ್ತಾನೆ. ಅಂತೂ ನೋವು ಮರೆಯಲು ನೂರಾರು ಹಾದಿಗಳನ್ನು ಕಂಡುಕೊಂಡಿದ್ದಾನೆ.

ನಮ್ಮದು ಹಬ್ಬ ಹರಿದಿನಗಳ ನಾಡು. ದುಃಖಕ್ಕೊಂದು ಹಬ್ಬ, ಸುಖಕೊಂದು ಹಬ್ಬ. ಇದೇ ಜೀವನೋತ್ಸಾಹದ ಸೆಲೆಯೂ ಹೌದು. ಬೆವರು ಸುರಿಸುವುದರ ಜೊತೆಯಲ್ಲೇ ಆನಂದಶ್ರುಗಳನ್ನು ಹರಿಸಿ ಸಂತಸಪಡಲು ಯತ್ನಿಸುತ್ತೇವೆ.

ಶ್ರಾವಣ ಮಾಸದಲ್ಲಿ ನಡೆಯುವ ಹೆಂಡಿ (ಶೆಗಣಿ ಎರಚುವ) ಓಕುಳಿ ಇಂತಹ ಹಬ್ಬಗಳ್ಲೊಂದು, ಇದು ಕೇವಲ ಮಹಿಳೆಯರು ಪಾಲ್ಗೊಳ್ಳುವ ಹಬ್ಬ. ಇಲ್ಲಿ ಮಹಿಳೆಯರು ಪರಸ್ಪರ ಶೆಗಣಿ ಎರಚಿಕೊಂಡು ಆನಂದ ಪಡುತ್ತಾರೆ.

‘ಪೌರಾಣಿಕ ಹಿನ್ನೆಲೆ’ ಶಿರಿಯಾಳಶೆಟ್ಟಿ ಹಾಗೂ ಆತನ ಹೆಂಡತಿ ಚೆಂಗಳೆವ್ವ ಮಹಾನ್ ಶಿವಭಕ್ತರು ಒಂದು ದಿನ ಶಿವ ಜಂಗಮ ವೇಷದಲ್ಲಿ ಬಂದು ‘ನಿಮ್ಮ ಪುತ್ರ ಚಿಲ್ಲಾಳನನ್ನು ಕೊಂದು ಮಾಂಸದಡಿಗೆ ಮಾಡಿ ನನಗೆ ಬಡಿಸಬೇಕು’ ಎಂದು ಕೇಳುತ್ತಾನೆ. ದಂಪತಿಗಳು ಹಿಂದೆ ಮುಂದೆ ನೋಡದೆ ಮಗನನ್ನು ಕೊಂದು ಅಡಿಗೆ ಮಾಡಿ ಬಡಿಸುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಶಿವ ಅವರನ್ನು ತನ್ನೊಡನೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ. ಶಿವನಿಗೆ ತಮ್ಮ ಮಗನನ್ನೇ ಕೊಂದು ಮಾಂಸದಡಿಗೆ ಮಾಡಿ ಬಡಿಸಿದ್ದೇವೆಂಬ ಹಮ್ಮಿನಲ್ಲಿ ಅವರು ಶಿವಗಣಂಗಳ ಜೊತೆಗೆ ಗರ್ವದಿಂದ ವರ್ತಿಸುತ್ತಾರೆ. ಶಿವಗಣಂಗಳು ಇವರ ವರ್ತನೆಯನ್ನು ಖಂಡಿಸಿ ಇವರ ಸೊಕ್ಕು ಮುರಿಯಲು ‘ಥೂ| ಇವ್ರು ಮುಖಕ್ಕೆ ಹೆಂಡಿ(ಶೆಗಣಿ) ಹಾಕ್ಲಿ’ ಅಂದರಂತೆ ಹೀಗೆ ಅಹಂಕಾರದಿಂದ ವರ್ತಿಸುವವರ ಮುಖಕ್ಕೆ ಶೆಗಣಿ ಎರಚಿ, ಸಾರ್ವಜನಿಕವಾಗಿ ಅವಮಾನಿಸಿ ಬುದ್ದಿ ಕಲಿಸಲು ‘ಚಂಗಳಿಕೆವ್ವ’ನನ್ನು ಮುಂದಿರಿಸಿಕೊಂಡು ಈ ಹಬ್ಬ ಆಚರಿಸಲಾಗುತ್ತದೆ.

