ಇಂದಿನ ದಿನ ಬಳಕೆಯ ಶಬ್ದಗಳಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣಗಳು ನಮಗರಿವಿಲ್ಲದಂತೆಯೇ ನಮ್ಮ ಗ್ರಾಮೀಣ ಸಂಸ್ಕೃತಿಯ ಒಳಹರಿವಿನಲ್ಲಿ ನುಸುಳುತ್ತಿದ್ದರೂ ನಮ್ಮ ಗ್ರಾಮೀಣ ಜನ ತಮ್ಮ ತಲೆಗೆ ಅವುಗಳನ್ನು ತಾಕಿಸಿಕೊಳ್ಳದೆ ನಿಚ್ಚಳವಾಗಿ ಪ್ರಕೃತಿ ಆರಾಧನೆಯ ಸಂಸ್ಕೃತಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಾರೆ.

ಈ ಜಗದ ಜೀವಿಗಳಿಗೆಲ್ಲ ಅನ್ನ, ನೀರು, ಗಾಳಿ, ಬೆಳಕು ನೀಡಿ ಸಂರಕ್ಷಿಸುವ, ಪಾಲನೆ ಪೊಷಣೆ ಮಾಡುವ ಈ ಪ್ರಕೃತಿ ಅವರಿಗೆ ತಾಯಿಯ ಸ್ವರೂಪದ ದೇವರು.

ಪ್ರಕೃತಿಯಲ್ಲಿಯ ಭೂಮಿ, ಗಿಡಮರ, ಹೊಳೆಗಳನ್ನೆಲ್ಲವನ್ನು ಅವರು ದೇವರೆಂದು ಗೌರವಿಸುತ್ತಾರೆ. ಇಲ್ಲಿಯ ಯಾವುದೇ ವಸ್ತುಗಳನ್ನು ನಾಶಮಾಡುವುದು ಪಾಪವೆಂದು ಅವರ ನಂಬಿಕೆ. ವರ್ಷಕ್ಕಿಷ್ಟೇ ಬೆಳೆ ಬೆಳೆಯಬೇಕು, ಅದಕ್ಕಿಂತಲೂ ಹೆಚ್ಚು ಉತ್ತಿ, ಬಿತ್ತಿ ಭೂಮಿಯನ್ನು ಶ್ರಮಕ್ಕೀಡು ಮಾಡಬಾರದು, ತಮಗೆ ಅಪಾಯಕಾರಿಯಾದ ಕ್ರೂರ ಮೃಗಗಳ ಹೊರೆತು ಸಾಧು ಪ್ರಾಣಿಗಳನ್ನು ಕೊಲ್ಲಕೂಡದು, ಮರ ಕಡಿಯುವ ಅವಶ್ಯಕತೆ ಬಿದ್ದಲ್ಲಿ ಕಡಿಯುವ ಮರವನ್ನು ಮೊದಲು ಪೂಜಿಸಿ, ಒಂದು ಸಸಿ ನಡಟ್ಟ ನಂತರ ಮರ ಕಡಿದು ಪ್ರಾಕೃತಿಕ ಸಮತೋಲನ ಕಾಯ್ದುಕೊಂಡು ತಮಗರಿವಿಲ್ಲದಂತೆಯೇ ಪರಿಸರ ಪ್ರೇಮಿಗಳು, ಆರ್ಥಿಕ ತಜ್ಞರು, ಅಹಿಂಸಾವಾದಿಗಳೂ ಆದವರು.

