ಪಂಚಮಿ ಹಬ್ಬದ ನಂತರ ಶ್ರಾವಣ ಮಾಸ ಮುಗಿದೊಡನೆ ಬರುವದು ಗಣೇಶನ ಹಬ್ಬ. ಗಣೇಶ ಶಿಷ್ಟ ಪರಂಪರೆಯ ದೇವರಾದರೆ ಇದೇ ಸಂದರ್ಭದಲ್ಲಿ ಬರುವ ಜೋಕುಮಾರ ಅಪ್ಪಟ ಜಾನಪದರ ದೇವರಾಗಿದ್ದಾನೆ. ಗಣೇಶ ಯಥೇಷ್ಟವಾಗಿ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ, ತಾಯಿಗಳಾದ ಶಿವ ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರ ಇಲ್ಲಿ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸುತ್ತಾನೆ. ಜೋಕುಮಾರನ ಸಾವಿನ ನಂತರವೇ ಉತ್ತರಾ, ಹಸ್ತಾ ಮಳೆಗಳು ಪ್ರವೇಶಿಸಿ ಮಳೆ ಸುರಿಸುತ್ತವೆ. ಹೀಗಾಗಿಯೇ ಜೋಕುಮಾರ ಒಕ್ಕಲಿಗರಿಗೆ ಮಳೆ ತರುವ ನಂಬಿಕಸ್ತ ದೇವರು. ‘ಜೋಕುಮಾರ ಮಳೆ ಕೊಡಾವ ನೋಡ್ರೀ’ ಎಂದು ರೈತರು ಎದೆ ತಟ್ಟಿ ಹೇಳುತ್ತಾರೆ.

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ‘ಜೋಕ’ ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಅತ್ಯಂತ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ, ಕೊಲೆಯಾಗಿ ಹೋಗುತ್ತಾನೆ. ಜೋಕುಮಾರನನ್ನು ಹೊತ್ತು ತರುವ ಬಿಟ್ಟಿಯಲ್ಲಿ ಯಥೇಷ್ಠವಾಗಿ ಬೇವಿನ ಸೊಪ್ಪನ್ನಿಟ್ಟಿರುತ್ತಾರೆ. ಹಾಗಾಗಿಯೇ ದುರ್ಮರಣಕ್ಕೀಡಾದವರನ್ನು ಬೇವಿನ ಸೊಪ್ಪು ಮುಚ್ಚಿ ಶವ ಸಾಗಿಸಲಾಗುತ್ತದೆ. ಆ ಕಾರಣವಿಟ್ಟುಕೊಂಡೇ ಹಳ್ಳಿಗರು ತಮ್ಮೂರಿನ ಉಡಾಳರಿಗೆ, ಘಟಿಂಗರಿಗೆ, ಗುಂಡಾಗಳಿಗೆ ‘ಅಂವಾ ಹೊಕ್ಕಾನಳ ಬೇವಿನ ತೊಪ್ಪಲದೊಳ್ಗ’ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ.

ಇಂಥ ಜೋಕುಮಾರ ಹುಟ್ಟುವದು ಬಡಿಗರ ಮನೆಯಲ್ಲಿ. (ವಿಶ್ವಕರ್ಮರ) ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಚಾಜ(ಗೌರವ ಧನ)ದೊಂದಿಗೆ ಎಲೆ, ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಎಣ್ಣೆ, ಬೆಲ್ಲ ಅಕ್ಕಿ ಮುಂತಾದವುಗಳನ್ನು) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟು ಕೊಂಡು ಮೊದಲು ಗೌಡರ ಮನೆಗೆ (ಒಂದೊಂದು ಊರಿನಲ್ಲಿ ಬೇರೆ ಬೇರೆ ಬಾಬುದಾರರೂ ಇರಬಹುದು) ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದ ನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ, ಬೆಣ್ಣೆಯನ್ನು ಬಾಯಿಗೆ ಸವರಿ ೭ ದಿನಗಳ ಕಾಲ ಊರಿನ ಪ್ರತಿ ಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.

