ಕಾರಹುಣ್ಣಿಮೆಯ ನಂತರ ಮಣ್ನೆತ್ತಿನ ಅಮವಾಸ್ಯೆ, ಅಮಾವಾಸ್ಯೆ, ದಿನ ತಾವೇ ಕೈಯಿಂದ ಮಾಡಿದ ಅಥವಾ ಕುಂಬಾರರ ಮನೆಯಿಂದ ತಂದ ಬಸವಣ್ಣನನ್ನು ಪೂಜಿಸುತ್ತಾರೆ. ನಂತರದಲ್ಲಿ ಬರುವ ಪ್ರತಿ ಮಂಗಳವಾರ ಗುಳ್ಳವ್ವ ಹಾಗೂ ಬಸವಣ್ಣನನ್ನು ಪೂಜಿಸುತ್ತಾರೆ. ಇಲ್ಲಿ ಗುಳ್ಳವ್ವ ಭೂಮಿತಾಯಿಯನ್ನು ಪ್ರತಿನಿಧಿಸಿದರೆ ಬಸವಣ್ಣ ಭೂಮಿ ತಾಯಿಯನ್ನು ಉಳುವ ಎತ್ತಿನ ಸಂಕೇತವಾಗಿ ಪ್ರತಿನಿಧಿಸುತ್ತಾನೆ.

ಪ್ರತಿವಾರ ಮಂಗಳವಾರದಂದು ಸಣ್ಣ ಮಕ್ಕಳು ಊರ ಹತ್ತಿರದ ಹೊಲಗಳಿಗೆ ಹೋಗಿ ಜಿಗುಟಾಗಿರುವಂತಹ ಮಣ್ಣನ್ನು ಕಟ್ಟಿಗೆಯ ಮಣೆಯ ಮೇಲೆಯೋ, ಬುಟ್ಟಿಯಲ್ಲಿಯೋ ಸಂಗ್ರಹಿಸುತ್ತಾರೆ. ಹಾಗೆ ಸಂಗ್ರಹಿಸುವಾಗ ಹಳೆಯ, ಸತ್ವಹೀನ ಮಣ್ಣನ್ನು ಪಕ್ಕಕ್ಕೆ ಸರಿಸಿ ಗುಂಡಿ ತೆಗೆದು ಹದವಾದ ಮಣ್ಣು ದೊರಕುವಂತೆ ಜಾಗರೂಕತೆ ವಹಿಸುತ್ತಾರೆ. ಮಣ್ಣಿನ ಸಂಗ್ರಹಣೆಯ ನಂತರ ಅಲ್ಲಿಯೇ ಪೂಜಿಸಿ ತಮ್ಮೊಡನೆ ಒಯ್ದ ತಿಂಡಿ ತಿನಿಸುಗಳನ್ನು ಎಡೆ ತೋರಿಸಿ ತಾವೂ ಸ್ವೀಕರಿಸುತ್ತಾರೆ. ಸಂಗ್ರಹಿಸಿದ ಮಣ್ಣನ್ನು ಹಾಡು ಹೇಳುತ್ತಾ ಮನೆಗೆ ತಂದು ಸ್ವಲ್ಪ ಪ್ರಮಾಣ ನೀರು ಬೆರಸಿ ಹದ ಬರುವಂತೆ ಮಿಜ್ಜಿದ ಮಣ್ಣಿನಿಂದ ಗಂಡು ಮಕ್ಕಳು ಬಸವಣ್ಣನನ್ನು ಮಾಡಿದರೆ ಹೆಣ್ಣು ಮಕ್ಕಳು ಗುಳ್ಳವ್ವನನ್ನು ಮಾಡುತ್ತಾರೆ.

