ಈ ಜಗದ ಜೀವಿಗಳಿಗೆಲ್ಲಾ ಅನ್ನ, ನೀರು, ಗಾಳಿ, ಬೆಳಕು, ನೀಡಿ ನಮ್ಮನ್ನು ಸಂರಕ್ಷಿಸುವ, ಪಾಲನೆ, ಪೋಷಣೆ ಮಾಡುವ ಈ ಪ್ರಕೃತಿ ಮಣ್ಣಿನ ಮಕ್ಕಳಿಗೆ ತಾಯಿ ಸ್ವರೂಪದ ದೇವರು. ಇಲ್ಲಿರುವ ಗಿಡ, ಮರ, ನದಿ, ಹಾವು ಚೇಳುಗಳೆಲ್ಲವೂ ಅವರಿಗೆ ದೇವರೇ ಆಗಿವೆ. ಇಲ್ಲಿಯ ಯಾವುದೇ ವಸ್ತುವಾಗಲೀ ಪಶು ಪಕ್ಷಿಯಾಗಲೀ ಯಾವುದನ್ನೂ ನಾಶಪಡಿಸಿದರೆ ಅದು ಪಾಪವೆಂದೇ ಅವರ ಭಾವನೆ. ಹೀಗಾಗಿ ಒಂದರ್ಥದಲ್ಲಿ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವ ಪರಿಸರ ತಜ್ಞರೇ ಆಗಿದ್ದಾರೆ. ಆ ಕಾರಣಕ್ಕಾಗಿಯೇ, ನೋಡಿದರೆ ಸಾಕು ಬೆಚ್ಚಿ ಬೀಳುವಂತಹ ನಾಗರಹವಿಗೂ ಹಾಲೆರೆದು ಅದನ್ನು ತನ್ನ ಮಿತ್ರನನ್ನಾಗಿಸಿಕೊಳ್ಳಲು ಯತ್ನಿಸಿಕೊಳ್ಳುತ್ತಾನೆ ಒಕ್ಕಲಿಗ.

ನಾಗರ ಪಂಚಮಿಯ ಸಂದರ್ಭದಲ್ಲಿ ಹಾವಿನ ಮೂರ್ತಿಯನ್ನು ಮಾಡಿ ಸಾಲಂಕೃತ ಪೂಜೆ ಮಾಡಿ ಎರಡು ದಿನ ಹಾಲೆರೆದು ಪಂಚಮಿ ಹಬ್ಬ ಆಚರಿಸುತ್ತಾನೆ. ನಮ್ಮ ಬೆಳೆಗಳಿಗೆ ಹಾನಿ ಮಾಡುವ ಇಲಿ, ಹೆಗ್ಗಣ, ಕ್ರೀಮಿಕೀಟಗಳನ್ನು ತಿಂದು ನಮ್ಮ ಬೆಳೆಗಳನ್ನು ಜೋಪಾನ ಮಾಡುವ ಹಾವಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ, ಹೊಲಗಳಲ್ಲಿ ರಾತ್ರಿ ಹಗಲೆನ್ನೆದೇ ಕೆಲಸದಲ್ಲಿ ತೊಡಗಿರುವಾಗ ಹಾವುಗಳಿಂದ ತನಗೇನೂ ಅಪಾಯವಾಗದಿರಲಿ ಎಂಬ ಮುಗ್ದ ಭಕ್ತಿಯನ್ನೂ ಇಲ್ಲಿ ನಾವು ಕಾಣಬಹುದಾಗಿದೆ.