ಅಶ್ವಿಜಮಾಸ ಕೃಷ್ಣ ಪಕ್ಷದ ಚತುರ್ದಶಿ (ನರಕಚತುರ್ದಶಿ) ದಿನದಿಂದ ದೀಪಾವಳಿಯ ಪ್ರತಿಪದೆಯವರೆಗೆ ಮೂರು ದಿನಗಳ ಕಾಲ ದನದ ಗ್ವಾದಲಿಯಲ್ಲಿ (ಕೊಟ್ಟಿಗೆ) ಪಂಡರವ್ವನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಶೆಗಣಿಯನ್ನು ನೀರು ಹಾಕಿ ಮಿಜ್ಜಿ ಗುಳ್ಳವ್ವನ ಆಕಾರದಲ್ಲಿಯೇ ಪಂಡರವ್ವನನ್ನು ಮಾಡುದರೂ ತಲೆಯ ಮೇಲೆಅದೇ ಶೆಗಣಿಯಿಂದ ಪುಟ್ಟಿಯೊಂದನ್ನು ಮಾಡಿರುತ್ತಾರೆ. ಇದು ಪಾಂಡವರು ವನವಾಸದಲ್ಲಿದ್ದಾಗ ಕುಳ್ಳು (ಬೆರಣಿ) ಆರಿಸಲು ಹೋಗುತ್ತಿದ್ದರೆಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಪಂಡರವ್ವಗಳನ್ನು ಇಂತಿಷ್ಟು ಪ್ರಮಾಣದಲ್ಲಿ, ಇಂತಿಷ್ಟು ಸಂಖ್ಯೆಯಲ್ಲಿ ಮಾಡಬೇಕೆಂಬ ನಿಯಮವೇನಿಲ್ಲ. ಸಿಕ್ಕಷ್ಟು ಪ್ರಮಾಣದ ಶೆಗಣಿಯಿಂದ ಪಂಡರವ್ವಗಳು ಸಿದ್ಧಗೊಳ್ಳುತ್ತವೆ. ಗ್ವಾದಲಿಯ ಲಕ್ಷ್ಮವ್ವನ ಕೆಳಗೆ ಗೋಣಿ ತಟ್ಟುಹಾಕಿ ಪಂಡರವ್ವಗಳನ್ನು ಪ್ರತಿಷ್ಠಾಪಿಸುತ್ತಾರೆ. ಪಂಡರವ್ವಗಳು ಇಲ್ಲಿ ದೇವರಾಗಿ ಪೂಜೆಗೊಳ್ಳತ್ತಲಿದ್ದರೂ ಅವರೂ ನಮ್ಮಂತೆಯೇ ಸಂಸಾರಸ್ಥರು, ನಮ್ಮ ಬದುಕಿನಂತಯೇ ಅವರ ಬದುಕು ಕೂಡಾ ಎನ್ನುವುದನ್ನು ಸಾಬೀತು ಪಡಿಸುವಂತೆ ಅವರೂ ಕಾಳು ಕುಟ್ಟುವ, ಬೀಸುವ, ಮೊಸರು ಕಡೆಯುವ, ಎತ್ತುಗಳನ್ನು ಹೂಡಿ ಬೇಸಾಯ ಮಾಡುವ, ರಾಶಿ ಮಾಡುವ ಜೋಕಾಲಿ ಆಡುವ, ಪಗಡಯಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಅವರ ತೊಡಗಿರುವಂತೆ ನಿರ್ಮಿಸುತ್ತಾರೆ. ‘ಅದೇನು ಬಿಡು ಹೆಂಡಿ ಪಂಡ್ರವ್ವ ಇದ್ದಂಗ’ ಎಂದು ಮೂಗು ಮುರಿಯುವರಿಗೆ ನಮ್ಮ ಗ್ರಾಮೀಣ ಮಹಿಳೆಯರು ಅಪಾರ ಶೃದ್ಧೆ, ಭಕ್ತಿಗಳ ಮೂಲಕ ಶೆಗಣಿಯಲ್ಲಿಯೇ ತಮ್ಮ ಕಲೆಯ ಮೂಲಕ ಚಾಟಿ ಏಟು ಕೊಡುತ್ತಾರೆ.