ಪ್ರತಿವಾರವೂ ಒಂದೊಂದು ರೀತಿಯ ಗುಳ್ಳವ್ವನ ಆಕಾರ ಬೇರೆ ಬೇರೆ ಆಗಿರುತ್ತದೆ. ಒಂದನೆಯ ವಾರ ಚೌಕಾಕಾರಾದ ಎತ್ತರದ ಗುಳ್ಳವ್ವನನ್ನು ಮಾಡಿ ‘ಕೊಂತೆವ್ವನೆಂದು’ ಕರೆಯುತ್ತಾರೆ. ಎರಡನೆಯ ವಾರ ಪಾವಟಿಗೆಯಾಕಾರದ ಗುಳ್ಳವ್ವನನ್ನು ಮಾಡಿ ‘ನೆಡಿ ಗುಳ್ಳವ್ವ’ನೆಂದು, ಗದ್ದಿಗೆ ಗುಳ್ಳವ್ವನೆಂದು ಕರೆಯುತ್ತಾರೆ. (ಪಾವಟಿಗೆ- ಮೆಟ್ಟಿಲು- ನೆಡಿ) ಮೂರನೆಯ ವಾರ ಒಂದರ ಮೆಲೊಂದು ಕಪಾಟಿನಂತೆ ಕ್ರಮೇಣವಾಗಿ ಮೇಲೆ ಹೋದಂತೆ ಕೆಳಗಿನಗಿಂತಲೂ ಕಡಿಮೆ ಪ್ರಮಾಣದ ಕಪಾಟುಗಳನ್ನು ಮಾಡಿ ಕಪಾಟು ಗುಳ್ಳವ್ವ ಅಥವಾ ಪಡಕದ ಗುಳ್ಳವ್ವನೆಂದು ಕರೆಯುತ್ತಾರೆ. ನಾಲ್ಕನೆಯವಾರ ಕುಂಬಾರರ ಮನೆಯ ತಿಗರಿಯ ಮೇಲೆ ಸಿದ್ಧಗೊಂಡು ಬರುವ ಗುಳ್ಳವ್ವನನ್ನು ತಿಗರಿ ಗುಳ್ಳವ್ವನೆಂದು ಕರೆಯುತ್ತಾರೆ. ಇತ್ತಿಚೆಗೆ ಎಲ್ಲ ವಾರಗಳಂದು ಸುಲಭದಲ್ಲಿ ದೊರೆಯುವ ತಿಗರಿ ಗುಳ್ಳವ್ವನನ್ನೇ ಪ್ರತಿಷ್ಠಾಪಿಸುವುದು ವಾಡಿಕೆಯಾಗಿ ಬಿಟ್ಟಿದೆ.

ಗುಳ್ಳವ್ವನ ಜೊತೆ ಪೂಜಿಸಲು ಬಸವಣ್ಣ (ನಂದಿ) ಇರಲೇಬೇಕು. ಭೂತಾಯಿ ಹಾಗೂ ಎತ್ತಿನ ಕೃಷಿ ಸಂಬಂಧವನ್ನು ಪೂಜಿಸುವುದೇ ಇಲ್ಲಿ ಮಣ್ಣಿನ ಮಕ್ಕಳ ಹೆಬ್ಬಯಕೆ. ವಿವಿಧ ಆಕಾರಗಳಲ್ಲಿ ಒಂದೊಂದು ಮನೆಯಲ್ಲಿ ನಿರ್ಮಾಣಗೊಂಡ ಬಸವಣ್ಣಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಎಲ್ಲವೂ ಕೆಸರಿನಿಂದಲೇ ಮಾಡಿದವುಗಳಾಗಿದ್ದರೂ ಬಣ್ಣ ಬಣ್ಣದ ಬ್ಯಾಗಡಿ ಚೂರು, ಬಣ್ಣದಲ್ಲಿ ಅದ್ದಿದ ಜೋಳ ಕುಸುಬೆ ಕಾಳುಗಳಿಂದ ಬಸವಣ್ಣನಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳಿಂದ ಸಿಂಗರಿಸಿಡುತ್ತಾರೆ. ಇದೇ ಅಲಂಕಾರ ಗುಳ್ಳವ್ವನಿಗೂ ಕೂಡಾ. ‘ಅವ್ರ ಮನಿ ಗುಳ್ಳವ್ವ ಚಂದ, ಇವ್ರ ಮನಿ ಬಸವಣ್ಣ ಚಂದ’ ಎಂದು ಮಕ್ಕಳು, ದೊಡ್ಡವರು ಮನೆ ಮನೆಗೆ ಹೋಗಿ ನೋಡಿ ಆನಂದಿಸುತ್ತಾರೆ.