ಕೃಷಿ ಚಟುವಟಿಕೆಗಳಲ್ಲಿ ತೊಡಗುವಾಗ ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದಕ್ಕೂ ಪೂಜೆ, ಆರಾಧನೆ ಗೌರವ ಸಮರ್ಪಣೆ, ಎಲ್ಲದಕ್ಕೂ ಭಾವುಕತೆಯ ತಳಕು. ಅವುಗಳಿಗಾಗಿಯೇ ಒಂದೊಂದು ಹಬ್ಬ, ಒಂದೊಂದು ಉತ್ಸವ. ಹೀಗೆ ಹಿಂಗಾರಿನ ಹಂಗಾಮಿನ ಕೊನೆಯಲ್ಲಿ ಬರುವ ಭಾರತ ಹುಣ್ಣಿಮೆ ಮಣ್ಣಿನ ಮಕ್ಕಳ ಅಪರೂಪದ ಹಬ್ಬ. ನಾಲ್ಕು ದಿನಗಳ ಕಾಲ ಚಂದಿರನ ಬೆಳದಿಂಗಳಲ್ಲಿ ಬಾಗಿಲು ಮುಂದೆ ರಂಗವಲ್ಲಿ ಇಟ್ಟು ಕೊನೆಯದಿನ ರಾತ್ರಿ ಗಂಗಾಳ ಬಾರುಸುತ್ತಾ ‘ಒಳಗಿನ ದೇವ್ರ ಹೊಗರ ಹೊರಗಿನ ದೇವ್ರ ಒಳಗ’ ಎಂದು ಹುಮ್ಮಸ್ಸಿನಿಂದ ದೇವರ ಮನೆಯಿಂದ ಹೊರಟು ಮನೆಯ ಮುಖ್ಯ ಬಾಗಿಲವರಗೆ ಕೂಗುತ್ತಾ ಹೊಬಂದು ಒಳಹೋಗುವುದು ಎಷ್ಟೊಂದು ಅರ್ಥಪೂರ್ಣ, ಭಕ್ತಿಪೂರ್ಣ.

ಭಾರತದ ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆಯೇ ಹಿಂಗಾರಿನ ಬೆಳೆಗಳಾದ ಬಿಳಿಜೋಳ, ಕಡಲೆ, ಕುಸುಬೆ, ಅಗಸೆ, ಗೋಧಿ ಕೊಯ್ಲಿಗೆ ಬಂದು ಬಿಟ್ಟಿರುತ್ತವೆ. ಹೆಚ್ಚು ಕಡಿಮೆ ರಾಶಿ ಮುಗಿಯುತ್ತಾ ಬಂದು ಧಾನ್ಯ ಸಂಗ್ರಹಣೆಗೆ ಕೃಷಿಕರು ತೊಡಗಿರುತ್ತಾರೆ. ಹೊಸ ಧಾನ್ಯಗಳನ್ನು ಈ ಹಿಂದೆ ಶೇಖರಿಸಿಡಲಾದ ಕಣಜ, ಹಗೆವು, ಬಳತಗಳಲ್ಲಿ ತಂದು ಹಳೆಯ ಧಾನ್ಯದೊಡನೆ ಸೇರಿಸುವಂತಿಲ್ಲ. ಹಾಗೆ ಹಳೆಯ ಧಾನ್ಯದೊಡನೆ ಹೊಸ ಧನ್ಯ ಸೇರಿಸಿದರೆ ಕೆಡುವ ಸಾಧ್ಯತೆಯೂ ಉಂಟೆಂದು ಗ್ರಾಮೀಣ ಜನತೆಯ ವೈಜ್ಞಾನಿಕ ಅರಿವು. ಹಾಗಾಗಿಯೇ ಹಳೆಯ ಧಾನ್ಯಗಳನ್ನು ಹೊರತೆಗೆದು ದಿನ ನಿತ್ಯದ ಬಳಕೆಗೆ, ಆಯಗಾರರಿಗೆ, ದಾನ ಧರ್ಮ ಕಾರ್ಯಕ್ಕೆ, ಇನ್ನೂ ಹೆಚ್ಚಿಗಿದ್ದಲ್ಲಿ ಮಾರಾಟ ಮಾಡಲು ಸೂಚಿಸುವುದೇ ‘ಒಳಗಿನ ದೇವ್ರ ಹೊರಗೆ’ ಎಂಬ ಮಾತು, ಭೂಮಿ ತಾಯಿ ನಮಗೆ ಕೊಟ್ಟಿದ್ದೆಲ್ಲ ಪ್ರಸಾದ ರೂಪದ ದೇವರು. ಕಳೆದ ವರ್ಷ ಸಂಗ್ರಹಿಸಿಟ್ಟಿದ್ದೆಲ್ಲಾ ‘ಒಳಗಿನ ದೇವರು’ ಈ ವರ್ಷ ಹೊಲದಿಂದ ಮನೆಯೊಳಗೆ ಪ್ರವೇಶಿಸುತ್ತಿರುವ ಹೊಸ ಧಾನ್ಯಗಳು, ಅವುಗಳನ್ನು ಸ್ವಾಗತಿಸಿ ಒಳಗೆ ಕರೆಯುವುದೇ ‘ಹೊರಗಿನ ದೇವರು ಒಳಗೆ’ಯಾಗಿದೆ. ನಮ್ಮ ಹೊಲದಲ್ಲಿ ಬೆಳೆದ ಎಲ್ಲ ಬೆಳೆಗಳ ಒಂದೊಂದು ತೆನೆಯನ್ನು ತಂದು ತೋರಣ ಮಾಡಿಯೇ, ಗುಚ್ಚ ಮಾಡಿಯೋ ಬಾಗಿಲಿನ ಹಣೆ ಪಟ್ಟಿಗೆ, ದೇವರ ಜಗುಲಿಯ ಮೇಲೆಕಟ್ಟಿ ಪೂಜಿಸುತ್ತಾರೆ. ಜೊತೆಗೆ ಈ ತೋರಣ ಅಥವಾ ಗುಚ್ಚದಲ್ಲಿ’ಶಕ್ತಿ ಮಾತೆ’ಯ ಸಂಕೇತವಾಗಿ ಬನ್ನಿ ಪತ್ರೆ, ಪ್ರಿಯವಾದ ಎಕ್ಕೆ ಹೂವನ್ನು ಸೇರಿಸುತ್ತಾರೆ. ಹೀಗಾಗಿ ಇದು ‘ತೆನೆಕಟ್ಟುವ ಹಬ್ಬ’ ಅಥವಾ ‘ದೇವ್ರ ಕರೆದುಕೊಳ್ಳುವ ಹಬ್ಬ’.

ನಾಲ್ಕು ದಿನಗಳ ಕಾಲ ಬಾಗಿಲಿನ ಮುಂದೆ ರಾತ್ರಿ ಹಾಕುವ ರಂಗುವಲ್ಲಿಯಲ್ಲಿ ಏನೆಲ್ಲಾ ಚಂದಚಂದದ ಚಿತ್ತಾರ ಬಿಡಿಸಿಟ್ಟರೂ, ಚಿತ್ತಾರದ ಪಕ್ಕದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಪಾದ(ಒಂದು ಜೊತೆ ಹೆಜ್ಜೆಯ ಗುರುತುಗಳು) ಹಾವು, ಚೇಳುಗಳ ಚಿತ್ರ ಇರಲೇಬೇಕು. ನಮ್ಮ ಬದುಕಿಗೆ ಆಸರೆಯಾದ ಸೂರ್ಯ, ಚಂದ್ರ, ನಕ್ಷತ್ರಗಳೊಡನೆ ಹೊಲದಲ್ಲಿ ಹಗಲಿನಲ್ಲಿ, ಕಾರಿರುಳಿನಲ್ಲಿ ಶ್ರಮಪಡುವಾಗ ನಮಗೆ ಅಪಾಯವನ್ನುಂಟು ಮಾಡದ ಹಾವು, ಚೇಳುಗಳನ್ನು ರಂಗವಲ್ಲಿಯಲ್ಲಿ ಚಿತ್ರ ಬರೆದು ಪೂಜಿಸಿ, ಅವುಗಳಿಗೂ ಕೃತಜ್ಞತೆ ಸಲ್ಲಿಸುವುದು. ಈ ನೆಲದ ಜನರ ಮುಗ್ದ ಭಕ್ತಿ ಗಮನಿಸುವಂತಾಗಿದೆ. ಜೊತೆಯಲ್ಲಿ ಪಾದದ(ಹೆಜ್ಜೆ ಗುರುತುಗಳು) ಆ ಊರಿನ ಸತ್ಪುರುಷರಿಗೆ ಸಂಬಂಧಿಸಿದ್ದು,’ಗುಡ್ಡದ ವಾರ್ಯಾಗ ಪಾದ ಮೂಡ್ಯಾವ ಪರಿ ಪರಿ/ಶರಣ ಸಿದ್ದಪ್ಪ ಹಾದ ಹೋಗ್ಯಾನ ಇಲ್ಲಿ’ ಎಂದು ಹಾಡಿ ಅಲ್ಲಿ ತಮ್ಮ ಅಸಾಮಾನ್ಯ ಪವಾಡಗಳಿಂದ, ಅಲೌಕಿಕ ಜ್ಞಾನದಿಂದ ಆ ನೆಲವನ್ನು ಪಾವನ ಗೊಳಿಸಿದ ಸಿದ್ದಪುರುಷರಿಗೆ ತಮ್ಮ ಭಕ್ತಿ ತೋರುತ್ತಾರೆ.

ಐದನೆಯ ದಿನ (ಹುಣ್ಣಿಮೆಯ ದಿನ) ಮಣ್ಣಿನ ಗೋಡೆ ಇದ್ದಲ್ಲಿ ಸುಣ್ಣದಿಂದ, ಸುಣ್ಣದ ಗೋಡೆ ಇದ್ದಲ್ಲಿ ಕೆಮ್ಮಣ್ಣಿನಿಂದ ಚುಕ್ಕೆಗಳನ್ನಿಟ್ಟು ತೇರಿನ ಚಿತ್ರ ಬಿಡಿಸುತ್ತಾರೆ. ರಾಜ ಮಹಾರಾಜರು ವಿಜಯದ ಸಂಕೇತವಾಗಿ ಸಿಮೋಲ್ಲಂಘನೆ ನಡೆಸಿದರೆ ರೈತಾಪಿ ವರ್ಗ ಯುಗಾದಿಯ ಪ್ರತಿಪದೆಯಂದು ಹೊಸ ವರ್ಷ ಪ್ರವೇಶಿಸುವ ಮುನ್ನವೇ ಹಳೆಯ ವರ್ಷದ ತೇರನ್ನೆಳೆದುಕೊಂಡು ಬರುತ್ತಾರೆ. ತೇರಿನಲ್ಲಿ ಪ್ರತಿಷ್ಠಿತಗೊಂಡಿರುವ ಚಿತ್ರ ಸೃಷ್ಠಿಗೆ ಕಾರಣವಾಗಿರುವ ಪ್ರಕೃತಿ ಪುರುಷನ ಸಂಕೇತವಗಿರುವ ಈಶ್ವರನದು. ತೇರಿನ ಪಕ್ಕದಲ್ಲಿ ಮೇಲೆ ವಿವರಿಸಿದ ಎಲ್ಲಾ ಚಿತ್ರಗಳೂ ಇರಲೇಬೇಕು. ತೇರಿನ ಚಿತ್ರಕ್ಕೆ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು, ಅದೇ ಹೊಸ ಧಾನ್ಯಗಳಿಂದ ತಯಾರಿಸಲಾದ ಪಕ್ವಾನ್ನಗಳ ಎಡೆ ತೋರಿಸಿ ನಮಿಸುತ್ತಾರೆ.