ನಾಗರ ಪಂಚಮಿ ಹಬ್ಬದಂದು ದೇವಸ್ಥಾನದ ಮಳಿಗೆಗಳಲ್ಲಿ ಚಂಗಳಿಕೆವ್ವನನ್ನು ಪ್ರತಿಷ್ಠಾಪಿಸುತ್ತಾರೆ. ಅಂದಿನಿಂದ ಚಂಗಳಿಕೆವ್ವನನ್ನು ಬೀಳ್ಕೊಡುವವರೆಗೆ ದಿನಾಲೂ ಪೂಜೆ, ಆರತಿ, ನೈವೇದ್ಯ ಮಾಡಿಕೊಂಡು ಬರುತ್ತಾರೆ

ಓಕುಳಿಗೆ ಅಂಕಣದ ತಯಾರಿ.

ಶ್ರಾವಣ ಮಾಸದ ಅಷ್ಟಮಿಯ ನಂತರ ಬರುವ ಸೋಮವಾರ ಈ ಓಕುಳಿ ನಡೆಯುತ್ತದೆ. (ಇದು ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ದಿನಗಳಿರಬಹುದು) ಎರಡೂ ತಂಡಗಳು ನಾಲ್ಕಾರು ದಿನಗಳಿಂದ ಶೆಗಣಿ ಸಂಗ್ರಹಿಸಲು ತೊಡಗುತ್ತಾರೆ. ಓಕುಳಿಯ ದಿನ ಚೆಂಗಳಿಕೆವ್ವನ ಎದುರುಗಡೆ ಎರಡೂ ಬದಿಗೆ ಬಲವಾದ ಕಂಬಗಳನ್ನು ನೆಟ್ಟು ಹಗ್ಗಗಳನ್ನು ಬಿಗಿಯಲಾಗಿರುತ್ತದೆ. ಸ್ಪರ್ಧಾಳುಗಳಿರುವ ಎದುರು ಬದುರಿನ ಎರಡೂ ಅಂಕಣಗಳ ಮಧ್ಯ ಏಳೆಂಟು ಅಡಿಗಳ ಅಂತರವಿಟ್ಟು ಪ್ರತ್ಯೇಕ ಅಂಕಣ ನಿರ್ಮಿಸುತ್ತಾರೆ. ಒಂದು ಗುಂಪಿನ ಸ್ಪರ್ಧಾಳುಗಳು ಇನ್ನೊಂದು ಗುಂಪಿನ ಅಂಕಣಕ್ಕೆ ನುಗ್ಗಿ ಧಾಂದಲೇ, ಗಲಾಟೆ, ಕೋಲಾಹಲಕ್ಕೆ ಅವಕಾಶವಾಗಬಾರದೆನ್ನುವ ಕಾರಣಕ್ಕಾಗಿ ಈ ರೀತಿ ಮುನ್ನೆಚ್ಚರಿಕೆ ವಹಿಸಲಾಗಿರುತ್ತದೆ. ಈ ಮೊದಲು ಸಂಗ್ರಹಿಸಲಾದ ಶೆಗಣಿಯನ್ನು ಸ್ಪರ್ಧಾಳುಗಳು ತಮ್ಮ ತಮ್ಮ ಅಂಕಣಗಳಲ್ಲಿ ಸುರುವಿಕೊಳ್ಳುತ್ತಾರೆ.

ಊರ ಪ್ರಮುಖರು ಬಾಜಾ ಭಜಂತ್ರಿಗಳೊಡನೆ ಆಯಾ ತಂಡಗಳ ಮುಖ್ಯಸ್ಥರ (ಬಾಬುದಾರರ) ಮನೆಗಳಿಗೆ ಹೋಗಿ ಎರಡೂ ತಂಡಗಳನ್ನು ಪ್ರತ್ಯೇಕವಾಗಿ ಕರೆತರುತ್ತಾರೆ. ಮಹಿಳಾ ಸ್ಪರ್ಧಾಳುಗಳು ಕಚ್ಚೆಹಾಕಿ, ಸೀರೆ ಸೆರಗು ಸೊಂಟಕ್ಕೆ ಸುತ್ತಿ, ವೀರವನಿತೆಯರಾಗಿ ರಣರಂಗಕ್ಕೆ ಧಾವಿಸುವುದನ್ನು ನೋಡುವುದೇ ಒಂದು ಸೊಬಗು. ಎರಡೂ ತಂಡಗಳ ಮುಂದಿನ ಸಾಲಿನಲ್ಲಿ ಅಡಗೊಡ್ಡಿಯೊಂದನ್ನು ತರಲಾಗಿರುತ್ತದೆ. ಅಂದರೆ ಗಂಡಸರಿಗೇನೆ ಸೀರೆ, ಕುಪ್ಪಸ ತೊಡಿಸಿ ಛತ್ರ, ಚಾಮರ, ನೆಕ್ಲೇಸ್‌ಗಳಿಂದ ಅಲಂಕರಿಸುತ್ತಾರೆ. (ಹಿರಿದ ಬಟ್ಟೆ, ಕಸಪೊರಕೆ, ತರಕಾರಿಗಳನ್ನು ಪೋಣಿಸಿ ಮಾಡಿದ ಹಾರ) ಎರಡೂ ತಂಡದ ಅಡಗೊಡ್ಡಿಗಳೇ ಈ ವನಿತೆಯರ ಸೇನೆಗೆ ದಂಡನಾಯಕರುಗಳು. ಎದಿರು ಬದಿರಾಗುವ ಎರಡೂ ತಂಡಗಳು ಮೇಲೆ ಹೇಳಿದ ಛತ್ರ ಚಾಮರಗಳನ್ನು ಪರಸ್ಪರ ಆಯೇರಿ ವಿನಮಯ ಮಾಡಿಕೊಳ್ಳುತ್ತಾರೆ. ಕೂಡಿದ ಜನತೆಯನ್ನು ನಕ್ಕು ನಕ್ಕು ಸುಸ್ತಾಗುವಂತೆ ಮಾದುತ್ತದೆ ಈ ಕಾರ್ಯಕ್ರಮ.