ಒಂದೊಂದು ಸಾರಿ ಓಣಿಯ ಮಹಿಳೆಯರೆಲ್ಲಾ ಸೇರಿ ಸಾಮೂಹಿಕವಾಗಿ ಯಾರದೋ ದೊಡ್ಡಮನೆಯಲ್ಲಿಯೋ, ಚಾವಡಿಯಲ್ಲಿಯೋ, ಗುಡಿಗಳಲ್ಲಿಯೋ ಗುಳ್ಳವ್ವನನ್ನು ಪ್ರತಿಷ್ಠಾಪಿಸುತ್ತಾರೆ. ಪ್ರತಿಷ್ಠಾಪನೆಗೊಂಡ ಗುಳ್ಳವ್ವನಿಗೆ ರೇಷ್ಮೆ ಸೀರೆ, ಪೀತಾಂಬರ ಉಡಿಸಿ, ತಮ್ಮ ಮೈ ಮೇಲಿನ ಆಭರಣಗಳನ್ನು ತೊಡಿಸಿ ಸಂಭ್ರಮಿಸುತ್ತಾರೆ. ಸಾಮೂಹಿಕವಾಗಿ ಪ್ರತಿಷ್ಠಾಪನೆಗೊಂಡ ಗುಳ್ಳವ್ವನ ವೈಭವ ಎಷ್ಟಿರುತ್ತದೆಂದರೆ ಮದುವೆಯ ಹಂದರವನ್ನು ಮಿಕ್ಕಿ ಕಾಣುತ್ತದೆ. ಸುತ್ತಲೂ ಆಳೆತ್ತರದ ಕನ್ನಡಿಗಳ ಸಾಲು, ವಿದ್ಯುತ್ ದೀಪಗಳ ಅಲಂಕಾರವೂ ಇಲ್ಲಿರುತ್ತದೆ.

ಗಂಡಸರೂ ಇಲ್ಲಿ ಹಿಂದೆ ಬೀಳುವುದಿಲ್ಲ. ಅವರೂ ಸಾರ್ವಜನಿಕವಾಗಿ ಬಸವಣ್ಣನನ್ನು ಪ್ರತಿಷ್ಠಾಪಿಸುತ್ತಾರೆ. ಪ್ರತಿವರ್ಷ ಈ ಉದ್ದೇಶಕ್ಕಾಗಿ ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಉಳಿದ ಹಣದಿಂದ ಬೀಳಗಿಯಲ್ಲಿ ಬಸವೇಶ್ವರ ದೇವಾಲಯ, ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಿಸಿ ಪ್ರತಿವರ್ಷ ನೂರಾರು ಜೋಡಿಗಳ ಉಚಿತ ಸಾಮೂಹಿಕ ವಿವಾಹ, ಬಸವಜಯಂತಿ ಕಾರ್ಯಕ್ರಮ ನಡೆಸುತ್ತಾರೆಂದು ಈ ಗುಳ್ಳವ್ವನ ಅಚರಣೆ ಹೇಗಿರುತ್ತದೆಂದು ತಲೆ ತುರಿಸಿಕೊಳ್ಳಬೇಕಾಗುತ್ತದೆ.