ವಾಲ್ಮೀಕಿ ಜನಾಂಗದ, ಕೋಲಕಾರ, ಅಂಬಿಗೇರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ಮಾಡುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ‘ಅಡ್ಡಡ್ಡ ಮಳೆಯಾಗಿ ಒಡ್ಡುಗಳೆಲ್ಲಾ ತುಂಬಿ ಗೊಡ್ಡೆಮ್ಮೆ ಹೈನಾಗಿ’ ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು, ಹುಲುಸಾಗುತ್ತವೆಂದು, ಧಾನ್ಯಗಳಿಗೆ ಹುಳು ಹತ್ತುವದಿಲ್ಲವೆಂಬುದು ರೈತಾಪಿ ವರ್ಗದ ನಂಬುಗೆ. ಬೇವಿನ ಸೊಪ್ಪು ಕಹಿಯಾದ ಹಾಗೂ ಔಷಧಿಯ ಸಸ್ಯವಾಗಿರುವುದರಿಂದ ಧಾನ್ಯಗಳಿಗೆ ಹುಳು, ನುಶಿ, ಕ್ರಿಮಿಕೀಟಗಳ ಬಾಧೆ ತಗಲುವುದಿಲ್ಲವೆಂಬುದನ್ನು ಖಚಿತ ಪಡಿಸಿಕೊಂಡೇ ಈ ಪದ್ಧತಿ ಅನುಸರಿಸುತ್ತ ಬಂದಿರಬಹುದಲ್ಲವೇ?

ಊರಲ್ಲಿ ಏಳು ದಿನ ತಿರುಗಾಡಿದ ನಂತರ ತಳವಾರರ ಮನೆಯಲ್ಲಿ ಬುಟ್ಟಿ ತುಂಬುವಷ್ಟು ಜೋಳದ ಕಡುಬು ಮಾಡಿ ಜೋಕುಮಾರನ ಮೈ ಮೇಲಿನ ವಸ್ತುಗಳನ್ನು ತೆಗೆದು ಆತನ ಕುತ್ತಿಗೆ ಮುಚ್ಚುವವರೆಗೆ ಕಡುಬುಗಳನ್ನು ಪೇರಿಸಿ ಇಡಲಾಗುತ್ತದೆ. ಒಂದು ಕೈಯಲ್ಲಿ ಕೊಬ್ಬರಿ ಬಟ್ಟಲನ್ನು, ಇನ್ನೊಂದು ಕೈಯಲ್ಲಿ ದೀಪ ಹಚ್ಚಿದ ಪರಟೆಯನ್ನು ಕೊಡಲಾಗುತ್ತದೆ. ಆ ನಂತರದಲ್ಲಿ ಗಂಡಸೊಬ್ಬನು ಜೋಕುಮಾರನನ್ನು ಕುಳ್ಳರಿಸಲಾಗಿದ್ದ ಬುಟ್ಟಿಯನ್ನು ಹೊತ್ತಿಕೊಂಡು ನಡೆಯುತ್ತಾನೆ. ಹೀಗೆ ಕತ್ತಲಲ್ಲಿ ಸಾಗುವ ಜೋಕುಮಾರನನ್ನಾಗಲೀ, ಆತನ ಕೈಯಲ್ಲಿಯ ದೀಪವನ್ನಾಗಲೀ ಯಾರೂ ನೋಡುವಂತಿಲ್ಲ. ನೋಡಿದರೆ ಅಪಶಕುನವಷ್ಟೇ ಅಲ್ಲ, ವರ್ಷ ತುಂಬುವುದರೊಳಗಾಗಿಯೇ ನೋಡಿದಾತ ಲೈಂಗಿಕ ಹಗರಣದಲ್ಲಿ ಸಿಲುಕಿ ಅಪಮಾನವಾಗಿ ಇಲ್ಲವೇ ಪ್ರಾಣ ಕಳೆದುಕೊಳ್ಳುವ ಅಪಾಯವೂ ಉಂಟೆಂದು ಹೇಳಲಾಗುತ್ತದೆ. ಆ ಕಾರಣಕ್ಕಾಗಿಯೇ ಜೋಕುಮಾರನು ಹತ್ಯೆಯಾಗುವ ದಿನ ಆತ ಹಾಯ್ದು ಹೋಗುವ ದಾರಿ ಯುದ್ಧಕ್ಕೂ ಮೊದಲೇ ಒಬ್ಬ ‘ಜೋಕುಮಾರ ಬರ್ತಾನ, ಲಗೂ ಬಾಗ್ಲಾ ಹಾಕೊರಿ’ ಎಂದು ಹೇಳುತ್ತಾ ಹೋಗುತ್ತಾನೆ. ಹೀಗಾಗಿ ಆ ರಸ್ತೆಯ ಇಕ್ಕೆಲದ ಮನೆಗಳವರು ಬೇಗನೆ ಬಾಗಿಲು ಭದ್ರಪಡಿಸುತ್ತಾರೆ. ಚಾವಡಿ, ಗುಡಿ, ಗುಂಡಾರಗಳಲ್ಲಿ ಮಲಗುತ್ತಿರುವವರೂ ಅಂದು ಮನೆ ಸೇರುತ್ತಾರೆ.