ನಂತರ ಪ್ರಮುಖರೊಬ್ಬರು ಎರಡೂ ಅಂಕಣಗಳಿಂದ ಒಂದಿಷ್ಟು ಶೆಗಣಿ ಎತ್ತಿಕೊಂಡು ಎರಡು ಅಂಕಣಗಳಿಗೆ ಇಷ್ಟಿಷ್ಟು ಎಸೆದು ಬಿಡುತ್ತಾರೆ. ಎಂದರೆ ಓಕುಳಿ ವಿದ್ಯುಕ್ತವಾಗಿ ಉದ್ಘಾಟಣೆಯಾದಂತೆ. ತತ್‌ಕ್ಷಣದಲ್ಲಿಯೇ ಪ್ರಾರಂಭಗೊಳ್ಳುವ ಶೆಗಣಿ ಎರಚಾಟ ಕ್ರಮೇಣ ತಾರಕಕ್ಕೇರುತ್ತದೆ. ಎರಡು ಅಂಕಣಗಳ ಸ್ಪರ್ಧಾಳುಗಳ ಮೇಲೆ ಬಂದು ಬೀಳುತ್ತಿರುವ ಶೆಗಣಿ. ಕ್ಷಿಪಣಿಗಳ ದಾಳಿಯನ್ನು ಮೀರಿಸುವಂತಿರುತ್ತದೆ. ಮೈ, ಮುಖ, ಕೈ, ಕಾಲು, ಹೀಗೆ ಎಲ್ಲೆಲ್ಲೂ ಶೆಗಣಿ. ಜಾಣ ಮಹಿಳೆಯರು ಮುಖ ಕೆಳಗೆ ಮಾಡಿ ಎಸೆಯುತ್ತಿರುವದರಿಂದ ಅವರ ಮುಖಕ್ಕೆ ಸಿಡಿಯುವದಿಲ್ಲ. ಕ್ಷಿಪಣಿ ಮದ್ದು ಗುಂಡುಗಳ ಸಂಗ್ರಹ ಕಡಿಮೆಯಾದೊಡನೆ ಯುದ್ಧ ನಿಲ್ಲಬೇಕಾಗುತ್ತದೆ. ಅದು ಅನಿವಾರ್ಯ. ಆದರಿಲ್ಲಿ ಮಹಿಳಾ ಸಮರ ನಿಲ್ಲುವಂತೆಯೇ ಇಲ್ಲ. ಯಾಕೆಂದರೆ ಇವರು ಎರಚಿದಷ್ಟು ಶೆಗಣಿ ಆಕಡೆ ಅಂಕಣಕ್ಕೆ ಹೋಗಿ ಬೀಳುತ್ತದೆ. ಅಲ್ಲಿ ಎರಚಿದ ಶೆಗಣಿ ಈ ಅಂಕಣಕ್ಕೆ ಬಂದು ಸಂಗ್ರಹಣಗೊಳ್ಳುತ್ತದೆ. ಹೀಗಾಗಿ ಯಾವ ಅಂಕಣದಲ್ಲಿಯೂ ಶೆಗಣಿ ಕಡಿಮೆಯಾಗುವುದೇ ಇಲ್ಲ, ಯುದ್ಧ ನಿಲ್ಲುವುದೂ ಇಲ್ಲ. ಕೆಲಕ್ಷಣ ಸ್ಪರ್ಧಾಳುಗಳು, ಅಂಕಣ ಕಾಣದಷ್ಟು ವೇಗವಾಗಿ ದಾಳಿ ನಡೆಯುತ್ತಿರುತ್ತದೆ. ‘ನೆಲಾ ಮುಗಲಾ ಏಕಾಕಾರಾಗಿ ಕಾಣುವಂಗ’ ಆಗಿರುತ್ತದೆ. ಎರಡೂ ಕಡೆ ಸಂಗ್ರಹ ತೀರದೇ ಇರುವುದರಿಂದ ಅಲ್ಲಿ ಯಾರೂ ಸೋಲುವ ಅಥವಾ ಗೆಲ್ಲುವ ಪ್ರಮೇಯವೇ ಇಲ್ಲ. ಆಗ ಊರ ಪ್ರಮುಖರು ಮಧ್ಯೆ ಪ್ರವೇಶಿಸಿ ಕದನ ವಿರಾಮಕ್ಕೆ ಯತ್ನಿಸುತ್ತಿರುವಾಗ ಆಗ ನೋಡಬೇಕು ಅವರ ಫಜೀತಿ, ಅದು ಇನ್ನೂ ನಗೆ ಪಾಟಲಿನದು. ಯಾಕೆಂದರೆ ಅವರು ಕದನ ವಿರಾಮಕ್ಕೆ ಯತ್ನಿಸುತ್ತಿರುವಾಗ ಎರಡೂ ತಂಡಗಳ ಶೆಗಣಿ ದಾಳಿ ಇವರ ಮೇಲಾಗುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಭಾಜಾ ಭಜಂತ್ರಿಯರು ವಾದ್ಯ ಮೊಳಗಿಸುತ್ತಾ ಚಂಗಳಿಕೆವ್ವನನ್ನು ಎತ್ತಿಕೊಂಡೊಡನೆ ಕದನ ವಿರಾಮ ಘೋಷಣೆಯಾಗಿ ಚಂಗಳಿಕೆವ್ವನೊಡನೆ ಹೊಳೆಗೆ ಹೋಗಿ ಕೈ, ಕಾಲು ತೊಳೆದುಕೊಂಡು ಬರುತ್ತಾರೆ. ಅದುವರೆಗೆ ಪರಸ್ಪರ ಶತ್ರುಗಳಾಗಿ ಕಾದಾಡಿದ ವನಿತೆಯರು ಅರ್ಧ ಘಂಟೆಗಳ ಕಾಲ ನಡೆದ ಸಮರದ ರಸ ನಿಮಿಷಗಳನ್ನು ಹಂಚಿಕೊಳ್ಳುತ್ತಾ ನಗುತ್ತಾ ಬರುತ್ತಿರುತ್ತಾರೆ. ನಂತರ ಚೆಂಗಳಿಕೆವ್ವನ ಮಗ ಚಿಲ್ಲಾಳನನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುತ್ತಾರೆ.