ಗುಳ್ಳವ್ವನ ಪಕ್ಕದಲ್ಲಿಯೇ ಮಣ್ಣಿನಿಂದ ಮಾಡಿದ ಆರತಿ ತಟ್ಟೆ ಇಟ್ಟು ಅದರಲ್ಲಿ ದೀಪ ಹಚ್ಚುತ್ತಾರೆ. ಆರತಿ ತಟ್ಟೆಯಲ್ಲಿ ಸೀರೆ, ಖಣ, ಕುಂಕುಮ ಭರಣಿ, ಬಳೆ, ತರಕಾರಿಗಳು (ಎಲ್ಲವೂ ಮಣ್ಣಿನಿಂದಲೇ ಮಾಡಿದವುಗಳು) ಪಕ್ಕದಲ್ಲಿ ಒಂದು ಕೋಣ, ಅದರ ಬೆನ್ನಿನ ಮೇಲೆ ದೀಪ ಹಚ್ಚಿರುತ್ತಾರೆ. ಸಂಜೆ ಗುಳ್ಳವನ ಪೂಜೆ ಮಾಡಿ ಆರತಿ ಬೆಳಗಿ ನೈವೇದ್ಯ ತೋರಿಸಿ ಕೆಸರಿನಿಂದಲೇ ಮಾಡಿದ ಖಡ್ಗದಿಂದ ಗುಳ್ಳವ್ವನ ಎದುರು ನಿಲ್ಲಿಸಿದ ಕೋಣವನ್ನು ಗುಳ್ಳವ್ವನಿಗೆ ಬಲಿ ಕೊಡುತ್ತಾರೆ. ಇದು ಗುಳ್ಳವ್ವನನ್ನು ಶಕ್ತಿದೇವಿಯನ್ನಾಗಿಯೂ, ಕೋಣವನ್ನು ಮಹಿಷಾಸುರನನ್ನಾಗಿಯೂ ಗ್ರಾಮೀಣ ಜನರು ಅರ್ಥೈಸುವ ರೀತಿ.

ಬುಧವಾರ ದಿನ ಮಧ್ಯಾಹ್ನ ಪಕ್ವಾನ್ನ ಕಟ್ಟಿಕೊಂಡು ಮಕ್ಕಳು ಮಹಿಳೆಯರೆಲ್ಲಾ ಸೇರಿ ಊರ ಮುಂದಿನ ತೋಪಿಗೋ, ನದಿ ದಂಡೆಗೋ ಸುಂದರವಾದ ಪ್ರದೇಶಕ್ಕೋ ಹೋಗಿ ಉಂಡುಟ್ಟು ನಲಿದು ಬರುತ್ತಾರೆ. ಅಲ್ಲಿ ಗುಳ್ಳವ್ವನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಗಂಡಸರು ಮೊದಮೊದಲು ಮನೆಯಲ್ಲೇ ಮಾಡಿದ ಭಕ್ಷ್ಯ ಬೋಜ್ಯಗಳನ್ನು ಕಟ್ಟಿಕೊಂಡು ಊಟಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ‘ಮಾಡರ್ನ್’ ಆಗಿ ಸಾಮೂಹಿಕವಾಗಿ ತಮಗಿಷ್ಟವಾದ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರಾಡುವ, ನೀರಿನಲ್ಲಿ ಈಜಾಡುವ, ನೆಲದ ಮೇಲೆ ಓಡಾಡಿಕೊಂಡಿರುವ ಎಲ್ಲಾ ಪ್ರಾಣಿ ಪಕ್ಷಿಗಳ ಅಡುಗೆ ಮಾಡಿಸಿ ‘ಚೀಯರ್ಸ’ ಹೇಳಿ ಕಣ್ಣು ಕೆಂಪಗೆ ಮಾಡಿಕೊಂಡು ಸಂಜೆಯಷ್ಟೋತ್ತಿಗೆ ಊರ ರಸ್ತೆಗಳ ಉದ್ದಗಳನ್ನು ಸರ್ವೆ ಮಾಡುತ್ತಾ ಬರುವದನ್ನು ಕಾಣುತ್ತಿದ್ದೇವೆ.

ಗ್ರಾಮೀಣರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಭೂಮಿ ತಾಯಿಯ ಪ್ರತೀಕವಾಗಿರುವ ಗುಳ್ಳವ್ವನನ್ನು ಅತೀ ಅವಸರದಿಂದ ಹೊರಟಿರುವ ನಾಗರೀಕ ಜಗತ್ತು ತನ್ನೊಡನೆ ಕರೆದೊಯ್ದು ಪೂಜಿಸುತ್ತದೆಯೋ ಅಥವಾ ‘ಅದೇನು ಬಿಡು ಮಣ್ಣು’ ಎಂದು ಚೆಲ್ಲಿ ಕೈ ತೊಳೆದುಕೊಂಡು ಹೋಗುತ್ತದೆಯೋ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.