ತೊಲಬಾಗಿಲಿನಿಂದ ಹಿಡಿದು ದೇವರ ಕೋಣೆ ಸಹಿತ ಮನೆಯ ಎಲ್ಲಾ ಬಾಗಿಲುಗಳ ಎಡಬಾಗದಲ್ಲಿ ಪಂಡರವ್ವನನ್ನು ಪ್ರತಿಷ್ಠಾಪಿಸುವುದು ನಮ್ಮ ಜನತೆಯ ಮುಗ್ಧ ಭಕ್ತಿಗೆ ಸಾಕ್ಷಿ. ವಿಭೂತಿ, ಗಂಧ, ಕುಂಕುಮಗಳಿಂದ ಪೂಜೆಗೊಳ್ಳುವ ಪಂಡರವ್ವಗಳಿಗೆ ಗುಲಾಬಿ, ಸೇವಂತಿ, ಸಂಪಿಗೆ ಹೂಗಳ ಅಲಂಕಾರವಿರುವುದಿಲ್ಲ. ನಮ್ಮ ಹಳ್ಳಿಯ ಸಂಪತ್ತುಗಳಾದ ಅವರೆ ಹೂ (ಹೊನ್ನವರೆ), ಬೇಲಿಯ ಮೇಲಿನ ಉತ್ರಾಣಿ, ಚೆಂಡು ಹೂವುಗಳಿಂದಲೇ ನಮ್ಮ ಪಂಡ್ರವ್ವ ಅಲಂಕಾರ ಗೊಳ್ಳುವುದು. ಹಿಂದಿನ ದಿನದ ಪಂಡ್ರವ್ವಗಳನ್ನು ತೆಗೆಯದೇ ಮತ್ತೆರಡುದಿನಗಳ ಕಾಲ ಅವುಗಳ ಪಕ್ಕದಲ್ಲಿಯೇ ಹೊಸ ಪಂಡ್ರವ್ವಗಳನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಾರೆ. ದೀಪಾವಳಿಯ ಪ್ರತಿಪದೆಯ ದಿನ ತಮ್ಮ ಹೊಲದಲ್ಲಿಯ ಜೋಳದ ದಂಟುಗಳನ್ನು ತಂದು ಪಂಡ್ರವ್ವಗಳ ಮೇಲೆ ಹಂದರ ಹಾಕಿ ಹಂದರದ ಮುಂದೆ ಅಕ್ಕಿ, ಬೇಳೆ, ಬೆಲ್ಲಬೆರೆಸಿದ ಸಣ್ಣ ಮಡಿಕೆಯೊಂದನ್ನು ಬೇಯಿಸಲು ಇಡುತ್ತಾರೆ. ಮಧ್ಯಾಹ್ನ ಹಬ್ಬಕ್ಕೆ ಮಾಡಿದ ಪಕ್ವಾನ್ನಗಳ ಎಡೆ ತೋರಿಸಿ ಪಂಡ್ರವ್ವಗಳನ್ನು ಮಾಳಿಗೆ ಮೇಲೆ, ಕುಂಬಿಯ ಮೇಲೆ ಸಾಲಸಾಲಾಗಿ ಜೋಡಿಸಿಡುತ್ತಾರೆ. ಮುಂದೆ ಬೇಯಿಸಿ ಇಟ್ಟಿದ್ದ ಅನ್ನದ ಮಡಿಕೆಯನ್ನು ಗಂಡಸರು ಹೊಲಕ್ಕೊಯ್ದು ಚರಗ ಚಲ್ಲಿ ಬರುತ್ತಾರೆ.

ಮುಂಜಾನೆ ಮೇಯಲು ಗುಡ್ಡಕ್ಕೆ ಹೋದ ದನಕರುಗಳು ತಿರುಗಿ ಮನೆಗೆ ಬರುವದರೊಳಗಾಗಿ ಪಂಡ್ರವ್ವಗಳನ್ನು ಮಾಳಿಗೆ ಮೇಲೇರಿಸುವ, ಚರಗ ಚಲ್ಲಿ ಬರುವ ಕಾರ್ಯಗಳು ಮುಗಿಯಲೇಬೇಕು. ಹೀಗೆ ನಮ್ಮ ಜಾನಪದರು ದೇವರನ್ನಾಗಿ ಕಾಣುವ ಪಾಂಡವರನ್ನು ಕೂಡಾ ತಮ್ಮಂತೆಯೇ ಶ್ರಮಿಸುವ, ನೋವು-ನಲಿವು ಅನುಭವಿಸುವ ಸಾಮಾನ್ಯರನ್ನಾಗಿಸಿಕೊಳ್ಳುವುದನ್ನು ಕೂಡಾ ನಮ್ಮ ಗ್ರಾಮೀಣ ಸಂಸ್ಕೃತಿಯಲ್ಲಿ ಕಾಣಬಹುದಾಗಿದೆ.