ಮನೆಗೆ ತೆರಳುವಾಗ ಎಲ್ಲರೂ ಅಲ್ಲಿ ಬಿದ್ದಿರುವ ಶೆಗಣಿಯನ್ನು ಕೈಯಲ್ಲಿ ಇಷ್ಟಿಷ್ಟು ತೆಗೆದುಕೊಂಡು ಹೋಗುತ್ತಾರೆ. ಈ ಶೆಗಣಿಯನ್ನು ಹೊಲಕ್ಕೆ ಹಾಕುವದರಿಂದ ತಮ್ಮ ಪೈರುಗಳಿಗೆ ಕ್ರಿಮಿ ಕೀಟಗಳ ಬಾಧೆ ತಪ್ಪವದೆಂದು, ಹೊಲಗಳು ಹುಲುಸಾಗಿ ಬೆಳೆಯುತ್ತವೆಂದು ಈ ಮಣ್ಣಿನ ಮಕ್ಕಳ ಗಟ್ಟಿಯಾದ ನಂಬುಗೆ. ಮರುದಿನ ಮಂಗಳವಾರ ಚೆಂಗಳಿಕೆವ್ವನ್ನು ಬಾಜಾ ಭಜಂತ್ರಿಯೊಂದಿಗೆ ನದಿಗೆ ಕರೆದುಕೊಂಡು ಹೋಗಿ ವಿಸರ್ಜಿಸಲಾಗುತ್ತದೆ.

ಚಂಗಳಿಕೆವ್ವನ ಶೆಗಣಿ ಓಕುಳಿ ಆಚರಿಸುವ ಗ್ರಾಮಗಳಿಗೂ ಈಗ ಜಿನ್ ಪ್ಯಾಂಟು, ನೈಲಾನ್ ಸೀರೆ, ಕಣ್ಣಾ ಮುಚ್ಚಾಲೆಯಾಡುವ ಗಡಿಯಾರಗಳು, ರೇಡಿಯೋ, ಟೀವ್ಹಿ, ಮೊಬೈಲ್ ಫೋನ್ ಎಲ್ಲಾ ಬಂದಿವೆ. ಹೀಗಾಗಿ ಈ ಹೊಸ ಜನಾಂಗ ಚಂಗಳಿಕೆವ್ವನನ್ನು ತಮ್ಮೊಡನೆ ಕರೆದುಕೊಂಡು ಹೋಗುತ್ತಾರೋ ಅಥವಾ ನಡು ಬೀದಿಯಲ್ಲಿಯೇ ಬಿಟ್ಟು ಹೋಗುತ್ತಾರೋ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳುಬೇಕು ಅಷ್ಟೇ.