ಎಳ್ಳಮವಾಸ್ಯೆಯ ಆಸುಪಾಸಿನಲ್ಲಿ ಬರುವ ಇನ್ನೊಂದು ದೊಡ್ಡ ಹಬ್ಬ ಮಕರ ಸಂಕ್ರಾಂತಿ. ಸೂರ್ಯದೇವ ಕರ್ಕರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಮಾಗಿಯ ಚಳಿ. ಒಂದಿಷ್ಟು ಬಿಸಿಲು ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗುತ್ತಿರುವ ಕಾಲ. ಹಿಂಗಾರಿ ಹೊಲಗಳಲ್ಲಿ ಸೀತನಿ, ಸುಲಗಾಯಿ ನಮ್ಮನ್ನು ಬಳಸಿಕೊಂಡು ಅಸ್ವಾದಿಸಿ ಎಂದು ಕರೆಕೊಡುತ್ತಿರುತ್ತವೆ.

ಸಂಕ್ರಾಂತಿಗೆ ಒಂದು ದಿನ ಮುಂಚಿತವಾಗಿ ಹೊಲದಿಂದ ಕಬ್ಬು, ಸೀತನಿ, ಸುಲಗಾಯಿ, ಗಜ್ಜರಿ ಎಲ್ಲವನ್ನು ತಂದೂ ‘ಬೋಗಿ’ಯಂದು ದೇವರಿಗೆ ಸಮರ್ಪಿಸಿ ತಾವೂ ತಿನ್ನುತ್ತಾರೆ. ಅಂದಿನಿಂದ ಜೋಳ ಬಲಿಯುವ ವವರೆಗೂ ಮಿತ್ರರೊಡನೆ, ಬಂಧು ಬಾಂಧವರೊಡನೆ ಚಕ್ಕಡಿ ಕಟ್ಟಿಕೊಂಡು ಹೋಗಿ ಸೀತನಿ ಉದುರಿಸಿ, ಮನೆಯಿಂದ ಒಯ್ದ ತರಹೇವಾರಿ ಚಟ್ನಿ, ಬೆಲ್ಲದೊಂದಿಗೆ ಸೀತನಿ ತಿನ್ನುವದು, ಮೇಲೆ ಮಜ್ಜಿಗೆ ಕುಡಿಯುವವುದು ಅದನ್ನು ಅನುಭವಿಸಿಯೇ ತಿಳಿಯಬೇಕು.

ಸಂಕ್ರಾಂತಿಯ ದಿನ ಚಕ್ಕಡಿ ಕಟ್ಟಿಕೊಂಡು ನದಿಗೆ ಹೋಗಿ ಪುಣ್ಯಸ್ನಾನ ಮಾಡುವುದೂ, ಮನೆಯಿಂದ ಒಯ್ದ ಪಕ್ವಾನ್ನಗಳನ್ನು ನದಿಯ ದಂಡೆಯ ಮೇಲೆ ಕುಳಿತು ಉಣ್ಣುವುದೂ, ದಾನಧರ್ಮ ಮಾಡುವದು ಈ ಹಬ್ಬದಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬರುತ್ತದೆ.

ಸಂಜೆ ಎಳ್ಳು, ಬೆಲ್ಲಗಳ ಮಿಶ್ರಣವನ್ನು ಪರಸ್ಪರ ವಿನಿಮಯ ಮಾಡಿಕೊಂಡು ‘ನಾವೂ ನೀವು ಎಳ್ಳು ಬೆಲ್ಲದಂಗ ಇರೂಣು’ ಎಂದು ಶುಭಾಶಯ ಕೋರುವುದು (ಎಳ್ಳು ಬೆಲ್ಲದ ಮಿಶ್ರಣ ಬಿಡಿಸಲಾಗದಂತಹದು) ಸಂಕ್ರಾಂತಿ ಹಬ್ಬದ ವೈಶಿಷ್ಟವಾಗಿದೆ.