ಆದರೂ ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತ ಹೊಲಗೇರಿಗೆ ಕರೆತರಲಾಗುತ್ತದೆ. ಹೊಲಗೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯಲಾಗುತ್ತದೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮೂಳ್ಳಿನ ಕಂಟಿಯನ್ನಿಟ್ಟಿರುತ್ತಾರೆ. ವೇಶ್ಯೆಯರು ಚಾವಡಿಯಲ್ಲಿ ‘ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ’ ಎಂದು ಭೂಮ್ಯಾಕಾಶಗಳು ಬಿರಿಯುವಂತೆ ಬಾಯಿ ಮಾಡ ತೊಡಗುತ್ತಾರೆ.

ಅದನ್ನು ಕೇಳಿದವರೆಲ್ಲಾ ಓಡಿ ಬಂದು ಜೋಕುಮಾರನನ್ನು ಒನಕೆಯಿಂದ ಹಿಗ್ಗಾ ಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ. ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ನದಿ ದಂಡೆಗೋ, ಕೆರೆಯ ಸಮೀಪವೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಯಾಕೆಂದರೆ ಕೊಲೆಯಾದ ಜೋಕುಮಾರ ನರಳುತ್ತಿರುತ್ತಾನೆಂದೂ, ತಮ್ಮ ಕೆಲಸದ ಸ್ಥಳದಲ್ಲಿಯೇ ಆತನ ಶವ ಬಿದ್ದಿರುವುದರಿಂದ ತಮಗೆ ಮೈಲಿಗೆ ಎಂದೂ ಹೇಳುವ ಅವರು ಮೂರನೇ ದಿನ ಮನೆ ಮನೆಗೆ ತಿರುಗಿ ಜೋಳ, ಉಪ್ಪು, ಮೆಣಸಿನಕಾಯಿ ಸಂಗ್ರಹಿಸಿ ಜೋಳದ ನುಚ್ಚು ಮಾಡುತ್ತಾರೆ. ನಂತರ ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ, ಎಡೆ ತೋರಿಸಿ ‘ದಿನ’ ಮಾಡಿ ಮುಗಿಸಿ ತಮ್ಮ ಕೆಲಸ ಪ್ರಾರಂಭಿಸುತ್ತಾರೆ.

ಜೋಕುಮಾರ ಬರುವ ಸಂದರ್ಭ, ಆತ ಸಾಯುವ ಸಂದರ್ಭ ಒಟ್ಟಾರೆ ಜೋಕುಮಾರನ ಆಚರಣೆಯ ಕಾಲ ಸಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಭೂಮಿಗೆ ಬರುವುದರಿಂದ ಭೂಮಿಯ ತಾಪಮಾನ ಹೆಚ್ಚಾಗುವುದೂ, ಒಕ್ಕಲಿಗರಿಗೆ ಮಾತು ಕೊಟ್ಟ ಮಳೆಗಳೆಂದೇ ಹೆಸರು ಮಾಡಿರುವ ಉತ್ತರಾ, ಹಸ್ತಾ ಮಳೆಗಳೂ ಇದೇ ಸಂದರ್ಭದಲ್ಲಿ ಮಳೆ ಸುರಿಸಲು ಅನುಕೂಲಕರ ವಾತಾವರಣ ಈ ಸಮಯದಲ್ಲಿ ನಿರ್ಮಾಣಗೊಳ್ಳುವುದೇ ‘ಜೋಕುಮಾರ ಮಳಿ ಕೊಟ್ಟ ನೋಡ’ ಎನ್ನಲೂ ಕಾರಣವಾಗಿರಬಹುದು. ‘ದುಷ್ಟರು ಜಾಗಾ ಖಾಲಿ ಮಾಡಿದೊಡನೆ ಸುಕಾಲ ಬರ್ ತೈತಿ ನೋಡ್ರೀ’ ಎನ್ನುವ ಮಾತು ಕೂಡಾ ಇದಕ್ಕೆ ಪೂರಕವಾಗಿರಬಹುದೇನೋ ಎಂಬುದು ಕೂಡಾ ಇಲ್ಲಿ ಆಲೋಚನೆ ಗಿಂಬು ಕೊಡುವಂತಹುದಾಗಿದೆ.